ಕನ್ನಡದ ಉಳಿವು ಹೇಗೆ?

Team Udayavani, Nov 11, 2019, 5:39 AM IST

ಎರಡು ವರ್ಷಗಳ ಹಿಂದಿನ ಈ ಸಂದರ್ಭ ಹಂಚಿಕೊಳ್ಳ ಬಯಸುತ್ತೇನೆ. ಅದು ಬೆಂಗಳೂರಿನ ಹೊರವಲಯದ ಅಪಾರ್ಟ್‌ ಮೆಂಟೊಂದರಲ್ಲಿ ವಾಸವಿರುವ ಕುಟುಂಬ. ಆರು ವರ್ಷದ ಮಗ ಅಮ್ಮನೊಡನೆ ತಮಿಳಿನಲ್ಲೂ, ತಂದೆಯೊಡನೆ ಹಿಂದಿಯಲ್ಲೂ ಮಾತಾಡುತ್ತಾನೆ. ದಂಪತಿಗಳಿಬ್ಬರೂ ಉದ್ಯೋಗಸ್ಥರಾದ್ದರಿಂದ ಅವನನ್ನು ನೋಡಿಕೊಳ್ಳುವ ಸಹಾಯಕಿಯೊಂದಿಗೆ ಅವನ ಸಂಭಾಷಣೆ ಕನ್ನಡದಲ್ಲೇ. ಇದರೊಂದಿಗೆ ಬಿಡುವಿನ ವೇಳೆಯಲ್ಲಿ ಅಕ್ಕ ಪಕ್ಕದ ಮನೆಯ ಮಕ್ಕಳೊಡನೆ ಆಟೋಟಗಳಲ್ಲಿ ಭಾಗಿಯಾಗುವವದರಿಂದ ಸಲೀಸಾಗಿ ಬಾಲಕ ಕನ್ನಡದಲ್ಲಿ ಮಾತಾಡುತ್ತಾನೆ. ಶಾಲೆಗೆ ಸೇರುವಾಗ ಮುಖ್ಯೋಪಾಧ್ಯಾಯರು ಅವನ ಪೋಷಕರೊಂದಿಗೆ ಸಂದರ್ಶನ ನಡೆಸಿ ಅವನಿಗೆ ಇಂಗ್ಲಿಷ್‌ಗಿಂತ ಕನ್ನಡ ಮಾಧ್ಯಮವೇ ಯುಕ್ತವೆಂದು ತೀರ್ಮಾನಿಸಿ ಪ್ರವೇಶ ನೀಡಿದರು. ಒಂದುವೇಳೆ ಹುಡುಗ ಆಸುಪಾಸಿನ ಸಹಪಾಠಿಗಳೊಂದಿಗೆ ಇಂಗ್ಲಿಷ್‌ ಮಾತನಾಡುತ್ತಿದ್ದರೆ… ಎನ್ನುವ ಪ್ರಶ್ನೆ ಇಲ್ಲಿ ಅಪ್ರಸ್ತುತ.

ಕಾರಣವೆಂದರೆ ಕರ್ನಾಟಕದಲ್ಲಿ ಮಕ್ಕಳು ಕಲೆಯುವುದು, ಆಡುತ್ತ ಬೆಳೆಯುವುದು, ಬೆಳೆಯುತ್ತ ಆಡುವುದು ಕನ್ನಡದಲ್ಲೇ. ಅವರು ಆಕಸ್ಮಿಕವಾಗಿ ಆಯತಪ್ಪಿ ಬಿದ್ದಾಗ ಅವರ ಬಾಯಿಂದ ಬರುವ ಉದ್ಗಾರ ‘ಅಮ್ಮ’,‘ಅಪ್ಪ’ ಎಂದೇ ಹೊರತು ‘ಮೈ ಗಾಡ್‌’,‘ಮೇರೆ ಬಾಪ್‌’ ಅಲ್ಲ. ಮಾತೃಭಾಷೆಗೆ ಹೊರತಾದ ಭಾಷೆಯಲ್ಲಿ ಪಾಠ ಹೇಳಿದರೆ/ಆಲಿಸಿದರೆ ಮಕ್ಕಳಿಗೆ ಅರ್ಥವಾಗದು. ಆದ ಕಾರಣ ಅವರು ಕಲಿಯರು. ಇದು ಅತಿ ಸರಳ ತರ್ಕ.

ಕನ್ನಡ ಮಾತೃಭಾಷೆಯಾಗಿದ್ದು ಅನ್ಯಭಾಷೆಯಲ್ಲಿ ಶಿಕ್ಷಕರೊಂದಿಗೆ ಅನು ಸಂಧಾನಿಸಿ ಸಂದೇಹಗಳನ್ನು ಕೇಳಿ ಪರಿಹರಿಸಿಕೊಳ್ಳು ವುದು ಮಕ್ಕಳ ಪಾಲಿಗೆ ತೀರ ಮುಜುಗರವೆನ್ನಿಸುತ್ತದೆ. ಈ ಸನ್ನಿವೇಶದಲ್ಲಿ ಶಿಷ್ಯರು ಮಾತ್ರವಲ್ಲ ಗುರುವರ್ಯರೂ ಒಲ್ಲದ ಮುಖವಾಡ ಧರಿಸ ಬೇಕಾಗುವುದು. ಇಡೀ ಸಂದರ್ಭ ಅಸಂಗತವೂ ಕೃತಕವೂ ಆದೀತು.

ಶಾಲೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಪರಿಚಿತವಿರುವ ಭಾಷೆ/ಭಾಷೆಗಳ ಮೂಲಕವೇ ಶಿಕ್ಷಣ ಲಭ್ಯವಾದರೆ ಅದುವೇ ‘ಮಾತೃಭಾಷಾ ಶಿಕ್ಷಣ’. ಮಕ್ಕಳು ಹಲವು ಭಾಷೆಗಳನ್ನು ಕಲಿಯಬಲ್ಲರು, ಆಡ ಬಲ್ಲರು. ಹಾಗಾಗಿ ಅವರು ಸಮರ್ಥವಾಗಿ ಗ್ರಹಿಸಿ ಆಡುವ, ಒಡನಾಡುವ ಭಾಷೆಯೇ ಅವರ ಪಾಲಿಗೆ ಮಾತೃಭಾಷೆ ಎಂದು ವ್ಯಾಖ್ಯಾನಿಸ ಬಹುದು. ಮಾತೃಭಾಷಾ ಮಾಧ್ಯಮದ ಅನುಕೂಲಗಳು ಬಹಳ. ತಮಗೆ ಅರ್ಥವಾಗುವ ಭಾಷೆಯ ಮುಖಾಂತರ ಮಕ್ಕಳು ತ್ವರಿತವಾಗಿ, ಘನವಾಗಿ ಕಲಿಯುತ್ತಾರೆ. ಶಾಲೆಯನ್ನು ಹೆಚ್ಚು ಆಸ್ವಾದಿಸುತ್ತಾರೆ. ಶಾಲೆಯಲ್ಲಿ ಮನೆಯ ವಾತಾವರಣವನ್ನೇ ಹೊಂದುತ್ತಾರೆ. ಪೂರ್ಣಾವಧಿ ಶಾಲೆ ಯಲ್ಲಿರುತ್ತಾರೆ. ಕನ್ನಡದೊಳ್‌ ಭಾವಿಸಿ, ಕನ್ನಡ ದೊಳ್‌ ಚರ್ಚಿಸ ುತ್ತಾರೆ. ಹೋಂವರ್ಕ್‌, ಕಿರುಪರೀಕ್ಷೆ, ಪರೀಕ್ಷೆಗಳಲ್ಲಿ ಅವರು ತಪ್ಪೆಸಗುವ ಸಾಧ್ಯತೆಗಳು ಕಡಿಮೆ. ಆಯಾ ಅಧ್ಯಾಯಗಳಲ್ಲಿ ಹೊಸ ಹೊಸ ಪರಿಕಲ್ಪನೆಗಳನ್ನು ತಮ್ಮದಾಗಿಸಿಕೊಳ್ಳುತ್ತಾರೆ. ಅಂಕಗಳು ಗೌಣವೆನ್ನಿಸಿದರೂ ಭರಪೂರವೆ ಲಗ್ಗೆಯಿಡುತ್ತವೆ. ವಿದ್ಯಾಸಂಸ್ಥೆಗೂ ಉತ್ತಮ ಫ‌ಲಿತಾಂಶ ಬಂತೆಂಬ ಸಮಾಧಾನ. ಶಿಕ್ಷಣವನ್ನು ಅರ್ಧಕ್ಕೇ ನಿಲ್ಲಿಸುವವರ ಮಕ್ಕಳ ಸಂಖ್ಯೆ ಬಹುತೇಕ ಶೂನ್ಯವಾಗುವುದು. ಪೋಷಕರ ಸಹಭಾಗಿತ್ವವೂ ವರ್ಧಿಸುತ್ತದೆ. ಕಲಿಕೆಯ ಭಾಷೆಯಾಗಿ ಕನ್ನಡ ವೈಯಕ್ತಿಕ , ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ರೂಢಿಸುತ್ತದೆ.

ಕನ್ನಡದೊಂದಿಗೆ ಅಂತರರಾಷ್ಟ್ರೀಯ ಭಾಷೆಯಾದ ಇಂಗ್ಲಿಷ್‌ ಅನಿವಾರ್ಯತೆಯಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವಾಗ ಕನ್ನಡವು ಶಿಕ್ಷಣ ಮಾಧ್ಯಮವಾಗುವುದೋ ಆಗ ಅದೇ ಇಂಗ್ಲಿಷೇನು, ಯಾವುದೇ ಭಾಷೆ ಕಲಿಯಲು, ಅದರಲ್ಲಿ ಪ್ರಾವಿಣ್ಯತೆ ಕೂಡ ಹೊಂದಲು ಸೋಪಾನವಾದೀತು.

ಇಲ್ಲೊಂದು ಸೂಕ್ಷ್ಮವಿದೆ. ಇಂಗ್ಲಿಷ್‌ ಅಥವಾ ಯಾವುದೇ ಕನ್ನಡೇತರ ಭಾಷೆಯಲ್ಲಿ ಪ್ರಬಂಧವನ್ನೋ ಪತ್ರವನ್ನೋ ಬರೆಯಲು ನಮಗೆ ಸಾಧ್ಯವಾಗಬೇಕಾದರೆ ಮೊದಲಿಗೆ ಕನ್ನಡದಲ್ಲಿ ಯೋಚಿಸಿ, ಯೋಜಿಸಿದಾಗಲೇ. ಬದುಕಿನಲ್ಲಿ ಆತ್ಮವಿಶ್ವಾಸ, ನಮ್ಮ ಪರಂಪರೆಯ ಬಗ್ಗೆ ಹಿರಿಮೆ, ಅದನ್ನು ಸಂರಕ್ಷಿಸುವಲ್ಲಿ ಅನುಸರಿಸಬೇಕಾದ ಜಾಗ ರೂಕತೆ -ಇವೆಲ್ಲವೂ ಮೂಡುವುದು ಶಿಕ್ಷಣವನ್ನು ಕನ್ನಡದ ಮುಖೇನ ಪಡೆದಾಗಲೇ.

ತನ್ನ ಮಾತೃಭಾಷೆಯಲ್ಲದ ಭಾಷೆಯಲ್ಲಿ ಮಗುವಿಗೆ ಬೋಧನೆ ಯಾದರೆ ಅದು ವಿಷಯದತ್ತ ಕಣ್ಣರಳಿಸಬೇಕೋ ಇಲ್ಲವೆ ಭಾಷೆ ಯತ್ತಲೋ? ವಿದ್ಯಾಭ್ಯಾಸದ ಯಶಸ್ಸನ್ನು ಇಂಗ್ಲಿಷಿನೊಂದಿಗೆ ತಳುಕು ಹಾಕಿದರೆ ಮಕ್ಕಳಿಗೆ ತಮ್ಮ ಮಾತೃಭಾಷೆ ಬಗ್ಗೆ ಕೀಳರಿಮೆ ಉಂಟಾಗುತ್ತದೆ. ಇದು ಹಾಗಿರಲಿ. ಶಾಲೆಯಲ್ಲಿ ಇಂದು ಯಾವ ಪಾಠವಾಯಿತು, ತನಗೆಷ್ಟು ಮನನವಾಯಿತು, ಯಾವ ಪುಸ್ತಕ ಬೇಕು, ಯಾವ ವಿಷಯ ಕ್ಲಿಷ್ಟ ಮುಂತಾಗಿ ಪೋಷಕರೊಡನೆ ಹೇಳಿ ಕೊಳ್ಳಲೂ ಆಗದಷ್ಟು ಅಸಹಾಯಕರಾದಾರು ಮಕ್ಕಳು. ಇವೆಲ್ಲವನ್ನೂ ಮನಗಂಡೇ 1953ರಲ್ಲೇ ಯುನೆಸ್ಕೊ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ಅವರವರ ಮಾತೃಭಾಷೆಯಲ್ಲೇ ಆಗಬೇಕೆಂದು ಸ್ಪಷ್ಟಪಡಿಸಿತು. ಅಂದಹಾಗೆ ಜಾಗತಿಕ ಮಟ್ಟದಲ್ಲಿ ಇಂದು ಮಾತೃಭಾಷೆಯಲ್ಲಿ ಶಿಕ್ಷಣ ಲಭ್ಯವಿಲ್ಲದ ಕಾರಣಕ್ಕೆ ಸುಮಾರು 60 ಮಿಲಿಯನ್‌ ಮಕ್ಕಳು ಸರ್ವ ಅನುಕೂಲವಿದ್ದರೂ ಶಾಲೆಯಿಂದ ಹೊರಗುಳಿದಿದ್ದಾರೆ. ಪರಭಾಷೆ ಯಲ್ಲಿ ಸಂವಹನವಾದರೆ ಮಕ್ಕಳ ಚಿಂತನೆ, ವಿಚಾರಶೀಲತೆ ಪುಟಿ ದೇಳಲು ಹೇಗೆ ತಾನೆ ಸಾಧ್ಯ? ಹಾಗಾಗಿ ಸರ್ಕಾರವು ಒಂದು ಸಾವಿರ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ತೆರೆಯುವುದರ ಬದಲಿಗೆ ಅಷ್ಟೇ ಸಂಖ್ಯೆಯ ಕನ್ನಡ ಮಾಧ್ಯಮ ಶಾಲೆಗಳನ್ನು ಪ್ರಯೋಗಾತ್ಮಕವಾಗಿ ಹೈಟೆಕ್‌ಗೊಳಿಸುವ ದಿಟ್ಟ ಕ್ರಮವನ್ನು ಕೈಗೊಳ್ಳಬಹುದಿತ್ತು. ಅವುಗಳಲ್ಲಿ ಗ್ರಂಥಾಲಯ, ಪ್ರಯೋಗಾಲಯ, ಕ್ರೀಡಾಂಗಣ ಥಳ ಥಳ ಸುಸಜ್ಜಿತಗೊಂಡರೆ ಬೇಕಿನ್ನೇನು?

ವಿಶ್ವ ಕಿರಿದಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಜನರ ವಲಸೆ ಹೆಚ್ಚಿದೆ. ಪರಿಣಾಮವಾಗಿ ಅಂತರರಾಷ್ಟ್ರೀಯ ಮಟ್ಟದ ಶಾಲೆಗಳಿಗೆ ಬೇಡಿಕೆಯೂ ಜನಪ್ರಿಯತೆಯೂ ಅಧಿಕವಾಗಿದೆ. ಆದರೆ ಇದೇ ನಿಮಿತ್ತವಾಗಿ ಸ್ವಂತಿಕೆ, ವೈವಿಧ್ಯತೆ ಸೊರಗಬಾರದು. ಮಾತೃಭಾಷಾರಾಧಿತ ಬಹುಭಾಷಾ ಶಿಕ್ಷಣ ಸಾಂಸ್ಕೃತಿಕ ಹಾಗೂ ಜಾಗತಿಕ ಅನಿವಾರ್ಯ. ಒಟ್ಟಾರೆ ನಮ್ಮ ‘ವಿವಿಧತೆಯಲ್ಲಿ ಏಕತೆ’ ಮಂತ್ರ ಪ್ರಾರಂಭವಾಗುವುದೇ ಮಾತೃಭಾಷೆಯಾದ ಕನ್ನಡವು ಶಿಕ್ಷಣ ಮಾಧ್ಯಮವಾಗುವುದರಿಂದ ಎಂಬ ತಥ್ಯವನ್ನು ನಾವು ನಿರ್ಲಕ್ಷಿಸುವಂತಿಲ್ಲ.

– ಬಿಂಡಿಗನವಿಲೆ ಭಗವಾನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಥಿಯೇಟರ್‌ಗಳಲ್ಲಿ ಸಾಮೂಹಿಕ ವೀಕ್ಷಣೆಯ ವಿಷಯವಾಗಿದ್ದ ಮನೋರಂಜನೆಯನ್ನು ಮನೆಯೊಳಗೆ ಸಾಂಸಾರಿಕ ವೀಕ್ಷಣೆಯ ಮಟ್ಟಕ್ಕೆ ಕರೆತಂದದ್ದು ದೂರದರ್ಶನ ಅಥವಾ ಟೆಲಿವಿಷನ್‌....

  • ಕಲ್ಯಾಣ ಕರ್ನಾಟಕಕ್ಕೆ ಸುವರ್ಣ ಕಾಲ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ಬಳಿಕ ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ ಕಲಬುರಗಿಯಲ್ಲಿ ಉದ್ಘಾಟನೆಗೆ...

  • ಬೆಲೆ ಏರಿಕೆ, ಜೀವನ ಮಟ್ಟ, ಕನಿಷ್ಠ ಸಂಬಳ/ಕೂಲಿ ತಲಾ ಆದಾಯ ಇವೆಲ್ಲಾ ಒಂದನ್ನೊಂದು ಹೊಸೆದು ನಿಂತ ಬಳ್ಳಿಗಳಂತೆ. ಹಲವಾರು ಬಾರಿ ಇವುಗಳ ಪರಸ್ಪರ ಹಾವು ಏಣಿ ಆಟದ ಕರಾಮತ್ತು...

  • ಅಧಿವೇಶನಗಳು ನಡೆದು ಬಂದ ಹಾದಿ ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ...

  • 2018-19 ಆರ್ಥಿಕ ವರ್ಷದಲ್ಲಿ ಸುಮಾರು 71,500 ಕೋಟಿ ರೂ. ಮೊತ್ತದ ಬ್ಯಾಂಕಿಂಗ್‌ ವಂಚನೆ ನಡೆದಿದೆ ಎಂದು ಆರ್‌ ಬಿಐ ವರದಿಯಲ್ಲಿ ತಿಳಿಸಲಾಗಿದೆ. ಹೆಚ್ಚುತ್ತಿರುವ ವಂಚನೆ ಪ್ರಕರಣಗಳು...

ಹೊಸ ಸೇರ್ಪಡೆ