Udayavni Special

ಭಾರತ ಜಗತ್ತಿನ ಅತ್ಯುತ್ತಮ ಹೂಡಿಕೆ ಸ್ನೇಹಿ ರಾಷ್ಟ್ರ ಎಂಬ ವಿಶ್ವಾಸ ಹುಟ್ಟಬೇಕು


Team Udayavani, Aug 13, 2019, 5:30 AM IST

r-36

ದೇಶದ ದೀರ್ಘಾವಧಿ ಅಭಿವೃದ್ಧಿಯತ್ತ ತಾವು ಗಮನ ಕೇಂದ್ರೀಕರಿಸಿದ್ದು, ಭಾರತವನ್ನು ವ್ಯಾಪಾರ ಸ್ನೇಹಿ ರಾಷ್ಟ್ರವಾಗಿಸುವ ಗುರಿ ತಮಗಿದೆ ಎಂದು ‘ದ ಎಕನಾಮಿಕ್‌ ಟೈಮ್ಸ್‌’ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಪ್ರಧಾನಿ ಮೋದಿ. ಎನ್‌ಡಿಎ ಆಡಳಿತದ ಎರಡನೇ ಅವಧಿಯಲ್ಲಿ ಪ್ರಧಾನಿ ಮೋದಿ ನೀಡಿರುವ ಮೊದಲ ಸಂದರ್ಶನವಿದು.

•ಹೂಡಿಕೆದಾರರಲ್ಲಿ ವಿಶ್ವಾಸ ವರ್ಧಿಸಲು ನೀವು ನೀಡುವ ಸಂದೇಶವೇನು?
ಇಂದಿನ ದಿನಗಳಲ್ಲಿ ಅಭಿವೃದ್ಧಿ, ಆರ್ಥಿಕ ಪ್ರಗತಿ ಅಥವಾ ರಾಜಕೀಯ ಸ್ಥಿರತೆಯ ಕುರಿತಾಗಿ ಯಾವುದೇ ಜಾಗತಿಕ ವೇದಿಕೆಯಲ್ಲಿ ನಡೆಯುವ ಸಂವಾದ ಅಥವಾ ಚರ್ಚೆಯ ಗಮನ ತಾನಾಗಿಯೇ ಭಾರತದತ್ತ ಹರಿಯುತ್ತದೆ. ದೇಶದಲ್ಲಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿಯ ನೆಲೆಯಲ್ಲಿ ಭಾರತದಿಂದ ಬಹಳಷ್ಟು ನಿರೀಕ್ಷೆಗಳಿವೆ. ಇದೇ ವೇಳೆ ಕಳೆದ ಚುನಾವಣೆಯಲ್ಲಿ ನಮ್ಮ ಸರಕಾರಕ್ಕೆ ಸಿಕ್ಕಿರುವ ಅಭೂತಪೂರ್ವ ಜನಾದೇಶ, ನಿರೀಕ್ಷೆಗಳನ್ನು ಇನ್ನಷ್ಟು ಹೆಚ್ಚಿಸಿದೆ.

ನಮ್ಮ ಸರಕಾರದ ಹಿಂದಿನ ಐದು ವರ್ಷಗಳ ನಿರ್ವಹಣೆಯು ಅಭಿವೃದ್ಧಿಗೆ ನಾವು ಕೊಟ್ಟಿರುವ ವೇಗ, ದಿಕ್ಕು ಮತ್ತು ಪ್ರಮಾಣಕ್ಕೆ ಸಾಕ್ಷಿ. ಸರಕಾರದ ನಿರ್ವಹಣೆಯನ್ನು ಅಳೆಯುವ ಹೊಸ ಮಾನದಂಡವೊಂದನ್ನು ನಾವು ನೀಡಿದ್ದೇವೆ. ಹೊಸ ಸರಕಾರ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸುವ ಮೊದಲೇ ನಮ್ಮಿಂದ ಈ ಮಟ್ಟದ ನಿರೀಕ್ಷೆ ಇರುವುದನ್ನು ನಾನು ಸಕಾರಾತ್ಮಕ ಬೆಳವಣಿಗೆ ಎಂದು ಭಾವಿಸುತ್ತೇನೆ. ಬಲಿಷ್ಠ ಆರ್ಥಿಕ ನೀತಿಗಳ ಜೊತೆಗೆ ನಿಚ್ಚಳ ಬಹುಮತವನ್ನು ಹೊಂದಿರುವ ಸ್ಥಿರ ಸರಕಾರ ಈ ನಿರೀಕ್ಷೆಯ ಹಿಂದಿನ ಶಕ್ತಿ.

ಈ ಸರಕಾರವನ್ನು ಹೊಸ ಸರಕಾರ ಎಂದು ಭಾವಿಸದೆ, ಹಿಂದಿನ ಸರಕಾರದ ಮುಂದುವರಿಕೆ ಎಂದು ಪರಿಗಣಿಸಬೇಕೆಂದು ನಾನು ತಜ್ಞರಲ್ಲಿ ವಿನಂತಿಸುತ್ತೇನೆ. ಅದೇ ರೀತಿ ಜನರು ಕಳೆದ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ಮತ್ತು 2019 ಜುಲೈಯಲ್ಲಿ ಮಂಡಿಸಿದ ಬಜೆಟ್‌ಗಳ ಒಟ್ಟು ಪರಿಣಾಮವನ್ನು ವಿಶ್ಲೇಷಿಸಬೇಕು.

ಒಂದು ವರ್ಗದ ಜನರಿಗೆ ಅಥವಾ ಒಂದು ನಿರ್ದಿಷ್ಟ ಜನ ಸಮೂಹಕ್ಕೆ ಬಜೆಟ್ನಿಂದ ಏನು ಸಿಕ್ಕಿದೆ ಎಂದು ಲೆಕ್ಕ ಹಾಕುವುದು ಹಿಂದಿನ ರೂಢಿಯಾಗಿತ್ತು. ಇಂಥ ಗುಂಪುಗಳ ಆರ್ಥಿಕ ತಜ್ಞರೇ ಬಜೆಟನ್ನು ವಿಶ್ಲೇಷಿಸುತ್ತಿದ್ದರು. ಆದರೆ ಈಗ ಯಾರಿಗೆ ಏನು ಸಿಕ್ಕಿತು ಎಂದು ಲೆಕ್ಕ ಹಾಕುವ ಬದಲಾಗಿ ಜಾಗತಿಕ ಪ್ರಗತಿಗೆ ಮತ್ತು ನಮ್ಮ ದೇಶವನ್ನು ಮುಂದಕ್ಕೊಯ್ಯಲು ಬಜೆಟ್ ಹೇಗೆ ಸಹಕಾರಿ ಎಂದು ವಿಶಾಲ ದೃಷ್ಟಿಕೋನದಿಂದ ನೋಡುವ ಕಾಲ ಬಂದಿದೆ. ಇದು ಚಿಂತನೆಯಲ್ಲಾಗುವ ದೊಡ್ಡ ಸ್ಥಿತ್ಯಂತರ. ಮುಂಬರುವ ದಿನಗಳಲ್ಲಿ ಬುದ್ಧಿಜೀವಿ ವರ್ಗ ಈ ಚಿಂತನೆಯನ್ನು ಮೈಗೂಡಿಸಿಕೊಳ್ಳಲಿದೆ ಎಂಬ ಆಶಾಭಾವನೆಯನ್ನು ನಾನು ಹೊಂದಿದ್ದೇನೆ. ಆರ್ಥಿಕ ಪಂಡಿತರು ನಮ್ಮ ಹಿಂದಿನ ಐದು ವರ್ಷದ ಸಾಧನೆ ಯನ್ನು ಅವಲೋಕಿಸಿದರೆ ನಮ್ಮ ಬದ್ಧತೆ ಮತ್ತು ಕ್ಷಮತೆಯ ಸುಳಿವು ಸಿಗಬಹುದು. ಹಣದುಬ್ಬರವನ್ನು ಬಿಗಿಯಾದ ನಿಯಂತ್ರಣದಲ್ಲಿರಿಸಿದ್ದೇವೆ. ಎಲ್ಲ ಪ್ರಮುಖ ಆರ್ಥಿಕ ಶಕ್ತಿಗಳ ಜೊತೆಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದೇವೆ, ಬಡ್ಡಿ ದರಗಳು ಕಡಿಮೆಯಾಗಿವೆ. ಜಿಎಸ್‌ಟಿ ಮತ್ತು ಬ್ಯಾಂಕ್‌ ದಿವಾಳಿ ಸಂಹಿತೆಯನ್ನು ಜನರು ಒಪ್ಪಿಕೊಂಡಿದ್ದು, ಇದರಿಂದ ಆರ್ಥಿಕತೆಗೆ ಲಾಭವಾಗಿದೆ. ಸಾಗಾಟ ಹೆಚ್ಚು ಪರಿಣಾಮಕಾರಿಯಾಗಿದೆ. ಮೂಲಸೌಕರ್ಯ ನಿರ್ಮಾಣ ಅದ್ಭುತ ವೇಗದಲ್ಲಿ ಸಾಗುತ್ತಿದೆ.

ಉದ್ಯಮಿಗಳು ಭಾರತದ ಅಭಿವೃದ್ಧಿಯ ರಾಯಭಾರಿಗಳು ಎಂಬುದು ನನ್ನ ಭಾವನೆ. ಎಲ್ಲ ಆಯಾಮಗಳಿಂದಲೂ ವ್ಯಾಪಾರ ಮಾಡಲು ಭಾರತ ಅತ್ಯಂತ ಪ್ರಶಸ್ತ ಸ್ಥಳವಾಗಲು ಇರುವ ಯಾವ ಅವಕಾಶವನ್ನೂ ನಾವು ಬಿಟ್ಟುಕೊಡುವುದಿಲ್ಲ ಎಂದು ಅವರಿಗೆ ಭರವಸೆ ನೀಡುತ್ತೇನೆ. ನಮ್ಮ ವ್ಯಾಪಾರ ವಹಿವಾಟುಗಳಿಗೆ ದೇಶದಲ್ಲಿ ಮತ್ತು ವಿದೇಶಗಳಲ್ಲಿ ದೊಡ್ಡ ಮಾರುಕಟ್ಟೆ ಸಿಗಬೇಕು. ನಮ್ಮ ಹೂಡಿಕೆದಾರರು ಹೆಚ್ಚು ಲಾಭ ಗಳಿಸಬೇಕು ಮತ್ತು ಹೆಚ್ಚು ಉದ್ಯೋಗ ಸೃಷ್ಟಿಸಬೇಕು. ಜಾಗತಿಕ ನೆಲೆಯಲ್ಲಿ ನೋಡುವಾಗ ಭಾರತ ಜಗತ್ತಿನ ಅತಿ ಶ್ರೇಷ್ಠ ಹೂಡಿಕೆ ಸ್ನೇಹಿ ರಾಷ್ಟ್ರ ಎಂಬ ವಿಶ್ವಾಸ ಉದ್ಯಮಿಗಳಲ್ಲಿ ಹುಟ್ಟಬೇಕು.

•ಹಿಂದಿನ ಅವಧಿಯಲ್ಲಿ ನೀವು ಜಿಎಸ್‌ಟಿ, ದಿವಾಳಿ ಸಂಹಿತೆ, ಉದ್ಯಮ ಸ್ನೇಹಿ ವಾತಾವರಣದಂಥ ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತಂದಿದ್ದೀರಿ. ಆದರೆ 5 ಲಕ್ಷಕೋಟಿ ಡಾಲರ್‌ ಆರ್ಥಿಕತೆಯ ಗುರಿ ಯನ್ನು ತಲಪಲು ಇನ್ನಷ್ಟು ದಿಟ್ಟ ಕ್ರಮಗಳ ಅಗತ್ಯವಿದೆ. ಸರಕಾರದ ಮುಂದಿನ ಸುಧಾರಣಾ ಕ್ರಮಗಳೇನು?

ಒಂದು ಕ್ಷಣ ಹಿಂದಕ್ಕೆ ಹೋಗೋಣ. ಭಾರತದಂಥ ಸಂಕೀರ್ಣ ದೇಶದಲ್ಲಿ, ದಶಕಗಳಿಂದ ಸುಧಾರಣೆಗಳು ಜಡವಾ ಗಿದ್ದ ವಾತಾವರಣದಲ್ಲಿ ಜಿಎಸ್‌ಟಿ ಎಷ್ಟು ದೊಡ್ಡ ಸುಧಾರಣೆ ಎಂದು ಕಲ್ಪಿಸಿಕೊಳ್ಳಿ. ಜಿಎಸ್‌ಟಿ ನಮ್ಮ ಆರ್ಥಿಕತೆಯನ್ನು ಸುಸ್ಥಿರಗೊಳಿಸಿತು. ಬ್ಯಾಂಕ್‌ ದಿವಾಳಿ ಸಂಹಿತೆಯ ಮೂಲಕ ನಾವು ಉದ್ಯಮದಲ್ಲಿ ವಿಫ‌ಲವಾಗುವುದು ಮಾರಣಾಂತಿಕವೂ ಅಲ್ಲ ಅಂತಿಮವೂ ಅಲ್ಲ ಎಂಬ ಸಂದೇಶವನ್ನು ನೀಡಿದ್ದೇವೆ. ಸಾಲಗಾರರಿಗೆ, ಕಾರ್ಮಿಕರಿಗೆ ಮತ್ತು ಮಾರುಕಟ್ಟೆಗಾಗಿ ನಾವು ರೂಪಿಸಿರುವ ನಿರ್ಗಮನ ವ್ಯವಸ್ಥೆ ಪ್ರಯೋಜನಕಾರಿಯಾಗಿದೆ.

ದೊಡ್ಡ ದೊಡ್ಡ ಗುರಿ ಮತ್ತು ಧ್ಯೇಯಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು ಸಾಧಿಸುವುದು ನಮ್ಮ ಸರಕಾರದ ಹಿಂದಿನ ಐದು ವರ್ಷಗಳ ವೈಶಿಷ್ಟ್ಯವಾಗಿತ್ತು. 2018, ನವೆಂಬರ್‌ನಲ್ಲಿ ವಿಶ್ವಬ್ಯಾಂಕ್‌ ಅಧ್ಯಕ್ಷ ಜಿಮ್‌ ಯಾಂಗ್‌ ಕಿಮ್‌ ಉದ್ಯಮಿ ಸ್ನೇಹಿ ರಾಷ್ಟ್ರ ರ್‍ಯಾಂಕಿಂಗ್‌ನಲ್ಲಿ ಭಾರತದ ಐತಿಹಾಸಿಕ ಜಿಗಿತದ ಕುರಿತು ನೀಡಿದ ಹೇಳಿಕೆಯನ್ನೊಮ್ಮೆ ಸ್ಮರಿಸಿಕೊಳ್ಳಿ. ‘125 ಕೋಟಿ ಜನಸಂಖ್ಯೆಯಿರುವ ದೇಶವೊಂದು ಬರೀ 4 ವರ್ಷದಲ್ಲಿ 65 ರ್‍ಯಾಂಕ್‌ಗಳ ಜಿಗಿತ ಸಾಧಿಸಿರುವುದು ಅದ್ಭುತ’ ಎಂದು ಅವರು ಉದ್ಗರಿಸಿದ್ದರು. ಇಂಥ ಸಾಧನೆಯೇ ನಮಗೆ ಇನ್ನಷ್ಟು ದೊಡ್ಡ ಗುರಿಗಳನ್ನು ನಿಗದಿಪಡಿಸುವ ಸ್ಫೂರ್ತಿ ನೀಡುತ್ತದೆ.

5 ವರ್ಷದ ಹಿಂದೆ ಇದನ್ನೆಲ್ಲ ಯೋಚಿಸಲಾದರೂ ಸಾಧ್ಯವಿತ್ತೇ:
•ಭಾರತ ಜಿಎಸ್‌ಟಿ ಅನುಷ್ಠಾನಿಸಬಹುದು
•ಭಾರತ ಬಯಲು ಶೌಚ ಮುಕ್ತ ದೇಶವಾಗಬಹುದು
•ಭಾರತ 8 ಕೋಟಿಗೂ ಅಧಿಕ ಕುಟುಂಬಗಳಿಗೆ ಸ್ವಚ್ಛ ಅಡುಗೆ ಅನಿಲ ಪೂರೈಸಬಹುದು

•ಭಾರತ 10 ಕೋಟಿ ಕುಟುಂಬಗಳಿಗೆ 5 ಲಕ್ಷ ರೂಪಾಯಿಯ ಆರೋಗ್ಯ ವಿಮೆ ನೀಡಬಹುದು.

ದೀರ್ಘಾವಧಿಯಲ್ಲಿ ಗರಿಷ್ಠ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಗತ್ಯವಿರುವ ಅಡಿಪಾಯವನ್ನು ನಾವು ಹಾಕಿದ್ದೇವೆ. ಅಭಿವೃದ್ಧಿಶೀಲ ದೇಶಗಳು ಸಮಸ್ಯೆಗಳ ಸುಳಿಯಲ್ಲಿ ಸಿಲುಕದೆ ಮತ್ತು ಹಣದುಬ್ಬರದ ಸಂಕಷ್ಟಕ್ಕೊಳಗಾಗದೆ ಬಹಳ ಕಾಲ ಗರಿಷ್ಠ ದರದಲ್ಲಿ ಅಭಿವೃದ್ಧಿಹೊಂದಲು ಸಾಧ್ಯವಿಲ್ಲ ಎಂಬ ಗ್ರಹಿಕೆಯನ್ನು ನಾವು ಸುಳ್ಳು ಮಾಡಿದ್ದೇವೆ. ಕಳೆದ ಐದು ವರ್ಷಗಳಲ್ಲಿ ದೇಶ ಕನಿಷ್ಠ ಸರಾಸರಿ ಹಣದುಬ್ಬರದೊಂದಿಗೆ ಗರಿಷ್ಠ ಸರಾಸರಿ ಅಭಿವೃದ್ಧಿಯನ್ನು ಸಾಧಿಸಿದೆ. ಚಾಲ್ತಿ ಖಾತೆ ಕೊರತೆ, ವಿತ್ತೀಯ ಕೊರತೆ, ಹಣದುಬ್ಬರ ಸೇರಿದಂತೆ ಆರ್ಥಿಕ ಅಡಚಣೆಯ ಎಲ್ಲ ಮಾನದಂಡಗಳನ್ನು ನಿಯಂತ್ರಣದಲ್ಲಿರಿಸಿಕೊಂಡಿದ್ದೇವೆ. ಇದರಿಂದಾಗಿ ಆರ್ಥಿಕತೆಯ ಮೇಲೆ ವಿಶ್ವಾಸ ಮೂಡಿ ವಿದೇಶಿ ಹೂಡಿಕೆ ಹರಿದು ಬರುತ್ತಿದೆ.

ಸ್ವಾತಂತ್ರ್ಯ ಲಭಿಸಿದ ಮೊದಲ 45 ವರ್ಷಗಳಲ್ಲಿ ಭಾರತದ ಆರ್ಥಿಕತೆ ಒಂದು ನಿರ್ದಿಷ್ಟ ಸ್ವರೂಪದಲ್ಲಿ ಅಭಿವೃದ್ಧಿ ಹೊಂದು ತ್ತಿತ್ತು. 1991ರಿಂದೀಚೆಗೆ ದೇಶ ಅಭಿವೃದ್ಧಿ ಮತ್ತು ಪ್ರಗತಿಯ ಹೊಸ ಆಯಾಮಕ್ಕೆ ತೆರೆದುಕೊಂಡಿತು. ಅದು ಆರಂಭ ಮಾತ್ರ ಆಗಿತ್ತು. ದುರದೃಷ್ಟವಶಾತ್‌ ರಾಜಕೀಯ ಅಸ್ಥಿರತೆಯಿಂದಾಗಿ ಅದಕ್ಕೆ ವೇಗ ಸಿಗಲಿಲ್ಲ. ಹೀಗಾಗಿ ಕೋಟಿಗಟ್ಟಲೆ ಜನರನ್ನು ಬಡತನ ಮತ್ತು ಹತಾಶೆಯಿಂದ ಮೇಲೆತ್ತಲು ಸಾಧ್ಯವಾಗಲಿಲ್ಲ. ಕಳೆದ 5 ವರ್ಷದ ಗರಿಷ್ಠ ಆರ್ಥಿಕ ಅಭಿವೃದ್ಧಿಯಿಂದಾಗಿ ಕೋಟಿಗಟ್ಟಲೆ ಜನರನ್ನು ಬಡತನದಿಂದ ಮೇಲೆತ್ತಿದ್ದೇವೆ.

ಅರ್ಥಿಕ ಅಭಿವೃದ್ಧಿ ಎಂದರೆ ದೇಶದ ಬೊಕ್ಕಸಕ್ಕೆ ಹೆಚ್ಚು ಹಣ ಹರಿದು ಬರುವುದಲ್ಲ, ಬದಲಾಗಿ ದೇಶದ ಸಂಪತ್ತು ಹೆಚ್ಚುವುದು, ಅರ್ಥಾತ್‌ ಜನರ ಕೈಯಲ್ಲಿ ಹೆಚ್ಚು ಹಣ ಓಡಾಡುವುದು. ಈ ಮಾದರಿಯ ಸಂಪತ್ತಿನಿಂದ ದೇಶ ಸಮೃದ್ಧಿಯಾಗುತ್ತದೆ.

ಹೂಡಿಕೆ ಕೇಂದ್ರಿತ ಅಭಿವೃದ್ಧಿ ಮುಂದಿನ ಐದು ವರ್ಷಗಳ ನಮ್ಮ ಮುಂಗಾಣ್ಕೆ. ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ಹೂಡಿಕೆ ನಮ್ಮ ಗುರಿ. ಈ ಗುರಿಯನ್ನು ತಲುಪಲು ಸರಕಾರ ಆಂತರಿಕ ಹಾಗೂ ವಿದೇಶಿ ಮೂಲದ ಹೂಡಿಕೆಯ ಹರಿವಿಗೆ ಪೂರಕವಾಗಿರುವ ನೀತಿಗಳ ರೂಪಣೆಗೆ ಆದ್ಯತೆ ನೀಡಲಿದೆ. ಎಫ್ಡಿಐ ನೀತಿಯನ್ನು ಇನ್ನಷ್ಟು ಉದಾರಗೊಳಿಸುವುದು, ಕಾರ್ಮಿಕ ಕಾನೂನುಗಳ ಸರಳೀಕರಣ, ಉದ್ಯಮ ಸ್ನೇಹಿ ವಾತಾವರಣಕ್ಕೆ ಇನ್ನಷ್ಟು ಉತ್ತೇಜನ, ಬ್ಯಾಂಕಿಂಗ್‌, ವಿಮೆ ಮತ್ತು ಪಿಂಚಣಿ ವಲಯಗಳಲ್ಲಿ ಸುಧಾರಣೆ ಇತ್ಯಾದಿ ಕ್ರಮಗಳ ಮೂಲಕ ಇದನ್ನು ಸಾಧಿಸಿಕೊಳ್ಳಲಿದ್ದೇವೆ.

•2014ರಿಂದ 2019ರ ನಡುವೆ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗಿದೆ. ಎಫ್ಡಿಐ ಆಕರ್ಷಿಸಲು ಸರಕಾರ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಲಿದೆಯೇ?

ಜಾಗತಿಕವಾಗಿ ಎಫ್ಡಿಐ ಹರಿವು ಕುಂಠಿತವಾಗಿದ್ದರೂ ನಾವು 65 ಶತಕೋಟಿ ಡಾಲರ್‌ ಹೂಡಿಕೆಯನ್ನು ಆಕರ್ಷಿಸಿದ್ದೇವೆ. ವಿಮೆಯಂಥ ಕೆಲವು ವಲಯಗಳಲ್ಲಿ ವಿದೇಶಿ ಹೂಡಿಕೆ ನಿಯಮಗಳನ್ನು ಉದಾರೀಕರಣಗೊಳಿಸಿದ್ದೇವೆ. ಜಾಗತಿಕ ಕಂಪೆನಿಗಳಿಗೆ ಬೃಹತ್‌ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಬಜೆಟ್‌ನಲ್ಲೇ ಆಹ್ವಾನ ನೀಡಿದ್ದೇವೆ.

•ವಾಣಿಜ್ಯ ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಸೌಹಾರ್ದ ವಾತಾವರಣ ಇಲ್ಲ. ಮುಂದಿನ ನಡೆಯೇನು?

ಭಾರತ ಮತ್ತು ಅಮೆರಿಕ ವಿವಿಧ ರೀತಿಯ ವಾಣಿಜ್ಯ ಸಂಬಂಧಗಳನ್ನು ಹೊಂದಿರುವ ಎರಡು ಪ್ರಬುದ್ಧ ಪ್ರಜಾಪ್ರಭುತ್ವ ದೇಶಗಳು. ನಮ್ಮದು ಭಿನ್ನ ಅಭಿವೃದ್ಧಿಯ ನೆಲೆ ಮತ್ತು ನಮ್ಮ ಆಂತರಿಕ ಮಾರುಕಟ್ಟೆಯೂ ವೈವಿಧ್ಯವಾಗಿದೆ. ಕಳೆದ ಕೆಲವು ತಿಂಗಳಲ್ಲಿ ಅಮೆರಿಕ ಜೊತೆಗೆ ವಾಣಿಜ್ಯಕ್ಕೆ ಸಂಬಂಧಿಸಿದಂತೆ ರಚನಾತ್ಮಕ ಮಾತುಕತೆ ನಡೆಸಿದ್ದೇವೆ. ಉಭಯ ದೇಶಗಳಿಗೂ ಇದರಿಂದ ಪ್ರಯೋಜನವಾಗಲಿದೆ.

•ರಫ್ತು ಉತ್ತೇಜಿಸಲು ಯಾವ ಕ್ರಮ ಕೈಗೊಳ್ಳಲಿದ್ದೀರಿ?

ರಫ್ತು ನಮ್ಮ ಅಭಿವೃದ್ಧಿಯ ಅವಿಭಾಜ್ಯ ಅಂಗ. ಮೇಕ್‌ ಇನ್‌ ಇಂಡಿಯಾ ಈ ನೆಲೆಯಲ್ಲಿ ಸಾಕಷ್ಟು ಯೋಗದಾನ ನೀಡುತ್ತಿದೆ. ಉದಾಹರಣೆಗೆ ಹೇಳುವುದಾದರೆ ಆಸ್ಟ್ರೇಲಿಯದಲ್ಲಿ ಓಡುತ್ತಿರುವ ಕೆಲವು ರೈಲ್ವೇ ಬೋಗಿಗಳು ತಯಾರಾಗಿರುವುದು ಭಾರತದಲ್ಲಿ. ಅವುಗಳು ಅಲ್ಲಿ ನಮ್ಮ ದೇಶದ ಹೆಸರನ್ನು ಜನಪ್ರಿಯೊಗಳಿಸುತ್ತಿವೆ.

2022ಕ್ಕಾಗುವಾಗ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿಗೂ ರಫ್ತು ಹೆಚ್ಚಳವಾಗಬೇಕು. ರೈತರು ಉತ್ಪಾದಕರಲ್ಲ, ರಫ್ತುದಾರರು ಎನ್ನುವುದು ನಮ್ಮ ದೃಷ್ಟಿಕೋನ. ಇದರಲ್ಲಿ ಸಂಸ್ಕರಣೆಯ ಮೂಲಕ ಆಹಾರಗಳ ಮೌಲ್ಯವರ್ಧನೆ ದೊಡ್ಡ ಪಾತ್ರ ವಹಿಸಲಿದೆ. ಇದನ್ನು ಸಾಕಾಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಬೃಹತ್‌ ಫ‌ುಡ್‌ಪಾರ್ಕ್‌ಗಳನ್ನು ಮತ್ತು ಕೋಲ್ಡ್ ಚೈನ್‌ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ.

ಪ್ರೋತ್ಸಾಹಧನದ ಮೂಲಕ ಮಾತ್ರ ರಫ್ತು ಹೆಚ್ಚಿಸುವುದರಲ್ಲಿ ನಮಗೆ ನಂಬಿಕೆಯಿಲ್ಲ. ರಫ್ತುದಾರರಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಬೇಕು. ಉದ್ಯಮ ಸ್ನೇಹಿ ವಾತಾವರಣ ಮತ್ತು ಸರಕಾರಿ ನಿಯಂತ್ರಣಗಳ ಸರಳೀಕರಣ ಇತ್ಯಾದಿ ಕ್ರಮಗಳಿಂದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿದ್ದೇವೆ.

•ಕಳೆದ ಎರಡು ವರ್ಷಗಳಲ್ಲಿ ಜಿಎಸ್‌ಟಿಯಲ್ಲಿ ನಿರಂತರವಾಗಿ ಬದಲಾವಣೆಗಳು ಆಗುತ್ತಿರುವುದನ್ನು ನೋಡಿದ್ದೇವೆ. ಜಿಎಸ್‌ಟಿ ವ್ಯವಸ್ಥೆಯ ಈ ರೀತಿಯ ವಿಕಸನದ ಬಗ್ಗೆ ನಿಮಗೆ ತೃಪ್ತಿಯಿದೆಯೇ?

ಪ್ರಪಂಚದ ಯಾವುದೇ ದೇಶದಲ್ಲೂ ಕೂಡ ಜಿಎಸ್‌ಟಿಯಂಥ ಬೃಹತ್‌ ‘ವ್ಯಾಪ್ತಿಯ’ ಮತ್ತು ‘ಸಾಧ್ಯತೆಯ’ ಸುಧಾರಣಾ ಕ್ರಮ ನಿಮಗೆಲ್ಲೂ ಕಾಣಿಸುವುದಿಲ್ಲ. ಕೇಂದ್ರ ಮತ್ತು ಎಲ್ಲಾ ರಾಜ್ಯಗಳನ್ನು ಒಳಗೊಂಡಂಥ ಇಂಥ ಬೃಹತ್‌ ಸುಧಾರಣೆಗಳು ಬಂದಾಗ, ಆರಂಭಿಕ ಹಂತದಲ್ಲಿ ಅಡಚಣೆಗಳು, ಸಮಸ್ಯೆಗಳು ಎದುರಾಗುವುದು ಸಹಜ. ಇದಕ್ಕಿಂತಲೂ ಚಿಕ್ಕ ಸುಧಾರಣೆಗಳನ್ನು ಅನುಷ್ಠಾನಕ್ಕೆ ತಂದ ರಾಷ್ಟ್ರಗಳಿಗೆ ಹೋಲಿಸಿ ನೋಡಿದರೆ ನಮ್ಮ ರೆಕಾರ್ಡ್‌ ಅದ್ಭುತವಾಗಿದೆ. ಆದರೆ ನನ್ನ ಗುಣ ಹೇಗಿದೆಯೆಂದರೆ, ಅಷ್ಟು ಸುಲಭವಾಗಿ ನನಗೆ ತೃಪ್ತಿಯಾಗುವುದಿಲ್ಲ. ನಾವು ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸಬೇಕಾದ ಅಗತ್ಯವಿದೆ. ಈ ವರ್ಷ ರಿಟರ್ನ್ ಫೈಲಿಂಗ್‌ ಮತ್ತು ಮರುಪಾವತಿ(ರೀಫ‌ಂಡ್‌) ಪ್ರಕ್ರಿಯೆಯಲ್ಲಿ ಸುವ್ಯವಸ್ಥಿತ ಕಾರ್ಯವಿಧಾನಗಳನ್ನು ಪರಿಚಯಿಸಲಾಗುತ್ತಿದೆ. ಒಮ್ಮೆ ಇದು ಪೂರ್ಣವಾಗಿ ಅನುಷ್ಠಾನಕ್ಕೆ ಬಂದರೆ, ಅನುಸರಣೆ(ಕಂಪ್ಲಯನ್ಸ್‌) ಪ್ರಕ್ರಿಯೆಯು ಗಣನೀಯವಾಗಿ ಸರಾಗಗೊಳ್ಳುತ್ತದೆ. ಕೆಲವು ಟ್ರಾನ್ಸಿಷನಲ್ ಸಮಸ್ಯೆಗಳು ಇದ್ದವು. ಈಗ ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಇನ್ನೂ ಕೆಲವು ಸಮಸ್ಯೆಗಳು ಇವೆ ಎಂಬುದನ್ನು ನಾನು ಬಲ್ಲೆ. ಈ ಕಾರಣಕ್ಕಾಗಿಯೇ ಪ್ರಾಮಾಣಿಕ ತೆರಿಗೆದಾರರ ಬಾಕಿಯಿರುವ ಟ್ರಾನ್ಸಿಶನಲ್ ಸಮಸ್ಯೆಗಳನ್ನು ಬಗೆಹರಿಸಲು ಜಿಎಸ್‌ಟಿ ಕೌನ್ಸಿಲ್ನ ಜೊತೆಗೂಡಿ ಕೆಲಸ ಮಾಡುವಂತೆ ನಾನು ಅಧಿಕಾರಿಗಳಿಗೆ ಹೇಳಿದ್ದೇನೆ.

ದೇಶದಲ್ಲಿ ಜಿಎಸ್‌ಟಿಯ ಪ್ರದರ್ಶನದ ಬಗ್ಗೆ ವಿಶ್ಲೇಷಣೆ ಮಾಡುವಾಗೆಲ್ಲ, ಅದರಿಂದಾಗಿ ಗ್ರಾಹಕರಿಗೆ ಆಗುತ್ತಿರುವ ಲಾಭಗಳನ್ನು ಯಾವಾಗಲೂ ಕಡೆಗಣಿಸಲಾಗುತ್ತಿದೆ. ದರಗಳನ್ನು ತಗ್ಗಿಸಿರುವುದರಿಂದಾಗಿ, ಸಾಮಾನ್ಯ ಮಧ್ಯಮ ವರ್ಗದ ಕುಟುಂಬವೊಂದು ಮನೆ ಖರ್ಚಿನ ಮೇಲಿನ ತೆರಿಗೆಯಲ್ಲಿ ವರ್ಷಕ್ಕೆ 1500 ರೂ ಉಳಿಸುವಂತಾಗಿದೆ. ಇನ್ನು ನಾವು ಡಿಜಿಟಲ್ ವಿನಿಮಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದಾಗಿ, ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಹೆಚ್ಚಿನ ಪ್ರಯೋಜನ ಸಿಗುವಂತಾಗುತ್ತದೆ. ಯಾವುದೇ ಖರೀದಿ ಮಾಡುವಾಗಲೂ ‘ಬಿಲ್’ ಕೇಳುವ ಅಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮಾಧ್ಯಮಗಳು ಗ್ರಾಹಕ ಜಾಗೃತಿ ಅಭಿಯಾನವನ್ನು ಆರಂಭಿಸಬೇಕೆಂದು ಕೋರುತ್ತಿದ್ದೇನೆ. ಈ ಅಭಿಯಾನವು ಡಿಜಿಟಲ್ ಪಾವತಿ ಮತ್ತು ‘ಬಿಲ್ ಕೇಳಿ ಪಡೆಯುವ’ ಪರಿಪಾಠದ ಮೇಲೆ ಗಮನ ಕೇಂದ್ರೀಕರಿಸಬೇಕು.

•ವಾಹನ, ರಿಯಲ್ ಎಸ್ಟೇಟ್ ಮತ್ತು ಗಣಿಗಾರಿಕೆಯಂಥ ಕ್ಷೇತ್ರಗಳು ಮಂದಗತಿಯಲ್ಲಿ ಸಾಗುತ್ತಿವೆ. ಪರಿಸ್ಥಿತಿಯನ್ನು ಬದಲಿಸಲು ನಿರ್ದಿಷ್ಟ ಕ್ರಮಗಳನ್ನು ಜಾರಿಗೊಳಿಸಲಿದ್ದೀರಾ?

ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಆಗುವ ವೇಗವರ್ಧನೆಯಿಂದಾಗಿ ಈ ವಲಯಗಳಲ್ಲಿನ ಬೇಡಿಕೆಗೆ ಮತ್ತೆ ಶಕ್ತಿ ಬರಲಿದೆ. ವ್ಯಾಪಾರ-ವಹಿವಾಟಿನಲ್ಲಿ ಸರಾಗ ವಾತಾವರಣ ನಿರ್ಮಿಸುವುದು, ಕಡಿಮೆ ಬಡ್ಡಿ ದರದಲ್ಲಿ ಸಾಲ, ನೀತಿ ನಿರೂಪಣೆಯಲ್ಲಿನ ಸ್ಥಿರತೆಯು ಈ ಕ್ಷೇತ್ರಗಳು ದೀರ್ಘ‌ಕಾಲಿಕ ಬೇಡಿಕೆ ಉಳಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಗಣಿಗಾರಿಕೆಯ ವಿಷಯದಿಂದಲೇ ಆರಂಭಿಸುತ್ತೇನೆ. ಯುಪಿಎ ಸರ್ಕಾರದಲ್ಲಿನ ಹಗರಣಗಳಿಂದಾಗಿ ಕಲುಷಿತಗೊಂಡಿದ್ದ ‘ನೈಸರ್ಗಿಕ ಸಂಪನ್ಮೂಲ ವಿತರಣಾ ವ್ಯವಸ್ಥೆ’ಯನ್ನು ಅಗಾಧವಾಗಿ ಸ್ವಚ್ಛಗೊಳಿಸುವ ಅಗತ್ಯವು ಇಡೀ ಪ್ರಪಂಚಕ್ಕೆ ಮನವರಿಕೆಯಾಯಿತು. ನಾವು ಈ ಕೆಲಸವನ್ನು ಯಶಸ್ವಿಯಾಗಿ ಕೈಗೊಂಡು ವಿತರಣೆಯಲ್ಲಿ ಪಾರದರ್ಶಕ ವ್ಯವಸ್ಥೆಯನ್ನು ತಂದೆವು. ಇದು ಬೃಹತ್‌ ಸುಧಾರಣೆಯಾಗಿದ್ದು, ಸಹಜವಾಗಿಯೇ, ಈ ವ್ಯವಸ್ಥೆಯು ಸ್ಥಿರತೆ ಪಡೆಯಲು ಸ್ವಲ್ಪ ಸಮಯ ಹಿಡಿಯುತ್ತದೆ.

ತೈಲ, ಅನಿಲ ಮತ್ತು ಕಲ್ಲಿದ್ದಲನ್ನು ಹೊರತುಪಡಿಸಿದ ಖನಿಜ ಕ್ಷೇತ್ರಗಳು 2018-2019ರಲ್ಲಿ ಗಾತ್ರದಲ್ಲಿ 9 ಪ್ರತಿಶತ ಬೆಳವಣಿಗೆ ಕಂಡಿವೆ. ಮೌಲ್ಯದಲ್ಲಿ ಎರಡಂಕಿಯನ್ನು ದಾಟಿವೆ. ಇದಷ್ಟೇ ಅಲ್ಲದೇ, ಈ ಉಪ-ವಲಯಗಳಲ್ಲಿ ನಾವು ಕೆಲವು ಸಮಸ್ಯೆಗಳನ್ನು ಪತ್ತೆಹಚ್ಚಿದ್ದು, ಪರಿಹಾರಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ.

ನಾವು ಗೃಹನಿರ್ಮಾಣ ವಲಯವನ್ನು ಪುನರುಜ್ಜೀವಗೊಳಿಸುವತ್ತ ಗಮನ ಹರಿಸಿದ್ದು, ಖರೀದಿದಾರರ ಹಿತಾಸಕ್ತಿಯನ್ನು ಕಾಪಾಡುತ್ತಲೇ, ಡೆವಲಪರ್‌ಗಳಿಗೆ ಸುಸ್ಥಿರ ಬೆಳವಣಿಗೆಯನ್ನು ಖಾತ್ರಿಪಡಿಸುತ್ತಿದ್ದೇವೆ. ಈ ದಿಕ್ಕಿನಲ್ಲಿ ರೇರಾ(ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಕಾಯ್ದೆ) ಬೃಹತ್‌ ಹೆಜ್ಜೆಯಾಗಿದೆ. ಕೆಲವು ಕೆಟ್ಟ ಜನರಿಂದಾಗಿ ಮಾರುಕಟ್ಟೆಯಲ್ಲಿ ವಿಶ್ವಾಸ ಕಳೆದುಹೋಗಿತ್ತು. ಈಗ ನಾವು ತಂದಿರುವ ಸುಧಾರಣಾ ಕ್ರಮಗಳಿಂದಾಗಿ ಮಾರುಕಟ್ಟೆಯ ಮೇಲಿನ ವಿಶ್ವಾಸ ಹಿಂದಿರುಗುತ್ತಿದೆ. ಬಜೆಟ್ನಲ್ಲೇ ನೀವು ನೋಡಿದಂತೆ, ಗೃಹ ನಿರ್ಮಾಣ ವಲಯದಲ್ಲಿ ನಾವು ಅನೇಕ ಕ್ರಮಗಳನ್ನು ಘೋಷಿಸಿದ್ದೇವೆ.

ಆಟೊಮೊಬೈಲ್ ಕ್ಷೇತ್ರದ ವಿಚಾರಕ್ಕೆ ಬರುವುದಾದರೆ, ಈ ಉದ್ಯಮದ ಜೊತೆ ವಿತ್ತ ಸಚಿವಾಲಯವು ರಚನಾತ್ಮಕ ಮಾತುಕತೆ ನಡೆಸಿದೆ. ಕೆಲವು ನಿಯಂತ್ರಕ ಬದಲಾವಣೆಗಳು ಮತ್ತು ಬೇಡಿಕೆಯ ಕೊರತೆಯಿಂದಾಗಿ ಈ ವಸಯದಲ್ಲಿ ಕುಂಠಿತ ನಡಿಗೆ ಕಾಣಿಸಿಕೊಂಡಿದ್ದು, ಶೀಘ್ರದಲ್ಲೇ ಪರಿಸ್ಥಿತಿ ಸುಧಾರಿಸಿ, ಬೇಡಿಕೆಯ ಜತೆಗೆ ಉದ್ಯಮವೂ ಪುಟಿದೇಳಲಿದೆ ಎಂಬ ನಂಬಿಕೆ ನನಗಿದೆ. ಅತ್ತ ಇಂಟರ್‌ನಲ್ ಕಂಬಷನ್‌ ಇಂಜಿನ್‌(ಐಸಿಇ) ಆಧಾರಿತ ವಾಹನಗಳಿಗೂ, ಇತ್ತ ವಿದ್ಯುತ್‌ ಚಾಲಿತ ವಾಹನಗಳಿಗೂ ಸಮಾನವಾಗಿ ಬೆಳವಣಿಗೆಯನ್ನು ಖಾತ್ರಿಗೊಳಿಸುವಂಥ ಬೃಹತ್‌ ಮಾರುಕಟ್ಟೆ ಭಾರತದಲ್ಲಿದೆ. ಎರಡರಲ್ಲಿ ಯಾವೊಂದರ ಬೆಳವಣಿಗೆಯ ಬಗ್ಗೆಯೂ ಅನುಮಾನಗಳು ಬೇಡ. ಐಸಿಇ ವಾಹನಗಳು ಮತ್ತು ವಿದ್ಯುತ್‌ ಚಾಲಿತ ವಾಹನಗಳು ಸಹಬಾಳ್ವೆ ನಡೆಸುವಂಥ ವಿಶೇಷ ವಾತಾವರಣ ನಮ್ಮಲ್ಲಿ ಇದೆ.

•ಜಲ ಸಂರಕ್ಷಣೆಯು ನಿಮ್ಮ ಎರಡನೇ ಅವಧಿಯ ದೊಡ್ಡ ಗುರಿ ಎಂದು ನೀವು ಹೇಳಿದ್ದೀರಿ. ಹಾಗಿದ್ದರೆ ಮಳೆಯ ಮೇಲಿನ ದೇಶದ ಆರ್ಥಿಕ ಅವಲಂಬನೆಯನ್ನು ಕಡಿಮೆ ಮಾಡುವುದು ನಿಮ್ಮ ವಿತ್ತೀಯ ಗುರಿಯೇ? ಹೌದು, ಎನ್ನುವುದಾದರೆ ಇದನ್ನು ಹೇಗೆ ಸಾಧಿಸುತ್ತೀರಿ?

ನಿಮ್ಮ ಪತ್ರಿಕೆ (ಎಕನಾಮಿಕ್‌ ಟೈಮ್ಸ್‌) ಆರ್ಥಿಕತೆಗೆ ಸಂಬಂಧಪಟ್ಟಿರುವುದರಿಂದ, ನೀವು ಈ ವಿಷಯದಲ್ಲಿ ಆರ್ಥಿಕ ಆಯಾಮವನ್ನು ಹುಡುಕುವುದು ಸಹಜವೇ!

ನಾವೀಗ ಗಾಂಧೀಜಿಯವರ 150ನೇ ಜಯಂತಿಯನ್ನು ಆಚರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಅವರು ತೋರಿಸಿಕೊಟ್ಟ ಟ್ರಸ್ಟಿಶಿಪ್‌ ಮಾದರಿಯನ್ನು ನಾವು ಮರೆಯಬಾರದು. ‘ಸರ್ವಜನ ಹಿತಾಯ, ಸರ್ವಜನ ಸುಖಾಯ’ ಎನ್ನುವುದನ್ನು ನಮ್ಮ ಮಾದರಿಯು ಆಧರಿಸಿರಬೇಕು. ನಮ್ಮ ಆಡಳಿತದ ಹಿಂದಿನ ಅವಧಿಯಲ್ಲಿ ಸ್ವಚ್ಛ ಭಾರತ ಎಂಬ ಬೃಹತ್‌ ಅಭಿಯಾನವನ್ನು ಜಾರಿಗೆ ತಂದೆವು ಮತ್ತು ದೇಶವನ್ನು ಬಯಲು ಶೌಚಮುಕ್ತಗೊಳಿಸುವತ್ತ ಧ್ಯಾನ ಕೇಂದ್ರೀಕರಿಸಿದೆವು. ಅದಕ್ಕೊಂದು ಆರ್ಥಿಕ ಆಯಾಮವೂ ಇತ್ತೆನ್ನಿ. ಶೌಚಾಲಯ ನಿರ್ಮಾಣವು ಉದ್ಯೋಗಗಳನ್ನು ಸೃಷ್ಟಿಸಿತು. ಆದರೆ ಅದಕ್ಕಿಂತಲೂ ಹೆಚ್ಚಾಗಿ, ಆರೋಗ್ಯಯುತ ಸಮಾಜವನ್ನು ಸೃಷ್ಟಿಸುವ ಗುರಿ ಮುಖ್ಯವಾದದ್ದು.

ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟವನ್ನು ರೂಪಿಸುವಲ್ಲಿ ನಾವು ಬೃಹತ್‌ ಪಾತ್ರ ವಹಿಸಿದೆವು. ಎಲ್ಲವನ್ನೂ ನಾವು ‘ಹೂಡಿಕೆ’ ಎನ್ನುವ ಕನ್ನಡಕದ ಮೂಲಕವೇ ನೋಡಬಾರದು. ನಮ್ಮ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ವಿಚಾರದಲ್ಲಿ ಇದು ಬೃಹತ್‌ ಪಲ್ಲಟವಾಗಿತ್ತು. ಈ ಕಾರಣದಿಂದಲೇ ಜಲ ಸಂರಕ್ಷಣೆಯ ವಿಚಾರವನ್ನು ಕೇವಲ ಆರ್ಥಿಕತೆಯ ಆಯಾಮಕ್ಕೆ ಸೀಮಿತಗೊಳಿಸುವುದು ತಪ್ಪಾಗುತ್ತದೆ. ಅರಣ್ಯ ಪ್ರದೇಶವನ್ನು ಹೆಚ್ಚಿಸುವ ವಿಚಾರವನ್ನು ನಾವು ಹೇಗೆ ಆರ್ಥಿಕ ಆಯಾಮದಿಂದ ನೋಡುವುದಿಲ್ಲವೋ, ಅದೇ ರೀತಿ ಭಾರತದಂಥ ಬೃಹತ್‌ ರಾಷ್ಟ್ರದಲ್ಲಿ ಜಲ ಸಂರಕ್ಷಣೆಯನ್ನು ಸಾಮಾನ್ಯ ಜನರ ಹಿತರಕ್ಷಣೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ.

ದೇಶ ಮುನ್ನಡೆಯಬೇಕು ಎಂದರೆ, ನಮ್ಮ ವರ್ತನೆಯಲ್ಲಿನ ಬದಲಾವಣೆಗಳ ಜತೆಗೆ ಆರ್ಥಿಕ ಹೆಜ್ಜೆಗಳೂ ಮುಖ್ಯವಾದದ್ದು ಎನ್ನುವುದನ್ನು ಒಪ್ಪಲೇಬೇಕು. ರೈತನೊಬ್ಬ ಹನಿ ನೀರಾವರಿ ವ್ಯವಸ್ಥೆಯತ್ತ ವಾಲಿದಾಗ, ಸಹಜವಾಗಿಯೇ ಸ್ಪ್ರಿಂಕ್‌ಲರ್‌ ಯಂತ್ರಗಳ ಮಾರಾಟ ಅಧಿಕವಾಗುತ್ತದೆ. ಇದು ಆರ್ಥಿಕ ಆಯಾಮವಾಯಿತು. ಆದರೆ, ಅದಕ್ಕಿಂತ ಹೆಚ್ಚಾಗಿ, ಜಲ ಸಂರಕ್ಷಣೆ ಆಯಿತು ಎನ್ನುವ ವಿಚಾರ ಮಹತ್ವದ್ದು.

ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಜಲ ಸಂರಕ್ಷಣೆಯ ವಿಚಾರದಲ್ಲೂ ನೀವು ಇದೇ ರೀತಿಯ ಪಾತ್ರವನ್ನು ವಹಿಸಬೇಕು, ನಿಮ್ಮ ಓದುಗರಿಗೆ ಜಲ ಸಂರಕ್ಷಣೆಯ ಪ್ರಯೋಜನ ಮತ್ತು ಪ್ರಾಮುಖ್ಯತೆಯ ಬಗ್ಗೆ, ಅದರಿಂದಾಗಿ ನಮ್ಮ ಜಿಡಿಪಿ ಬೆಳವಣಿಗೆಯ ಮೇಲೆ ಆಗುವ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.

ಜಲಶಕ್ತಿ ಅಭಿಯಾನವೆನ್ನುವುದು ಕೇವಲ ಸರ್ಕಾರಿ ಯೋಜನೆಯಲ್ಲ. ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು 130 ಕೋಟಿ ಭಾರತೀಯರ ಸಹಯೋಗದಲ್ಲಿ ನಡೆಯಬೇಕಾದ ಸಾಮೂಹಿಕ ಆಂದೋಲನವಿದು.

•ಕಳೆದ ಗುರುವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ನೀವು ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ಮಾಡಬೇಕೆಂದೂ, ನಯಾ ಕಾಶ್ಮೀರವನ್ನು ನಿರ್ಮಿಸೋಣವೆಂದೂ ಕರೆ ನೀಡಿದ್ದೀರಿ. ಈ ವಿಚಾರದಲ್ಲಿ ಆಶಾಭಾವನೆಯಿದೆಯೇ?

ನನಗೆ ತುಂಬಾ ಕಾನ್ಫಿಡೆನ್ಸ್‌ ಇದೆ. ಸತ್ಯವೇನೆಂದರೆ, ದೇಶದ ಮುಂಚೂಣಿ ಉದ್ಯಮಿಗಳು ಜಮ್ಮು-ಕಾಶ್ಮೀರದಲ್ಲಿ ಹೂಡಿಕೆ ಮಾಡುವ ಬಗ್ಗೆ ಈಗಾಗಲೇ ಆಸಕ್ತಿ ತೋರಿಸಿದ್ದಾರೆ. ಈ ಕಾಲದಲ್ಲಿ ಮುಕ್ತವಲ್ಲದ ವಾತಾವರಣದಲ್ಲಿ ಆರ್ಥಿಕ ಪ್ರಗತಿ ಆಗುವುದಿಲ್ಲ. ಮುಕ್ತ ಮನಸ್ಸುಗಳು ಮತ್ತು ಮುಕ್ತ ಮಾರುಕಟ್ಟೆಯು ಈ ಪ್ರದೇಶದ ಯುವಜನಾಂಗವು ಪ್ರಗತಿ ಪಥದಲ್ಲಿ ಸಾಗುವುದನ್ನು ಖಾತ್ರಿಪಡಿಸುತ್ತದೆ. ಒಗ್ಗೂಡುವಿಕೆ ಎಂಬುದು ಹೂಡಿಕೆಗೆ, ನಾವೀನ್ಯತೆಗೆ ಮತ್ತು ಆದಾಯಕ್ಕೆ ಬಲ ತುಂಬುತ್ತದೆ. ಆದರೆ ಹೂಡಿಕೆಗೆ ಕೆಲವು ಅಗತ್ಯಗಳಿರುತ್ತವೆ: ಸ್ಥಿರತೆ, ಮಾರುಕಟ್ಟೆಯ ನಿಲುಕು, ಪೂರಕ ಕಾನೂನುಗಳು ಇತ್ಯಾದಿ. ಆರ್ಟಿಕಲ್ 370 ಕುರಿತ ಇತ್ತೀಚಿನ ನಿರ್ಧಾರವು ಈ ಸಂಗತಿಗಳಿಗೆಲ್ಲ ಪೂರಕವಾಗಿದೆ. ಅದರಲ್ಲೂ, ಈ ಪ್ರದೇಶವು ಪ್ರವಾಸೋದ್ಯಮ, ಕೃಷಿ, ಐಟಿ, ಆರೋಗ್ಯದಂಥ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆಯ ಅವಕಾಶಗಳನ್ನು ಎದುರಿಡುತ್ತಿರುವುದರಿಂದ ಖಂಡಿತ ಹೂಡಿಕೆ ಹರಿದುಬರಲಿದೆ. ಇದು ಈ ಭಾಗದ ಜನರ ಕೌಶಲ, ಕಠಿಣ ಪರಿಶ್ರಮ ಮತ್ತು ಉತ್ಪನ್ನಗಳಿಗೆ ಹೆಚ್ಚುಲಾಭ ಮಾಡಿಕೊಡುವಂಥ ಪರಿಸರವನ್ನು ಸೃಷ್ಟಿಸಲಿದೆ. ಐಐಟಿ, ಐಐಎಂ ಮತ್ತು ಏಮ್ಸ್‌ನಂಥ ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಹೆಚ್ಚುವರಿ ಶೈಕ್ಷಣಿಕ ಅವಕಾಶಗಳನ್ನಷ್ಟೇ ಅಲ್ಲದೇ, ಕಣಿವೆಗೆ ಒಂದು ಉತ್ತಮ ಕಾರ್ಯಪಡೆಯನ್ನು ಒದಗಿಸುತ್ತದೆ.

ಸಂಚಾರ ಸಂಬಂಧಿ ಯೋಜನೆಗಳಾದ ರಸ್ತೆ, ಹೊಸ ರೈಲ್ವೆ ಮಾರ್ಗಗಳ ನಿರ್ಮಾಣ, ವಿಮಾನ ನಿಲ್ದಾಣಗಳ ಆಧುನೀಕರಣಕ್ಕೆಲ್ಲ ವೇಗ ಕೊಡಲಾಗಿದೆ. ಉತ್ತಮ ಸಾರಿಗೆ ಸಂಪರ್ಕ, ಉತ್ತಮ ಹೂಡಿಕೆಗಳಿಂದಾಗಿ ಜಮ್ಮು-ಕಾಶ್ಮೀರದ ಉತ್ಪನ್ನಗಳು ದೇಶ ಮತ್ತು ವಿದೇಶಗಳಿಗೆಲ್ಲ ಹರಿದಾಡುವುದಕ್ಕೆ ಸಹಾಯ ಮಾಡುತ್ತವೆ. ಇದರಿಂದಾಗಿ ಸಾಮಾನ್ಯ ಜನರ ಜೀವನದಲ್ಲಿ ಸಮೃದ್ಧಿ ಬರುತ್ತದೆ.

ಆರ್ಟಿಕಲ್‌ 370
ಹಿಂಪಡೆಯುವ ನಿರ್ಧಾರದ ಹಿಂದೆ ಏನು ಯೋಚನೆಯಿತ್ತು?
ಒಂದು ವಿಷಯ ಸ್ಪಷ್ಟ ಪಡಿಸುತ್ತೇನೆ. ಬಹಳ ಯೋಚಿಸಿದ ನಂತರವೇ ನಾನು ಈ ನಿರ್ಧಾರಕ್ಕೆ ಬಂದದ್ದು ಮತ್ತು ಇದರಿಂದಾಗಿ ಜನರಿಗೆ ಪ್ರಯೋಜನವಾಗುತ್ತದೆ ಎಂಬ ಖಾತ್ರಿ ನನಗಿದೆ.

ಜಲ ಸಂರಕ್ಷಣೆಯ ವಿಚಾರವನ್ನು ಕೇವಲ ಆರ್ಥಿಕತೆಯ ಆಯಾಮಕ್ಕೆ ಸೀಮಿತಗೊಳಿಸುವುದು ತಪ್ಪಾಗುತ್ತದೆ. ಅರಣ್ಯ ಪ್ರದೇಶವನ್ನು ಹೆಚ್ಚಿಸುವ ವಿಚಾರವನ್ನು ನಾವು ಹೇಗೆ ಆರ್ಥಿಕ ಆಯಾಮದಿಂದ ನೋಡುವುದಿಲ್ಲವೋ, ಅದೇ ರೀತಿ ಭಾರತದಂಥ ಬೃಹತ್‌ ರಾಷ್ಟ್ರದಲ್ಲಿ ಜಲ ಸಂರಕ್ಷಣೆಯನ್ನು ಸಾಮಾನ್ಯ ಜನರ ಹಿತ ರಕ್ಷಣೆಯ ದೃಷ್ಟಿಯಿಂದ ನೋಡಬೇಕಾಗುತ್ತದೆ. ಸ್ವಚ್ಛ ಭಾರತ ಯಶಸ್ವಿಯಾಗುವಲ್ಲಿ ಮಾಧ್ಯಮಗಳ ಪಾತ್ರ ದೊಡ್ಡದಿದೆ. ಜಲ ಸಂರಕ್ಷಣೆ ವಿಚಾರದಲ್ಲೂ ನೀವು ಇದೇ ರೀತಿಯ ಪಾತ್ರವನ್ನು ವಹಿಸಬೇಕು, ಓದುಗರಿಗೆ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Gold loan

ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್‌ಬಿಐ ಅವಕಾಶ

ಆ.20ರ ಒಳಗೆ ಸಿಇಟಿ ಫಲಿತಾಂಶ ಪ್ರಕಟ : ಡಿಸಿಎಂ ಅಶ್ವತ್ಥನಾರಾಯಣ

ಆ.20ರ ಒಳಗೆ ಸಿಇಟಿ ಫಲಿತಾಂಶ ಪ್ರಕಟ : ಡಿಸಿಎಂ ಅಶ್ವತ್ಥನಾರಾಯಣ

ಹುಬ್ಬಳ್ಳಿ ಹಾಡಹಗಲೇ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ!

ಹುಬ್ಬಳ್ಳಿ ಹಾಡಹಗಲೇ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಾಬಂಧನ 2020: “ಅಪ್ಪನಂಥಾ ಅಣ್ಣ”

ರಕ್ಷಾಬಂಧನ 2020: “ಅಪ್ಪನಂಥಾ ಅಣ್ಣ”

ರಕ್ಷಾ ಬಂಧನ ವಿಶೇಷ : “ಸಹೋದರಿಯರ ಪ್ರೀತಿಯ ರಕ್ಷಾ ಬಂಧನ “

ರಕ್ಷಾ ಬಂಧನ ವಿಶೇಷ : “ಸಹೋದರಿಯರ ಪ್ರೀತಿಯ ರಕ್ಷಾ ಬಂಧನ “

ರಕ್ಷಾ ಬಂಧನ ವಿಶೇಷ; ಅಜ್ಜಿಯ ಹಣದಿಂದ ಕೊಂಡ ರಾಕಿ

ರಕ್ಷಾ ಬಂಧನ ವಿಶೇಷ; ಅಜ್ಜಿಯ ಹಣದಿಂದ ಕೊಂಡ ರಾಕಿ

ರಕ್ಷಾ ಬಂಧನ ವಿಶೇಷ : ಬಾಂಧವ್ಯ ಬೆಸೆಯುವ ಬಿಂದು ರಕ್ಷಾ ಬಂಧನ

ರಕ್ಷಾ ಬಂಧನ ವಿಶೇಷ : ಬಾಂಧವ್ಯ ಬೆಸೆಯುವ ಬಿಂದು ರಕ್ಷಾ ಬಂಧನ

ರಕ್ಷಾ ಬಂಧನ ವಿಶೇಷ : ಪ್ರೀತಿಯ ಪ್ರತಿರೂಪ ಅಣ್ಣ

ರಕ್ಷಾ ಬಂಧನ ವಿಶೇಷ : ಪ್ರೀತಿಯ ಪ್ರತಿರೂಪ ಅಣ್ಣ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

I can

ಆದಿತ್ಯ ಲ್ಯಾಬ್‌ನಲ್ಲೇ ಕಾಲ ಕಳೆಯುತ್ತಿದ್ದ, ಅಲ್ಲೇ ಮಲಗುತ್ತಿದ್ದ

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.