“ಕನ್ನಡಕ’ ಬದಲಿಸಿ ನಮ್ಮ ಶ್ರೀಲಂಕಾವನ್ನು ನೋಡಲಿ ಭಾರತ!

Team Udayavani, Dec 2, 2019, 5:30 AM IST

ನನಗಿನ್ನೂ ನೆನಪಿದೆ. ಕೊಲಂಬೋದಲ್ಲಿ ಟಿ20 ಕ್ರಿಕೆಟ್‌ ನಡೆದಿತ್ತು. ಭಾರತ-ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯಕ್ಕೆ ನಾನೂ ಹೋಗಿದ್ದೆ. ಅಂದು ಶ್ರೀಲಂಕಾದ ಫ್ಯಾನ್‌ಗಳೆಲ್ಲ “India go home” ಎಂದು ಘೋಷಣೆ ಕೂಗಲಾರಂಭಿಸಿದ್ದರು. ಸಾಮಾನ್ಯವಾಗಿ, ಇಂಥ ಮ್ಯಾಚ್‌ಗಳಲ್ಲಿ ಭಾರತವನ್ನು ಬೆಂಬಲಿಸುವ ಶ್ರೀಲಂಕನ್ನರು, ಅಂದು ಆಸ್ಟ್ರೇಲಿಯಾಗೆ ಜೈ ಅಂದರು.

ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಫ‌ಲಿತಾಂಶ ಬಂದ ನಂತರದಿಂದ ನಾನು, ಈ ವಿಚಾರದಲ್ಲಿ ಪ್ರಕಟವಾದ ಅಂತಾರಾಷ್ಟ್ರೀಯ ವರದಿಗಳನ್ನು ಗಮನಿಸುತ್ತಿದ್ದೇನೆ‡. ಪಶ್ಚಿಮ ರಾಷ್ಟ್ರಗಳ ಬಹುತೇಕ ವರದಿಗಳು ಗೋಟಬಯಾರನ್ನು “ಪ್ರಜಾಪ್ರಭುತ್ವವನ್ನು ದ್ವೇಷಿಸುವ ಮಾನವ ಹಕ್ಕು ಉಲ್ಲಂಘಕ’ ಎಂದೇ ಬಿಂಬಿಸುತ್ತಿವೆ. ದುರದೃಷ್ಟವಶಾತ್‌, ಭಾರತ ಕೂಡ ಪಾಶ್ಚಿಮಾತ್ಯ ಮಾಧ್ಯಮಗಳ ಈ ದೃಷ್ಟಿಕೋನವನ್ನು ಪ್ರಶ್ನಿಸದೇ, ಅವುಗಳ ಮಾತನ್ನೇ ಪುನರುಚ್ಚರಿಸುತ್ತಿದೆ! ಆದರೆ ಇವೇ ಪಾಶ್ಚಾತ್ಯ ಮಾಧ್ಯಮಗಳು, ವಿದೇಶಿ ಫ‌ಂಡೆಂಡ್‌ ಎನ್‌ಜಿಒಗಳು 2014ರಲ್ಲಿ ಸಿರಿಸೇನೆಯನ್ನು ತಂದು ಕೂರಿಸಲು ಹೇಗೆ ಒಳಗಿಂದೊಳಗೆ ಕೆಲಸ ಮಾಡಿದವು ಎನ್ನುವುದರ ಬಗ್ಗೆ ಮಾತನಾಡುವುದಿಲ್ಲ. ಅಲ್ಲದೇ ಹೇಗೆ ಸಿರಿಸೇನೆಯ ಪಾಶ್ಚಾತ್ಯ ಪ್ರಿಯ ಸರ್ಕಾರವು ವೈಫ‌ಲ್ಯ ಅನುಭವಿಸಿತು ಮತ್ತು ಹೇಗೆ ಈ ಲಿಬರಲ್‌ಗಳ “ಉತ್ತಮ ಆಡಳಿತ’ದ ಕಥೆ ಈಗ ಶ್ರೀಲಂಕಾದಲ್ಲಿ ತಮಾಷೆಯ ವಿಷಯವಾಗಿ ಬದಲಾಗಿದೆ ಎನ್ನುವುದನ್ನೂ ಇವು ಉಲ್ಲೇಖೀಸುವುದಿಲ್ಲ.

“”ಕೇವಲ ನೂರು ದಿನಗಳಲ್ಲಿ ಉದಾರವಾದಿ ಆದರ್ಶ ರಾಷ್ಟ್ರವನ್ನು ನಿರ್ಮಿಸುತ್ತೇವೆ” ಎಂಬ ಭರವಸೆ ನೀಡಿ ಸಿರಿ ಸೇನಾ-ವಿಕ್ರಂ ಸಿಂಘೆ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಆ ಸರ್ಕಾರ ಅಧಿಕಾರಕ್ಕೆ ಬಂದದ್ದೇ, ಪಶ್ಚಿಮ ರಾಷ್ಟ್ರಗಳಿಂದ ದೇಣಿಗೆ ಪಡೆಯುತ್ತಾ ಬೆಳೆದಿದ್ದ ಎನ್‌ಜಿಒಗಳ ನಸೀಬು ಬದಲಾಯಿತು. ಈ ಎನ್‌ಜಿಒಗಳಲ್ಲಿ ಇದ್ದವರಿಗೆಲ್ಲ ಸರ್ಕಾರದ ಏಜೆನ್ಸಿಗಳಲ್ಲಿ ಉನ್ನತ ಹುದ್ದೆಗಳನ್ನು ನೀಡಲಾಯಿತು.(ಈ ರೀತಿಯ ಎನ್‌ಜಿಒಗಳು, ವಿಶ್ವಸಂಸ್ಥೆಯು ಕ್ಯಾಂಪೇನ್‌ನ ಭಾಗವಾಗಿ ಅಸ್ತಿತ್ವಕ್ಕೆ ಬಂದವು. ಎಲ್‌ಟಿಟಿಇ ವಿರುದ್ಧದ ಸಮರದಲ್ಲಿ ರಾಜಪಕ್ಸೆ ತಂಡದಿಂದ ಯುದ್ಧಾಪರಾಧ ನಡೆದಿದೆ ಎಂಬ ಆರೋಪಗಳು ಎದುರಾದವಲ್ಲ, ಆಗ).

ಕಳೆದ ಕೆಲವು ವರ್ಷಗಳಿಂದ ಪಾಶ್ಚಿಮಾತ್ಯ ರಾಷ್ಟ್ರಗಳು ಈ ಎನ್‌ಜಿಒಗಳ ಮೂಲಕ ಶ್ರೀಲಂಕಾದ ಆಂತರಿಕ ವಿಚಾರಗಳಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದನ್ನು ಬಹುತೇಕ ಶ್ರೀಲಂಕನ್ನರು ಗಮನಿಸುತ್ತಿದ್ದಾರೆ. ಹಿಂದೆಲ್ಲ ಧರ್ಮ ಪ್ರಚಾರದ ಮೂಲಕ ಇನ್ನೊಂದು ರಾಷ್ಟ್ರದಲ್ಲಿ ಮೂಗು ತೂರಿಸುತ್ತಿದ್ದ ಪಶ್ಚಿಮದ ಈ ಶಕ್ತಿಗಳು, ಈಗ ಧರ್ಮಗ್ರಂಥಗಳ ಬದಲು ಆಯಾ ರಾಷ್ಟ್ರಗಳಲ್ಲಿನ ಅಲ್ಪಸಂಖ್ಯಾತರನ್ನು ಬಳಸಿಕೊಳ್ಳುತ್ತಿವೆ. ಅಂದರೆ ಶ್ರೀಲಂಕಾದಲ್ಲಿ ತಮಿಳರನ್ನು, ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾಗಳನ್ನು ಮತ್ತು ಭಾರತದಲ್ಲಿ ದಲಿತರನ್ನು ಈ ಎನ್‌ಜಿಒಗಳು ತಮ್ಮ ಉದ್ದೇಶ ಸಾಧನೆಗೆ ಬಳಸಿಕೊಳ್ಳುತ್ತಿವೆ.

“2014ರ ಚುನಾವಣೆಯಲ್ಲಿ ರಾಜಪಕ್ಸೆ ಸಹೋದರರು ಸೋಲುವುದಕ್ಕೆ ಈ ಗುಂಪುಗಳು ಪ್ರಮುಖ ಪಾತ್ರ ವಹಿಸಿದವು. ಈ ಕೆಲಸಕ್ಕೆ ಅಮೆರಿಕದಿಂದ ದೇಣಿಗೆ ಬಂದಿತ್ತು’ ಎಂದು ಬರೆಯುತ್ತಾರೆ ಪತ್ರಕರ್ತ-ಸಂಪಾದಕ ಶಮಿಂದ್ರಾ ಫ‌ರ್ಡಿನಾಂಡೋ.

2014ರಲ್ಲಿ ಅಧಿಕಾರಕ್ಕೇರಿದ ಸಿರಿಸೇನಾ ಆಡಳಿತವು ಹಲವು ಹಗರಣಗಳಲ್ಲಿ ತನ್ನ ಹೆಸರು ಕೆಡಿಸಿಕೊಂಡಿದೆ. ಸೆಂಟ್ರಲ್‌ ಬಾಂಡ್‌ ಹಗರಣ ಸೇರಿದಂತೆ, ಅನೇಕ ಭ್ರಷ್ಟಾಚಾರ ಪ್ರಕರಣಗಳು ಅವರ ಅವಧಿಯಲ್ಲಿ ನಡೆದವು. ಆದರೆ, ಶ್ರೀಲಂಕಾವನ್ನು ಅತಿ ಹೆಚ್ಚು ಕಾಡಿದ್ದು, ಹೇಗೆ ಸಿರಿಸೇನಾ ಸರ್ಕಾರ ಪಶ್ಚಿಮದ ಮಾನವ ಹಕ್ಕು ಲಾಬಿಗಳಿಗೆ ಮತ್ತು ಮುಖ್ಯವಾಗಿ ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ತಲೆಬಾಗಿತು ಎನ್ನುವುದು.

“ಎಲ್‌ಟಿಟಿಯ ವಿರುದ್ಧದ ಸಮರದಲ್ಲಿ ಶ್ರೀಲಂಕಾದಿಂದ ಮಾನವಹಕ್ಕು ಉಲ್ಲಂಘನೆಯಾಗಿದೆ’ ಎಂಬ ವಿಶ್ವಸಂಸ್ಥೆಯ ನಿರ್ಣಯಕ್ಕೆ ಸಿರಿಸೇನಾ ಸರ್ಕಾರ ಸಹಿ ಹಾಕಿತು! ವಿಶ್ವ ಸಂಸ್ಥೆಯ ಮಾನವಹಕ್ಕು ಆಯೋಗದ ಈ ನಡೆಯು ಶ್ರೀಲಂಕನ್ನರಿಗೆ “ಶುದ್ಧ ಬೂಟಾಟಿಕೆ’ ಎಂದೆನಿಸಿದ್ದು ಸುಳ್ಳಲ್ಲ. ಏಕೆಂದರೆ, ಶ್ರೀಲಂಕಾದ ಮೇಲೆ ಮಾನವ ಹಕ್ಕು ಉಲ್ಲಂಘನೆಯ ಆರೋಪ ಮಾಡುವ ಇದೇ ವಿಶ್ವಸಂಸ್ಥೆ, ಯಾವತ್ತೂ ಕೂಡ ಅಮೆರಿಕ ಮತ್ತು ನ್ಯಾಟೋ ಪಡೆಗಳು “ಭಯೋತ್ಪಾದನೆ ವಿರುದ್ಧದ ಸಮರದಲ್ಲಿ’ ಅತ್ಯಂತ ಘೋರ ಯುದ್ಧಾಪರಾಧಗಳನ್ನು ಎಸಗುತ್ತಲೇ ಬಂದಿರುವುದನ್ನು ಪ್ರಶ್ನಿಸುವುದಿಲ್ಲ. ವಿಶ್ವಸಂಸ್ಥೆ ಒಮ್ಮೆಯೂ ಈ ವಿಚಾರದಲ್ಲಿ ಅಮೆರಿಕದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುವುದೇ ಇಲ್ಲ.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಗೊಟಬಯಾ ರಾಜಪಕ್ಸೆಯವರು “ವಿಶ್ವ ಸಂಸ್ಥೆಯ ಆರೆಸಲ್ಯೂಷನ್‌ಗೆ ತಾವು ಮಾನ್ಯತೆ ಕೊಡುವುದಿಲ್ಲ’ ಎಂದೇ ಹೇಳಿದರು.  ಮುಖ್ಯವಾಗಿ ವಿಶ್ವಸಂಸ್ಥೆಯ ಈ ನಿರ್ಣಯದಲ್ಲಿ, “”ಶ್ರೀಲಂಕಾದಲ್ಲಿ “ಯುದ್ಧಾಪರಾಧ ನ್ಯಾಯಮಂಡಳಿ’ಗಳನ್ನು ಸ್ಥಾಪಿಸುವ” ಕುರಿತಾದ ಅಂಶಗಳಿವೆ, ಅಲ್ಲದೇ ಈ ನ್ಯಾಯ ಮಂಡಳಿಗಳಿಗೆ ವಿದೇಶಿ ನ್ಯಾಯಾಧೀಶರು ಇರುತ್ತಾರೆ! ಮಾರ್ಚ್‌ 2013ರಲ್ಲಿ ಈ ನಿರ್ಣಯಕ್ಕೆ ಭಾರತವೂ ಸಹಿ ಹಾಕಿತು! ಮನಮೋಹನ್‌ ಸಿಂಗ್‌ ಸರ್ಕಾರದ ಈ ನಡೆಯು ಶ್ರೀಲಂಕನ್ನರ ಪಾಲಿಗೆ ತೀವ್ರ ನೋವುಂಟು ಮಾಡಿತು. ಒಟ್ಟಲ್ಲಿ ಯಾವ ರಾಷ್ಟ್ರವನ್ನು ಶ್ರೀಲಂಕನ್ನರು ದೊಡ್ಡ ಮಿತ್ರರಾಷ್ಟ್ರವೆಂದು ಭಾವಿಸಿದ್ದರೋ ಅದೇ ರಾಷ್ಟ್ರ ಅಂದು ಶ್ರೀಲಂಕಾಗೆ ವಿರುದ್ಧವಾಗಿ ನಿಂತುಬಿಟ್ಟಿತು. ಅಂತಾರಾಷ್ಟ್ರೀಯ ವೇದಿಕೆಯೊಂದರಲ್ಲಿ ಅದೇ ಮೊದಲ ಬಾರಿಗೆ ಭಾರತ ಶ್ರೀಲಂಕಾದ ವಿರುದ್ಧ ಮತ ಹಾಕಿತ್ತು. ಸಿಂಹಳೀಯರಲ್ಲಿ “ಭಾರತ ವಿರೋಧಿ ಭಾವನೆ’ ಬೆಳೆಯಲು ಮನಮೋಹನ್‌ ಸಿಂಗ್‌ ಸರ್ಕಾರದ ಈ ನಡೆಯೇ ಕಾರಣವಾಯಿತು.

ನನಗಿನ್ನೂ ನೆನಪಿದೆ. ಈ ಘಟನೆ ನಡೆದ ಕೆಲವು ತಿಂಗಳ ನಂತರ ಶ್ರೀಲಂಕಾದಲ್ಲಿ ಟಿ20 ಪಂದ್ಯಾವಳಿ ಆಯೋಜನೆಯಾಗಿತ್ತು. ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧ ನಡೆದ ಒಂದು ಪಂದ್ಯಕ್ಕೆ ನಾನೂ ಹೋಗಿದ್ದೆ. ಅಂದು ಶ್ರೀಲಂಕಾದ ಫ್ಯಾನ್‌ಗಳೆಲ್ಲ “India go home” ಎಂದು ಭಾರತ ವಿರೋಧಿ ಘೋಷಣೆ ಕೂಗಲಾರಂಭಿಸಿದ್ದರು. ಸಾಮಾನ್ಯವಾಗಿ, ಇಂಥ ಮ್ಯಾಚ್‌ಗಳಲ್ಲಿ ಶ್ರೀಲಂಕನ್ನರು ಭಾರತವನ್ನು ಸಪೋರ್ಟ್‌ ಮಾಡುತ್ತಾರೆ, ಆದರೆ ಅಂದು ಅವರೆಲ್ಲ ಆಸ್ಟ್ರೇಲಿಯನ್‌ ಟೀಂ ಪರವಾಗಿ ಜೈಕಾರ ಹಾಕಲಾರಂಭಿಸಿದ್ದರು.

ಬಹಳ ಸಮಯದಿಂದಲೂ ಭಾರತದ ವಿದೇಶಾಂಗ ನೀತಿಯನ್ನು ತಮಿಳುನಾಡಿನ ರಾಜಕಾರಣಿಗಳೇ ನಿರ್ದೇಶಿಸಿದ್ದಾರೆ. (ಅದರಲ್ಲೂ ಮುಖ್ಯವಾಗಿ ಮನಮೋಹನ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ). ಮೊದಲಿನಿಂದಲೂ ಭಾರತ-ಶ್ರೀಲಂಕಾ ನಡುವಿನ ಸಾಂಸ್ಕೃತಿಕ ಕೊಂಡಿಯನ್ನೇ ಕಡೆಗಣಿಸುತ್ತಾ ಬರಲಾಗಿತ್ತು. ಸತ್ಯವೇನೆಂದರೆ, ಉತ್ತರ ಭಾರತೀಯ ಹಿಂದೂಗಳಿಗೂ ಶ್ರೀಲಂಕಾದ ಸಿಂಹಳ ಬೌದ್ಧರಿಗೆ ಬಹಳಷ್ಟು ಸಾಮ್ಯತೆ ಇದೆ. ಸಿಂಹಳ ಬೌದ್ಧರು ಸಾವಿರಾರು ಸಂಖ್ಯೆಯಲ್ಲಿ ಉತ್ತರ ಭಾರತದ ಬೌದ್ಧ ಕ್ಷೇತ್ರಗಳಿಗೆ ತೀರ್ಥಯಾತ್ರೆ ಕೈಗೊಳ್ಳುತ್ತಾರೆ. ಜಗತ್ತಿನ ಅತಿ ಹಳೆಯ ಬೋಧಿ ವೃಕ್ಷ ಶ್ರೀಲಂಕಾದಲ್ಲಿದ್ದು, ಇದರ ಸಸಿಯನ್ನು ಅಶೋಕ ಚಕ್ರವರ್ತಿಯ ಮಗಳು ಭಿಕ್ಕುನಿ ಸಂಘಮಿತ್ರಾ, ಬೋಧಗಯಾದಿಂದ ಶ್ರೀಲಂಕಾಕ್ಕೆ ತಂದಿದ್ದಳು ಎನ್ನಲಾಗುತ್ತದೆ.

2015ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶ್ರೀಲಂಕಾ ಪ್ರವಾಸ ಮಾಡಿದಾಗ, ಅವರಿಗೆ ಭಾರತದ ವಿದೇಶಾಂಗ ನೀತಿಯಲ್ಲಿನ‌ ಈ ಮೂರ್ಖತನ ಅರಿವಾಯಿತು ಎನಿಸುತ್ತದೆ. ಹೀಗಾಗಿ, ಆ ಸಮಯದಲ್ಲಿ ಮೊಟ್ಟ ಮೊದಲ ಬಾರಿ ಭಾರತದ ಹಿಂದೂ ಪ್ರಧಾನಿಯೊಬ್ಬರು(ಮೋದಿ) ಶ್ರೀಲಂಕಾದ ಅನುರಾಧಾಪುರದಲ್ಲಿನ ಶ್ರೀ ಮಹಾಬೋಧಿ ಕಾರ್ಯಕ್ರಮಕ್ಕೆ ಬಂದು, ಬೌದ್ಧ ಭಿಕ್ಕುಗಳಿಂದ ಆಶೀರ್ವಾದ ಪಡೆದಿದ್ದರು.

ದುರದೃಷ್ಟವಶಾತ್‌ ನರೇಂದ್ರ ಮೋದಿಯವರ ರಾಜತಾಂತ್ರಿಕತೆಯು, ತನ್ನ ಬೌದ್ಧ ವಿರೋಧಿ ನಡೆಗಳಿಂದಲೇ ಗುರುತಿಸಿಕೊಂಡಿದ್ದ ಅಂದಿನ
ಸಿರಿಸೇನಾ ಸರ್ಕಾರಕ್ಕೆ ಸರಿಹೊಂದಲಿಲ್ಲ. ಆದರೀಗ, ಗೋಟಬಯಾ ರಾಜಪಕ್ಸೆಯವರು ಬೌದ್ಧ ರಾಷ್ಟ್ರೀಯವಾದದ ಅಶ್ವವೇರಿ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಇದು ಭಾರತದ ಪಾಲಿಗೆ ಟ್ರಂಪ್‌ ಕಾರ್ಡ್‌ ಆಗಬಹುದು.

“ಇಂಡಿ ಕ್‌-ಬೌದ್ಧ ನಾಗರಿಕತೆಯ’ ಕಲ್ಪನೆಯೇ ಉದಯೋನ್ಮುಖ ಏಷ್ಯಾದ ಸಾಂಸ್ಕೃತಿಕ ಹೆಗ್ಗುರುತಾಗಬೇಕು ಎಂಬ ಬಯಕೆ ಮೋದಿಯವರಿಗಿದೆ. ಮೋದಿಯವರ ಈ ಬಯಕೆಯು ರಾಜಪಕ್ಸೆ ಆಡಳಿತಕ್ಕೆ ಮತ್ತವರ ಬೆಂಬಲಿಗರಿಗೆ ಖಂಡಿತ ಹಿಡಿಸುತ್ತದೆ. ಭಾರತವು ಈ ಚಳವಳಿಯಲ್ಲಿ ಭಾಗಿಯಾಗಲು ಶ್ರೀಲಂಕಾಗೆ ಅಧಿಕೃತವಾಗಿ ಆಹ್ವಾನಿಸಬೇಕು. ಉದಾಹರಣೆಗೆ, ಗಂಗಾ ಮೇಕಾಂಗ್‌ ಸಹಭಾಗಿತ್ವ (ಜಿಎಂಸಿ) ಕಾರ್ಯಕ್ರಮದಲ್ಲಿ ಭಾರತ ಶ್ರೀಲಂಕಾವನ್ನೂ ಸೇರಿಸಿಕೊಳ್ಳಬೇಕು. ಜಿಎಂಸಿ ಕಾರ್ಯಕ್ರಮದ ಮೂಲಕ ಭಾರತ, ಆಗ್ನೇಯ ಏಷ್ಯಾದಲ್ಲಿ ಬೌದ್ಧ ಧರ್ಮ ಸಾಗಿದ ಮಾರ್ಗವನ್ನು
ಗುರುತಿಸಿ ಆ ದೇಶಗಳ ನಡುವೆ ಆರ್ಥಿಕ ಸಹಭಾಗಿತ್ವವನ್ನು ಹೆಚ್ಚಿಸುವ ಪ್ರಯತ್ನ ನಡೆಸುತ್ತಿದೆ. ಸತ್ಯವೇನೆಂದರೆ, ಶ್ರೀಲಂಕಾದ ಮೂಲಕವೇ ಆಗ್ನೇಯ ಏಷ್ಯನ್‌ ರಾಷ್ಟ್ರಗಳಿಗೆ ಬೌದ್ಧ ಧರ್ಮ ತಲುಪಿತು.

ಇನ್ನು ಮೋದಿ ಮತ್ತು ಶಿಂಜೋ ಅಬೆ ಸರ್ಕಾರ, ಏಷ್ಯಾದಲ್ಲಿನ ಸಂಘರ್ಷಗಳನ್ನು ತಗ್ಗಿಸುವುದಕ್ಕಾಗಿ SAMVAD ಆಂದೋಲನದ ಮೂಲಕ ಹಿಂದೂ-ಬೌದ್ಧ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಶ್ರೀಲಂಕಾಗೂ ಜಾಗ ಕೊಡಬೇಕು.

ಶ್ರೀಲಂಕಾ -ಚೀನ ನಡುವಿನ ಸಂಬಂಧ ಆಪ್ತವಾಗಿದೆ. ಚೀನ ಈಗ ತನ್ನನ್ನು ಆಧುನಿಕ ಬೌದ್ಧ ರಾಷ್ಟ್ರ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಹೀಗಾಗಿ, ಭಾರತ-ಚೀನ ನಡುವಿನ ಕೊಂಡಿಯಾಗಿ, ಆ ಮೂಲಕ ಬೃಹತ್‌ ಏಷ್ಯನ್‌ ಸಾಂಸ್ಕೃತಿಯ ಮೈತ್ರಿಯನ್ನು ರಚಿಸಲು ಶ್ರೀಲಂಕಾಗೆ ಸಾಧ್ಯವಿದೆ. ಏಷ್ಯಾದಲ್ಲಿ ವಿಸ್ತರಿಸುತ್ತಿರುವ ತೀವ್ರವಾದಿ ಧರ್ಮಗಳಿಂದ ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವನ್ನು ರಕ್ಷಿಸಲು ಏಷ್ಯಾದಲ್ಲಿ ಇಂಥದ್ದೊಂದು ಸಾಂಸ್ಕೃತಿಕ ಮೈತ್ರಿಯು ಅತ್ಯಗತ್ಯವಾದದ್ದು.

ಇನ್ನು ಎಲ್‌ಟಿಟಿಇ ವಿರುದ್ಧದ ಕೊನೆಯ ಹಂತದ ಸಮರದಲ್ಲಿ ಶ್ರೀಲಂಕಾ ವ್ಯಾಪಕ ಪ್ರಮಾಣದಲ್ಲಿ ಮಾನವ ಹಕ್ಕು ಉಲ್ಲಂಸಿದೆ ಎಂಬ “ಪುರಾವೆಯಿಲ್ಲದ’, “ಅತಿಯಾಗಿ ಉತ್ಪ್ರೇಕ್ಷಿಸಲಾದ’ ಆರೋಪಗಳು ವಿಶ್ವಸಂಸ್ಥೆಯಂಥ ವೇದಿಕೆಗಳಲ್ಲಿ ಇವೆ. ಈ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತ ಶ್ರೀಲಂಕಾದ ಪರ ನಿಲ್ಲಬೇಕಿದೆ. ಏಕೆಂದರೆ, ಪಶ್ಚಿಮ ರಾಷ್ಟ್ರಗಳೇನಾದರೂ ಶ್ರೀಲಂಕಾವನ್ನು ಈ ವಿಚಾರದಲ್ಲಿ ಕಟ್ಟಿಹಾಕಿದವೆಂದರೆ, ಅವು ಮುಂದೆ ಕಾಶ್ಮೀರದ ವಿಚಾರದಲ್ಲೂ ಭಾರತದ ವಿರುದ್ಧ ಈ ರೀತಿಯ ವ್ಯವಸ್ಥಿತ ತಂತ್ರವನ್ನು ಹೆಣೆಯುತ್ತವೆ. ಈಗ ಶ್ರೀಲಂಕಾದಂತೆ, ಮುಂದೆ ಭಾರತ ಕೂಡ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ಪಶ್ಚಿಮದ ಶಕ್ತಿಗಳಿಂದ ತೊಂದರೆ ಎದುರಿಸಬೇಕಾಗುತ್ತದೆ.

ಅತ್ತ ಭಾರತೀಯ ಮಾಧ್ಯಮಗಳೂ ಕೂಡ ಶ್ರೀಲಂಕಾದ ವಿರುದ್ಧ ಇರುವ ಈ ಆರೋಪಗಳನ್ನು ಕೂಲಂಕಷವಾಗಿ ಪರಿಶೀಲಿಸಿ ವರದಿ ಮಾಡಬೇಕು. ಬಿಬಿಸಿ, ಚಾನೆಲ್‌4 ಸೇರಿದಂತೆ ಇನ್ನಿತರ ವಿದೇಶಿ ಮಾಧ್ಯಮಗಳ ಪೂರ್ವಗ್ರಹ ಪೀಡಿತ ಸುದ್ದಿಗಳನ್ನೇ ಇವು ಪ್ರಸಾರ ಮಾಡಬಾರದು. 2013ರಲ್ಲಿ ಭಾರತವು ಶ್ರೀಲಂಕಾಗೆ ವಂಚಿಸಿ ಪಶ್ಚಿಮ ಶಕ್ತಿಗಳ ಪರ ನಿಂತಿತು ಎನ್ನುವ ಕಾರಣಕ್ಕಾಗಿಯೇ ಶ್ರೀಲಂಕಾ ಚೀನದತ್ತ ವಾಲಿತು ಎನ್ನುವುದನ್ನು ಭಾರತೀಯ ಮಾಧ್ಯಮಗಳು ಅರ್ಥಮಾಡಿಕೊಳ್ಳಬೇಕು. ಅಂದು ಚೀನ ಮಾತ್ರ ವಿಶ್ವಸಂಸ್ಥೆಯಂಥ ವೇದಿಕೆಗಳಲ್ಲಿ ಶ್ರೀಲಂಕಾವನ್ನು ಸಮರ್ಥಿಸಿಕೊಂಡಿತು. ಅಷ್ಟೇ ಅಲ್ಲದೆ, ತನ್ನ ವಿಟೋ ಶಕ್ತಿ ಬಳಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಶ್ರೀಲಂಕಾದಿಂದ ದೂರವಿಟ್ಟಿತು. ಇನ್ನು, ಎಲ್‌ಟಿಟಿಇ ವಿರುದ್ಧಸಮರ ನಡೆದಿದ್ದಾಗ ಪಶ್ಚಿಮ ದೇಶಗಳು ಶ್ರೀಲಂಕಾದ ಸಹಾಯಕ್ಕೆ ಬರಲೇ ಇಲ್ಲ, ಆದರೆ ಚೀನ ನಮಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿತು.

ಗೋಟಬಯಾ ರಾಜಪಕ್ಸೆಯವರು ಅಧಿಕಾರ ಸ್ವೀಕರಿಸುವಾಗ, “”ನಮ್ಮ ಸರ್ಕಾರ ತಟಸ್ಥ ವಿದೇಶಾಂಗ ನೀತಿಯನ್ನು ಅನುಸರಿಸಲಿದೆ ಮತ್ತು ಜಾಗತಿಕ ಭೂ-ರಾಜಕೀಯ ಅಧಿಕಾರದ ಆಟಗಳಿಂದ ದೂರವೇ ಉಳಿಯಲಿದೆ. ಎಲ್ಲಾ ರಾಷ್ಟ್ರಗಳು ನಮ್ಮ ದೇಶದ ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ನಾವು ಕೇಳಿಕೊಳ್ಳುತ್ತೇವೆ” ಎಂದಿದ್ದಾರೆ. ತನ್ಮೂಲಕ ಗೋಟಬಯಾ ಸರ್ಕಾರ , ತಾನು ಚೀನ-ಭಾರತದ ಜತೆಗಿನ ಸಂಬಂಧದಲ್ಲಿ ಸಮತೋಲಿತ ನಡೆ ಇಡಲಿದೆ ಎನ್ನುವುದನ್ನು ಸ್ಪಷ್ಟಪಡಿಸಿದೆ. ಆದರೆ ಭಾರತ 2013ರಲ್ಲಿ ತೋರಿಸಿದ ವರ್ತನೆಯನ್ನು ಪುನರಾವರ್ತಿಸಬಾರದಷ್ಟೆ. .

(ಲೇಖಕರು ಶ್ರೀಲಂಕಾದ ಪ್ರಖ್ಯಾತ ಪತ್ರಕರ್ತರು ಹಾಗೂ ಅಂತಾರಾಷ್ಟ್ರೀಯ ರಾಜಕೀಯ ವಿಶ್ಲೇಷಕರು. ಕೃಪೆ: ಇನ್‌ಡೆಪ್ತ್ ನ್ಯೂಸ್‌ )

– ಡಾ. ಕಳಿಂಗಾ ಸೇನೇವಿರತ್ನೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ