ಇಸ್ರೋ ಮಹತ್ವಾಕಾಂಕ್ಷೆಯ ಯೋಜನೆ ಒಂದೆರಡಲ್ಲ !

ಬಾಹ್ಯಾಕಾಶ ಸಂಶೋಧನೆಗಳ ಜಾರಿಗೆ ಇಸ್ರೋ ಅವಿರತ ಶ್ರಮ

Team Udayavani, Sep 15, 2019, 5:28 AM IST

ಮಣಿಪಾಲ: ಚಂದ್ರಯಾನ-2ರ ಬಳಿಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತನ್ನ ಗುರಿಯನ್ನು ಬಾಹ್ಯಾಕಾಶದಲ್ಲಿ ಇನ್ನಷ್ಟು ಚಾಚಹೊರಟಿದೆ. 2025ರ ವೇಳೆಗೆ ಅದು ವಿಶ್ವದಲ್ಲೇ ಅತಿ ಪ್ರಮುಖ ಬಾಹ್ಯಾಕಾಶ ಸಂಶೋಧನ ಸಂಸ್ಥೆಯಾಗಿ ಗುರುತಿಸಲಿದ್ದು, ಇದಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಇಸ್ರೋದ ಆ ಮಹತ್ವಾಕಾಂಕ್ಷಿ ಯೋಜನೆಗಳೇನು? ಅದರ ಪ್ರಯೋಜನವೇನು? ಇಲ್ಲಿದೆ ಒಂದು ಚಿತ್ರಣ.

ಆದಿತ್ಯ ಎಲ್‌ 1 2019-20
ಸೂರ್ಯನ ಸಂಶೋಧನೆಯ ಯೋಜನೆ. ಆದಿತ್ಯ ಎಂದು ಇದರ ಹೆಸರು ಸುಮಾರು 400 ಕೆ.ಜಿ. ತೂಕವಿರುವ ಕ್ಲಾಸ್‌ ಸ್ಪೇಸ್‌ ಟೆಲಿಸ್ಕೋಪ್‌ ಅನ್ನು ಭೂಮಿಯಿಂದ 10.5 ಲಕ್ಷ ಕಿ.ಮೀ. ಮೀಟರ್‌ ದೂರದಲ್ಲಿ ಸ್ಥಾಪಿಸಲಾಗುತ್ತದೆ. ಇದು ಸೂರ್ಯನ ಸುತ್ತಲಿನ 3 ಪದರಗಳಾದ ಫೋಟೋಸ್ಪೀಯರ್‌, ಕ್ರೋಮೋಸ್ಪಿಯರ್‌ ಮತ್ತು ಕರೋನ (ಸೂರ್ಯನ ಪ್ರಭಾವಲಯ)ವನ್ನು ಅಧ್ಯಯನ ಮಾಡಲಿದೆ. ಸೂರ್ಯನ ಸುತ್ತಲಿನ ಉಷ್ಣ ಮತ್ತು ಭೂಮಿಯಲ್ಲಿನ ತೇವಾಂಶದ ಹೋಲಿಕೆ ಮಾಡಲಿದೆ. ಮುಂದಿನ ವರ್ಷ ಆದಿತ್ಯ ಎಲ್‌ 1 ಉಡಾವಣೆ ಸಾಧ್ಯತೆ ಇದೆ.

2022 ಗಗನಯಾನ
ಚೊಚ್ಚಲ ಮಾನವ ಸಹಿತ ಗಗನಯಾನ ಯೋಜನೆ. ಮೂವರು ಗಗನಯಾತ್ರಿಗಳು ಯಾನ ಮಾಡಲಿದ್ದಾರೆ. 4 ದಶಕಗಳ ಬಳಿಕ, ಬಾಹ್ಯಾಕಾಶದಲ್ಲಿ ಅಧ್ಯಯನ ಮಾಡಲು ಭಾರತದ ವಿಜ್ಞಾನಿಗಳು ರಷ್ಯಾದಲ್ಲಿ ತರಬೇತಿ ಪಡೆಯಲಿದ್ದಾರೆ. 1984ರಲ್ಲಿ ರಷ್ಯಾದ ಯೋಜನೆಯಲ್ಲಿ ರಾಕೇಶ್‌ ಶರ್ಮ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಯೋಜನೆಗಾಗಿ ಜಿಎಸ್‌ಎಸ್‌ಎಲ್‌ವಿ 3 ರಾಕೆಟ್‌ ಮತ್ತು ಗಗನನೌಕೆ ಸಿದ್ಧವಾಗಲಿದ್ದು 2022ರ ಸುಮಾರಿಗೆ ನಭಕ್ಕೆ ಚಿಮ್ಮಲಿದೆ. ಇದು 10 ಸಾವಿರ ಕೋಟಿ ರೂ. ಮೌಲ್ಯದ ಯೋಜನೆ.

ಮಂಗಳಯಾನ 2 2023
ಪ್ರಥಮ ಪ್ರಯತ್ನದಲ್ಲೇ ಯಶಸ್ಸು ಪಡೆದ ಮಂಗಳಯಾನ-1ರ ಮುಂದುವರಿದ ಭಾಗವಾಗಿ ಮಂಗಳಯಾನ-2 ಅನ್ನು ಇಸ್ರೋ ಸಿದ್ಧಪಡಿಸುತ್ತಿದೆ. ಇದು ಮಂಗಳ ಗ್ರಹದಲ್ಲಿನ ಪ್ರತಿ ಅಂಶವನ್ನೂ ಅಧ್ಯಯನಮಾಡಲಿದ್ದು, ಅದರ ಪರಿಭ್ರಮಣೆ ಅವಧಿಯ ಕುರಿತಾಗಿ ಮಾಹಿತಿ ಸಂಗ್ರಹಿಸಲಿದೆ. ಈ ಯೋಜನೆ 2023-24ರಲ್ಲಿ ಆರಂಭವಾಗಲಿದೆ.

2023 ಶುಕ್ರಯಾನ
ಶುಕ್ರ ಗ್ರಹದ ಅಧ್ಯಯನಕ್ಕೆ ಉಪಗ್ರಹ ಕಳಿಸಲಾಗುತ್ತದೆ. ಇದು ಸುಮಾರು 400 ಕಿ.ಮೀ. ದೂರದಿಂದ ಮಾಹಿತಿಯನ್ನು ಸಂಗ್ರಹಿಸಲಿದೆ.
ಭೂಮಿ ಮತ್ತು ಶುಕ್ರ ಗ್ರಹದ ಗಾತ್ರ ಒಂದೇ ರೀತಿ ಇದ್ದು ಇದನ್ನು ಅವಳಿ ಸಹೋದರಿಯರು ಎನ್ನಲಾಗುತ್ತಿದೆ. ಸೂರ್ಯನಿಗೆ ಅತೀ ಹತ್ತಿರದಲ್ಲಿರುವ ಈ ಗ್ರಹ ಹೆಚ್ಚು ವಿಕಿರಣಶೀಲವಾಗಿದೆ. ಇದು ಹೆಚ್ಚು ಉಷ್ಣಾಂಶದಿಂದ ಕೂಡಿದ್ದು, ಈ ಬಗ್ಗೆ ಇಸ್ರೋ ಅಧ್ಯಯನ ನಡೆಸಲಿದೆ.

2023 ಚಂದ್ರಯಾನ-3
ಇಸ್ರೋ, ಚಂದ್ರಯಾನ 2ರಿಂದ ಲಭ್ಯವಾಗುವ ಮಾಹಿತಿಗಳ ಆಧಾರದಲ್ಲಿ ಚಂದ್ರಯಾನ 3ರನ್ನು ಅಭಿವೃದ್ಧಿ ಪಡಿಸುವ ಇರಾದೆ ಹೊಂದಿದೆ. ಜಪಾನ್‌ ಸಹಭಾಗಿತ್ವದಲ್ಲಿ ಯೋಜನೆ ರೂಪುತಳೆಯಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೀರು ಮತ್ತು ಖನಿಜಗಳ ಕುರಿತು ಆಳ ಅಧ್ಯಯನಕ್ಕೆ ಇದು ನೆರವಿಗೆ ಬರಲಿದೆ. ಜಪಾನ್‌ ಈ ಯೋಜನೆಗೆ ರಾಕೆಟ್‌ ಮತ್ತು ರೋವರ್‌ ಅನ್ನು ನೀಡಲಿದ್ದು, ಭಾರತ ಲ್ಯಾಂಡರ್‌ ಒದಗಿಸಲಿದೆ.

2025 ಆಸ್ಟ್ರೋಸ್ಯಾಟ
ಇಸ್ರೋ ದ್ವಿತೀಯ ಆಸ್ಟ್ರೋ ಸ್ಯಾಟ್‌ 2 ಅನ್ನು 2025ರಲ್ಲಿ ಉಡಾವಣೆ ಮಾಡಲಿದೆ. 2015 ಸೆ.28ರಂದು ಮೊದಲ ಆಸ್ಟ್ರೋಸ್ಯಾಟ್‌ ಉಡಾವಣೆ ಮಾಡಿತ್ತು. ಬಹುತರಂಗಾಂತರ ಶೋಧನ ಉಪಗ್ರಹ ಇದಾಗಿದ್ದು, ಬಾಹ್ಯಾಕಾಶದಲ್ಲಿ ಬರುವ ವಿವಿಧ ಕಿರಣಗಳು, ತರಂಗಗಳು, ಗ್ರಹಗಳ ಮೇಲೆ ಅಧ್ಯಯನ ನಡೆಸಲಿದೆ. ಉಪಗ್ರಹ ಸುಮಾರು 15ರಿಂದ 20ಟನ್‌ ತೂಕವಿರಲಿದೆ.

ಬಾಹ್ಯಾಕಾಶ ನಿಲ್ದಾಣ 2025
ಇಸ್ರೋ ಬಾಹ್ಯಾಕಾಶದಲ್ಲಿ ತನ್ನದೇ ಆದ ಒಂದು ನಿಲ್ದಾಣ ನಿರ್ಮಿಸುವ ಮಹದಾಸೆ ಹೊಂದಿದೆ. ನಾಸಾ ಇಂತಹ ನಿಲ್ದಾಣ (ಐಎಸ್‌ಎಸ್‌) ಹೊಂದಿದ್ದು, ಚೀನ ಕೂಡ ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಬಾಹ್ಯಾಕಾಶದ ಚಟುವಟಿಕೆಗಳ ವೀಕ್ಷಣೆ, ವಸ್ತುಗಳು, ಜೀವಿಗಳು ಬಾಹ್ಯಾಕಾಶದಲ್ಲಿ ಹೇಗೆ ವರ್ತಿಸುತ್ತವೆ ಎಂಬುದರ ಬಗ್ಗೆ ಅಧ್ಯಯನಕ್ಕೆ ಗಗನಯಾನಿಗಳು ಉಳಿದುಕೊಳ್ಳಲು ಅನುಕೂಲವಾಗುವಂತೆ ಈ ನಿಲ್ದಾಣ ಇರುತ್ತದೆ. ಇದಕ್ಕೆ ಗಗನಯಾನಿ ವಿಜ್ಞಾನಿಗಳು ತೆರಳುತ್ತಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ