ವೈದ್ಯರ ಕೊರತೆ ಇದೆ ಎನ್ನುವುದೇ ಸುಳ್ಳು

ವೈದ್ಯಕೀಯೇತರರಿಗೆ ಲೈಸೆನ್ಸ್‌ ಕೊಟ್ಟರೆ ದೇಶದ ಆರೋಗ್ಯ ಹಾಳಾಗುತ್ತದೆ

Team Udayavani, Aug 3, 2019, 5:00 AM IST

ಜುಲೈ 29ರಂದು ಲೋಕಸಭೆಯಲ್ಲಿ ಅಂಗೀಕಾರ ಪಡೆದಿದ್ದ ‘ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕವು’ (ಎನ್‌ಎಂಸಿ) ಈಗ ರಾಜ್ಯಸಭೆಯಿಂದಲೂ ಅಂಗೀಕಾರಗೊಂಡಿದೆ. ದೇಶಾದ್ಯಂತ ವೈದ್ಯರು ಎನ್‌ಎಂಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಲ್ಲೂ ಮಾಡರ್ನ್ ಮೆಡಿಸಿನ್‌ ಪ್ರಾಕ್ಟೀಸ್‌ ಮಾಡಲು 3.5 ಲಕ್ಷ ವೈದ್ಯಕೀಯೇತರ ವ್ಯಕ್ತಿಗಳಿಗೆ ಪರವಾನಗಿ ನೀಡುವ ನಿಯಮದ ವಿರುದ್ಧ ವೈದ್ಯರು ಧ್ವನಿ ಎತ್ತಿದ್ದಾರೆ. ಇದರಿಂದಾಗಿ ದೇಶದ ಆರೋಗ್ಯ ವ್ಯವಸ್ಥೆ ಮತ್ತಷ್ಟು ಹದಗೆಡಲಿದೆ ಎನ್ನುವುದು ಅವರ ವಾದ. ಈ ಹಿನ್ನೆಲೆಯಲ್ಲಿ ಭಾರತೀಯ ವೈದ್ಯಕೀಯ ಮಂಡಳಿಯ ಪ್ರಧಾನ ಕಾರ್ಯದರ್ಶಿ ಡಾ. ಆರ್‌.ವಿ. ಅಶೋಕನ್‌ ಅವರು ರೀಡಿಫ್ ಜಾಲತಾಣಕ್ಕೆ ನೀಡಿದ ಸಂದರ್ಶನ ಇಲ್ಲಿದೆ..

•ಈ ಬಿಲ್ನ ಮೂಲಕ ದೇಶದಲ್ಲಿನ ವೈದ್ಯರ ಕೊರತೆಯನ್ನು ಸರಿಪಡಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುತ್ತದೆ ಕೇಂದ್ರ ಸರ್ಕಾರ. ಹೀಗಿರುವಾಗ, ವೈದ್ಯರೇಕೆ ಇದನ್ನು ವಿರೋಧಿಸುತ್ತಿದ್ದಾರೆ?

ಮೋದಿ ಸರ್ಕಾರ ಸುಳ್ಳು ಹೇಳುತ್ತಿದೆ. ದೇಶದಲ್ಲಿ ವೈದ್ಯರ ಕೊರತೆ ಇಲ್ಲ. ಪ್ರತಿ ವರ್ಷ 506 ವೈದ್ಯಕೀಯ ಕಾಲೇಜುಗಳಿಂದ 68 ಸಾವಿರ ವೈದ್ಯಕೀಯ ಪದವೀಧರರು ಹೊರಬರುತ್ತಿದ್ದಾರೆ.

ಯಾವುದೇ ಸಮಯದಲ್ಲಿ ನೋಡಿದರೂ, ದೇಶದಲ್ಲಿ ಏನಿಲ್ಲವೆಂದರೂ ಒಂದೂವರೆ ಲಕ್ಷ ನಿರುದ್ಯೋಗಿ ಎಂಬಿಬಿಎಸ್‌ ಪದವೀಧರರು ಸಿಗುತ್ತಾರೆ. ಅವರಿಗೆ ಈ ವ್ಯವಸ್ಥೆಯಲ್ಲಿ ಜಾಗವೇ ಇಲ್ಲದಂತಾಗಿದೆ. ದೇಶದಲ್ಲಿ ಅಗತ್ಯವಿದ್ದಲ್ಲೆಲ್ಲ ಈ ನಿರುದ್ಯೋಗಿ ವೈದ್ಯರನ್ನು ಬಳಸಿಕೊಳ್ಳಬಹುದಲ್ಲವೇ? ಸರ್ಕಾರವು ಯಾವುದೇ ಹೆಚ್ಚುವರಿ ವೈದ್ಯಾಧಿಕಾರಿ ಹುದ್ದೆಗಳನ್ನು ಸೃಷ್ಟಿಸಿಲ್ಲ. ಸುಮ್ಮನೇ, ‘ವೈದ್ಯರ ಕೊರತೆಯಿದೆ’ ಎಂದು ಹೇಳುತ್ತಿದೆ. ನೀವು ಸರ್ಕಾರಿ ಅಂಕಿಅಂಶಗಳನ್ನೇ ನೋಡಿದರೂ, ಹುದ್ದೆಗಳ ಕೊರತೆ ಇರುವುದು ಕಾಣಿಸುತ್ತದೆ. ವೈದ್ಯರಿಗೆ ಸರಿಯಾದ ಸರ್ಕಾರಿ ಉದ್ಯೋಗವನ್ನು ಒದಗಿಸುವುದು ಈಗಿನ ಅಗತ್ಯ. ಆದರೆ ಸರ್ಕಾರ ಅತಿ ಕಡಿಮೆ ಸಂಬಳದ ತಾತ್ಕಾಲಿಕ ನೇಮಕಾತಿಗಳನ್ನು(11 ತಿಂಗಳ ಮಟ್ಟಿಗೆ) ಮಾಡುತ್ತಿದೆಯಷ್ಟೆ.

ತಮಿಳುನಾಡಿನಂಥ ರಾಜ್ಯಗಳಲ್ಲಿ ಇಡೀ ವೈದ್ಯಕೀಯ ಸೇವೆಯನ್ನು ಎಂಬಿಬಿಎಸ್‌ ವೈದ್ಯರೇ ನೋಡಿಕೊಳ್ಳುತ್ತಿದ್ದಾರೆ. ತಮಿಳುನಾಡು ಮಾದರಿಯನ್ನು ದೇಶದ ಇತರೆ ರಾಜ್ಯಗಳಲ್ಲೂ ಅಳವಡಿಸಬೇಕು. ಆಗಲೇ ಹೇಳಿದಂತೆ, ದೇಶದಲ್ಲಿ ವೈದ್ಯರ ಕೊರತೆ ಇಲ್ಲವೇ ಇಲ್ಲ. ಸರ್ಕಾರ ಸುಳ್ಳು ಹೇಳುತ್ತಿದೆ, ತನಗೆ ಅನುಕೂಲಕರವಾದ ಅಂಕಿಅಂಶಗಳನ್ನು ಅದು ಎದುರಿಡುತ್ತಿದೆ.

•ಆದರೆ…

(ಮಧ್ಯಪ್ರವೇಶಿಸಿ)3.5 ಲಕ್ಷ ಅನರ್ಹ ವೈದ್ಯಕೀಯೇತರ ಸಿಬ್ಬಂದಿಗೆ ಆಧುನಿಕ ಮೆಡಿಸಿನ್‌ ಅನ್ನು ಪ್ರಾಕ್ಟೀಸ್‌ ಮಾಡಲು ಅನುವು ಮಾಡಿಕೊಡುವ ನಿಯಮವನ್ನು ನಾವು ವಿರೋಧಿಸುತ್ತಿದ್ದೇವೆ. ಅವರೆಲ್ಲ ಅನಾಟಮಿ, ಫಿಸಿಯಾಲಜಿ ಮತ್ತು ಪ್ಯಾಥಾಲಜಿಯಂಥ ವಿಷಯಗಳಲ್ಲಿ ತರಬೇತಿ ಪಡೆದವರಲ್ಲ, ಬದಲಾಗಿ ಫಾರ್ಮಸಿಯಲ್ಲೋ ಅಥವಾ ನಿಮ್ಮ ಕಣ್ಣುಗಳನ್ನು ಪರೀಕ್ಷಿಸುವುದಕ್ಕೋ, ಇಲ್ಲವೇ ಪ್ರಯೋಗಾಲಯದಲ್ಲಿ ಕೆಲಸ ಮಾಡುವುದಕ್ಕೋ ತರಬೇತಿ ಪಡೆದವರು. ಅವರೆಲ್ಲ ಮಾಡರ್ನ್ ಮೆಡಿಸಿನ್‌ಗೆ ಸಂಬಂಧಿಸಿದವರು ಎಂದು ಸರ್ಕಾರ ಹೇಳುತ್ತದೆ. ಆದರೆ ಮಾಡರ್ನ್ ಮೆಡಿಸಿನ್‌ ಎನ್ನುವುದು ಬೃಹತ್‌ ವಿಸ್ತೀರ್ಣ ಹೊಂದಿರುವ ಕ್ಷೇತ್ರ. ನರ್ಸ್‌ಗಳು, ಲ್ಯಾಬ್‌ ಟೆಕ್ನೀಶಿಯನ್‌ಗಳು, ಎಕ್ಸ್‌ರೇ ಟೆಕ್ನೀಶಿಯನ್‌ಗಳು, ಔಷಧಾಲಯಗಳವರು..ಎಲ್ಲರೂ ಮಾಡರ್ನ್ ಮೆಡಿಸಿನ್‌ ಅಡಿಯಲ್ಲಿ ಬರುತ್ತಾರೆ. ಹಾಗೆಂದು ಇವರನ್ನೆಲ್ಲ ವೈದ್ಯರು ಎನ್ನಲು ಸಾಧ್ಯವೇ? ಸರ್ಕಾರ ಇವರಿಗೆಲ್ಲ ಪ್ರೈಮರಿ ಕೇರ್‌ ಪ್ರಾಕ್ಟೀಸ್‌ ಮಾಡಲು ಸ್ವತಂತ್ರ ಪರವಾನಗಿ ಕೊಡುವ ಮಾತನಾಡಿದೆ. ಪ್ರೈಮರಿ ಕೇರ್‌ನಲ್ಲಿ ‘ಸಾಮಾನ್ಯ ಹೆರಿಗೆ’ ಕೂಡ ಬರುತ್ತದೆ! ಸಿಸೇರಿಯನ್‌ ಸೆಕೆಂಡರಿ ಕೇರ್‌ನಡಿ(ದ್ವಿತೀಯ ಹಂತದ ಆರೈಕೆ) ಬರುತ್ತದೆ.

ದ್ವಿತೀಯ ಮತ್ತು ತೃತೀಯ ಹಂತದ ಆರೈಕೆಯಲ್ಲೂ ಇವರು ವೈದ್ಯರ ಮಾರ್ಗದರ್ಶನದಲ್ಲಿ ಪ್ರಾಕ್ಟೀಸ್‌ ಮಾಡಬಹುದು. ಇದರರ್ಥವೇನು? ಖಾಸಗಿ ಆಸ್ಪತ್ರೆಗಳು, ಖರ್ಚು ಕಡಿಮೆಯಾಗುತ್ತದೆಂದು ಇನ್ಮುಂದೆ ಇಂಥ ಜನರನ್ನೇ ಎಮರ್ಜೆನ್ಸಿಗೆ, ಐಸಿಯುಗಳಿಗೆ, ಆಪರೇಷನ್‌ ಥಿಯೇಟರ್‌ಗಳಿಗೆ ನೇಮಿಸಿಕೊಳ್ಳುತ್ತವೆ.

•ಆದರೆ, ಛತ್ತೀಸ್‌ಗಢ ಮತ್ತು ಅಸ್ಸಾಂ ಸರ್ಕಾರಗಳು ಡಿಪ್ಲೋಮಾ ಹೊಂದಿದ ಸಮುದಾಯ ಆರೋಗ್ಯ ಕೆಲಸಗಾರರನ್ನು ಪರಿಚಯಿಸಿವೆಯಲ್ಲ? ಇದರಿಂದಾಗಿ ಆ ರಾಜ್ಯಗಳಲ್ಲಿನ ಆರೋಗ್ಯ ಸೇವೆಗಳು ಉತ್ತಮಗೊಂಡಿವೆ. ಇಂಥ ಸ್ಕೀಮುಗಳನ್ನು ರಾಷ್ಟ್ರ ಮಟ್ಟದಲ್ಲಿ ವಿಸ್ತರಿಸಿದರೆ ತಪ್ಪೇನು?

ದಯವಿಟ್ಟೂ ಒಂದು ವಿಷಯ ಅರ್ಥಮಾಡಿಕೊಳ್ಳಿ-ಮೆಡಿಕಲ್ ಕೌನ್ಸಿಲ್ನಿಂದ ಲೈಸೆನ್ಸ್‌ ಪಡೆದು ಪ್ರಾಕ್ಟೀಸ್‌ ಮಾಡುವುದಕ್ಕೂ, ಇದಕ್ಕೂ ವ್ಯತ್ಯಾಸವಿದೆ. ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಚಿಕಿತ್ಸೇತರ ಕಾರ್ಯಗಳಿಗಾಗಿ ಸರ್ಕಾರವು ಸಮುದಾಯ ಆರೋಗ್ಯ ಪೂರೈಕೆದಾರರನ್ನು ನೇಮಿಸಲಿ. ಆದರೆ ಅವರಿಗೆಲ್ಲ ಪ್ರಾಕ್ಟೀಸ್‌ ಮಾಡಲು ಸ್ವತಂತ್ರ ಪರವಾನಗಿ ನೀಡುವ (ವೈದ್ಯರ ಮಾರ್ಗದರ್ಶನವಿಲ್ಲದೆ ಕೆಲಸ ಮಾಡುವುದಕ್ಕೆ) ಅಗತ್ಯವಿಲ್ಲ. ಹಾಗೇನಾದರೂ ಆದರೆ, ವೈದ್ಯರಲ್ಲದವರನ್ನೇ ವೈದ್ಯರೆಂದು ಜನ ಭಾವಿಸುವಂತಾಗುತ್ತದೆ. ಇದರಿಂದಾಗಿ ಶಿಶು ಮತ್ತು ತಾಯಿಯ ಮರಣ ಪ್ರಮಾಣದ ಮೇಲೆ ಪರಿಣಾಮ ಉಂಟಾಗುತ್ತದೆ.

•ಮೋದಿ ಸರ್ಕಾರ ಕ್ಯೂಬನ್‌ ಮಾದರಿಯ ಆರೋಗ್ಯ ಸೇವೆಯನ್ನು ನಮ್ಮಲ್ಲೂ ಪ್ರತಿಫ‌ಲಿಸಲು ಪ್ರಯತ್ನಿಸುತ್ತಿದೆ ಎನ್ನಲಾಗುತ್ತದೆ. ಕ್ಯೂಬಾದಲ್ಲಿ ಇದೇ ರೀತಿಯ ಮಾದರಿಯ ಅನುಷ್ಠಾನದಿಂದಾಗಿ, ಜನರ ಸರಾಸರಿ ಜೀವಿತಾವಧಿ 80 ವರ್ಷಕ್ಕೇರಿದೆಯಲ್ಲ?

ಕ್ಯೂಬಾ, ಉಗಾಂಡಾ, ಸುಡಾನ್‌ಗಳಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತರು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದ ಮಾತ್ರಕ್ಕೆ ಆ ರಾಷ್ಟ್ರಗಳು ಭಾರತಕ್ಕೆ ರೋಲ್ ಮಾಡೆಲ್ಗಳಾಗಬಾರದು. ನಿಜಕ್ಕೂ ಇಂದು ಪ್ರಪಂಚದಲ್ಲಿ ಅತ್ಯುತ್ತಮ ಸಮುದಾಯ ಆರೋಗ್ಯ ಕೆಲಸಗಾರರು ಇರುವುದು ಅಮೆರಿಕ ಮತ್ತು ಬ್ರಿಟನ್‌ನಲ್ಲಿ. ಏಕೆಂದರೆ ಅವರೆಲ್ಲ ವೈದ್ಯರ ಬಿಗಿ ಮಾರ್ಗದರ್ಶನದಲ್ಲೇ ಕೆಲಸ ಮಾಡುತ್ತಾರೆ. ನಮ್ಮ ದೇಶದಲ್ಲೇ ಪ್ರತಿ ವರ್ಷ 68,000 ವೈದ್ಯರು ಹೊರಹೊಮ್ಮುತ್ತಿದ್ದಾರಲ್ಲ…ಹೀಗಿರುವಾಗ, ಅನ್ಯ ರಾಷ್ಟ್ರಗಳೇಕೆ ನಮಗೆ ರೋಲ್ ಮಾಡೆಲ್ ಆಗಬೇಕು?

•ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿ 1000 ರೋಗಿಗಳಿಗೆ ಒಬ್ಬ ವೈದ್ಯರು ಇರಬೇಕಂತೆ. ಆದರೆ ಭಾರತದಲ್ಲಿ ಪ್ರತಿ 1596 ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ.

ಕೇರಳದಲ್ಲಿ ಪ್ರತಿ 200 ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ, ತಮಿಳುನಾಡಲ್ಲಿ ಪ್ರತಿ 400 ರೋಗಿಗಳಿಗೆ ಒಬ್ಬ ವೈದ್ಯರಿದ್ದಾರೆ.

ನಮ್ಮ ದೇಶದಲ್ಲಿ ಸಾಕಷ್ಟು ವೈದ್ಯರಿದ್ದಾರೆ. ಈಗ ಅಗತ್ಯವಿರುವುದೇನೆಂದರೆ, ಎಂಬಿಬಿಎಸ್‌ ವೈದ್ಯರು ರಾಜ್ಯ-ರಾಜ್ಯಗಳ ನಡುವೆ ಸುಲಭವಾಗಿ ಓಡಾಡುವಂಥ ವಾತಾವರಣದ ಸೃಷ್ಟಿ. ಈಗಿನ ನಿಯಮಗಳು ಹೇಗಿವೆಯೆಂದರೆ, ನಾನು ದೆಹಲಿ ಮೆಡಿಕಲ್ ಕೌನ್ಸಿಲ್ನಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತೇನೆ ಎಂದುಕೊಳ್ಳಿ, ಆಗ ನಾನು ಮಹಾರಾಷ್ಟ್ರದಲ್ಲಿ ಪ್ರಾಕ್ಟೀಸ್‌ ಮಾಡುವುದಕ್ಕೆ ಬರುವುದಿಲ್ಲ. ನಾನು ನನ್ನ ದೆಹಲಿಯಲ್ಲಿನ ನೋಂದಣಿಯನ್ನು ರದ್ದು ಮಾಡಿ, ಮಹಾರಾಷ್ಟ್ರಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಇಂಥ ನಿಬಂಧನೆಗಳನ್ನು ತೆಗೆದುಹಾಕಿ, ವೈದ್ಯರಿಗೆ ಅಖೀಲ ಭಾರತ ನೋಂದಣಿ ಸಂಖ್ಯೆ ಕೊಟ್ಟರೆ ಉತ್ತಮವಲ್ಲವೇ? ದಕ್ಷಿಣ ಭಾರತದಲ್ಲಿ ವೈದ್ಯರ ಸಂಖ್ಯೆ ದಂಡಿಯಾಗಿದೆ. ಅವರನ್ನು ಕಡಿಮೆ ವೈದ್ಯ ಸಾಂದ್ರತೆ ಇರುವ ರಾಜ್ಯಗಳಿಗೂ ಓಡಾಡಲು ಅನುವು ಮಾಡಿಕೊಡಲು ಸಾಧ್ಯವೇ ಎನ್ನುವುದನ್ನು ನಾವು ನೋಡಬೇಕಿದೆ.

•ನೀವೇಕೆ ಮೋದಿ ಸರ್ಕಾರಕ್ಕೆ ಈ ಸಲಹೆಗಳನ್ನು ನೀಡುವುದಿಲ್ಲ?

ನಾವು ಎಲ್ಲವನ್ನೂ ಅವರಿಗೆ ಹೇಳಿದ್ದೇವೆ- ಚರ್ಚಿಸಿದ್ದೇವೆ. ಮೋದಿ ಸರ್ಕಾರಕ್ಕೆ ದೇಶದ ಆರೋಗ್ಯ ವಲಯದ ಬಗ್ಗೆ ದೂರದೃಷ್ಟಿ ಇಲ್ಲ. ತಾತ್ಕಾಲಿಕ ಸಮೀದೃಷ್ಟಿ ಇದೆಯಷ್ಚೆ. ಅದು ಆರೋಗ್ಯ ಸೇವೆಗೆ ಅತಿ ಕಡಿಮೆ ಅನುದಾನ ಕೊಡುತ್ತಿದೆ.

ಉದಾಹರಣೆಗೆ- ಒಂದು ವೇಳೆ ಅದು 1 ಲಕ್ಷ ವೈದ್ಯರನ್ನು ನೇಮಿಸಿಕೊಳ್ಳಲು ನಿರ್ಧರಿಸಿತೆಂದರೆ, ಅದಕ್ಕಾಗಿ ಜಿಡಿಪಿಯ 2.5 ಪ್ರತಿಶತದಷ್ಟು ಅನುದಾನವನ್ನು ಎತ್ತಿಡಬೇಕಾಗುತ್ತದೆ. ಅಷ್ಟು ಪ್ರಮಾಣದ ಮೊತ್ತ ಇಲ್ಲ. ಈ ವರ್ಷ ಕೇಂದ್ರ ಸರ್ಕಾರದ ಅನುದಾನ(ಆರೋಗ್ಯ ಸೇವೆಗೆ) ಜಿಡಿಪಿಯ 1.1 ಪ್ರತಿಶತದಷ್ಟಿದೆ. ನಮ್ಮ ಮೆಡಿಕಲ್ ಜರ್ನಲ್ ”ಪ್ರಧಾನಿಗಳೇ, ದೇಶವಾಸಿಗಳು ರಸ್ತೆಯಲ್ಲೇ ಸಾಯುತ್ತಾರೆ” ಎಂದು ಎಚ್ಚರಿಸಿತ್ತು. ಈಗ ನಾವು ಇನ್ನೊಂದು ರೀತಿಯಲ್ಲಿ ಎಚ್ಚರಿಸುತ್ತಿದ್ದೇವೆ. ಈ ವೈದ್ಯಕೀಯೇತರ 3.5 ಲಕ್ಷ ಸಿಬ್ಬಂದಿಗೇನಾದರೂ ಲೈಸೆನ್ಸ್‌ ಕೊಟ್ಟಿರೆಂದರೆ, ದೇಶದಲ್ಲಿ ಶಿಶು ಮತ್ತು ತಾಯಿ ಮರಣ ಪ್ರಮಾಣ ಹದಗೆಡುತ್ತದೆ. ಅಮೆರಿಕದಲ್ಲಿ ಆರೋಗ್ಯವೆನ್ನುವುದು ಪ್ರಮುಖ ರಾಜಕೀಯ ವಿಷಯ. ಆದರೆ ಭಾರತದಲ್ಲಿ ಅಲ್ಲ!

•ಕೊನೆಯ ಪ್ರಶ್ನೆ: ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದೇಕೆ ಸರ್ಕಾರ ಹೇಳುತ್ತಿದೆ?

2001ರಿಂದ 2019ರ ಅವಧಿಯವರೆಗಿನ ಸಮಯವನ್ನು ನೀವು ನೋಡಿ. ಅದರಲ್ಲಿ ಕೇವಲ ಮೂರೂವರೆ ವರ್ಷ ಮಾತ್ರ ಸಮಿತಿಗಳಲ್ಲಿ ಚುನಾಯಿತ ವೈದ್ಯಕೀಯ ಮಂಡಳಿಯಿತ್ತು(ವೈದ್ಯರನ್ನೊಳಗೊಂಡ). ಉಳಿದ 14.5 ವರ್ಷಗಳಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸರ್ಕಾರಗಳ ಹಿಡಿತದಲ್ಲಿತ್ತು. ಅಂದರೆ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಸ್ವತಂತ್ರವಾಗಿ ಕಾರ್ಯನಿರ್ವಹಿಸಿದ್ದು ಕೇವಲ 3.6 ವರ್ಷ ಮಾತ್ರ. ಹಾಗಾದರೆ ಆ 14.5 ವರ್ಷಗಳ ನ್ಯಾಯಸಮ್ಮತವಲ್ಲದ ಆಡಳಿತದಲ್ಲಿ ಭ್ರಷ್ಟಾಚಾರದ ಪಾಲು ಎಷ್ಟಿದೆಯಂತೆ?

• ಡಾ. ಆರ್‌.ವಿ. ಅಶೋಕನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ...

  • ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್‌ ಅಗಲದಷ್ಟು, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್‌ ಅಗಲದಷ್ಟು ಹಸಿರು ಹೊದಿಕೆ...

  • ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎನ್ನುತ್ತಾರೆ ರಾಜ್ಯಪಾಲ...

  • 73ನೇ ಸ್ವಾತಂತ್ರ್ಯೋತ್ಸವಕ್ಕೆ ಇಂದು ಇಡೀ ದೇಶ ಸಾಕ್ಷಿಯಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಲವು ಪ್ರಥಮಗಳಿಗೆ ಕಾರಣ ವಾಗುತ್ತಿದೆ. ಜಮ್ಮು ಮತ್ತು...

  • ದತ್ತು ಸ್ವೀಕಾರ: ಮಹಿಳೆಯರೇ ಹೆಚ್ಚು ಹೆಣ್ಣು ಮಕ್ಕಳಿಗೆ ವಿಶೇಷ ಬೇಡಿಕೆ ಮಣಿಪಾಲ: ಅನಾಥ, ನಿರ್ಗತಿಕರಿಗೂ ಒಂದು ಜೀವನ ಇದೆ. ಮಕ್ಕಳಿಲ್ಲದವರಿಗೆ, ಮಗು ಪಡೆಯಲು...

ಹೊಸ ಸೇರ್ಪಡೆ