ಇಳೆಯೊಡಲು ಸೇರಲಿ ಮಳೆ

Team Udayavani, Jun 29, 2018, 1:12 PM IST

ಉತ್ತಮ ಮಳೆಯಾಗಿದೆ. ಇಷ್ಟರಲ್ಲೇ ವಾಡಿಕೆಗಿಂತ ಶೇ.73 ಅಧಿಕ ಮಳೆಯಾಗಿದೆ ಎನ್ನಲಾಗಿದೆ. ಹರ್ಷ ತಂದ ವರ್ಷ ಧಾರೆಯೆಂದು ಮಾಧ್ಯಮಗಳು ಬಣ್ಣಿಸಿವೆ. ಆದರೆ ಪುಟ ತಿರುವಿದರೆ ವಸ್ತುಸ್ಥಿತಿಯ ಅರಿವಾಗದಿರದು. ಮುಂದುವರಿದ ವರುಣನ ಆರ್ಭಟ, ತಗ್ಗು ಪ್ರದೇಶ ಜಲಾವೃತ, ಮನೆಗೆ ನುಗ್ಗಿದ ನೀರು ಇತ್ಯಾದಿ ಮಳೆ ವಾರ್ತೆಗಳೂ ಅಲ್ಲಿರುತ್ತವೆ. ಹಿಂದೆಲ್ಲಾ ಮೊದಲ ಮಳೆಯೆಂದರೆ ಏನೋ ಪುಳಕ. ಆದರೀಗ ಯಾಕೋ ನಡುಕ. ಮೊದಲ ಮಳೆಗೇ ಜನಜೀವನ ಅಸ್ತವ್ಯಸ್ತ. ಹಾಗಾಗಿ ಉತ್ತಮ ಮಳೆಯಾದರೂ ಸಂಭ್ರಮಿಸುವುದಕ್ಕಿಲ್ಲ.

ಬೆಂಗಳೂರಿನಲ್ಲಿ ಪ್ರತಿಬಾರಿ ಮಳೆಯಾದಾಗಲೂ ವಾಹನ ಸಂಚಾರಕ್ಕೆ ಅಡಚಣೆಯಾಗುವುದು, ಜನಜೀವನ ಅಸ್ತವ್ಯಸ್ತವಾಗುವುದು ಸರ್ವೆ ಸಾಮಾನ್ಯ. ಆದರೆ ಈ ಬಾರಿ ಮಂಗಳೂರು ನಗರ ಮೊದಲ ಮಳೆಗೆ ಅಂತಹ ಕಹಿ ಅನುಭವ ಕಂಡದ್ದೊಂದು ವಿಶೇಷ. ನಗರೀಕರಣ ಮುಂದುವರಿದಂತೆಲ್ಲಾ ರಸ್ತೆ ನಿರ್ಮಾಣ ಕಾರ್ಯ ಆಗುತ್ತಿರುತ್ತದೆ. ವಾಹನ ದಟ್ಟಣೆ ಹೆಚ್ಚಿದಂತೆಲ್ಲಾ ರಸ್ತೆ ಅಗಲೀಕರಣವಾಗುತ್ತದೆ. ಡಾಂಬರೀಕರಣ-ಕಾಂಕ್ರೀಟೀಕರಣ ನಡೆಯುತ್ತಿರುತ್ತದೆ. ದುರಂತವೆಂದರೆ ರಸ್ತೆ ಅಗಲೀಕರಣವಾದಂತೆಲ್ಲಾ ಪಕ್ಕದ ತೋಡು ಅಥವಾ ಚರಂಡಿಯ ಅತಿಕ್ರಮಣವಾಗುತ್ತದೆ. ಅಸಮರ್ಪಕ ಚರಂಡಿ ನಿರ್ವಹಣೆಯ ಪರಿಣಾಮವಾಗಿ ಮುಸಲಧಾರೆಯಾಗಿ ಸುರಿದ ಮಳೆನೀರಿಗೆ ಹರಿಯುವುದಕ್ಕೆ ಹಾದಿಯಿಲ್ಲದೆ ರೋಡು ತೋಡು ಒಂದಾ ಗುತ್ತದೆ. ಕೃತಕ ನೆರೆ ಸೃಷ್ಟಿಯಾಗುತ್ತದೆ. ಮೊದಲ ಮಳೆಗೇ ಜನ ಹಿಡಿಶಾಪ ಹಾಕುವಂತಾಗುತ್ತದೆ. ಈ ಬಾರಿ ಮಂಗಳೂರಿಗರಿಗೆ ಆದ ಅನುಭವವಿದು.

ಒಂದಿಂಚೂ ಬಿಡದ ಕಾಂಕ್ರಿಟೀಕರಣ ಈಗೀಗ ಫ್ಲ್ಯಾಟ್‌ ಸಂಸ್ಕೃತಿ ಹಳ್ಳಿಯತ್ತಲೂ ಮುಖಮಾಡಿದೆ. ಹೊಲ-ಗದ್ದೆಗಳಲ್ಲೂ ಫ್ಲ್ಯಾಟ್‌ಗಳು ತಲೆಯೆತ್ತಿವೆ.  ಜಿದ್ದಿಗೆ ಬಿದ್ದಂತೆ ಸಾಮಾನ್ಯ ಮನೆಗಳೂ ಕಾಂಕ್ರೀಟು ಮಯವಾಗುತ್ತಿವೆ. ಅಂಗಳದ ಒಂದಿಂಚೂ ಬಿಡದೆ ಕಾಂಕ್ರಿಟೀಕ ರಣಗೊಂಡು ನೀರಿಂಗದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಅಲ್ಲೋ ಇಲ್ಲೋ ಸರಕಾರ ಹಸುರೀಕರಣಕ್ಕೆ ಕ್ರಮಕೈ ಗೊಂಡರೂ ಅದರ ಯೋಜನೆ ಸಿದ್ಧಗೊಳ್ಳುವುದರೊಳಗಾಗಿ ಎಲ್ಲಾ ಕಾಂಕ್ರಿಟೀಕರಣವಾಗಿರುತ್ತದೆ. ಕುಂಭದ್ರೋಣ ಮಳೆ ಸುರಿದಾಗ ಒಂದು ಹನಿಗೂ ಇಂಗಲು ಅವಕಾಶವಿಲ್ಲವೆಂದಾಗ ಇನ್ನೇನಾಗುತ್ತದೆ? ಕಾಡು ಕಡಿಯಲ್ಪಟ್ಟು ಕಾಂಕ್ರೀಟು ಕಾಡಾಗುತ್ತಾ ಸಾಗಿದೆ.

ಅರಣ್ಯನಾಶದ ಪರಿಣಾಮವಾಗಿ ಹವಾಮಾನದಲ್ಲಿ ಏರು ಪೇರು ಕಾಣಿಸಿಕೊಂಡಿದೆ. ನಮಗೆ ಮುಂಗಾರು ಮಾರುತ ಮಳೆತರುತ್ತದೆ ಎಂದು ಭೂಗೋಳ ಪಾಠ ಓದಿದವರು ನಾವು. ಆದರೀಗ ಕಾಲ ಬದಲಾಗಿದೆ. ಆಗಿಂದಾಗ್ಗೆ ಸಮುದ್ರದಲ್ಲಿ ವಾಯುಭಾರ ಕುಸಿತವೋ ಚಂಡಮಾರುತವೋ ಕಾಣಿಸಿಕೊಂಡು ಬಿರುಮಳೆ ಸುರಿಯುವಂತಾಗಿದೆ. ಒಂದೋ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿ. ನೆರೆ ಇಲ್ಲವೇ ಬರ. ನೆರೆಯೋ ಬರವೋ ಬದುಕಂತೂ ದುರ್ಭರ. ಪಾಠ ಕಲಿಯಬೇಕಿದೆ ಮುಂಗಾರು ಆರಂಭಗೊಂಡು ವಾರದೊಳಗಾಗಿ ತನ್ನ ತಾಕತ್ತು ತೋರಿದೆ. ಇಷ್ಟರಲ್ಲಿಯೇ ನಾಕಾರು ಜೀವಹಾನಿಯೂ ಆಗಿದೆ. ಗುಡ್ಡ ಕುಸಿದು ಚಾರ್ಮಾಡಿ ರಸ್ತೆ ಬಂದಾಗಿ ವಾಹನ ಸಂಚಾರ ಸ್ಥಗಿತಗೊಂಡು ಸಾವಿರಾರು ಮಂದಿ ಪ್ರಯಾಣಿಕರು ಸುಮಾರು 18 ತಾಸು ಮಾರ್ಗಮಧ್ಯದಲ್ಲೇ ಉಳಿದ ಕಹಿ ಅನುಭವ ಈ ಬಾರಿಯ ಮಳೆಯ ಅಬ್ಬರಕ್ಕೆ ಸಾಕ್ಷಿ. ಈ ಬಗ್ಗೆ ಮೊದಲೇ ಸೂಚನೆ ಕೊಟ್ಟಿದ್ದರೂ ಸಂಬಂಧಪಟ್ಟವರು ಮುನ್ನೆ ಚ್ಚರಿಕೆ ಕ್ರಮ ಕೈಗೊಳ್ಳದ ಕಾರಣ ಹೀಗಾಯಿತು ಎನ್ನಲಾಗುತ್ತಿದೆ.

ಏನೇ ಇರಲಿ. ಇಂತಹ ಒಂದೊಂದು ಅನುಭವದಿಂದಲೂ ನಾವು ಪಾಠ ಕಲಿಯಬೇಕಿದೆ. ರಸ್ತೆ ದುರಸ್ತಿಯಿರಲಿ ಅಗಲೀಕರಣವಿರಲಿ ಸಾಕಷ್ಟು ಮುಂಚಿತವಾಗಿ ಪ್ರಾರಂಭಿಸಲ್ಪಟ್ಟು ಕ್ಲಪ್ತ ಸಮಯಕ್ಕೆ ಮುಂಚಿತವಾಗಿ ಪೂರ್ಣಗೊಳ್ಳಬೇಕಿದೆ. ಎಲ್ಲಕ್ಕೂ ಸಮರ್ಪಕ ಯೋಜನೆಯಿರಬೇಕು. ರಸ್ತೆ ಎಷ್ಟು ಮುಖ್ಯವೋ ಅದರ ಪಕ್ಕದಲ್ಲಿ ಚರಂಡಿ ನಿರ್ಮಿಸಿ ನೀರು ಹರಿಯಲು ಅವಕಾಶಮಾಡಿಕೊಡುವುದೂ ಅಷ್ಟೇ ಮುಖ್ಯ. ಕಟ್ಟಡ ನಿರ್ಮಿಸುವಾಗಲೂ ಅಷ್ಟೇ, ತಾರಸಿಯಿಂದ ಬೀಳುವ ಮಳೆನೀರಿಗೊಂದು ವ್ಯವಸ್ಥೆ ಮಾಡದೆ ರಸ್ತೆಗೆ ಹರಿಬಿಟ್ಟರೆ ರಸ್ತೆ ಮುಳುಗಡೆಯಾಗದಿರುತ್ತದೆಯೇ? ಬಿದ್ದ ಮಳೆ ನೀರು ಮಣ್ಣಿನಲ್ಲಿ ಇಂಗುವುದಕ್ಕೆಡೆಯಿರಬೇಕು. ಇಲ್ಲವೇ ಹರಿದು ಕೆರೆ ಹಳ್ಳ ಸೇರಲೆಡೆಯಿರಬೇಕು. ಅದಕ್ಕಡ್ಡಿಪಡಿಸಿ ಕೃತಕ ನೆರೆ ಕಾಣಿಸಿಕೊಂಡರೆ ಅದಕ್ಕೆ ಯಾರು ಹೊಣೆ? ಹನಿಹನಿಯೂ ಅಂತರ್ಜಲವಾಗಬೇಕಿದೆ ಇಂದು ಬಿದ್ದ ಮಳೆಯೇ ನಾಳಿನ ನೀರಿನ ಮೂಲ. ಬಿದ್ದ ಮಳೆನೀರನ್ನು ಹಿಡಿದಿಟ್ಟುಕೊಂಡರಷ್ಟೇ ನಮಗೆ ನೀರು. ಆ ನಿಟ್ಟಿನಲ್ಲಿ ಮಳೆನೀರು ಕೊಯ್ಲು ಇಂದಿನ ಅಗತ್ಯ. ಇಂಗುಗುಂಡಿ ನಿರ್ಮಿಸಿಯೋ ಹರಿವ ನೀರಿಗೆ ತಡೆಯೊಡ್ಡಿಯೋ ಸಾಧ್ಯವಾದಷ್ಟು ನೀರಿಂಗಿಸಿಕೊಳ್ಳಬೇಕಿದೆ.
 
ಜಲ ಮರುಪೂರಣಕ್ಕೆ ವಿವಿಧ ಸಾಧ್ಯತೆಗಳನ್ನು ಕಂಡುಕೊಳ್ಳಬೇಕಿದೆ. ಪ್ರಾಯಶಃ ಈಗ ಅದಕ್ಕೆ ಸಕಾಲ. ಹೋದ ವರ್ಷ ಕೋಟಿ ವೃಕ್ಷ ಯೋಜನೆ ಹಮ್ಮಿಕೊಳ್ಳಲಾಯಿತು. ಪ್ರಧಾನಿ ಮೋದಿಯವರೂ ಪರ್‌ ಡ್ರಾಪ್‌ ಮೋರ್‌ ಕ್ರಾಪ್‌ ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದು ನೆನಪು. ಹೊಸ ಹೊಸ ಯೋಜನೆ ಹುಟ್ಟುಹಾಕುವ ಮುನ್ನ ಹಳೇ ಯೋಜನೆಗಳನ್ನು ಲ್ಯಮಾಪನಕ್ಕೊಳಪಡಿಸಬೇಕಿದೆ. ಸದ್ಯದಲ್ಲೇ ವನಮಹೋತ್ಸವ ಆಚರಣೆ ನಡೆಯಲಿದೆ. ಅದು ವಾರ್ಷಿಕ ನಾಟಕವಾಗದಿರಲಿ. ಭಾಷಣಕ್ಕಷ್ಟೇ ಸೀಮಿತ ವಾಗದಿರಲಿ. ನೀರಿಗಾಗಿ ಅರಣ್ಯ ಎಂಬುದು ಹೋದ ಬಾರಿಯ
ಘೋಷವಾಕ್ಯವಾಗಿತ್ತು. ಬರೀ ಘೋಷ ವಾಕ್ಯವಾಗಿಯೇ ಉಳಿಯಬಾರದು. ಪ್ರತಿ ಹನಿಯೂ ಅಂತರ್ಜಲವಾಗಬೇಕಿದೆ. ಹಾಗಾದರೆ ಮಾತ್ರ ಮುಂಬರುವ ಬೇಸಿಗೆಯಲ್ಲಾದರೂ ನೀರಿನ ಕೊರತೆ ನೀಗಿ ನಿರಾಳವಾಗಿರಬಹುದು. ಬಿರುಮಳೆಗೆ ಹಿಡಿಶಾಪ ಹಾಕುವ ಬದಲು ಆ ಬಗ್ಗೆ ಚಿಂತಿಸೋಣ.

*ರಾಂ ಎಲ್ಲಂಗಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ