ನಮ್ಮೆಲ್ಲರೊಳಗೆ ಇರಬೇಕು ಒಬ್ಬ ಶಾಸ್ತ್ರೀಜಿ…

Team Udayavani, Oct 2, 2019, 5:53 AM IST

ಸ್ವಾರ್ಥ, ಸ್ವ ಹಿತಾಸಕ್ತಿ, ಅಕ್ರಮ ಸಂಪತ್ತು ಸಂಗ್ರಹದಂತಹ ಹಲವು ನಿಯಮ ಬಾಹಿರ ಕೃತ್ಯಗಳ ಆರೋಪಕ್ಕೆ ಆಡಳಿತ ಮತ್ತು ರಾಜಕಾರಣಿಗಳು ಗುರಿಯಾಗಿರುವ ಹೊತ್ತಿದು. ದೇಶದ ನೆಚ್ಚಿನ ಪ್ರಧಾನಿಗಳಲ್ಲಿ ಒಬ್ಬರಾದ ಲಾಲ್‌ಬಹದ್ದೂರ್‌ ಶಾಸ್ತ್ರೀ ತಮ್ಮ ನಡೆನುಡಿಗಳ ಮೂಲಕ ರಾಜಕಾರಣಿಗಳಿಗೆ ಮತ್ತು ಆಡಳಿತಗಾರರಿಗೆ ಮಾದರಿಯಾದವರು. ಇಂದು ಶಾಸ್ತ್ರೀ ಅವರ 115ನೇ ಜನ್ಮದಿನ.

“ಮನುಷ್ಯ ಸ್ವಭಾವದಲ್ಲಿ ಬೇರುಗಳನ್ನುಳ್ಳ ವಸ್ತುನಿಷ್ಠ ರೀತಿ ನೀತಿ ಗಳಿಂದ ರಾಜಕೀಯ ವಾಸ್ತವ ವಾದ ಅಂಕುರಿಸುತ್ತದೆ’- ಅಂತರ ರಾಷ್ಟ್ರೀಯ ಖ್ಯಾತಿಯ ರಾಜನೀತಿಜ್ಞ ಅಮೆರಿ ಕದ ಹ್ಯಾನ್ಸ್‌ ಜೆ ಮೋರ್‌ಜೆನ್‌ತ ನುಡಿ. ಹಾಗಾಗಿ ಕುಹಕರಹಿತ ನಿರ್ಮಲ ಅಂತಃಕರಣ, ಸೇವಾದರ್ಶವುಳ್ಳ ಯಾರೇ ಆದರೂ ತಮ್ಮ ಸಾಮಾನ್ಯ ಪ್ರಜ್ಞೆಯಿಂದಲೇ ರಾಜರ್ಷಿ ಯಾಗಬಹುದು. ಪ್ರಜೆಗಳು ಭರವಸೆ ಯಿಟ್ಟು ತಮ್ಮನ್ನಾಳಲು ಆರಿಸಿ ಕಳಿಸಿದ ಪ್ರತಿನಿಧಿಗಳು ಪ್ರಾಮಾಣಿಕತೆ, ದಕ್ಷತೆ ವಿನೀತ ಭಾವದಿಂದ ತಮ್ಮ ಹೊಣೆ ನಿರ್ವಹಿಸಬೇಕು. ನಾವಿಕ ಹದವಾಗಿ ಹುಟ್ಟು ಹಾಕದಿದ್ದರೆ ದೋಣಿ ಮುಂದೆ ಸಾಗಿ ದಡ ಸೇರದು. ಬಾಲಕನೊಬ್ಬ ಪ್ರತಿನಿತ್ಯ ಶಾಲೆಗೆ ಹೋಗಲು ಹೊಳೆದಾಟಬೇಕಿತ್ತು. ಒಂದು ದಿನ ಅಂಬಿಗನಿಗೆ ತೆರಲು ಅವನ ಬಳಿ ಹಣವಿರಲಿಲ್ಲ. ಸರಿ, ಮಾಡುವುದೇನು? ಪುಸ್ತಕ ತಲೆ ಮೇಲಿರಿಸಿ ಕೊಂಡವನೇ ಈಜಿ ಶಾಲೆ ತಲುಪಿದ್ದ. ಇದೇ ಕಿಶೋರ ತನ್ನ ಹೆಸರಿನೊಂದಿಗೆ ಜಾತಿ ಸೂಚಕವಾದ ಶ್ರೀವಾಸ್ತವ ಎಂಬ ಕುಲನಾಮ ಬೇಡವೆಂದು ಅದನ್ನು ತೊರೆದ, ಬರೀ ಲಾಲ್‌ ಬಹದ್ದೂರ್‌ ಆದ! ಮುಂದೆ 1926ರಲ್ಲಿ ಕಾಶಿ ವಿದ್ಯಾಪೀಠದಲ್ಲಿ “ದರ್ಶನ ಶಾಸ್ತ್ರ’ದಲ್ಲಿ ವಿದ್ಯಾರ್ಜನೆಗೈದು “ಶಾಸ್ತ್ರೀ’ ಉಪಾಧಿ ಪಡೆದು ಅವರು ಲಾಲ್‌ ಬಹದ್ದೂರ್‌ ಶಾಸ್ತ್ರೀ ಆದರು. ಗಾಂಧೀಜಿ, ತಿಲಕ್‌ ಪ್ರಭಾವಕ್ಕೊಳಗಾಗಿ ಶಾಸ್ತ್ರೀಜಿ ವಿದ್ಯಾಭ್ಯಾಸ ಮುಂದುವರಿಸ ಲಾಗದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು. ಅವರು ಜೈಲಿನಲ್ಲಿದ್ದಾಗ ಮಗಳು ತೀವ್ರತರ‌ ಖಾಯಿಲೆ ಯಿಂದ ನರಳುತ್ತಾರೆ. ಹದಿನೈದು ದಿನಗಳ ಪೆರೋಲ್‌ ಮೇಲೆ ಅವರು ಹೊರಬಂದು ಮಗಳಿಗೆ ಚಿಕಿತ್ಸೆ ಕೊಡಿಸುತ್ತಾರಾದರೂ ಮಗಳು ಬದುಕು ಳಿಯುವುದಿಲ್ಲ. ಅಂತ್ಯವಿಧಿ ಗಳನ್ನೆಲ್ಲ ನಡೆಸಿ ಒಂದು ದಿನ ಕೂಡ ಬ್ರಿಟಿಷ್‌ ಸರಕಾರದಿಂದ ಪೆರೋಲ್‌ ವಿಸ್ತರಣೆಗೆ ಗೋಗರೆಯದೆ ಜೈಲಿಗೆ ತಾವಾಗಿಯೆ ಹಿಂದಿರುಗುತ್ತಾರೆ.

ಸ್ವಾತಂತ್ರ್ಯ ಬಂದಮೇಲೆ ಉ.ಪ್ರದೇಶದ ಮುಖ್ಯ ಮಂತ್ರಿಯಾಗಿ ಗೋವಿಂದ ವಲ್ಲಭ ಪಂತ್‌ ಅಧಿಕಾರ ಸ್ವೀಕರಿಸುತ್ತಾರೆ. ಶಾಸ್ತ್ರೀಯ ವರನ್ನು ಪೊಲೀಸ್‌ ಇಲಾಖೆ, ಸಾರಿಗೆ ನಿಯಂತ್ರಣ ಮಂತ್ರಿಯಾಗಿ ನೇಮಕ ಮಾಡುತ್ತಾರೆ. ಮೊಟ್ಟ ಮೊದಲ ಬಾರಿಗೆ ಬಸ್ಸುಗಳಲ್ಲಿ ಮಹಿಳಾ ನಿರ್ವಾಹಕರನ್ನು ನೇಮಿಸಿದ ಕೀರ್ತಿ ಶಾಸ್ತ್ರೀಯವರಿಗೆ ಸಲ್ಲುತ್ತದೆ.

ನೆಹರೂರ ಸಂಪುಟದಲ್ಲಿ ಶಾಸ್ತ್ರೀಜಿ ರೈಲ್ವೇ ಮಂತ್ರಿಯಾಗಿದ್ದರು. ತಮಿಳುನಾಡಿನ ಅರಿಯಲ್ಲೂರಿನಲ್ಲಿ ನವಂಬರ್‌ 1956ರಲ್ಲಿ ಭೀಕರ ರೈಲು ಅಪಘಾತ ಸಂಭವಿಸಿ 142 ಮಂದಿ ಜೀವತೆತ್ತರು. ಇದರ ನೈತಿಕ ಜವಾಬ್ದಾರಿ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನೆಹರೂ ಎಷ್ಟೇ ಬಲವಂತಿಸಿದರೂ ರಾಜೀನಾಮೆ ಯಿಂದ ಹಿಂದೆ ಸರಿಯಲಿಲ್ಲ. “ನೆಹರೂ ಅನಂತರ ಪ್ರಧಾನಿ ಯಾರು?’- ನೆಹರೂ ಜೀವಿತವಿದ್ದಾಗಲೇ ಜಿಜ್ಞಾಸೆ ವಿಶ್ವವ್ಯಾಪಿ ಹರಿದಾಡಿತ್ತು. ಲಾಲ್‌ ಬಹದ್ದೂರ್‌ ಶಾಸ್ತ್ರೀಯ ವರಿರುವಾಗ ಇದು ಒಗಟೇ ಅಲ್ಲ ಎಂದು ಕೆಲವೇ ದಿನಗಳಲ್ಲಿ ಭಾರತೀಯ ಜನಮಾನಸಕ್ಕೆ ಅನ್ನಿಸಿತು. ಜೂನ್‌ 6, 1964 ಶಾಸ್ತ್ರೀಜಿ ಪ್ರಧಾನಿಯಾದರು. ಅಧಿಕಾರದಲ್ಲಿದ್ದಿದ್ದು ಕೇವಲ 20 ತಿಂಗಳು 2 ದಿನಗಳು ಮಾತ್ರವೆ. ಆದರೆ ಆ ಅವಧಿಯಲ್ಲಿ ಅವರ ಒಂದೊಂದು ನಡೆಯೂ ಮಾದರಿಯಾಗಿತ್ತು.

ಎರಡು ಪ್ರಸಂಗಗಳು ಸ್ವಾರಸ್ಯಕರವಾಗಿವೆ. ಮಗ ಅನಿಲ್‌ ಶಾಸ್ತ್ರೀಯವರಿಗೆ ಅವರಿದ್ದ ಸಂಸ್ಥೆಯಲ್ಲಿ ದಿಢೀರನೆ ಭಡ್ತಿ ದೊರೆಯುವುದು. ನಾನು ಪ್ರಧಾನಿಯಾದ ಕೂಡಲೇ ನಿನ್ನ ಅರ್ಹತೆ ಹೆಚ್ಚಲು ಅದು ಹೇಗೆ ಸಾಧ್ಯ? ಬೇಡ, ಭಡ್ತಿಯನ್ನು ಒಪ್ಪಿಕೊಳ್ಳಬೇಡ ಎಂದು ಮಗನನ್ನು ತರಾಟೆಗೈಯ್ಯುತ್ತಾರೆ! ದಿಲ್ಲಿಯ ಶಾಲೆಗೆ ತಮ್ಮ ಮಗುವನ್ನು ದಾಖಲಿಸಲು ಅನಿಲ್‌ ಸರದಿಯಲ್ಲಿ ನಿಂತಿರುತ್ತಾರೆ. ಬಿಸಿಲೋ ಬಿಸಿಲು. ಉದ್ದನೆಯ ಸಾಲು. ಅವರು ಸುಸ್ತಾಗಿ ಪ್ರಜ್ಞೆ ತಪ್ಪಿ ಬೀಳುವರು. ಅಲ್ಲಿದ್ದವರು ಅವರನ್ನು ಮೇಲೆತ್ತಿ ನೀರುಣಿಸಿ ಉಪಚರಿಸಿ ನಿಮ್ಮ ಮನೆ ಎಲ್ಲಿ? ವಿಳಾಸ ಹೇಳಿ ಎನ್ನುವರು. ಓ ನಿಮ್ಮ ತಂದೆಯವರು ಪ್ರಧಾನ ಮಂತ್ರಿಗಳಲ್ಲವೇ ಅಂತ ಎಲ್ಲರ ಅಚ್ಚರಿಗೆ ಪಾರವಿರಲಿಲ್ಲ. ಪ್ರಧಾನಿ ಹುದ್ದೆಗೇರಿದಾಗ ಶಾಸ್ತ್ರೀಯವರ ಬಳಿ ಸ್ವಂತ ಕಾರಿರಲಿಲ್ಲ. ನನಗೇಕೆ ಕಾರು, ಯಾವ ಯಾತ್ರೆ ಹೊರಡಬೇಕಿದೆ ಎಂದು, ಪದೇ ಪದೇ ಒತ್ತಾಯಿಸುತ್ತಿದ್ದ ಕುಟುಂಬದವರ ಬಾಯಿ ಮುಚ್ಚಿಸುತ್ತಿದ್ದರು. ಕಡೆಗೆ ಸಣ್ಣ 12,000 ರೂಪಾಯಿಗಳ ಬೆಲೆಯ ಕಾರು ಖರೀದಿಸಲು ಸಮ್ಮತಿಸುತ್ತಾರೆ. ಆದರೆ ಅವರ ಬಳಿ ಇದ್ದಿದ್ದು ಬರೀ 7,000 ರೂಪಾಯಿಗಳು! ಉಳಿದ 5,000 ರೂಪಾಯಿಗೆ ಸಾಲಕ್ಕೆಂದು ಬ್ಯಾಂಕಿಗೆ ಅರ್ಜಿ ಹಾಕಿಕೊಳ್ಳುತ್ತಾರೆ. ಬ್ಯಾಂಕ್‌ ಮ್ಯಾನೇಜರ್‌ ಒಂದೇ ದಿನದಲ್ಲಿ ಸಾಲ ಮಂಜೂರಿಸುತ್ತಾರೆ. ಕುಪಿತರಾದ ಶಾಸ್ತ್ರೀಯವರು ಇಷ್ಟು ಬೇಗ ಸಾಲ ಹೇಗೆ ನೀಡಿದಿರಿ? ಉಳಿದ ಅರ್ಜಿದಾರರು ಅದೆಷ್ಟು ದಿನಗಳಿಂದ ಕಾಯುತ್ತಿದ್ದಾರೆ. ನಿಮ್ಮ ವಿರುದ್ಧ ಕಠಿನ ಕ್ರಮವನ್ನೇಕೆ ಕೈಗೊಳ್ಳಬಾರದು? ಎಂದು ನೋಟಿಸ್‌ ಜಾರಿಗೊಳಿಸುತ್ತಾರೆ.

1965ರಲ್ಲಿ ಭಾರತ ಪಾಕಿಸ್ಥಾನದೊಂದಿಗೆ ಯುದ್ಧ ಹೂಡಬೇಕಾದ ಪರಿಸ್ಥಿತಿ. 22 ದಿನಗಳ ಕದನ. ಪಾಕ್‌ ಪ್ರಚೋದನೆಯಿಂದಲೇ ಭಾರತಕ್ಕೆ ಈ ಅನಿವಾರ್ಯವೆಂದು ಅರಿಯದ ಅಮೆರಿಕ ಸಮರ ನಿಲ್ಲಿಸದಿದ್ದರೆ ಗೋಧಿಯಿಲ್ಲ ಎಂದು ಷರತ್ತು ವಿಧಿಸುತ್ತದೆ. ನಾವು ಹಸಿವಿನಿಂದಿದ್ದರೂ ಸರಿಯೆ. ಅಮೆರಿಕಾಗೆ ತಲೆ ಬಾಗುವುದು ಬೇಡ ಎಂದು ಸ್ವತಃ ಶಾಸ್ತ್ರೀ ಸಾಂಕೇತಿಕವಾಗಿ ಪ್ರತೀ ಸೋಮವಾರ ರಾತ್ರಿ ಭೋಜನ ತ್ಯಜಿಸುತ್ತಾರೆ. ದೇಶದ ಅಸಂಖ್ಯ ಜನ ಈ ವ್ರತ ಆರಂಬಿಸಿದ್ದರು. ಇದು ಇತಿಹಾಸದಲ್ಲೇ ಅಪೂರ್ವ ಸಂಗತಿ. ದೇಶದ ಕೃಷಿ ಕ್ಷೇತ್ರವನ್ನು ಪುನರುಜ್ಜೀವನಗೊಳಿಸಿದರು ಶಾಸ್ತ್ರೀಜಿ. ರಾಜಕೀ ಯವೆಂದರೆ ಚುನಾವಣಾ ರಾಜಕೀಯವೇ ಎನ್ನುವಂಥ ಇಂದಿನ ಪರಿಸ್ಥಿತಿಯಲ್ಲಿ ನಾವೊಬ್ಬಬ್ಬರೂ ಶಾಸ್ತ್ರೀಯವರ ನ್ನೊಳಗೊಳ್ಳಬೇಕಿದೆ.

 ಬಿಂಡಿಗನವಿಲೆ ಭಗವಾನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ