ಹೆಣ್ಣನ್ನು ಬದುಕಲು ಬಿಡಿ

Team Udayavani, Dec 3, 2019, 4:47 AM IST

ಹೆಣ್ಣಾಗಿ ಹುಟ್ಟಿದವರು, ಹೆಣ್ಣನ್ನು ಹೊತ್ತು-ಹೆತ್ತು ಬೆಳೆಸಿದವರು, ಹೆಣ್ಣನ್ನು ಗೌರವಿಸುವವರೆಲ್ಲರನ್ನೂ ಬೆಚ್ಚಿ ಬೀಳಿಸುವ ಭಯಾನಕ ಸುದ್ದಿಯದು. ಮನೆಯಿಂದ ಹೊರ ಹೊರಟ ಹೆಣ್ಣು ಮಕ್ಕಳಿಗೆ ಸಾರ್ವಜನಿಕ ಜೀವನದಲ್ಲಿ ರಕ್ಷಣೆಯೇ ಇಲ್ಲವೆಂದಾದರೆ ಮತ್ತೆ ನಾವು ಇತಿಹಾಸದ ದಿನಗಳಿಗೆ ಮರಳಬೇಕೆ ಅನ್ನುವ ಪ್ರಶ್ನೆಯೊಂದು ಇಂದಿನ ಸುಶಿಕ್ಷಿತ ಸಮಾಜದಲ್ಲಿ ಹುಟ್ಟಿಕೊಂಡಿದೆ.

ಅಂದಿನ ಕಾಲದಲ್ಲಿ ಆಕ್ರಮಣವೆಸಗಿದ ಪರದೇಶಿಗಳ ಭಯದಿಂದ ಹೆಣ್ಣು ಮಕ್ಕಳನ್ನು ಮನೆಯೊಳಗೆ ಕೂಡಿಹಾಕಿ ಆಕೆಯನ್ನು ರಕ್ಷಿಸಲಾಗುತ್ತಿತ್ತು. ಈಗ ಕ್ರೂರ ಮೃಗಗಳಿಗಿಂತಲೂ ಕಡೆಯಾಗಿ ಅಮಾನವೀಯತೆಯಿಂದ ವರ್ತಿಸುವ ಮಾನವರಿಂದ ರಕ್ಷಿಸಲು ಆಕೆಯನ್ನು ಮನೆಯೊಳಗೆ ಬಚ್ಚಿಡಬೇಕಾದ ಸ್ಥಿತಿ ಬಂದಿದೆ. ಎಷ್ಟೋ ಬಾರಿ ಹೆಣ್ಣು ಹೆತ್ತವರು “ಅಯ್ಯೋ ಮಗು ಹೆಣ್ಣಾಯಿತಲ್ಲ’ ಅಂತ ಬೇಸರಿಸಿದರೆ ಅದು ಈ ಕಾರಣಕ್ಕೂ ಹೌದು. ಆಕೆಯನ್ನು ದುಷ್ಟ ಜಂತುಗಳಿಂದ ರಕ್ಷಿಸುವುದೇ ಹೆಣ್ಣು ಹೆತ್ತವರ ಒಂದು ಚಿಂತೆ. ಮಹಿಳಾ ಸಮಾನತೆಗಾಗಿ ಹೋರಾಡುವ ಇಂದಿನ ಸಮಾಜದಲ್ಲಿ ಇಂತಹ ಅನಾರೋಗ್ಯಕರ ಘಟನೆಗಳು ಹೆಣ್ಣು ಹೆತ್ತವರನ್ನು ಘಾಸಿಗೊಳಿಸುತ್ತದೆ. “ಹೆಣ್ಣಾಗಿ ಹುಟ್ಟುವುದೇ ಒಂದು ಶಾಪ’ ಅನ್ನುವುದನ್ನು ನಿಜವಾಗಿಸುತ್ತದೆ.

ಎಲ್ಲ ಮುಗಿದ ಮೇಲೆ ಯಾರು ಎಷ್ಟು ಕೂಗಿದರೇನು? ನ್ಯಾಯಕ್ಕಾಗಿ ಕಿರುಚಿದರೇನು? ಮೊಂಬತ್ತಿ ಹಿಡಿದು ಪ್ರತಿಭಟಿಸಿದರೇನು ಪ್ರಯೋಜನ? ಮತ್ತೆ ಮತ್ತೆ ಅತ್ಯಾಚಾರವೆಸಗುವ ಅನಾಗರಿಕ ಕೊಳಕು ಮನಸುಗಳನ್ನು ಇದು ಯಾವುದೂ ಬದಲಿಸದು. ಇಂತಹ ಪಾಪಿಗಳು ಸಿಕ್ಕ ತಕ್ಷಣ ನಡು ದಾರಿಯಲ್ಲಿ ಬೆಂಕಿ ಕೊಟ್ಟು ಸಾಯಿಸಬೇಕು. ಇಲ್ಲವೇ ಶರೀರದ ಒಂದೊಂದೇ ಅಂಗಾಂಗಗಳನ್ನು ಸಾರ್ವಜನಿಕವಾಗಿ ಕತ್ತರಿಸಿ ಸುಟ್ಟು ಬಿಡಬೇಕು. ಅಂತಹ ಶಿಕ್ಷೆ ನೀಡಿದರೆ ಸತ್ತವರು ಬರಲಾರರು ನಿಜ. ಆದರೆ ಒಂದಿಷ್ಟು ಭಯವಾದರೂ ಜನರಲ್ಲಿ ಹುಟ್ಟಿಕೊಳ್ಳಬಹುದೇನೋ? ಅನ್ಯಾಯವಾಗಿ ಆಕೆಯನ್ನು ಕಳೆದುಕೊಂಡ ಬಂಧುಗಳಿಗೆ ಒಂದಿಷ್ಟು ಸಾಂತ್ವನ ಸಿಗಬಹುದು.

ಆದರೆ ನಮ್ಮ ಸಮಾಜದಲ್ಲಿ ಇದು ನಡೆಯುವುದಿಲ್ಲ. ಅಪರಾಧಿಯನ್ನು ಜೈಲಿನಲ್ಲಿರಿಸಿ ರಕ್ಷಿಸಲಾಗುತ್ತದೆ. ಅದು ಜನರ ಮನಸ್ಸಿನಿಂದ ಮರೆತು ಹೋಗುವ ತನಕ ವಿಚಾರಣೆ ನಡೆಯುತ್ತದೆ. ಸಾಲದೆಂಬಂತೆ ಇವರ ಪರವಾಗಿ ವಾದಿಸುವ ವಕೀಲರು ಹಾಜರಾಗುತ್ತಾರೆ. ಮತ್ತೆ ಅದಕ್ಕಿಂತಲೂ ಭೀಕರ ಘಟನೆಗಳು ನಡೆಯುತ್ತದೆ. ಮತ್ತದೇ ಹೋರಾಟ, ಪ್ರತಿಭಟನೆ, ಮೆರವಣಿಗೆ. ಇತಿಹಾಸ ಮರುಕಳಿಸುತ್ತದೆ.

ಹೆಣ್ಣು ಮಕ್ಕಳಿಗೆ ನೀಡಿದ ಸ್ವಾತಂತ್ರ್ಯದ ಬಗ್ಗೆ ವಿಚಾರ ವಿನಿಮಯ, ಆಕೆ ಧರಿಸುವ ಬಟ್ಟೆಯ ಬಗ್ಗೆ ,ಆಕೆಯ ನಡೆನುಡಿ, ವರ್ತನೆಗಳ, ಚಲನವಲನಗಳ ಬಗ್ಗೆ ವಿಮರ್ಶೆಗಳು ಟೀಕೆಗಳು ನಡೆಯುತ್ತದೆ. ಅನೇಕ ಸಲ ಹೆಣ್ಣಿನದೇ ತಪ್ಪು ಅಂತ ತೀರ್ಮಾನಕ್ಕೆ ಬರಲಾಗುತ್ತದೆ. ಆಕೆಯನ್ನೇ ಸಂಶಯ ದೃಷ್ಟಿಯಿಂದ ನೋಡಲಾಗುತ್ತದೆ.

ಆದರೆ ಇಂದಿನ ನಾಗರಿಕ ಸಮಾಜದಲ್ಲಿ ಹೆಣ್ಣು ಮಕ್ಕಳಿಗಿಂತಲೂ ಹೆಚ್ಚಿನ ಶಿಸ್ತನ್ನು ಗಂಡು ಮಕ್ಕಳಿಗೇ ಕಲಿಸಬೇಕಿದೆ. ಮಗು ಹುಟ್ಟಿದ ತಕ್ಷಣ “ಗಂಡು ಹುಟ್ಟಿತು’ ಅಂತ ಕುಣಿಯುವವರು ಸಿಹಿ ಹಂಚುವವರು ಅವರನ್ನು ಸಮಾಜದಲ್ಲಿ ಉತ್ತಮ ಮಾನವರನ್ನಾಗಿ ಬೆಳೆಸಬೇಕಾದ ಸವಾಲನ್ನು ಎದುರಿಸಬೇಕಿದೆ. ಹೆಣ್ಣು ಮಕ್ಕಳನ್ನು ಭೋಗದ ವಸ್ತುಗಳನ್ನಾಗಿಯೇ ನೋಡುವ ಅವರ ಕೆಟ್ಟ ದೃಷ್ಟಿಗೆ ಒಂದು ಸ್ವತ್ಛ ಕನ್ನಡಕ ನೀಡಬೇಕಿದೆ. ಕಾಮದ ದೃಷ್ಟಿಯಿಂಲೇ ಕಾಣುವ ಗಂಡಿನ ಗಂಡಸ್ತನಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕಿದೆ. ಸಮಾಜಕ್ಕೆ ಕಂಟಕರಾಗದ ಹಾಗೆ ಅವರನ್ನು ಬೆಳೆಸುವ ಕರ್ತವ್ಯ ಗಂಡು ಹೆತ್ತವರಿಗಿದೆ. ಆದರೆ ನಮ್ಮ ಸಮಾಜ ಗಂಡು ಮಕ್ಕಳನ್ನು ಎತ್ತರದಲ್ಲಿ ಇಟ್ಟ ಫ‌ಲವೋ ಏನೋ ಹೆಣ್ಣೆಂದರೆ ಆಕೆಯ ಮೇಲೆ ಗೌರವಕ್ಕಿಂತಲೂ ಚಪಲವೇ ಹೆಚ್ಚು. ಆಕೆಗೆ ಕೈ ಮುಗಿದು ನಮಸ್ಕರಿಸುವ ಬದಲು ಕೈ ಎಳೆದು ಮಾನ ಹರಣ ಮಾಡುವ ಹೀನ ಬುದ್ಧಿ ಬೆಳೆದು ಬಿಟ್ಟಿದೆ. ಹಿಂದಿನ ಕಾಲದಲ್ಲಿದ್ದ ದುರುಳ ರಾಕ್ಷಸರಲ್ಲೂ ಇಂತಹ ವರ್ತನೆ ಇರಲಿಲ್ಲವೇನೋ?

ಗಂಡು ಹೆತ್ತವರೆಲ್ಲ ತಮ್ಮ ಮುದ್ದಿನ ಕುವರರಿಗೆ ಅವರ ಬಾಲ್ಯಾವಸ್ಥೆಯಲ್ಲಿಯೇ ಹೆಣ್ಣು ಮಕ್ಕಳ ಕುರಿತು ಗೌರವದ ಭಾವನೆಯನ್ನು ತುಂಬಬೇಕು. ಹೆಣ್ಣು ಮಕ್ಕಳಿಗೆ ನೀನು ಹೆಣ್ಣು, ಹಾಗಿರಬೇಕು, ಹೀಗಿರಬೇಕು ಅಂತ ನೂರಾರು ಬುದ್ಧಿ ಮಾತುಗಳನ್ನು ಹೇಳಿ ತಿದ್ದುವ ಹಾಗೆಯೇ ಗಂಡು ಮಕ್ಕಳಿಗೂ ಅವರು ಹೇಗಿರಬೇಕು ಎನ್ನುವುದನ್ನು ತಿಳಿ ಹೇಳಬೇಕು. ಸ್ವಸ್ಥ ಸಮಾಜಕ್ಕೆ ಹೆಣ್ಣಿನ ಶೀಲದ ಹಾಗೆಯೇ ಗಂಡಿನ ಶೀಲವೂ ಮುಖ್ಯ. ಗಂಡು ಏನು ಮಾಡಿದರೂ ನಡೆಯುತ್ತದೆ ಅನ್ನುವ ಮನೋಭಾವವನ್ನು ಬದಲಿಸಬೇಕಿದೆ. ಸಮಾಜದಲ್ಲಿ ಹೆಚ್ಚು ಸ್ವತ್ಛಂದವಾಗಿ ಬೆಳೆಯುವ ಗಂಡು ಮಕ್ಕಳಿಗೊಂದು ಹೆಣ್ಣು ಹೆತ್ತವರ, ಹೆಣ್ಣಾಗಿ ಹುಟ್ಟಿದವರ ಮನವಿ. ದಯವಿಟ್ಟು ಶೀಲವಂತರಾಗಿ, ಕಿರಾತಕರಂತೆ ವರ್ತಿಸದಿರಿ. ಹೆಣ್ಣು ಮಕ್ಕಳನ್ನು ಕಂಡಾಗ ಗೌರವಿಸಿ. ಸಾಧ್ಯವಾಗದಿದ್ದರೆ ಸುಮ್ಮನೇ ಹೋಗಿಬಿಡಿ. ಬೀದಿ ಕಾಮಣ್ಣರಾಗದೆ ಅವರನ್ನು ರಕ್ಷಿಸುವ ಸಹೋದರರಾಗಿ. ರಕ್ಷಿಸಲಾಗದಿದ್ದರೂ ಅವರ ಪಾಲಿಗೆ ರಾಕ್ಷಸರಾಗಬೇಡಿ. ಅವರನ್ನೂ ಈ ನೆಲದಲ್ಲಿ ಧೈರ್ಯದಿಂದ ನಡೆದಾಡಲು ಬಿಡಿ.ಅವರ ಪಾಡಿಗೆ ಅವರನ್ನು ಬದುಕಲು ಬಿಡಿ.

-ವಿದ್ಯಾ ಅಮ್ಮಣ್ಣಾಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ