ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

ಅನುವಾದ ಸಾಹಿತ್ಯ : ಡಾ. ಪಾರ್ವತಿ ಜಿ ಐತಾಳ್

Team Udayavani, Feb 23, 2021, 4:30 PM IST

Malayalam Kannada Translated Story

ಅನೇಕ ಗೋರಿಗಳ ಪಕ್ಕದಲ್ಲಿ ನಿಂತಿದ್ದೇನೆ ನಾನು. ಮಳೆಯ ಲಹರಿಯಿರುವ ಒಂದು ತಣ್ಣಗಿನ ಗಾಳಿಯೀಗ ಈ ದಾರಿಯಾಗಿ ಹಾದು ಹೋಗುತ್ತಿದೆ. ಒಣಗಿದ ಮರಗಳಲ್ಲಿ ಗಾಳಿಯ ಕ್ಷೀ಼ಣವಾದ ಸದ್ದು. ಗಾಳಿಯು ಗೋರಿಗಳೊಂದಿಗೆ ಪಿಸುಗುಟ್ಟು ತ್ತಿರುವಂತಿದೆ : ಗುಂಡಿಯೊಳಗೆ ಎಲ್ಲವನ್ನೂ ಮುಗಿಸಿ ಕುಳಿತಿರುವ ಓ ದುಷ್ಟ ಜನ್ಮವೇ, ನೀನು ಈ ಭೂಮಿಯ ಮೇಲೆ ಏನೆಲ್ಲ ಮಾಡಿ ತೋರಿಸಿದೆ?’

ಮೊದಲ ಗೋರಿಯ ಮೇಲೆ ಹೀಗೆ ಬರೆದಿದೆ : ಜಾನ್ ಡಿಸಿಲ್ವ, ಜನನ -೧೯೪೨, ಮರಣ – ೧೯೯೯. ಅದು ನಾನೇ. ಎರಡನೆಯ ಗೋರಿಯ ಮೇಲೆ ಹೀಗಿದೆ : ಡೇನಿಯಲ್ ತಿಮೋತಿ, ಜನನ -೧೯೩೭, ಮರಣ – ೧೯೯೪. ಅದೂ ನಾನೇ. ಮುಂದೆ ಕಾಣುವ ಗುಂಡಿಗಳಲ್ಲಿ ಕೊಳಕು ನಗೆಯೊಂದಿಗೆ ಮಲಗಿರುವುದೂ ನಾನೇ. ಒಂದೇ ಜೀವನದಲ್ಲಿ ನನ್ನ ಹಲವು ರೀತಿಯ ಜನ್ಮಗಳು ( ಇದು ವಿಲ್ಲನ್‌ಗೆ ಸಿಗುವ ಒಂದು ಸೌಭಾಗ್ಯ). ಒಬ್ಬ ವಿಲ್ಲನ್ ಆಗಿ ವೇಷ ಕಟ್ಟುವವನು ಹವಾರು ಬಾರಿ ಸಾಯುತ್ತಾನೆ. ಹಲವಾರು ಗುಂಡಿಗಳಲ್ಲಿ ಹಲವಾರು ಹೆಸರುಗಳಿಂದ ನಿದ್ರಿಸುತ್ತಾನೆ. ಕಾಲದ ಹರಿವಿನಲ್ಲಿ ಹಲವಾರು ತರಗೆಲೆಗಳು ಅವನ ಅಸ್ವಸ್ಥ ನಿದ್ರೆಗಳತ್ತ ಸಾಗುತ್ತಲೇ ಇರುತ್ತವೆ. ಅನೇಕ ಪುನರುಜ್ಜೀವನಗಳು. ಮತ್ತೆಯೂ ಒಂದಷ್ಟು ದಾರುಣ ಮರಣಗಳು. ವಿಲ್ಲನ್‌ನ ಬದುಕಿಗೆ ಸೇಡು ತೀರಿಸಿಕೊಳ್ಳಲು ಇರುವುದು ದೀನವೂ ಅಪಹಾಸ್ಯವೂ ಆದ ಮರಣಗಳು ಮಾತ್ರ. ವಿಲ್ಲನ್‌ನನ್ನು ಕೊಂಡೊಯ್ಯುವುದು ಯಾವಾಗಲೂ ತೀರ್ಪುಗಳೂ ಚಪಲ ವಿಶ್ವಾಸಗಳೂ ಮಾತ್ರ. ಕೋಮಲ ಸ್ವಪ್ನಗಳು ಅವನ ನಿದ್ದೆಗಳಲ್ಲಿರುವುದಿಲ್ಲ.

ಕುತ್ತೇ ಕಮೀನೇ…ನಾಯಕನು ನನ್ನನ್ನೇ ಕರೆಯುತ್ತಿದ್ದಾನೆ. ಅದನ್ನು ಕೇಳಿ ಕೇಳಿ ನನ್ನ ನಾಚಿಕೆ ಎಲ್ಲೋ ಹಾರಿ ಹೋಗಿದೆ. ಕೇಳದಿದ್ದರೆ ನಿದ್ದೆಯೇ ಬರುವುದಿಲ್ಲ ಎಂಬಷ್ಟಾಗಿದೆ. ನಾನು ನನ್ನ ಬಗ್ಗೆ ಇಲ್ಲೇ ಮೇಲೆ ಬರೆದಿಟ್ಟಿರುವುದನ್ನು ನೀವು ಓದಿರಬಹುದಲ್ಲವೆ? ಲ್ಲನ್ ಆಗಿ ಬದುಕಿನ ದಾರಿಯ ಆಯ್ಕೆ ಮಾಡುವುದರೊಂದಿಗೆ ಅವನು ತನಗೆ ತಾನೇ ಅಪರಿಚಿತನೂ , ಅರ್ಥವಾಗದ ರಹಸ್ಯವೂ, ಒಂಟಿಯೂ, ಅನ್ಯನೂ ಆಗಿ ಬಿಡುತ್ತಾನೆ. ಅವನಿಗೆ ತಿಳಿಯಾದ ಆಕಾಶವು ನಿಷೇಧಿಸಲ್ಪಟ್ಟದ್ದು. ಗುಡ್ಡ-ಕಾಡುಗಳೊಂದಿಗೆ ಏಕಾಂತದಲ್ಲಿ ಸಂಭಾಷಣೆ ನಡೆಸುವಾಗಿನ ಸಂಗೀತವು ಅವನ ಪಾಲಿಗೆ ಇಲ್ಲ. ನಿಮಗೆ ಕಾಣಿಸುವ ಮಳೆಯೂ ಅವನ ಮಳೆಯೂ ಬೇರೆ ಬೇರೆ. ಅವನ ಮಳೆಯು ನಾಯಕಿಗೆ ಹೊಕ್ಕಳು-ನಿತಂಬಗಳನ್ನು ತೋರಿಸಿ ನೃತ್ಯ ಮಾಡಲಿಕ್ಕಿರುವಂಥಾದ್ದು ಮತ್ತು ಅಡಗಿ ನಿಂತು ನೋಡುವಂಥಾದ್ದು. ಮಳೆಯು ಅವನಿಗೆ ಕುಟಿಲ ಬಯಕೆಗಳತ್ತ ಕೊಂಡೊಯ್ಯುವ ಬಾಗಿಲಾಗುತ್ತದೆ.

ನಾನು ದೇಶ್‌ಪುರಿ. ಹಳೆಯ ವಿಲ್ಲನ್. ಆದರೆ ಹೊಸ ಚಿತ್ರಗಳಲ್ಲೂ ನಾನಿದ್ದೇನೆ. ನನ್ನ ಖಳನಾಯಕತ್ವಕ್ಕಿರುವ ಶಕ್ತಿ ಮತ್ತು ತೀವ್ರತೆಗಳು ಹೊಸದಾಗಿ ಬರುತ್ತಿರುವ ವಿಲ್ಲನ್‌ಗಳಿಗಿಲ್ಲದಿರುವುದರಿಂದಲೂ ಭಾಗ್ಯದಿಂದ ನನಗೆ ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯಲು ಸಾಧ್ಯವಾಗಿದೆ.

ನಿರ್ದೇಶಕ ಪ್ರಮೋದ ಗುಪ್ತಾ ನನ್ನ ಬಗ್ಗೆ ಹೀಗೆ ಹೇಳುತ್ತಾರೆ : ದೇಶ್‌ಪುರಿ ಅಸಾಧಾರಣ ಪ್ರತಿಭಾವಂತ. ಕಣ್ಣಿರುಕಿಸಿ ಅವನು ನೋಡುವ ಆ ಒಂದು ನೋಟ ಸಾಕು ಪ್ರೇಕ್ಷಕರಿಗೆ ಅವನ ಬಗ್ಗೆ ಜುಗುಪ್ಸೆ ಹುಟ್ಟಿಸಲು. ಒಬ್ಬ ವಿಲ್ಲನ್‌ಗೆ ಬೇಕಾದ ಒಂದು ಮುಖ್ಯ ಅರ್ಹತೆಯೇ ಅದು. ಎದೆಯುಬ್ಬಿಸಿ ನಡೆಯುವ ಆ ನಡಿಗೆ. ಡಯಲಾಗಿನಲ್ಲಿನ ಆ ಗಡಸು ಧ್ವನಿ. ಇಮೇಜಿಗೆ ತೊಂದರೆಯಾಗುತ್ತದೆಂದು ಎಂದೂ ಹಠ ಮಾಡದ ಆ ಸ್ವಭಾವ- ನಮಗೆ ಒಬ್ಬ ವಿಲ್ಲನ್‌ನಿಂದ ಬೇಕಾದದ್ದೆಲ್ಲವೂ ಅವನಲ್ಲಿ ಸಿಕ್ಕಿವೆ. ಚಿತ್ರರಂಗಕ್ಕೆ ಹೊಸದಾಗಿ ಬರುವ ವಿಲ್ಲನ್‌ಗಳಿಗೆ ಇಮೇಜಿನ ಬಗ್ಗೆ ವಿಪರೀತ ಭಯ. ಒಂದು ರೇಪ್ ದೃಶ್ಯದಲ್ಲಿ ಅಭಿನಯಿಸಬೇಕಾಗಿ ಬಂದಾಗ ನಾಯಕಿಯ ಮುಂದೆ ಅವರು ನಡುಗಿ ಬಿಡುತ್ತಾರೆ. ಬಿಳಿಚಿಕೊಂಡು ಬಿಡುತ್ತಾರೆ. ದೇಶ್‌ಪುರಿ ಇಂತಹ ದೃಶ್ಯಗಳಲ್ಲಿ ತೋರಿಸುವ ಧೈರ್ಯವೂ ಒರಟುತನವೂ ಪ್ರಾಮಾಣಿಕತೆಯೂ ಮೆಚ್ಚುವಂಥಾದ್ದು. ವಯಸ್ಸಾದ ವಿಲ್ಲನಾಗಿ ದೇಶ್‌ಪುರಿ ಕಾಣಿಸಿಕೊಳ್ಳುವುದಾದರೆ ಏನು ತೊಂದರೆ? ವಿಲ್ಲನ್‌ನ ವಯಸ್ಸು ಪ್ರೇಕ್ಷಕರನ್ನು ಕಾಡುವ ಸಮಸ್ಯೆಯೇ ಇಲ್ಲ. ನಿಷ್ಕಳಂಕ ಪೌರುಷ ತಾನೇ ಪ್ರೇಕ್ಷಕರು ವಿಲ್ಲನ್‌ನಿಂದ ಬಯಸುವುದು ?’

ನನ್ನ ಮೇಕಪ್‌ಮ್ಯಾನ್ ಕುಪ್ಪುಸ್ವಾಮಿ ಹೇಳುತ್ತಾನೆ : ‘ದೇಶ್‌ಪುರಿಗೆ ಎಪ್ಪತ್ತು ವರ್ಷ ಪ್ರಾಯವಾಗಿದೆ. ಆದರೂ ಒಬ್ಬ ವಯಸ್ಸಾದವನಂತೆ ಅವನಿಗೆ ಮೇಕಪ್ ಮಾಡಬೇಕಿದ್ದರೆ ನನಗೆ ತುಂಬಾ ಸಮಯ ಹಿಡಿಯುತ್ತದೆ. ವಿಲ್ಲನ್‌ನ ಹಿಂದಿನ ಜೀವನದ ಕ್ರೌರ್ಯಗಳನ್ನು ಚಿತ್ರೀಕರಿಸಬೇಕಿದ್ದರೆ ಅವನನ್ನು ಒಬ್ಬ ತರುಣನಾಗಿ ಮೇಕಪ್ ಮಾಡಲು ನನಗೆ ಅರ್ಧ ಗಂಟೆಯೂ ಬೇಕಾಗುವುದಿಲ್ಲ.’ ಒಬ್ಬ ವಿಲ್ಲನ್‌ನ ಜೀವನವು ಹಲವಾರು ಘಟ್ಟಗಳನ್ನು ಸಂಬೋಧನೆ ಮಾಡಬೇಕೆಂಬ ಹೆಚ್ಚಿನ ಎಚ್ಚರವು ಈ ಮಾಂತ್ರಿಕತೆಯ ಹಿಂದೆ ಅಡಗಿದೆ.

ಕುತ್ತೇ ಕಮೀನೇ…ನಾಯಕ ನನ್ನತ್ತ ಓಡಿ ಬರುತ್ತಿದ್ದಾನೆ. ಸ್ಲೋ ಮೋಶನಿನಲ್ಲಿ ಬರುತ್ತಿದ್ದಾನೆ. ಹತ್ತಿರ ಬರಲು ಸ್ವಲ್ಪ ಹೊತ್ತು ಹಿಡಿಯಬಹುದು. ಅವನು ಬಂದು ನನ್ನನ್ನು ಹೊಡೆಯುತ್ತಾನೆ. ತುಳಿಯುತ್ತಾನೆ. ನಾನು ಬಿದ್ದು ಹೊರಳಾಡುತ್ತ ಹೋಗಿ ಕೆಸರಿನೊಳಗೆ ಬೀಳುತ್ತೇನೆ, ಬೀಳ ಬೇಕು. ವಿಲ್ಲನ್‌ನ ಜಾತಕ ವಿಧಿಯದು. ಬೀಳದಿದ್ದರೆ ನಿರ್ದೇಶಕರು ನನ್ನನ್ನು ಹಿಡಿದೆತ್ತಿ ಕೆಸರಿನಲ್ಲಿ ಅದ್ದಿಬಿಡುತ್ತಾರೆ. ಈ ದೃಶ್ಯದಲ್ಲಿ ನಾಯಕ ಮತ್ತು ನಾನು ಮಾತ್ರ ಇರುವುದರಿಂದ ಆಕ್ಷನ್ ಬೇಗ ಬೇಗನೆ ಮುಗಿಯಬೇಕು. ಟೇಕುಗಳ ವೇಗ ಹೆಚ್ಚಾಗಿರುವುದರಿಂದ ನನಗೆ ವಿಶ್ರಾಂತಿ ತೆಗೆದುಕೊಳ್ಳಲು ಸಮಯ ಕಡಿಮೆ. ನನ್ನ ಪರಿವಾರಗಳೂ ನಾಯಕನೂ ಮತ್ತು ನಾನೂ ಇರುವ ಹೊಡೆದಾಟದಲ್ಲಾದರೆ ನಮಗೆಲ್ಲಾ ವಿಶ್ರಾಂತಿ ತೆಗೆದುಕೊಳ್ಳಲು ಬೇಕಾದಷ್ಟು ಸಮಯ ಸಿಗುತ್ತಿತ್ತು. ಒಬ್ಬ ನಾಯಕನಿಗೆ ಹೊಡೆಯುತ್ತಾನೆ. ಹಿಂದೆ ಸರಿಯುತ್ತಾನೆ. ಮುಂದಿನವನು ನಾಯಕನಿಗೆ ಹೊಡೆಯುತ್ತಾನೆ. ಹಿಂದೆ ಸರಿಯುತ್ತಾನೆ. ವಿಲ್ಲನ್ ಆದ ನಾನು ನಾಯಕನನ್ನು ಹೊಡೆಯುತ್ತೇನೆ. ತಿರುಗಿ ಹೊಡೆಸಿಕೊಳ್ಳುತ್ತೇನೆ. ನನ್ನ ಪರಿವಾರದವರು ಪುನಃ ಒಗ್ಗೂಡಿಸಿದ ಶಕ್ತಿಯೊಂದಿಗೆ ನಾಯಕನ ಮೇಲೆ ಆಕ್ರಮಣ ಮಾಡುತ್ತಾರೆ. ನಾಯಕ ಹೊಡೆಯುತ್ತ ಹೊಡೆಯುತ್ತ ಮುಂದೆ ಬರುತ್ತಾನೆ. ವಿಶ್ರಾಂತಿ ಮುಗಿಸಿ ಬಂದು ನಾನು ನಾಯಕನನ್ನು ಎದುರಿಸುತ್ತೇನೆ. ಚಿತ್ರದ ಕೊನೆಯ ತನಕ ಉಳಿಯ ಬೇಕಾದ್ದರಿಂದ ನಾನು ಪ್ರಾಣರಕ್ಷಣೆಗಾಗಿ ಒಂದು ಕಾರು ಹತ್ತಿ ರಕ್ಷಿಸಿಕೊಳ್ಳುತ್ತೇನೆ.

ಕೊನೆಯಲ್ಲಿ ನಾಯಕನಿಗೆ ನನ್ನೊಬ್ಬನನ್ನೇ ನಿರ್ವಹಿಸಬೇಕಾದ ಸಂದರ್ಭ ಒದಗಿದೆ. ಇದರೊಂದಿಗೆ ಈ ಚಿತ್ರ ಕೊನೆಯ ಹಂತಕ್ಕೆ ಬಂದಿದೆ. ಅವನು ನನ್ನನ್ನು ಒಂದು ಐನೂರು ಬಾರಿ ಗುದ್ದಿ ಕೆಸರಿಗೆ ತಳ್ಳಿ ಬಿಟ್ಟಿದ್ದಾನೆ. ನಾನು ಅಷ್ಟೇನೂ ಪಡಪೋಶಿಯಲ್ಲವೆಂದು ತೋರಿಸಲು ಐದಾರು ಬಾರಿ ನಾಯಕನಿಗೆ ಗುದ್ದುವ ಅವಕಾಶ ನನಗೂ ಸಿಗುತ್ತದೆ. ಆದರೂ ಕೆಸರಿನ ಹೊಂಡಕ್ಕೆ ಬಿದ್ದು ಆ ಗಬ್ಬುನಾತದೊಳಗೆ ಸಾಯುವುದೇ ನನ್ನ ವಿಧಿ. ಅದು ಚಿತ್ರಕಥೆ ಬರೆಯುವುದಕ್ಕೆ ಮೊದಲೇ ನಿರ್ಮಾಪಕರೂ ನಿರ್ದೇಶಕರೂ ಪರಸ್ಪರ ಮಾತನಾಡಿ ನಿರ್ಧರಿಸಿದ್ದೂ ಅಲಂಘನೀಯವೂ ಆದ ನಿಯಮವಾಗಿತ್ತು. ನಿರ್ಮಾಪಕರೂ ನಿರ್ದೇಶಕರೂ ಸರ್ವಶಕ್ತ ದೇವರುಗಳು.
ನಿರ್ದೇಶಕರ ಸೂಚನೆಗಳ ಪ್ರಕಾರವಾದರೂ ನಾನು ನಾಯಕನ ನಗುಮೊಗದ ಮುಗ್ಧ ಹೆಂಡತಿಯನ್ನು ಕೊಂದೆ. ಶವವನ್ನೆತ್ತಿ ಮರೀನಾ ಬೀಚಿನಲ್ಲಿ ಎಸೆದುಬಿಟ್ಟೆ.

ಫ್ಲಾಷ್ ಬ್ಯಾಕ್ : ನಾನು ನಾಯಕನ ಅಮ್ಮನನ್ನು ಬಯಸಿದೆ. ವಶಪಡಿಸಿಕೊಳ್ಳಲು ಪ್ರಯತ್ನಿಸಿದೆ. ಆ ಸಾಧ್ವಿ ನನ್ನ ತಲೆಯನ್ನು ಕಾಲುದೀಪದಿಂದ ಹೊಡೆದು ನನ್ನನ್ನು ಓಡಿಸಿದಳು. ಬ್ರೇಸಿಯರ್ ಹರಿದು ಹೋಗಿ ಏದುಸಿರು ಬಿಡುತ್ತ ಅಳುವ ಸ್ಥಿತಿಯಲ್ಲಿ ಅವಳನ್ನು ಕಂಡು ಸಂದೇಹ ಪಟ್ಟು ನಾಯಕನ ತಂದೆ ಆತ್ಮಹತ್ಯೆ ಮಾಡಿಕೊಂಡ.
ನಾಯಕನ ತಂಗಿ ಕುರುಡಿ. ನಾನು ಅವಳನ್ನು ರೇಪ್ ಮಾಡಿದೆ. ನಾಯಕನು ನನ್ನ ಕೋಟಿಗಳನ್ನು ನಾಶಪಡಿಸಿದ. ಸಿಟ್ಟು ಬಾರದಿರುತ್ತದೆಯೆ? ನಾಯಕನು ಪೋಲೀಸ್ ಎಸ್. ಐ. ಆದರೂ ನನ್ನ ಕಳ್ಳಸಾಗಾಣಿಕೆಯ ಬಗ್ಗೆ ಕಂಡು ಹಿಡಿಯಬೇಕಿತ್ತೆ? ಆ ಕಾರಣದಿಂದ ನಾನು ಪ್ರತೀಕಾರ ತೆಗೆದುಕೊಳ್ಳಬಯಸಿದೆ. ಬಲಾತ್ಕಾರ ಮಾಡಿಯೂ ನಾನು ನಿಲ್ಲಿಸಲಿಲ್ಲ. ನಿಲ್ಲಿಸಬಾರದು. ಸಿನಿಮಾದ ರೀತಿಯೇ ಹಾಗೆ. ಕುರುಡಿಯಾದ ಒಬ್ಬ ಹೆಣ್ಣುಮಗಳು. ( ಹದಿನೇಳರ ಹರೆಯದವಳು ! ಗೊತ್ತೇ? ಪಾರದರ್ಶಕವಾದ ಒಂದು ಮಂದಹಾಸದಂತೆ ಕೋಮಲವಾದ ಹದಿನೇಳು!) ನನ್ನನ್ನು ಗುರುತಿಸಲಾರಳೆಂದು ಗೊತ್ತಿದ್ದೂ ಕ್ರೌರ್ಯಕ್ಕೆ ಒಂದು ಸಾಕ್ಷಿಯಿರಲೆಂದು ಅವಳ ಕುತ್ತಿಗೆಗೆ ಒಂದು ಹಗ್ಗ ಬಿಗಿದು ನೇತಾಡಿಸಿಯೇ ನಾನು ಹಿಂದೆ ಸರಿದೆ. ನಂತರ ಫೋನ್ ಮಾಡಿ ಪೋಲೀಸಿಗೆ ತಿಳಿಸಿದೆ…

ಪೋಲೀಸಿನ ಜತೆಗೆ ನಾನು ಫೋನಿನಲ್ಲಿ : ಕ್ರಾಸ್ ರೋಡಿನ ಸನ್ ರೈಸ್ ಅಪಾರ್ಟ್ಮೆಂಟಿನಲ್ಲಿ ಒಂದು ಕೊಲೆ ನಡೆದಿದೆ. ಪೋಲೀಸ್ ಎಸ್.ಐ. ನಿತಿನ್ ಅವರ ತಂಗಿ ಕೊಲೆಗೀಡಾದವರು. ತಂಗಿ ಆಕೆಯ ಪ್ರಿಯಕರನ ಜತೆಗೆ ಅಷ್ಟೇನೂ ಒಳ್ಳೆಯದಲ್ಲದ ಸ್ಥಿತಿಯಲ್ಲಿ ಕಾಣಿಸಿಕೊಂಡದ್ದರಿಂದ ನಿತಿನ್ ಆಕೆಯನ್ನು ಕೊಂದಿದ್ದಾನೆ.

ನಿತಿನ್ ಜತೆಗೆ ಫೋನಿನಲ್ಲಿ ನಾನು : ನಿತಿನ್, ಬೇಗ ಬಾ. ನಿನ್ನ ತಂಗಿಯ ಕೊಲೆಯಾಗಿದೆ.
ನಿತಿನ್ ಬಂದ . ಪೋಲೀಸ್ ಬಂದರು. ನಿತಿನ್ ಅರೆಸ್ಟಾದ. ಕಥೆ ಮುಂದುವರೆಯಿತು.

ಕಥೆ ಮುಂದುವರೆಯುವುದಕ್ಕೆ ಮೊದಲೇ ಮುದಗಿಕ್ ಎಂಬ ಹೆಸರಿನಲ್ಲಿ ಹಿಂದೆ ಮಲೆಯಾಳದಲ್ಲಿ ಒಬ್ಬ ಸಿನಿಮಾ ವಿಮರ್ಶೆ ಬರೆಯುತ್ತಿದ್ದ. ಒಬ್ಬ ಹಿಂದಿ ವಿಲ್ಲನ್ ಮಲೆಯಾಳ ಹೇಗೆ ಓದುತ್ತಾನೆ ಎಂದಾಗಿರಬಹುದು ಪ್ರಶ್ನೆ. ಲೋ ! ಒಳ್ಳೆಯ ವಿಲ್ಲನ್‌ಗಳು ಎಲ್ಲ ಭಾಷೆಗಳಲ್ಲೂ ಓದುತ್ತಾರೆ. ಒಳ್ಳೆಯ ವಿಲ್ಲನ್‌ಗಳ ಹಾಗೆ ಕಾಮೆಡಿ ಗೊತ್ತೇನೋ ಅಸ್ರಾಣಿಗೂ ಮನೋರಮಾಗೂ ನಾಗೇಶ್‌ಗೂ ( ನಾಗೇಶನನ್ನು ಬಿಡು, ಟಿಯಾನ್ ಉಗ್ರನೂ ಕೂಡಾ ಅಗತ್ಯ ಬಿದ್ದರೆ ವಿಲ್ಲನ್ ಆದಾನು), ಇನ್ನಸೆಂಟ್‌ಗೂ ಕಲಾಭವನ್ ಮಣಿಗೂ ? ಹೋಗು, ಹೋಗಿ ಕಲಿ, ಖಾದರ್‌ಖಾನ್‌ನ ಶಿಸ್ತನ್ನೂ ಶಕ್ತಿಕಪೂರ್‌ನ ಕ್ರಮಗಳನ್ನೂ.. ಹೊಟ್ಟೆಗೆ ನಾಯಕನು ತುಳಿದಾಗ, ಕೆಸರಲ್ಲಿ ಮಲಗುವಾಗ ನನ್ನ ಈ ಚಿಂತೆ ತುಂಬಿದ ಆಲೋಚನೆಗಳು. ಇದರಿಂದ ಏನು ಸ್ಪಷ್ಟವಾಗುತ್ತದೆ? ನಾನೂ ಒಬ್ಬ ಅಚ್ಚ ಮಲೆಯಾಳಿ ಎಂದಾಗಿರಬಹುದು. ಛೀ ! ಛೀ! ಛೀ! ಸಿಕ್ಕ ಸಕ್ಕಿದ್ದಕ್ಕೆಲ್ಲಾ ಛೀ ಛೀ! ಎಂದು ಶಬ್ದ ಮಾಡುವುದು ಆ ಬಂಗಾಳಿಗಳು.. ಇದರಿಂದ ಏನನ್ನಿಸುತ್ತದೆ?

ಮುದಗಿಕ್ಕನ ಬಗ್ಗೆ ಮಾತನಾಡುವಾ. ಆದರೆ ಈ ಕೆಸರು ಥೂ ಗಬ್ಬು ನಾತ..! ವಿಲ್ಲನ್‌ಗಳ ಅವಸ್ಥೆಯೆಂದರೆ ಇದೇ .ಹಿಂದಿನ ಕಾಲದಲ್ಲಿ( ಬಲಾತ್ಕಾರ, ನೀರಾಟ ಎಂಬಿವುಗಳ ಮೂಲಕ ) ಪಡೆದ ಸಂತೋಷಗಳಿಗೆ ಚಿತ್ರಕಥೆಗಾರನ ದಿವ್ಯತೆ ಹಾಗೂ ಕೊನೆಯಿಲ್ಲದ ಮಧ್ಯಪ್ರವೇಶಗಳು ಕೊಡುವ ರೌರವ ನರಕಗಳು. ನಾಯಕ ನನ್ನ ಬಳಿ ಇನ್ನೂ ಬಂದು ಮುಟ್ಟಿಲ್ಲ. ಸ್ಲೋಮೋಷನ್ ಸಾಯಲಿ. ಮೆಲ್ಲನೆ ಹರಿದಾಡುತ್ತ ಬಂದ ಅವನು ನನ್ನನ್ನು ಎತ್ತಿ ಹಿಡಿದು ನೆಲದ ಮೇಲೆ ಒಗೆದರೆ ಮಾತ್ರವೇ ನನಗೆ ಕೆಸರಿನಿಂದ ಮುಕ್ತಿ ಸಿಕ್ಕೀತು ಅಲ್ಲಿಯ ವರೆಗೆ ತಾಳ್ಮೆಯಿಂದಿದ್ದು ಮನೋಸಾಮ್ರಾಜ್ಯದ ರಾಜನಾಗಿರಬಹುದು. ಇದರೆಡೆಯಲ್ಲಿ ಅಡಗಿಸಿಕೊಳ್ಳಲಾರದ ಒಂದು ಸಂತೋಷ ಏನೆಂದು ಹೇಳಿದರೆ ನಾಯಕನೂ ಜೋರಾಗಿ ಆರ್ಭಟಿಸುತ್ತ ನನ್ನ ಮೇಲೆ ಹಾರಿ ಕೆಸರಿಗೆ ಬಿದ್ದೇ ಆಗಬೇಕು ಎನ್ನುವುದು. ಗಬ್ಬು ನಾತವನ್ನು ಅವನೂ ಅನುಭವಿಸಲಿ. ವಿಲ್ಲನ್ ಆಗಿ ಬದಲಾದರೆ ಉಂಟಾಗುವ ಮನಸ್ಸಿನ ಕೆಟ್ಟ ಸಂಚಾರಗಳು. ಛೀ ಛೀ ಛೀ…ಲೋ, ವಿಲ್ಲನ್ ಕೂಡಾ ಮನುಷ್ಯನೆಂದು ಕಲ್ಪಿಸಿಕೊಂಡರೆ ಉತ್ತರ ಸುಲಭ. ಆ ಬರುವ ನಾಯಕನೂ ಸ್ವಲ್ಪ ಸಮಯ ಕಳೆದಾಗ ವಿಲ್ಲನ್ ಆದಾನು. ಅದು ಪ್ರಪಂಚದ ಒಂದು ಒಳಸಂಚು.
ಕೆಸರೊಳಗೆ ಮೈಮರೆತು ಮಲಗಿ ಕಲ್ಪನೆಗಳಲ್ಲಿ ಮುಳುಗಿರಲು ಒಂದು ಸುಖವಿದೆ. ಈ ಸುಖ ನಾಯಕರಿಗೆ ಸಿಗಲಾರದು.ಅವರು ಯಾವಾಗಲೂ ಓಡಾಡುತ್ತಲೇ ಇರಬೇಕು.

ಕೆಸರು ಒಂದು ತಂಪಾದ ಅನುಭವ ನೀಡುವ ಹಳೆಯದರ ಹಿತವಾದ ನೆನಪು. ಮಣ್ಣನ್ನು ಬುಡಮೇಲು ಮಾಡಿ ಕಲಸಿದ ಒಂದು ಜೈವಿಕತೆ. ಕಲಕಿದ ಕೆಸರು ನೀರಿನಲಿ ಲೋಕವೂ ಬೀಜವೂ ಗಾಳಿಯ ಅಲೆಗಳ ಸಂಗೀತವೂ ಅನೇಕರ ಅಸ್ಥಿಗಳು ಕರಗಿದ ದೈವೀಕ ನಡೆಗಳೂ ಬೇರುಗಳನ್ನು ದಾಖಲೀಕರಿಸುವ ಗುರುತುಗಳೂ ಇವೆ.

ಇಲ್ಲಿಯ ತನಕ ತಲುಪಿದಾಗ ನಿಮಗೆ ಸ್ವಲ್ಪ ಅರ್ಥವಾಗಿರಬಹುದಲ್ಲವೆ? ಇದುವೇ ಮಲೆಯಾಳದ ಒಂದು ದೋಷ. ಅದರ ಒಂದು ಸುತ್ತಿ ಬಳಸಿ ಮಾತನಾಡುವ ಗುಣವೂ, ಅಲಂಕಾರ ಭ್ರಾಂತಿಯೂ ಜಾರುವ ಗುಣವೂ ಅಡಗಿಸುವ ಗುಣವೂ ಯಾವ ಲ್ಯಾಟಿನ್ ಅಮೆರಿಕಾದವನಿಗೂ ಚೆನ್ನಾಗಿ ಅರ್ಥವಾದೀತು. ಅದೇ ಮಾರಾಯರೇ, ನಾನೊಬ್ಬ ಮಲೆಯಾಳಿ ಅಂತ.. ಗುಟ್ಟಾಗಿರಲಿ. ಒಬ್ಬ ಹಿಂದಿ ವಿಲ್ಲನ್ ಮಲೆಯಾಳಿಯೆಂದು ಹೇಳಕೂಡದು. ಹೇಳಿದರೆ ನಮ್ಮಂಥವರನ್ನು ಯಾರೂ ಅಲ್ಲಿ ಮೂಸಲಾರರು. ನಮಗಿದ್ದ ಬೆಲೆ ಹೋದೀತು. ಟೊಪ್ಪಿ ಕೆಳಗೆ ಬಿದ್ದರೆ ಅದನ್ನು ನೋಡಿ ನಕ್ಕು ಕೂಗಲು ಮಾತ್ರ ನಮ್ಮವರು ಜಾಣರು. ಕೈಗೆ ಸಿಕ್ಕಿದವರು ಟೊಪ್ಪಿ ತಿರುಗಿ ಕೊಡಲಾರರು ಎಂದು ಮಾತ್ರವಲ್ಲ, ಯಾವುದಾದರೂ ಗುಡ್ಡದ ತುದಿಗೆ ಹತ್ತುವ ಹಾಗೆಯೂ ಮಾಡಿಯಾರು. ಮತ್ತೆ ಆ ಟೊಪ್ಪಿಯನ್ನು ತೆಗೆದು ಕೊಡಲು ಯಾವುದಾದರೂ ಮಂಗವೇ ಬರಬೇಕಾದೀತು. ಮಲೆಯಾಳವೆನ್ನುವುದು ಬುಡಮೇಲಾಗುತ್ತಿರುವ, ಬೇರುಗಳೇ ನಾಶವಾಗುತ್ತಿರುವ ಭಾಷೆ-ಸಂಸ್ಕೃತಿ.ಅದಕ್ಕೆ ಸ್ವತಂತ್ರವಾಗಿ ಯಾವುದೇ ನೆಲೆಯಿಲ್ಲ. ಇದು ನನ್ನ ಅಭಿಪ್ರಾಯವಲ್ಲ.ವಿದ್ವಾಂಸರದ್ದು. ಲೋ, ನಾನೊಂದುವೇಳೆ ಜೀವದಲ್ಲಿ ಉಳಿಯುವಂತಾಗಲಿ.ಈ ಭೂಲೋಕದಲ್ಲಿ ಆರೆಂಟು ಭಾಷೆಗಳಾದರೂ ಕಲಿಯದಿದ್ದರೆ ಆ ಮಲೆಯಾಳಿಯ ಗತಿ..ಥೂ…ನಾಯಕ ಹತ್ತಿರ ಬಂದಾಯಿತು. ಅದಕ್ಕೆ ಮುಂಚೆಯೇ ಮುದಗಿಕ್ಕನ್ನು ಉಪಸಂಹಾರ ಮಾಡಿಬಿಡೋಣ.

ವಿಮರ್ಶೆಯ ವಂಚನೆ ತಪ್ಪುಗಳಿಂದ ತಪ್ಪುಗಳತ್ತ ಸಾಗುವ ವಿಲ್ಲನ್‌ನನ್ನು ಕೊನೆಗೆ ಪೋಲಿಸ್ ಅರೆಸ್ಟ್ ಮಾಡುತ್ತಾರೆ. ಶುಭಂ ತೋರಿಸುತ್ತಾರೆ. ದರ್ಶಕರು ಗಲಗಲ ಶಬ್ದ ಮಾಡುತ್ತ  ಬಿಟ್ಟುಹೋಗುತ್ತಾರೆ. ಒಬ್ಬ ವ್ಯಕ್ತಿ ಮಾಡಿಟ್ಟ ದುಷ್ಟಕೃತ್ಯಗಳನ್ನು ಕೆಳಗಿಳಿಸಿ ಸುಖವಾಗಿ ವಿಶ್ರಮಿಸಲಿರುವ ತಂಗುದಾಣ, ಅಥವಾ ಅಚಿತಿಮ ನರಕವೆಂಬಂತೆ ಆ ಪೋಲಿಸ್ ಸ್ಟೇಷನ್. ಪೋಲಿಸ್ ಅರೆಸ್ಟ್ ಮಾಡಿದ ವಿಲ್ಲನ್‌ನನ್ನು ಜೈಲಿಗೆ ಹಾಕುವುದರೊಂದಿಗೆ ಅವನ ಪಾಪಗಳೆಲ್ಲಾ ಮುಗಿದವೆಂದೆ? ಈ ರೀತಿಯ ಕೆಲವು ಮೊನಚಾದ ಪ್ರಶ್ನೆಗಳೊಂದಿಗೆ ಮುದಗಿಕ್ ತನ್ನ ಸಿನಿಮಾ ವಿಮರ್ಶೆ ಮುಗಿಸಿದ್ದ. ಅದರಲ್ಲಿರುವ ಬೌದ್ಧಿಕತೆ ಮತ್ತು ಸಾಧ್ಯತೆಗಳನ್ನು ಸಿನಿಮಾದವರು ಸ್ವೀಕರಿಸಿದ್ದರಿಂದ ಉಂಟಾದ ವಿಲ್ಲನ್‌ಗಳ ದುರವಸ್ಥೆ-ಪತನ ಮತ್ತು ಮುಗಿಯದ ಸಂಕಟಗಳು ಮುಂದುವರೆದು ನೀವು ಅದನ್ನುಆಸ್ವಾದಿಸಲು ಹೋಗುತ್ತಿದ್ದೀರಾ.

ನಾಯಕನು ನನ್ನನ್ನು ಕೆಸರಲ್ಲಿ ದೂಡಿ ಹೊಡೆದು ( ಡಿಂ ಡುಂ ಟರ‍್ರ್..) ಸೌಂಡ್ ಟ್ರಾಕಿನ ಉದಾರವಾದ ಶಕ್ತಿಯಿಲ್ಲದಿದ್ದರೆ ನಾಯಕರುಗಳಿಗೆ ಪೌರುಷದ ಆಪತ್ಕಾರಿ ಸಮಸ್ಯೆಗಳನ್ನು ಎದುರಿಸªಬೇಕಾಗಿ ಬರುತ್ತಿತ್ತು. ಹೆಂಡತಿಯನ್ನು ಕೊಂದದ್ದು, ತಂಗಿಯನ್ನು ದಂಡಿಸಿದ್ದು, ಜೈಲಿಗೆ ಕಳುಹಿಸಿ ತನ್ನ ಮಾನಹಾನಿ ಮಾಡಿದ್ದು- ಇವೆಲ್ಲವೂ ನಾಯಕನ ಕ್ಷುಬ್ಧ ಮನಸ್ಸಿನಲ್ಲಿ ಶಾಟ್‌ಗಳಾಗಿ ಈ ಹೊತ್ತು ಹಾದು ಹೊಗುತ್ತ ಅವನು ಆರ್ಭಟಿಸುತ್ತ ನನ್ನನ್ನು ನೇತಾಡಿಸಿಕೊಂಡು ರಸ್ತೆಗೆ ಎಸೆದು ( ಕೆಸರಿನ ವಾಸನೆಯಿಂದ ಬಿಡುಗಡೆ, ಥ್ಯಾಂಕ್ಸ್ ನಾಯಕಾ, ಕೆಲವು ಚಿತ್ರಗಳಲ್ಲಿ ನಾನು ಮಳೆಯಲ್ಲಿ ಮಲಗುವುದೂ ಇದೆ. ಅಥವಾ ಹಳೆಯ ಟಯರುಗಳು ಅಥವಾ ಖಾಲಿಯಾದ ವೈನ್ ಬಾಟಲಿಗಳ ನಡುವೆ. ವಿಲ್ಲನ್‌ನ ಹಣೆಬರಹ. ಅನುಭವಿಸಲೇ ಬೇಕು..) ಓಡಿ ಬಂದು ಒಂದು ಶೂಲ ತೆಗೆದುಕೊಂಡು ನನ್ನ ಎದೆಗೆ ಬೀಸಿ ಒಗೆಯುವುದೂ( ಇಲ್ಲಿ ಸಮಕಾಲೀನ ರಾಜಕೀಯಾಸಕ್ತಿಯೂ ನಿರ್ದೇಶಕನ ಜಾಣತನವೂ.. ಈ ಶೂಲವು ನಾಯಕನಿಗೆ ಎಲ್ಲಿಂದ ಸಿಕ್ಕಿತು ಎಂದು ಮಾತ್ರ ಯಾರೂ ಕೇಳುವುದಿಲ್ಲಯ್ಯಾ) ತಕ್ಷಣವೇ ಪ್ರತ್ಯಕ್ಷವಾಗಿ ಕಮೀಷನರ್ ಅರುಣ್ ‘ಕೂಡದು ನಿತಿನ್, ಕಾನೂನು ಕೈಗೆತ್ತಿಕೊಳ್ಳಕೂಡದು. ಅವನನ್ನು ಕಾನೂನಿಗೆ ಒಪ್ಪಿಸುವಾ’ ಎಂದು ಕೂಗಿ ಹೇಳುವುದರೊಂದಿಗೆ ನನಗೋ ಸುಮ್ಮನೆ ಮಲಗಿದ್ದರೆ ಸಾಕಿತ್ತು. ನಾಯಕ ಥೂ ಎಂದು ಉಗಿದು ಶೂಲವನ್ನಲ್ಲಿ ಇಟ್ಟು ತನ್ನ ಹೊಸ ಪ್ರೇಯಸಿಯತ್ತ ನಡೆದಾಗ ನಾನು ನನ್ನ ಅಜ್ಞಾನದಿಂದ ಆ ಶೂಲವನ್ನು ಕೈಗೆತ್ತಿಕೊಂಡು ನಾಯಕನ ಹಿಂದಯೇ ಓಡಿಹೋದಾಗ ಅದನ್ನು ನೋಡಿದ ಕಂತ್ರಿ ಕಮೀಷನರ್ ಕೂಗಿ ಗಲಾಟೆಯೆಬ್ಬಿಸಿ ನನಗೆ ಮಾತನಾಡಲು ಕೂಡಾ ಅವಕಾಶ ನೀಡದೆ ಗನ್ ತೆಗೆದುಕೊಂಡು ಟಿಶ್ಶೋ ಟಿಶ್ಶೆಂದು…ಒಬ್ಬ ವಿಲ್ಲನ್‌ನ ಹಣೆಬರಹವನ್ನು  ಹೀಗೆ ಬದಲಾಯಿಸಿದ್ದು ಆ ಮುದಗಿಕ್ಕ್..ಮಹಾಬುದ್ಧಿವಂತನಾದ ನನಗೆ ಕೊನೆಯಲ್ಲಿ ಒಬ್ಬ ಮೂರ್ಖನಾಗಿ ಸಾಯಬೇಕಾಗಿ ಬರುವ ಈ ಆಕಸ್ಮಿಕತೆಗೆ ಕಾಲವೂ ಸಿನಿಮಾ ಚರಿತ್ರೆಯೂ ಮುದಗಿಕ್‌ನ್ನು ಕ್ಷಮಿಸದಿರಲಿ.

ಸುಮಾರು ಐನೂರು ಸಿನಿಮಾಗಳಲ್ಲಿ ನಾನು ಹೀಗೆ ಬುದ್ಧಿಯಿಲ್ಲದ ಅಂತ್ಯ ಕಾಣುವುದನ್ನು ಸಣ್ಣ ಸಣ್ಣ ಬದಲಾವಣೆಗಳೊಂದಿಗಾದರೂ, ನೀವು ನೋಡಿರುವಿರಿ. ಪೆಟ್ಟು ತಿಂದು ಮೂಳೆ ಮುರಿದು ಮಲಗಿದ್ದ ನಾನು ಆ ಶೂಲವನ್ನೆತ್ತಿಕೊಂಡು , ಅಷ್ಟು ಜೋರಾಗಿ ಓಡಿದ್ದು ಯಾಕಾಗಿತ್ತೆಂದು ಯಾವ ಬುದ್ಧಿಜೀವಿಯೂ ಕೇಳಿದ್ದಾಗಿ ನನಗೆ ತಿಳಿದಿಲ್ಲ .ನಾಯಕನನ್ನು ಉಪಾಯದಿಂದ ಇರಿದು ಕೊಲ್ಲುವುದು ನನ್ನ ಉದ್ದೇಶವಾಗಿರಲಿಲ್ಲ. ಸರಿಯಾದ ಸಂಗತಿಗಳನ್ನೇ ಮರು ಓದಿನ ಮೂಲಕ ತಲೆಕೆಳಗಾಗಿಸುವ ಬುದ್ಧಿಜೀವಿಗಳೇ, ಮೂಳೆ ಮುರಿದು ಬಿದ್ದಿದ್ದ ನಾನು ಓಡುವಾಗ ಚುಚ್ಚಿ ಎಳೆಯಲೆಂದು ತೆಗೆದುಕೊಂಡದ್ದಾಗಿತ್ತು ಶೂಲವನ್ನು. ಹಾಗಿದ್ದಮೇಲೆ ಶೂಲವಿಲ್ಲದೆ ಸುಮ್ಮನೆ ಹಾಗೆಯೇ ಕಾಲೆಳೆದುಕೊಂಡು ಸಹಜವಾಗಿ ಹೋಗಿದ್ದರಾಗುತ್ತಿರಲಿಲ್ಲವೇ? ಪ್ರಶ್ನೆ ನ್ಯಾಯವೇ.

ಉತ್ತರ : ಹೊಸ ಪ್ರೇಯಸಿ ಸಿಕ್ಕಿದ ನಾಯಕನಿಗೆ ನನ್ನ ಬಗ್ಗೆ ಗಮನವಿರಲಾರದೆಂಬುದು ನಿಶ್ಚಿತ. ಓಡಿಯೇ ಬಿಡುತ್ತಿದ್ದ. ನನಗೆ ನಾಯಕನ ಮುಂದೆ ಹೋಗಿ ನಿಂತು ಹೆಮ್ಮೆಯಿಂದ ಹೇಳಬೇಕಿತ್ತು : ‘ಸರಿ, ನಾನು ನಿಮ್ಮ ಹೆಂಡತಿಯನ್ನು ಕೊಂದೆ. ತಂಗಿಯನ್ನೂ ಕೊಂದೆ. ಅಮ್ಮನನ್ನು ಅಪಮಾನಿಸಿದೆ. ಅದಕ್ಕೆ ನೀವು ನನ್ನನ್ನು ಗುದ್ದಿ ಗುದ್ದಿ ಪುಡಿ ಮಾಡಿ ಬದುಕಲು ಅನರ್ಹನನ್ನಾಗಿ ಮಾಡಿದಿರಿ. ಸೇಡು ಅನ್ನುವುದು ನನ್ನ ಮೂಲಕ ನಿಮಗೆ ಬಿದ್ದು ಸಿಕ್ಕಿತೇ? ಬಿಸಿಯಪ್ಪದ ಹಾಗಿರುವ ಪ್ರೇಯಸಿ ಸಿಕ್ಕಿದ್ದಾಳಲ್ಲವೆ? ಹೋಗಿ. ಚೆನ್ನಾಗಿ ಮಜಾಮಾಡಿ. ಅಪರೂಪಕ್ಕಾದರೂ ಈ ಸಾಧುಪ್ರಾಣಿಯನ್ನು ನೆನಪು ಮಾಡಿಕೊಳ್ಳಿರಿ, ಏನು? ಆಯುಷ್ಮಾನ್ ಭವಃ

ವಿಲ್ಲನ್ ಮತ್ತು ಸಮುದಾಯ ಸಿನಿಮಾದ ಆರಂಭದಲ್ಲಿ ನಾನು ಅತ್ಯಂತ ಬುದ್ಧಿವಂತನಾಗಿ ವರ್ತಿಸಿದ್ದೆನೆಂದು ನಿಮಗೆ ಅರ್ಥವಾಗಿರಬೇಕು. ನಾಯಕನು ನನ್ನನ್ನು ಅರೆಸ್ಟ್ ಮಾಡಿ ನನ್ನ ಕಳ್ಳ ವ್ಯಾಪಾರಕ್ಕೆ ಹೊಂಡ ತೋಡುವನೆಂದು ತಿಳಿದ ಕೂಡಲೇ ನಾನು ಓಡಿ ಹೋಗಿ ಅವನ ಹೆಂಡತಿಯನ್ನು ಹಿಡಿದೆ. ಅಲ್ಲಿಂದ ತಿರುಗಿ ಬಂದ ಕೂಡಲೇ ಒಂದು ಮಹಾಸಮ್ಮೇಳನ ಕರೆದು ಸಾಧು ಸನ್ಯಾಸಿಗಳಿಗೆ ಅಕ್ಕಿ ವಿತರಣೆ ಮಾಡಿದೆ. ಆ ಮೇಲೆ ನಾನು ಒಂದು ಪಂಚತಾರಾ ಹೋಟೆಲಿನಲ್ಲಿ ಒಬ್ಬ ಸುಂದಂರಿಯೊಂದಿಗೆ ಮಲಗಿದೆ. ಅದರ ಎಲ್ಲ ವಿವರಗಳನ್ನು ನಿಮಗೆ ತೋರಿಸಿಯೂ ಇದ್ದೇನೆ. ಪ್ರೇಕ್ಷಕರಿಗೆ ನಿರಾಶೆಯಾಗಬಾರದಲ್ಲವೇ ಎಂದು ಎಣಿಸಿಯಾಗಿತ್ತು ನಾನು ಹಾಗೆ ಮಾಡಿದ್ದು. ಹೋಟೆಲ್ ಕೋಣೆಯ ಬೆಚ್ಚಗಿನ ವಾತಾವರಣದಿಂದ ಹೊರಗೆ ಬಂದ ಕೂಡಲೇ ನಾನು ಏಡ್ಸ್ ನಿರ್ಮೂಲನ ಸಮ್ಮೇಳನದ ಉದ್ಘಾಟನೆ ಮಾಡಿದೆ. ಓಡಿ ಹೋಗಿ ಕುಷ್ಠರೋಗಿಗಳಿಗೆ ಸಮಾಧಾನ ಹೇಳಿ ಭರವಸೆಯಿತ್ತೆ. ಹೌದು, ನಾಯಕನ ತಂಗಿಯನ್ನು ನಾನು ರೇಪ್ ಮಾಡಿದೆ. ನನಗೆ ಬೇರೆ ದಾರಿಯಿರಲಿಲ್ಲ. ಹೆಂಡತಿಯನ್ನು ಕೊಂದು ತೋರಿಸಿದರೂ ಪಾಠ ಕಲಿಯದ ನಾಯಕನಿಗೆ ನಾನು ಇನ್ನೇನು ತಾನೇ ಮಾಡಬಹುದಿತ್ತು ಹೇಳಿ ? ಅವನ ತಂಗಿಯಿಂದ ಹಿಂದಿರುಗಿ ಬಂದ ಮೇಲೆ ನಾನೊಂದು ಸಾಮೂಹಿಕ ವಿವಾಹದ ನೇತೃತ್ವ ವಹಿಸಿದೆ.

ಸಿನಿಮಾ ವಿಲ್ಲನ್ ಇತ್ಯಾದಿಗಳನ್ನು ಒಂದಷ್ಟು ಹೊತ್ತು ಬದಿಗಿರಿಸೋಣ. ಸಾಮೂಹಿಕ ವಿವಾಹದ ಬಗ್ಗೆ ನನಗೆ ಕೆಲವು ವಿಚಾರಗಳನ್ನು ಹೇಳಲಿಕ್ಕಿದೆ. ನಾನು ಅಪರೂಪಕ್ಕೊಮ್ಮೆಯಾದರೂ ಕೇರಳಕ್ಕೆ ಭೇಟಿ ನೀಡುವವನಲ್ಲವೇನೋ? ಮುಂಡನ್ನು ತಲೆಯ ಮೇಲೆ ಇಟ್ಟುಕೊಂಡು ಎಂದು ಮಾತ್ರ ವ್ಯತ್ಯಾಸ. ಸಿನಿಮಾದವರನ್ನು ಕಂಡರೆ ಬಟ್ಟೆ ಕಳಚಿ ನಿಲ್ಲುವಷ್ಟು ಪ್ರೀತ್ಯಾದರಗಳು ಕೇರಳದವರಿಗೆ. ಅದನ್ನೂ ಆಮೇಲೆ ಮಾತನಾಡುವಾ. ಸಾಮೂಹಿಕ ವಿವಾಹದ ಬಗ್ಗೆ ನೆನಪಿಸಿಕೊಳ್ಳುವಾಗಲೆಲ್ಲ ನನಗೆ ನೈತಿಕ ರೋಷ ಬರುತ್ತದೆ. ಏದುಬ್ಬಸ ಬಿಡುವಂತಾಗುತ್ತದೆ. ಯಾವ ನಗರ ಸೀಮೆಯಲ್ಲಿ ವಾಸಿಸಿದವನಾದರೂ ಯಾವ ಸುಖಭೋಗಗಳನ್ನು ಅನುಭವಿಸಿದವನಾದರೂ ಒಳಗೊಳಗೇ ನಾನು ಅಪ್ಪಟ ಗ್ರಾಮೀಣ ಸ್ವಭಾವದವನು. ಆದ್ದರಿಂದ ಸಾಮೂಹಿಕ ವಿವಾಹದ ಬಗ್ಗೆ ಕೆಲವೆಲ್ಲಾ ಸಂಗತಿಗಳನ್ನು ಕೇಳಬಯಸುತ್ತೇನೆ… ಅಲ್ಲಾ ಓ ಮಹಾಮನುಷ್ಯರೇ, ಸಾಮೂಹಿಕ ವಿವಾಹ ಮಾಡಿಕೊಂಡ ಯಾರಾದರೂ ವಧೂವರರು ಈಗ ಎಲ್ಲಾದರೂ ಒಟ್ಟಿಗೆ ಬದುಕುತ್ತಿರುವವರು ಇದ್ದಾರೆಯೇ? ನಾನು ವಿಲ್ಲನ್ ಹೌದು. ಒಪ್ಪಿದೆ. ನಾನು ಹೇಳುವುದೆಲ್ಲ ಲೊಟ್ಟೆಯೇ. ಬಲಾತ್ಕಾರ ಮಾಡುತ್ತೇನೆ. ಕಳ್ಳವ್ಯಾಪಾರ ಮಾಡುತ್ತೇನೆ. ಆದರೆ ನೀವು? ಸುಮ್ಮನೆ ನನ್ನ ಬಾಯಲ್ಲಿ ಏನಾದರೂ ಬರಿಸಬೇಡಿ.
ಸಾಮೂಹಿಕ ವಿವಾಹದ ಮುಂಚಿನ ಒಂದು ದೃಶ್ಯ.
ಹಗಲು.
ರಸ್ತೆ.
ವರ ಮತ್ತು ವಧು.
ವಧುವಿನ ಬಳಿ ವರ : ಫಿಫ್ಟಿ ಫಿಫ್ಟಿ ನಮ್ಮ ನಮ್ಮೊಳಗಿನ ಒಪ್ಪಂದ. ಬುದ್ಧಿಯಿಲ್ಲದವರು ಏನನ್ನಾದರೂ ನನ್ನ ಕೈಯಿಂದ ನಿನ್ನ ಕತ್ತಿಗೆ ಕಟ್ಟಿಸಿಯಾರು. ಕೆಲವೊಮ್ಮೆ ಒಂದಿಷ್ಟು ಹಣವನ್ನೂ ಕೊಟ್ಟಾರು. ಅದನ್ನೆಲ್ಲ ಅವರು ತಮ್ಮ ಪ್ರತಿಷ್ಠೆಗೋಸ್ಕರ ಮಾಡುತ್ತಾರೆ ಗೊತ್ತಾ? ನೀನು ಬಹಳ ಸಂತೋಷದಿಂದ ಆ ಸ್ಟೇಜಿನಿಂದ ಕೆಳಗಿಳಿದು ಹೊಟ್ಟೆ ಬಿರಿಯುವಷ್ಟು ಊಟ ಮಾಡಿ  ಸಿಕ್ಕಿದ್ದರಲ್ಲಿ ಅರ್ಧ ಕೊಡದೆ ಮಾಯವಾದರೆ ಯಾವ ಉರುಳಕ್ಕುನ್ನಿನ ಬಸ್ ಸ್ಟ್ಯಾಂಡಾದರೂ ಸರಿ, ನಿನ್ನನ್ನು ನಾನು ಹಿಡಿದೇನು. ಹಾಗೇನಾದರೂ ಉದ್ದೇಶ ಇದ್ದರೆ ಅದನ್ನು ಈಗಲೇ ಮರೆತುಬಿಡು.

ವಧು : ಅಲ್ಲ, ನಿನಗೇನಾಗಿದೆ ? ಲೋ, ಇಲ್ಲಿ ಕೇಳು. ತಿರುವನಂತಪುರದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲೂ ನಾನು ಭಾಗವಹಿಸಿದ್ದೆ. ಇನ್ನೀಗ ಡೆಲ್ಲಿಗೂ ಬುಕ್ ಮಾಡಿದ್ದೇನೆ. ಅದೇನು ನನಗೆ ಇಷ್ಟೊಂದು ಬುಕ್ಕಿಂಗ್ ಅಂತಲೋ? ನನ್ನ ಪ್ರಾಮಾಣಿಕ ನೋಟ-ಸ್ವಭಾವದ ಕಾರಣದಿಂದಾಗಿ, ಗೊತ್ತಾಯ್ತಾ? ನೀನು ಸಮಾಧಾನವಾಗಿರು. ನನ್ನ ಕತ್ತಿಗೆ ಮಾಲೆ ಹಾಕುವಾಗ ಏನೂ ಗೊಂದಲ-ಆತಂಕ ತೋರಿಸಬೇಡ. ಒಂದು ವ್ಯವಹಾರ ಮಾಡುವಾಗ ಅದರಲ್ಲಿ ಸತ್ಯ-ಪ್ರಾಮಾಣಿಕತೆ ಇರಬೇಕೆಂದು ನಾವೆಲ್ಲ ಕಲಿತದ್ದೇ ಅಲ್ಲವೇ?
ಇನ್ನು ನಾನು ಹೇಳಬೇಕಾದದ್ದೇನಾದರೂ ಇದೆಯೇನಯ್ಯ? ಹೀಗಿದ್ದರೂ ನಾನೇ ವಿಲ್ಲನ್, ನಾನೇ ಸಾಯುವವನು ( ಕೊಲ್ಲಲ್ಪಡುವವನು) ಆಗಿಬಿಡುವ ಚಿತ್ರಕಥೆಯ ಸಾವಿರದೊಂದು ಬಾರಿ ಪುನರಾವರ್ತಿಸಿದ ವಿಧಾನವನ್ನು ಬದಲಾಯಿಸಲು ಯಾಕೆ ನಿಮ್ಮಲಿ ದಯೆ ಹುಟ್ಟಿಕೊಳ್ಳಲಿಲ್ಲ ಸರ್?

ವಿಲ್ಲನ್ ನ ಆರಂಭಕಾಲ ನಾನು ಸುಮಾರು ಐನೂರು ಸಿನಿಮಾಗಳಲ್ಲಿ ವಿಲ್ಲನ್ ಆಗಿದ್ದೆ. ಆರಂಭಕಾಲವನ್ನು ನೆನಪಿಸಿಕೊಳ್ಳ ತೊಡಗಿದರೆ ನನಗೆ ಸಂತೋಷ-ದುಃಖಗಳು ಒಟ್ಟಿಗೇ ಬಂದು ಬಿಡುತ್ತವೆ. ಆ ಕಾಲದಲ್ಲಿ ವಿಲ್ಲನ್‌ನ ಸಿನಿಮಾ ಬದುಕು ಸುಮಾರಿಗೆ ಚೆನ್ನಾಗಿಯೇ ಇತ್ತು. ಒಂದು ಸಣ್ಣ ವಾಸಸ್ಥಳದಲ್ಲಿ ಸೌಖ್ಯವೂ ಆಹ್ಲಾದವೂ ಇರುತ್ತಿತ್ತು. ಕೊನೆಯ ತ್ಯಾಗಪೂರ್ಣತೆಯಲ್ಲಿ ಉಜ್ವಲತೆ ಇರುತ್ತಿತ್ತು. ನಾಯಕನ ವಿಷಯದಲ್ಲಿ ಇರುವ ಕುತೂಹಲ ಸಣ್ಣ ಪ್ರಮಾಣದಲ್ಲಾದರೂ ವಿಲ್ಲನ್ ಬಗ್ಗೆಯೂ ಪ್ರೇಕ್ಷಕರಿಗಿರುತ್ತಿತ್ತು. ತುದಿಯಲ್ಲಿ ಸುರುಳಿ ಮಾಡಿಟ್ಟ ಮೀಸೆ, ಒರಟು ಬಟ್ಟೆಯ ಉಡುಪು, ಗತ್ತಿನ ನಡಿಗೆ, ಚುಟ್ಟಾ ಸೇದುವ ಅಭ್ಯಾಸ, ಮುಖದ ಮೇಲೆ ನಿರಿಗೆಗಳು, ಅಲ್ಲದಿದ್ದರೆ ಎಡಗಣ್ಣಿಗೆ ಸ್ವಲ್ಪ ಅಂಟು ಹಚ್ಚಿ ಭೀಭತ್ಸವಾಗಿ ಮಾಡುವುದು- ಇವು ಮಾತ್ರವಾಗಿದ್ದವು ವಿಲ್ಲನ್ ನನ್ನು ಮೊದಲ ನೋಟದಲ್ಲೇ ಗುರುತಿಸಲಿಕ್ಕಿರುವ ನಿರುಪದ್ರವಿ ಗುರುತುಗಳು. ಬಾಹ್ಯರೂಪದ ಈ ಭೀತಿಜನಕವಾದ ಗುರುತುಗಳನ್ನು ಪ್ರೇಕ್ಷಕರು ಏನೂ ಕಷ್ಟವಿಲ್ಲದೆ ಸ್ವೀಕರಿಸಿದ್ದರು ಕೂಡಾ. ಯಾರೂ ಹತ್ತಿರವಿಲ್ಲದ ಸಮಯದಲ್ಲಿ , ಅದೂ ಕುಳಿತು ಗುನುಗುವುದೋ ಅಥವಾ ಹಲ್ಲು ಕಡಿಯುವುದೋ ಮಾಡಬೇಕಾದ ಕ್ಲೊಸಪ್ಪುಗಳಲ್ಲಿ ಮಾತ್ರವೇ ಅಂದಿನ ವಿಲ್ಲನ್ ಮುಖ ಭೀಭತ್ಸವಾಗಿ ಕಾಣುವಂತಿತ್ತು. ಇತರರನ್ನು ಅನಾವಶ್ಯಕವಾಗಿ ನಡುಗಿಸಿ, ನರ ರೋಗಿಗಳಾಗಿ ಮಾಡದಿರುವ ಸೌಜನ್ಯ ( ಒಳ್ಳೆಯ ಮನಸ್ಸು) ವನ್ನು ವಿಲ್ಲನ್ ಎಚ್ಚರವಾಗಿಟ್ಟುಕೊಳ್ಳುತ್ತಿದ್ದ. ಎಲ್ಲಾ ಸಿನಿಮಾಗಳಲ್ಲಿ ಇವನಿಗೊಬ್ಬಳು ಸ್ನೇಹಮಯಿಯಾದ ಹೆಂಡತಿಯಿರುತ್ತಿದ್ದಳು. ಅವಳು ಇವನಿಗೋಸ್ಕರ ಮನಃಪೂರ್ತಿಯಾಗಿ ಪ್ರಾರ್ಥಿಸುವುದನ್ನು ಅಡಗಿ ನಿಂತು ಕೇಳಿ, ಅವನು ರೋಮಾಂಚನಗೊಳ್ಳುತ್ತಿದ್ದ. ಆ ಮೂಲಕ ಇವನ ಬಗ್ಗೆ ಸಹಾನುಭೂತಿಯ ಬೆಳಕನ್ನು ಹಾಯಿಸುವ ಅವಕಾಶ ಪ್ರೇಕ್ಷಕರಿಗೆ ಸಿಗುತ್ತಿತ್ತು. ಅಂದು ಹೀಗೆಲ್ಲ ಇವನು ಕೊಲೆ-ರೇಪುಗಳನ್ನು ಮಾಡುತ್ತಿರಲಿಲ್ಲ. ಸುಮಾರಾಗಿರುವ ಒಬ್ಬ ಸ್ಥೂಲಕಾಯದ ಹೊಕ್ಕುಳು ತೋರಿಸುವ ಹುಡುಗಿಯ ಒಂದು ಡಾನ್ಸ್ ನೋಡಲು ಹೋಗಿ ಕುಳಿತುಕೊಳ್ಳುವುದೊಂದೇ ಇವನ ಸ್ವಭಾವದಲ್ಲಿನ ದೋಷ. ಮತ್ತೆ ಅಸೂಯೆ – ಚಾಡಿ ಮೊದಲಾದ ಚಿಲ್ಲರೆ ಕಾಟಗಳ ಮೂಲಕ ನಾಯಕ-ನಾಯಕಿಯರ ನಡುವೆ ಅಥವಾ-ಕುಟುಂಬದಲ್ಲಿ- ಬಿರುಕು ಸೃಷ್ಟಿಸುವುದು, ವ್ಯಾಪಾರಿಯಾಗಿದ್ದರೆ ಅಳತೆಯಲ್ಲೂ ತೂಕದಲ್ಲೂ ಕಪಟ ತೋರಿಸುವುದು, ನೆರೆಹೊರೆಯ ಬಡ ಕುಟುಂಬಗಳಿಗೆ ಸಾಲ ಕೊಡದಿರುವುದು, ಯಾರದ್ದಾದರೂ ಗಡಿಯನ್ನಾಕ್ರಮಿಸಿ, ಸ್ವತಃ ತನ್ನ ಮನೆಯನ್ನು ವಿಸ್ತರಿಸಿಕೊಳ್ಳುವುದು,ಇಂಥ ಸಣ್ಣ ಪುಟ್ಟ ಕಾಟಗಳನ್ನು ಬಿಟ್ಟರೆ ಬೇರೇನೂ ಅವನು ಮಾಡುತ್ತಿರಲಿಲ್ಲ.

ರಕ್ತ ಚೆಲ್ಲದೆ, ಯಾರನ್ನೂ ಕೊಲ್ಲದೆ ಸಿನಿಮಾಗಳು ಅಂತ್ಯ ತಲುಪುತ್ತಿದ್ದವು. ಇವನೋ ಕಥಾಂತ್ಯದಲ್ಲಿ ದೊಡ್ಡದಾಗಿ ಮನಃಪರಿವರ್ತನೆ ಹೊಂದಿ ಮೊಣಕಾಲೂರಿ ನಾಯಕ ಮತ್ತು ನಾಯಕಿಗೆ ಮಾಡಿದ ಅನ್ಯಾಯಗಳಿಗಾಗಿ ಕ್ಷಮೆ ಯಾಚಿಸಿ, ಅವರು ಅದನ್ನು ತುಂಬು ಮನಸ್ಸಿನಿಂದ ಕ್ಷಮಿಸಿ ಇವನು ಒಳ್ಳೆಯ ಜೀವನ ನಡೆಸಲು ದಾರಿ ಮಾಡಿ ಕೊಡುತ್ತಿದ್ದರು. ಇವನು ವಿಲ್ಲನ್ ವೇಷ ಕಳಚಿ ಕೂಲಿ ಕೆಲಸಕ್ಕೆ ಹೋಗಿ ಕುಟುಂಬದಲ್ಲಿ ನಗು ಅರಳಿಸುವುದನ್ನು ತೋರಿಸಿ ಪ್ರೇಕ್ಷಕರನ್ನು ಸಂತೃಪ್ತರನ್ನಾಗಿಸಿಯೇ, ಅವರ ಮನಸ್ಸಿನೊಳಗೆ ಒಂದು ಸಣ್ಣ ಜಾಗ ನೀಡಿದ ನಂತರವೇ ನಿರ್ದೇಶಕನು ಸಿನಿಮಾವನ್ನು ಕೊನೆಗೊಳಿಸುತ್ತಿದ್ದ. ನಾಯಕ ನಾಯಕಿಯರ ಮುಂದೆ ಕ್ಷಮೆ ಬೇಡುವಾಗಲೂ ಇವನೊಬ್ಬ ಬುದ್ಧಿವಂತ ವ್ಯಕ್ತಿಯ ಹಾಗೆ ಕಾಣಿಸುತ್ತಿದ್ದ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬುದ್ಧಿಯಿಲ್ಲದವನು ಕ್ಷಮೆ ಕೇಳಿದರೆ ಪ್ರಯೋಜನವೇನು ಅಲ್ಲವೆ? ಅಲ್ಲದೆ ಆ ಕಾಲದಲ್ಲಿ, ಮಹಾಧೈರ್ಯಶಾಲಿಯೂ ಮಹಾ ಬುದ್ಧಿವಂತನೂ ಆದ ಇವನು ಯಾವುದಾದರೂ ಗುಡ್ಡದ ತುದಿಯಲ್ಲಿ ನಿಂತು ಒಂದು ದೀರ್ಘ ಭಾಷಣ ಮಾಡಿ ಹಾರಿ ಸಾಯುತ್ತಾನೆ. ನಾನಿದೋ ನನ್ನ ವಿಧಿಯನ್ನು ಸ್ವೀಕರಿಸುತ್ತಿದ್ದೇನೆ…ಎಂಬ ನೈತಿಕಸಂದೇಶದ ಪ್ರತಿಧ್ವನಿಯೊಂದಿಗೆ.
ಕಾಲಕ್ರಮೇಣ ವಿಲ್ಲನ್ ಕಾಲ ಎಷ್ಟೊಂದು ಬೇಗ ಬದಲಾಗಿದೆ.. ಆಗಿದೆ ಅನ್ನುವುದಕ್ಕಿಂತ ಬದಲಾಯಿಸಿರುವ ಸಾಧ್ಯತೆಯೇ ಹೆಚ್ಚು ಎಂದು ಹೆಚ್ಚು ಆಲೋಚಿಸದೆಯೇ ಗೊತ್ತಾಗುವಂಥದ್ದು. ಕಾಲವು ಕರಾಳವಾಗಿ ಹಿಡಿಯುವುದು ಮತ್ತು ಪರಿವರ್ತಿಸುವುದು ವಿಲ್ಲನ್‌ಗಳನ್ನು ಮಾತ್ರವೇ? ಆಗಿರಬಹುದು. ನಾನು ಈ ನಡುವೆ ನನ್ನನ್ನು ಆಗಾಗ ಚಿವುಟಿ ನೋಡಿ ಕೇಳುತ್ತೇನೆ: ಈ ನಾನು ಹಿಂದಿನ ನಾನೇ ಅಲ್ಲವೇ? ಹೌದು ಹೌದು. ಹಾಗಾದರೆ ತೊಂದರೆಯಾಗಿದ್ದು ಎಲ್ಲಿ? ತಲೆಬುಡ ಸಿಕ್ಕದೆ ನಾನಿಲ್ಲಿ ಕುಳಿತಿದ್ದೇನೆ. ದಿನೇ ದಿನೇ ನಾವು ಹೀಗೆ ತಂತ್ರಜ್ಞಾನದಲ್ಲಿ ಮುಂದೆ ಹೋಗಿ ಹೋಗಿ ದೃಶ್ಯಗಳ ಮತ್ತು ಶ್ರವ್ಯಗಳ ಸಮೃದ್ಧಿಂಯಲ್ಲಿ ಹೊಟ್ಟೆ ಬಿರಿಯುವಷ್ಟು ಉಂಡು ಉಪವಾಸವೆಂದರೇನೆಂದು ಗೊತ್ತಿಲ್ಲದ ಮನುಷ್ಯರಾಗಿ ಬದಲಾಗಿದ್ದೇವೆ. ಹಾಗಾದ್ದರಿಂದ ತೋರುವುದಾಗಿರಬಹುದೇ ಈ ಬಲಾತ್ಕಾರ, ಕೊಲೆ, ಕ್ರೌರ್ಯಗಳೇನೂ ದೊಡ್ಡದಲ್ಲ ಎಂದು? ಹಳೆಯ ನಾನು ಹೊಸ ವಿಲ್ಲನ್ ಆಗಿ ನನ್ನ ಜತೆಗೆ ನಡೆಯುವ ಸಂಗಾತಿಯನ್ನು ಕಡಿದು ಕೊಚ್ಚಿ ಮುಖದಿಂದ ರಕ್ತ ಇಳಿಯುವ ಹಾಗೆ ಮಾಡೋಣ, ಒಂದಷ್ಟು ಸತ್ಕೃತ್ಯಗಳಲ್ಲಿ ಭಾಗಿಯಾಗೋಣ ಎಂದಾಗಿರಬಹುದಲ್ಲವೇ ಎಲ್ಲವೂ?
ಆದರೂ ಒಬ್ಬ ಮಂದಬುದ್ಧಿಯಾಗಿ ಅದೂ ಬುದ್ಧಿವಂತರ ಈ ಕಾಲದಲ್ಲಿ ತಲೆತಗ್ಗಿಸಿ ಸಾಯುವುದರಲ್ಲಿ ನನಗಾಗುವ ಕಸಿವಿಸಿಯ ಬಗ್ಗೆ ನಿಮಗೆ ಹೇಳದೆ ಸಾಧ್ಯವಿಲ್ಲ.. ಸಾಧ್ಯವಿಲ್ಲ..ಇಲ್ಲವೇ ಇಲ್ಲ.

ನಾನು ೧೯೭೬ರಲ್ಲಿ ಓದಿದ ಎಂ.ಮುಕುಂದರ ಒಂದು ಕಥೆಯ ನೆನಪಾಗುತ್ತಿದೆ. ‘ಬಾಯಾರಿಕೆಯಾದವನಿಗೆ ನೀರು ಕೊಡಲು ನೀನು ಯಾರೋ, ದೇವರೇನು?’ ಎಂದು ಕೇಳಿ ಒಬ್ಬ ಮನುಷ್ಯ ಸ್ನೇಹಿಯನ್ನು ಕೆಲವರು ಸೇರಿ ಹೊಡೆಯುವುದು ಕಥೆಯ ಮುಖ್ಯ ಸಾರಾಂಶ ( ಹೆಚ್ಚು ಕಡಿಮೆ). ಅವತ್ತು ಇದು ಮುಕುಂದನ್ ಅವರ ಅತಿಭಾವುಕತೆ ಅಥವಾ ಫ್ಯಾಂಟಸಿ ಎಂದೆಲ್ಲ ಎಣಿಸಿದ್ದೆ ನಾನು. ಆದರೆ ಈಗ, ಹೊಸ ಕಾಲದ ಅಂಗಳದಲ್ಲಿ ಕುಳಿತಿದ್ದಾಗ ಅನ್ನಿಸುತ್ತಿದೆ ಅದು ಫ್ಯಾಂಟಸಿಯಲ್ಲ ಸತ್ಯವೇ ಎಂದು. ಹೌದು, ಬಾಯಾರಿದವನಿಗೆ ನೀರು ಕೊಡಬಾರದು. ರಸ್ತೆಯಲ್ಲಿ ಒದ್ದಾಡಿ ಸಾಯುತ್ತಿರುವವನನ್ನು ತಿರುಗಿಯೂ ನೋಡಬಾರದು. ನೋಡಿದರೆ ಕಟಕಟೆ, ಕೋರ್ಟು, ವಾದ, ಪ್ರತಿವಾದ, ಹಾಳಾಗುವ ಬದುಕು. ‘ಏನು ಗೆಳೆಯಾ, ಮುಖ ನೋಡಿದರೆ ಸುಸ್ತಾದಂತೆ ಕಾಣುತ್ತಿದೆ, ಊಟ ಮಾಡಲಿಲ್ಲವೇ?’ ಸ್ನೇಹಿತನ ಬಳಿ ಅವನ ದಣಿದ ಮುಖ ನೋಡಿ ಸಹಾನುಭೂತಿಯಿಂದ ಹೀಗೆ ಕೇಳಕೂಡದು. ಸ್ನೇಹಿತ ಉಪವಾಸ ಬಿದ್ದಿದ್ದಾನೆಂದು ಕೇಳಿ ಒಳಗೊಳಗೇ ಆನಂದಿಸುವುದು ನಿಮ್ಮ ಉದ್ದೇಶವೆಂಬುದು ಅದರಲ್ಲಿರುವ ಅಪರಾಧ.

ಈ ನಡುವೆ ಕೇರಳದಲ್ಲಿ ನಡೆದ ಎರಡು-ಮೂರು ಚರ್ಚೆಗಳನ್ನು ಕೇಳಲು ನಾನು ಹೋಗಿ ಕುಳಿತೆ. ಲೋಕದ ಆರೋಗ್ಯದ ಕುರಿತು ಅರ್ಥಮಾಡಿಕೊಳ್ಳಬೇಕಿದ್ದರೆ ಚರ್ಚೆಗಳ ಬಗ್ಗೆ ಕೇಳುವಾಗ ಒಪ್ಪಿಗೆಯ ಹೂಂಗುಟ್ಟುವಿಕೆ ಸಹಾಯ ಮಾಡೀತು. ವಾದ, ಪ್ರತಿವಾದ, ಉದ್ದೇಶಿತ ಅರ್ಥ ಎಂದು ಹೀಗೆ ಚರ್ಚೆಗಳ ಲೋಕ ವಿಸ್ತಾರವಾಗುತ್ತದೆ. ಆಶಯಗಳ ಬಗ್ಗೆ ಸಂತೋಷ ಪಡುವವನು ನೈರ್ಮಲ್ಯದ ಬಗ್ಗೆ ಕಲಿಯುತ್ತಾನೆ. ಏನು ಕಲಿತರೂ ಕೊನೆಗೆ ಸತ್ತು ಹೋಗುವುದು ನಿಶ್ಚಿತ. ವಿಲ್ಲನ್‌ಗಳಿಗೆ ಇದರ ಕುರಿತು ಇರುವ ವಿಪುಲ ಜ್ಞಾನದ ಒಂದಿಷ್ಟಾದರೂ ಅಂಶ ಬುದ್ಧಿವಂತರಾದ ಮನುಷ್ಯರಿಗಿದ್ದಿದ್ದರೆ ಅನ್ನುವುದು ಬೇರೆ ವಿಚಾರ.

ಬುದ್ಧಿ ಜೀವಿಗಳ ಚರ್ಚೆಯಲ್ಲಿ ಕೇಳಿದ್ದು ಮೊದಲ ಭಾಷಣಕಾರ ಮುಂದುವರೆಸುತ್ತಾನೆ : ವಾಸ್ಕೋಡಗಾಮನ ಹೆಸರಿನಲ್ಲಿರುವ ಎಲ್ಲವನ್ನೂ ಉಜ್ಜಿ ನಾಶ ಪಡಿಸ ಬೇಕು ನಾವು. ಅದು ಚಾರಿತ್ರಿಕ ಅಗತ್ಯ. ಕಡಲ ತೀರದಲ್ಲಿರುವ ಸ್ಮಾರಕವನ್ನು ಕೆಡವಿ ನಾಶ ಮಾಡಬೇಕು ನಾವು.
ನಾನು ಆಲೋಚಿಸಿದೆ : ಕಾಲ ಬದಲಾದಂತೆ ಮಂದಬುದ್ಧಿಗಳಾಗುವುದು ನಮ್ಮ ಹಾಗಿರುವ ವಿಲ್ಲನ್‌ಗಳು ಮಾತ್ರವಲ್ಲ. ಅದು ಸಂತೋಷಕರವಾದ ವಿಷಯವೇ. ಲೋ ಬುದ್ಧಿಗೇಡಿ ಭಾಷಣಕಾರನೇ, ಗಾಮಾ ತನ್ನ ಕರ್ತವ್ಯವನ್ನು ನೆರವೇರಿಸಿ ಹಿಂದೆ ಹೋದ. ಸ್ಮಾರಕಗಳು ನಮ್ಮ ಸ್ವಾರ್ಥವಾಗುವುದು ನಾವು ಬದುಕಿರುವ ತನಕ ಮಾತ್ರ. ನಾವೀಗ ಸ್ಮಾರಕವನ್ನು ಒಡೆದು ಕೆಡವಿದರೆ ಗಾಮಾಗೇನು ತೊಂದರೆ ? ಮದ್ರಾಸನ್ನು ಬದಲಾಯಿಸಿ ಚೆನ್ನೈ ಯಾಗಿ ಮಾಡಿದರೂ ಲೋಕವು ಮತ್ತೆಯೂ ಮದರಾಸಿಗೆ ಪತ್ರಗಳನ್ನು ಕಳಿಸಬಹುದು. ವಿಷಯವಿರುವುದು ಅಷ್ಟೇ.

ಎರಡನೆಯ ಭಾಷಣಕಾರ : ಕದ್ದು -ಕೊಂದು ನಮ್ಮ ರಾಜಕೀಯ ಮುಂದುವರೆಯುತ್ತಿದೆ. ಪರಮ ಪ್ರಧಾನವಾದ ರಾಜಕೀಯ ಸಮಸ್ಯೆಗಳುಂಟಾಗುವಾಗ ಅದನ್ನು ಮರೆಸಲು ವರ್ಷಗಳ ಹಿಂದಿನ ಒಂದು ಘಟನೆಯ ಮುಖ್ಯ ಪ್ರತಿವಾದಿಗಳನ್ನು ( ಅವರು ಅತಿ ಹತ್ತರವಿದ್ದವರೂ ಪ್ರತಿವಾದಿಗಳೆಂದು ಎಲ್ಲರಿಗೂ ತಿಳಿದಿದ್ದವರೇ ಆಗಿದ್ದರು.) ಅರೆಸ್ಟ್ ಮಾಡಿಯೋ ಅಲ್ಲದಿದ್ದರೆ ಶಾಲಾಮಕ್ಕಳಿಗಿರುವ ಮಧ್ಯಾಹ್ನದೂಟಕ್ಕೆ ವಿಷ ಬೆರೆಸಿದ ಸುದ್ದಿಯನ್ನು ಪ್ರಸಾರ ಮಾಡಿಯೋ ಗಮನ ತಪ್ಪಿಸುತ್ತಾರೆ.
ಆ ಎರಡನೆಯ ಭಾಷಣಕಾರನಿಗೆ ಧನ್ಯವಾದ ಹೇಳಲು ನನ್ನಲ್ಲಿ ಶಬ್ದಗಳಿಲ್ಲ. ವಾಹ್, ಸಿಕ್ಕಿತು ನನಗೇ .ಸಿಕ್ಕಿತೂ.. ಇಷ್ಟು ದಿನ ನಾನು ನಡೆಸಿದ ಹುಡುಕಾಟಕ್ಕೆ ಉತ್ತರ ಸಿಕ್ಕಿತೂ.. ಹೇಗೂ ಆಡಳಿತ ನಡೆಸುವವರು ಇತರ ಪ್ರಜಾ ಸಮಸ್ಯೆಗಳಿಂದ ಗಮನ ತಪ್ಪಿಸಲು ನನ್ನ ಹಾಗಿರುವ ಒಬ್ಬ ವಿಲ್ಲನ್‌ನನ್ನು ಹುಡುಕಿ ಹಿಡಿಯುತ್ತಾರೆ. ಯಾವುದಾದರೂ ಶಾಲೆಯ ಮಧ್ಯಾಹ್ನದೂಟಕ್ಕೆ ವಿಷ ಬೆರೆಸಿ ರೂಪಾಂತರಿಸುತ್ತಾರೆ. ಮೆಟಾಮೋರ್ಫೋಸಿಸ್. ಮುಖ್ಯ ಆರೋಪಿಯನ್ನು ಅರೆಸ್ಟ್ ಮಾಡಿದರು-ಮಾಡಿಲ್ಲ ಎಂಬಲ್ಲಿಯವರೆಗೆ ವಿಷಯಗಳನ್ನು ಕೊಂಡುಹೋಗುತ್ತಾರೆ. ವಿಲ್ಲನ್‌ಗೆ ಆಗಲೂ ಮಾತನಾಡಲು ಅವಕಾಶವಿಲ್ಲ. ಅವನೂ ಮನುಷ್ಯನಲ್ಲವೇ? ಆರೋಪಿ ನಾನಲ್ಲ, ನಾನಲ್ಲ..ಯಾರು ಕೇಳುತ್ತಾರೆ ? ಯಾರು ಯಾರನ್ನೂ ಅರೆಸ್ಟ್ ಮಾಡುವುದಿಲ್ಲ. ಅದುವೇ ಅದರೊಳಗಿನ ಸಂಚು. ಅಷ್ಟು ಹೊತ್ತಿಗೆ ಪ್ರಳಯದ ಹಾಗೆ ಇನ್ನೊಂದು ಸಮಸ್ಯೆ ಉದ್ಭವಿಸುತ್ತದೆ. ಮಧ್ಯಾಹ್ನದೂಟ ಮತ್ತು ವಿಷವನ್ನು ಪತ್ರಿಕೆಯವರು ಮರೆತಹಾಗೆ ಜನರೂ ಮರೆಯುತ್ತಾರೆ. ಬೇರೊಬ್ಬ ವಿಲ್ಲನ್ ವಸ್ತ್ರಾಭರಣಗಳನ್ನು ಧರಿಸಿ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಾನೆ. ಎಲ್ಲೇ ಆದರೂ ವಿಲ್ಲನ್‌ನ ಉಪಸ್ಥಿತಿ ಅನಿವಾರ್ಯ. ವಿಲ್ಲನ್‌ಗಳ ಸೇವೆಯನ್ನು ಬಳಸದೆ ಲೋಕವು ಮುಂದುವರೆಯುವುದು ಅಸಾಧ್ಯವೆಂದಲ್ಲವೇ?

ಹಾಗಿದ್ದ ಮೇಲೆ ಕೊನೆಗೋ? ಶೂಲವಾದರೆ ಅದನ್ನಾದರೂ ತೆಗೆದುಕೊಂಡು ವಿಲ್ಲನ್ ಒಮ್ಮೆ ಪ್ರತಿಕ್ರಿಯಿಸಲು ಹೊರಟಾಗ ಯಾವನೋ ಒಬ್ಬ ಬೇಕೂಫ ಟಿಶ್ಶೋ ಟಿಶ್ಶೋ..ಎಂದು… ನಾನು ವಿಲ್ಲನ್ ಅಲ್ಲ. ನನ್ನನ್ನು ವಿಲ್ಲನ್ ಆಗಿ ಮಾಡಿದ್ದು. ಇದನ್ನೆಲ್ಲ ಯಾರು ಕೇಳುತ್ತಾರೆ ! ಆ ಜಾಗದಲ್ಲಿ ಬಳಸಲ್ಪಟ್ಟ ಹಾಸ್ಯದ ವಿಡಂಬನೆಯಂತೆ ಸತ್ತು ಬೀಳಲು ವಿಧಿಸಲ್ಪಟ್ಟವನು ವಿಲ್ಲನ್
ನಿಜವಾದ ವಿಲ್ಲನ್ ಒಳಗೋ ಹೊರಗೋ ?

ನಿಜವಾದ ವಿಲ್ಲನ್ ಹೊರಗೆ ನಿಂತಿದ್ದಾನೆ. ಅದು ಅವನೋ ಇದು ಅವನೋ ಅಥವಾ ಎಲ್ಲರೂ ಅವನೋ ? ಸಂದೇಹಗಳನ್ನು ಸೃಷ್ಟಿಸಿ ಅವನು ಗುಂಪಿನಲ್ಲಿ ನಿಂತಿದ್ದಾನೆ. ಅವನು ಯಾವಾಗಲೂ ನೆಲ್ಲಿಮರಗಳ ನೆರಳಲ್ಲಿರುತ್ತಾನೆ..
ಒಂದು ಸಂಘಟನೆಯ ಖಾಸಗಿ ಮೀಟಿಂಗಿಗೆ ನಾನು ನಿಮ್ಮೆಲ್ಲರನ್ನೂ ಸವಿನಯ ಆಮಂತ್ರಿಸುತ್ತೇನೆ. ಕೇಳಿದ ನಂತರ ನಿರ್ಧರಿಸಿರಿ. ಯಾರು ನಿಜವಾದ ವಿಲ್ಲನ್ ಎಂದು. ಸಂಘಟನೆಯ ಶತ್ರುವಿಗೆ ಪಾಠ ಕಲಿಸಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲಿಕ್ಕಾಗಿ ಕರೆದ ಮೀಟಿಂಗ್ ಅದು.
ಅದಕ್ಕೆಲ್ಲ ಮೀಟಿಂಗ್ ಯಾಕಣ್ಣಾ? ಶತ್ರು ಪೀತಾಂಬರನಲ್ಲವೇ? ಅವನನ್ನು ಕೊಲ್ಲುವ ಜವಾಬ್ದಾರಿ ನನ್ನದು.
ನಿನಗೆ ನಂತರ ಅವಕಾಶ ಕೊಡುತ್ತೇನೆ. ಸದ್ಯಕ್ಕೆ ನೀನು ಸುಮ್ಮನೆ ಕುಳಿತುಕೋ. ನೀನು ಇದೇ ಊರಿನವನು. ಪೀತಾಂಬರನನ್ನು ಮುಗಿಸುವವನು ಈ ಊರಿನವನಾಗಿರಕೂಡದು. ಆ ಸತ್ಕಾರ್ಯಕ್ಕೆ ಈ ಬಾರಿ ನಾವು ವಿಶಾಲಾಕ್ಷನನ್ನು ನೇಮಿಸುತ್ತೇವೆ.
ಇದು ದೊಡ್ಡ ಮೋಸವಾಯಿತಲ್ಲಾ ಅಣ್ಣಾ. ನನ್ನ ದುಃಖವನ್ನು ನಾನೆಲ್ಲಿ ಬಚ್ಚಿಡಲಿ ? ( ಬಿಕ್ಕಿ ಬಿಕ್ಕಿ ಅಳುತ್ತಾನೆ) ವಿಶಾಲಾಕ್ಷ ಕೇವಲ ಮೂವತ್ತು ವರ್ಷ ವಯಸ್ಸಿನವನು. ಮದುವೆಯೂ ಆಗಿಲ್ಲ. ನನಗಾದರೆ ಹೆಂಡತಿ ಮಕ್ಕಳಿದ್ದಾರೆ. ನಾಲ್ಕು ಸಲ ಆಯ್ತು ನಾನು ಅವಕಾಶಕ್ಕಾಗಿ ಕಾಯುವುದು. ನಾಲ್ಕು ಸಲವೂ ನೀವು ಬೇರೆ ನಾಲ್ಕು ಮಂದಿಗೆ ಕೊಟ್ಟಿರಿ. ನಾನು ಎಷ್ಟು ಕಾಲ ಹೀಗೆ ಕೆಲಸ ಮಾಡಿ ನನ್ನ ಕುಟುಂಬವನ್ನು ಹೊರೆಯಬೇಕು ಸೆಕ್ರೆಟರಿಯಣ್ಣಾ? ಅದೂ ಒಮ್ಮೆ ಬದುಕಿ ಸಾಯುವ ತನಕ ತೆರಿಗೆ ಕೊಡಬೇಕಾದ ಕಾಲವಿದು ಎಂಬುದು ನೆನಪಿರಲಿ. ಪೀತಾಂಬರನನ್ನು ಕೊಲ್ಲುವ ಈ ಒಂದು ಅವಕಾಶವನ್ನು ನನಗೆ ಕೊಟ್ಟರೆ ನಾನು ಬಚಾವಾಗುತ್ತೇನೆ ಅಣ್ಣಾ. ನನ್ನ ಕುಟುಂಬವನ್ನು ಬಹಳ ಪ್ರೀತಿಯಿಂದ ಸಂಘಟನೆ ನೋಡಿಕೊಂಡೀತು. ಶಿಕ್ಷೆ ಮುಗಿದು ಜೈಲಿನಿಂದ ಹೊರಗೆ ಬಂದಾಗ ನನ್ನನ್ನು ಸ್ವಾಗತಿಸುವುದು, ಅನಂತರ ಸಿಗಬಹುದಾದ ಸಂಘಟನೆಯ ನಾಯಕತ್ವ.. ಓಹ್,.ಒಂದು ಅವಕಾಶ, ಕೊಲೆ ಮಾಡುವ ಒಂದೇ ಒಂದು ಅವಕಾಶ ನನಗೆ ಕೊಡಿ..ನನ್ನ ಕೈ ಬಿಡಬೇಡಿ..
ಹೀಗೆ ಗಂಟಲು ಹರಿಯದೆಯೂ ಅವಕಾಶ ತಾನಾಗಿಯೇ ಸಿಗುವುದು. ಜಿಲ್ಲಾವಾರು ವಿಷಯಗಳನ್ನು ನಿರ್ಧರಿಸುವ ಅನುಮತಿಯಷ್ಟೇ ನಮಗೆ ಈಗ ಇರುವುದು. ನಿಧಾನವಾಗಿ ನಮ್ಮ ಈ ಜಿಲ್ಲಾ ಸಂಘಟನೆಯು ರಾಜ್ಯಮಟ್ಟಕ್ಕೆ ಬೆಳೆಯುತ್ತದೆ. ವಿಫಲವಾಗದ ತಂತ್ರ ನೈಪುಣ್ಯದಿಮದ ಸಾವಕಾಶವಾಗಿ ಕೆಲಸ ಮಾಡಿ ಹೈಕಮಾಂಡಿನ ಹೊಗಳಿಕೆ ಮತ್ತು ಅಂಗೀಕಾರಗಳು ಸಿಗುವಂತೆ ಪ್ರಯತ್ನಿಸಬೇಕು. ನಮ್ಮ ಮಟ್ಟಿಗೆ ರಾಷ್ಟ್ರೀಯತೆ ಅಂದರೇನು? ಕೋಟ್ಟಯಂ ಜಿಲ್ಲೆಯ ವಿಶಾಲಾಕ್ಷನು ತ್ರಿಶ್ಶೂರು ಜಿಲ್ಲೆಯ ಸಂಘಟನಾ ವಿರೋಧಿಯನ್ನು ಹೊಡೆದರೆ ಅದುವೇ ನಮ್ಮ ರಾಷ್ಟ್ರೀಯತೆ–ದೃಢ ಪ್ರಜ್ಞೆ ಬೇರೂರಬೇಕು. ಅದು ಹಾಗೆ ಬೆಳೆದು ಮುಂದುವರೆದಾಗ ಇಲ್ಲಿದ್ದವರು ಹೋಗಿ ಹೈದರಾಬಾದಿನ ವಿರೋಧಿಯನ್ನು ಹೊಡೆಯುತ್ತಾನೆ. ಹಾಗೆ ರಾಷ್ಟ್ರೀಯತೆಯನ್ನು ನಾವು ವಿಶಾಲಮಟ್ಟಕ್ಕೆ ಕೊಂಡು ಹೋಗುತ್ತೇವೆ. ಬೀಳುವ ತಲೆಗಳ ಸಂಖ್ಯೆ ಹೆಚ್ಚಾಗುತ್ತದೆ. ಸಂಘಟನೆಯ ಬಲವು ಸಮೃದ್ಧವಾಗುತ್ತದೆ. ಆಗಲೇ ಆ ವಿಶಾಲಾಕ್ಷ, ಸರಿಯಾಗಿ ಹತ್ತು ಗಂಟೆಯ ಬಸ್ಸಿನಲ್ಲಿ ಆ ವಿರೋಧಿ ಹತ್ತುತ್ತಾನೆ. ನೀನೂ ಸಂಗಡಿಗರೂ ಜತೆಗೇ ಹತ್ತಬೇಕು. ಒಂದು ಸಮಸ್ಯೆ ಸೃಷ್ಟಿಸಿ ಬಸ್ಸಿನಲಿ ಗಲಾಟೆಯೆಬ್ಬಿಸಬೇಕು.ಆಗ ಬಸ್ಸು ನಿಲ್ಲತ್ತದೆ.ಅವನನ್ನು ಎಳೆದು ಹೊರಗೆ ಹಾಕಿ ಹೊಡೆಯುವ ಕೆಲಸ ಒಟ್ಟಿಗೆ ಆಗಬೇಕು. ಹಿಂದೆಯೇ ನಮ್ಮ ವಾಹನ ಇರುತ್ತದೆ. ಸುಮ್ಮನೆ ಹೊಡದರೆ ಸಾಲದು. ಕತ್ತು ಮುರಿದು ರುಂಡದಿಂದ ಬೇರ್ಪಡಿಸಬೇಕು. ಸತ್ತನೆಂದು ಖಚಿತವಾದ ನಂತರ ನಮ್ಮ ವಾಹನದೊಳಗೆ ಹಾಕಿ ಎಲ್ಲಿಗಾದರೂ ಒಯ್ಯಬೇಕು. ಉಳಿದ ಕೆಲಸಗಳನ್ನು ಸಂಘಟನೆ ನೋಡಿಕೊಳ್ಳುತ್ತದೆ.

ಅಯ್ಯೋ, ಅಯ್ಯೋ ನಾನು ಇದೆಂಥ ವಿಲ್ಲನ್? ಅಲ್ಲಾ, ನಾನು ವಿಲ್ಲನ್ ಹೌದೇ? ವಿಲ್ಲನ್‌ಗೆ ಸಂಬಂಧಿಸಿದ ಹಾಗೆ ಗಡಿ ಎಲ್ಲಿ? ಚಿತ್ರಕಥಾಕಾರರೇ, ನಿರ್ದೇಶಕರುಗಳೇ, ಅಪರೂಪಕ್ಕಾದರೂ ಬಂದು ನಮ್ಮ ಸಂಘಟನಾಸಭೆಗಳಲ್ಲಿ ಒಮ್ಮೆ ಕುಳಿತುಕೊಳ್ಳಬಾರದೇ? ಹಾಗಿದ್ದರೆ ವಿಲ್ಲನ್‌ಗಳನ್ನುಸಮೀಪಿಸುವುದರ ಬಗ್ಗೆ ನಿಮಗೆ ಹೊಸ ಪಾಠಗಳು ಸಿಕ್ಕಿಯಾವು.

ಮೂರನೆಯ ಮೀಟಿಂಗ್ ಸಾಹಿತಿಗಳದ್ದು. ನಲ್ವತ್ತೈದು ವರ್ಷಗಳಿಗೆ ಮೇಲ್ಪಟ್ಟು ಇರುವ ಯುವ ಸಾಹಿತಿಗಳ (ಮಹಿಳೆಯರೂ ಸೇರಿದಂತೆ) ಮೀಟಿಂಗ್. ಕತ್ತಲೆಯಲ್ಲಿ ಚಿಕ್ಕ ಚಿಕ್ಕ ಹಣತೆಗಳನ್ನು ಹಚ್ಚಿಟ್ಟು ಲೋಕಕ್ಕೆ ಮಾರ್ಗದರ್ಶನ ಮಾಡುವವರು ಬರಹಗಾರರು.
– ಅವನು ನನಗೆ ಯಾವಾಗಲೂ ಕರೆ ಮಾಡುತ್ತಾನೆ. ಯಾವಾಗಲೂ ಪತ್ರ ಬರೆಯುತ್ತಾನೆ. ಊಟಕ್ಕೆ ಬರಲೇ ಎಂದು ಕೇಳುತ್ತಾನೆ. ನಲ್ವತ್ತೈದು ವರ್ಷ ಪ್ರಾಯದ ನಾನೊಬ್ಬಳು ಯುವತಿಯಲ್ಲವೇ, ನನ್ನ ಹತ್ತಿರ ಹೀಗೆಲ್ಲ ಕೇಳುವುದು ಸರಿಯೇ?
ಇಲ್ಲ, ಎಂಥ ಸಾಂಸ್ಕೃತಿಕ ಪತನವಿದು ! ಅವನಿಗೆ ಬರೆದು ಪಾಠ ಕಲಿಸುವ ಜವಾಬ್ದಾರಿ ನನ್ನದು. ನೀನು ಯಾವತ್ತದ್ದರೂ ನನ್ನವಳು ಪ್ರಿಯೇ !
ಅವನೊಬ್ಬ ವಂಚಕ. ಇನ್ನೊಂದು ಪತ್ರಿಕೆಯಲ್ಲಿ ಬರಲಿದ್ದ ನನ್ನ ಸಂದರ್ಶನವನ್ನು ಅವನು ಮಧ್ಯೆಪ್ರವೇಶಿಸಿ ಬಾರದಂತೆ ಮಾಡಿದ.
ನಮ್ಮ ಎ ಈಗ ಪತ್ರಿಕಾ ಸಂಪಾದಕರಿಗೆ ವಿದೇಶಿ ವಸ್ತುಗಳನ್ನು ಕೊಟ್ಟು ತನ್ನ ಕಥೆ ಪ್ರಕಟವಾಗುವಂತೆ ಮಾಡುತ್ತಾನೆ.
ಬಿ ಯನ್ನು ಸಾಹಿತ್ಯ ಕ್ಷೇತ್ರದಿಂದ ಓಡಿಸಿಯೇ ಸಿದ್ಧ ನಾನು. ನಮ್ಮ ಸಿ ಇದ್ದಾನಲ್ಲ, ಅವನು ಲೇಖಕನೂ ಪತ್ರಿಕಾ ಸಂಪಾದಕನೂ ಆಗಿರುವುದರಿಂದ ನನ್ನ ಇಂಟರ್‌ವ್ಯೂಗೆ ಹಲವೆಡೆ ಕತ್ತರಿ ಪ್ರಯೋಗ ಮಾಡಿದ.

ಮೀಟಿಂಗಿನಲ್ಲಿ ಗುಸು ಗುಸು ಎದ್ದು ಜಗಳ ಹುಟ್ಟಿಕೊಂಡಿತು. ಅಲ್ಲಿ ಕೇಳಿದ ಒಂದು ವಿಷಯವೂ ನನಗೆ ಅರ್ಥವಾಗಲಿಲ್ಲ. ಅವರವರ ಧ್ವನಿ ಗಟ್ಟಿಯಾಗಿ ಕೇಳಲೆಂದು ಎಲ್ಲರೂ ಗಂಟಲು ಹರಿಯುತ್ತಿದ್ದರು. ಸಾಹಿತ್ಯವೆಂದರೆ ಗಂಟಲು ಹರಿಯುವಂತೆ ಕಿರಿಚುವುದೇ? ಸೃಜನಶೀಲತೆಯ ಔಷಧದ ನದಿಗಿಳಿದು ಮುಳುಗಿ ಎದ್ದು ಸೂರ್ಯನಿಗೆದುರು ನಿಂತು ಒಂದು ಪ್ರಾರ್ಥನೆ ಮಾಡಿ ನಮಿಸುವರ‍್ಯಾರನ್ನೂ ನಾನು ಆ ಗುಂಪಿನಲ್ಲಿ ಕಾಣಲಿಲ್ಲ. ದ್ವೇ಼ಷ-ಅಸೂಯೆಗಳ ಆ ಲೋಕದಲ್ಲಿ ಕುಳಿತುನಾನು ದಿಗ್ಭ್ರಮೆಗೊಂಡೆ. ಈ ನಾನು ಎಂಬ ನಾನು ಬದುಕಿದ್ದೇನೆಯೆ? ಅಕ್ಷರಗಳ ಬೆಳಕಿನಲ್ಲಿ ಕಾಣುತ್ತಿರುವುದು ಕೋರೆಹಲ್ಲುಗಳೋ ಅಥವಾ ರಕ್ತಪಿಪಾಸುಗಳೋ? ನನಗೇನೂ ಅರ್ಥವಾಗುವುದಿಲ್ಲವಯ್ಯಾ. ಕಲ್ಪನೆಯ ಗಡಿಗಳಿಲ್ಲದ, ಸಾತ್ವಿಕತೆಯಿರಬೇಕಾದಲ್ಲಿ ಪರದೂಷಣೆ ಹಾಗೂ ಕಾಲೆಳೆಯುವಿಕೆಯತ್ತ ಹೋದವರು ನಾಳೆ ಯೋಜನಾಬದ್ಧ ಕೊಲೆಗಳತ್ತ ಸಾಗಿದ ನನ್ನ ಹಾಗಿರುವ ವಿಲ್ಲನ್ ಗಳಿಗೇನು ಕೆಲಸ ?

ವಿಲ್ಲನ್‌ನ ವಿಧಿ ವಿಲ್ಲನ್ನಾನು ನಾಯಕನಾಗಿರುವ ಚಲನಚಿತ್ರವಿದು. ಎಲ್ಲಾ ವಿಲ್ಲನ್‌ಗಳಿಗೂ ಅವರದ್ದೇ ಆದ ಒಂದು ದಿವಸ ಬರುತ್ತದೆ. ನಾನೀಗ ವಿಲ್ಲನ್‌ನ ಅಂಗಿ ಕಳಚಿ ಸುಟ್ಟೂ ಆಗಿದೆ. ಈ ಚಿತ್ರವು ವಿಲ್ಲನ್ ಇಲ್ಲದ, ಜೀವನದ ಸಂಘರ್ಷಗಳಿಂದ ತುಂಬಿದ ಕಥೆಯ ಮೂಲಕ ಅರಳುತ್ತದೆ.
ಎಲ್ಲಿಂದಲೋ ಬಂದ ಸೌದೆ ಕಡಿಯುವವನಾದ, ಕಪ್ಪಗಿದ್ದರೂ ಸಭ್ಯನಂತಿರುವ ಮಧ್ಯವಯಸ್ಕನಾದ ನಾನು ಒಬ್ಬ ವಿಧವೆಗೂ ಆಕೆಯ ಮಗಳಿಗೂ ಆಶ್ರಯ ನೀಡುವವನಾಗುವುದು ( ಪ್ರೀತಿಯ ಹಸುರುಗುಡ್ಡಗಳಿಗೂ ಹಳದಿ ಹೊದ್ದುಕೊಂಡ ಬೆಳಗುಗಳಿಗೂ ಬೇಕಾಗಿ ಅನೇಕ ಫ್ರೇಮುಗಳು). ಕೇಳುವಾಗ ನೆನಪಾಗುವುದು ಪಿ.ಕೇಶವದೇವ್ ಅವರ ‘ಓಡದಿಂದ’ ಎಂಬ ಕಥೆ ಅಲ್ಲವೆ? ಅಲ್ಲಿ ರಿಕ್ಷಾದವನು. ಇಲ್ಲಿ ಸೌದೆ ಕಡಿಯುವವನು. ಅಲ್ಲಯ್ಯ, ಈ ಕಥೆಗಳು ಬದಲಾಗುವುದು ಎಲ್ಲಿ? ಕಾಲ- ವೇಷಗಳಷ್ಟೇ ( ವೇಷ ಕಟ್ಟುವುದು) ಬದಲಾಗುತ್ತವೆ.

ನಾನು ಹಗಲು-ರಾತ್ರಿಯೆನ್ನದೆ ಸೌದೆ ಕಡಿದೆ. ಆ ಅಮ್ಮನೂ ಮಗಳೂ ಚೆನ್ನಾಗಿ ಬದುಕಿದರು. ನಾನು ಸಸ್ಯಾಹಾರಿಯೂ ನಿರ್ಮಲಚಿತ್ತನೂ ಆಗಿ ಆ ಮನೆಯ ಚಾವಡಿಯಲ್ಲಿ ಕಾವಲು ಮಲಗಿದೆ. ಹಾಗೆ ಸ್ವಲ್ಪ ಕಾಲ ಹೋದಾಗ ನನ್ನ ಆಸೆಗಳು ಆ ವಿಧವೆಯಲ್ಲಿ ಮೊಗ್ಗು ಬಿಡಲಾರಂಭಿಸಿದವು.
– ನಿರ್ದೇಶಕರು ಹೇಳಿದರು : ‘ಅದು ಸಹಜವೇ. ಅದುಮಿಟ್ಟ ಆಸೆಗಳು ಆ ವಿಧವೆಯಲ್ಲಿ ಜಾಗೃತಗೊಳ್ಳುವ ಕ್ಷಣಕ್ಕೆ ನೀವು ಆಕರ್ಷಿತರಾದರೂ ಅಷ್ಟೇ ವೇಗದಲ್ಲಿ ಹಿಂದೆಗೆಯುವಿರಿ ಕೂಡಾ. ಚಿತ್ರಕಥೆಯಲ್ಲಿ ಅದೊಂದು ಪರಿಶುದ್ಧವಾದ ಬಯಕೆಯಾಗಿ ಕೊನೆಯ ವರೆಗೂ ನೆರವೇರದೆ ನಿಂತಿದೆ. ಬಯಕೆಗಳು ಸಿನಿಮಾದಲ್ಲಿ. ಹಾಗೆ ಉಂಟಾಗಿಯೇ ತೀರುತ್ತವೆ .ಒಂದು ಕನಸಿನ ಸಮೃದ್ಧಿಯೊಂದಿಗೆ.
– ನಾನೆಂದೆ : ‘ಆ ವಿಧವೆಯನ್ನು ಕನಸಿನಲ್ಲೂ ನಾನು ಬಯಸಲು ಸಾಧ್ಯವಿಲ್ಲ ಸರ್, ಮುಟ್ಟಿ ಅಶುದ್ಧ ಮಾಡಲಾರೆ.’ ಆ ಮೂಲಕ ನಾನು ಪುನಃ ವಿಲ್ಲನ್ ಆಗಬೇಕಾಯಿತು. ನಾನು ವಿಧವೆಯ ಮಗಳನ್ನು ಓದಿಸಬೇಕು, ಅವಳನ್ನು ಎಂ.ಬಿ.ಏ.ಪದವೀಧರೆಯನ್ನಾಗಿ ಮಾಡಬೇಕು ಎಂದು ನನ್ನಲ್ಲೇ ಹೇಳಿಕೊಂಡು ರೋಮಾಂಚನಗೊಳ್ಳಬೇಕು, ಬೆಳೆಸಿ ದೊಡ್ಡವಳನ್ನಾಗಿ ಮಾಡಬೇಕು. ಕೊನೆಗೆ ಅವಳನ್ನು ಅವಳ ಅಧ್ಯಾಪಕನೇ ಮದುವೆಯಾಗುತ್ತಾನೆ. ನಾನು ಅದನ್ನು ಸಂತೃಪ್ತಿಯಿಂದ ನೋಡಿ ಕೆಮ್ಮುತ್ತ ಕೆಮ್ಮುತ್ತ ಸಾಯುತ್ತೇನೆ. ಶುಭಂ.

– ನಿರ್ದೇಶಕರು ಹೇಳಿದರು : ಅದನ್ನೆಲ್ಲ ಬೇಕಾದ ಹಾಗೆ ಚಿತ್ರಕಥೆ ಬರೆಯುವವರು ¨ರೆದಿಟ್ಟಿದ್ದಾರೆ. ಆದರೆ, ಇದರಲ್ಲಿ ಸಂಘರ್ಷವೆಲ್ಲಿದೆ ? ಅದು ನನ್ನ ಟೆನ್‌ಶನ್. ಮತ್ತೆ ಒಂದು ಸಮಾಧಾನ ಎಂದರೆ ಚಿತ್ರಕಥೆ ಬರೆಯುವವರು ಸಂಘರ್ಷದ ಕೆಲವು ಸಾಧ್ಯತೆಗಳನ್ನು ಬಾಕಿ ಇಟ್ಟಿದ್ದಾರೆ ಎಂಬುದು. ಇನ್ನು ನಾನು ಚಿತ್ರಕಥೆಯ ಆಚೆಗೆ ದಾಟುತ್ತೇನೆ. ನಾನು ಹೇಳಿದ ಹಾಗೆ ನೀವು ಅಭಿನಯಿಸಿದರೆ ಸಾಕು. ಇಲ್ಲದಿದ್ದರೆ ಮಧ್ಯಂತರದಲ್ಲಿ ನಾನು ನಿಮ್ಮನ್ನು ಕೊಂದುಹಾಕಿಯೇನು. ನನ್ನ ಸಿನಿಮಾದಲ್ಲಿ ವಿಲ್ಲನ್ ಬೇಕು. ವಿಲ್ಲನ್ ಇಲ್ಲದಿದ್ದರೆ ಮತ್ತು ಅವನು ದಾರುಣವಾಗಿ ಕೊಲ್ಲಲ್ಪಡದೇ ಇದ್ದರೆ ಪ್ರೇಕ್ಷಕರು ಒಪ್ಪುವುದಿಲ್ಲ.

ಸಿನಿಮಾ ಮುಂದುವರೆಯುತ್ತದೆ. ನನ್ನ ಮಗಳು ನಂದಿತಾ ಅವಳ ಅಧ್ಯಾಪಕನನ್ನೇ ಮದುವೆಯಾದಳು. ನಾನಿನ್ನು ಹಿಂದಕ್ಕೆ ಹೋಗಲೇ ಬೇಕು. ನಾನು ಕಲ್ಯಾಣ ಮಂಟಪದಿಂದ ಓಡಿ ಮನೆಗೆ ಹೋಗಿ ನನ್ನ ಪುಟ್ಟಗಂಟು ಕಟ್ಟಿಕೊಂಡು, ಇನ್ನೆಲ್ಲಿಗೆ ಯಾತ್ರೆ ? ಗೊತ್ತಿಲ್ಲ.
ನಾನು ಗದ್ಗದ ಕಂಠದಿಂದ ಹೇಳಿದೆ : ಎಂದೋ ಒಮ್ಮೆ ನಿಮ್ಮ ಪರಿಚಯವಾಯಿತು. ನಾನು ನಿಮಗೋಸ್ಕರ ಕಷ್ಟಪಟ್ಟೆ. ಈಗ ನನ್ನ ಕರ್ತವ್ಯ ನಿರ್ವಹಿಸಿದ ಸಂತೃಪ್ತಿಯಿಂದ ನಾನು ನಿಮ್ಮಿಂದ ದೂರ ಹೋಗುತ್ತಿದ್ದೇನೆ. ನನ್ನ ನೆನಪಿನಲ್ಲಿ ನೀವು ಅಳಕೂಡದು.

ವಿಧವೆ ಹೇಳಿದಳು : ನಿಮ್ಮ ಸರಿಯಾದ ನಿರ್ಧಾರದ ಬಗ್ಗೆ ನನಗೆ ಅಪಾರ ಸಂತೋಷವಿದೆ. ನೀವು ಇನ್ನೂ ಇಲ್ಲಿ ಮುಂದುವರೆದರೆ ನನ್ನ ಅಳಿಯ ನಮ್ಮ ಮೇಲೆ ಸಂಶಯ ಪಡಲು ಅದು ಸಾಕು. ನೀವು ಮೊದಲೇ ವಿಲ್ಲನ್ ಆಗಿದ್ದುದು ಅದಕ್ಕೆ ಒಂದು ಮುಖ್ಯ ಕಾರಣ.
ನನಗೆ ಸುಮ್ಮನೆ ಒಮ್ಮೆ ಗಟ್ಟಿಯಾಗಿ ಅಳಬೇಕೆಂದು ತೋರಿತು. ಆದರೆ ಅಳುವುದು ಹೇಗೆಂದು ನನಗೆ ಮರೆತೇ ಹೋಗಿತ್ತು. ಅಷ್ಟು ಹೊತ್ತಿಗೆ ಅದೋ ಅಳಿಯ ಅಲ್ಲಿ ಆರ್ಭಟಿಸುತ್ತ ಅಟ್ಟಹಾಸದೊಂದಿಗೆ ಮಗಳನ್ನು ಹಿಡಿದೆಳೆದುಕೊಂಡು ಬರುತ್ತಿದ್ದಾನೆ.
ನಾನು ಕೇಳಿದೆ : ಮಗನೇ, ಏನಿದು ? ವಿವೇಕಿಯೂ ವಿದ್ಯಾಸಂಪನ್ನನೂ ಆದ ನೀನು ನನ್ನ ಮಗಳನ್ನು ಏಕೆ ಹೀಗೆ ಎಳೆದುಕೊಂಡು ಬರುತ್ತಿದ್ದೀ ?
ಅಳಿಯ : ಕುತ್ತೇ..ಕಮೀನೇ..
ಉಹುಂ, ಕೂಡದು. ನಾನವನನ್ನು ತಡೆದೆ. ಈ ಮಾತನ್ನು ಕೇಳಿ ಕೇಳಿ ನನಗೆ ಸಾಕಾಗಿದೆ. ಆದರೆ ಅದಕ್ಕೆ ನಾನು ಮಾಡಿದ ಅಪರಾಧವಾದರೂ ಏನು?
ಅಳಿಯ : ಹೇಳುತ್ತೇನೆ. ಅದಕ್ಕೆ ಮೊದಲೇ ಒಂದು ಪ್ರಶ್ನೆ. ನೀನು ಈ ಮನೆಯಲ್ಲಿ ಯಾರು?
ನಾನು ಮೌನ.
ಅಳಿಯ : ಉತ್ತರವಿಲ್ಲ ಅಲ್ಲವೆ ? ಉತ್ತರ ಹೇಳಲು ನಿನಗೆ ಸಾಧ್ಯವಿಲ್ಲ. ನೀನು ಅನಾಥನಾಗಿದ್ದೆ. ನಿನಗೆ ವಾಸ ಮಾಡಲು ಒಂದು ಮನೆ ಬೇಕಾಗಿತ್ತು. ಈ ಅಮ್ಮನಿಗೂ ಮಗಳಿಗೂ ಸಹಾಯ ಮಾಡುವ ನೆಪದಲ್ಲಿ ಒಳಗೆ ಸೇರಿಕೊಂಡೆ. ಈ ಅಮ್ಮನ ಯೌವನವನ್ನು ನೀನು ಕದ್ದು ನಿಂತು ಯಥೇಷ್ಟವಾಗಿ ಸವಿದು ಹೊರಗಿನಿಂದ ಪುಣ್ಯಾತ್ಮನಂತೆ ನಟಿಸುತ್ತಿದ್ದೆ ಅಲ್ಲವೇ?
ವಿಧವೆ ನನ್ನತ್ತ ನೋಡಿ ಹಲ್ಲು ಕಡಿಯುತ್ತ : ಮೋಸಗಾರಾ..
ಅಳಿಯ : ನಾನು ನಂದಿತಾಳನ್ನು ಪ್ರೀತಿಸುವಾಗ ನೀನೂ ಏನೇನೋ ವಾದಿಸಿಕೊಂಡು ಮಧ್ಯೆ ಬಂದೆ. ಇವಳು ಆಗ ನಿನಗೆ ವಿಧೇಯಳಾಗಿದ್ದಳು.
ಮಗಳು : ಅದು ಬೇರೆ ನಿರ್ವಾಹವಿಲ್ಲದೆ ಆಗಿತ್ತು. ಅನ್ನ ಕೊಟ್ಟದ್ದಕ್ಕೆ ನಾನು ಕೃತಜ್ಞತೆ ಪ್ರಕಟಿಸ ಬೇಕಿತ್ತು.
ನಾನು : ಅಳಿಯ ದೇವರೂ, ನಾನವತ್ತು ..ನಿಮ್ಮ ಪ್ರೇಮದಲ್ಲಿ ಮಧ್ಯೆ ಪ್ರವೇಶ ಮಾಡಿದ್ದು ಒಳ್ಳೆಯ ಉದ್ದೇಶದಿಂದಾಗಿತ್ತು. ನೀನು ದೊಡ್ಡ ಮನೆಯ ಹುಡುಗ. ನನ್ನ ಮಗಳಿಗೆ ನಿನ್ನನ್ನು ಪಡೆಯಲು ಯಾವ ಅರ್ಹತೆಯಿದೆ? ಆದರೆ ನಿನ್ನ ಪ್ರೀತಿಯಲ್ಲಿ ಪ್ರಾಮಾಣಿಕತೆಯಿದೆ ಎಂದು ತಿಳಿದಾಗ ನಾನು ಒಪ್ಪಿದ್ದೆ. ಇದು ಸತ್ಯ. ಮಗನೇ ಇದುವೇ ಸತ್ಯ.

ಅಳಿಯ : ಅನ್ನ ಕೊಟ್ಟದ್ದರ ಅಧಿಕಾರವನ್ನು ಈ ಅಮ್ಮ-ಮಗಳ ಮೇಲೆ ಚಲಾಯಿಸಿದವನು ನೀನು. ನಿನಗೆ ವಿಧೇಯನಂತೆ ನಾನು ನಟಿಸಿದ್ದು ನಂದಿತಾಳನ್ನು ಪಡೆಯುವ ಉದ್ದೇಶದಿಂದ ಮಾತ್ರವಾಗಿತ್ತು. ನೀನು ಇವರನ್ನು ಹಿಡಿತದಲ್ಲಿಟ್ಟುಕೊಂಡು ನಿನಗೆ ವಿಧೇಯರನ್ನಾಗಿ ಮಾಡಿಕೊಂಡ ಈ ಅಮ್ಮ ಮತ್ತು ಮಗಳಿಂದಲೇ ನಾನು ನಿನ್ನನ್ನು..
ವಿಧವೆ : ನನಗೀಗ ಅರ್ಥವಾಗುತ್ತಿದೆ ಇವನು ಸಹಾನುಭೂತಿಯಿಂದ ನಮಗೆ ಊಟ ಸಂಪಾದಿಸಿ ಕೊಟ್ಟದ್ದು ನಮ್ಮ ಮೇಲೆ ಅಧಿಕಾರ ಚಲಾಯಿಸುವ ಉದ್ದೇಶದಿಂದಾಗಿತ್ತು. ಕುತ್ತೇ..ಕಮೀನೇ.. ಕೊಲ್ಲು ಮಗನೇ, ಇವನನ್ನು ಕೊಲ್ಲು..
ನನಗೆ ಏನೂ ಅರ್ಥವಾಗಲಿಲ್ಲ. ನಾನೇನೋ ಬಹಳ ದೊಡ್ಡ ತಪ್ಪು ಮಾಡಿರಬೇಕೆಂದು ಅನ್ನಿಸಿದರೂ ಅದು ಏನಾಗಿರಬೇಕೆಂದು ಒಂದು ಎಳೆಯೂ ಸಿಗಲಿಲ್ಲ. ನನಗೆ ನನ್ನ ಎದೆ ಸುಡುತ್ತಿದೆಯೇನೋ ಎಂಬ ಅನುಭವವಾಯಿತು. ನಾನು ನನ್ನ ಗಂಟು ಎತ್ತಿಕೊಂಡು ಅಲ್ಲಿಂದ ಓಡಿ ರಕ್ಷಿಸಿಕೊಳ್ಲಲು ಹೊರಟಿದ್ದೆ. ಅಷ್ಟರಲ್ಲಿ ಒಂದು ಕಬ್ಬಿಣದ ಸಲಾಕೆಯೆತ್ತಿಕೊಂಡು ಅಳಿಯ ಅಲ್ಲಿಗೆ ಹಾರಿ ಬಂದ.
ಅಳಿಯ : ಆ ಗಂಟನ್ನಲ್ಲಿ ಇಡೋ..
ವಿಧವೆ : ಆ ಗಂಟಿನ ತುಂಬಾ ಇರುವುದು ನಮ್ಮದೇ ವಸ್ತುಗಳು.
ಮಗಳು : ಎಲ್ಲ ಹೊಡೆದು ಹಾರಿಸಿಕೊಂಡು ಹೋಗುತ್ತಿದ್ದೀಯಲ್ಲವೆ?
ನನಗೆ ಮತ್ತೆ ಯಾವುದೂ ನೆನಪಿಲ್ಲ. ನಿರ್ದೇಶಕರು ನೀರು ಕೊಡವಿ ನನ್ನನ್ನು ಎಬ್ಬಿಸಿದಾಗ ಕಾಣುವುದೇನು? ಕಬ್ಬಿಣದ ಸಲಾಕೆಯನ್ನುಪಯೋಗಿಸಿ ವಿಧವೆಯನ್ನೂ ಮಗಳನ್ನೂ ಅಳಿಯನನ್ನೂ ನಾನೇ ಕೊಂದು ಬಿಟ್ಟಿದ್ದೆ.
ಅಯ್ಯೋ ನನ್ನ ವಿಧಿಯೇ ! ಮೂರ್ಖ ನಾನು, ಶತ ಮೂರ್ಖ ! ನನಗೆ ಹಾಗೆ ಮರೆವು ಬರಬಾರದಾಗಿತ್ತು. ಕಬ್ಬಿಣದ ಸಲಾಕೆಯನ್ನು ಅಳಿಯನ ಕೈಗಳಿಂದ ತೆಗೆದುಕೊಂಡು ಅವನನ್ನು ಕೊಲೆ ಮಾಡಲು ಮುಂದೆ ಬಾಗಿದಂತೆ ನಟಿಸಲೇ ಬೇಕಿತ್ತು ನಾನು. ನಂತರ ಕಬ್ಬಿಣದ ಸಲಾಕೆಯನ್ನು ಅಲ್ಲಿಟ್ಟು ತಿರುಗಿ ನಡೆಯುವಾಗ ಅಳಿಯ ಅದನ್ನೆತ್ತಿಕೊಂಡು ನನ್ನ ಹಿಂದಿನಿಂದ ಹಾರಿ ಬಂದು ನನ್ನನ್ನು ಇರಿದು ಅಂಗಾತ ಮಲಗಿಸಿ..
ಇಲ್ಲ, ನನಗೆ ಸಹಾನುಭೂತಿ ಸಿಗುವ ಒಂದು ಅವಕಾಶವನ್ನೂ ನಿರ್ದೇಶಕರು ಕೊಡಲಾರರು. ನನ್ನ ಕೊನೆ ಮೂರ್ಖತನದಲ್ಲಿ ಮತ್ತು ಪೋಲಿಸ್ ಸ್ಟೇಷನ್ನಿನಲ್ಲಿಯೇ..
ನಿರ್ದೇಶಕರು ಹೇಳಿದರು : ಮೂವರನ್ನೂ ಒಂದೇ ಪೆಟ್ಟಿಗೆ ಮುಗಿಸಿ ಬಿಟ್ಟು ಮುಖದಿಂದ ರಕ್ತವನ್ನು ಹರಿಸುವ ಮೂಲಕ ನೀವು ಪ್ರೇಕ್ಷಕರ ತೃಷೆಯನ್ನು ಗೌರವಿಸುತ್ತೀರಿ. ಈ ಕೊಲೆಗಳಿಲ್ಲದಿರುತ್ತಿದ್ದರೆ ಈ ಸಿನಿಮಾದಿಂದ ಪ್ರೇಕ್ಷಕರಿಗೆ ಏನೂ ಸಿಗುತ್ತಿರಲಿಲ್ಲ. ಕೊನೆಯ ನರಕವು ಪೋಲಿಸ್ ಸ್ಟೇಷನ್ ಎಂಬ ನೈತಿಕ ಸಂದೇಶವೂ ಸಿಗುತ್ತಿರಲಿಲ್ಲ.
ಒಮ್ಮೆ ನಗಬೇಕೆನ್ನಿಸುತ್ತಿದೆ. ಆದರೆ ಆಗುತ್ತಿಲ್ಲ. ಕೆನ್ನೆಗಳ ತುಂಬಾ ರಕ್ತ ಅಂಟಿಕೊಂಡ ಹಾಗೆ.

ಮಲೆಯಾಳಂ ಮೂಲ : ಟಿ.ವಿ.ಕೊಚ್ಚುಬಾವ

ಕನ್ನಡಕ್ಕೆ : ಡಾ.ಪಾರ್ವತಿ ಜಿ.ಐತಾಳ್

ಟಾಪ್ ನ್ಯೂಸ್

1-suraj-revann

MLC ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

arrest-25

UAE; ಪ್ರತಿಭಟನೆಗಿಳಿದ ಹಲವು ಬಾಂಗ್ಲಾದೇಶೀಯರಿಗೆ ಕಠಿನ ಶಿಕ್ಷೆ ವಿಧಿಸಿದ ಯುಎಇ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ

modi (4)

Undemocratic; ಪ್ರಧಾನಿಯ ಧ್ವನಿ ಹತ್ತಿಕ್ಕುವ ಪ್ರಯತ್ನ: ವಿಪಕ್ಷಗಳ ವಿರುದ್ಧ ಮೋದಿ ಕಿಡಿ

supreem

Supreme Court; ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾಗೆ ಜಾಮೀನು

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

Hirekerur: ಬೈಕ್ ಮೇಲೆ ಬಿದ್ದ ಮರ; ಹೆಸ್ಕಾಂ ನೌಕರರಿಬ್ಬರು ಸಾವು

Thirthahalli ಮದ್ಯಪಾನ ಮಾಡಿ ವಾಹನ ಚಾಲನೆ; ಹತ್ತು ಸಾವಿರ ದಂಡ ವಿಧಿಸಿದ ನ್ಯಾಯಾಲಯ !

Thirthahalli ಮದ್ಯಪಾನ ಮಾಡಿ ವಾಹನ ಚಾಲನೆ; ಹತ್ತು ಸಾವಿರ ದಂಡ ವಿಧಿಸಿದ ನ್ಯಾಯಾಲಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಬನ್‌-ಪ್ರಿಯೆ

ಬನ್‌-ಪ್ರಿಯೆ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

1-suraj-revann

MLC ಸೂರಜ್ ರೇವಣ್ಣಗೆ ಷರತ್ತುಬದ್ಧ ಜಾಮೀನು ಮಂಜೂರು

Nagendra

Valmiki Corporation scam; ಮಾಜಿ ಸಚಿವ ನಾಗೇಂದ್ರ ಗೆ 14 ದಿನಗಳ ನ್ಯಾಯಾಂಗ ಬಂಧನ

Sandalwood; ‘ಫಾರೆಸ್ಟ್‌’ ಸಿನಿಮಾದ “ಓಡೋ ಓಡೋ…’ ಬಂತು

Sandalwood; ‘ಫಾರೆಸ್ಟ್‌’ ಸಿನಿಮಾದ “ಓಡೋ ಓಡೋ…’ ಬಂತು

arrest-25

UAE; ಪ್ರತಿಭಟನೆಗಿಳಿದ ಹಲವು ಬಾಂಗ್ಲಾದೇಶೀಯರಿಗೆ ಕಠಿನ ಶಿಕ್ಷೆ ವಿಧಿಸಿದ ಯುಎಇ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding, Birthday ಪಾರ್ಟಿ ಕೂಡ ಇಲ್ಲಿ ನಡೆಯುತ್ತೆ

ಪ್ರವಾಸಿ ತಾಣವಾದ ಸ್ಮಶಾನ… ಇಲ್ಲಿ Pre-Wedding Shoot, Birthday ಪಾರ್ಟಿ ಕೂಡ ನಡೆಯುತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.