Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ
Team Udayavani, Sep 19, 2024, 6:55 AM IST
ಒಂದು ದೇಶ ಒಂದು ಚುನಾವಣೆ ಯೋಜನೆಯನ್ನು 2029ರಿಂದ ಜಾರಿ ಮಾಡಲು ಕೇಂದ್ರ ಸರಕಾರ ಮುಂದಾಗಿದೆ. ಆದರೆ ಈ ಮಹತ್ವಾಕಾಂಕ್ಷಿ ಯೋಜನೆಯು ಹಲವು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಅವಧಿಗೆ ಮೊದಲೇ ಸರಕಾರ ಬಿದ್ದರೆ, ಸರಕಾರಗಳ ಅವಧಿ ಮುಕ್ತಾಯ ವಾಗಿರದಿದ್ದರೆ ಅಥವಾ ಮೊದಲೇ ಮುಕ್ತಾಯವಾದರೆ, ಸಂಸತ್ತೇ ವಿಸರ್ಜನೆಯಾದರೆ ಎಂಬಂತಹ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದಕ್ಕೆ ಸಂಬಂಧಿಸಿದಂತೆ ಉತ್ತರಗಳು ಇಲ್ಲಿವೆ.
1 ಅವಧಿಗೆ ಮೊದಲೇ ದೇಶದ ವಿವಿಧ ರಾಜ್ಯ ಸರಕಾರಗಳು ಪತನಗೊಂಡರೆ ಏನಾಗುತ್ತದೆ? ಏಕ ಚುನಾವಣೆ ಹೇಗೆ?
ಏಕ ಚುನಾವಣೆ ನಡೆದ ಬಳಿಕ ರಾಜ್ಯ ಸರಕಾರಗಳ ಅವಧಿ ಮುಕ್ತಾ ಯಕ್ಕೂ ಮುನ್ನ ಸರಕಾರ ವಿಶ್ವಾಸಮತ ಕಳೆದುಕೊಂಡರೆ ಅಥವಾ ರಾಜಕೀಯ ಪಲ್ಲಟಕ್ಕೆ ಸಿಲುಕಿ ಸರಕಾರ ಬಿದ್ದರೆ ಸರಕಾರದ ಅವಧಿ 2 ವರ್ಷಕ್ಕಿಂತ ಹೆಚ್ಚಿದ್ದರೆ ಮತ್ತೆ ಚುನಾವಣೆ ನಡೆಸಲಾಗುತ್ತದೆ. 1 ವರ್ಷ ಕ್ಕಿಂತ ಕಡಿಮೆ ಇದ್ದರೆ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ. ಈ ಸರಕಾರದ ಅವಧಿ ಮುಂದಿನ ಏಕ ಚುನಾವಣೆವರೆಗೆ ಇರುತ್ತದೆ.
2.ಕರ್ನಾಟಕದ ವಿಧಾನಸಭೆ ಅವಧಿ 2028ಕ್ಕೆ ಅಂತ್ಯವಾಗುತ್ತದೆ. ಮುಂದಿನ ಚುನಾವಣೆವರೆಗೆ ರಾಜ್ಯದ ಪರಿಸ್ಥಿತಿ ಏನು?
ಕರ್ನಾಟಕ ವಿಧಾನಸಭೆ ಅವಧಿ ಏಕ ಚುನಾವಣೆಗೂ 1 ವರ್ಷ ಮೊದಲು ಮುಕ್ತಾಯವಾಗಲಿದೆ. ಹೀಗಾದಲ್ಲಿ ರಾಜ್ಯದಲ್ಲಿ 1 ವರ್ಷಗಳ ಕಾಲ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ ಅಥವಾ ಪ್ರಸ್ತುತ ಇರುವ ರಾಜ್ಯ ಸರಕಾರಕ್ಕೆ ಬಹುಮತ ಇದ್ದರೆ 1 ವರ್ಷಗಳ ಕಾಲ ಮುಂದುವರಿಸಲು ಸೂಚಿಸಲಾಗುತ್ತದೆ.
3.2025ರಲ್ಲಿ ಚುನಾವಣೆ ನಡೆಯುವ ರಾಜ್ಯಗಳ ಸ್ಥಿತಿ ಏನು?
2025ರಲ್ಲಿ ಚುನಾವಣೆ ನಡೆಯುವ ರಾಜ್ಯಗಳ ವಿಧಾನಸಭೆ ಅವಧಿ 2029ಕ್ಕೆ 4 ವರ್ಷ ಮಾತ್ರ ಪೂರ್ಣಗೊಳಿಸಿರುತ್ತದೆ. ಹೀಗಾಗಿ 2025ರಲ್ಲಿ ಚುನಾವಣೆ ನಡೆಯುವ ರಾಜ್ಯಗಳ ಅಧಿಕಾರವಧಿಯನ್ನು 1 ವರ್ಷ ಮೊಟಕುಗೊಳಿಸುವ ಸಾಧ್ಯತೆ ಇದೆ. ಈ ವಿಧಾನಸಭೆಗಳ ಅವಧಿ ಕೇವಲ 4 ವರ್ಷದ್ದಾಗಿರುತ್ತದೆ.
4.2027ರಲ್ಲಿ ವಿಧಾನಸಭೆ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಮತ್ತೆ ಎರಡೇ ವರ್ಷಕ್ಕೆ ಚುನಾವಣೆ?
2027ರಲ್ಲಿ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಏಕ ಚುನಾವಣೆ ಜಾರಿಯಾದರೆ ಮತ್ತೆ 2 ವರ್ಷಕ್ಕೆ ಚುನಾವಣೆ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರಸ್ತುತ ಇರುವ ಮಾಹಿತಿಗಳ ಪ್ರಕಾರ ಈ ರಾಜ್ಯಗಳ ಅಧಿಕಾರವಧಿಯನ್ನು 2 ವರ್ಷಗಳಿಗೇ ಕಡಿತಗೊಳಿಸುವ ಸಾಧ್ಯತೆ ಇದೆ. 2028ರಲ್ಲಿ ಚುನಾವಣೆ ನಡೆಸದೇ ಪ್ರಸ್ತುತ ಇರುವ ಸರಕಾರಗಳ ಅವಧಿ ವಿಸ್ತರಿಸುವ ಅಥವಾ ರಾಷ್ಟ್ರಪತಿ ಆಳ್ವಿಕೆ ಹೇರುವ ಸಾಧ್ಯತೆ ಇದೆ.
5.ಅವಧಿಯನ್ನು ಪೂರೈಸುವ ಮುನ್ನವೇ ಸಂಸತ್ ವಿಸರ್ಜನೆ ಯಾದರೆ, ಮುಂದೇನಾಗುತ್ತದೆ? ಚುನಾವಣೆ ಹೇಗೆ?
ಒಂದು ವೇಳೆ ಅವಧಿಗೂ ಮುನ್ನ ಸಂಸತ್ತು ವಿಸರ್ಜನೆಯಾದರೆ ಲೋಕಸಭೆ ಚುನಾವಣೆಯನ್ನೂ ಮಾತ್ರ ನಡೆಸಲಾಗುತ್ತದೆ. ಹೀಗೆ ಚುನಾವಣೆ ನಡೆದು ಆಯ್ಕೆಯಾಗುವ ಲೋಕಸಭೆಯ ಅವಧಿ ಮುಂದಿನ ಏಕ ಚುನಾವಣೆವರೆಗೆ ಮಾತ್ರ ಇರುತ್ತದೆ. ಲೋಕಸಭೆಯ ಅವಧಿ 1 ವರ್ಷ ಮಾತ್ರ ಇದ್ದರೆ ಎಲ್ಲಾ ಪಕ್ಷಗಳನ್ನು ಒಳಗೊಂಡಂತೆ ಏಕೀಕೃತ ಸರಕಾರ ರಚನೆ ಮಾಡಿ ಆಡಳಿತ ನಡೆಸುವ ಸಾಧ್ಯತೆ ಇದೆ.
ಭದ್ರತಾ ಮತ್ತು ತಾಂತ್ರಿಕ ಸಮಸ್ಯೆಗಳು
ಇಷ್ಟಾಗಿಯೂ ತತ್‌ಕ್ಷಣಕ್ಕೆ ಬಗೆಹರಿಸಲಾಗದ ಒಂದಷ್ಟು ಸಮಸ್ಯೆ ಗಳು ಸರಕಾರದ ಮುಂದಿವೆ. ಒಂದೇ ಬಾರಿ ಚುನಾವಣೆ ನಡೆದರೆ ಇಡೀ ದೇಶಕ್ಕೆ ಭದ್ರತಾ ಪಡೆಯನ್ನು ಒದಗಿಸುವುದು ಸವಾಲಾಗಲಿದೆ. ಒಂದು ಬಾರಿ ಚುನಾವಣೆ ನಡೆಸಲು 46.75 ಲಕ್ಷ ಇವಿಎಂ, 33.63 ಲಕ್ಷ ಕಂಟ್ರೋಲ್ ಯುನಿಟ್, 36.62 ಲಕ್ಷ ವಿವಿಪ್ಯಾಟ್‌ಗಳು ಆವಶ್ಯಕತೆ ಇದೆ. ಇವುಗಳನ್ನು ಒದಗಿಸುವುದು ಸವಾಲಾಗಲಿದೆ. ಅಲ್ಲದೇ ಚುನಾವಣೆ ನಡೆಸಲು ಪ್ರತೀ 15 ವರ್ಷಕ್ಕೆ ಹೊಸ ಇವಿಎಂಗಳ ಖರೀದಿಗಾಗಿ 10,000 ಕೋಟಿ ರೂ. ವೆಚ್ಚ ತಗುಲಲಿದೆ. ಇದನ್ನು ಹೊಂದಿಸುವುದು ಸವಾಲಾಗಲಿದೆ.
2 ಹಂತದಲ್ಲಿ ಚುನಾವಣೆ
1. ಲೋಕಸಭೆ, ವಿಧಾನಸಭೆ ಎಲೆಕ್ಷನ್
ಮೊದಲ ಹಂತದಲ್ಲಿ ಲೋಕಸಭೆ ಚುನಾವಣೆ ನಡೆಸಲು ಯಾವ ಸಮಯ ನಿಗದಿ ಪಡಿಸಲಾಗಿರುತ್ತದೆಯೋ, ಅದೇ ಸಮಯದಲ್ಲೇ ರಾಜ್ಯಗಳು ಚುನಾವಣೆಗೆ ಸಜ್ಜಾಗಬೇಕಿದೆ. ಅಸ್ತಿತ್ವದಲ್ಲಿರುವ ರಾಜ್ಯ ಸರಕಾರದ ಅವಧಿ ಪೂರ್ಣಗೊಂಡಿದ್ದರೆ ಏಕ ಚುನಾವಣೆ ವರೆಗೆ ಅದೇ ಸರಕಾರ ಮುಂದುವರಿಸುವ ಸಾಧ್ಯತೆಗಳಿದೆ. ಒಂದು ವೇಳೆ ಏಕಕಾಲ ಚುನಾವಣೆ ವೇಳೆಗೆ ರಾಜ್ಯ ಸರಕಾರದ ಆಡಳಿತಾವಧಿ ಪೂರ್ಣಗೊಳ್ಳದೇ ಇದ್ದಲ್ಲಿ ಅದನ್ನು ಅಲ್ಲಿಗೆ ಮೊಟಕುಗೊಳಿಸಿ, ಒಟ್ಟಿಗೆ ಚುನಾವಣೆ ನಡೆಸಲಾಗುವುದು.
2. ಸ್ಥಳೀಯ ಸಂಸ್ಥೆಗಳ ಚುನಾವಣೆ
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳೊಂದಿಗೆ ಪುರಸಭೆ ಮತ್ತು ಪಂಚಾಯತ್ ಚುನಾವಣೆಗಳನ್ನೂ ನಡೆಸಬೇಕು. ಈ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳ ಚುನಾವಣೆ ನಡೆದ 100 ದಿನಗಳ ಒಳಗಾಗಿಯೇ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಬೇಕಾಗುತ್ತದೆ. ಇದಕ್ಕೆ ದೇಶದ ಒಟ್ಟು ರಾಜ್ಯಗಳ ಪೈಕಿ ಅರ್ಧದಷ್ಟು ರಾಜ್ಯಗಳ ಅನುಮೋದನೆ ಅಗತ್ಯವಾಗಿ ರುತ್ತದೆ. ಆದರೆ ಲೋಕಸಭೆ ಮತ್ತು ರಾಜ್ಯ ವಿಧಾನ ಸಭೆಗಳ ಜತೆಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ನಡೆಸುವ ಬಗ್ಗೆ ರಾಜ್ಯಗಳ ನಡುವೆ ಭಿನ್ನಾಭಿಪ್ರಾಯಗಳಿವೆ.
ಸಂವಿಧಾನ ತಿದ್ದುಪಡಿಯೊಂದಿಗೆ ಮಸೂದೆ ಮಂಡನೆ
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ನೀಡಿರುವ ಶಿಫಾರಸುಗಳನ್ನು ಜಾರಿಗೆ ತರಬೇಕಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ಈ ಕೇಂದ್ರ ಸಂಪುಟ ಮಿತಿಯ ಶಿಫಾರಸುಗಳನ್ನು ಸ್ವೀಕರಿಸಿದ್ದರಿಂದ, ಸೂಕ್ತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದ ಬಳಿಕವಷ್ಟೇ ಏಕ ಕಾಲಕ್ಕೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಸಾಧ್ಯವಾಗಲಿದೆ. ಇದಕ್ಕಾಗಿ ಕೇಂದ್ರ ಸರಕಾರವು ಮೊದಲಿಗೆ ಸಂಸತ್ತಿನಲ್ಲಿ ಮಸೂದೆ ಮಂಡಿಸಿ, ಅಗತ್ಯ ತಿದ್ದುಪಡಿಗಳೊಂದಿಗೆ ಪಾಸು ಮಾಡಿಕೊಳ್ಳಬೇಕು. ಮುಂದಿನ ಹಂತದಲ್ಲಿ ಕಾಯ್ದೆ ಜಾರಿಯಾಗುತ್ತದೆ.
ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಪ್ರಮುಖ ಶಿಫಾರಸುಗಳು
-ದೇಶದಲ್ಲಿ ಏಕ ಕಾಲಕ್ಕೆ ಚುನಾವಣೆಗಳನ್ನು ನಡೆಸಲು ಅಗತ್ಯವಿರುವ ಒಂದು ಬಾರಿಯ ಪರಿವರ್ತನಾ ಕ್ರಮಗಳನ್ನು ತೆಗೆದುಕೊಳ್ಳಬೇಕು.
-ಚುನಾವಣೆ ನಡೆಸಲು ಒಂದು ನಿರ್ದಿಷ್ಟ ದಿನಾಂಕ ಗುರುತು ಮಾಡಬೇಕು. ಆ ದಿನಾಂಕ ದಲ್ಲಿ ಎಲ್ಲ ವಿಧಾಸನಭೆಗಳ ಅವಧಿ ಸಂಸತ್ ಅವಧಿಯೊಂದಿಗೆ ಮುಗಿಯವಂತಿರಬೇಕು.
-ಮೊದಲ ಹಂತದಲ್ಲಿ ಲೋಕಸಭೆ, ವಿಧಾನಸಭೆಗಳ ಚುನಾವಣೆ ನಡೆಯಬೇಕು. 2ನೇ ಹಂತದಲ್ಲಿ 100 ದಿನಗಳ ಒಳಗೆ ನಗರಪಾಲಿಕೆ, ಪಂಚಾಯತ್ ಚುನಾವಣೆಗಳು ನಡೆಸುವ ಬಗ್ಗೆ ವ್ಯವಸ್ಥೆಯನ್ನು ರೂಪಿಸಬೇಕು.
-ಅವಿಶ್ವಾಸ ಗೊತ್ತುವಳಿಯಿಂದಲೋ, ಅಸ್ಥಿರತೆ ಯಿಂದಲೋ ಅಥಾವ ಬಹುಮತದ ಕೊರತೆಯಿಂದಲೋ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರಗಳು ಪತನವಾದರೆ, ಉಳಿದ ಅವಧಿಗೆ ಮಾತ್ರವೇ ಚುನಾವಣೆ ನಡೆಯು ವಂತಿರಬೇಕು. ಈ ಬಗ್ಗೆ ನಿಯಮ ರೂಪಿಸಬೇಕು.
-ಕೇಂದ್ರದಲ್ಲಾಗಲೀ, ರಾಜ್ಯದಲ್ಲಾಗಲೀ ಯಾವುದೇ ಕಾರಣಕ್ಕೆ ಸರಕಾರಗಳು ಅವಧಿಗಿಂತ ಮುನ್ನ ವಿಸರ್ಜನೆಗೊಂಡರೆ, ಬಾಕಿ ಉಳಿದಿರುವ ಅವಧಿಗೆ ಹೊಸ ಚುನಾವಣೆ ನಡೆಸಬೇಕು.ಆಗ ಮತ್ತೆ ಏಕ ಚುನಾವಣೆ ಸಾಧ್ಯವಾಗುತ್ತದೆ.
-ಮತ್ತೆ ಏಕಕಾಲಕ್ಕೆ ಚುನಾವಣೆ ನಡೆಯುವ ಹೊತ್ತಿಗೆ ಎಲ್ಲ ರಾಜ್ಯಗಳು ಚುನಾವಣೆಗೆ ಸಿದ್ಧವಾಗಿರುವಂತೆ ನೋಡಿಕೊಳ್ಳಬೇಕು.
ಏನಿದು ಯುನಿಟಿ ಸರಕಾರದ ಪರಿಕಲ್ಪನೆ?
ರಾಷ್ಟ್ರೀಯ ಯುನಿಟಿ ಸರಕಾರ ಎಂಬುದು ಹಲವು ಅಥವಾ ಪ್ರಮುಖ ಪಕ್ಷಗಳು ಸೇರಿ ಒಕ್ಕೂಟದ ಸರಕಾರ ನಡೆಸುವ ವ್ಯವಸ್ಥೆಯಾಗಿದೆ. ಈ ಹಿಂದೆ ಹಲವು ರಾಷ್ಟ್ರಗಳು ಯುದ್ಧ ದಂಥ ಅಥವಾ ಇನ್ನಿತರ ರಾಷ್ಟ್ರೀಯ ತುರ್ತು ಸಂದರ್ಭದಲ್ಲಿ ಈ ಸರಕಾರದ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಈ ಮಾದರಿ ಸರಕಾರವನ್ನು ರೂಪಿಸಿದೆ. ಇದಲ್ಲದೇ ಅಮೆರಿಕ, ಬ್ರಿಟನ್, ಕೆನಡಾ, ಚೀನ, ಇಸ್ರೇಲ್, ಇಟಲಿ, ಮ್ಯಾನ್ಮಾರ್, ನೇಪಾಲ, ಪ್ಯಾಲಿಸ್ತೀನ್ ಸೇರಿ ಹಲವು ರಾಷ್ಟ್ರಗಳು ಈ ಯುನಿಟಿ ಸರಕಾರದಡಿ ಆಡಳಿತ ನಡೆಸುತ್ತಿವೆ. ಇದೀಗ ಭಾರತದಲ್ಲೂ ಒಂದು ದೇಶ ಒಂದು ಚುನಾವಣೆ ಅಡಿಯಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸಿ ಯುನಿಟಿ ಸರಕಾರ ರಚಿಸಲು ಯೋಜಿಸಲಾಗುತ್ತಿದೆ. ಈ ಹಿಂದೆ 1951ರಿಂದ 1967ರ ವರೆಗೆ ದೇಶದಲ್ಲಿ ಏಕಕಾಲದ ಚುನಾವಣೆ ನಡೆದಿವೆ. ಆದರೆ ಕಾಲ ಕಳೆದಂತೆ ಮಧ್ಯಾಂತರ ಚುನಾವಣೆಗಳು ಸೇರಿ ಇನ್ನೂ ಹಲವು ಕಾರಣಗಳಿಂದ ಚುನಾವಣೆಗಳು ಅಸ್ಥಿರವಾದವು. ಪ್ರಸ್ತುತ ಏಕಕಾಲದ ಚುನಾವಣೆಯನ್ನು ತರಲು ಯೋಜಿಸಲಾಗಿದ್ದು, ಇದಕ್ಕಾಗಿ ಹಲವು ರಾಜ್ಯಗಳ ಚುನಾವಣೆಗಳನ್ನು ವಿಳಂಬ ಅಥವಾ ಮುಂಚಿತವಾಗಿ ನಡೆಸಿ ಸಮಯವನ್ನು ಸರಿಹೊಂದಿಸಬೇಕಾಗುತ್ತದೆ.
3 ವರ್ಷದೊಳಗೇ 17 ರಾಜ್ಯ ಸರಕಾರ ವಿಸರ್ಜನೆ
ಲೋಕಸಭೆ, ರಾಜ್ಯ ವಿಧಾನಸಭೆಗಳ ಅಘಿವಧಿಯ ಸಾಂವಿಧಾನಿಕ ನಿಬಂಧನೆಗಳನ್ನು ಸಂಸತ್ತು ತಿದ್ದುಪಡಿ ಮಾಡಿದ ಅನಂತರ, ಏಕಕಾಲದ ಚುನಾವಣೆಗೆ ಅನುವಾಗುವಂತೆ ಹಲವು ರಾಜ್ಯ ವಿಧಾನಸಭೆಗಳನ್ನು ಅವುಗಳ 5 ವರ್ಷದ ಅವಧಿ ಪೂರ್ಣವಾಗುವ ಮುನ್ನವೇ ವಿಸರ್ಜಿಸ ಬೇಕಾಗುತ್ತದೆ. ಹಾಗಾದಲ್ಲಿ 17 ರಾಜ್ಯಗಳು 3 ವರ್ಷಗಳಿಗಿಂತಲೂ ಕಡಿಮೆ ಅವಧಿಯ ಸರಕಾರ ಹೊಂದಲಿವೆ. ಹಿಮಾಚಲ ಪ್ರದೇಶ, ಕರ್ನಾಟಕ, ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ, ತೆಲಂಗಾಣ, ಮಿಜೋರಾಂ, ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ರಾಜ್ಯಗಳಲ್ಲಿ ಪುನಃ 2028ಕ್ಕೆ ಚುನಾವಣೆ ನಡೆಯಬೇಕು.ಬಳಿಕ 1 ವರ್ಷ ಅಥವಾ ಅದಕ್ಕಿಂತಲೂ ಕಡಿಮೆ ಅವಧಿಯವರೆಗೂ ಹೊಸ ಸರಕಾರ ಅಧಿಕಾರ ನಡೆಸಲಿದೆ. ಉತ್ತರ ಪ್ರದೇಶ, ಪಂಜಾಬ್, ಗುಜರಾತ್‌ನಲ್ಲಿ 2027ರಲ್ಲಿ ಚುನಾವಣೆ ನಡೆಯುವುದರಿಂದ 2 ಅಥವಾ ಅದಕ್ಕಿಂತ ಕಡಿಮೆ ಅವಧಿ ಸರಕಾರ ಹೊಂದಲಿವೆ. 2026ರಲ್ಲಿ ಪ.ಬಂಗಾಲ, ತಮಿಳುನಾಡು, ಅಸ್ಸಾಂ, ಕೇರಳದಲ್ಲಿ ಚುನಾವಣೆ ನಡೆಯಲಿದ್ದು ಈ ರಾಜ್ಯಗಳು 3 ವರ್ಷ ಸರಕಾರ ನಡೆಸಲಿವೆ. ಅರುಣಾಚಲ ಪ್ರದೇಶ, ಸಿಕ್ಕಿಂ, ಒಡಿಶಾ, ಆಂಧ್ರ, ಮಹಾರಾಷ್ಟ್ರ, ಹರ್ಯಾಣದಲ್ಲಿ ಇನ್ನು ಕೆಲವು ದಿನಗಳ ಬಳಿಕ ಚುನಾವಣೆ ನಡೆಯಲಿದ್ದು, ಅವುಗಳ ಸರಕಾರದ ಅವಧಿ ಬಹುತೇಕ ಪೂರ್ಣಗೊಳ್ಳುತ್ತದೆ.
46.75ಲಕ್ಷ
ದೇಶದಲ್ಲಿ ಏಕ ಕಾಲಕ್ಕೆ ಚುನಾವಣೆ ನಡೆಸಲು ಕೇಂದ್ರ ಚುನಾವಣ ಆಯೋಗಕ್ಕೆ ಬೇಕಾಗುವ ಒಟ್ಟು ವಿದ್ಯುನ್ಮಾನ ಮತ ಯಂತ್ರಗಳು.
10,000ಕೋಟಿ ರೂ.
ಪ್ರತೀ 15 ವರ್ಷಕ್ಕೆ ಹೊಸ ವಿದ್ಯುನ್ಮಾನ ಮತಯಂತ್ರಗಳ ಖರೀದಿಗೆ ಬೇಕಾಗುವ ಹೆಚ್ಚುವರಿ ಹಣ. ಕೋವಿಂದ್ ನೇತೃತ್ವದ ಸಮಿತಿಯಲ್ಲಿ ಈ ಬಗ್ಗೆ ಉಲ್ಲೇಖ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navratri special: ಹೆಣ್ಣು ಅಬಲೆಯೇ? ಹಾಗೆಂದು ನಿರ್ಧರಿಸಿದ್ಯಾರು? ಹೆಣ್ಣಾ ಅಥವಾ..
Famous Godesess Temple: ಹಿಂದೂ ನವರತ್ನ ದೇವಾಲಯ ದಕ್ಷಿಣೇಶ್ವರ ಕಾಳಿ ಮಂದಿರ
Cast Census: ಕಾಯ್ದೆ ಪ್ರಕಾರ ಸರಕಾರ ಜಾತಿಗಣತಿ ವರದಿ ಒಪ್ಪಬೇಕು
Navratri Special: ರಕ್ಕಸಿ ಹಿಡಿಂಬೆಯ ನಿಷ್ಕಲ್ಮಶ ಪ್ರೀತಿಗೆ ಯಾವ ಹೆಸರು ಕೊಡಲಿ
Welcome Development: ಚಾಗೋಸ್ ದ್ವೀಪ ಸಮೂಹ ಮತ್ತೆ ಮಾರಿಷಸ್ ಪಾಲಿಗೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.