ಅಪ್ಪನೆಂಬ “ಹೊರೆ’ ಇಳಿಸಿದವರು..

Team Udayavani, Dec 1, 2018, 12:30 AM IST

ಆತ ಏದುಸಿರು ಬಿಡುತ್ತಿದ್ದ. ತೀವ್ರ ಎದೆನೋವಿನಿಂದ ಸಂಕಟ ಪಡುತ್ತಿದ್ದ. ಅವಳು ಅವನ ಎದೆಯ ಮೇಲೆ ಕೈಯಾಡಿಸುತ್ತ ಸಾಂತ್ವನ ಹೇಳುತ್ತಿದ್ದಳು. ಮೈಯೆಲ್ಲಾ ಬೆವೆತು ತಣ್ಣಗಾಗಿದೆ. ನಿಶ್ಚೇಷ್ಟಿತನಾಗಿದ್ದಾನೆ. ಅವಳು ತನ್ನ ಸೆರಗಿನಿಂದ ಅವನ ಮುಖದ ಮೇಲಿನ ಬೆವರು ಒರೆಸುತ್ತ ಗಾಳಿ ಹಾಕುತ್ತಿದ್ದಾಳೆ…

ನಮ್ಮೂರ ಸಮೀಪದ ತಾಲೂಕಾ ಸ್ಥಳದಲ್ಲಿ ನೆಲೆಸಿದವರವರು. ಮೂವತ್ತು ವರ್ಷಗಳ ಸುಖಿ ಸಂಸಾರ. ಅವಳು ಅವನನ್ನು ಮದುವೆಯಾಗಿ ಈ ಮನೆಗೆ ಬಂದಾಗ ಅವನು ಅದೇ ತಾನೇ ನೌಕರಿಗೆ ಸೇರಿದ್ದ. ಬಡತನದಿಂದ ಬಂದ ಅವನ ಮನೆಯಲ್ಲಿ ಶ್ರೀಮಂತಿಕೆ ಇರದಿದ್ದರೂ ಪ್ರೀತಿಗೇನೂ ಕೊರತೆಯಿರಲಿಲ್ಲ. ಇದ್ದುದರಲ್ಲಿಯೇ ಹಂಚಿಕೊಂಡು ಉಂಡು ತಿಂದು ತೃಪ್ತರಾಗಿದ್ದರು. ಒಬ್ಬರಾದ ಮೇಲೆ ಒಬ್ಬರಂತೆ ಮೂರು ಮಕ್ಕಳು. ಎರಡು ಗಂಡು, ಕೊನೆಯವಳು ಹೆಣ್ಣು. ತುಂಬ ಮುತುವರ್ಜಿಯಿಂದ, ಪ್ರೀತಿಯಿಂದ ಮಕ್ಕಳನ್ನು ಬೆಳೆಸಿದರು. ಇವರ ಸುದೈವವೋ ಏನೋ ಎರಡೂ ಗಂಡು ಮಕ್ಕಳು ಶಾಲೆಯಲ್ಲಿ ತುಂಬ ಜಾಣರು. ಮಕ್ಕಳು ಪಾಸಾದಾಗಲೆಲ್ಲ, ಹೆಚ್ಚಿನದನ್ನು ಕಲಿತು ಒಳ್ಳೆಯ ಫ‌ಲಿತಾಂಶ ಬಂದಾಗಲೆಲ್ಲ, ಊರಿಗೇ ಸಿಹಿ ಹಂಚಿ ಸಂತಸ ಪಡುತ್ತಿದ್ದ. ತನ್ನ ಮಕ್ಕಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದ. ಆದರೂ ಅವರ ಶಿಕ್ಷಣದ ಜವಾಬ್ದಾರಿಯೆಲ್ಲ ಅವಳದೇ. ಯಾಕೆಂದರೆ ಹೆಚ್ಚು ಹೆಚ್ಚು ದುಡ್ಡು ಕೂಡಿಸಲು ಅವನು ತನ್ನ ಸರಕಾರಿ ನೌಕರಿಯ ಸಮಯ ಮುಗಿದ ಮೇಲೂ ಖಾಸಗಿ ಕೆಲಸಗಳನ್ನು ಮಾಡುತ್ತಿದ್ದ, ತನ್ನಂತೆ ತನ್ನ ಮಕ್ಕಳು ಬಡತನದ ಕಷ್ಟವನ್ನು ಉಣ್ಣಬಾರದೆಂದು… ಅವನೆಂದೂ ರಜೆ ಪಡೆದವನಲ್ಲ, ತನ್ನ ಕೆಲಸದ ಸ್ಥಳ ಬಿಟ್ಟು ಬೇರೆ ಊರಿಗೆ ಹೋದದ್ದು ಕಡಿಮೆ. ಊರು ಬಿಟ್ಟರೆ ಒಂದು ದಿನದ ಆದಾಯ ಕಡಿಮೆಯಾಗುತ್ತದೆ ಎಂಬ ಚಿಂತೆ. ಅವಳೂ ತವರಿಗೆ ಹೋದವಳಲ್ಲ.

ದಿನಗಳು ಉರುಳಿದವು. ಜೀವನದಲ್ಲಿ ನೆಮ್ಮದಿ ಇ¨ªಾಗ ದಿನಗಳು ಬೇಗ ಸಾಗುತ್ತವೆ. ನೋಡ ನೋಡುತ್ತಲೇ ಮಕ್ಕಳು ಬೆಳೆದು ದೊಡ್ಡವರಾದರು. ತನ್ನ ದುಡಿಮೆಯಲ್ಲಿ ಸಂಪೂರ್ಣ ಮಗ್ನನಾದ ಇವನಿಗೆ ಸಮಯದ ಪರಿವೆಯೇ ಇಲ್ಲ. ಹೀಗೆಯೇ ಜೀವನ ಪೂರ್ತಿ ದುಡಿದು ಸೊನ್ನೆಯಿಂದ ಕೋಟಿ ತಲುಪಿದ್ದ. ಹೆಂಡತಿಗೂ ಮಕ್ಕಳಿಗೂ ಯಾವುದೇ ಕೊರತೆಯಾಗದಂತೆ ತನ್ನನ್ನೇ ತಾನು ದಂಡಿಸಿಕೊಂಡು ಬದುಕು ಸವೆಸಿದ. ಅರಮನೆಯಂಥ ಮನೆ ಕಟ್ಟಿಸಿ ಮನೆಯ ಎಲ್ಲರಿಗೂ ಐಷಾರಾಮಿ ಸೌಲಭ್ಯಗಳನ್ನು ಒದಗಿಸಿದ. ಮಕ್ಕಳಿಗೆ ಒಳ್ಳೊಳ್ಳೆಯ ನೌಕರಿ ಕೂಡ ಸಿಕ್ಕುಬಿಟ್ಟವು. ಇವನ ಆಸ್ತಿ, ಸಂಪತ್ತು, ಅವನ ಮಕ್ಕಳ ಸಂಬಳ ನೋಡಿ ಕನ್ಯಾಪಿತೃಗಳು ಬೆಂಬತ್ತಿದರು. ಮಗಳಿಗೂ ಒಳ್ಳೆಯ ಮನೆತನ ಗೊತ್ತು ಮಾಡಿದರು. ಯಾವ ಕಷ್ಟವೂ ಇಲ್ಲದೆ ಮೂವರ ಮದುವೆ ಮುಗಿದುಬಿಟ್ಟವು. ಎಲ್ಲೆಲ್ಲೂ ಸಂತೋಷವೇ…! ಆಗ ಮನೆ ತುಂಬ ನಗುವನ್ನು ಬಿಟ್ಟು ಬೇರೇನೂ ಇಲ್ಲ. ಇಬ್ಬರ ಮುಖದ ಮೇಲೂ ಸಂತೃಪ್ತಿಯ ಭಾವ. ಅಂದುಕೊಂಡಿದ್ದನ್ನು ಸಾಧಿಸಿದ ಸಂತಸ. ಮಕ್ಕಳಿಗೆ ಬಡತನದ ನೆರಳೂ ಕೂಡ ಸೋಕದ ಹಾಗೆ ಬೆಳೆಸುವ ಅವರ ಗುರಿ ತಲುಪಿಯಾಗಿತ್ತು. ಜೀವನ ಅದೆಷ್ಟು ಚೆಂದ…!

ಆದರೆ ಇಲ್ಲೊಂದು ಕಷ್ಟ. ಇಬ್ಬರೂ ಮಕ್ಕಳಿಗೆ ದೂರದ ಪೇಟೆಯಲ್ಲಿ ಕೆಲಸವಾದ್ದರಿಂದ ಇವರನ್ನು ಬಿಟ್ಟು ದೂರ ಸಾಗಬೇಕಾಯಿತು. ಅವರ ಊರಿನಿಂದ ಆ ಪೇಟೆ ತಲುಪಲು ಅರ್ಧದಿನವೇ ಬೇಕು, ಅಷ್ಟು ದೂರ. ಆದರೆ ಇವರಿಗೇನೂ ತೊಂದರೆಯೆನಿಸಲೇ ಇಲ್ಲ. ಯಾಕೆಂದರೆ ಅವರ ಬದುಕಿನ ಮೂಲ ಉದ್ದೇಶವೇ ಮಕ್ಕಳ ಸುಖ ಮಾತ್ರವಾಗಿತ್ತು. ಅಲ್ಲದೆ ಇವನಿಗೆ ಇನ್ನೂ ದುಡಿಯುವ ಹುಮ್ಮಸ್ಸು, ತಾಕತ್ತು, ಮನಸ್ಸು ಎಲ್ಲ ಇದ್ದುವಲ್ಲ…! ಮತ್ತದೇ ಗಾಣದೆತ್ತಿನ ಬದುಕು. ಆದರೆ ಇವಳಿಗೆ ಭಣ ಭಣ, ಮಕ್ಕಳಿಲ್ಲದ ಮನೆ. ಅದಕ್ಕೇ “ಎರಡಂತಸ್ತಿನ ಮನೆಯನ್ನಿಟ್ಟುಕೊಂಡು ಏನು ಮಾಡುವುದು?’ ಎಂದು ವಿಚಾರಿಸಿ, ಮೇಲಿನದನ್ನು ತಾವಿಟ್ಟುಕೊಂಡು ಕೆಳಗಿನದನ್ನು ಬಾಡಿಗೆಗೆ ಕೊಟ್ಟರು. ಈಗ ಅದರದ್ದೂ ಒಂದು ಸಂಪಾದನೆ ಜೊತೆಯಾಯಿತು.

ಹೀಗಾಗಿ “ಇಷ್ಟು ವರ್ಷಗಳ ನಂತರ ಒಬ್ಬರಿನ್ನೊಬ್ಬರಿಗೆ ಬದುಕುವ ನಿಜವಾದ ದಾಂಪತ್ಯ ಈಗತಾನೇ ಪ್ರಾರಂಭವಾಗಿತ್ತು.’
ಇಂದು ಒಮ್ಮಿಂದೊಮ್ಮೆಲೆ ಎದೆ ನೋವು ಎಂದ. ಹಾಗೆ ನೋಡಿದರೆ ಅವನು ಆರೋಗ್ಯವಂತನೆ. ಆದ್ದರಿಂದ ಒಮ್ಮೆಯೂ ಅರೋಗ್ಯ ಪರೀಕ್ಷೆಗಳನ್ನು ಮಾಡಿಸಿರಲಿಲ್ಲ. ಮನೆಯಲ್ಲಿ ಇವಳೊಬ್ಬಳೆ. ಕೆಳಗಿನ ಮನೆಯಲ್ಲಿ ಬಾಡಿಗೆಗಿದ್ದ ಗಂಡ ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗಿದ್ದಾರೆ. ಹೇಗೋ ಸಾವರಿಸಿಕೊಂಡು ತನ್ನ ಹೆಗಲ ಮೇಲೆ ಅವನ ಕೈ ಹಾಕಿಕೊಂಡು ಕಷ್ಟಪಟ್ಟು ಪಾವಟಿಗೆಗಳನ್ನು ಇಳಿದು ಕೆಳಗೆ ಬಂದು ತಲುಪುವುದರಲ್ಲಿ ಅವನ ನೋವು ಹೆಚ್ಚಾಗಿ, ತಲೆ ತಿರುಗಿ ನೆಲಕ್ಕೆ ಕುಸಿದೇ ಬಿಟ್ಟಿದ್ದ. ಹಾದಿಗುಂಟ ಹೊರಟಿದ್ದ ಜನರನ್ನು ಕರೆದು ಒಂದು ರಿಕ್ಷಾ ಪಡೆದಳು. ಮಕ್ಕಳಿಗೆ ಫೋನ್‌ ಮಾಡಿ ಬೇಗ ಬರುವಂತೆ ತಿಳಿಸಿ ಹೊರಟಳು. ಅವನ ತಲೆ ಇವಳ ತೊಡೆಯ ಮೇಲೆ. ಅವನು ಮಲಗಿದಲ್ಲಿಂದಲೇ ಇವಳೆಡೆಗೆ ನೋಡುತ್ತಿದ್ದ. ಆದರೆ ಅವಳು ಕಂಗಾಲಾಗಿ ಶೂನ್ಯ ದಿಟ್ಟಿಸುತ್ತಿದ್ದಳು. ಕಣ್ಣ ತುಂಬ ನೀರು. ಅವ್ಯಕ್ತ ನೋವು. ಎಂದೂ ಈ ರೀತಿ ಮಲಗಿದವನಲ್ಲ. ಅವನು ಮಲಗಿದಲ್ಲಿಂದಲೇ, “ಬದುಕು ಪೂರ್ತಿ ಇವಳಿಗಾಗಿ ನಾನು ವ್ಯಯಿಸಿದ ಸಮಯವೆಷ್ಟಿರಬಹುದು’ ಎಂದು ವಿಚಾರಿಸತೊಡಗಿದ.. ಜೀವನವೆಲ್ಲ ಮಕ್ಕಳಿಗೇ ಆಯಿತೇ? ಹೌದು, ಇವಳೆಡೆಗೆ ಒಂದಿಷ್ಟು ನೋಡಬೇಕಿತ್ತೇನೋ. ಅವಳೆಂದೂ ಇವನನ್ನು ಏನೂ ಬೇಡಿದವಳಲ್ಲ. ತಾನಾಯಿತು ತನ್ನ ಕೆಲಸವಾಯಿತು, ಎನ್ನುವಂತಹ ಯಾಂತ್ರಿಕ ಜೀವನ. ಆಸ್ಪತ್ರೆಯಿಂದ ಗುಣವಾಗಿ ಬಂದೊಡನೆ ಮೊದಲು ಅವಳೆಡೆಗೆ ಲಕ್ಷ ವಹಿಸುವ ದೃಢ ನಿರ್ಧಾರ ಮಾಡಿ, ಅವಳೆಡೆಗೆ ತೃಪ್ತಿಯ ನೋಟ ಬೀರಿ ಕಣ್ಣು ಮುಚ್ಚಿದ. ಇನ್ನು ಜೀವನ ಪೂರ್ತಿ ಹೆಂಡತಿಯ ಬೇಕು ಬೇಡಗಳೆಡೆಗೆ ಗಮನ ಕೊಡುವುದೆಂದು ಮನದಲ್ಲೇ ಅಂದುಕೊಂಡ. ಆದರೆ, ಅಂದುಕೊಂಡಂತೆ ಆದರೆ ಅದಕ್ಕೆ ಜೀವನ ಯಾಕನ್ನಬೇಕು… ಆಸ್ಪತ್ರೆ ತಲುಪುವುದರಲ್ಲಿ ಇವನ ಸ್ಥಿತಿ ಪೂರ್ತಿ ಬಿಗಡಾಯಿಸಿಬಿಟ್ಟಿತ್ತು.

…ಆತ ಏದುಸಿರು ಬಿಡುತ್ತಿದ್ದ. ತೀವ್ರ ಎದೆನೋವಿನಿಂದ ಸಂಕಟಪಡುತ್ತಿದ್ದ. ಆವಳು ಅವನ ಎದೆಯ ಮೇಲೆ ಕೈಯಾಡಿಸುತ್ತ ಸಾಂತ್ವನ ಹೇಳುತ್ತಿದ್ದಳು. ಮೈಯೆಲ್ಲಾ ಬೆವೆತು ತಣ್ಣಗಾಗಿದೆ. ನಿಶ್ಚೇಷ್ಟಿತನಾಗಿದ್ದಾನೆ. ಅವಳು ತನ್ನ ಸೆರಗಿನಿಂದ ಅವನ ಮುಖದ ಮೇಲಿನ ಬೆವರು ಒರೆಸುತ್ತ ಗಾಳಿ ಹಾಕುತ್ತಿದ್ದಾಳೆ….

ಆಸ್ಪತ್ರೆಯವರೇನೋ ಇವನನ್ನು ಸ್ಟ್ರೆಚರ್‌ ಮೇಲೆ ಹಾಕಿಕೊಂಡು ಎಮರ್ಜೆನ್ಸಿ ವಾರ್ಡಿಗೆ ಮುಟ್ಟಿಸಿದರು. ವೈದ್ಯರು ಕೂಡ ಓಡುತ್ತ ಬಂದರು. ಆದರೆ ಅವರು ಬಂದು ಪರೀಕ್ಷಿಸುವುದರೊಳಗೆ ಎಲ್ಲ ಮುಗಿದೇ ಹೋಗಿತ್ತು. ಬರೀ ಅರ್ಧ ಗಂಟೆಯ ಹಿಂದೆ ಉತ್ಸಾಹದಿಂದ, ಹುಮ್ಮಸ್ಸಿನಿಂದ ಓಡುತ್ತ, ಧಡ ಧಡನೆ ಅಟ್ಟ ಏರಿದ್ದ ಗಂಡ ಈಗ ಹೆಣವಾಗಿಬಿಟ್ಟಿದ್ದ…

ಇವಳಿಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದಂತಾಯಿತು. ಸಾವು ಇಷ್ಟೊಂದು ನಿರ್ದಯಿಯೇ? ಸಾವರಿಸಿಕೊಂಡು ಎದ್ದಳು. ಒಬ್ಬಳೇ ಕಷ್ಟಪಟ್ಟು ಹೊರಬಂದು ಒಂದು ರಿಕ್ಷಾ ಬಾಡಿಗೆ ಪಡೆಯಲು ಹೆಣಗಾಡಿದಳು. ಬರುವಾಗ ಬಂದ ಅದೇ ರೀಕ್ಷಾದವ ಈಗ ಬರಲಾರೆನೆಂದು ಸತಾಯಿಸತೊಡಗಿದ್ದ. “”ಜನರನ್ನು ಕರೆದೊಯ್ಯುವ ವಾಹನದಲ್ಲಿ “ಹೆಣ’ ಸಾಗಿಸುವುದೇ?” ಎಂದ. ಅವನನ್ನು ಅಂಗಲಾಚಿ ಬೇಡುತ್ತಾ ನಾಲ್ಕು ಪಟ್ಟು ದುಡ್ಡುಕೊಡುತ್ತೇನೆಂದಾಗ ಒಪ್ಪಿದ.

ಹೆಣ ಮನೆ ತಲುಪುವುದರೊಳಗೆ ಮಕ್ಕಳು ಬಂದಿದ್ದರು. ಈಗ ಮುಖ್ಯ ಸಮಸ್ಯೆ ಎಂದರೆ ಹೆಣ ಎಲ್ಲಿ ಕುಳ್ಳಿರಿಸುವುದು…? ಮಹಡಿಯ ಮೇಲೆ ಹೆಣ ಸಾಗಿಸುವುದು ಹೇಗೆ..? ಜೀವನ ಪೂರ್ತಿ ಮಕ್ಕಳನ್ನು ಏನೂ ಬೇಡದವಳು, ಏನಾದರೂ ಮಾಡಿ ತನ್ನ ಗಂಡನನ್ನು ಮೇಲೆ ಸಾಗಿಸಲು ಕೇಳಿಕೊಂಡಳು. ಅವರು ಸುಮ್ಮನಾದರು. ಬಾಡಿಗೆಗೆ ಕೊಟ್ಟ ಕೆಳಗಿನ ಮನೆಯವರನ್ನು ಇವಳೇ ಬೇಡಿಕೊಂಡಳು, ತನ್ನ ಗಂಡನನ್ನು ಒಂದೆರಡು ಗಂಟೆ ಕುಳ್ಳಿರಿಸಲು ಒಂದಿಷ್ಟು ಜಾಗೆ ನೀಡಿರೆಂದು. ಮನೆಯೊಳಗಂತೂ ಬೇಡ ಹೊರಗೆ ಪಡಸಾಲೆಯಲ್ಲಿ ಕುಳ್ಳಿರಿಸಲೂ ಅವರು ಸುತಾರಾಂ ಒಪ್ಪಲಿಲ್ಲ. ತಮಗೆ “ಸಂಬಂಧವಿರದ’ ವ್ಯಕ್ತಿಯ ಹೆಣ ತಮ್ಮ ಮನೆಯಲ್ಲಿಯೇ..? ಖಂಡಿತ ಸಾಧ್ಯವಿಲ್ಲ.

ಇವಳಿಗೆ ಹೇಗಾದರೂ ಮಾಡಿ ತನ್ನ ಗಂಡನನ್ನು ಮೇಲೆ ಸಾಗಿಸಿ ಚೆಂದ ಮಾಡಬೇಕೆನ್ನುವ ಬಯಕೆ. ಜೀವನ ಪೂರ್ತಿ ತಮಗಾಗಿ ದುಡಿದ ಅವನನ್ನು ಒಂದಿಷ್ಟು ಸಮಯ, ಅವನೇ ಕಟ್ಟಿಸಿ, ಬಾಳಿ ಬದುಕಿದ ಮನೆಯಲ್ಲಿಟ್ಟು, ಅವನ ಗುಣಗಾನ ಮಾಡಿ, 
ದುಃಖವನ್ನೆಲ್ಲಾ ಹೊರಹಾಕಿ. “ಬೀಳ್ಕೊಡುವ’ ಬಯಕೆ. ಜೊತೆಗೆ ಬಾಳ ಸಂಗಾತಿಯನ್ನು ಕಳೆದುಕೊಂಡ ಸಂಕಟ..
ಆದರೆ ಮಕ್ಕಳಿಗೆ ಅದಾವುದೂ ಅನಿಸುತ್ತಿಲ್ಲ. ಅವರಿಗೆ ಇದೊಂದು ಸಣ್ಣ ಪ್ರಾಕ್ಟಿಕಲ್‌ ಪ್ರಾಬ್ಲಿಮ್‌..ಅಷ್ಟೇ..! ಜೀವವಿಲ್ಲದ ದೇಹ ಎಲ್ಲಿ ಕುಳ್ಳಿರಿಸಿದರೇನು, ಏನು ಶೃಂಗಾರ ಮಾಡಿದರೇನು. ಹೆಣ ಶೃಂಗಾರವರಿಯದು..ಎಂಬ ಗಾದೆ ನೆನಪಿಸಿದರು, ಅವ್ವನಿಗೆ. ಎಷ್ಟಾದರೂ “ಕಲಿತವರಲ್ಲವೆ’? ಶಾಲೆಯಲ್ಲಿ ದಡ್ಡನಾದ, ತಮ್ಮೊಂದಿಗೇ ಉಳಿಯುವಂಥ ಒಬ್ಬ ಮಗನನ್ನು ಹೆರಬೇಕಿತ್ತೇನೋ? ಅನಿಸಿತವಳಿಗೆ.

ಸಮಯಕ್ಕೆ ಸರಿಯಾಗಿ ನೆರೆಹೊರೆಯವರು ಬಂದರು. ಅವರಂತೂ ಒಂದು ಹೆಜ್ಜೆ ಮುಂದೆ ಸಾಗಿ ಪಂಚಕದಲ್ಲಿ ಸತ್ತಿದ್ದಾನೆ, ಮನೆಯೊಳಗೆ ಒಯ್ಯುವುದು ಅನಿಷ್ಟ ಎಂದುಬಿಟ್ಟರು. ಅವಳ ಒಂದಿಷ್ಟೇ ಆಸೆಯೂ ಕಮರಿಹೋಯಿತು. ಕೊನೆಗೆ ಎಲ್ಲ ಸಾಧಕ-ಬಾಧಕಗಳನ್ನೂ ಲೆಕ್ಕ ಹಾಕಿ, ಮಕ್ಕಳೊಡನೆ “ಸಮಾಲೋಚಿಸಿ’ ಒಂದು ನಿರ್ಣಯಕ್ಕೆ ಬಂದರು. ಹೆಣವನ್ನು ಮೇಲೆ ಒಯ್ಯುವುದು ಬಹಳ ಕಷ್ಟದ ಕೆಲಸ, ಕೆಳಗಡೆ ಒಂದು ಸ್ಥಳ ಮಾಡೋಣ.., ಎನ್ನುತ್ತ ಆಚೀಚೆ ನೋಡಿದರೆ ಅಂಗಳದಲ್ಲೊಂದು ದೊಡ್ಡ ಆಲದ ಮರ. ಹೌದು. ಅವನೇ ತನ್ನ ಮಕ್ಕಳಿಗೆ ಜೋಕಾಲಿ ಕಟ್ಟಿ ಆಡಿಸಲು ತನ್ನ ಕೈಯಾರೆ ನೀರುಣಿಸಿ ಬೆಳೆಸಿದ ಮರ. ಮತ್ತೆ ಮರದ ಸುತ್ತಲೂ ಚೌಕಾದ ಕಟ್ಟೆ, ಮಕ್ಕಳು ಆಡಿಕೊಳ್ಳಲೆಂದು ಕಟ್ಟಿಸಿದ್ದು. ಎಲ್ಲರೂ ಒಕ್ಕೊರಲಿನಿಂದ ಹೇಳಿದ್ದು..

ಹೆಣವನ್ನು ಮನೆಯ ಮುಂದಿರುವ ಗಿಡದ ಕೆಳಗಿನ ಕಟ್ಟೆಯ ಮೇಲೆ ಕುಳ್ಳಿರಿಸುವುದು…ಹೆಂಡತಿ ಗಂಡನ ಹೆಣದ ಮುಂದೆ ಕುಳಿತು ಬೋರಾಡಿ ಅಳುತ್ತಿದಾಳೆ, ಅಸಹಾಯಕಳಾಗಿ. ದೊಡ್ಡ ಸಮಸ್ಯೆ ಬಗೆಹರಿಯಿತೆಂದು, “ಅಪ್ಪನಹೊರೆ’ ಸುಲಭವಾಗಿ ಇಳಿಯಿತೆಂದು ಮಕ್ಕಳು ಸಮಾಧಾನದ ನಿಟ್ಟುಸಿರುಬಿಟ್ಟರು. ಕೂಡಿದ ಜನರೂ ಹೆಣವನ್ನು ಚೆಂದಗೆ ಗಿಡಕ್ಕೆ ಆನಿಸಿ ಕುಳ್ಳಿರಿಸಿ, ಹಣೆಗೆ ಡಾಳಾಗಿ ವಿಭೂತಿ ಬಡಿದು, ತಲೆ ಆಚೀಚೆ ಬೀಳದಿರಲೆಂದು ಕುತ್ತಿಗೆಗೆ ಒಂದು ಅರಿವೆ ಬಿಗಿದು ತೃಪ್ತಿಯ ನಿಟ್ಟುಸಿರುಬಿಟ್ಟರು, ದೊಡ್ಡದೊಂದು ಭಾರ ಕಳೆಯಿತೆಂದು.

ಇತ್ತ…
ಅವನು ಬೆಳೆಸಿದ ಆಲದಮರ ಮಾತ್ರ ಅವನ ಕೊನೆಯ ಕ್ಷಣಕ್ಕೆ ನೆರಳು ಒದಗಿಸಿ, ಕರ್ತವ್ಯ ನಿಭಾಯಿಸಿದೆನೆಂದು ಧನ್ಯತೆಯ ಉಸಿರು ಹಾಕಿದ್ದು, ಟೊಂಗೆಯ ಮೇಲೆ ಕುಳಿತ ಪಕ್ಷಿಯೊಂದು ಗದ್ದಲಕ್ಕೆ ಹೆದರಿ ಹಾರಿ ಹೋಗಿದ್ದು, ಹತಭಾಗ್ಯ ಹೆಂಡತಿ ಸಂಕಟಪಟ್ಟಿದ್ದು, “ಹೆಣ ವಿಸರ್ಜನೆ’ ಮಾಡಲು ಕೂಡಿದ್ದ ಜನರ ಗಮನಕ್ಕೆ ಬರಲೇ ಇಲ್ಲ…. 

ಡಾ. ಶಿವಾನಂದ ಕುಬಸದ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ