ನನ್ನ ಧ್ವನಿ ನನ್ನ ಅಸ್ತಿತ್ವ
Team Udayavani, Apr 23, 2021, 12:31 PM IST
ದೇಹದ ಎಲ್ಲ ಅಂಗಾಂಗಗಳು ಸರಿಯಾಗಿ ದ್ದರೆ ನಾವು ಯಾವು ದರ ಬಗ್ಗೆಯೂ ಗಮನಿಸು ವು ದಿಲ್ಲ. ಆದರೆ ಎಲ್ಲೋ ಒಂದು ಸಣ್ಣ ವ್ಯತ್ಯಾಸವಾದರೆ ಅಥವಾ ನೋವು ಕಾಣಿಸಿಕೊಂಡರೆ ಮಾತ್ರ ಅದರ ಪ್ರಾಮುಖ್ಯ ತಿಳಿಯುತ್ತದೆ. ಸರಿಯಾಗಿ ಕೇಳುತ್ತಿದ್ದ ಕಿವಿ ದಿನೇ ದಿನೇ ಮಂದವಾಗ ತೊಡಗಿದಾಗ, ಕಾಣಿಸುತ್ತಿದ್ದ ಜಗತ್ತು ಸ್ವಲ್ಪ ಮಂಜಾಗತೊಡಗಿದಾಗ, ಕಾಲುಗಳು ನಡೆಯಲು ಸೋತಾಗ, ಎಲ್ಲರಿಗೂ ಕೇಳ್ಳೋ ಹಾಗೆ ಜೋರಾಗಿದ್ದ ಧ್ವನಿ ಉಡುಗಿಹೋದಾಗ ಈ ಬಗ್ಗೆ ನಾವು ಹೆಚ್ಚು ಯೋಚನೆ ಮಾಡ ತೊ ಡಗುತ್ತೇವೆ.
ಧ್ವನಿ ಅನ್ನೋದು ನಮ್ಮ ಗುರುತು. ಮಗು ಹುಟ್ಟಿದಾಗಿನ ಅಳು, ಅದರ ಮೊದಲ ತೊದಲ ನುಡಿ, ಮೊದಲ ಪದ, ಮಾತು, ಜಗಳ ಇದೆಲ್ಲದರಲ್ಲೂ ನಮ್ಮತನವಿದೆ. ಅದು ನಮ್ಮ ಧ್ವನಿ.
ನಮ್ಮ ಧ್ವನಿಯ ಬಗೆಗಿನ ಅರಿವು ಹಾಗೂ ಒಲವು ಹೆಚ್ಚಾಗುವುದು ನಾವು ಅದರ ಅಸ್ತಿತ್ವವನ್ನು ಕಳೆದುಕೊಂಡ ಮೇಲೆ. ಈಗ ತಾನೆ ಮೀಸೆ ಚಿಗುರುತ್ತಿರುವ ಯುವಕನಲ್ಲಿ, ಒಬ್ಬ ಹಾಡುಗಾರನಲ್ಲಿ, ಈಗಷ್ಟೇ ಕೆಮ್ಮು, ನೆಗಡಿ ಎಂದು ಮಲಗಿರುವವರೊಬ್ಬರಲ್ಲಿ ಕೇಳ ಬೇಕು ಧ್ವನಿಯ ಪ್ರಾಮುಖ್ಯದ ಬಗ್ಗೆ. ಹೀಗೆ ಯಾರ್ಯಾರಿಗೆ ಇದರ ಅರಿವಾಗಿರುತ್ತದೆ ಎಂಬ ಪಟ್ಟಿ ದೊಡ್ಡದಾಗುತ್ತದೆ.
ಶಾಲೆಯ ಒಬ್ಬ ಕಿಲಾಡಿ ಹುಡುಗನಿಂದ ಹಿಡಿದು, ಚುನಾವಣೆಯ ಪ್ರಚಾರಕ್ಕೆ ನಿಂತಿರುವ ರಾಜಕಾರಣಿಗಳ ತನಕ ಈ ಧ್ವನಿಯ ಬದಲಾವಣೆ ಅನ್ನೋದನ್ನು ಅನುಭವಿಸಿಯೇ ಇರುತ್ತಾರೆ. ಕೆಲವೊಮ್ಮೆ ಏನೂ ಮಾಡದೆಯೇ ಸರಿ ಹೋಗುತ್ತದೆ. ಆದರೆ ಶೇ. 50ರಷ್ಟು ಜನರಲ್ಲಿ ಇದೊಂದು ಸಮಸ್ಯೆಯಾಗಿಯೇ ಉಳಿಯುತ್ತದೆ.
ಹೀಗೆ ಧ್ವನಿಯ ಬದಲಾವಣೆ ಅನುಭವಿಸಿದವರಲ್ಲಿ ಅವರ ಅನುಭವವನ್ನು ಕೇಳಿದರೆ ತಿಳಿಯುತ್ತದೆ. ಅವರೆಲ್ಲರೂ ಬೇರೆ ಬೇರೆ ವಯಸ್ಸಿನವರಾದರೂ ಎಲ್ಲರನ್ನೂ ಕಾಡೋದು ತನ್ನಲ್ಲಿದ್ದ ಕಣ್ಣಿಗೆ ಕಾಣದ್ದೇನೋ ಒಂದನ್ನು ಕಳೆದುಕೊಂಡ ಭಾವ. ಅದೊಂದು ಶೂನ್ಯ ಭಾವ. ನಮ್ಮೊಳಗೇ ಇದ್ದ, ಅಡಗಿದ್ದ ಧ್ವನಿಯನ್ನು ಕಳೆದುಕೊಂಡು ಕೂತಾಗ, ನಮ್ಮ ಮನಸ್ಸು ನಮ್ಮೆದುರಿಗಿಡುವ ಚಿತ್ರವೇ ಬೇರೆ. ಯಾಕೆಂದರೆ ಇಷ್ಟು ದಿನ ನನ್ನ ಮನಸ್ಸಿಗೆ ಅನ್ನಿಸಿದ್ದನ್ನು, ಜಗತ್ತಿಗೆ ಹೇಳಬೇಕೆಂದುಕೊಂಡಿದ್ದನ್ನು ಒಂದು ನಿಮಿಷವೂ ಯೋಚಿಸದೇ ಹೇಳುತ್ತಿದ್ದೆ ಅದು ನನ್ನದೇ ಧ್ವನಿಯಲ್ಲಿ. ಆದರೆ ಅದೇ ಇಲ್ಲವೆಂದರೆ ನಾವು ನಂಬಲಾಗದೊಂದು ಸತ್ಯ. ಇಂತಹ ಧ್ವನಿ ಸಮಸ್ಯೆ, ಮಾತ್ರೆ ನುಂಗಿದರೆ ಹೋಗುವಂಥದ್ದಲ್ಲ. ಸಾಮಾನ್ಯವಾಗಿ ಧ್ವನಿ ಪಟಲಕ್ಕೆ ಪೆಟ್ಟಾದರೆ ಅದನ್ನು “ಧ್ವನಿ ಥೆರಪಿ’ ಮುಖಾಂತರ ವಾಕ್ ಮತ್ತು ಶ್ರವಣ ತಜ್ಞರು ಸರಿಪಡಿಸುತ್ತಾರೆ.
ಹೀಗೆ ತನ್ನ ಧ್ವನಿಯನ್ನು ಕಳೆದುಕೊಂಡು ಬಂದಿದ್ದಳು ಮಾಲಾ (ಹೆಸರು ಬದಲಿಸಲಾಗಿದೆ). ಮದುವೆಯಾಗಿ 3 ವರ್ಷದ ಅನಂತರ ಪುಟ್ಟ ಮಗುವೊಂದಕ್ಕೆ ಜನ್ಮ ನೀಡಿದ ಖುಷಿಗೆ ತನ್ನೆಲ್ಲ ನೋವನ್ನು ಮರೆತಿದ್ದಳು. ಮಗು ಹುಟ್ಟಿದ ಮಾರನೇ ದಿನವೇ ಆಕೆಗೆ ಅರಿವಾಗಿದ್ದು ತನ್ನ ಧ್ವನಿಯಲ್ಲೇನೋ ಬದಲಾವಣೆಯಾಗಿದೆ ಎಂದು. ಸ್ಪಷ್ಟವಾಗಿ ಯಾರ ಬಳಿಯೂ ಮಾತನಾಡಲಾಗುತ್ತಿರಲಿಲ್ಲ. ಯಾರಿಗೂ ಈಕೆ ಮಾತಾಡಿದ್ದು ಕೇಳಿಸುತ್ತಲೇ ಇರಲಿಲ್ಲ. ಅದರಲ್ಲೂ ತನ್ನ ಮಗುವಿಗೆ ಜೋಗುಳವನ್ನೂ ಹಾಡಲಾಗುತ್ತಿರಲಿಲ್ಲ. ಹೀಗಾದ ಒಂದೆರಡು ದಿನದಲ್ಲಿ ವೈದ್ಯರ ಬಳಿ ಹೋಗಿ ಕಷ್ಟವನ್ನು ಹೇಳಿಕೊಂಡಳು. ಅಲ್ಲಿ ಪರೀಕ್ಷೆಯನ್ನೆಲ್ಲ ಮಾಡಿಸಿದಳು. ಅನಂತರ ತಿಳಿಯಿತು, ಮಗು ಜನನದ ವೇಳೆ ಈಕೆ ನೋವಿನಲ್ಲಿ ಚೀರಾಡಿದ ಹೊಡೆತಕ್ಕೆ ಅವಳ ಧ್ವನಿ ಪಟಲಕ್ಕೆ ಪೆಟ್ಟಾಗಿದೆ ಎಂದು. ಹೀಗಾಗಿ ತನ್ನ ಧ್ವನಿಯನ್ನು ಹೇಗಾದರೂ ಸರಿಪಡಿಸುತ್ತೀರಾ ಎಂದು ನನ್ನೆದುರಿಗೆ ನಿಂತಿದ್ದಳು.
ಮಾಲಾಳ ಕಥೆ ಅಪರೂಪ. ಶಿಕ್ಷಕರು, ಹಾಡುಗಾರರು, ರಾಜಕಾರಣಿಗಳು, ಕ್ಯಾನ್ಸರ್ ಪೀಡಿತರು ಧ್ವನಿ ಸಮಸ್ಯೆಯಿದೆ ಎಂದು ಬರುವುದು ಸಾಮಾನ್ಯ. ಆದರೆ ಒಂದು ಜೀವಕ್ಕೆ ಜೀವ ಕೊಡುವಾಗ ಹೀಗಾಗಿದ್ದು ಕೇಳಿದ್ದು ಇದೇ ಮೊದಲು. ವಾಕ್ ಚಿಕಿತ್ಸೆಯ ಮೊದಲ ದಿನ ತನ್ನ ಕನಸುಗಳು, ಆಸೆಗಳನ್ನೆಲ್ಲ ಜೋಡಿಸಿ ತನ್ನದೊಂದು ಕಥೆಯನ್ನು ಬರೆದು ತಂದಿದ್ದಳು. ಒಬ್ಬ ಮಹಿಳೆ ತಾಯಿಯಾಗುತ್ತಿದ್ದೇನೆ ಎಂಬ ವಾಸ್ತವವನ್ನು ಒಪ್ಪಿದ ಅನಂತರ ಒಂಬತ್ತು ತಿಂಗಳುಗಳ ಕಾಲ ಕಂದನ ಬರುವಿಕೆಯ ಕನಸಲ್ಲೇ ಮುಳುಗಿ ಬಿಡುತ್ತಾಳೆ. ತನ್ನಮ್ಮ ಹೇಳುತ್ತಿದ್ದ ಜೋಗುಳದ ಪದ್ಯ, ಸಣ್ಣ ಕಥೆಗಳು, ಮಗುವಿನ ಭಾಷೆಯನ್ನು ನೆನೆದು, ಮನಸ್ಸು ಹಾಗೂ ಶಾರೀರಿಕವಾಗಿ ಸಿದ್ಧತೆ ನಡೆಸಿರುತ್ತಾಳೆ. ಆದರೆ ಬದುಕೊಂದು ತಿರುವುಗಳಿರುವ ದೊಡ್ಡಯಾತ್ರೆ. ಇಲ್ಲಿ ಮುಂದೆ ತಿರುವಿದೆ ಎಂಬ ನಾಮಫಲಕಗಳಿಲ್ಲ. ಹಾಗಾಗಿ ಆಶ್ಚರ್ಯ ಖಚಿತ. ತನಗರಿವಿಲ್ಲದ ಕಷ್ಟಕ್ಕೆ ಸಿಲುಕಿದ್ದಳು ಮಾಲಾ. ಆದರೆ ಅವಳಲ್ಲಿ ಭರವಸೆಯೆಂಬ ಆಯುಧವಿತ್ತು. ತನ್ನ ಮಗುವಿಗೆಲ್ಲಿ ತನ್ನ ಗುರುತೇ ಸಿಗದಂತಾಗುತ್ತದೋ ಎಂಬ ಆತಂಕವಿದ್ದರೂ, ಅವಳು ಎಲ್ಲ ಭಯವನ್ನು ಮೆಟ್ಟಿ ನಿಂತಳು. ತನ್ನ ಧ್ವನಿ ಸರಿಯಾಗಲೇಬೇಕೆಂಬ ಹಠ ಅವಳಲ್ಲಿತ್ತು. ಹೀಗಾಗಿ ನಮ್ಮ ಥೆರಪಿ ಫಲಕೊಟ್ಟಿತು.
ಆಕೆಯ ಮಗುವಿಗೀಗ 5 ವರ್ಷವಿರಬಹುದು. ತನ್ನಂತೆಯೇ ಹಾಡಲು, ಮಾತಾಡಲು ಹೇಳಿಕೊಟ್ಟಿದ್ದಾಳೆ. ಅವಳನ್ನು ನೋಡಿ ವರ್ಷ ಕಳೆ ದರೂ ಅವಳು ಹೇಳುತ್ತಿದ್ದ ಮಾತೊಂದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇದ್ದೇ ಇತ್ತು. ಆಕೆ ಹೇಳುತ್ತಿದ್ದಳು, ನನ್ನದೇ ಧ್ವನಿಯಿದು. ನನ್ನ ಅಸ್ತಿತ್ವವಿದು. ಎಲ್ಲೋ ಅಡಗಿ ಕುಳಿತಿದೆ. ನನ್ನ ಮಗು ನನ್ನ ಧ್ವನಿಯನ್ನು ಕೇಳಿ ಅಳುವುದನ್ನು ನಿಲ್ಲಿಸಬೇಕು. ನನ್ನ ಧ್ವನಿಯಲ್ಲಿ ಜೋಗುಳವನ್ನು ಕೇಳಿ ಮೆಲ್ಲಗೆ ನಿದ್ದೆಗೆ ಜಾರಬೇಕು. ಹೀಗೆ ಹಲ ವು ತಿಂಗಳುಗಳ ಕಾಲ ಶತಪ್ರಯತ್ನ ಮಾಡಿ, ತನ್ನ ಧ್ವನಿಯನ್ನು ಶೇ. 80ರಷ್ಟು ಮರಳಿ ಪಡೆದಿದ್ದಾಳೆ.
ಇತ್ತೀಚೆಗೆ ಅವಳನ್ನು ಮಗುವಿನೊಂದಿ ಗೆ ಪೇಟೆಯಲ್ಲಿ ನೋಡಿದೆ. ಅವಳ ಮಾತಿಗೆ ಮಗುವಿನ ಕೇಕೆ ಕೇಳುವುದರಲ್ಲೇ ಒಂದು ಸಂಭ್ರಮವಿತ್ತು. ಎ. 16 ಜಾಗತಿಕ ಧ್ವನಿಯ ದಿನ. ಈ ಸಂದ ರ್ಭ ದಲ್ಲಿ ಮಾಲಾ ನೆನ ಪಾ ಗಿ ದ್ದಾಳೆ.
ಸ್ಫೂರ್ತಿ ವಾನಳ್ಳಿ, ತಸ್ಮೇನಿಯಾ