
ಮಾತಿಗೂ ಬಿತ್ತು ಬ್ರೇಕ್ !
Team Udayavani, Mar 22, 2023, 2:00 PM IST

ಅಮೆರಿಕಕ್ಕೆ ಬಂದು ಬರೋಬ್ಬರಿ ಇಪ್ಪತ್ತಮೂರು ವರ್ಷ. ಅಂಗರಕ್ಷಕರಂತೆ ಸುತ್ತಲೂ ಸದಾ ಬಿಳಿಯರೇ ತುಂಬಿಕೊಂಡಿರುತ್ತಾರೆ. ಅದು ಕಚೇರಿಯಾಗಿರಲಿ, ಮಾರುಕಟ್ಟೆಯಾಗಿರಲಿ… ನೆಚ್ಚಿನ ಪ್ರವಾಸಿ ತಾಣವೇ ಆಗಿರಲಿ. ಇಲ್ಲಿಗೆ ಬಂದ ಮೇಲೆ ಅನ್ನಿಸಿದ್ದು ನಮ್ಮೂರಲ್ಲಿ ಮಾತ್ರ ಕಪ್ಪು, ಬಿಳಿ, ಗೋಧಿ ಬಣ್ಣ… ಹೀಗೆ ಬೇರೆಬೇರೆ ವರ್ಣದವರನ್ನು ಕಾಣಲು ಸಾಧ್ಯವಿದೆ ಎಂದು.
ಕಚೇರಿಗೆ ಬಂದಾಗ ನನಗೆ ಇಲ್ಲಿ ರಾಜ ಮಾರ್ಯಾದೆ. ಯಾಕೆಂದರೆ ನನ್ನ ಅಕ್ಕಪಕ್ಕ ಕುಳಿತುಕೊಳ್ಳುವವರೆಲ್ಲರೂ ಬಿಳಿಯರೇ. ಅಲ್ಲೊಬ್ಬ, ಇಲ್ಲೊಬ್ಬ ಬೇರೆ ಬಣ್ಣದವರಿದ್ದರೂ ನನ್ನ ಸಮೀಪದಲ್ಲಿ ಯಾರೂ ಇಲ್ಲ. ಹೀಗಾಗಿ ಬಿಳಿಯರ ಸಾಮ್ರಾಜ್ಯದಲ್ಲಿ ನಾನೇ ಒಡೆಯ ಎಂದು ಎಷ್ಟೋ ಬಾರಿ ಅನ್ನಿಸಿದ್ದಿದೆ.
ಇನ್ನು ಭಾಷೆಯ ವಿಷಯಕ್ಕೆ ಬಂದರೂ ನಮ್ಮ ಕಚೇರಿಯಲ್ಲಿ ಅಲ್ಲೊಬ್ಬ, ಇಲ್ಲೊಬ್ಬ ತೆಲುಗು, ತಮಿಳು, ಹಿಂದಿ, ಮಲಯಾಳಿ ಭಾಷಿಕರು ಇದ್ದಾರೆ. ಆದರೆ ನನ್ನದು ಮಾತ್ರ ನಮ್ಮ ಉತ್ತರ ಕರ್ನಾಟಕದ ಪಕ್ಕಾ ಖಡಕ್ ಜವಾರಿ ಹಳ್ಳಿ ಭಾಷೆ. ಹೀಗಾಗಿ ನಮ್ಮೂರ ಭಾಷೆಯೇ ಬಾರದವರ ಮುಂದೆ ಅದನ್ನು ಮಾತನಾಡುವುದು ಹೊಟ್ಟೆ ತುಂಬಾ ಭೂರಿ ಭೋಜನ ಸವಿದಷ್ಟು ಸಂತೋಷ ಕೊಡುತ್ತದೆ. ಒಂದು ಕಾಲದಲ್ಲಿ ನಮ್ಮೂರಲ್ಲಿ ಯಾರಾದ್ರೂ ಇಂಗ್ಲಿಷ್ ಮಾತನಾಡಿದರೆ ಎಲ್ಲರೂ ಅವರನ್ನು ಎವೆಯಿಕ್ಕದೆ ನೋಡುತ್ತಿದ್ದರು. ಅವರಾಡುವ ಪ್ರತಿಯೊಂದು ಪದಗಳನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು. ಅದರ ಅರ್ಥ ಗೊತ್ತಿಲ್ಲದೇ ಇದ್ದರೂ ಕಂಠಪಾಠ ಮಾಡಿ ಅದನ್ನು ಉತ್ಛರಿಸುವ ಸೊಗಸನ್ನು ಕೇಳುವುದೇ ಚಂದ. ಅಪ್ಪಿ ತಪ್ಪಿ ಯಾರಾದ್ರೂ ಆ ಭಾಷೆ ಗೊತ್ತಿದ್ದವರು ತಿಳಿಯದಂತೆ ಜತೆ ಇದ್ದು, ಬಳಿಕ ತಿಳಿದರೆ ಜಂಘಾಬಲವೇ ಉಡುಗಿಹೋಗುತ್ತದೆ. ಅನಂತರ ಯಾರೂ ಅವರ ಮುಂದೆ ಇಂಗ್ಲಿಷ್ ಭಾಷೆಯ ಒಂದೇ ಒಂದು ಪದವನ್ನೂ ಅಪ್ಪಿತಪ್ಪಿಯೂ ಹೇಳಲಾರರು.
ಇತ್ತೀಚಿನ ಒಂದು ಪ್ರಸಂಗ:
ಒಮ್ಮೆ ಕಚೇರಿಯಲ್ಲಿದ್ದಾಗ ಹಳೆ ದೋಸ್ತು ಫೋನ್ ಮಾಡಿದ್ದ. ಸುಮಾರು ಇಪ್ಪತ್ತು ನಿಮಿಷ ಗಳವರೆಗೆ ಮಾತನಾಡಿದೆವು. ಅದರಲ್ಲಿ ಹಲವು ಬಾರಿ ಕಳ್ಳ, ಸೂ.. ಮಗ, ಮಿಂ.. ಮಗ, ಏನಲೇ, ನಿನೌನ್, ಸೆಂ… ಹೀಗೆ ಸಹಜ ಸುಂದರವಾದ ಹಳ್ಳಿ ಭಾಷೆಯನ್ನೇ ಮಾತನಾಡಿದೆವು. ಅಕ್ಕಪಕ್ಕದವರಿಗೆ ಯಾರಿಗೂ ಇದರ ಅರ್ಥವೇನು ಎಂದು ಗೊತ್ತಿಲ್ಲವಲ್ಲ ಎಂಬ ಖುಷಿ ಮನದೊಳಗೆ.
ಕಚೇರಿಯಲ್ಲಿ ನನ್ನ ಹೆಸರು ಬಸವರಾಜ್ ಎಂದಿದ್ದರೂ ಎಲ್ಲರಿಗೂ ನಾನು ಪ್ರೀತಿಯ ರಾಜ್ ಆಗಿದ್ದೆ. ಆ ದಿನ ಮಧ್ಯಾಹ್ನ ಊಟದ ಸಮಯ. ಕಚೇರಿಗೆ ಹೊಸದಾಗಿ ಸೇರಿರುವ ಬೆಳ್ಳನೆಯ ಹುಡುಗಿಯೊಬ್ಬಳು ಬಂದು ಎದುರು ಕುಳಿತಳು. ರಾಜ್, ನೀವು ಫೋನ್‌ನಲ್ಲಿ ಕನ್ನಡ ಭಾಷೆ ಮಾತನಾಡಿದ್ದು ಕೇಳಿ ತುಂಬಾ ಸಂತೋಷವಾಯಿತು. ಬಹಳ ವರ್ಷ ಬೆಂಗಳೂರಿನಲ್ಲಿ ಇದ್ದೆ. ಹೀಗಾಗಿ ಕನ್ನಡ ತುಂಬಾ ಚೆನ್ನಾಗಿ ಬರುತ್ತದೆ ಎಂದಾಗ ಬೆಪ್ಪನಂತಾದ ಅನುಭವನ ನನ್ನದು. ಕೊನೆಗೆ ತಿಳಿದದ್ದು, ಆಕೆ ಕೇರಳದವಳೆಂದು. ಇವತ್ತಿಂದ ಕಥೆ ಮುಗೀತು. ಇನ್ಮುಂದೆ ಆಫೀಸ್‌ನಲ್ಲಿ ಫ್ರೀಯಾಗಿ ಕನ್ನಡ ಮಾತನಾಡೋ ಹಾಗಿಲ್ಲ. ಬಾಯಿಗೆ ಫಿಲ್ಟರ್ ಹಾಕಿಕೊಂಡೇ ಮಾತನಾಡಬೇಕು. ಯಾಕೆಂದರೆ ಆ ಕೇರಳ ಹೊಸ ಹುಡುಗಿ ಬಂದು ಅಸೀನಳಾಗಿರುವುದು ನನ್ನ ಪಕ್ಕದಲ್ಲೇ… ಹೀಗಾಗಿ ನನ್ನ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುವಾಗ ಕೊಂಚ ಬ್ರೇಕ್ ಹಾಕಿ ಅತ್ತಿತ್ತ ಯಾರಾದರೂ ಭಾಷೆ ಬಲ್ಲವರು ಇದ್ದಾರೆಯೋ ಎಂದು ನೋಡುವುದು ಈಗ ಅನಿವಾರ್ಯವಾಗಿದೆ.
-ಬೆಂಕಿ ಬಸಣ್ಣ,ನ್ಯೂಯಾರ್ಕ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ