ಮತ್ತೆ ಕಲ್ಯಾಣದೆಡೆಗೆ ನಮ್ಮ ನಡಿಗೆ

ಬಸವಾದಿ ಶರಣರ ನೈಜ ತತ್ವಗಳನ್ನು ಜನಸಾಮಾನ್ಯರಿಗೆ ಪರಿಚಯಿಸುವ ಉದ್ದೇಶದಿಂದ ರಾಜ್ಯಾದ್ಯಂತ ಯಾನ

Team Udayavani, Jul 28, 2019, 5:00 AM IST

q-33

ಕರ್ನಾಟಕದ ಜನರಿಗೆ ‘ಶ್ರಾವಣ’ ಮಾಸದ ಪರಿಚಯ ಇದ್ದೇ ಇದೆ. ಹಿಂದೆ ಶ್ರಾವಣದಲ್ಲಿ ಬಹುತೇಕ ಊರುಗಳಲ್ಲಿ ಬಸವಾದಿ ಶಿವಶರಣರ, ಮತ್ತಿತರ ವಿಚಾರಗಳಿಗೆ ಸಂಬಂಧಿಸಿದಂತೆ ಪುರಾಣ ಶ್ರವಣ ತಿಂಗಳುಗಟ್ಟಲೆ ನಡೆಯುತ್ತಿದ್ದವು. ಅದರಲ್ಲಿ ಹೆಣ್ಣು-ಗಂಡು ಎನ್ನದೆ, ಮಕ್ಕಳಾದಿಯಾಗಿ ಎಲ್ಲ ವಯಸ್ಸಿನ ಜನರೂ ಶ್ರದ್ಧೆಯಿಂದ ಭಾಗವಹಿಸುತ್ತಿದ್ದರು. ನೀತಿಯುತ ಕತೆಗಳನ್ನು ಕೇಳಿ ತಾವೂ ಅವರಂತಾಗಬೇಕು ಎನ್ನುವ ಭಾವನೆ ಬೆಳೆಸಿ ಕೊಳ್ಳುತ್ತಿದ್ದರು. ಕಾಲ ಬದಲಾದಂತೆ ಆ ಸ್ಥಾನವನ್ನು ದೃಶ್ಯಮಾಧ್ಯಮಗಳು ಆಕ್ರಮಿಸಿಕೊಳ್ಳಲಾರಂಭಿಸಿದವು. ಈಗಂತೂ ಪುರಾಣ ಶ್ರವಣ ವಯೋವೃದ್ಧರಿಗೆ ಸೀಮಿತ ಎನ್ನುವ ಭಾವನೆ ಬಂದು ಧಾರ್ಮಿಕ ಶೂನ್ಯ ಆವರಿಸಿದೆ. ಇದನ್ನು ಗಮನಿಸಿ ಕಳೆದ 5 ವರ್ಷಗಳ ಹಿಂದೆ (2013) ದಾವಣಗೆರೆ ನಗರದಲ್ಲಿ ‘ಮನೆಯಲ್ಲಿ ಮಹಾಮನೆ’ ಎನ್ನುವ ಹೆಸರಿನಲ್ಲಿ ಒಂದು ತಿಂಗಳು ವಚನಗೀತೆ, ಉಪನ್ಯಾಸ, ಆಶೀರ್ವಚನ ಕಾರ್ಯಕ್ರಮ ಏರ್ಪಡಿಸಿದ್ದೆವು. ಮರುವರ್ಷದಿಂದ ಆಯ್ದ ಎರಡು ತಾಲೂಕಿನ 30 ಊರುಗಳಲ್ಲಿ ಇನ್ನೂ ವಿಭಿನ್ನವಾಗಿ ಸಾಣೇಹಳ್ಳಿಯ ‘ಶಿವಾನುಭವ ಸಮಿತಿ’ಯಿಂದ ಕಾರ್ಯಕ್ರಮ ನಡೆಸುತ್ತ ಬರಲಾಯಿತು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮದ ಸ್ವರೂಪ
‘ಕಲ್ಯಾಣ’ ಎಂದರೆ ಮದುವೆ ಮಾಡಿಸುವ ಸಂಸ್ಥೆಯೇ, ಹೆಸರು ನೊಂದಾಯಿಸಿಕೊಳ್ಳುವಿರಾ, ಕಲ್ಯಾಣಕ್ಕೆ ಪ್ರವಾಸವೇ, ಯಾವಾಗ ಹೊರಡುವುದು, ಎಷ್ಟು ಹಣ, ಏನೇನು ಸೌಲಭ್ಯ, ಮತ್ತೆ ಕಲ್ಯಾಣ ಎಂದರೆ ಏನು… ಹೀಗೆಲ್ಲ ಕೇಳಿದವರೂ ಇದ್ದಾರೆ. ‘ಕಲ್ಯಾಣ!’ ಹೆಸರೇ ರೋಮಾಂಚನಕಾರಿ. ಕಲ್ಯಾಣ ಎಂದರೆ ಮಂಗಳ, ಒಳಿತು, ಲೇಸು, ಅಭ್ಯುದಯ. 12ನೆಯ ಶತಮಾನದಲ್ಲಿ ಬಸವಾದಿ ಶಿವಶರಣರು ಇಂದಿನ ಬಸವಕಲ್ಯಾಣವನ್ನು ಕೇಂದ್ರವಾಗಿಸಿಕೊಂಡು ಸಕಲ ಜೀವಾತ್ಮರ ಒಳಿತಿಗಾಗಿ ಮಾಡಿದ ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪರಿವರ್ತನೆ ಎಂದೆಂದಿಗೂ ಚಿರಸ್ಮರಣೀಯ. ಹದಗೆಟ್ಟ ಇಂದಿನ ಸಾಮಾಜಿಕ ಪರಿಸರವನ್ನು ಸುಧಾರಿಸಲು ಅನಿವಾರ್ಯವಾಗಿ ಅಂದಿನ ಕ್ರಾಂತಿ ಈಗ ಬೇಕಾಗಿದೆ. ಅದಕ್ಕಾಗಿ ಮತ್ತೆ ಕಲ್ಯಾಣದತ್ತ ಮುಖ ಮಾಡಬೇಕಾಗಿದೆ. ಮುಖ ಮಾಡುವುದು ಎಂದರೆ ಅಂದು ಶರಣರು ಬದುಕನ್ನು ಕಟ್ಟಿಕೊಳ್ಳಲು ಅನುಭವಮಂಟಪದ ಮೂಲಕ ಮಾಡಿದ ಪ್ರಯತ್ನವನ್ನು ಇಂದು ನೆನಪಿಸಿಕೊಳ್ಳುವುದು. ಈ ನೆಲೆಯಲ್ಲಿ ಜನಜಾಗೃತಿ ಮೂಡಿಸುವ, ಯುವ ಪೀಳಿಗೆಯಲ್ಲಿ ವಿಚಾರ ಕ್ರಾಂತಿಯ ಬೀಜಗಳನ್ನು ಬಿತ್ತುವ ಸದಾಶಯ ಈ ಯಾತ್ರೆಯ ಹಿಂದಿದೆ.

ಹಿಂದೆ ಹೇಗಿತ್ತು?

2014ರಲ್ಲಿ ಚಿತ್ರದುರ್ಗ-ದಾವಣಗೆರೆ, 2015ರಲ್ಲಿ ಹೊಳಲ್ಕೆರೆ- ತರೀಕೆರೆ, (2016ರಲ್ಲಿ ನಮಗೆ ಅಪಘಾತವಾದ ಕಾರಣ ಮುಂದೂಡಲಾಗಿತ್ತು.) 2017ರಲ್ಲಿ ರಾಣೇಬೆನ್ನೂರು-ಹಿರೇಕೇರೂರು, 2018ರಲ್ಲಿ ಹರಪನಳ್ಳಿ-ಕೊಟ್ಟೂರು ತಾಲ್ಲೂಕಿನ ಗ್ರಾಮಗಳಲ್ಲಿ ಒಂದು ತಿಂಗಳ ಕಾಲ ಕಾರ್ಯಕ್ರಮ ನಡೆಯಿತು. ಆಗ ಊರವರೆಲ್ಲರೂ ವಾರಗಟ್ಟಲೆ ಸಾಮೂಹಿಕ ಶ್ರಮದಾನದ ಮೂಲಕ ಊರಿನ ಒಳ-ಹೊರಗೆ ಸ್ವಚ್ಛ ಮಾಡುವುದು, ಮನೆಗೊಂದು ಸಸಿ ವಿತರಿಸಿ ಅವುಗಳನ್ನು ನೆಟ್ಟು ಬೆಳೆಸುವಂತೆ ಪ್ರೋತ್ಸಾಹಿಸುವುದು, ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಮತ್ತು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸುವುದು, ಶೌಚಾಲಯದ ಬಗ್ಗೆ ಅರಿವು ಮೂಡಿಸುವುದು, ಜನ-ಜಾನುವಾರುಗಳ ಆರೋಗ್ಯ ತಪಾಸಣಾ ಶಿಬಿರ ಹೀಗೆ ವಿವಿಧ ಚಟುವಟಿಕೆಗಳನ್ನು ಗ್ರಾಮದವರೆಲ್ಲರೂ ಶ್ರದ್ಧೆಯಿಂದ ಮಾಡುತ್ತಿದ್ದರು. ಕಾರ್ಯಕ್ರಮದ ದಿನ ಪ್ರತಿಮನೆಯ ಮುಂದೆ ರಂಗೋಲಿ ಬಿಡಿಸಿ, ತಳಿರು-ತೋರಣ ಕಟ್ಟಿ ನಮ್ಮೊಂದಿಗೆ ಊರವರೆಲ್ಲ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದರ ಮೂಲ ಉದ್ದೇಶ ಜಾತ್ಯತೀತ ಮನೋಭಾವ ಬೆಳೆಸುವುದು, ಶರಣರ ವಿಚಾರಗಳನ್ನು ಮನವರಿಕೆ ಮಾಡುವುದು, ಲಿಂಗಭೇದ ತೊಲಗಿಸುವುದು, ಕಾಯಕ ಶ್ರದ್ಧೆ ಮೂಡಿಸುವುದು ಇತ್ಯಾದಿ.

ಸಂಜೆ 6 ಗಂಟೆಗೆ ವೇದಿಕೆ ಕಾರ್ಯಕ್ರಮ. ಶಿವಸಂಚಾರದ ಕಲಾವಿದರಿಂದ 30 ನಿಮಿಷ ವಚನಗೀತೆ, ಮೊದಲೇ ಆಯ್ಕೆ ಮಾಡಿದ ಒಬ್ಬ ಉಪನ್ಯಾಸಕರಿಂದ ಶರಣರ ವಿಚಾರಗಳ ಮೇಲೆ 30 ನಿಮಿಷ ಉಪನ್ಯಾಸ, ಆಶೀರ್ವಚನ 30 ನಿಮಿಷ. ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವಿಶೇಷ ಸಾಧಕರಿಗೆ ಅಭಿನಂದನೆ. ವಿದ್ಯಾರ್ಥಿಗಳಿಂದ ವಚನ ನೃತ್ಯ. ವಚನ ಕಂಠಪಾಠ ಸ್ಪರ್ಧೆ ಇತ್ಯಾದಿ. ರಾಜಕಾರಣಿಗಳನ್ನು ಆಹ್ವಾನಿಸಿದ್ದರೂ ಮಾತಿಗೆ ಅವಕಾಶವಿರಲಿಲ್ಲ. ಕಾರ್ಯಕ್ರಮದ ನಂತರ ಸಾಮೂಹಿಕ ಪ್ರಸಾದದ ವ್ಯವಸ್ಥೆ. ಇದು ಕಾರ್ಯಕ್ರಮದ ಸ್ವರೂಪ. ಇದಕ್ಕೆ ಬೇಕಾಗುವ ಹಣವನ್ನು ಗ್ರಾಮಸ್ಥರೇ ಸಂಗ್ರಹ ಮಾಡುತ್ತಿದ್ದರು. ಈ ವರ್ಷ ಇದನ್ನು ಕರ್ನಾಟಕದ ಎಲ್ಲಾ ಜಿಲ್ಲೆಗಳಿಗೆ ವಿಸ್ತರಿಸಬೇಕೆನ್ನುವ ಸಲಹೆ-ಸೂಚನೆ ಹಲವರದು. ಈ ಬಗ್ಗೆ ಹಲವಾರು ಚಿಂತಕರೊಂದಿಗೆ ಸಮಾಲೋಚಿಸಿ ‘ಸಹಮತ’ ವೇದಿಕೆಯ ಮೂಲಕ ‘ಮತ್ತೆ ಕಲ್ಯಾಣ’ ಎನ್ನುವ ಹೆಸರಿನಲ್ಲಿ ಆಗಸ್ಟ್‌ 1ರಿಂದ 30ರವರೆಗೆ ಪ್ರತಿದಿನ ಒಂದೊಂದು ಜಿಲ್ಲಾ ಕೇಂದ್ರದಲ್ಲಿ ಕಾರ್ಯಕ್ರಮ ನಡೆಸುವುದೆಂದು ನಿರ್ಣಯಿಸಲಾಯಿತು.

ಹೀಗಿರಲಿದೆ ಮತ್ತೆ ಕಲ್ಯಾಣ

ಅರಿವಿನ ಬೆಳಕನ್ನು ಕಂಡುಕೊಳ್ಳುವ ದೃಷ್ಟಿಯಿಂದ ಪ್ರತಿದಿನ ಬೆಳಗ್ಗೆ 10 ಗಂಟೆಗೆ ನಾವು ಮತ್ತು ನಮ್ಮ ಕಲಾತಂಡ ಜಿಲ್ಲಾ ಕೇಂದ್ರ ತಲುಪುವುದು. 11ರಿಂದ 1.30ರವರೆಗೆ ಸ್ಥಳೀಯ ಕಾಲೇಜುಗಳ ವಿದ್ಯಾರ್ಥಿಗಳ ಜೊತೆ ನೀರು, ಅರಣ್ಯ, ಸ್ವಚ್ಛತೆ, ಪರಿಸರ, ವಚನಗಳು, ಧರ್ಮ ಇತ್ಯಾದಿ ವಿಷಯ ಕುರಿತಂತೆ ಸಂವಾದ. ಸಂಜೆ 5 ಗಂಟೆಯಿಂದ ಸೌಹಾರ್ದ ಪಾದಯಾತ್ರೆ. ಸಾರ್ವಜನಿಕ ಸ್ಥಳದಲ್ಲಿ ಸಾಂಕೇತಿಕವಾಗಿ ಗಿಡ ನೆಡುವುದು. 6 ಗಂಟೆಗೆ ವೇದಿಕೆ ಕಾರ್ಯಕ್ರಮ. ಅದರಲ್ಲಿ ಮೊದಲ 25 ನಿಮಿಷ ವಚನಗೀತೆ, ಇಬ್ಬರ ಉಪನ್ಯಾಸಕ್ಕೆ ತಲಾ 25 ನಿಮಿಷ, ಸಭೆಯ ಅಧ್ಯಕ್ಷರ ನುಡಿಗಳು 20 ನಿಮಿಷ‌, ನಂತರ 25 ನಿಮಿಷ ಆಶೀರ್ವಚನ. ಕೊನೆಯಲ್ಲಿ ಮತ್ತೆ ಕಲ್ಯಾಣಕ್ಕೆ ಪೂರಕವಾದ ‘ಮೋಳಿಗೆ ಮಾರಯ್ಯ’ ನಾಟಕ ಪ್ರದರ್ಶನ ಶಿವಸಂಚಾರದ ಕಲಾವಿದರಿಂದ ನಡೆಸುವುದು. ಸಭೆಗೆ ಬಂದವರೆಲ್ಲರಿಗೂ ಸಾಮೂಹಿಕ ಪ್ರಸಾದ. ಹಾಗಂತ ಇದು ಕೇವಲ ವಿಚಾರಸಂಕಿರಣ ಮಾತ್ರವಲ್ಲ. ಇಂದಿನ ಎಲ್ಲ ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ತಲ್ಲಣಗಳಿಗೆ ಬಸವಾದಿ ಶಿವಶರಣರ ವಚನಗಳಿಂದ ಪರಿಹಾರವನ್ನು ಕಂಡುಕೊಳ್ಳುವ ಸಮಾನ ಮನಸ್ಕರ ಆಂದೋಲನ.

ಶ್ರಾವಣ ಸಂಜೆ ಕಾರ್ಯಕ್ರಮ ಮಾಡಿದ್ದು ಗ್ರಾಮೀಣ ಪ್ರದೇಶಗಳಲ್ಲಿ. ಅಲ್ಲಿ ಶ್ರೀಮಠದ ಒಡನಾಟದಲ್ಲಿದ್ದವರೇ ಹೆಚ್ಚು ಜನರು. ಅವರಿಗೆ ಮಠದ ಚಟುವಟಿಕೆಗಳ ಪರಿಚಯವಿತ್ತು. ಕಾರ್ಯಕ್ರಮ ರೂಪಿಸಲು ಬೇಕಾದ ಆರ್ಥಿಕ ಸಂಪನ್ಮೂಲಗಳನ್ನು ಊರವರೇ ಸಂಗ್ರಹಿಸಿಕೊಂಡು ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸುತ್ತಿದ್ದರು. ನಗರಗಳಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ. ಆದರೆ ಕೆಲಸ ಮಾಡುವವರ ಸಂಖ್ಯೆ ವಿರಳ. ನಗರದಲ್ಲಿ ಜನರು ಸಂಘಟಿತರಾಗುವುದು ಕಷ್ಟಸಾಧ್ಯ. ಆದರೂ ಪ್ರಯತ್ನಕ್ಕೆ ತಕ್ಕ ಫ‌ಲ ಇದ್ದೇ ಇರುತ್ತದೆ ಎನ್ನುವ ನಂಬಿಕೆಯಿಂದಲೇ ನಾವು ಕಾಯಕಶೀಲರಾದೆವು. ಅದರಿಂದಾಗಿ ನಮಗೆ ಇದರಲ್ಲೂ ಯಶಸ್ವಿಯಾಗುತ್ತೇವೆ ಎನ್ನುವ ವಿಶ್ವಾಸ ಮೂಡಿದೆ. ಎಲ್ಲ ಜಿಲ್ಲೆಗಳಲ್ಲೂ ಜಿಲ್ಲಾ ಸಮಿತಿಯವರು ಜಾತ್ಯತೀತವಾಗಿ ಸಂಘಟಿತರಾಗಿ ಈಗಾಗಲೇ 2-3 ಸಭೆಗಳನ್ನು ಮಾಡಿ ಈ ಕಾರ್ಯಕ್ರಮಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಅಸಾಧ್ಯ ಎನ್ನುವುದು ಯಾವುದೂ ಇಲ್ಲ ಎನ್ನುವುದಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಆಗಸ್‌ rಮಳೆಗಾಲವಾದ್ದರಿಂದ ಬಯಲಿನಲ್ಲಿ ಸಮಾರಂಭ ಮಾಡುವುದು ಕಷ್ಟ. ಹಾಗಾಗಿ ಸಂಘಟಕರು ಸಾವಿರಾರು ಜನರು ಕೂರುವಂತಹ ಒಳಾಂಗಣ ರಂಗಮಂದಿರದ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಳೆ ಬಾರದೆ, ಜನರ ಸಂಖ್ಯೆ ಹೆಚ್ಚಾದರೆ ಬಯಲಿನಲ್ಲೂ ಕಾರ್ಯಕ್ರಮ ಮಾಡುವ ಸಾಧ್ಯತೆಗಳಿವೆ. ಮುಖ್ಯವಾಗಿ ಇದು ಲಿಂಗಾಯತ ಇಲ್ಲವೇ ವೀರಶೈವ ಧರ್ಮದ ಪ್ರಚಾರವಲ್ಲ. ಬಸವಾದಿ ಶಿವಶರಣರ ನೈಜ ತತ್ವಗಳನ್ನು ಪರಿಚಯಿಸುವ ಉದ್ದೇಶ ಈ ಯಾನದ ಹಿಂದೆ ಇದೆ.

ನಮ್ಮೊಂದಿಗೆ ವಚನಗಳನ್ನು ಹಾಡುವ ಮತ್ತು ನಾಟಕ ಅಭಿನಯಿಸುವ ಶಿವಸಂಚಾರ ತಂಡ ಸೇರಿ 25 ಜನರು ಇರುತ್ತಾರೆ. ಮತ್ಯೆ ಕಲ್ಯಾಣದ ಅಭಿಯಾನದ ಯಶಸ್ಸಿಗಾಗಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಲೆಕ್ಕಪತ್ರ ಇಟ್ಟು ಅದನ್ನು ನಮ್ಮ ಸಂಘಟನೆಗೆ ಒಪ್ಪಿಸಬೇಕೆಂದು ಸಂಘಟಕರಿಗೆ ಮೊದಲೇ ಸೂಚಿಸಲಾಗಿದೆ. ಕಾರ್ಯಕ್ರಮ ನಡೆಯುವ ಒಂದು ವಾರದ ಮೊದಲೇ ಆಯಾ ತಾಲೂಕಿನ ವಿವಿಧ ಕಾಲೇಜುಗಳಲ್ಲಿ ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳನ್ನೇ ಬಳಸಿಕೊಂಡು ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳ ಪರಿಚಯವನ್ನು ವಿದ್ಯಾರ್ಥಿಗಳಿಗೆ ಮಾಡಿಕೊಡುವ ಸಿದ್ಧತೆಯನ್ನೂ ಜಿಲ್ಲಾ ಸಮಿತಿ ಮಾಡಿಕೊಂಡಿದೆ. ಇಂದು ಜಗತ್ತನ್ನು ಬಾಧಿಸುತ್ತಿರುವ ಬಹುತೇಕ ಸಮಸ್ಯೆಗಳಿಗೆ ಅರಿವು, ಆಹಾರ, ಕಾಯಕ, ದಾಸೋಹ ಪರಿಹಾರವಾಗಬಲ್ಲವು. ಈ ನೆಲೆಯಲ್ಲಿ ಜನಜಾಗೃತಿ ಮೂಡಿಸುವ ಸದಾಶಯ ಈ ಅಭಿಯಾನದ ಹಿಂದಿದೆ. ಜಾತಿ, ವರ್ಣ, ವರ್ಗ, ಲಿಂಗಭೇದವಿಲ್ಲದೆ ಸಮಸಮಾಜವನ್ನು ನೆಲೆಗೊಳಿಸುವುದು ‘ಮತ್ತೆ ಕಲ್ಯಾಣ’ದ ಆಶಯ. ಸಮಸಮಾಜ ನೆಲೆಗೊಂಡರೆ ಅಸ್ಪಶ್ಯತೆ, ಕೋಮುಗಲಭೆ, ಭಯೋತ್ಪಾದನೆ, ಯುದ್ಧ, ಮೌಡ್ಯ, ಹೋಮಾದಿ ಅನಿಷ್ಟಗಳಿಗೆ ಅವಕಾಶವಿರುವುದಿಲ್ಲ. 12ನೆಯ ಶತಮಾನದಂತೆ ಕಾಯಕ ಜೀವಿಗಳ ಚಳುವಳಿ ಮತ್ತೆ ಪ್ರಾರಂಭವಾದರೆ ಬಡತನ, ಭ್ರಷ್ಟತೆ, ಸ್ವಾರ್ಥ, ಸೋಮಾರಿತನ, ಅಹಂಕಾರ, ಸ್ವಜನಪಕ್ಷಪಾತ ಇತ್ಯಾದಿ ರೋಗಗಳು ವಾಸಿಯಾಗುವವು. ಸ್ವಾತಂತ್ರ್ಯ, ಸಮಾನತೆ, ಸಹೋದರತ್ವದ ಹೂಗಳು ಅರಳಿ ಬದುಕು ಅರ್ಥಪೂರ್ಣವಾಗುವುದು. ಆದುದರಿಂದ ಅರಿವು, ಆಚಾರದಲ್ಲಿ ನಂಬಿಕೆಯುಳ್ಳವರು ಒಂದೆಡೆ ಸೇರಿ ಅಂತರಂಗ, ಬಹಿರಂಗ ಶುದ್ಧಿಯೊಂದಿಗೆ ಆತ್ಮಾವಲೋಕನ ಮಾಡಿಕೊಳ್ಳುವ ಕಾರ್ಯಕ್ರಮ ಇದಾಗಬೇಕೆಂಬುದು ‘ಸಹಮತ’ ವೇದಿಕೆಯ ಅಭಿಲಾಷೆ. ಇಂದು ಅರಿವಿದ್ದರೆ ಆಚಾರವಿಲ್ಲ. ಆಚಾರವಿದ್ದರೆ ಅರಿವಿಲ್ಲದ ಸ್ಥಿತಿಯಿದೆ. ಎಲ್ಲ ಕ್ಷೇತ್ರಗಳ ಕತ್ತಲೆಯನ್ನು ಶರಣರ ವಿಚಾರಗಳ ಅರಿವು, ಆಚಾರಗಳ ಮೂಲಕ ಹೊಡೆದೋಡಿಸಿ ವಿವೇಕದ ಜ್ಯೋತಿಯನ್ನು ಬೆಳಗಿಸಬೇಕಾಗಿದೆ.

ಕಲ್ಯಾಣದಲ್ಲಿ ನಡೆದ ರಕ್ತಕ್ರಾಂತಿಯ ಸಂದರ್ಭದಲ್ಲಿ ಪಟ್ಟಭದ್ರ ಹಿತಾಸಕ್ತರು, ಬಸವಾದಿ ಶಿವಶರಣರ ಕೊಲೆಗಿಂತ ಅವರು ರಚಿಸಿದ ವಚನಗಳ ಕಟ್ಟುಗಳನ್ನು ನಾಶ ಮಾಡುವ ಹುನ್ನಾರ ನಡೆಸಿದ್ದರು. ಎಷ್ಟೋ ವಚನದ ಕಟ್ಟುಗಳನ್ನು ಸುಟ್ಟು ಬೂದಿ ಮಾಡಿದರು. ಆ ಸಂದರ್ಭದಲ್ಲಿ ಬಸವಣ್ಣನವರ ಸಹೋದರಿ ಅಕ್ಕನಾಗಮ್ಮ ಶರಣ ಶರಣೆಯರ ತಂಡದೊಂದಿಗೆ ವೀರಗಚ್ಚೆ ಹಾಕಿ, ವಚನಗಳ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು, ಕೈಯಲ್ಲಿ ಖಡ್ಗ ಹಿಡಿದು ಹೋರಾಡುತ್ತ ವಚನಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು. ಆ ತಾಯಿ ತನ್ನ ಅಂತಿಮ ದಿನಗಳಲ್ಲಿ ನೆಲೆಸಿದ್ದು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ‘ಎಣ್ಣೆಹೊಳೆ’ ಅರಣ್ಯ ಪ್ರದೇಶದಲ್ಲಿ. ಅಲ್ಲೇ ಆ ತಾಯಿ ಲಿಂಗೈಕ್ಯಳಾಗಿದ್ದು. ಹಾಗಾಗಿ ಕ್ರಾಂತಿಮಾತೆಯ ಕಾರ್ಯಕ್ಷೇತ್ರವಾದ ತರಿಕೆರೆಯಿಂದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮ ಪ್ರಾರಂಭವಾಗಿ ಶರಣರ ಕ್ರಾಂತಿಯ ಕಾರ್ಯಕ್ಷೇತ್ರವಾದ ‘ಬಸವಕಲ್ಯಾಣ’ದಲ್ಲಿ ಸಮಾರೋಪಗೊಳ್ಳಲಿದೆ. ತರೀಕೆರೆ ಮತ್ತು ಬಸವಕಲ್ಯಾಣದಲ್ಲಿ ಮಾತ್ರ ಬೆಳಗ್ಗೆ 11 ಗಂಟೆಯಿಂದ ಸಾರ್ವಜನಿಕ ಸಮಾರಂಭ ಪ್ರಾರಂಭವಾಗುವುದು.

‘ಮತ್ತೆ ಕಲ್ಯಾಣ’ ಕಾರ್ಯಕ್ರಮ ರಾಜಕೀಯ, ಧಾರ್ಮಿಕ ಕಾರ್ಯಕ್ರಮವಲ್ಲ. ಎಡ, ಬಲ ಮತ್ತಾವುದೇ ಪಂಥದವರ ಸಿದ್ಧಾಂತಗಳನ್ನು ಜನರ ಮೇಲೆ ಹೇರುವ ಆಲೋಚನೆಯೂ ಇದರದಲ್ಲ. ಶುದ್ಧ ಬಸವತತ್ವವನ್ನು ಸಮಾಜದಲ್ಲಿ ಬಿತ್ತರಿಸುವುದು ಮಾತ್ರ ಇದರ ಹಿಂದಿರುವ ಉದ್ದೇಶ. ಮುಂದೆ ಎಲ್ಲಾ ಜಿಲ್ಲೆಗಳಿಂದ ಕೆಲವು ಕಾಲೇಜು ವಿದ್ಯಾರ್ಥಿಗಳು ಮತ್ತು ಆಸಕ್ತ ಯುವ ಪೀಳಿಗೆಯನ್ನು ಆಯ್ಕೆ ಮಾಡಿಕೊಂಡು ಸಾಣೇಹಳ್ಳಿಯಲ್ಲಿ ಅವರಿಗೆ ಕನಿಷ್ಟ ಇಪ್ಪತ್ತು ದಿನಗಳ ಕಾರ್ಯಾಗಾರ ನಡೆಸುವ ಚಿಂತನೆಯೂ ಇದೆ. ಏಕೆಂದರೆ ವಿಶ್ವದ ಯಾವ ಮೂಲೆಯಲ್ಲೂ ಶರಣರ ನಡೆ ನುಡಿ ಸಿದ್ಧಾಂತದ ಚಳುವಳಿ ನಡೆದಿಲ್ಲ. ಆ ಚಳುವಳಿ 12ನೆಯ ಶತಮಾನಕ್ಕೆ ಮಾತ್ರ ಸೀಮಿತವಾದುದಲ್ಲ. ಅದು ಇಂದಿಗೂ ಪ್ರಸ್ತುತ. ಹೀಗಾಗಿ ನಮ್ಮ ಬದುಕಿಗೆ ವಚನ ಸಾಹಿತ್ಯದಿಂದ ಪ್ರೇರಣೆ ಪಡೆದು ಕಲ್ಯಾಣದ ಕನಸನ್ನು ನನಸು ಮಾಡುವ ಸಂಕಲ್ಪ ತೊಡಬೇಕಾಗಿದೆ. ಈ ನೆಲೆಯಲ್ಲಿ ಬಸವತತ್ವ ಪ್ರೇಮಿಗಳು, ಪ್ರಗತಿಪರ ಚಿಂತಕರು, ಜನಪರ ಮತ್ತು ಜೀವಪರ ಕಾಳಜಿಯುಳ್ಳವರು ಮತ್ತೆ ಕಲ್ಯಾಣ ಅಭಿಯಾನದಲ್ಲಿ ತನು, ಮನ, ಧನದ ಸೇವೆಯ ಮೂಲಕ ತೊಡಗಿಸಿಕೊಳ್ಳುವಂತಾಗಬೇಕು.

ಶರಣರು ಕಟ್ಟಬಯಸಿದ್ದು ಮಂದಿರ, ಮಠ, ಮಸೀದಿಯನ್ನಲ್ಲ; ಮನಸ್ಸುಗಳನ್ನು. ಮನಸ್ಸು ಕಟ್ಟುವ ಕ್ರಿಯೆಯಲ್ಲಿ ಯಶಸ್ವಿಯಾದರೆ ಮುಂದೆ ಏನು ಬೇಕಾದರೂ ಕಟ್ಟಬಹುದು. ಈ ಪ್ರಜ್ಞೆ ಇಂದು ವಿವಿಧ ಕ್ಷೇತ್ರದ ಮುಖಂಡರಿಗೆ ಬರಬೇಕಾಗಿದೆ. ಅದಕ್ಕಾಗಿಯೇ ಮತ್ತೆ ಕಲ್ಯಾಣದ ಚಿಂತನೆ.

ಕೆಡವುವುದು ಸುಲಭ. ಕಟ್ಟುವುದೇ ಕಷ್ಟ. ನಾವು ಕಷ್ಟದ ದಾರಿಯನ್ನು ಮುಂದಿನ ಪೀಳಿಗೆಗಾಗಿ ಆರಿಸಿಕೊಳ್ಳೋಣ, ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಮತ್ತೆ ಕಲ್ಯಾಣದ ದಾರಿಯಲ್ಲಿ ನಡೆಯೋಣ. ಮಾನವತೆಯನ್ನು ಪ್ರೀತಿಸೋಣ.

ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು

ಟಾಪ್ ನ್ಯೂಸ್

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

World Theatre Day 2024: ರಂಗಭೂಮಿ ಕಲೆ-ಯುದ್ಧ ಮತ್ತು ಶಾಂತಿ ಪರಸ್ಪರ ವಿರುದ್ಧ ಧ್ರುವ

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

ಡೌಟೇ ಬೇಡ, ಜೋಡೆತ್ತುಗಳ ಹಾಗೆ ನಾನು, ಅನಂತ ಹೆಗಡೆ ಇಬ್ಬರೂ ಕೆಲಸ ಮಾಡುತ್ತೇವೆ…

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

Book Review;ವಿಶಿಷ್ಟ ರೂಪಕ ಶೈಲಿಯಿಂದ ಚಿತ್ರ ರಸಿಕರ ಮನಗೆದ್ದ ಕಾಸರವಳ್ಳಿಯ “ಬಿಂಬ ಬಿಂಬನ”

World Water Day: ಜುಳು ಜುಳು ಸದ್ದೇಕೆ ಉರಿ ಮೌನ

World Water Day: ಜುಳು ಜುಳು ಸದ್ದೇಕೆ ಉರಿ ಮೌನ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

ಪ್ರೊ| ಕು.ಶಿ.: ಜ್ಞಾನಕಾಶಿಯಲ್ಲೊಬ್ಬ ಫ‌ಕೀರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

10-editorial

Editorial: ಐಟಿ ಕಂಪೆನಿಗಳಿಗೆ ಆಹ್ವಾನ: ಕೇರಳದ ಬಾಲಿಶ ನಡೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.