ಬಂಡಾಯ ಎದ್ರೂ ಪಂಚಿಮಿ ಉಂಡಿ ಸಿಗದಂಗಾತು

Team Udayavani, Aug 4, 2019, 5:19 AM IST

ಯಾಡ್‌ ದಿನಾ ಅಂತ ಊರಿಗಿ ಹ್ವಾದ ಯಜಮಾನ್ತಿ ಹದಿನೈದು ದಿನಾ ಆದ್ರೂ ವಾಪಸ್‌ ಬರಾಕ್‌ ಆಗವಾಲ್ತು. ಅಕಿದು ಒಂದ್‌ ರೀತಿ ಬಂಡಾಯ ಶಾಸಕರ ಕತಿ ಆದಂಗ ಆಗೇತಿ. ಹೋಗುಮುಂದ ಒಂದ್‌ ಲೆಕ್ಕಾಚಾರ ಇತ್ತು. ಅಲ್ಲಿಗಿ ಹೋದ್‌ ಮ್ಯಾಲ್ ಎಲ್ಲಾ ಉಲಾrಪಲಾr ಆಗಿ ಬಿಟ್ಟೇತಿ. ಕಾಂಗ್ರೆಸ್‌ ಲೀಡರ್‌ಗೋಳಂಗ ಎಂಎಲ್ಎಗೋಳ್ನ ಕಳಸೂಮಟಾ ಕಳಿಸಿ, ವಾಪಸ್‌ ಕರಿಸಿಕೊಳ್ಳದಂಗ ಆಗೇತಿ.

ಬಂಡಾಯ ಶಾಸಕರು ಒಬ್ಬರ್ನ ನೋಡಿ ಒಬ್ರು ಹುರುಪಿನ್ಯಾಗ ರಾಜೀನಾಮೆ ಕೊಟ್ಟು ಓಡಿ ಹ್ವಾದ್ರು. ಕೆಲವ್ರು ಮುಖ್ಯಮಂತ್ರಿಮ್ಯಾಲಿನ ಸಿಟ್ಟಿಗಿ ಹ್ವಾದ್ರು. ಮತ್‌ ಕೆಲವರು ಶಟಗೊಂಡೇನಿ ಅಂತ ಹೆದರಸಿದ್ರ ಮಂತ್ರಿ ಮಾಡಬೌದು ಅಂದುಕೊಂಡು ಹೋದ್ರು ಅನಸ್ತೈತಿ. ಮತ್ತಷ್ಟು ಮಂದಿ ಬಿಜೆಪ್ಯಾರು ಕರಿದಿದ್ರೂನು ಹೋಗಿ ಕೈ ಕಟ್ಟಿಸಿಕೊಂಡು ಕುಂತ್ರು ಅಂತ ಕಾಣತೈತಿ. ಮೂರ್ನಾಲ್ಕು ಮಂದಿ ಎಂಎಲ್ಎಗೋಳಿಗೆ ಯಾಕ್‌ ಹೊಂಟೇವಿ ಅಂತ ಗೊತ್ತ ಇರಲಿಲ್ಲ ಕಾಣತೈತಿ. ಮುಂಬೈಕ ಫ್ರೀ ಇಮಾನದಾಗ ಕರಕೊಂಡು ಹೊಕ್ಕಾರು ಅಂದ್ಕೂಡ್ಲೆ, ಉಳವಿ ಜಾತ್ರಿಗಿ ಟ್ಯಾಕ್ಟರ್‌ ಸಿಕ್ತು ಅಂತ ಹತ್ತಿ ಹೋಗಿಬಿಟ್ರಾ ಅಂತ ಕಾಣತೈತಿ. ಕೆಲವು ನಾಯಕರು ತಮ್ಮ ಅನುಕೂಲಕ್ಕ ಒತ್ತಾಯ ಮಾಡಿ ಕಳಸಿದ್ರು ಅಂತ ಈಗ ಒಂದೊಂದ ವಿಷಯಾ ಹೊರಗ ಹಾಕಾಕತ್ತಾರು.

ಈ ಎಲ್ಲಾ ಬೆಳವಣಿಗೆಗೆ ಯಾರು ಕಾರಣರು, ಯಾರ್‌ ಹಿಂದ್‌ ಯಾರ್‌ ಅದಾರು ಅನ್ನೋದು ಇನ್ನೂ ನಿಗೂಢ ವಿಷಯ ಇದ್ದಂಗೈತಿ. ಅವೆಲ್ಲಾ ಹೊರಗ ಬರಬೇಕು ಅಂದ್ರ ಸ್ಪೀಕರ್‌ ಆದೇಶ ಮಾಡಿದ್ದು ಸರಿ ಐತಿ ಅಂತ ಸುಪ್ರೀಂ ಕೋರ್ಟ್‌ ಹೇಳಬೇಕು. ಅನರ್ಹಗೊಂಡಾರಿಗ್ಯಾರಿಗೂ ಬೈ ಎಲೆಕ್ಷ ್ಯನ್ಯಾಗ ಸ್ಪರ್ಧೆ ಮಾಡಾಕ ಅವಕಾಶ ಇಲ್ಲಾ ಅಂತ ಹೇಳಿ ಬಿಟ್ರ. ದಿನ್ನಾ ಒಂದೊಂದು ಎಪಿಸೋಡು ಹೊರಗ ಬರ್ತಾವು. ಒಬ್ರು ಯಾರಾದ್ರೂ ಮುಂಬೈದಾಗ ಏನೇನಾತು ಅಂತ ಖರೆ ಸ್ಟೋರಿ ಹೇಳಿ ಬಿಟ್ರಂದ್ರ, ನಮ್ಮ ಕನ್ನಡಾ ಸಿನೆಮಾ ಪ್ರೋಡ್ಯೂಸರ್ ಫಿಲ್ಮ್ ಚೇಂಬರ್‌ ಮುಂದ್‌ ಕ್ಯೂ ಹಚ್ಚಿ ನಿಲ್ತಾರು. ‘ಅತೃಪ್ತರು’, ‘ಓಡಿ ಹೋದವರು’, ‘ರೆಬೆಲ್ಸ್ ಇನ್‌ ಮುಂಬೈ’ ಅಂತ ಡಿಫ‌ರೆಂಟ್ ಟೈಟಲ್ ಇಟ್ಕೊಂಡು ಸಿನೆಮಾ ಮಾಡಾಕ ಓಡ್ಯಾಡ್ತಾರು.

ಕೆಲವು ಸಾರಿ ಕರಿಲೇನ ಬರಾರಿಂದ ಗೊತ್ತಿಲ್ಲದಂಗ ಚೊಲೊ ಅಕ್ಕೇತಂತ ಈಗ ಬಿಜೆಪ್ಯಾರಿಗೂ ಹಂಗ ಆಗೇತಿ. ಬೆಂಗಳೂರಿನ ನಾಕ್‌ ಮಂದಿ ಎಂಎಲ್ಎಗೋಳಿಗೆ ಬಿಜೆಪ್ಯಾರು ನೀವೂ ಬರ್ರಿ ಅಂತ ಕರದಿರಲಿಲ್ಲ ಅಂತ. ಬೆಂಗಳೂರಾಗ ಪರಮೇಶ್ವರ್ನ ತಗಿಸಿ, ರಾಮಲಿಂಗಾರೆಡ್ಡಿನ ಮಂತ್ರಿ ಮಾಡೂ ಸಲುವಾಗಿ ರಾತ್ರೋ ರಾತ್ರಿ ನಿರ್ಧಾರ ಮಾಡಿ, ಪಕ್ಷದ ನಾಯಕರಿಗೆ ಪಾಠಾ ಕಲಸೂನು ಅಂತ ಓಡಿ ಓಡಿ ಬಂದು ರಾಜೀನಾಮೆ ಕೊಟ್ಟು, ಫ್ರೀ ಫ್ಲೈಟ್ ಸಿಕ್ತು ಅಂತ ಮೂವತ್ತು ಮಂದಿ ಕೂಡು ಇಮಾನದಾಗ ಒಬ್ಬೊಬ್ರ ಕುಂತು ಮುಂಬೈಗಿ ಹಾರಿ ಹ್ವಾದ್ರು, ಆಕಾಶದಾಗ ಹಾರೂ ಮುಂದ ಸ್ವರ್ಗದಾಗ ತೇಲ್ಯಾಡಾಕತ್ತೇವಿ ಅಂದ್ಕೊಂಡ ಹೋಗಿರಬೇಕು ಅನಸ್ತೈತಿ.

ಯಜಮಾನ್ತಿ ಪ್ಲಾ ್ಯನೂ ಹಂಗ ಇದ್ದಂಗಿತ್ತು ನಾಕ್‌ ದಿನಾ ಹೋಗಿ ವಾಪಸ್‌ ಬಂದು ಗಣಪತಿ ಹಬ್ಬಕ್ಕ ಜಾಸ್ತಿ ದಿನಾ ಹೋಗಬೇಕು ಅಂತ ಯಾಡ್‌ ತಿಂಗಳ ಪ್ಲ್ಯಾನ ಮೊದ್ಲ ಹಾಕ್ಕೊಂಡು ಹೋಗಿದ್ಲು. ಆದ್ರ, ಅಲ್ಲಿ ಹ್ವಾದ ಮ್ಯಾಲ ಎಲ್ಲಾ ಕೈ ತಪ್ಪಿಹೋಗೇತಿ. ನಾಕ್‌ ದಿನದಾಗ ನಾಗರ ಪಂಚಮಿ ಹಬ್ಬ ಐತಿ ಮುಗಿಸಿಕೊಂಡು ಹೋಗು ಅಂತ ಮನ್ಯಾಗ ಹೇಳಿದ್ಮಾ ್ಯಲ ನಾವೂ ಏನೂ ಮಾಡಾಕ್‌ ಬರದಂಗಾತು. ಸಿದ್ರಾಮಯ್ಯ ಅತೃಪ್ತರ್ನ ಬೈಯೋದು, ಅತೃಪ್ತರು ಸಿದ್ರಾಮಯ್ಯನ ಬೈಯೋದು. ಹಂಗಗಾತಿ ನಮ್ಮದು ಕತಿ. ಯಾರ್ನ್ ಯಾರ್‌ ಬೈದ್ರು ಅಧಿಕಾರಂತೂ ಹೋತು. ಆಷಾಢದಾಗೂ ಯಡಿಯೂರಪ್ಪ ಅಧಿಕಾರ ಹಿಡಿಯುವಂಗಾಗಿ ರೇವಣ್ಣೋರ್‌ ಲಿಂಬಿ ಹಣ್ಣು ಮರ್ಯಾದಿ ಕಳಕೊಳ್ಳುವಂಗಾತು.

ಬಂಡಾಯ ಶಾಸಕರೆಲ್ಲಾ ಮುಂಬೈದಾಗ ಹೊಟೇಲ್ನ್ಯಾಗ ಖಾಲಿ ಕುಂತು ಏನ್‌ ಮಾಡೋದು ಅಂತೇಳಿ ದಿನ್ನಾ ಮಂತ್ರಿ ಆಗೋ ಬಗ್ಗೆ ಮಾತ್ಯಾಡಾರಂತ, ಕೆಲವರು ಕನ್ನಡಿ ಮುಂದ್‌ ನಿಂತು ಹೆಂಗ್‌ ಪ್ರಮಾಣ ವಚನ ತೊಗೊಬೇಕು ಅಂತ ಪ್ರ್ಯಾಕ್ಟೀಸ್‌ ಮಾಡ್ಕೊಂಡಿದ್ರಂತ. ಅವರು ಅಲ್ಲಿ ಎಲ್ಲಾರೂ ಮಿನಿಸ್ಟರ್‌ ಆಗಾಕ್‌ ಪ್ರ್ಯಾಕ್ಟೀಸ್‌ ಮಾಡಾಕತ್ತಿದ್ರ ಇಲ್ಲಿ ರಮೇಶ್‌ ಕುಮಾರ್‌ ಸಾಹೇಬ್ರು ಅಧಿಕಾರದಾಗ ಇದ್ದಾಗ ಏನಾರ ದಾಖಲೆ ಮಾಡಬೇಕು ಅಂತೇಳಿ, ಢಂ ಅಂತೇಳಿ ಎಲ್ಲಾರ್ನೂ ಅನರ್ಹ ಮಾಡಿ, ರಾಜೀನಾಮೆ ಕೊಟ್ಟು ಮಾರನೇ ದಿನಾ ಬಂದು ಜೈ ಕಾಂಗ್ರೆಸ್‌ ಅಂತ ಪಾರ್ಟಿ ಮೆಂಬರ್‌ಶಿಪ್‌ ತೊಗೊಂಡ್‌ ಬಿಟ್ರಾ. ಹೋಗುಮುಂದ ಫ್ರೀ ಇಮಾನದಾಗ ರಾಜಾನಂಗ ಹಾರಿ ಹ್ವಾದ ಅತೃಪ್ತರಿಗೆ, ವಾಪಸ್‌ ಬರಾಕ ನೀವ ಇಮಾನ್‌ ಟಿಕೆಟ್ ತಗಸ್ಕೋಬೇಕು ಅಂತ ಹೇಳಿದಾಗ ನಾವು ಹಾಳಾಗೇತಿ ಅಂತ ಗೊತ್ತಾಗಿದ್ದು ಅಂತ ಕಾಣತೈತಿ.

ಎಂಎಲ್ಎಗೋಳು ಬ್ಯಾಸರಕ್ಕೋ, ಹಠಕ್ಕೋ, ಸಿಟ್ಟಿಗೋ ರಾಜೀನಾಮೆ ಕೊಟ್ಟು ಓಡಿ ಹೋಗಿದ್ದು, ದೇಶಾದ್ಯಂತ ಸಿಕ್ಕಾಪಟ್ಟಿ ಚರ್ಚೆ ಆತು. ಇದ್ರಾಗ ನಮ್ಮ ಕಾನೂನಿನ ಬಣ್ಣಾನೂ ಬಯಲಾತು. ಕಾನೂನು ಪಂಡಿತ್ರು ಅನಸ್ಕೊಂಡಾರ್ನ ಒಂದ ವಿಷಯಕ್ಕ ಇಬ್ರನ್‌ ಕೇಳಿದ್ರ, ಒಬ್ರು ಸ್ಪೀಕರ್‌ ಮಾಡಿದ್ದು ತಪ್ಪು ಅಂತಾರ, ಇನ್ನೊಬ್ರು ಸರಿ ಅಂತಾರು. ಯಾರ್‌ದ್‌ ಸರಿ, ಯಾರದ್‌ ತಪ್ಪು ಅಂತ ಯೋಚನೆ ಮಾಡಾಕ್‌ ಹೋದ್ರ ತಲಿ ಕೆಟ್ ಮಸರ್‌ ಗಡಿಗ್ಯಾಗಿ ಹೊಕ್ಕೇತಿ. ನಮ್‌ ಕಾನೂನು ಹೆಂಗ್‌ ಅದಾವು ಅಂದ್ರ ಒಂದ್‌ ರೀತಿ ಅತ್ತಿ ಸೊಸಿ ನಡಕ ಸಿಕ್ಕೊಂಡ್‌ ಮಗನ ಸ್ಥಿತಿ ಇದ್ದಂಗ. ಯಾರದೂ ತಪ್ಪು ಅನ್ನಂಗಿಲ್ಲ. ಯಾರದೂ ಸರಿನೂ ಅಂತ ಮ್ಯಾಲ್ ಮುಖಾ ಮಾಡಿ ಹೇಳಂಗಿಲ್ಲ. ಅವರವರ ವಾದಾ ಮಾಡುಮುಂದ ಅವರದ ಸರಿ ಅಂತ ತಲಿಯಾಡ್ಸುವಂಗ, ನಮ್ಮ ಕಾನೂನುಗೋಳು ಯಾ ಲಾಯರ್‌ಗೆ ಹೆಂಗ್‌ ಅನಸ್ತೇತೊ ಅದ ಸರಿ ಅನ್ನುವಂಗದಾವು.

ನೂರು ಮಂದಿ ಕಳ್ಳರು ತಪ್ಪಿಸಿಕೊಂಡ್ರು ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಅಂತ ನಮ್ಮ ಕಾನೂನು ಮಾಡಾರು ಕಳ್ಳರಿಗೆ ತಪ್ಪಿಸಿಕೊಳ್ಳಾಕ ಏನೇನ್‌ ಬೇಕೊ ಎಲ್ಲಾ ರೀತಿ ಅವಕಾಶ ಮಾಡಿ ಕೊಟ್ಟಾರು. ಆದ್ರ, ಈಗ ಆಗಾಕತ್ತಿದ್ದು, ಕಳ್ಳರು ತಪ್ಪಿಸಿಕೊಳ್ಳಾಕ್‌ ಏನ್‌ ಬೇಕೋ ಎಲ್ಲಾ ದಾರಿ ಹುಡುಕ್ಕೊಂಡು ಪಾರ್‌ ಅಕ್ಕಾರು. ಕಾನೂನು ಮಾಡಾರ್‌ ಉದ್ದೇಶ ಏನಿತ್ತು ನಿರಪರಾಧಿಗೆ ಶಿಕ್ಷೆ ಆಗಬಾರದು ಅಂತ. ಅದ ಉದ್ದೇಶ ಈಡೇರದಂಗ ಆಗೇತಿ. ಎಷ್ಟೋ ಕೇಸಿನ್ಯಾಗ ಅಮಾಯಕ್ರ ತಾವು ಮಾಡದಿರೋ ತಪ್ಪಿಗೆ ಶಿಕ್ಷೆ ಅನುಭವಿಸುವಂತಾ ಪರಿಸ್ಥಿತಿ ಐತಿ. ಹಿಂಗಾಗಿ ಕಾನೂನು ಮಾಡಾರ ಉದ್ದೇಶ ಎಲ್ಲೋ ದಾರಿ ತಪ್ಪೇತಿ ಅಂತ ಅನಸೆôತಿ.

ರಾಜಕಾರಣ ಸುಧಾರಣೆ ಮಾಡಾಕ ಈಗಿನ ಕಾನೂನುಗೋಳು ಭಾಳ್‌ ಬದಲಾಗಬೇಕು ಅಂತ ಅನಸೆôತಿ. ಅಧಿಕಾರಸ್ಥರು ಈಗಿನ ಕಾನೂನು ಲಾಭಾ ತೊಗೊಂಡು ಅಧಿಕಾರ ನಡಸಬೌದು. ಆದ್ರ ಕಾಲಚಕ್ರ ತಿರಗತಿರತೈತಿ ಅಂತ ಅನಸೆôತಿ. ದೇಶಕ್ಕ ಸ್ವಾತಂತ್ರ್ಯ ತಂದು ಕೊಟ್ಟು, ಐವತ್ತು ವರ್ಷ ಅಧಿಕಾರ ಮಾಡಿರೋ ಕಾಂಗ್ರೆಸ್‌ನ್ಯಾರಿಗೆ ಮುಂದೊಂದಿನ ಒಂದೊಂದು ರಾಜ್ಯದಾಗ ಪಕ್ಷದ ಧ್ವಜಾ ಹಿಡ್ಯಾಕೂ ಜನಾ ಸಿಗದಂತಾ ಪರಿಸ್ಥಿತಿ ಬರುದಿಲ್ಲ ಅಂತ ಅವರು ಕನಸು ಮನಸಿನ್ಯಾಗೂ ನೆನಸಿರಲಿಕ್ಕಿಲ್ಲ ಅಂತ ಕಾಣತೈತಿ. ದೇಶದ ಸಲುವಾಗಿ ಹೋರಾಟ ಮಾಡುಮುಂದ ಬ್ರೀಟಿಷರು ಕಂಡಾಗೆಲ್ಲಾ ಬೋಲೊ ಭಾರತ್‌ ಮಾತಾಕಿ ಜೈ, ಒಂದೇ ಮಾತರಂ ಅಂತ ಎದಿಯುಬ್ಬಿಸಿ ಹೇಳಿದ ಪಕ್ಷದಾರು, ಈಗ ಭಾರತ ಮಾತಾಕೀ ಜೈ ಅಂತ ಹೇಳಾಕೂ ಧೈರ್ಯ ಇಲ್ಲದಂತಾ ಪರಿಸ್ಥಿತಿ ಐತಿ. ಅದು ಅವರ ಮಾಡಿಕೊಂಡ ಸ್ವಯಂಕೃತ ಅಪರಾಧ ಅಂತ ಕಾಣಸೆôತಿ. ಅವಕಾಶ ಇದ್ದಾಗೆಲ್ಲಾ ದೇಶಾ ಸುಧಾರಣೆ ಮಾಡೂದು ಬಿಟ್ಟು, ಇರೂ ವ್ಯವಸ್ಥೆದಾಗ ಅನುಕೂಲಸಿಂಧು ರಾಜಕಾರಣ ಮಾಡ್ಕೊಂಡು ಬಂದಿದ್ಕ ಈಗ ಬೋಲೊ ಭಾರತ್‌ ಮಾತಾಕಿ ಜೈ ಅಂತ ಧೈರ್ಯಾ ಮಾಡಿ ಹೇಳದಂಗಾಗೇತಿ. ಈಗ ಅಧಿಕಾರಾ ನಡಸಾಕತ್ತಾರೂ ದೇಶ ಪ್ರೇಮದ ಹೆಸರ್‌ ಮ್ಯಾಲ ಆಡಳಿತಾ ನಡಸಾಕತ್ತಾರು. ನಲವತ್ತು ವರ್ಷದ ಹಿಂದ ಕಾಂಗ್ರೆಸ್‌ನ ಹಿಂಗ ನಂಬಿ ಜನಾ, ಕಾಂಗ್ರೆಸ್‌ನಿಂದ ಒಂದ್‌ ಕತ್ತಿ ನಿಲ್ಲಿಸಿದ್ರೂ ಗೆಲ್ಲಿಸಿ ಕಳಸ್ತಿದ್ರಂತ. ಈಗ ಬಿಜೆಪ್ಯಾಗ ಅದ ಪರಿಸ್ಥಿತಿ ಐತಿ. ಈಗ ಅಧಿಕಾರದಾಗ ಇರೋ ಮೋದಿ ಸಾಹೇಬ್ರು ಓಟ್ ಬ್ಯಾಂಕ್‌ ರಾಜಕಾರಣ ಬಿಟ್ಟು ದೇಶದ ಸಾಮಾನ್ಯ ಜನರ ಅನುಕೂಲಕ್ಕ ತಕ್ಕಂಗ ಅಧಿಕಾರ ನಡಸಿದ್ರ ಆ ಪಕ್ಷಾ ನಂಬ್ಕೊಂಡು ರಾಜಕೀ ಮಾಡಾರಿಗೆ ಭವಿಷ್ಯ ಐತಿ. ಇಲ್ಲಾಂದ್ರ ಮುಂದೊಂದಿನಾ ಅವರ ಧ್ವಜಾ ಹಿಡ್ಯಾಕೂ ಮಂದಿ ಸಿಗದಂತ ಅಕ್ಕೇತಿ. ಅಧಿಕಾರದ ಸಲುವಾಗಿ ಬ್ಯಾರೇ ಪಾರ್ಟಿ ಎಂಎಲ್ಎಗೋಳ್ನ ಕರಕೊಂಡು ಬಂದು ಸರ್ಕಾರ ಮಾಡೂ ಬದ್ಲು ಪ್ರತಿಪಕ್ಷದಾಗ ಇದ್ರೂ, ಜನರ ವಿಶ್ವಾಸ ಗಳಿಸಿಕೊಂಡ ಹೋಗೂದ್ರಾಗ ಜಾಸ್ತಿ ಮರ್ಯಾದಿ ಇರತೈತಿ.

ಸದ್ಯದ ರಾಜಕೀ ಪರಿಸ್ಥಿತಿ ನಾವು ಅಂದ್ಕೊಳ್ಳೋದೊಂದು ಆಗೋದೊಂದು ಅನಸಾಕತ್ತೇತಿ.

ದೇಶದ ಪರಿಸ್ಥಿತಿನೂ ಅತೃಪ್ತ ಶಾಸಕರಂಗ ಏನೋ ಮಾಡಾಕ್‌ ಹೋಗಿ ಇನ್ನೇನೋ ಆಗಿ ಕೈ ಮೀರಿ ಹ್ವಾದ್ರ, ಪಾರ್ಟಿ ಧ್ವಜಾ ಅಲ್ಲಾ, ದೇಶದ ತ್ರಿವರ್ಣ ಧ್ವಜಾ ಹಿಡ್ಯಾಕೂ ಜನಾ ಸಿಗದಂತಾ ಪರಿಸ್ಥಿತಿ ಬರಬಾರದು. ಜನಾ ನಂಬಿಕಿ ಇಟ್ಟು ಆರಿಸಿ ಕಳಿಸಿದ್ರ ಅವರ ನಂಬಿಕೆಗೆ ದ್ರೋಹಾ ಮಾಡಿದ್ರ ಜನಾ ಹೆಂಗ್‌ ಸುಮ್ನಿರತಾರು. ಹಾವು ಕಡಿತೈತಿ ಅಂತ ಗೊತ್ತಿದ್ರೂ, ನಂಬಿಕೀಲೆ ಹಾಲು ಕುಡಿಸೋ ಜನಾ ನಾವು. ಹಾಲು ಕುಡಿಸಿದ್ರೂ ಹಾವಿನ ಬುದ್ದಿ ಬಿಡುದಿಲ್ಲ ಅಂದ್ರ ಜನಾ ಬುದ್ದಿ ಕಲಸೂದು ಒಂದ ದಾರಿ ಅಂತ ಕಾಣತೈತಿ. ಏನೂ ಆಗದ ಆಪರೇಷನ್‌ ಮಾಡಾರೂ, ಆಪರೇಷನ್‌ ಮಾಡಿಸಿಕೊಳ್ಳಾರೂ ಇದರ ಬಗ್ಗೆ ಯೋಚನೆ ಮಾಡೂದು ಚೊಲೊ ಅನಸೆôತಿ. ಇಲ್ಲಾಂದ್ರ ಹಾವಿಗೂ ಹಾಲೆರೆಯೋ ಜನರ ನಂಬಿಕಿಗೆ ದ್ರೋಹಾ ಮಾಡಿದಂಗ ಅನಸೆôತಿ. ಅದ್ಕ ನಾವೂ ಪರಿಸ್ಥಿತಿ ಅರ್ಥಾ ಮಾಡ್ಕೊಂಡು ಪಂಚಿಮಿಗೆ ಊರಿಗಿ ಹೋಗಿ ಬಂಡಾಯ ಸಾರಿರೋ ಶ್ರೀಮತಿಗೆ ಉಂಡಿ ತಿನಿಸಿ ಸಮಾಧಾನ ಮಾಡಿ ಸುಗಮ ಸರ್ಕಾರ ನಡಸ್ಕೊಂಡು ಹೋಗೋದೊಂದ ದಾರಿ.

ಶಂಕರ್ ಪಾಗೋಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಿಂಡಿಕೇಟ್‌ ಬ್ಯಾಂಕ್‌ ಅಪಾರವಾದ ಜನ ಬೆಂಬಲವನ್ನು ಸಂಪಾದಿಸಿತ್ತು. ನಮ್ಮ ಬ್ಯಾಂಕ್‌ ಎಂಬ "ಫೀಲಿಂಗ್‌' ಅನ್ನು ಜನ ಹೊಂದಿದ್ದರು. ಆದರೆ ಈಗ ಬ್ಯಾಂಕ್‌ ತನ್ನ ಅಸ್ತಿತ್ವ...

  • ಕರುನಾಡಿನವರ ಅಸ್ಮಿತೆಯ, ಅಭಿಮಾನದ ಪ್ರತೀಕವಾಗಿರುವ ಸಿಂಡಿಕೇಟ್‌ ಬ್ಯಾಂಕನ್ನು ವಿಲೀನಗೊಳಿಸುವ ನಿರ್ಧಾರದ ವಿರುದ್ಧದ ಧ್ವನಿ ಬಲವಾಗುತ್ತಿದೆ. ವಿವಿಧ ಕ್ಷೇತ್ರಗಳ...

  • ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ಸಂಸ್ಥೆಗಳಾಗಿರದೆ ಬದುಕಿನ...

  • ಮಣಿಪಾಲ: ಶಬರಿಮಲೆಯ ಅಯ್ಯಪ್ಪ ಸ್ವಾಮಿ ಮಂದಿರದ ಬಾಗಿಲು ಮತ್ತೆ ತೆರೆಯಲಾಗಿದೆ. ಮಂಡಲ ಪೂಜೆಗಾಗಿ ಬೆಟ್ಟ ಹತ್ತಿ ಬಂದ ಭಕ್ತರಿಗೆ ಇನ್ನೆರಡು ತಿಂಗಳ ಕಾಲ ಶಬರಿ ಗಿರಿ...

  • ಕರಾವಳಿಯಲ್ಲಿ ಹುಟ್ಟಿ ರಾಷ್ಟ್ರಮಟ್ಟಕ್ಕೆ ಬೆಳೆದ ಬ್ಯಾಂಕ್‌ಗಳ ಬಗ್ಗೆ ಇಲ್ಲಿನ ಜನರಿಗೆ ಅಪಾರ ಅಭಿಮಾನವಿದೆ. ಇವುಗಳನ್ನು ಬರೀ ಹಣಕಾಸು ವ್ಯವಹಾರಗಳನ್ನು ಮಾಡುವ...

ಹೊಸ ಸೇರ್ಪಡೆ

  • ಪುದುಚ್ಚೇರಿ: ಸಚಿವ ಸಂಪುಟದ ನಿರ್ಧಾರಗಳನ್ನು ರಾಜ್ಯಪಾಲರಾದ ಕಿರಣ್‌ ಬೇಡಿ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅವರ ವಿರುದ್ಧ ಟೀಕೆ ಮಾಡಿರುವ ಪುದುಚೇರಿ ಮುಖ್ಯಮಂತ್ರಿ...

  • ಇಂದೋರ್‌: ತಮ್ಮ ಮನೆ ಮಗನನ್ನೇ ಕೊಂದ ಪ್ರಕರಣದಲ್ಲಿ ಪೊಲೀಸರು ಒಂದೇ ಕುಟುಂಬದ ನಾಲ್ವರನ್ನು ಬಂಧಿಸಿರುವ ಘಟನೆ ಮಧ್ಯಪ್ರದೇಶದ ದಾಟಿಯಾದಲ್ಲಿ ನಡೆದಿದೆ. 24 ವರ್ಷದ...

  • ಕಡಬ: ಪುತ್ತೂರಿನಿಂದ ನೆಟ್ಟಣಕ್ಕೆ ಸಂಚರಿಸುತ್ತಿದ್ದ ಲೋಕಲ್‌ ರೈಲಿನಲ್ಲಿ ಪುತ್ತೂರಿನಿಂದ ಎಡಮಂಗಲಕ್ಕೆ ಪ್ರಯಾಣಿಸುತ್ತಿದ್ದ ಮಹಿಳೆಯ ಕುತ್ತಿಗೆ ಒತ್ತಿ ಹಿಡಿದು...

  • ಹೊಸದಿಲ್ಲಿ: ಮನವಿ ಪರಿಶೀಲಿಸ ಬೇಕೆಂಬ ಪಾಕಿಸ್ಥಾನದ ಬೇಡಿಕೆಯನ್ನು ತಳ್ಳಿ ಹಾಕಿರುವ ಇಂಟರ್‌ನ್ಯಾಶನಲ್‌ ಟೆನಿಸ್‌ ಫೆಡರೇಶನ್‌ (ಐಟಿಎಫ್) ಭಾರತ ಮತ್ತು ಪಾಕಿಸ್ಥಾನ...

  • ಉಡುಪಿ/ಕುಂದಾಪುರ: ತನ್ನದೇ ಶೈಲಿಯ ಹಾಡುಗಳಿಂದ ಜನರನ್ನು ಮನರಂಜಿಸುತಿದ್ದ ಕುಂದಾಪುರದ "ಸ್ಟ್ರೀಟ್‌ ಸಿಂಗರ್‌' ವೈಕುಂಠ (32) ಸೋಮವಾರ ರಾತ್ರಿ ಅಜ್ಜರಕಾಡಿನ ಜಿಲ್ಲಾಸ್ಪತ್ರೆಯಲ್ಲಿ...