ಎಲ್ಲಾರ ಬದುಕು ಮುಳಗಾತಾರಂಗ ಕಾಣಾತೈತಿ!

Team Udayavani, Aug 25, 2019, 5:00 AM IST

ಮೈತ್ರಿ ಸರ್ಕಾರ ಇದ್ದಾಗ ತವರು ಮನಿಗಿ ಹ್ವಾದ ಹೆಂಡ್ತಿ ಸರ್ಕಾರ ಬಿದ್ದು, ಬಿಜೆಪಿ ಸರ್ಕಾರ ಅಧಿಕಾರಕ್ಕ ಬಂದ್ರೂ ವಾಪಸ್‌ ಬರಲಿಲ್ಲ. ಪಂಚಮಿ ಹಬ್ಬದ ನೆಪದಾಗ ನಾನ ಹೋಗಿ ಕರಕೊಂಡು ಬಂದ್ರ ಆತಂತ ರಾತ್ರೋ ರಾತ್ರಿ ಬಸ್‌ ಹತ್ತಿ ಊರಿಗಿ ಓಡಿ ಹ್ವಾದ್ನಿ. ಮುಂಜಾನಿ ಬಸ್‌ ಇಳದು ಸುರಿ ಮಳ್ಯಾಗ ಮನಿ ಮುಟ್ಟಿದ್ದ ಅಷ್ಟ. ಆ ಮ್ಯಾಲ ಮನಿ ಒಳಗ ಹೊಕ್ಕೊಂಡ್ರೂ ಮಳಿ ಸುರಿದು ಕಡಿಮಿ ಆಗ್ಲಿಲ್ಲಾ. ವಾಪಸ್‌ ಹೊರಗ್‌ ಬರಬೇಕ್‌ ಅಂದ್ರೂ ಬರಾಕ್‌ ಆಗಲಾರದಷ್ಟು ಜೋರ್‌ ಮಳಿ.

ಹೆಂಗೂ ಪಂಚಿಮಿಗಂತ ಹೋದ ಮ್ಯಾಲ ಉಂಡಿ, ಉಸುಳಿ, ಅಳ್ಳು ಎಲ್ಲಾ ಮಾಡಿದ್ರು ಬ್ಯಾಡಂದ್ರೂ ಅವ್ವ ಯಾಡ್‌ ಉಂಡಿ ಜಾಸ್ತಿನ ಹಾಕಿದ್ಲು. ಹಬ್ಬಕ್ಕ ಹೋಗೇನಿ ಅಂದ ಮ್ಯಾಲ ಹಾಕಿದ್ದೆಲ್ಲಾ ತಿಂದು ಹುಡುಗುರ್‌ ಸಲುವಾಗಿ ಕಟ್ಟಿದ್ದ ಜೋಕಾಲ್ಯಾಗ ನಾಕ್‌ ಜೀಕಾ ಹೊಡದೆ. ಒಂದ ಜೋಕಾಲ್ಯಾಗ ಆಡಾಕ ಹುಡುಗೂರು ಮೈತ್ರಿ ಸರ್ಕಾರದ ನಾಯಕರು ಕಚ್ಚಾಡಿದಂಗ ಕಚ್ಚ್ಯಾಡಾಕತ್ತಿದ್ರು. ಅದ್ರಾಗಿಬ್ಬರ್ನ ಆಪರೇಷನ್‌ ಶೇಂಗಾ ಉಂಡಿ ಮಾಡಿ ರಮಿಸಿದೆ. ಜೋಕಾಲಿ ಗದ್ಲಾ ಸೆಟ್ಲ ಆತು.

ಮೈತ್ರಿ ಸರ್ಕಾರದ ವಿರುದ್ಧ ಅತೃಪ್ತ ಶಾಸಕರು ಏಕಾ ಏಕೀ ಮುಂಬೈಗಿ ಓಡಿ ಹೋಗಿ ಹೊಟೇಲ್ನ್ಯಾಗ್‌ ಸಿಕ್ಕಾಕ್ಕೊಂಡಂಗ ನಾವೂ ಊರಿಗಿ ಹೋಗಿ ವಾಪಸ್‌ ಬರಾಕ್‌ ಆಗದಂಗ ಸಿಕ್ಕಾಕ್ಕೊಂಡು ಬಿಟ್ವಿ. ಮುಂಬೈಕ್‌ ಹ್ವಾದ ಮ್ಯಾಲ ಅವರ್ನ ಯಾರು ಕಟ್ಟಿ ಹಾಕಿದ್ರೋ ಗೊತ್ತಿಲ್ಲ. ಯಾಕಂದ್ರ ಅವರ್ನ ಅನರ್ಹ ಮಾಡಿರೋ ಕೇಸು ಇನ್ನೂ ಸುಪ್ರೀಂ ಕೋರ್ಟ್‌ನ್ಯಾಗ ಇರುದ್ರಿಂದ, ಅವರು ಅಲ್ಲಿ ಏನೇನ್‌ ಆಗೇತಿ ಅಂತ ಬಾಯಿ ಬಿಟ್ಟು ಹೇಳಬೇಕು ಅಂತ ಅನಸಿದ್ರೂ ಹೇಳದಂತಾ ಪರಿಸ್ಥಿತ್ಯಾಗ ಸಿಕ್ಕಾಕೊಂಡಾರು ಅಂತ ಕಾಣಸೆôತಿ. ಆದ್ರ, ನಮ್ನ ಮಾತ್ರ ಇರಪುಕ್ಸ್ಯಾನ್‌ ಮಳಿಗಿ ಪ್ರವಾಹ ಬಂದು ಕಟ್ಟಿ ಹಾಕಿತ್ತು. ಯಾರು ಏನ್‌ ಹೇಳಿದರೂ ಕೇಳದಷ್ಟು ಸಿಟ್ಟು ಮಾಡ್ಕೊಂಡು ಸುರ್ಯಾಕತ್ತಿತ್ತು. ಮಳಿಗಿ ಯಾರ್‌ ಮ್ಯಾಲ್ ಸಿಟ್ಟಿತ್ತೋ ಗೊತ್ತಿಲ್ಲ. ಕುಮಾರಸ್ವಾಮಿನ ಎಲ್ಲಾರೂ ಸೇರಿ ಇಳಿಸಿ ಬಿಟ್ರಾ ಅಂತ ದುಖಾVಗಿ ಸುರ್ಯಾಕತ್ತಿತ್ತೂ. ಭಾಳ ಕಷ್ಟಾ ಪಟ್ಟು ಮತ್ತ ಯಡಿಯೂರಪ್ಪ ಮುಖ್ಯಮಂತ್ರಿ ಆದ ಅನ್ನೋ ಖುಷಿಗಿ ಸುರ್ಯಾಕತ್ತಿತ್ತೋ ಗೊತ್ತಾಗದಂಗಾತು.

ಸಂಜಿ ಆಗೂದ್ರಾಗ ಊರ್‌ ಸುತ್ತೆಲ್ಲಾ ನೀರು, ಊರ್‌ ಮುಂದಿನ ಹಳ್ಳೆಲ್ಲಾ ಹೊಳಿ ಹರದಂಗ ಹರ್ಯಾಕತ್ತಿತ್ತು. ಮನ್ಯಾಗ ಕುಂತು ಬೇಜಾರಾಗಿ ಹರಿ ಹಳ್ಳಾ ನೋಡಾಕ್‌ ಹೋಗೂದು ಬಂದು ಮನ್ಯಾಗ ಕುಪ್ಪಡಗ್ಯಾಗ ದುನಿ ಹಾಕ್ಕೊಂಡು ಬೆಚ್ಚಗ ಕಾಸಗೋಂತ ಕುಂದ್ರೂದು. ಅದ ಗ್ಯಾಪ್‌ನ್ಯಾಗ ಯಜಮಾನ್ತಿನೂ ಜೋಕಾಲ್ಯಾಗ ಕುಂದ್ರಿಸಿ ಜೀಕಿ ಹೊಡಸಿ, ಫೋಟೊ ತಗದು. ನನ್ನ ಮ್ಯಾಲ್ ಇದ್ದಿದ್ದ ಅರ್ಧಾ ಸಿಟ್ಟು ಕಡಿಮಿ ಮಾಡ್ಕೊಳ್ಳೊ ಪ್ರಯತ್ನ ಮಾಡಿದ್ನಿ.

ಹತ್ತು ವರ್ಷದ ಹಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ್ಲೂ ಉತ್ತರ ಕರ್ನಾಟಕಕ್ಕ ಹಿಂಗ ಜೋರ್‌ ಪ್ರವಾಹ ಬಂದು ಎಲ್ಲಾರ ಬದುಕು ಮೂರಾಬಟ್ಟಿ ಆಗಿ ಹೋಗಿದ್ವು. ಈಗ ಮತ್ತ ಮುಖ್ಯಮಂತ್ರಿ ಆಗಿ ಮಂತ್ರಿಮಂಡಲ ವಿಸ್ತರಣೆ ಮಾಡಿ ನೆಮ್ಮದಿಯಾಗಿ ಅಧಿಕಾರ ನಡಸ್‌ಬೇಕು ಅನ್ನುದ್ರಾಗ, ಪ್ರವಾಹ ಬಂದು ಒಂದ್‌ ಕಡೆ ಕುಂದ್ರದಂಗ ಮಾಡಿ ಇಟ್ಟತು. ಅರ್ಧಕ್ಕರ್ಧಾ ರಾಜ್ಯ ಸಂಪೂರ್ಣ ಮುಳುಗಿ ಹೋಗೇತಿ. ಇಂತಾದ್ರಾಗ ಬಿಜೆಪಿ ಹೈ ಕಮಾಂಡ್‌ ಮಂತ್ರಿ ಮಂಡಲ ವಿಸ್ತರಣೆ ಮಾಡಾಕ ಯಡಿಯೂರಪ್ಪನ ಓಡಿಸ್ಯಾಡಿ ಬಿಟ್ರಾ. ಆದ್ರೂ ಹಠಕ್ಕ ಬಿದ್ದು ಯಡಿಯೂರಪ್ಪ ಮಂತ್ರಿ ಮಂಡಲ ವಿಸ್ತರಣೆ ಮಾಡಿ, ಖಾತೆನೂ ಕೊಡಾಕ್‌ ಆಗದ, ದಿಲ್ಲಿ ಬೆಂಗಳೂರು ಅಂತ ಓಡ್ಯಾಡುವಂಗಾತು. ಸಚಿವರ ಪರಿಸ್ಥಿತಿ ಹೆಂಗ್‌ ಆಗೇತಪಾ ಅಂದ್ರ ಮದುವಿ ಮಾಡಿ, ಹೆಂಡ್ತಿ ಇಲ್ಲದ ಸಂಸಾರ ಮಾಡು ಅಂತ ಬೆಡ್‌ರೂಮಿಗಿ ತಳ್ಳಿದಂಗ ಆಗೇತಿ. ಯಾರಿಗಿ ಮಂತ್ರಿಗಿರಿ ಕೊಟ್ಟಿದ್ರೂ ನಡಿತಿತ್ತೇನೋ, ನೂರಾ ಐದು ಮಂದಿ ಗೆದ್ದಾರ್ನ ಬಿಟ್ಟು ಸೋತ್‌ ಮನ್ಯಾಗ ಕುಂತ್‌ ಸವದಿ ಸಾಹೇಬ್ರಿಗೆ ಮಂತ್ರಿ ಮಾಡಿದ್ಕ ಶ್ರಾವಣದಾಗ ಹುಗ್ಗಿ ತಿಂದ್ರೂ ಹೊಟ್ಟಿ ಉರಿದ ಬಿಡತೈತಾ ? ರೇಣುಕಾಚಾರ್ಯ ಸ್ವಾಮಿಗೋಳಂತೂ ಡೈರೆಕ್ಟಾಗಿ ಸ್ವಾಭಿಮಾನಕ್ಕ ಧಕ್ಕಿ ಆದ್ರ ರಾಜೀನಾಮೆನ ಕೊಡ್ತೇನಿ ಅಂತ ಹೇಳಿದ್ರು, ಮಾಧ್ಯಾಹ್ನಕ್ಕ ಅನಗೋಡದ ಮೈತ್ರಿ ಸರ್ಕಾರ ಕೆಡವಿ ಮಂತ್ರಿನೂ ಸಿಗಲಿಲ್ಲಾ, ಎಂಎಲ್ಎ ಸ್ಥಾನಾನೂ ಉಳಿಸಿಕೊಳ್ಳದ ಅನರ್ಹ ಶಾಸಕರ ನೆನಪ ಆದಂಗ ಕಾಣತೈತಿ. ಹಿಂಗಾಗಿ ಹದ್ನೋಳ ಮಂದಿಯಂಗ ಇದ್ದಿದ್ದ ಎಂಎಲ್ಎ ಸ್ಥಾನಾ ಕಳಕೊಂಡು ಎಲ್ಲಿ ದಿಲ್ಯಾಗ ಲಾಯರ್‌ಗೋಳ ಬಾಗಲಾ ಕಾಯೂದು ಬಿಡು ಅಂತ ಸಂಜ್ಯಾಗೋಡ್ದ ಯಡಿಯೂರಪ್ಪನ ರಾಮ, ನಾನ ಹನುಮಂತ ಅಂತೇಳಿ ಸಮಾಧಾನ ಮಾಡ್ಕೊಂಡ್ರು ಅನಸೆôತಿ.

ಆದರ, ಕತ್ತಿ ಸಾಹೇಬ್ರು ಮಾತ್ರ ಹೊತ್ತಿ ಉರ್ಯಾಕತ್ತಾರು ಅಂತ ಕಾಣತೈತಿ. ಯಡಿಯೂರಪ್ಪ ಸಿಎಂ ಆಗದಿದ್ರೂ ತಾವು ಮಂತ್ರಿ ಅಕ್ಕೇನಿ ಅಂತ ನಂಬ್ಕೊಂಡು ಕುಂತಾರಿಗೆ ಯಾರ್‌ ಕಲ್ಲು ಹಾಕಿದ್ರೋ ಗೊತ್ತಿಲ್ಲಾ. ಅವರ್ನ ಬಿಟ್ಟು ಸವದಿ ಸಾಹೇಬ್ರಿಗೆ ಕೊಟ್ಟಿದ್ಕನ ಅವರ ಹೊಟ್ಟಿ ಉರಿಯಂಗ ಆಗೇತಿ ಅಂತ ಕಾಣತೈತಿ. ಅದ್ಕ ಬಿಜೆಪ್ಯಾರ್ನ ನಂಬಿ ಸಂಘ ದಕ್ಷ ಹೇಳ್ಳೋದ್ರಿಂದ ಏನೂ ಪ್ರಯೋಜನ ಇಲ್ಲ ಅಂದ್ಕೊಂಡು ಹಳೆ ದೊಸ್ತ್ ಸಿದ್ರಾಮಯ್ಯನ ಸಂಘಾ ಮಾಡಾಕ್‌ ಟ್ರಾಯ್‌ ಮಾಡಾಕತ್ತಾರು ಅಂತ ಕಾಣತೈತಿ.

ಸರ್ಕಾರ ಬಂದ್ರೂ ಕೆಲಸಾ ಮಾಡೂದು ಬಿಟ್ಟು ಹೈ ಕಮಾಂಡ್‌ ಮಾತು ಕೇಳಕೋಂತ ಓಡ್ಯಾಡುದ್ರಾಗ ಯಡಿಯೂರಪ್ಪ ಕಾಲ ಕಳ್ಯಾಕತ್ತಿದ್ರ, ಇಕ್ಕಡೆ ಮೈತ್ರಿ ಪಕ್ಷಗೋಳ ನಾಯಕರು ಒಂದು ವರ್ಷದಾಗ ಮಾಡಿದ್‌ ತಪ್ಪೆಲ್ಲ ಕೆದರಿ ತಗದು ಬಕೀಟ್ ತೊಗೊಂಡು ಉಗ್ಯಾಡಾಕ ಶುರು ಮಾಡ್ಯಾರು. ದೇವೇಗೌಡ್ರು ಸಿದ್ರಾಮಯ್ಯ ಬಾಯಿಗಿ ಬಂದಂಗ ಬೈದ್ಯಾಡಾಕತ್ತಿದ್ದು ನೋಡಿದ್ರ, ಯಡಿಯೂರಪ್ಪ ಸ್ವಲ್ಪ ದಿನಾ ತಡದಿದ್ರ ಅತೃಪ್ತರ್ನ ಕಟಗೊಂಡು ಊರೂರು ತಿರುಗ್ಯಾಡೋ ಪರಿಸ್ಥಿತಿನ ಬರತಿರಲಿಲ್ಲ ಅಂತ ಅನಸೆôತಿ.

ರಾಜ್ಯಲ್ಲಾ ನೀರಾಗ ಮುಳುಗಿ ಹೊಂಟೇತಿ ಅಧಿಕಾರದಾಗ ಇದ್ದಾರು ದಿಲ್ಲಿ ಬೆಂಗಳೂರು ಅಂತ ಓಡ್ಯಾಡಾಕತ್ತಾರು. ಮಂತ್ರಿಗೋಳಿಗೆ ಖಾತೆ ಇಲ್ಲದ ಖಾಲಿ ಕೈಲೆ ತಿರುಗ್ಯಾಡಾಕತ್ತಾರು. ಕಾಂಗ್ರೆಸ್‌ನ್ಯಾರು ಪ್ರತಿಪಕ್ಷದ ನಾಯಕನ ಸ್ಥಾನಕ್ಕ ಪತ್ರಿಕಾಗೋಷ್ಠಿ ನಡಿಸಿ ಕೈ ತೊಳಕೊಳ್ಳಾಕತ್ತಾರು. ಸಿದ್ರಾಮಯ್ಯ ಕಣ್ಣುವು ಅನ್ಕೋಂತನ ಕುಂತಲ್ಲೇ ಗೆಣಕಿ ಹಾಕಾಕತ್ತಾರು. ಪರಮೇಶ್ವರ್‌ ಸಾಹೇಬ್ರು ಮಾತ್ಯಾಡದಿದ್ರ ಎಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ಕೈ ತಪ್ಪತೈತೋ ಅಂತೇಳಿ ಒಂದಿನಾ ಬೈದು ಸುಮ್ನಾಗಿ ಬಿಟ್ರಾ. ಇವರಿಬ್ಬರ ನಡಕ ಜಿಂದಾಲ್ಗೆ ಜಮೀನ್‌ ಮಾರಿದ್‌ ಸಲುವಾಗಿ ಆಡಳಿತ ಪಕ್ಷದ ಶಾಸಕರಾಗೇ ಸಿಎಂಗ ಪತ್ರಾ ಬರದು ಪ್ರತಿಪಕ್ಷದ ನಾಯಕನ ಜವಾಬ್ದಾರಿ ನಿಭಾಯಿಸಿದ್ದ ಗದಗಿನ ಪಾಟೀಲರು, ಈ ಸಾರಿ ಪ್ರತಿಪಕ್ಷದ ನಾಯಕ ಆಗ್ಲೇಬೇಕು ಅಂತ ತಮ್ಮ ಇಸ್ತ್ರಿ ಅರಬೀಗೂ ರಾಡಿ ಹತ್ತೂದ್ನೂ ಲೆಕ್ಕಿಸದ ಸೀದಾ ಪ್ರವಾಹ ಪೀಡಿತ ಪ್ರದೇಶಗೋಳಿಗಿ ಬೆಟ್ಟಿ ಕೊಟ್ಟು ನಾವೂ ನಿಮ್‌ ಜೋಡಿ ಅದೇವಿ ಅಂತ ಎಲ್ಲಾ ಕಳಕೊಂಡಾರ ಮುಂದ ನಿಂತು ಸಮಾಧಾನ ಹೇಳೂ ಕಸರತ್ತು ಮಾಡಿದ್ರು.

ರಾಜ್ಯದಾಗ ಇಷ್ಟೆಲ್ಲಾ ಪ್ರವಾಹ ಬಂದು ಜನರ ಬದುಕು ಮುಳಿಗಿ ಹೋದ್ರು ಹುಬ್ಬಳ್ಳಿ ಜೋಷಿ ಸಾಹೇಬ್ರಿಗೆ ರಾಜ್ಯದಾಗ ಏನಾಗೇತಿ ಅಂತ ಗೊತ್ತ ಇಲ್ಲ ಅಂತ ಹೇಳಿ, ತಾವು ಹಾಕ್ಕೊಂಡಿರೋ ಅರಬಿಯೊಳಗ ಅಧಿಕಾರ ಸೊಕ್ಕ ಹೊಕ್ಕೇತಿ ಅನ್ನೂದ್ನ ತೋರಿಸಿದ್ರು, ರಾಜ್ಯ ನೀರಾಗ ತೇಲಾಕತ್ತಿದ್ರೂ ಪ್ರಧಾನಿ ಸಾಹೇಬ್ರು ಬಂದು ಆಕಾಶದಾಗ ಹಾರಾಡಿ ನೋಡಿ ಹೋದ್ರೂ ಸಮಾಧಾನ ಅಕ್ಕಿತ್ತು. ಆದ್ರ ಅವರು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನ ಕಿತ್ತು ಸ್ವಾತಂತ್ರ ಕೊಡಸಿಸೇನಿ ಅನ್ನೋ ಖುಷ್ಯಾಗ ದೇಶಾ ಬಿಟ್ಟು ಹೊರಗಡೇ ತಿರುಗ್ಯಾಡಾಕತ್ತಾರು. ದಿಲ್ಯಾಗ ಕುಂತು ಕಾಶ್ಮೀರದಾಗ ಸ್ವರ್ಗಾ ತೋರಸ್ತೇನಿ ಅಂತ ಹೇಳಿ, ನಮ್ಮ ಜನರ ಬದುಕು ಇಲ್ಲಿ ಮುಳಗಾಕತ್ತಿದ್ರೂ, ಇಮಾನ ಹತ್ತಿ ವಿದೇಶಕ್ಕ ಹಾರಿ ಹ್ವಾದ್ರ, ನಾವು ಓಟ್ ಹಾಕಿ ಗೆಲ್ಲಿಸಿ ಪ್ರಧಾನಿ ಮಾಡಿದ ವ್ಯಕ್ತಿ, ನಾವು ನೀರಾಗ ಮುಳುಗಿ ಸಾಯು ಟೈಮಿನ್ಯಾಗ ನೋಡಾಕ್‌ ಬರದಿದ್ರ, ಸರ್ಕಾರ ಮಂಗಳ ಗ್ರಹದಾಗ ಹೋಗಿ ಮನಿ ಕಟ್ಟಿಸಿದ್ರೂ ಏನ್‌ ಉಪಯೋಗಕ್ಕ ಬಂತು? ಮೋದಿ ಸಾಹೇಬ್ರನ್ನ ಪ್ರಧಾನಿ ಮಾಡಾಕ ನಮ್ಮ ಕ್ಷೇತ್ರದಾಗ ಯಾರ್‌ ನಿಂತಾರು ಅನ್ನೋದ್ನೂ ನೋಡದ ಓಟ್ ಹಾಕಿ ಪ್ರವಾಹದಾಗ ಮುಳುಗಿರೋ ಮಂದಿ, ಈಗ ಮಾತ್ಯಾಡ್ಸಾಕ ಬಂದಾರ್ನ ಎಂಪಿ ಹೌದಲ್ಲೋ ಅಂತ ಕೇಳಿ ಬಾಯಿಗಿ ಬಂದಂಗ ಬೈಯ್ಯುವಂಗಾಗೇತಿ.

ದೇಶದಾಗ ಪ್ರವಾಹಕ್ಕ ಸಿಕ್ಕಾರ ಬದುಕಷ್ಟ ಮುಳಗಾಕತ್ತಿಲ್ಲ. ದೊಡ್ಡ ದೊಡ್ಡ ಕಂಪನಿಗೊಳು ಬಾಗಲಾ ಮುಚ್ಚಿ ಕಂಪನ್ಯಾಗ ಕೆಲಸಾ ಮಾಡಾರ ಬದುಕೂ ಸಣ್ಣಗ ಮುಳಗಾಕ್‌ ಶುರುವಾಗೇತಿ. ವ್ಯಾಪಾರ ಇಲ್ಲಂತೇಳಿ ಒಂದೊಂದ ಕಂಪನಿ ಕೆಲಸದಿಂದ ಮಂದಿನ ಕೈ ಬಿಡಾಕ್‌ ಶುರು ಮಾಡ್ಯಾರು. ನಾವು ಸಣ್ಣಾರಿದ್ದಾಗ ಅಳಾಕತ್ತರ ರಮಸಾಕ್‌ ಇದ್ದಿದ್ದ ಒಂದ ಪಾರ್ಲೇಜಿ ಬಿಸ್ಕೀಟ್. ಟ್ಯಾಕ್ಸ್‌ ಜಾಸ್ತಿ ಆಗೇತಿ ಅಂತೇಳಿ ಹತ್ತು ಸಾವಿರ ಮಂದೀನ ಕೆಲಸದಿಂದ ತಗಿಯೋ ವಿಚಾರ ಐತಿ ಅನ್ನಾಕತ್ತಾರ. ಚಾ ಮಾರಾವ್‌ ಪ್ರಧಾನಿ ಅದ್ರು ಅಂತ ಖುಷಿ ಪಡಬೇಕೋ, ಅದ ಚಾದಾಗ ಎದ್ದಕೊಂಡು ತಿನ್ನಾಕ ಇದ್ದಿದ್ದ ಬಿಸ್ಕೇಟ್ ಕಂಪನಿಗೆ ತ್ರಾಸ ಆದ್ರು ಅಂತ ಬ್ಯಾಸರಾ ಮಾಡ್ಕೊಬೇಕೋ ಒಂದು ಗೊತ್ತಾಗದಂಗ ಆಗೇತಿ. ಯಾಕಂದ್ರ ದೇಶದಾಗ ಮೋದಿ ಮಾದರಿ ಅಭಿವೃದ್ಧಿ ಆಲೋಚನೆನ ಬ್ಯಾರೇ, ಸಾಮಾನ್ಯ ಜನರ ಬದುಕೋ ರೀತಿನ ಬ್ಯಾರೆ ಐತಿ ಅಂತ ಅನಸಾಕತ್ತೇತಿ. ಕಾಶ್ಮೀರ್‌ಗಿ ಅಂಟಿದ ಕಂಟಕಾ ಕಳಿಯೋದು, ಏಕ ನಾಗರಿಕ ಕಾಯ್ದೆ ಜಾರಿಗೊಳಿಸೋದು, ಮೀಸಲಾತಿ ಕಿತ್ತಾಕೋದು ಮೋದಿ ಸಾಹೇಬ್ರ ಅಭಿವೃದ್ಧಿ ಕಲ್ಪನೆಗೋಳು ಅನಸೆôತಿ.

ಅವನ್ನ ಜಾರಿ ಮಾಡು ಗುಂಗಿನ್ಯಾಗ ಇಡೀ ದೇಶಾನ ಮತ್ತ ಇಪ್ಪತ್ತ ವರ್ಷ ಹಿಂದ್‌ ಹೋಗುವಂಗ ಆದ್ರ ಏನ್‌ ಸಾಧನೆ ಮಾಡಿದಂಗಾತು. ಫಾರೆನ್ನಿಂದ ಬಂದಿರೋ ಕ್ರೆಡಿಟ್ ಕಾರ್ಡ್‌ ಆರ್ಥಿಕತೆ ನಮಗ ಬ್ಯಾಡಾ ಅನ್ನೋದ್ನ ಒಪ್ಪಬೌದು. ಆದ್ರ, ಅಡಗಿ ಮನ್ಯಾನ ಕಾಳ್‌ ಗಡಿಗ್ಯಾಗ ಕೂಡಿಡೋ ಚಿಲ್ಲರಾನಾದ್ರೂ ಉಳಿಬೇಕಲ್ಲಾ ?

ಶುಕ್ರಗೌರಿ ಪೂಜಾಕ ಕೇಳಿದಷ್ಟು ರೊಕ್ಕಾ ಕೊಡ್ಲಿಲ್ಲಾ ಅಂತೇಳಿ ಯಜಮಾನ್ತಿ, ಮನ್ಯಾಗ ಗೌರಿ ಪೂಜಾ ಮಾಡಾಕೂ ಸ್ವಾತಂತ್ರಿಲ್ಲಾ ಅಂತ ಬೇಜಾರ ಮಾಡ್ಕೊಂಡ್ಲು. ಪಾಪ ಅಕಿ ತನಗಷ್ಟ ಅತಂತ್ರತೆ ಕಾಡಾಕತ್ತೇತಿ ಅಂತ ಅನ್ಕೊಂಡಾಳು. ಈ ದೇಶದಾಗ ಮೋದಿನ ಅಮಿತ್‌ ಶಾನ ಬಿಟ್ರ ಎಲ್ಲಾರಿಗೂ ಮುಂದೇನಕ್ಕೇತೋ ಅಂತೇಳಿ ಅತಂತ್ರತೆ ಕಾಡಾಕತ್ತೇತಿ. ಮುಖ್ಯಮಂತ್ರಿಯಾದ್ರೂ ಯಡಿಯೂರಪ್ಪಗ ಸ್ವಾತಂತ್ರ್ಯ ಇಲ್ಲ. ಯಾವಾಗ್‌ ಏನಕ್ಕೇತೊ ಅಂತ ಅತಂತ್ರತೆ ಕಾಡಾಕತ್ತೇತಿ. ಎಲ್ಲಾರ ಸುತ್ತಲೂ ಪ್ರವಾಹನ ಕಾಣಾಕತ್ತೇತಿ. ಯಾರು ಯಾವಾಗ್‌ ಮುಳುಗ್ತಾರೋ ಗೊತ್ತಿಲ್ಲಾ.

ಶಂಕರ್ ಪಾಗೋಜಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ