ಸುದೀರ್ಘ‌ ವಿಚಾರಣೆಯಲ್ಲೂ “ಸುಪ್ರೀಂ’

Team Udayavani, Oct 17, 2019, 5:54 AM IST

ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ವಿಚಾರಣೆ ಬುಧವಾರ ಮುಕ್ತಾಯಗೊಂಡಿದೆ. ವಿಶೇಷವೆಂದರೆ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನೇತೃತ್ವದ ಸಂವಿಧಾನ ಪೀಠವು ಸತತ 40 ದಿನಗಳವರೆಗೆ ವಾದ-ಪ್ರತಿವಾದ ಆಲಿಸಿದೆ. ತನ್ಮೂಲಕ ಇದು ಸಂವಿಧಾನ ಪೀಠವೊಂದರ ಎರಡನೇ ಸುದೀರ್ಘ‌ ಅವಧಿಯ ವಿಚಾರಣೆಯೆಂಬ ಗರಿಮೆಗೆ ಪಾತ್ರವಾಗಿದೆ. ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿದ ಕೇಶವಾನಂದ ಭಾರತಿ ಪ್ರಕರಣದ ವಿಚಾರಣೆ ನಿರಂತರ 68 ದಿನಗಳ ಕಾಲ ನಡೆದಿತ್ತು! ದೇಶದ ನ್ಯಾಯಾಂಗ ಇತಿಹಾಸದಲ್ಲಿ ಈ ರೀತಿ ಸುದೀರ್ಘ‌ ವಿಚಾರಣೆಗೆ ಒಳಪಟ್ಟ ಮತ್ತೂಂದು ಕೇಸ್‌ “ಆಧಾರ್‌ ಮಾನ್ಯತೆ’ ಕುರಿತಾದದ್ದು. ಸತತ 38 ದಿನಗಳ ಕಾಲ ಅದರ ವಿಚಾರಣೆ ನಡೆದಿತ್ತು. ಇಂಥ ಪ್ರಕರಣಗಳ ಕುರಿತ ಮಾಹಿತಿ ಇಲ್ಲಿದೆ…

ಪ್ರಜಾಪ್ರಭುತ್ವವ ರಕ್ಷಿಸಿದ ಕೇಶವಾನಂದ ಭಾರತಿ ಪ್ರಕರಣ
ಅದು 1970ರ ಫೆಬ್ರವರಿ ತಿಂಗಳು. ಕೇರಳ ಸರ್ಕಾರ ಭೂಸುಧಾರಣೆ ಕಾಯ್ದೆಯ ಹೆಸರಲ್ಲಿ ಕಾಸರಗೋಡಿನ ಬಳಿಯಿರುವ “ಎಡನೀರು ಮಠ’ಕ್ಕೆ ಸೇರಿದ ಆಸ್ತಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿ, ಈ ಕುರಿತು ನೋಟಿಸ್‌ ಜಾರಿ ಮಾಡಿತು. ಆದರೆ ಸರ್ಕಾರದ ಈ ನಡೆಗೆ ಎಡನೀರು ಮಠದ ಶ್ರೀ ಕೇಶವಾನಂದ ಭಾರತಿಯವರು ವಿರೋಧ ವ್ಯಕ್ತಪಡಿಸಿದರು.

ಆಗ ಅವರ ನೆರವಿಗೆ ಬಂದವರು ಪ್ರಖ್ಯಾತ ನ್ಯಾಯವಾದಿ, ನ್ಯಾಯಶಾಸ್ತ್ರಜ್ಞ ನಾನಾಬಾಯ್‌ ಫಾಲ್ಕಿವಾಲಾ. ಫಾಲ್ಕಿವಾಲಾ ಅವರು ಸ್ವಾಮೀಜಿಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಮನವೊಲಿಸಿದರು. ಅವರೇ ಅರ್ಜಿದಾರರ ಪರವಾಗಿ ವಕಾಲತ್ತು ವಹಿಸಿದ್ದರು. ಸರ್ಕಾರದ ಹಸ್ತಕ್ಷೇಪಲ್ಲದೇ ಧಾರ್ಮಿಕ ಸ್ವಾಮ್ಯದ ಆಸ್ತಿಯನ್ನು ನಿರ್ವಹಿಸುವ ಹಕ್ಕಿನ ಬಗ್ಗೆಯೂ ಅರ್ಜಿಯಲ್ಲಿ ಪ್ರಸ್ತಾಪವಿತ್ತು. ಈ ಪ್ರಕರಣ ಕೇವಲ ಮಠದ ಆಸ್ತಿಗೆ ಸಂಬಂಧಿಸಿದ ವಿಚಾರಕ್ಕಷ್ಟೇ ಅಲ್ಲದೇ, ಮೂಲಭೂತ ಹಕ್ಕುಗಳ ಮಾನ್ಯತೆಯ ಬಗ್ಗೆಯೂ ವಿಸ್ಮತ ಚರ್ಚೆಗೆ ನಾಂದಿ ಹಾಡಿದ್ದು ವಿಶೇಷ. “ಕೇಶವಾನಂದ ಭಾರತಿ ವರ್ಸಸ್‌ ಕೇರಳ ಸರ್ಕಾರ’ ಎಂದು ಗುರುತಿಸಿಕೊಳ್ಳುವ ಈ ಪ್ರಕರಣದ ಕುರಿತಾಗಿ ಸುಪ್ರೀಂ ಕೋರ್ಟ್‌ನಲ್ಲಿ ನಿರಂತರ 68 ದಿನಗಳ ಕಾಲ ವಾದ ಪ್ರತಿವಾದಗಳು ನಡೆದವು!

1972ರ ಅಕ್ಟೋಬರ್‌ 31ರಂದು ಆರಂಭವಾದ ವಾದ- ಪ್ರತಿವಾದಗಳು 1973ರ ಮಾರ್ಚ್‌ 23ಕ್ಕೆ ಮುಗಿದವು. ಈ ಕೇಸಿನ ಕುರಿತಾಗಿ ಬಂದ ತೀರ್ಪನ್ನು ಭಾರತದ ನ್ಯಾಯಶಾಸ್ತ್ರದ ಇತಿಹಾಸದಲ್ಲಿ ಹಾಗೂ ಭಾರತದ ಸಂವಿಧಾನದ ಕುರಿತಾದ ವಿಚಾರದಲ್ಲಿ ಮಹತ್ತರ ಮೈಲಿಗಲ್ಲೆಂದು ಪರಿಗಣಿಸಲಾಗುತ್ತದೆ. ಇನ್ನೊಂದು ವಿಶೇಷತೆ ಎಂದರೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅತೀ ದೊಡ್ಡ ನ್ಯಾಯಪೀಠ, ಅಂದರೆ 13 ಸದಸ್ಯರ ಸಾಂವಿಧಾನಿಕ ನ್ಯಾಯಪೀಠವು ಈ ಕೇಸನ್ನು ಕೂಲಂಕಷವಾಗಿ ಪರಿಶೀಲಿಸಿದ್ದು.

“ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರ ಸಂಸತ್ತಿಗೆ ಇದೆಯೇನೋ ಸರಿ. ಆದರೆ, ಈ ಅಧಿಕಾರ ಬಳಸಿ ಸಂಸತ್ತು ಸಂವಿಧಾನವನ್ನು ಹೇಗೆ ಬೇಕಿದ್ದರೂ ತಿದ್ದಬಹುದೇ?’ ಎಂಬ ಪ್ರಶ್ನೆ ಕೇಶವಾನಂದ ಭಾರತಿ ಪ್ರಕರಣದಲ್ಲಿ ಪ್ರಮುಖ ಪ್ರಶ್ನೆಯಾಗಿ ಎದುರಾಯಿತು. ಆಗ ಸುಪ್ರೀಂ ಕೋರ್ಟ್‌, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯು ಅದರ ಮೂಲ ಸ್ವರೂಪಕ್ಕೆ, ಅಂದರೆ, ಸಂವಿಧಾನದ ಮೂಲ ಆಶಯಕ್ಕೆ ಧಕ್ಕೆ ತರುವಂತಿರಬಾರದು ಎಂದು ಅಭಿಪ್ರಾಯಪಟ್ಟಿತು. ಅಲ್ಲದೆ ಪರಿಚ್ಛೇದ (ಶೆಡ್ನೂಲ…) 9ರಲ್ಲಿ ಶಾಸಕಾಂಗದಲ್ಲಿ ನಿರ್ಣಯಿಸಲಾದ ಸಾಂವಿಧಾನಿಕ ತಿದ್ದುಪಡಿಗಳು ನ್ಯಾಯಿಕ ಸಮಿತಿಗಳಿಂದ ಅಧ್ಯಯನಕ್ಕೊಳಪಟ್ಟ ನಂತರವೇ ತಿದ್ದುಪಡಿಗೊಳ್ಳುವಂತೆಯೂ ಹೊಸ ಮಾರ್ಗಸೂಚಿ ಜಾರಿ ಮಾಡಿತು. ಹದಿಮೂರು ನ್ಯಾಯಮೂರ್ತಿಗಳ ನ್ಯಾಯಪೀಠವು 7-6ರಷ್ಟಿದ್ದ ಅತಿಸೂಕ್ಷ್ಮ ಬಹುಮತದಿಂದ ಈ ತೀರ್ಪು ನೀಡಿತು. ಸಂವಿಧಾನದ ಮೂಲಭೂತ ವೈಶಿಷ್ಟ್ಯಗಳನ್ನು ತಿರುಚುವ‌ ಅಥವಾ ಅದನ್ನು ಊನಗೊಳಿಸುವ ಅಧಿಕಾರ ಸಂಸತ್ತಿಗಿಲ್ಲ ಎನ್ನುವ ಮೂಲಕ, ಬೆಳೆಯುತ್ತಲೇ ಇದ್ದ ಶಾಸಕಾಂಗದ ಕೈಗಳನ್ನು ಹಿಡಿದು ನಿಲ್ಲಿಸಿತು. ಈಗಲೂ ಭಾರತದ ಕಾನೂನು ವಿದ್ಯಾರ್ಥಿಗಳು ಅಭ್ಯಸಿಸುವ ಬಹು ಮುಖ್ಯವಾದ ಕೇಸುಗಳಲ್ಲಿ ಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರದ ಕೇಸು ಅಗ್ರಗಣ್ಯವಾಗಿದೆ. ಕೇಶವಾನಂದ ಪ್ರಕರಣದ ಸಿದ್ಧತೆಗೆ ನಡೆಸಿದ ತಯ್ನಾರಿ, ಅದಕ್ಕಾಗಿ ಪಟ್ಟ ಪರಿಶ್ರಮ ಅಗಾಧವಾದದ್ದು. ಅಕ್ಷರಶಃ ನೂರಾರು ಪ್ರಕರಣಗಳನ್ನು ಅಂದು ಉಲ್ಲೇಖೀಸಲಾಗಿತ್ತು, ಅಟಾರ್ನಿ ಜನರಲ್‌ರಂತೂ 71 ದೇಶಗಳ ಸಂವಿಧಾನಿಕ ನಿಬಂಧನೆಗಳನ್ನು ವಿಶ್ಲೇಷಿಸುವ ಚಾರ್ಟ್‌ ಸಿದ್ಧಪಡಿಸಿದ್ದರು.

ಎ.ಎನ್‌.ರೇಗೆ ಇಂದಿರಾ ಕಟಾಕ್ಷ!
ಈ ತೀರ್ಪಿನ ನಂತರ ಆಘಾತಕಾರಿ ಬೆಳವಣಿಗೆಯೊಂದೂ ನಡೆಯಿತು. ಇಂದಿರಾ ಸರ್ಕಾರ, ನ್ಯಾಯಮೂರ್ತಿಗಳಾದ ಕೆ.ಎಸ್‌. ಹೆಗ್ಡೆ, ಜೆ.ಎನ್‌.ಶೀಲತ್‌ ಮತ್ತು ಎ.ಎನ್‌. ಗ್ರೋವರ್‌ ಎಂಬ ಮೂವರ ಹಿರಿತನವನ್ನು ಬದಿ ಗಿರಿಸಿ ನ್ಯಾಯಮೂರ್ತಿ ಎ.ಎನ್‌.ರೇ ಅವರನ್ನು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಿಸಿತು. (ಎ.ಎನ್‌.ರೇ. ಈ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದರು!) ಪ್ರಕರಣದಲ್ಲಿ ಜ. ಕೆ.ಎಸ್‌. ಹೆಗ್ಡೆ, ಜ. ಜೆ.ಎನ್‌.ಶೀಲತ್‌ ಮತ್ತು ಜ. ಎ.ಎನ್‌. ಗ್ರೋವರ್‌ ಬಹುಮತದ ಪರವಾಗಿ ಇದ್ದದ್ದು ಇಂದಿರಾ ಸರ್ಕಾರದ ಮುನಿಸಿಗೆ ಕಾರಣವಾಗಿತ್ತು. ಎ.ಎನ್‌. ರೇ. ಅವರನ್ನು ಸಿಜೆಐ ಆಗಿ ನೇಮಿಸಿದ್ದನ್ನು
ಭಾರತೀಯ ಕಾನೂನು ಇತಿಹಾಸದಲ್ಲೇ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ.

ಆಧಾರ್‌: ಖಾಸಗಿ ಹಕ್ಕಿನ ಪ್ರಶ್ನೆ
ಈಗಲೂ ದೇಶಾದ್ಯಂತ ಪರ-ವಿರೋಧದ ತಕ್ಕಡಿಯಲ್ಲಿ ತುಯ್ದಾಡುತ್ತಿದೆ “ಆಧಾರ್‌’. ಆಧಾರ್‌ ಸಿಂಧುತ್ವ, ಕಡ್ಡಾಯ ಕುರಿತಂತೆ ಕಳೆದ ವರ್ಷ ಸುಪ್ರೀಂ ಕೋರ್ಟಿನಲ್ಲಿ ನಾಲ್ಕು ತಿಂಗಳಲ್ಲಿ, 38 ದಿನಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪಂಚಸದಸ್ಯ ಪೀಠ ನಡೆಸಿದ ಈ ವಿಚಾರಣೆಯು ಆ ಸಮಯದಲ್ಲಿ ಕೇಶವಾನಂದ ಭಾರತಿ ಪ್ರಕರಣದ ನಂತರ ಎರಡನೇ ಸುದೀರ್ಘ‌ ವಿಚಾರಣೆ ಎಂದು ಕರೆಸಿಕೊಂಡಿತ್ತು. ಈ ಪಂಚಸದಸ್ಯ ಪೀಠದಲ್ಲಿ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ, ಎ.ಕೆ. ಸಿಕ್ರಿ, ಜ. ಅಶೋಕ್‌ ಭೂಷಣ್‌, ಜ. ಎ.ಎಂ. ಖಾನ್ವಿಲ್ಕರ್‌ ಮತ್ತು
ಜ. ಡಿ.ವೈ. ಚಂದ್ರಚೂಡ್‌ ಇದ್ದರು.

ಆಧಾರ್‌ ಕಾರ್ಡ್‌ ಕಡ್ಡಾಯ ಪ್ರಶ್ನಿಸಿ 30ಕ್ಕೂ ಹೆಚ್ಚು ಅರ್ಜಿದಾರರು ಸುಪ್ರಿಂ ಕೋರ್ಟ್‌ ಮೆಟ್ಟಿಲೇರಿದ್ದರು. ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್‌ ಮಾಡುವ ಮೂಲಕ ವೈಯಕ್ತಿಕ ಹಕ್ಕುಗಳ ಉಲ್ಲಂಘನೆ ನಡೆದಿದೆ, ಇದು ಖಾಸಗಿತನಕ್ಕೆ ಧಕ್ಕೆ ಮಾಡುತ್ತದೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಆದರೆ ಕೇಂದ್ರ ಸರ್ಕಾರ ಆಧಾರ್‌ ಅನ್ನು ಸಮರ್ಥಿಸಿಕೊಂಡಿತ್ತು. ಸುಪ್ರೀಂ ಕೋರ್ಟ್‌ ಈ ವಿಚಾರದಲ್ಲಿ ಒಂದು ಸಮತೋಲನ ಮುಖ್ಯ ಎನ್ನುವುದನ್ನು ಸಾರಿ ಹೇಳಿತು. ಬ್ಯಾಂಕ್‌ ಅಕೌಂಟ್‌, ಫೋನ್‌ ನಂಬರ್‌ ಅಥವಾ ಶಾಲೆಗೆ ಸೇರಿಸಲು ಆಧಾರ್‌ ಕಡ್ಡಾಯವಲ್ಲ
ಎಂದು ಕೋರ್ಟ್‌ ಹೇಳಿತು. ಜತೆಗೇ,  ಆಧಾರ್‌ನ ಮಾನ್ಯತೆಯನ್ನೂ ಎತ್ತಿಹಿಡಿಯಿತು.

ರಾಮ ಜನ್ಮಭೂಮಿಗಾಗಿ…
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ಪ್ರಕರಣದ ವಿವಾದದ ಅಂತಿಮ ವಿಚಾರಣೆ ಆಗಸ್ಟ್‌ 6ರಿಂದ ಆರಂಭವಾಗಿ ಅಕ್ಟೋಬರ್‌ 16ರಂದು ಮುಕ್ತಾಯಗೊಂಡಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗೊಯಿ ಅವರು ನವೆಂಬರ್‌ 17ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು, ಅದಕ್ಕೂ ಮುನ್ನ ಐತಿಹಾಸಿಕ ತೀರ್ಪನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ಪ್ರಕರಣದ ಅಂತಿಮ ತೀರ್ಪನ್ನು ನಿವೃತ್ತಿಯಾಗುವ ಮೊದಲೇ ಘೋಷಿಸುವ ನಿಟ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೋಗೊಯಿ ಅವರು ಅಧಿಕೃತ ವಿದೇಶ ಪ್ರವಾಸವನ್ನು ರದ್ದುಗೊಳಿಸಲು ನಿರ್ಧರಿಸಿದ್ದಾರೆ ಎಂದೂ ಹೇಳಲಾಗುತ್ತಿದೆ.

ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ಬೋರ್ಡ್‌, ನಿರ್ಮೋಹಿ, ಅಖಾಡ ಹಾಗೂ ರಾಮಲಲ್ಲಾ ಸಮಾನವಾಗಿ ವಿಭಜಿಸಿ ನೀಡಬೇಕು ಎಂದು 2010ರಲ್ಲಿ ಅಲಹಾಬಾದ್‌ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯ ವಿಚಾರಣೆ ಇದಾಗಿತ್ತು.

ಟೈಮ್‌ಲೈನ್‌
1950: ಶ್ರೀರಾಮನ ಪೂಜೆಗೆ ಅವಕಾಶ ಕಲ್ಪಿಸುವಂತೆ ಗೋಪಾಲ್‌ ಸಿಂಗ್‌, ರಾಮಚಂದ್ರದಾಸ್‌ ಸೇರಿದಂತೆ ನಾಲ್ಕು ಪ್ರತ್ಯೇಕ ಅರ್ಜಿ.
1961: ಬಾಬ್ರಿ ಮಸೀದಿ ತನ್ನ ಸ್ವತ್ತು ಎಂದು ಕೋರ್ಟ್‌ ಮೆಟ್ಟಿಲೇರಿದ ಉತ್ತರ ಪ್ರದೇಶದ ಸುನ್ನಿ ವಕ್ಫ್ ಮಂಡಳಿ.
1986: ಮಸೀದಿ ಬಾಗಿಲು ತೆರೆವುಗೊಳಿಸಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡುವಂತೆ ಫೈಜಾಬಾದ್‌ ಜಿಲ್ಲಾ ನ್ಯಾಯಾಲಯದಿಂದ ತೀರ್ಪು. ಅದೇ ವರ್ಷ, ಬಾಬ್ರಿ ಮಸೀದಿ ಆ್ಯಕ್ಷನ್‌ ಕಮಿಟಿ ಅಸ್ತಿತ್ವಕ್ಕೆ.
1989: ಬಾಬ್ರಿ ಮಸೀದಿ-ರಾಮಜನ್ಮಭೂಮಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳೂ ಹೈಕೋರ್ಟ್‌ಗೆ
1992: ಬಾಬ್ರಿ ಮಸೀದಿ ಧ್ವಂಸ. ದೇಶಾದ್ಯಂತ ಭುಗಿಲೆದ್ದ ಹಿಂಸಾಚಾರ.
ಡಿ.1992: ತನಿಖೆ ನಡೆಸಲು ಲಿಬರ್ಹಾನ್‌ ಸಮಿತಿ ಸ್ಥಾಪಿಸಿದ ಕಾಂಗ್ರೆಸ್‌ ಸರ್ಕಾರ
1993: ಎಲ್‌ ಕೆ ಆಡ್ವಾಣಿ ಹಾಗೂ ಇತರೆ 13 ನಾಯಕರ ಮೇಲೆ ಬಾಬ್ರಿ ಮಸೀದಿ ಕೆಡವಲು ಸಂಚು ರೂಪಿಸಿದ ಆರೋಪ. ಸಿಬಿಐನಿಂದ ಚಾರ್ಜ್‌ಶೀಟ್‌.
2003: ವಿವಾದಿತ ಪ್ರದೇಶವು ನಿಜಕ್ಕೂ ಶ್ರೀರಾಮನ ಜನ್ಮಸ್ಥಳವೇ ಎನ್ನುವುದನ್ನು ಪರಿಶೀಲಿಸಲು ಭೂಗರ್ಭ ಶಾಸ್ತ್ರಜ್ಞರಿಂದ ಸಮೀಕ್ಷೆ ಆರಂಭ. ಇದು ರಾಮಜನ್ಮಸ್ಥಾನ ಎನ್ನುವುದಕ್ಕೆ ಮಸೀದಿ ಕೆಳಗೆ ಕುರುಹುಗಳಿವೆ ಎಂದು ಹೇಳಿದ ತಂಡ. ಇದನ್ನು ನಿರಾಕರಿಸಿದ ವಕ್ಫ್.
2010: ಅಯೋಧ್ಯೆಯಲ್ಲಿರುವ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ಬೋರ್ಡ್‌, ನಿರ್ಮೋಹಿ, ಅಖಾಡ ಹಾಗೂ ರಾಮಲಲ್ಲಾಗೆ ಸಮಾನವಾಗಿ ವಿಭಜಿಸಿ ನೀಡಬೇಕು ಎಂದು ಅಲಹಾಬಾದ್‌ ಉಚ್ಚ ನ್ಯಾಯಾಲಯದಿಂದ ತೀರ್ಪು.
2011-2017: ಹೈಕೋರ್ಟ್‌ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ ಹಿಂದೂ ಹಾಗೂ ಮುಸ್ಲಿಂ ದೂರುದಾರರು.
ಡಿಸೆಂಬರ್‌ 05, 2017: ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ. ಸುನ್ನಿ ಬೋರ್ಡ್‌ನಿಂದ ಕಾಲಾವಕಾಶ ಕೋರಿಕೆ, ವಿಚಾರಣೆ ಮುಂದೂಡಿಕೆ.
ಆ.6-ಅ.16, 2019: ರಾಮಜನ್ಮ ಭೂಮಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ನಿರಂತರ ವಿಚಾರಣೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ