ಟೀ ಕತೆ ಮತ್ತು ಆರ್ಥಿಕತೆ
Team Udayavani, Jul 5, 2022, 6:20 AM IST
ಒಂದು ಕಡೆ ಚೀನ ಟ್ರ್ಯಾಪ್ ಮತ್ತೂಂದು ಕಡೆ ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ… ಇಂದು ಟೀ ಕುಡಿಯಲೂ ಹಿಂದೆ ಮುಂದೆ ನೋಡುವಂಥ ಸ್ಥಿತಿ ನಿರ್ಮಾಣವಾಗಿದೆ ಪಾಕಿಸ್ಥಾನದಲ್ಲಿ. ಯಾಕಿಂಥ ಸ್ಥಿತಿ ಬಂತು ಎಂದು ಒಮ್ಮೆ ಅವಲೋಕಿಸಿದರೆ, ಚೀನದ ಮೇಲಿನ ಅತೀವ ಅವಲಂಬನೆ ಮತ್ತು ರಾಜಕೀಯ ಅಸ್ಥಿರತೆಯೇ ಕಾರಣ ಎಂಬುದು ಮನದಟ್ಟಾಗುತ್ತದೆ. ಹಾಗೆಂದು ಅಲ್ಲಿನ ರಾಜಕಾರಣಿಗಳೇನೂ ಬಡವರಲ್ಲ, ಅವರೆಲ್ಲರೂ ಸಿರಿವಂತರೇ… ಆದರೆ ನಿಜವಾಗಿಯೂ ಕಷ್ಟಪಡುತ್ತಿರುವುದು ಮಾತ್ರ ಪಾಕಿಸ್ಥಾನದ ಜನತೆ…
ಏನಿದು ಟೀ ಕಥೆ?
ಭಾರತೀಯರಂತೆಯೇ ಪಾಕಿಸ್ಥಾನೀಯರೂ ಟೀ ಪ್ರೇಮಿಗಳು. ನಮ್ಮಲ್ಲಿ ಟೀ ಬೆಳೆಯುವ ಪ್ರಮಾಣ ಹೆಚ್ಚಿದೆ. ಆದರೆ ಪಾಕಿಸ್ಥಾನೀಯರು ಟೀ ಪುಡಿಗಾಗಿ ಹೊರದೇಶಗಳನ್ನೇ ನಂಬಿಕೊಂಡಿದ್ದಾರೆ. ಪಾಕಿಸ್ಥಾನದ ನ್ಯೂಸ್ ಇಂಟರ್‌ನ್ಯಾಶನಲ್ ನ್ಯೂಸ್ ಪೇಪರ್ ಪ್ರಕಾರ 2021-22ರಲ್ಲಿ 400 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದಷ್ಟು ಟೀ ಕುಡಿದಿದ್ದಾರೆ. ಅಲ್ಲದೇ ಇಡೀ ಜಗತ್ತಿನಲ್ಲೇ ಅತೀ ಹೆಚ್ಚು ಟೀ ಅನ್ನು ಆಮದು ಮಾಡಿಕೊಳ್ಳುವ ದೇಶವೂ ಪಾಕಿಸ್ಥಾನವೇ. ಹೀಗಾಗಿ ಟೀ ಅನ್ನು ಆಮದು ಮಾಡಿಕೊಳ್ಳುವ ಸಲುವಾಗಿ ಪಾಕಿಸ್ಥಾನ ಪ್ರತೀ ವರ್ಷವೂ ಬಹಳಷ್ಟು ಹಣವನ್ನು ವ್ಯಯಿಸುತ್ತಿದೆ. ಅಲ್ಲದೆ, 2020ರಲ್ಲಿ ಪಾಕಿಸ್ಥಾನ 640 ಮಿಲಿಯನ್ ಡಾಲರ್‌ನಷ್ಟು ಹಣವನ್ನು ಟೀ ಆಮದಿಗೆ ಬಳಸಿಕೊಂಡಿತ್ತು.
1-2 ಕಪ್ ಟೀ ಸಾಕು…
ಹೌದು, ದಿನಕ್ಕೆ ಕೇವಲ ಒಂದರಿಂದ ಎರಡು ಕಪ್ ಮಾತ್ರ ಟೀ ಕುಡಿಯಿರಿ ಎಂಬುದು ಅಲ್ಲಿನ ಹಣಕಾಸು ಸಚಿವರ ಮನವಿ. ಅಂದರೆ ಕಡಿಮೆ ಟೀ ಕುಡಿದಷ್ಟು ಬೇಡಿಕೆ ತಗ್ಗಿ, ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ. ಆಗ ದೇಶದ ವಿದೇಶಿ ವಿನಿಮಯಕ್ಕಾಗಿ ಮಾಡುವ ವೆಚ್ಚ ಕಡಿಮೆಯಾಗುತ್ತದೆ ಎನ್ನುವುದು ಅವರ ಲೆಕ್ಕಾಚಾರ. ಅಷ್ಟೇ ಅಲ್ಲ, ನಾವು ಟೀ ಕಡಿಮೆ ಕುಡಿಯದಿದ್ದರೆ, ಬೇಗನೇ ಶ್ರೀಲಂಕಾದ ಸ್ಥಿತಿಯನ್ನು ಇಲ್ಲಿಯೂ ನೋಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
ಪಾಕಿಸ್ಥಾನದ ಆರ್ಥಿಕತೆ
ಇತ್ತೀಚಿನ ವರ್ಷಗಳಲ್ಲಿ ಪಾಕಿಸ್ಥಾನದ ಆರ್ಥಿಕತೆ ಉತ್ತಮವಾಗಿದೆ ಎಂಬ ಮಾತು ಕೇಳಿದ್ದೇ ಇಲ್ಲ. ಒಂದಿಲ್ಲೊಂದು ಸಮಸ್ಯೆಗಳಿಂದಾಗಿ ಅದು ಸಾಲದ ಮೇಲೆ ಸಾಲ ಮಾಡುತ್ತಲೇ ಇದೆ. ಕಳೆದ ಕೆಲವು ತಿಂಗಳುಗಳಿಂದ ಸಾಲದ ಮಟ್ಟ ಹೆಚ್ಚುತ್ತಲೇ ಇದೆ. ಹೀಗಾಗಿಯೇ ಅಲ್ಲಿ ಹಣದುಬ್ಬರ ಹೆಚ್ಚಾಗಿ ತೈಲೋತ್ಪನ್ನಗಳು, ಆಹಾರ ಪದಾರ್ಥ ಗಳ ಬೆಲೆಯೂ ಹೆಚ್ಚುತ್ತಿದೆ. ದೇಶದ ವಿದೇಶಿ ಕರೆನ್ಸಿ ಸಂಗ್ರಹವೂ ತೀರಾ ಕಡಿಮೆಯಾಗಿದೆ. ಅಲ್ಲಿನ ಸೆಂಟ್ರಲ್ ಬ್ಯಾಂಕ್‌ನಲ್ಲಿ ಕಳೆದ ಫೆಬ್ರವರಿ ಅಂತ್ಯದಲ್ಲಿ 16 ಬಿಲಿಯನ್ ಅಮೆರಿಕನ್ ಡಾಲರ್ ಇತ್ತು. ಮೇ ತಿಂಗಳ ಹೊತ್ತಿಗೆ ಇದು 10 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಇಳಿಕೆಯಾಗಿದೆ. ಇದು ಮುಂದಿನ ಎರಡು ತಿಂಗಳು ಆಮದು ಮಾಡಿಕೊಳ್ಳಲು ಮಾತ್ರ ಸಾಕಾಗುತ್ತದೆ.
ಮದುವೆಗೆ ವಿದ್ಯುತ್ ಶಾಕ್
ಪಾಕಿಸ್ಥಾನದಲ್ಲಿ ಈಗಿನ ಸ್ಥಿತಿ ಹೇಗಿದೆ ಎಂದರೆ, ಅಕ್ಷರಶಃ ಕತ್ತಲಲ್ಲಿ ಜೀವನ ಮಾಡುವಂತಾಗಿದೆ. ಸದ್ಯ 22,000 ಮೆ.ವ್ಯಾ.ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಆದರೆ ಪಾಕಿಸ್ಥಾನದಲ್ಲಿ ವಿದ್ಯುತ್‌ಗೆ ಇರುವ ಬೇಡಿಕೆ 26,000 ಮೆಗಾವ್ಯಾಟ್. ಹೀಗಾಗಿ ನಾಲ್ಕು ಸಾವಿರ ಮೆಗಾವ್ಯಾಟ್‌ನಷ್ಟು ವಿದ್ಯುತ್ ಕೊರತೆ ಅನುಭವಿ ಸುತ್ತಿದೆ. ಅಲ್ಲದೆ ಪಾಕಿಸ್ಥಾನದ ಕೆಲವು ಮಾಧ್ಯಮಗಳ ಪ್ರಕಾರ, 7,500 ಮೆಗಾವ್ಯಾಟ್ ಕೊರತೆಯಾಗುತ್ತಿದೆ. ಹೀಗಾಗಿಯೇ ಪ್ರತೀ ದಿನ ಕರಾಚಿಯಲ್ಲಿ 15 ಗಂಟೆ ಪವರ್ ಕಟ್ ಮಾಡಿದರೆ, ಲಾಹೋರ್‌ನಲ್ಲಿ 12 ಗಂಟೆಗಳಷ್ಟೇ ವಿದ್ಯುತ್ ಒದಗಿಸಲಾಗುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಯಾವಾಗ ಬರುತ್ತದೆ, ಯಾವಾಗ ಹೋಗುತ್ತದೆ ಎಂಬುದೇ ಗೊತ್ತಾಗುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಪ್ರಧಾನಿ ಶೆಹಬಾಜ್ ಷರೀಫ್ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ರಾತ್ರಿ 10 ಗಂಟೆ ಅನಂತರ ಯಾವುದೇ ವಿವಾಹ ಕಾರ್ಯಕ್ರಮ ಮಾಡುವಂತಿಲ್ಲ ಮತ್ತು ರಾತ್ರಿ 8.30ರ ಅನಂತರ ಎಲ್ಲ ಮಾರು ಕಟ್ಟೆಗಳನ್ನು ಮುಚ್ಚುವಂತೆ ಆದೇಶಿಸಲಾಗಿದೆ. ಇದಕ್ಕೆ ಕಾರಣ ಗಳೆಂದರೆ, ಪಾಕಿಸ್ಥಾನದಲ್ಲಿನ ಎಲ್ಲ ಉಷ್ಣವಿದ್ಯುತ್ ಸ್ಥಾವರಗಳು ವಿದೇಶದ ಕಲ್ಲಿದ್ದಲನ್ನೇ ನಂಬಿಕೊಂಡಿವೆ. ಇದರ ಜತೆಯಲ್ಲೇ ಉಕ್ರೇನ್ ಮೇಲಿನ ರಷ್ಯಾ ದಾಳಿಯಿಂದ ವಿದೇಶದಿಂದ ಸರಿಯಾದ ಪ್ರಮಾಣದಲ್ಲಿ ಕಲ್ಲಿದ್ದಲು ಸರಬರಾಜು ಆಗುತ್ತಿಲ್ಲ. ಜತೆಗೆ ಪೆಟ್ರೋಲಿಯಂ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಹಣವೂ ಇಲ್ಲ. ಹೀಗಾಗಿಯೇ ತೀರಾ ಪವರ್ ಕ್ರೈಸಿಸ್ ಉಂಟಾಗಿದೆ.
ಪೆಟ್ರೋಲ್ ಬೆಲೆಯೂ ಏರಿಕೆ
ಗುರುವಾರವಷ್ಟೇ ಪಾಕಿಸ್ಥಾನ ಸರಕಾರ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಅಂದರೆ ಶೇ.29ರಷ್ಟು ಹೆಚ್ಚಳ ಮಾಡಲಾಗಿದೆ. ಈಗ ಪಾಕಿಸ್ಥಾನದಲ್ಲಿ ಪ್ರತೀ ಲೀ. ಪೆಟ್ರೋಲ್‌ಗೆ 248.74 ರೂ., ಡೀಸೆಲ್‌ಗೆ 276.54 ರೂ., ಸೀಮೆಎಣ್ಣೆಗೆ 230.26 ರೂ.ಗಳಾಗಿವೆ. ಕಳೆದ ಒಂದು ತಿಂಗಳಿನಿಂದ ಹಲವು ಬಾರಿಗೆ ಬೆಲೆ ಏರಿಕೆ ಮಾಡಲಾಗಿದೆ.
ಸಾಲಕ್ಕಾಗಿ ಐಎಂಎಫ್ಗೆ ಮೊರೆ
ಚೀನ ಆಯ್ತು, ಈಗ ಅಮೆರಿಕ ಮತ್ತು ಅಂತಾರಾಷ್ಟ್ರೀಯ ಹಣಕಾಸು ನಿಧಿ ಮುಂದೆಯೂ ಸಾಲಕ್ಕಾಗಿ ಪಾಕಿಸ್ಥಾನ ಮೊರೆ ಇಟ್ಟಿದೆ. ಇದೇ ಕಾರಣಕ್ಕಾಗಿಯೇ ಪಾಕಿಸ್ಥಾನದ ಜನತೆಗೆ ಟೀ ಕಡಿಮೆ ಕುಡಿಯಲು ಹೇಳಿರುವುದು. ಅಂದರೆ, ವಿದೇಶಿ ಕರೆನ್ಸಿ ಸಂಗ್ರಹ ಹೆಚ್ಚಿದ್ದರೆ ಸಾಲವೂ ಸುಲಭವಾಗಿ ಸಿಗುತ್ತದೆ ಎಂಬ ಲೆಕ್ಕಾಚಾರ ಅವರದ್ದು. ಜತೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ 30 ವರ್ಷಗಳ ಅವಧಿಗೆ 13 ಸಾಲಗಳನ್ನು ತೆಗೆದು ಕೊಳ್ಳಲಾಗಿದೆ. ಈಗ 6 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ಸಾಲಕ್ಕಾಗಿ ಮತ್ತೆ ಮೊರೆ ಇಟ್ಟಿದ್ದು, ಷರತ್ತುಗಳನ್ನು ಪೂರೈಸದೆ ಕೊಡುವುದಿಲ್ಲ ಎಂದಿದೆ. ಅಂದರೆ ಸಾಲ ತೀರಿಸುವ ಬಗ್ಗೆ ಮತ್ತು ಹಣದುಬ್ಬರ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಹೇಳುವಂತೆ ಸೂಚಿಸಿದೆ.
ಗಿಲಿYಟ್ ಅಡ ಇಡಲು ಸಂಚು
ಪರಮಾಪ್ತ ಮಿತ್ರ ಪಾಕಿಸ್ಥಾನಕ್ಕೆ ದಿನಗಳ ಹಿಂದೆ 17,500 ಕೋಟಿ ರೂ. ಮೊತ್ತದ ಹೊಸ ಸಾಲ ನೀಡಿರುವ ಬಗ್ಗೆ ವರದಿಗಳು ಇವೆ. ಈ ಎಲ್ಲದರ ನಡುವೆ ಭಾರತದ ಅವಿಭಾಜ್ಯ ಅಂಗವಾಗಿರುವ ಗಿಲ್ಗಿಟ್- ಬಾಲ್ಟಿಸ್ಥಾನವನ್ನು ಭೋಗ್ಯಕ್ಕೆ ನೀಡಿ, ಚೀನದಿಂದ ಸಾಲ ಪಡೆಯಲು ಪಾಕ್ ಸರಕಾರ ಮುಂದಾಗಿದೆ. ಒಂದು ವೇಳೆ ಈ ಬೆಳವಣಿಗೆ ಖಚಿತಪಟ್ಟರೆ ಭಾರತಕ್ಕೆ ಹೊಸ ಸಮಸ್ಯೆ ಎದುರಾಗಲಿದೆ. ಇನ್ನೊಂದೆಡೆ ಕೇಳಿದಾಗಲೆಲ್ಲ ಪಾಕಿಸ್ಥಾನಕ್ಕೆ ಸಾಲ ನೀಡಿ, ಅದನ್ನು ಕೈವಶ ಮಾಡಿಕೊಂಡು ಬಿಟ್ಟಿದೆ ಚೀನ. ಪಾಕಿಸ್ಥಾನದ ಒಟ್ಟಾರೆ ಸಾಲವೇ 44,366 ಬಿಲಿಯನ್ ಪಾಕಿಸ್ಥಾನ ರೂಪಾಯಿಯಷ್ಟಿದೆ. ಹಿಂದಿನ ಆರ್ಥಿಕ ವರ್ಷದ ಮೊದಲ ಒಂಬತ್ತು ವರ್ಷಗಳಲ್ಲಿ 4.5 ಬಿಲಿಯನ್ ಪಾಕಿಸ್ಥಾನ ರೂಪಾಯಿಯಷ್ಟು ಸಾಲ ಹೆಚ್ಚಾಗಿದೆ.
ಐಷಾರಾಮಿ ವಸ್ತುಗಳ ಆಮದಿಲ್ಲ
ಕಳೆದ ತಿಂಗಳಷ್ಟೇ ಪಾಕಿಸ್ಥಾನ ಸರಕಾರವು ಐಷಾರಾಮಿ ವಸ್ತುಗಳ ಆಮದಿಗೆ ನಿರ್ಬಂಧ ಹೇರಿತ್ತು. ಇದಕ್ಕೆ ಕಾರಣವೂ ತನ್ನ ಬಳಿ ಕಡಿಮೆ ಇರುವ ವಿದೇಶಿ ಕರೆನ್ಸಿ ಸಂಗ್ರಹ. ಒಂದು ವೇಳೆ ಐಷಾರಾಮಿ ಕಾರು, ಕಾಸ್ಮೆಟಿಕ್ಸ್, ಮೊಬೈಲ್ ಫೋನ್‌ಗಳು, ಸಿಗರೇಟ್ ಸೇರಿದಂತೆ ಇತರ ವಸ್ತುಗಳನ್ನು ಆಮದು ಮಾಡಿಕೊಂಡರೆ, ಆಗ ವಿದೇಶಿ ಕರೆನ್ಸಿ ಕಡಿಮೆಯಾಗುತ್ತದೆ ಎಂಬ ಆತಂಕವೂ ಪಾಕಿಸ್ಥಾನಕ್ಕೆ ಇದೆ.