ಹೆಚ್ಚುತ್ತಿದೆ, ದತ್ತು ಪಡೆದ ಮಕ್ಕಳನ್ನು ಹಿಂದಿರುಗಿಸುವ ಪ್ರಮಾಣ!

ದತ್ತು ಸ್ವೀಕಾರ ಪ್ರಮಾಣವೂ ಏರಿಕೆ

Team Udayavani, Nov 13, 2019, 5:58 AM IST

ಇತ್ತೀಚೆಗೆ ದತ್ತು ಮಕ್ಕಳನ್ನು ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಜತೆಗೆ ದತ್ತು ಮಕ್ಕಳನ್ನು ಪಡೆಯಲು ನೆರವಾಗುತ್ತಿರುವ ಕೇಂದ್ರ ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆ (ಕಾರಾ) ಕೆಲವೊಂದು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ವರದಿಯೊಂದು ಹೇಳಿದೆ. ಭಾರತದಲ್ಲಿ ಮಕ್ಕಳ ದತ್ತು ಸ್ವೀಕಾರ ಕಾರಾ ಸಂಸ್ಥೆಯ ಮೂಲಕ ನಡೆಯುತ್ತದೆ. ಆದರೆ ಈಗ ದತ್ತು ಪಡೆದುಕೊಂಡವರು ಆ ಮಕ್ಕಳನ್ನು ವಾಪಸ್‌ ಸಂಸ್ಥೆಗೆ ನೀಡುತ್ತಿದ್ದಾರೆ ಎಂದು ಉಲ್ಲೇಖೀಸಲಾಗಿದೆ.

ಅನಾಥ, ನಿರ್ಗತಿಕರಿಗೂ ಒಂದು ಜೀವನ ಇದೆ. ಮಕ್ಕಳಿಲ್ಲದವರಿಗೆ, ಮಗು ಪಡೆಯಲು ಅಶಕ್ತರಾದವರಿಗೆ, ಮಗುವನ್ನು ಹೊಂದ ಬಯಸುವವರು ದತ್ತು ಸ್ವೀಕಾರದ ಮೂಲಕ ಮಗು ಹೊಂದಬಹುದು. ಈ ಮೂಲಕ ಅವರ ಜೀವನಕ್ಕೂ ಬೆಳಕಾಗಬಹುದು. ಕಾನೂನು ಬದ್ಧವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ದತ್ತು ಸ್ವೀಕರಿಸುವವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ದೇಶದಿಂದ ಮಾತ್ರವಲ್ಲದೆ ವಿದೇಶದಿಂದಲೂ ದತ್ತು ಪಡೆದುಕೊಳ್ಳಲಾಗುತ್ತದೆ.

ದತ್ತು ಪಡೆಯುವುದು ಹೇಗೆ?
ದತ್ತು ಪಡೆಯಲು ಇಚ್ಛಿಸುವವರು ಅಧಿಕೃತ ಏಜೆನ್ಸಿಗಳು ಅಥವಾ ಕಾರಾ (CARA) ನಿಂದ ಮಾನ್ಯತೆ ಹೊಂದಿದ ಸಂಸ್ಥೆಗಳನ್ನು ಸಂಪರ್ಕಿಸಬೇಕು. ಅಲ್ಲಿ ದತ್ತು ಸ್ವೀಕರಿಸುವವರ/ದಂಪತಿಯ ವೈದ್ಯಕೀಯ ಅರ್ಹತೆ ದೃಢೀಕರಣ, ಉದ್ಯೋಗ ಹಾಗೂ ಆದಾಯ ದೃಢೀಕರಣ, ಜನನ ಪ್ರಮಾಣ ಪತ್ರ, ವಿವಾಹವಾಗಿದ್ದಲ್ಲಿ ಅದರ ಪುರಾವೆ, ಆಸ್ತಿಯ ವಿವರ, ಬಾಂಡ್‌ ಮತ್ತು ಸಾಕ್ಷಿಗೆ 3 ಜನರನ್ನು ಹೊಂದಿರಬೇಕು. ಇದಕ್ಕೆ ಹಲವು ಕಾನೂನಿನ ಪ್ರಕ್ರಿಯೆಗಳು ಇದ್ದು ಅವುಗಳು ನಡೆದ ಬಳಿಕ ಮಗುವನ್ನು ದತ್ತು ಸ್ವೀಕರಿಸಲಾಗುತ್ತದೆ. 10ರಲ್ಲಿ 3 ಮಕ್ಕಳು ಈಗ ದತ್ತು ಸ್ವೀಕಾರಗೊಳ್ಳುತ್ತಿವೆ.

ಏನಿದು ಕಾರಾ?
ಅನಾಥರಿಗೆ, ನಿರ್ಗತಿಕರಿಗೆ ಆಶ್ರಯ ನೀಡಲು ಕೇಂದ್ರೀಯ ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆ (CARA) ಕೆಲಸ ಮಾಡುತ್ತಿದೆ. ಇದು ತನ್ನ ಅಡಿಯಲ್ಲಿ ಕೆಲವು ಸಂಸ್ಥೆಗಳನ್ನು ಹೊಂದಿದೆ.

10 ಕೋಟಿ
ಜಗತ್ತಿನ 10 ಕೋಟಿ ತಾಯಂದಿರು ಮದುವೆ ಯಾಗದೇ ಅಥವಾ ವಿಚ್ಛೇದಿತಗೊಂಡು ದತ್ತು ಮಗುವನ್ನು ಪಡೆದವರು.

ಶೇ.84 ಮಹಿಳೆಯರು
ಏಕಾಂಗಿಯಾಗಿದ್ದು, ದತ್ತು ಪಡೆದವರಲ್ಲಿ ಶೇ. 83 ಮಂದಿ ಮಹಿಳೆಯರು.

6,650 ದತ್ತು
2017-19ರ ಅವಧಿಯಲ್ಲಿ ಸುಮಾರು 6,650 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದೆ. ಅವರಲ್ಲಿ ಶೇ. 4ರಷ್ಟು ಮಕ್ಕಳನ್ನು ವಾಪಸು ಕಳುಹಿಸಿಕೊಡಲಾಗಿದೆ ಎಂದು ಮಾಹಿತಿ ಹಕ್ಕು ಅರ್ಜಿಗೆ ಉತ್ತರ ಲಭಿಸಿದೆ. 278 ಮಂದಿ ಮಕ್ಕಳನ್ನು ತ್ಯಜಿಸಿದ್ದಾರೆ ಎಂದು ವರದಿ ಹೇಳಿದೆ.

5,400 ಸಂಸ್ಥೆಗಳು
ಕಾರಾದ ಅಡಿಯಲ್ಲಿ ಈಗಾಗಲೆ 5,400 ಸಂಸ್ಥೆಗಳು ಮಾನ್ಯತೆ ಪಡೆದುಕೊಂಡಿವೆ.
24,000 ಹೆಸರು ನೋಂದಣಿ
ಸುಮಾರು 24,000 ದತ್ತು ಸ್ವೀಕಾರಕ್ಕೆ ಆಸಕ್ತರು ನೋಂದಾಯಿಸಿಕೊಂಡಿದ್ದಾರೆ.
331 ಸಿಂಗಲ್‌ ಪೇರೆಂಟ್ಸ್‌
ದೇಶದಲ್ಲಿ 331 ಸಿಂಗಲ್‌ ಪೇರೆಂಟ್ಸ್‌ (ಅವಿವಾಹಿತರು, ವಿಚ್ಚೇದಿತರು ಸೇರಿ)
ಶೇ.38
ಜಗತ್ತಿನ ದಂಪತಿಯರಲ್ಲಿ ಮಕ್ಕಳಿರುವವರ ಪ್ರಮಾಣ ಕೇವಲ ಶೇ. 38 ಮಾತ್ರ.

ಕರ್ನಾಟಕ ದ್ವಿತೀಯ
ಕರ್ನಾಟಕದಲ್ಲಿ 2017-19ರ ಸಾಲಿನಲ್ಲಿ 25 ಮಕ್ಕಳನ್ನು ಹಿಂದಿರುಗಿಸಲಾಗಿದೆ. ಮೊದಲ ಸ್ಥಾನದಲ್ಲಿ 56 ಮಕ್ಕಳನ್ನು ಹಿಂದಿರುಗಿಸಿದ ಮಹಾರಾಷ್ಟ್ರ ಇದ್ದು, ಒಡಿಶಾ 20 ಮಕ್ಕಳನ್ನು ವಾಪಾಸು ಕಳುಹಿಸಿದೆ. ಮಧ್ಯಪ್ರದೇಶ ಮತ್ತು ದಿಲ್ಲಿ ಅನಂತರದ ಸ್ಥಾನದಲ್ಲಿದೆ.

ಹಿಂದಿರುಗಿಸಲು ಕಾರಣ ಏನು?
ಅಧ್ಯಯನಗಳ ಪ್ರಕಾರ ಭಾರತೀಯರು ಸಣ್ಣ ವಯಸ್ಸಿನ ಮಕ್ಕಳನ್ನು ದತ್ತು ಸ್ವೀಕರಿಸಲು ಇಚ್ಛಿಸುತ್ತಾರೆ. ಪುಟ್ಟ ಮಕ್ಕಳನ್ನು ಹೊಂದಿದಾಗ ಅವರ ಭಾವನೆಗಳಿಗೆ ಸುಲಭವಾಗಿ ಸ್ಪಂದಿಸಲಾಗುತ್ತದೆ. ಆದರೆ ಮಕ್ಕಳು ಬೆಳವಣಿಗೆ ಹೊಂದಿದ ಬಳಿಕ ಅವರನ್ನು ದತ್ತು ಪಡೆದಾಗ ಕೆಲವು ತೊಂದರೆಗಳು ಕಂಡುಬರುತ್ತವೆ. ಇಂದು ಮಕ್ಕಳನ್ನು ಹಿಂದಿರುಗಿಸಿದ ಹೆತ್ತವರೆಲ್ಲರೂ 6 ವರ್ಷ ಮೀರಿದ ಮಕ್ಕಳನ್ನು ದತ್ತು ಪಡೆದವರಾಗಿದ್ದಾರೆ. 18 ವರ್ಷದವರೆಗೆ ಮಕ್ಕಳನ್ನು ದತ್ತು ಪಡೆಯಲು ಅವಕಾಶ ಇದೆ. ಮಗು ಮತ್ತು ಹೆತ್ತವರಿಗೆ ಸಮಾಲೋಚನೆ ನಡೆಸುವ‌ ಕ್ರಮ ರಾಜ್ಯ “ದತ್ತು ಸ್ವೀಕಾರ ಸಂಪನ್ಮೂಲ ಸಂಸ್ಥೆ ‘ (ಸಾರಾ)ದಲ್ಲಿದೆ.

ಹೆಣ್ಣು ಮಗುವಿನ ಸಂಖ್ಯೆ ಹೆಚ್ಚು
ದೇಶದಲ್ಲಿ 2018-19ರ ಸಾಲಿನಲ್ಲಿ 3,374 ಮಕ್ಕಳನ್ನು ದತ್ತು ಸ್ವೀಕರಿಸಲಾಗಿದ್ದು, ಇವರಲ್ಲಿ 2,360 ಹೆಣ್ಣು ಮಕ್ಕಳು. ಇದು ಇತ್ತೀಚಿನ ವರ್ಷಕ್ಕೆ ಹೋಲಿಸಿದರೆ ಅತ್ಯಧಿಕವಾಗಿದೆ.

ಜಗತ್ತಿನ ಶೇ. 8ರಷ್ಟು ಮಂದಿ ಪೋಷಕರು ಒಬ್ಬರೇ ಇದ್ದಾರೆ. ಅಂದರೆ ಇವರು ಅವಿವಾಹಿತ ರಾಗಿರಬಹುದು ಅಥವ ವಿಚ್ಛೇದಿತರಾಗಿ ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

ಮಗುವಿನ ಅರ್ಹತೆ ಏನು?
·  ಸ್ವ ಇಚ್ಛೆಯಿಂದ ಹೆತ್ತವರು ಮಗುವನ್ನು ತ್ಯಜಿಸಿರಬೇಕು
·  ಮಾನ್ಯತೆ ಪಡೆದ ಸಂಸ್ಥೆಯಲ್ಲಿರುವ ಮಕ್ಕಳು ಆಗಿರಬೇಕು
·  ದೈಹಿಕ ಮತ್ತು ಮಾನಸಿಕ ಆರೋಗ್ಯ ಸರಿಯಾಗಿರಬೇಕು

ಪೋಷಕರ ಅರ್ಹತೆ ಏನು?
·  ವಿವಾಹಿತ ವ್ಯಕ್ತಿಗಳು ದತ್ತು ಪಡೆಯುವುದಾದರೆ ಪಡೆದುಕೊಳ್ಳುವವರ ವಯಸ್ಸು 45 ವರ್ಷ ಮೀರಿರಬಾರದು.
·  ಮಾಸಿಕ 5 ಸಾವಿರ ರೂ.ಕ್ಕಿಂತ ಹೆಚ್ಚು ಆದಾಯವಿರಬೇಕು.
·  ಅವಿವಾಹಿತ ಗಂಡಸರಿಗೆ ಹೆಣ್ಣು ಮಕ್ಕಳನ್ನು ದತ್ತುಕೊಡುವುದಿಲ್ಲ.
·  30 ವರ್ಷ ಮೀರಿರಬೇಕು.
·  ದತ್ತು ಪಡೆಯುವ ಮಗುವಿನ ಮತ್ತು ಪೋಷಕಿ/ಪೋಷಕನ ನಡುವೆ 21 ವರ್ಷಗಳ ಅಂತರ ಇರಬೇಕು.
·  ದಂಪತಿಯಲ್ಲದಿದ್ದರೆ ಕುಟುಂಬದ ಇತರ ಸದಸ್ಯರಿಂದ ದೃಢೀಕರಣ ಬೇಕು.

-  ಕಾರ್ತಿಕ್‌ ಅಮೈ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ