ಅವರ ವಿಚಾರ ಅಮರ

Team Udayavani, Jun 11, 2019, 3:00 AM IST

ನಾನು ವಿದ್ಯಾರ್ಥಿಯಾಗಿದ್ದ ದಿನಗಳಲ್ಲೇ ಗಿರೀಶ್‌ ಕಾರ್ನಾಡ್‌ ಅವರ ಹೆಸರು ಸಾಕಷ್ಟು ಜನಪ್ರಿಯವಾಗಿತ್ತು. ಆಗಿನ ಪತ್ರಿಕೆಗಳಲ್ಲಿ ಅವರ ಕುರಿತಾದ ಬರಹಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು. ಕಾರ್ನಾಡ್‌ ಅವರು “ಸಂಸ್ಕಾರ’ ಚಿತ್ರ ಮಾಡುವ ವೇಳೆ ಅವರ ಪರಿಚಯವಾಯಿತು. ಸಿನಿಮಾ ಮತ್ತು ಸಾಹಿತ್ಯದ ಕಡೆಗೆ ನಮಗಿದ್ದ ಸಮಾನ ಅಭಿರುಚಿ, ಆಸಕ್ತಿ ಆನಂತರದ ದಿನಗಳಲ್ಲಿ ನಮ್ಮನ್ನು ಇನ್ನಷ್ಟು ಹತ್ತಿರಕ್ಕೆ ತಂದವು.

ಆನಂತರ ನಾವಿಬ್ಬರೂ ಉತ್ತಮ ಸ್ನೇಹಿತರಾದೆವು. ನಮ್ಮಿಬ್ಬರದ್ದೂ ಸುಮಾರು ನಾಲ್ಕೂವರೆ ದಶಕಗಳ ಸ್ನೇಹ. ಕಾರ್ನಾಡ್‌, ಕಾರಂತರು, ವೈಯೆನೆ, ಕಂಬಾರರು, ನಾನು- ಹೀಗೆ ನಮ್ಮ ಸ್ನೇಹಿತರ ವಲಯ ಸಾಕಷ್ಟು ದೊಡ್ಡದಿತ್ತು. ಆಗಾಗ್ಗೆ ಎಲ್ಲರೂ ಜೊತೆಯಾಗಿ ಸೇರುತ್ತಿದ್ದೆವು. ಅಲ್ಲಿ ಸಿನಿಮಾ, ನಾಟಕ, ಸಾಹಿತ್ಯ, ಹೋರಾಟ, ಪ್ರಸ್ತುತ ವಿದ್ಯಮಾನ ಬಗ್ಗೆ ಚರ್ಚೆಗಳಾಗುತ್ತಿದ್ದವು.

ಈ ವೇಳೆ ಕಾರ್ನಾಡರು ತಮ್ಮ ವಿಚಾರಗಳನ್ನು ಹತ್ತಾರು ಆಯಾಮಗಳಲ್ಲಿ ಮುಕ್ತವಾಗಿ ಮಂಡಿಸುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಅವರೊಬ್ಬ ಸ್ನೇಹಜೀವಿ. ಅವರ ಸ್ನೇಹವನ್ನು ಯಾರೂ ನಿರಾಕರಿಸುತ್ತಿರಲಿಲ್ಲ. ವಿಚಾರ, ಅಭಿಪ್ರಾಯ ಭೇದಗಳಿದ್ದರೂ, ಅದ್ಯಾವುದೂ ಅವರ ಸ್ನೇಹಕ್ಕೆ ಅಡ್ಡಿಯಾಗುತ್ತಿರಲಿಲ್ಲ. ನಾನು ಕಂಡಂತೆ ಕಾರ್ನಾಡ್‌ ಅವರದ್ದು ಬಹುಮುಖ ವ್ಯಕ್ತಿತ್ವ.

ಅವರೊಬ್ಬ ಅತ್ಯುತ್ತಮ ಸಾಹಿತಿ, ನಾಟಕಕಾರ, ನಿರ್ದೇಶಕ, ಕಲಾವಿದ, ಚಿಂತಕ, ಉತ್ತಮ ವಾಗ್ಮಿ- ಹೀಗೆ ಹೇಳುತ್ತಾ ಹೋದರೆ ಅವರ ಬಗ್ಗೆ ಸಾಕಷ್ಟಿದೆ. ಅದರಲ್ಲೂ ಅವರ ಸಿನಿಮಾ ಅಭಿರುಚಿ ಬಗ್ಗೆ ಹೇಳುವುದಾದರೆ, ಕಾರ್ನಾಡರಿಗೆ ಸಿನಿಮಾ ಮಾಧ್ಯಮದ ಸಾಮರ್ಥ್ಯ ಎಂಥದ್ದು ಅನ್ನೋದು ಚೆನ್ನಾಗಿ ಗೊತ್ತಿತ್ತು. ಒಂದು ಸಿನಿಮಾದಲ್ಲಿ ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ, ಐತಿಹಾಸಿಕ ಕಳಕಳಿ ಹೇಗಿರಬೇಕು,

ಅದನ್ನು ತಾಂತ್ರಿಕ ಮಾಧ್ಯಮದಲ್ಲಿ ಹೇಗೆ ತೋರಿಸಬೇಕು ಅನ್ನೋದನ್ನು ಎಳೆ ಎಳೆಯಾಗಿ ಹೇಳುತ್ತಿದ್ದರು. ನಾನು ನಿರ್ದೇಶಿಸಿದ “ಕಾಡಿನ ಬೆಂಕಿ’, “ಉಷಾಕಿರಣ’, “ಆಘಾತ’ ಚಿತ್ರಗಳಲ್ಲಿ ಕಾರ್ನಾಡರು ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದರು. ಆ ಪಾತ್ರಗಳು ಇಂದಿಗೂ ಪ್ರೇಕ್ಷಕರ ಮನದಲ್ಲಿ ಹಸಿರಾಗಿವೆ. ಅವರಿಗೆ ಜಾತಿ, ಮತ, ಪಂಥ, ಪಂಗಡ- ಇವುಗಳ ಮೇಲೆ ನಂಬಿಕೆ ಇರಲಿಲ್ಲ. ಮನುಷ್ಯ ಬೆಳೆಯಬೇಕಾದ್ರೆ ಇವುಗಳಿಂದ ಹೊರ ಬರಬೇಕು ಅಂತಿದ್ರು.

ಅದರ ಮೇಲೆ ಅವರಿಗೆ ನಂಬಿಕೆಯಿತ್ತು. ಯಾರನ್ನೂ ಮೇಲು-ಕೀಳು ಅಂತ ನೋಡುತ್ತಿರಲಿಲ್ಲ. ಅದೇ ಥರ ಬದುಕಿದ್ದರು ಕೂಡ. ಸಾರ್ವಜನಿಕವಾಗಿ ಸೃಜನಶೀಲ ವ್ಯಕ್ತಿಗೆ ಹೆಚ್ಚಿನ ಮಾಹಿತಿ ಇರಬೇಕು ಎನ್ನುತ್ತಿದ್ದರು. ತಮ್ಮ ನಾಟಕ, ಸಿನಿಮಾ ಮೂಲಕ ಅದನ್ನು ಕೊಡುವ ಪ್ರಯತ್ನ ಕೂಡ ಮಾಡುತ್ತಿದ್ದರು. ನಿಯಮಿತವಾಗಿ ನಮ್ಮಿಬ್ಬರ ಭೇಟಿಯಾಗುತ್ತಿತ್ತು.

ನಮ್ಮ ಹೆಚ್ಚಿನ ಮಾತುಕತೆ ಸಿನಿಮಾದ ಬಗ್ಗೆಯೇ ಇರುತ್ತಿತ್ತು. ಇನ್ನು ನನ್ನ ಬಹುಕಾಲದ ಅತ್ಯಾಪ್ತ ಸ್ನೇಹಿತನ ಜೊತೆಗೆ ಮಾತುಕತೆಯಿಲ್ಲ. ಆದ್ರೆ ಅವರೊಂದಿಗೆ ಕಳೆದ ಸ್ನೇಹದ ಕ್ಷಣಗಳು ಮಾತ್ರ ಯಾವತ್ತೂ ಶಾಶ್ವತ. ಅನಿರೀಕ್ಷಿತವಾಗಿ ಕಾರ್ನಾಡ್‌ ನಮ್ಮ ಸ್ನೇಹ ಬಳಗವನ್ನ, ಅಪಾರ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಹೋದರೂ, ಅವರ ವಿಚಾರಗಳು ಎಂದೆಂದಿಗೂ ಶಾಶ್ವತ.

* ಸುರೇಶ್‌ ಹೆಬ್ಳೀಕರ್‌, ಪರಿಸರವಾದಿ-ಚಿತ್ರ ನಿರ್ದೇಶಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ