ಕೋಮುವಾದ, ಭ್ರಷ್ಟಾಚಾರದಲ್ಲಿ ರಾಜಿ ಇಲ್ಲ: ನಿತೀಶ್‌

Team Udayavani, Apr 8, 2019, 6:30 AM IST

ಬಿಹಾರದಲ್ಲಿ ಎನ್‌ಡಿಎ ಎದುರಿಸಲು ಆರ್‌ಜೆಡಿ-ಕಾಂಗ್ರೆಸ್‌ ಮತ್ತು ಇತರ ಸಣ್ಣ ಪಕ್ಷಗಳ ನೇತೃತ್ವದಲ್ಲಿ ಮಹಾಮೈತ್ರಿ ಕೂಟ ರಚನೆಯಾಗಿದೆ. ಆದರೆ ಜೆಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಸರ್ಕಾರದ ಕೆಲಸಗಳು ಮೈತ್ರಿಕೂಟದ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಲಿವೆ ಎನ್ನುತ್ತಾರೆ. ಸುಮಾರು ನಾಲ್ಕು ವರ್ಷಗಳ ನಂತರ ನಿತೀಶ್‌ ನೀಡಿದ ಸಂದರ್ಶನ ಇಲ್ಲಿದೆ

– ನೀವು ಹಿಂದಿನ ಮೂರು-ನಾಲ್ಕು ವರ್ಷಗಳಲ್ಲಿ ಯಾವುದೇ ಸಂದರ್ಶನ ನೀಡಿರಲಿಲ್ಲ. ಈ ಮೌನ ಯಾಕೆ?
ನಾನು ಮೌನವಾಗಿ ಇರಲಿಲ್ಲ. ನನ್ನ ಕೆಲಸಗಳನ್ನು ಮಾಡುತ್ತಿದ್ದೆ ಮತ್ತು ಅವುಗಳೆಲ್ಲ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದವು. ಪ್ರತ್ಯೇಕವಾಗಿ ಸಂದರ್ಶನ ನೀಡುವುದು ನನ್ನ ಸ್ವಭಾವ ಅಲ್ಲ. ಪ್ರಚಾರಕ್ಕಾಗಿ ಹಾತೊರೆಯುವವರು ಆ ರೀತಿ ಮಾಡುತ್ತಾರೆ.

– ಬಿಹಾರದಲ್ಲಿನ ಚುನಾವಣಾ ಪ್ರಕ್ರಿಯೆಯ ಮೇಲೆ ಎಲ್ಲರ ಆಸಕ್ತಿ ಕೇಂದ್ರೀಕೃತವಾಗಿದೆ. ಬಿಜೆಪಿ ಜತೆ ಜೆಡಿಯು ಮೈತ್ರಿ ಇದೆ. ಬಿಹಾರದಲ್ಲಿ ಮೈತ್ರಿಕೂಟದ ನಾಯಕರು ಯಾರು ಮೋದಿಯೋ, ನಿತೀಶ್‌ ಕುಮಾರೋ?
ನಮ್ಮಲ್ಲಿ ಎನ್‌ಡಿಎ ಪರ ವಾತಾವರಣವೇ ಇದೆ. ನಮ್ಮ ನಾಯಕ ನರೇಂದ್ರ ಮೋದಿ. ಮತ್ತೂಮ್ಮೆ ಅವರು ಪ್ರಧಾನಮಂತ್ರಿಯಾಗಬೇಕು. ಅದಕ್ಕಾಗಿ ನಮ್ಮ ಮೈತ್ರಿಕೂಟದ ಎಲ್ಲಾ ನಾಯಕರೂ ನೆರವಾಗಲಿದ್ದಾರೆ. ದೇಶಾದ್ಯಂತ ಚುನಾವಣೆ ನಡೆಯುವುದರಿಂದ ಎಲ್ಲವೂ ಒಂದೇ ಪ್ರಕ್ರಿಯೆ ವ್ಯಾಪ್ತಿಯಲ್ಲಿಯೇ ನಡೆಯುತ್ತದೆ.

– ಹಾಗಿದ್ದರೆ ನಿಮ್ಮ ನಾಯಕತ್ವದ ಮುಖ ನರೇಂದ್ರ ಮೋದಿಯವರು. ಅವರನ್ನು ಮುಂದಿಟ್ಟುಕೊಂಡೇ ಚುನಾವಣೆ ಎದುರಿಸುತ್ತೀರಿ?
ಪ್ರತಿಯೊಂದು ರಾಜ್ಯವೂ ಅದರದ್ದೇ ಆದ ಕೊಡುಗೆ ನೀಡುತ್ತಿದೆ. ಉದಾಹರಣೆಗೆ, ಬಿಹಾರವನ್ನು ತೆಗೆದುಕೊಂಡರೆ, ರಾಷ್ಟ್ರೀಯ ಮಟ್ಟದಲ್ಲಿ ಮೋದಿ ಏನು ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದಾರೋ, ಅವರ ವರ್ಚಸ್ಸು ಇತ್ಯಾದಿ ಅಂಶಗಳು ಪ್ರಮುಖವಾಗಲಿದೆ. ಜತೆಗೆ ನಾವು ಬಿಹಾರದಲ್ಲಿ ಕೈಗೊಂಡ ಕೆಲಸಗಳೂ ಜನರ ಕಣ್ಣ ಮುಂದೆ ಇವೆ. ಎರಡು ಅಂಶಗಳೂ ಪ್ರಧಾನವಾಗುತ್ತವೆ.

– ನಿಮ್ಮ ಪ್ರಕಾರ ಈ ಚುನಾವಣೆಯಲ್ಲಿನ ಪ್ರಧಾನ ವಿಚಾರವೇನು? ಅಭಿವೃದ್ಧಿಯೋ ರಾಷ್ಟ್ರೀಯತೆಯೋ?
ಪ್ರಧಾನ ಅಂಶವೇ ಅಭಿವೃದ್ಧಿ. 2005ರ ನವೆಂಬರ್‌ನಿಂದ ಬಿಹಾರದ ಜನರು ನಮಗೆ ಈ ಅವಕಾಶ ನೀಡಿದ್ದಾರೆ. ಅದನ್ನೇ ಪ್ರಧಾನ ಅಂಶವಾಗಿರಿಸಿಕೊಂಡು ನಾವು ಬಂದಿದ್ದೇವೆ. ಸಹಜ ನ್ಯಾಯದ ಜತೆಗೆ ಅಭಿವೃದ್ಧಿಯ ಮಾತುಗಳನ್ನಾಡುತ್ತಿದ್ದೇವೆ. ನಮ್ಮ ರಾಜ್ಯದ ಪ್ರತಿಯೊಂದು ಭಾಗವೂ ಕೂಡ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುವುದನ್ನು ಬಯಸುತ್ತೇವೆ.

– ಬಿಹಾರ ಮುಖ್ಯಮಂತ್ರಿ ಜತೆಗೆ ನೀವು ರಾಷ್ಟ್ರೀಯ ನಾಯಕರೂ ಆಗಿದ್ದೀರಿ. ನಾಮ್‌ದಾರ್‌, ಕಾಮ್‌ದಾರ್‌, ದಾಮ್‌ದಾರ್‌, ದಾಗ್‌ದಾರ್‌ ಇತ್ಯಾದಿಯಲ್ಲಿ ಪ್ರಚಾರ ನಡೆಯುತ್ತಿದೆ. ಬಾಲಕೋಟ್‌ ದಾಳಿಯ ಬಳಿಕ ರಾಷ್ಟ್ರೀಯತೆ ಆಧಾರದಲ್ಲಿ ಚುನಾವಣೆ ಎದುರಿಸಲಾಗುತ್ತಿದೆ ಎಂದು ನಿಮಗೆ ಅನಿಸುತ್ತಿದೆಯೇ?
ದೇಶದ ಪ್ರತಿಯೊಬ್ಬರಿಗೂ ರಾಷ್ಟ್ರದ ಮೇಲೆ ಭಕ್ತಿ, ಪ್ರೀತಿ ಇರುತ್ತದೆ. ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಎಲ್ಲರಿಗೂ ತೃಪ್ತಿ ತಂದಿದೆ. ದೇಶದ ಮೇಲೆ ದಾಳಿ ನಡೆದಾಗ ರಾಜಕೀಯ ಸಿದ್ಧಾಂತ ಪ್ರತ್ಯೇಕವಾಗಿದ್ದರೂ, ಅದನ್ನು ಖಂಡಿಸುತ್ತಾರೆ. ಅಧಿಕಾರದಲ್ಲಿರುವವರಿಗೆ ದಾಳಿ ನಡೆದ ಸಂದರ್ಭದಲ್ಲಿ ಅದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದಾಗ ಅವರನ್ನು ಅಭಿನಂದಿಸಲೇಬೇಕಾಗುತ್ತದೆ. ಅದೇ ಕಾರಣಕ್ಕಾಗಿ ಜನರು ಮೋದಿಯವರನ್ನು ಗೌರವಿಸುತ್ತಾರೆ.

– “ಮಿಷನ್‌ ಶಕ್ತಿ’ ಯೋಜನೆ ಬಗ್ಗೆ ಪ್ರಧಾನಮಂತ್ರಿಯವರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದಾಗ ಪ್ರತಿಪಕ್ಷಗಳು ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದವು. ಬಿಜೆಪಿ ಮತ್ತು ಎನ್‌ಡಿಎ ರಾಷ್ಟ್ರೀಯತೆಯ ವಿಚಾರ ಹಿಡಿದು ಜನರ ಮನಸ್ಸನ್ನು ಬೇರೆಡೆಗೆ ಸೆಳೆಯುವಂತೆ ಮಾಡಿವೆ ಎಂಬ ಆರೋಪ ಇದೆಯಲ್ಲ?
ದೇಶದ ಶಕ್ತಿ ಹೆಚ್ಚುತ್ತಿದೆ ಎಂಬ ವಿಚಾರವನ್ನು ಗಮನಿಸಬೇಕು. ಬಾಹ್ಯಾಕಾಶದಿಂದ ಭಾರತದ ಮೇಲೆ ನಿಗಾ ಇಡುವ ಶತ್ರು ದೇಶದ ಉಪಗ್ರಹವನ್ನು ಹೊಡೆದುರುಳಿಸುವ ಶಕ್ತಿ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದೇವೆ. ಇದು ಸಂತೋಷದಾಯಕ ವಿಚಾರ. ಈ ನಿಟ್ಟಿನಲ್ಲಿ ವಿಜ್ಞಾನಿಗಳ ಬಗ್ಗೆ ಹೆಮ್ಮೆ ಪಡಬೇಕಾಗಿದೆ. ಈ ಸಂದರ್ಭದಲ್ಲಿ ದೇಶದ ನಾಯಕ, ಪ್ರಧಾನಿ ಮಾತನಾಡಿದ್ದನ್ನು ವಿವಾದದ ವಸ್ತುವಾಗಿ ಪರಿವರ್ತನೆ ಮಾಡಿದ್ದು ಸರಿಯಲ್ಲ.

– ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿಜ್ಞಾನಿಗಳನ್ನು ಕೊಂಡಾಡುವ ಜೊತೆಗೆ, ಮೋದಿಯವರಿಗೆ ವಿಶ್ವರಂಗಭೂಮಿ ದಿನದ ಶುಭಾಶಯ ಎಂದು ಕಾಲೆಳೆದರಲ್ಲ…
ವೈಯಕ್ತಿಕ ದಾಳಿ ನಡೆಸಲು ಕೆಲವರು ಅದೇ ರೀತಿ ಮಾತನಾಡುತ್ತಾರೆ. ಅದು ಸರಿಯಾದ ಮಾರ್ಗವಲ್ಲ. 2014ರಲ್ಲಿ ನಾವು ಬಿಜೆಪಿಯ ವಿರೋಧಿಗಳಾಗಿದ್ದೆವು. ಆದರೆ ಎಂದೂ ವೈಯಕ್ತಿಕ ಟೀಕೆ ನಡೆಸಲಿಲ್ಲ. ಸೈದ್ಧಾಂತಿಕವಾಗಿ ಟೀಕೆಗಳು ಇರಬೇಕು.

ದೇಶದಲ್ಲಿ ಈಗ ವಾತಾವರಣ ಹೇಗಿದೆ ಎಂದರೆ, ಅಂಥ ಮಾತುಗಳನ್ನೂ ಕೇಳುವವರು ಇದ್ದಾರೆ. ಕೆಲವು ಮಾಧ್ಯಮದವರೂ ಕೂಡ ವೈಯಕ್ತಿಕ ಟೀಕೆ ಇಲ್ಲದೇ ಇದ್ದರೆ ಅದು ಸುದ್ದಿಯೇ ಅಲ್ಲ ಎಂದು ತಿಳಿದುಕೊಂಡಿದ್ದಾರೆ.
ಪ್ರತಿಪಕ್ಷಗಳು ಯಾವ ಕಾರಣಕ್ಕಾಗಿ ತಮ್ಮನ್ನು ಜನರು ಆಯ್ಕೆ ಮಾಡಬೇಕು ಎಂದು ಸಾಬೀತು ಮಾಡಬೇಕು. ಬಿಹಾರದಲ್ಲಿರುವ ಮೈತ್ರಿಕೂಟವನ್ನೇ ನೋಡಿ. ಸಿಪಿಐ, ಸಿಪಿಎಂ ಮೈತ್ರಿಕೂಟದಲ್ಲಿ ಇವೆ ಎಂದರು. ಉತ್ತರ ಪ್ರದೇಶದಲ್ಲಿ ಎಸ್‌ಪಿ- ಬಿಎಸ್‌ಪಿ ಮೈತ್ರಿಯಾಗಿದ್ದರೆ, ಕಾಂಗ್ರೆಸ್‌ ಪ್ರತ್ಯೇಕ. ಕೇರಳದಲ್ಲಿ ಯುಡಿಎಫ್ ಮತ್ತು ಎಲ್‌ಡಿಎಫ್ ಹೊಂದಾಣಿಕೆ ಮಾಡಿಕೊಂಡಿವೆ. ರಾಹುಲ್‌ ಗಾಂಧಿ ಕೇರಳದಲ್ಲಿ ಸ್ಪರ್ಧೆ ಮಾಡಿರುವುದಕ್ಕೆ ಎಡಪಕ್ಷಗಳು ಆಕ್ಷೇಪ ಮಾಡಿವೆ. ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಕೇಂದ್ರ ಭಾಗದಲ್ಲಿ ಪ್ರತಿಪಕ್ಷಗಳ ಒಕ್ಕೂಟದಲ್ಲಿ ಸಮಾನ ಮನಸ್ಕತೆ ಇಲ್ಲ.

– 2014ರಲ್ಲಿ ಪ್ರಧಾನಿ ಮೋದಿ ವಿರುದ್ಧ ನೀವು ಇದ್ದಿರಿ. ಈಗ ಪ್ರತಿಪಕ್ಷಗಳು ಮೋದಿ ನೇತೃತ್ವದ ಸರ್ಕಾರ ಕಿತ್ತೂಗೆಯಬೇಕೆಂದು ಒಟ್ಟಾಗಿದ್ದಾರೆ. ಧ್ರುವೀಕರಣದ ಪರಿಸ್ಥಿತಿ ಹೆಚ್ಚಾಗುತ್ತಿದೆ, ಥಳಿಸಿ ಹತ್ಯೆ ಮಾಡುವ ಘಟನೆಗಳು ವೃದ್ಧಿಸಿವೆ. ಐದು ವರ್ಷದ ಸರ್ಕಾರದ ಸಾಧನೆಯನ್ನು ಹೇಗೆ ಪ್ರಮಾಣೀಕರಿಸುತ್ತೀರಿ?
2014ರಲ್ಲಿ ನಾವು ಪ್ರತ್ಯೇಕವಾಗಿಯೇ ಬಿಹಾರದಲ್ಲಿ ಪ್ರಚಾರ ನಡೆಸಿದ್ದೆವು. ನಾವು ಆ ಸಂದರ್ಭದಲ್ಲಿ ರಚಿಸಿಕೊಂಡಿದ್ದ ಮೈತ್ರಿಕೂಟಕ್ಕೆ ಮಹಾಮೈತ್ರಿಕೂಟ ಎಂದು ಹೆಸರಿಸಿದ್ದೆವು. ಈಗ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮಹಾಮೈತ್ರಿಕೂಟ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಆದರೆ ಅದು ಎಲ್ಲಿದೆ ಎಂದು ಕೇಳಬೇಕಾಗಿದೆ. ಅವರದ್ದೇನಿದ್ದರೂ ಮೈತ್ರಿಕೂಟ, ಮಹಾಮೈತ್ರಿಕೂಟವಲ್ಲ. ಅವರ ನಡುವೆ ಯಾವ ರೀತಿಯ ಬಾಂಧವ್ಯ ಇದೆ ಎನ್ನುವುದನ್ನು ಪರಿಶೀಲಿಸಬೇಕಾಗಿದೆ. ಪ್ರತಿಯೊಂದರಲ್ಲೂ ಅತೃಪ್ತಿ ಇದೆ. ಕೋಮುವಾದ, ಭ್ರಷ್ಟಾಚಾರ ಅಥವಾ ಅಪರಾಧ ಈ ಮೂರು ವಿಚಾರಗಳಲ್ಲಿ ರಾಜಿ ಇಲ್ಲ ಎಂದು ಮೊದಲಿನಿಂದಲೂ ಹೇಳುತ್ತಾ ಬಂದಿದ್ದೇವೆ.

ಆರ್‌ಜೆಡಿ ವಿಚಾರದಲ್ಲಿಯೂ ಆದದ್ದು ಅದೇ. ನಾಯಕರ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿವರ ನೀಡುವಂತೆ ಕೋರಿದ್ದೆವು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರ ಜತೆಗೂ ಅದರ ಬಗ್ಗೆ ಸ್ಪಷ್ಟನೆ ಕೊಡಿಸುವಂತೆ ಕೇಳಲಾಗಿದ್ದರೂ, ಅವರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ಸೂಕ್ತ ಉತ್ತರ ನೀಡುವಲ್ಲಿ ವಿಫ‌ಲರಾಗಿದ್ದರು. ಆದರೆ ಮಾಧ್ಯಮಗಳಲ್ಲಿ ಮಾತ್ರ ನಾನು ಭ್ರಷ್ಟಾಚಾರದ ಜತೆಗೆ ರಾಜಿ ಮಾಡಿಕೊಂಡಿದ್ದೇನೆ ಎಂದು ಬಿಂಬಿಸಲಾಗಿತ್ತು. ಅದೇ ಸಮಯಕ್ಕೆ ಬಿಜೆಪಿಯಿಂದ ನಮ್ಮ ಜತೆಗೆ ಬನ್ನಿ ಎಂಬ ಆಹ್ವಾನ ಬಂದಿತ್ತು.

– ನೀವು ಅಪರಾಧ, ಭ್ರಷ್ಟಾಚಾರ ಮತ್ತು ಕೋಮುವಾದದ ಬಗ್ಗೆ ಮಾತನಾಡುತ್ತೀರಿ. ಬಿಜೆಪಿ ಕೋಮುವಾದದ ಅಜೆಂಡಾ ಹೊಂದಿದೆ ಎನ್ನುವುದು ಪ್ರತಿಪಕ್ಷಗಳ ಆರೋಪ. ಅದನ್ನು ನೀವು ನಂಬುತ್ತೀರಾ?
ಬಿಹಾರದಲ್ಲಿ ಅವರ ಜತೆಗೆ ಬಹಳ ಹಿಂದಿನಿಂದಲೂ ಮೈತ್ರಿ ಮಾಡಿಕೊಂಡು ಬಂದಿದ್ದೇವೆ. 2013ರಲ್ಲಿ ಮೊದಲ ಬಾರಿಗೆ ಮೊದಲ ಬಾರಿಗೆ ಮೈತ್ರಿ ತ್ಯಜಿಸಿದ್ದೆವು. 2017ರ ಬಳಿಕ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ನಾವೇನೂ ಕೋಮುವಾದವನ್ನು ಕಾಣುತ್ತಿಲ್ಲ. ಮೈತ್ರಿ ಸರ್ಕಾರವೂ ಅಸ್ತಿತ್ವದಲ್ಲಿದೆ. ಹಾಗೆಂದು ಆ ಕೋಮುವಾದದ ಬಗ್ಗೆ ಜೆಡಿಯು ನಿಲುವಿನಲ್ಲಿ ಬದಲಾವಣೆ ಇಲ್ಲ. ಜನರಿಗೆ ಏನು ಬೇಕೋ ಅದರ ಬಗ್ಗೆ ನಮ್ಮದು ಮೊದಲ ಆದ್ಯತೆ.
(ಸಂದರ್ಶನ ಕೃಪೆ: ನ್ಯೂಸ್‌ 18)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಫೇಸ್‌ಬುಕ್‌ ಈ ನಿರ್ಧಾರವೇ ಅತ್ಯಂತ ಕ್ರಾಂತಿಕಾರಿ. ವಿಶ್ವಾದ್ಯಂತ 220 ಕೋಟಿ ಜನರು ಫೇಸ್‌ಬುಕ್‌ ಬಳಸುತ್ತಿದ್ದಾರೆ. ಇದರಲ್ಲಿನ ಕೆಲವೇ ಕೋಟಿ ಜನರು ಲಿಬ್ರಾ ಬಳಸಲು...

  • ಯೋಗ ಜೀವನ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಆರಂಭವಾದ ತಿಂಗಳ ಅಂಕಣ. ಇದರಲ್ಲಿ ನಿತ್ಯವೂ ಯೋಗಾಭ್ಯಾಸ ಕುರಿತ ಪ್ರಶ್ನೆಗಳಿಗೆ ಪರಿಣತರು ಉತ್ತರಿಸುತ್ತಾರೆ. ಪ್ರತಿ...

  • ಮಾನವರು ಜ್ಞಾನವನ್ನು ಗಳಿಸಿ, ಅದನ್ನು ಮುಂದಿನ ಪೀಳಿಗೆಗೆ ಕೊಡುವ ಭಾಗ್ಯಶಾಲಿಗಳು. ಭಗವಾನ್‌ ಕೃಷ್ಣನು ಅರ್ಜುನನಿಗೆ, 'ಯೋಗದ ಪರಂಪರೆಯು ಅನಾದಿಕಾಲದಿಂದಲೂ ಹರಿದು...

  • ಶ್ರೀನಗರ : 5 ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಶುಕ್ರವಾರ ವಿಶ್ವಾದ್ಯಂತ ಆಚರಿಸಲಾಗುತ್ತಿದೆ. ದೇಶದ ಎಲ್ಲೆಡೆ ಸಾರ್ವಜನಿಕವಾಗಿ ಯೋಗ ಕಾರ್ಯಕ್ರಮದಲ್ಲಿ...

  • ಯೋಗ, ಜಗತ್ತಿಗೆ ಭಾರತದ ಅನನ್ಯ ಕೊಡುಗೆ. ಯೋಗವನ್ನು ಜಗತ್ತಿನಾದ್ಯಂತ ಪಸರಿಸುವ ಕೆಲಸದಲ್ಲಿ ಕರ್ನಾಟಕವೂ ಯೋಗದಾನ ಕೊಟ್ಟಿದೆ ಎಂದು ಹೆಮ್ಮೆಯಿಂದ ಹೇಳಬಹುದು....

ಹೊಸ ಸೇರ್ಪಡೆ