ಪ್ರಾಣ ಉಳಿಸಿದ ವೈದ್ಯರಿಗೆ ಅನಂತಾನಂತ ಪ್ರಣಾಮ

ಇಂದು ರಾಷ್ಟ್ರೀಯ ವೈದ್ಯರ ದಿನ

Team Udayavani, Jul 1, 2019, 5:00 AM IST

ಎಲ್ಲವೂ ಕ್ಷಣಾರ್ಧದಲ್ಲಿ ನಡೆದಿತ್ತು. ಮಗನ ಚೀರಾಟ ಎಲ್ಲೋ ಆಳವಾದ ಬಾವಿಯಿಂದ ಕೇಳಿಸಿದಂತೆ ಕಿವಿಗಪ್ಪಳಿಸುತ್ತಿದ್ದರೆ ಕಣ್ಣುಬಿಟ್ಟು ನೋಡುವುದೇ ಸಾಧ್ಯ ಆಗಲಿಲ್ಲ. ನನಗೇನಾಗಿದೆಯೆಂಬ ಪರಿವೇ ನನಗಿಲ್ಲ. ಆ ಕ್ಷಣ ಎಂಜಲೊಣಗಿ, ಮಿದುಳು ಸ್ತಬ್ಧವಾಗಿ, ಕಣ್ಣು ಮುಚ್ಚಿದ್ದೆ. ಗಂಡ ಬಂದು ತಟ್ಟಿ ಎಚ್ಚರಿಸಿದರೂ ಇಹದ ಪರಿವೆಯಿಲ್ಲದಂತೆ ಕದಲದ ಸ್ಥಿತಿಯಲ್ಲಿ ಬಿದ್ದಿದ್ದೆ.

“ವೈದ್ಯೋ ನಾರಾಯಣೋ ಹರಿ:’ ಎಂಬ ಉಕ್ತಿ ಎಷ್ಟೊಂದು ಸತ್ಯ! ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆತರೆ ಈ ವೈದ್ಯರು ಸಾವಿನ ಅಂಚಿನಲ್ಲಿರುವವರನ್ನೂ ಬದುಕಿಸುತ್ತಾರಲ್ಲಾ… ಅದು ನಿಜಕ್ಕೂ ಅದ್ಭುತವೇ ಸರಿ. ಎಲ್ಲವನ್ನೂ ಸಲಹುವವನು ಮೇಲಿರುವ ಭಗವಂತ.

ಆ ಶ್ರೀಹರಿಯ ಕೃಪೆಯಿರಲು ಭೂಲೋಕದಲ್ಲಿ ಪ್ರಾಣ ಉಳಿಸುವ ವೈದ್ಯರೆಲ್ಲರೂ ನನ್ನ ದೃಷ್ಟಿಯಲ್ಲಿ ನಡೆದಾಡುವ ದೇವರಂತೆ ಭಾಸವಾಗುತ್ತಾರೆ. ಕಾರಣ ನಾನು ಸಹ ಆಯಾಚಿತವಾಗಿ, ಆಕಸ್ಮಿಕವಾಗಿ ತಪ್ಪಿಸಲಸಾಧ್ಯವಾದ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕಿ ಬಂದಳು…!!

ಒಂದೂವರೆ ವರ್ಷದ ಹಿಂದಿನ ಮಾತು. ಒಂದು ದಿನ ಸಾಯಂಕಾಲ ಮಗನ ಜೊತೆ ಸುತ್ತಾಡಲು ಹೊರಟ ನಾವು ಚಲನಚಿತ್ರ ಮಂದಿರದಲ್ಲಿ ಅಂಜನಿಪುತ್ರ ಸಿನೆಮಾ ನೋಡಿ ರಾತ್ರಿ 8:30ಕ್ಕೆ ಮನೆಗೆ ಹೊಗುತ್ತಿರುವ ಸಂದರ್ಭ, ಇನ್ನೇನು ಎರಡು ನಿಮಿಷದಲ್ಲಿ ರಾಷ್ಟ್ರೀಯ ಹೆದ್ದಾರಿ 66ರಿಂದ ನಮ್ಮ ಮನೆಯ ಕರ್ವಿಂಗ್‌ನಲ್ಲಿ ಹೋಗುತ್ತೇವೆ ಎನ್ನುವಷ್ಟರಲ್ಲಿ ಕನಸಲ್ಲೂ ಊಹಿಸದ ಘಟನೆ ಜರುಗಿತ್ತು.

ಭಟ್ಕಳದಿಂದ ಬೆಂಗಳೂರಿಗೆ ಹೊರಟ ಬಸ್ಸೊಂದು ಯಮದೂತನಂತೆ ಬಂದು ನಮ್ಮ ಬೈಕಿಗೆ ಅಪ್ಪಳಿಸಿಬಿಟ್ಟಿತ್ತು. ಬೈಕಿನ ಹಿಂಬದಿಗೆ ಕುಳಿತು ನಾನು ಹಾರಿಬಿದ್ದಿದ್ದೆ. ಗಂಡ ಮತ್ತು ಮಗನಿಗೇನಾಯಿತೆಂದು ತಿಳಿಯಲಿಲ್ಲ. ನಾನು ಯಾವ ಸ್ಥಿತಿಯಲ್ಲಿರುವೆನೆಂಬ ಕಲ್ಪನೆ ಕೂಡ ಇಲ್ಲ. ಬಸ್ಸು ನನ್ನ ತಲೆಗೆ ಬಡಿದುಕೊಂಡು ಹೋಗುತ್ತಿರುವಾಗ ಈ ಕ್ಷಣ ನನ್ನ ತಲೆ ಮೇಲೆ ಬಸ್ಸಿನ ಟೈಯರ್‌ ಹತ್ತಬಹುದೇ ಎಂಬೊಂದು ಯೋಚನೆ ಬಂದಿತ್ತು. ಅದೃಷ್ಟವಶಾತ್‌ ಬಸ್‌ ಪೂರ್ತಿ ಪಾಸಾದ ಮೇಲೆ ನನ್ನ ತಲೆ ನೆಲಕ್ಕೊರಗಿತ್ತು.

ಎಲ್ಲವೂ ಕ್ಷಣಾರ್ಧದಲ್ಲಿ ನಡೆದಿತ್ತು. ಮಗನ ಚೀರಾಟ ಎಲ್ಲೋ ಆಳವಾದ ಬಾವಿಯಿಂದ ಕೇಳಿಸಿದಂತೆ ಕಿವಿಗಪ್ಪಳಿಸುತ್ತಿದ್ದರೆ ನನಗೆ ಕಣ್ಣುಬಿಟ್ಟು ನೋಡುವುದೇ ಸಾಧ್ಯವಾಗುತ್ತಿರಲಿಲ್ಲ. ನನಗೇನಾಗಿದೆಯೆಂಬ ಪರಿವೇ ನನಗಿಲ್ಲ. ಆ ಕ್ಷಣ ಎಂಜಲೊಣಗಿ, ಮಿದುಳು ಸ್ತಬ್ಧವಾಗಿ, ಕಣ್ಣು ಮುಚ್ಚಿದ್ದೆ. ಗಂಡ ಬಂದು ತಟ್ಟಿ ಎಚ್ಚರಿಸಿದರೂ ಇಹದ ಪರಿವೆಯಿಲ್ಲದಂತೆ ಕದಲದ ಸ್ಥಿತಿಯಲ್ಲಿ ಬಿದ್ದಿದ್ದೆ. ಯಾರೋ ಬಂದು ನನ್ನ ಎತ್ತಿ ರಿಕ್ಷಾದಲ್ಲಿ ಮಲಗಿಸಿದಾಗ ಸಾವಿರಾರು ಈಟಿಗಳಿಂದ ಒಮ್ಮೆಲೇ ದೇಹಕ್ಕೆ ಚುಚ್ಚಿ, ದೇಹ ತುಂಡುತುಂಡಾಗಿ ಕತ್ತರಿಸಿದರೆ ಆಗುವಷ್ಟು ನೋವಾಗತೊಡಗಿತು. ಅಯ್ಯೋ ಕಾಪಾಡಿ ಕಾಪಾಡಿ ಎಂದು ಬಡಬಡಿಸುತ್ತಿದ್ದೆ.

ಪ್ರಾಥಮಿಕ ಚಿಕಿತ್ಸೆಗಾಗಿ ಸನಿಹದ ಆರ್‌.ಎನ್‌.ಎಸ್‌. ಆಸ್ಪತ್ರೆಗೆ ಕರೆದೊಯ್ದಾಗ ನನ್ನ ತಲೆಗೆ ಸ್ಟಿಚ್‌ ಹಾಕಿದ ಡಾಕ್ಟರ್‌ ನನ್ನ ಮಾತನಾಡಿಸಲು ಪ್ರಯತ್ನಿಸುತ್ತಿದ್ದರು. ಕಣ್ಣುಮುಚ್ಚಬೇಡಿ ಇಲ್ನೋಡಿ ಎಂದು ತಟ್ಟುತ್ತಿದ್ದರು. ಮನೆಯವರೊಂದಿಗೆ ತ್ವರಿತವಾಗಿ ಉಡುಪಿಯ ಆದರ್ಶ ಅಥವಾ ಮಂಗಳೂರಿನ ಎಜೆಗೆ ಕರೆದುಕೊಂಡು ಹೋಗಬೇಕು. ವೆರಿ ಕ್ರಿಟಿಕಲ್‌ ಕಂಡಿಷನ್‌ ಎಂದಾಗ ಅವರ ಮಾತು ನನ್ನ ಕಿವಿಗಪ್ಪಳಿಸಿದಾಗ ಅಯ್ಯೋ ಹಾಗಾದರೆ ನಾನು ಬದುಕೋದಿಲ್ವಾ ಎನಿಸಿಬಿಟ್ಟಿತ್ತು.

ಅಂಬ್ಯುಲೆನ್ಸ್  ಮೂಲಕ ನನ್ನ ಮತ್ತು ಮಗನನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ನನ್ನನ್ನು ನಿಮ್ಮ ಸುಪರ್ದಿಗೆ ವಹಿಸಲಾಗಿತ್ತು(ಡಾ. ಎಂ.ಡಿ. ಶೆಟ್ಟಿ).
ಕ್ಷಣಕ್ಷಣಕ್ಕೂ ನಾನು ಸಾವಿನ ಮೆಟ್ಟಿಲು ಏರುತ್ತಿದ್ದಂತೆ, ನರಕದ ಬಾಗಿಲು ತಟ್ಟುತ್ತಿರುವಂತೆ ಭಾಸವಾಗುತ್ತಿತ್ತು. ಯಮ ಕೈಬೀಸಿ ಕರೆದಂತೆ ಭಾಸವಾಗುತ್ತಿತ್ತು. ಶೇಕಡಾ 99 ರಷ್ಟು ಮೇಲೆಹೋಗಿದ್ದ ನನ್ನ ಪ್ರಾಣವನ್ನು ವೈದ್ಯರಾದ ನೀವು ಮತ್ತೆ ನನ್ನ ಭರವಸೆ ಮತ್ತು ಆತ್ಮವಿಶ್ವಾಸದ ಕಾರಣ ತಡೆ ಹಿಡಿದಿದ್ದೆ. ನನ್ನ ಬದುಕಿಸಲು ನಿಮ್ಮ ಹೋರಾಟ ಬಲುದೊಡ್ಡದು. ಸರಿಯಾಗಿ ಪ್ರಜ್ಞೆ ಬಂದು ಒಂದು ವಾರದ ನಂತರ ನನ್ನನ್ನು ನನ್ನ ಮಗನಿರುವ ವಾರ್ಡಿಗೆ ಶಿಫ್ಟ್ ಮಾಡಿದಾಗ ನನ್ನರಿವಿಗೆ ಬಂದದ್ದು ನಾನು ಐಸಿಯುವಿನಲ್ಲಿದ್ದೇನೆಂದು.

ಪ್ರತಿದಿನವೂ ನೀವು ನನ್ನ ರೂಂಗೆ ಬರುವಾಗ ಗುಡ್‌ ಮಾರ್ನಿಂಗ್‌ ಹೇಳುತ್ತಾ ಬರುತ್ತಿದ್ರಿ. ಹಾಗೆ ಹೇಳುವ ನಿಮ್ಮ ರೀತಿಯಲ್ಲೇ ಒಂದು ಬಗೆಯ ಧನಾತ್ಮಕವಾದ ಒಂದು ನಿಶ್ಚಿತವಾದ ಕಂಪನವಿರುತ್ತಿತ್ತು.

ಒಮ್ಮೆ ನೋವು ತಡೆಯದೇ “ನಾನು ಸಾಯ್ತಿàನಿ’ ಎಂದು ಬೊಬ್ಬೆ ಹಾಕಿದಾಗ ನನಗೆ ನೀವೇ ಧೈರ್ಯ ತುಂಬಿದ್ರೀ ಸರ್‌.! “”ನಿನ್ನ ಮೊದಲ ದಿನದ ಪೋಟೋ ಇದ್ರೆ ತಂದು ಗೋಡೆಮೇಲೆ ಅಂಟಿಸಬೇಕು, ಆಗ ನಿನಗೆ ನೀನಿದ್ದ ಪರಿಸ್ಥಿತಿ ಅರ್ಥವಾಗುತ್ತೆ. ಬಾಯಿ ಕಳೆದುಕೊಂಡು ಉಸಿರಾಡಲಾಗದೇ ಸತ್ತವಳಂತೆ ಬಿದ್ದಿದ್ದೆ. ಈಗ ಏನೂ ಆಗಿಲ್ಲ. ನಾವೆಲ್ಲ ನಿನ್ನನ್ನುಳಿಸಲು ಹಗಲುರಾತ್ರಿ ಹೋರಾಡುತ್ತಿದ್ದೇವೆ. ನೀನು ಧೈರ್ಯಗೆಟ್ಟರೆ, ಅತ್ತರೆ ಗಾಯ ಉಲ್ಬಣಗೊಳ್ಳುತ್ತದೆ. ಖುಷಿಯಾಗಿರು. ಧನಾತ್ಮಕವಾಗಿ ಯೋಚಿಸು” ಎಂದು ಧೈರ್ಯ ನೀಡಿದ್ದೀರಿ. ನಿಮ್ಮ ಅಸಿಸ್ಟೆಂಟ್‌ ನರ್ಸ್‌ ರಜೆಯ ಮೇಲೆ ಊರಿಗೆ ಹೋದಾಗ, ಆಸ್ಪತ್ರೆಯಲ್ಲಿ ಹಲವು ನರ್ಸ್‌ಗಳಿದ್ದರೂ ಸಹ ಅವರ್ಯಾರಿಗೂ ನನ್ನ ಗಾಯ ಕ್ಲೀನ್‌ ಮಾಡಲು ಹೇಳುತ್ತಿರಲಿಲ್ಲ. ಹದಿನೈದು ದಿನಗಳ ಕಾಲ ನೀವೇ ಮುತುವರ್ಜಿಯಿಂದ ನನ್ನ ಗಾಯಗಳಿಗೆ ಡ್ರೆಸ್ಸಿಂಗ್‌ ಮಾಡುತ್ತಿದ್ರಿ. ಅಂತಹ ಅದ್ಭುತ ಕಾಳಜಿ ನಿಮ್ಮದಾಗಿತ್ತು.

ಒಂದು ತಿಂಗಳ ನಂತರ ಹೆಣದಂತೆ ಬಿದ್ದಿದ್ದ ಈ ದೇಹವನ್ನ ಮೊದಲ ಬಾರಿ ನಡೆಯಲು ಪ್ರಯತ್ನಿಸಿ ದಾಗಲೆಂತೂ ಉಂಗುಷ್ಟದಿಂದ ನೆತ್ತಿಯವರೆಗೆ ನೋವು ಸಂಚಾರವಾಗಿ ಅಮ್ಮಾ ಎಂದು ಕೂಗಿ ಇಡೀ ವಾರ್ಡ್‌ನ ಜನರನ್ನ ಒಟ್ಟು ಮಾಡಿದ್ದೆ. ಮೂರು ದಿನ ಒಂದೇ ಒಂದು ಹೆಜ್ಜೆ ಎತ್ತಿಡಲೂ ಸಾಧ್ಯವಾಗಿರಲಿಲ್ಲ.

ಆಗಲೂ ನೀವು, ಮಲಗಿದ್ದಲ್ಲೇ ಮಲಗಿದ್ದರೆ ಆ ಭೀಕರ ಗಾಯಗಳು ತುಂಬಿಬರುವುದಿಲ್ಲ. ಚಲನೆಯಿಲ್ಲದ ಸ್ಥಿತಿ ಯಲ್ಲಿ ದೇಹದ ಸೂಕ್ಷ್ಮಜೀವಕೋಶಗಳು, ಅಂಗಾಂಗಗಳು ಸಾಯುತ್ತವೆ. ದೇಹ ಚಲನೆಯಲ್ಲಿದ್ದಾಗ ಮಾತ್ರ ರಕ್ತದ ಹರಿವು ಎಲ್ಲಾ ಕಡೆ ಸಾಧ್ಯವಾಗಿ ನಿಮ್ಮ ಗಾಯ ಬೇಗನೆ ಆರೋಗ್ಯಕರ ಸ್ಥಿತಿಯಲ್ಲಿ ತುಂಬುತ್ತಾ ಬರಲು ಸಾಧ್ಯ ಎಂದು ವಾಸ್ತವಿಕತೆಯ ಅರಿವು ಮೂಡಿಸಿದ್ರಿ. ಈಗಲೂ ನನಗೆ ಎಲ್ಲರಂತೆ ನೆಲದಮೇಲೆ ಕುಳಿತುಕೊಳ್ಳಲು ಸಾಧ್ಯವಿಲ್ಲ.

ಕಾಲು ಮಡಚಿ ಚಕ್ಕರಪಟ್ಟೆ ಹಾಕಲು ಸಾಧ್ಯವಿಲ್ಲ. ಆದರೂ ಬದುಕುವುದೇ ಸಂಶಯವೆಂಬ ಸ್ಥಿತಿಯಿಂದ ಮಾಮೂಲಿ ಓಡಾಡಲಾಗದೆಂಬ ಸ್ಥಿತಿಯಿಂದ ನಾನು ಪಾರಾದೆ. ನನ್ನನ್ನು ಇಷ್ಟು ಸರಿಯಾಗಿ ಓಡಾಡುವಂತೆ ಮಾಡಿದ, ಪುನರ್ಜನ್ಮ ನೀಡಿದ ನಿಮಗಿದೋ
(ಪರೋಕ್ಷವಾಗಿ ಕಾರಣರಾದ ಇತರ ವೈದ್ಯರುಗಳಿಗೂ) ಹೃತೂರ್ವಕ ನಮನಗಳು. ಕೋಟಿ ಕೋಟಿ ಕೃತಜ್ಞತೆಗಳು.

-ಗೀತಾ ಎಸ್‌ ಭಟ್‌, ಭಟ್ಕಳ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕುಲಭೂಷಣ್‌ ಜಾಧವ್‌ ಪ್ರಕರಣದಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯಮತ್ತೂಮ್ಮೆ ಭಾರತದ ಪರ ತೀರ್ಪು ನೀಡಿದೆ. ಜಾಧವ್‌ಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸಬೇಕು ಎಂದು...

  • ತಾಂತ್ರಿಕ ದೋಷ ಎದುರಾದ ಕಾರಣ ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಅನೇಕರು ಈ ಅಡಚಣೆಯಿಂದಾಗಿ ನಿರಾಸೆಗೊಂಡಿರುವುದು...

  • ಆಧುನಿಕ ಯುಗದಲ್ಲಿ ಹೀಮ್ಯಾನ್‌, ಸ್ಪೈಡರ್‌ಮ್ಯಾನ್‌ಗಳನ್ನು ಕಂಡಿದ್ದೆವು. ಪಿಜ್ಜಾಮ್ಯಾನ್‌ಗಳು ಬದಿಗೆ ಸರಿದು ಫ‌ುಡ್‌ ಮ್ಯಾನ್‌ಗಳಿಗೆ ದಾರಿ ಬಿಡುತ್ತಿದ್ದಾರೆ....

  • ಮಣಿಪಾಲ: 2014ರಲ್ಲಿ ಭಾರತದ ಟೋಲ್‌ ಪ್ಲಾಜಾಗಳಲ್ಲಿ ಫಾಸ್ಟ್‌ಟ್ಯಾಗ್‌ ವ್ಯವಸ್ಥೆ ಪರಿಚಯಿಸಲಾಯಿತು. ಟೋಲ್‌ಗ‌ಳಲ್ಲಿ ಟ್ರಾಫಿಕ್‌ ಸಮಸ್ಯೆ ಕಂಡು ಬರುತ್ತಿರುವುದನ್ನು...

  • 1958ರ ಆ. 17ರಂದು ಅಮೆರಿಕ ಕಳುಹಿಸಿದ್ದ ಪಯೋನಿಯರ್‌ ಆರ್ಬಿಟರ್‌ನ ಪ್ರಯತ್ನದಿಂದ ಹಿಡಿದು ಇಲ್ಲಿಯತನಕ ಹಲವಾರು ಬಾರಿ ಮನುಷ್ಯ ಚಂದ್ರನ ಅಧ್ಯಯನಕ್ಕೆ ಮುಂದಾಗಿದ್ದಾನೆ....

ಹೊಸ ಸೇರ್ಪಡೆ