ನನ್ನನ್ನು ಟ್ರಾಲ್ ಮಾಡಿದವರು ಸಾಮಾನ್ಯ ಜನರಂತೂ ಅಲ್ಲ

Team Udayavani, Apr 26, 2019, 5:50 AM IST

ಬಾಲಿವುಡ್‌ ನಟಿ ಊರ್ಮಿಳಾ ಮಾತೋಂಡ್ಕರ್‌ ಈಗ ಉತ್ತರ ಮುಂಬೈ ಕಾಂಗ್ರೆಸ್‌ ಅಭ್ಯರ್ಥಿ. ಇತ್ತೀಚೆಗೆ ಅವರು ಬೊರಿವಲಿಯಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದಾಗ ಬಿಜೆಪಿಯ ಕಾರ್ಯಕರ್ತರು ಅವರ ರ್ಯಾಲಿಗೆ ಅಡ್ಡಿಪಡಿಸಿ, ‘ಮೋದಿ ಮೋದಿ’ ಎಂಬ ಘೋಷಣೆ ಕೂಗಿದ್ದರು…ಈ ಘಟನೆಯಿಂದ ತಮಗೆ ತುಂಬಾ ಹೆದರಿಕೆಯಾಗಿತ್ತು ಎನ್ನುತ್ತಾರೆ…

•ಬಿಜೆಪಿ ಬೆಂಬಲಿಗರೊಂದಿಗೆ ಇತ್ತೀಚೆಗೆ ನಿಮ್ಮ ಮುಖಾಮುಖೀಯಾಯಿತು. ಆ ಘಟನೆಯ ನಂತರ ನಿಮಗೆ ನಿದ್ದೆ ಬಂತೇ?
ಖಂಡಿತ ನಿದ್ದೆ ಬರಲಿಲ್ಲ. ಸತ್ಯವೇನೆಂದರೆ, ಘಟನೆ ನಡೆದ ನಂತರ ಬಹಳ ಹೊತ್ತು ನನ್ನ ಕೈಗಳು ನಡುಗುತ್ತಿದ್ದವು. ನಾನು ಪಕ್ಷಕ್ಕೆ ಸೇರಿ ಎರಡು ವಾರವಾಗಿದೆ, ನನ್ನ ಕುರಿತು ಇಲ್ಲಸಲ್ಲದ ಮಾತುಗಳು ಮಿತಿಮೀರಿವೆ. ನನ್ನ ಹೆಸರಿನ ಬಗ್ಗೆ, ನನ್ನ ಮದುವೆಯ ಬಗ್ಗೆ, ಧರ್ಮದ ಬಗ್ಗೆ, ಕೊನೆಗೆ ನನ್ನ ತಾಯಿಯ ಬಗ್ಗೆಯೂ ಟ್ರಾಲ್ ಮಾಡುತ್ತಿದ್ದಾರೆ. ಇದು ವಾಕ್‌ ಹಿಂಸಾಚಾರವೇ ಸರಿ. ಇದನ್ನೆಲ್ಲ ಸಾಮಾನ್ಯ ಜನರು ಮಾಡುತ್ತಿಲ್ಲ. ಯಾರೋ ನಿರ್ದಿಷ್ಟ ವ್ಯಕ್ತಿಗಳುಈ ಕೆಲಸ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಿಂದ ದೇಶದಲ್ಲಿ ಇದೇ ನಡೆಯುತ್ತಿದೆ.

••ನಿಮಗೀಗ ಪೊಲೀಸ್‌ ಭದ್ರತೆ ಸಿಕ್ಕಿದೆ. ನಿಮ್ಮ ಜೀವಕ್ಕೆ ಅಪಾಯವಿದೆ ಎಂದು ಅನಿಸುತ್ತದಾ?
ಹೌದು. ಆದರೆ ಒಂದು ಮಾತು ಹೇಳುತ್ತೇನೆ ಕೇಳಿ, ನನಗೊಬ್ಬಳಿಗೇ ಅಲ್ಲ, ಬಹಳ ಜನರಿಗೂ ಹೀಗೇ ಅನಿಸುತ್ತಿದೆ. ವಿವಿಧ ಪಕ್ಷಗಳ ನಾಯಕರೂ ಇಂದು ಮಾತನಾಡಲು ಹೆದರುತ್ತಿದ್ದಾರೆ. ಏಕೆಂದರೆ, ಅವರೆಲ್ಲ ಹೆದರಿದ್ದಾರೆ..

••ಯಾವುದರ ಭಯ ಅವರಿಗೆಲ್ಲ?
ಬೆದರಿಕೆ ಮತ್ತು ಹಿಂಸಾಚಾರ ಭಯ…

••ವೃತ್ತಿ ಜೀವನ ಇಳಿಜಾರಲ್ಲಿ ಇದ್ದಾಗ ಅನೇಕರಿಗೆ ರಾಜಕೀಯವೆನ್ನುವುದು ಆಸರೆಯಾಗುತ್ತದೆ. ನಿಮಗೆ ರಾಜಕಾರಣಿಯಾಗುವ ಮನಸ್ಸಿತ್ತೋ ಅಥವಾ ಬೇರೆ ಆಯ್ಕೆ ಇಲ್ಲದೇ ಇಲ್ಲಿಗೆ ಬಂದಿರಾ?
ರಾಜಕೀಯ ನನ್ನ ಆಯ್ಕೆಯೇ ಆಗಿರಲಿಲ್ಲ. ಹಿಂದೆಯೂ ಅನೇಕ ರಾಜಕೀಯ ಪಕ್ಷಗಳು ನನ್ನನ್ನು ಆಹ್ವಾನಿಸಿದ್ದವು, ಆದರೆ ನನಗೆ ಮನಸ್ಸಿರಲಿಲ್ಲ. ನಾನು ಲೀಡರ್‌ ಆಗಬೇಕು ಎಂದು ರಾಜಕೀಯಕ್ಕೆ ಬಂದವಳಲ್ಲ, ಇದು ಈ ಕ್ಷಣದ ಅಗತ್ಯ ಎನಿಸಿದ ಕಾರಣಕ್ಕಾಗಿ ಬಂದಿದ್ದೇನೆ. ನೋಡಿ, ನಾವೆಲ್ಲರೂ ಒಂದು ರೀತಿಯ ಸಮಾಜ, ನಗರ, ದೇಶ ಮತ್ತು ಭವಿಷ್ಯವನ್ನು ಬಯಸುತ್ತಿರುತ್ತೇವೆ. ಯಾವಾಗ ಆ ಬಯಕೆ ಈಡೇರುತ್ತಿಲ್ಲ ಎಂದನಿಸುತ್ತದೋ ಆಗ ಎದ್ದು ನಿಂತು ನಮ್ಮಿಂದ ಏನು ಸಾಧ್ಯವೋ ಅದನ್ನು ಮಾಡಬೇಕಾಗುತ್ತದೆ. ನಾನು ಕಾಂಗ್ರೆಸ್‌ ಸೇರಿದ್ದಕ್ಕೆ ಇದೇ ಕಾರಣ.

••ನೀವೇ ಮೊದಲು ಕಾಂಗ್ರೆಸ್‌ ಅನ್ನು ಸಂಪರ್ಕಿಸಿದಿರಾ?
ಇಲ್ಲ, ಅವರೇ ನನ್ನನ್ನು ಸಂಪರ್ಕಿಸಿದ್ದು. ಹಿಂದೆಯೂ ಅವರು ನನ್ನನ್ನು ಸಂಪರ್ಕಿಸಿದ್ದರು. ನಾನು ಸಾಮಾಜಿಕ ಬದಲಾವಣೆಗಳನ್ನು ತರಲು ರಾಜಕೀಯಕ್ಕೆ ಬಂದೆ, ಚುನಾವಣೆಗೆ ನಿಲ್ಲಿಸಿದ್ದು ಪಕ್ಷದ ನಿರ್ಧಾರ.

••ಆದರೆ ಈಗ ಯಾಕೆ ಸ್ಪರ್ಧಿಸುತ್ತಿದ್ದೀರಿ? ಪ್ರಮುಖ ಕಾರಣವೇನು?
ಅಚ್ಛೇ ದಿನ ಬರುತ್ತದೆ ಎಂದು 2014ರಲ್ಲಿ ನಮಗೆಲ್ಲ ಹೇಳಲಾಯಿತು. ಅದು ಎಂದಿಗೂ ಪ್ರಾಕ್ಟಿಕಲ್ ಆಗಿ ಇರಲಿಲ್ಲವಾದರೂ, ಆ ದಿನ ಬರಬಹುದೆಂದು ನಾವೆಲ್ಲ ಆಶಾವಾದಿಗಳಾಗಿದ್ದೆವು. ಈ ಭರವಸೆಯನ್ನು ನಂಬಿ ಅಭೂತಪೂರ್ವ ಮತಗಳನ್ನು ನೀಡಿದೆವು. ಆದರೆ ಆ ಭರವಸೆ ಈಡೇರಲೇ ಇಲ್ಲ. ಇದರ ಬದಲಾಗಿ ನಮಗೆ ಕೊಡುಗೆಯಾಗಿ ದಕ್ಕಿದ್ದು ಏನು? ಜಿಎಸ್‌ಟಿ, ನಿರುದ್ಯೋಗ, ರೈತರ ಸಮಸ್ಯೆಗಳು, ಮಹಿಳಾ ಅಸುರಕ್ಷತೆ, ಭಿನ್ನ ದೃಷ್ಟಿಕೋನ ಮತ್ತು ಇತರ ಧರ್ಮದವರೆಡೆಗೆ ಅಸಹಿಷ್ಣುತೆ. ಜನರು ಸಮಾಜದಲ್ಲಿನ ಅಸಹಿಷ್ಣುತೆಯ ಬಗ್ಗೆ ಮಾತನಾಡಿದರೆ, ದೇಶ ಬಿಟ್ಟು ಹೋಗಿ ಎನ್ನಲಾಗುತ್ತದೆ. ಹೀಗಾದರೆ, ನಿಮಗೆ ಕಳವಳವಾಗುವುದಿಲ್ಲವೇ? ‘ಅಯ್ಯೋ ದೇವರೇ! ನಾನು ಎಂಥ‌ ಭಾರತದಲ್ಲಿ ಬದುಕುತ್ತಿದ್ದೇನಲ್ಲ’ ಎಂದು ನಿಮಗೆ ಅನಿಸುವುದಿಲ್ಲವೇ?

••ನೀವು ಬಯಸಿದ ಬದಲಾವಣೆ ತರಬೇಕೆಂದರೆ ಚುನಾವಣೆಯಲ್ಲಿ ಗೆಲ್ಲಬೇಕು…ಜನರೇಕೆ ನಿಮಗೆ ಮತ ನೀಡುತ್ತಾರೆ?
ಏಕೆಂದರೆ ಅವರು ನನ್ನಲ್ಲಿ ಭರವಸೆಯನ್ನು ಕಾಣುತ್ತಿದ್ದಾರೆ. ನನ್ನ ವಿರೋಧಿ ಇದ್ದಾರಲ್ಲ, ಅವರು ಈ ಕ್ಷೇತ್ರದ ಕಾರ್ಪೊರೇಟರ್‌ ಮತ್ತು ಎಂಪಿ ಆಗಿ ಅನುಭವವಿರುವವರು. ಆದರೆ ಈ ಕ್ಷೇತ್ರದ ಪರಿಸ್ಥಿತಿಯನ್ನು ನೀವು ನೋಡಬೇಕು…ದಹಿಸಾರ್‌ ಸ್ಟೇಷನ್‌ನಲ್ಲಿ ಒಂದು ಸಾರ್ವಜನಿಕ ಶೌಚಾಲಯವೂ ಇಲ್ಲ! ಇನ್ನು ಜನರ ಮಾತು ಕೇಳಿದಾಗ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ ಎನ್ನುವುದು ಅರ್ಥವಾಯಿತು.

••ಪ್ರಚಾರದಲ್ಲಿ ನಿರತರಾಗಿದ್ದೀರಿ. ನಿಮ್ಮ ಅನುಭವದ ಬಗ್ಗೆ ಹೇಳಿ…
ಶಕೆ, ಬಿಸಿಲು! ಸುಸ್ತಾಗುತ್ತೆ, ಆದರೆ ನಾನು ಇದನ್ನು ನಿರೀಕ್ಷಿಸಿದ್ದೆ. ಜನರಿಂದ ಸಿಗುತ್ತಿರುವ ಆಪ್ಯಾಯತೆ ಇದೆಯಲ್ಲ, ಇದು ನಿಜಕ್ಕೂ ಬದುಕು ಬದಲಿಸುವ ಅನುಭವ.

••ಓಹ್‌, ಹಾಗಿದ್ದರೆ ಜನರು ನಿಮ್ಮ ಬಳಿ ಬರುತ್ತಿದ್ದಾರಾ?
ಹೌದು, ಹೌದು! ನನ್ನ ನಂಬಿ, ಮೊದಲೆಲ್ಲ ಬೆರಳೆಣಿಕೆಯ ಜನರ ಬಳಿಯಷ್ಟೇ ನನ್ನ ಫೋನ್‌ ನಂಬರ್‌ ಇತ್ತು, ಈಗ ಅದು ಸಾರ್ವಜನಿಕ ನಂಬರ್‌ ಆಗಿ ಬದಲಾಗಿದೆ. ಜನರು ನನಗೆ ನಿರಂತರವಾಗಿ ಮೆಸೇಜ್‌ ಮಾಡುತ್ತಿದ್ದಾರೆ, ಚಿತ್ರಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಬರೆಯುತ್ತಿದ್ದಾರೆ. ಇಲ್ಲೊಂದು ಬಾಲಕಿಯರ ಶಾಲೆಯಿದೆ. ಶಾಲಾ ಶುಲ್ಕವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಸದ್ಯಕ್ಕೆ ಈ ವಿಷಯದಲ್ಲಿ ಏನೂ ಮಾಡಲಾಗದಂಥ ಸ್ಥಿತಿಯಲ್ಲಿ ಇದ್ದೇನೆ. ಆದರೆ ಒಂದು ವಿಷಯ ಹೇಳುತ್ತೇನೆ, ನಾನು ಯಾವುದೇ ಕೆಲಸವನ್ನು ಅರೆಮನಸ್ಸಿನಿಂದ ಮಾಡುವುದಿಲ್ಲ. ರಾಜಕೀಯಕ್ಕೆ ಧುಮುಕಿದ್ದೇನೆ ಎಂದರೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣ ಅನುಷ್ಠಾನಕ್ಕೆ ತರುತ್ತೇನೆ. ಉತ್ತಮವಾಗಿಯೇ ಕೆಲಸ ಮಾಡುತ್ತೇನೆ.

(ಕೃಪೆ: ರೆಡಿಫ್ ಜಾಲತಾಣ)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ