37 ದಿನಗಳ ಸುದೀರ್ಘ ಹೋರಾಟದಲ್ಲಿ 134 ಅಡಿ ಉದ್ದದ ಅನಕೊಂಡವನ್ನು ಹೊಡೆದು ಕೊಂದದ್ದು ನಿಜವೇ?

250 ಜನ ಹಾಗೂ 2500 ಪ್ರಾಣಿಗಳನ್ನು ಕೊಂದು ತಿಂದ ಅಮೆಝಾನ್ ಕಾಡಿನ 2000 ಕಿಲೋ ತೂಕದ ದೈತ್ಯ ಹಾವಿನ ಅಸಲಿಯತ್ತು ಇಲ್ಲಿದೆ!

Team Udayavani, Oct 23, 2019, 8:54 PM IST

ವಿಶ್ವದ ಅತ್ಯಂತ ಉದ್ದದ ಅನಕೊಂಡ ಹಾವನ್ನು ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೋ ಪಡೆಯ ಯೋಧರು ಸತತ 37 ದಿನಗಳ ಸುದೀರ್ಘ ಹೋರಾಟದಲ್ಲಿ ಕೊಂದು ಕೆಡಹಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಮಾಕಾಂತ್ ಕಜಾರಿಯಾ ಎಂಬ ವ್ಯಕ್ತಿ ಮಾಡಿರುವ ಈ ಪೋಸ್ಟನ್ನು ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರಕ್ಕೂ ಅಧಿಕ ಮಂದಿ ಶೇರ್ ಮಾಡಿದ್ದಾರೆ. ಹಾಗಾದರೆ ಇದರ ಅಸಲಿಯತ್ತೇನು ನೋಡೋಣ ಬನ್ನಿ.

‘ಆಫ್ರಿಕಾದ ಅಮೆಝಾನ್ ನದಿಯಲ್ಲಿ ಪತ್ತೆಯಾಗಿದ್ದ 134 ಅಡಿ ಉದ್ದ ಮತ್ತು ಬರೋಬ್ಬರಿ 2067 ಕಿಲೋ ತೂಗುತ್ತಿದ್ದ ಅನಕೊಂಡಾ ಹಾವೊಂದು 250 ಜನರನ್ನು ಹಾಗೂ 2300 ಪ್ರಾಣಿಗಳನ್ನು ತಿಂದು ತೇಗಿತ್ತು. ಹಾಗಾಗಿ ಈ ದೈತ್ಯ ಹಾವನ್ನು ಬೇಟೆಯಾಡಲು ಹೊರಟ ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೋ ಪಡೆಯ ಯೋಧರು ಸತತ 37 ದಿನಗಳ ಸುದೀರ್ಘ ಹೋರಾಟದ ಬಳಿಕ ಕೊನೆಗೂ ಇದನ್ನು ಬೇಟೆಯಾಡಿ ಕೊಲ್ಲುವಲ್ಲಿ ಯಶಸ್ವಿಯಾಗಿದ್ದಾರೆ’ ಎಂಬ ಬರಹವಿದ್ದ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮತ್ತು ಈ ಬರಹದ ಜೊತೆಗೆ ಈ ತಥಾಕಥಿತ ದೈತ್ಯ ಹಾವಿನ ಮೃತದೇಹದ ಸುತ್ತ ಜನರು ನಿಂತಿರುವ ಫೊಟೋವನ್ನು ಸಹ ಪೋಸ್ಟ್ ಮಾಡಲಾಗಿದೆ.
ವಿಶೇಷವೆಂದರೆ 2015ನೇ ಇಸವಿಯಲ್ಲಿ ಅಪ್ಲೋಡ್ ಆಗಿರುವ ಈ ಪೋಸ್ಟ್ ಈಗಲೂ ಸಹ ಫೇಸ್ಬುಕ್ ನಲ್ಲಿ ಆಗಾಗ ನಮ್ಮ ಕಣ್ಣಿಗೆ ಬೀಳುತ್ತಿದೆ. ಮತ್ತು ಈಗಲೂ ಈ ಪೋಸ್ಟ್ ನೋಡಿದವರು ಒಮ್ಮೆ ಇದನ್ನು ಓದಿ, ‘ಅಬ್ಬಾ..’ ಎಂದು ಉದ್ಘರಿಸಿ ‘ಶೇರ್’ ಬಟನ್ ಒತ್ತುತ್ತಿದ್ದಾರೆ!

ಆದರೆ ಈ ಪೋಸ್ಟ್ ನ ಸತ್ಯಾಸತ್ಯತೆಯ ಬೆನ್ನು ಹಿಡಿದು ಹೊರಟ ರಾಷ್ಟ್ರಮಟ್ಟದ ಖಾಸಗಿ ವೆಬ್ ಸೈಟ್ ಒಂದು ಈ ಪೋಸ್ಟ್ ನ ಅಸಲಿಯತ್ತನ್ನು ಬಯಲುಗೊಳಿಸಿದೆ. ಈ ವೆಬ್ ಸೈಟ್ ನಡೆಸಿರುವ ಫ್ಯಾಕ್ಟ್ ಚೆಕ್ ಪ್ರಕಾರ ಇದೊಂದು ಫೊಟೋ ಶಾಪ್ ಮಾಡಿರುವ ಚಿತ್ರವಾಗಿದ್ದು, ನಿಜವಾಗಿಯೂ ಇಷ್ಟು ದೈತ್ಯ ಗಾತ್ರದ ಅನಕೊಂಡ ಹಾವು ಇದುವರೆಗೂ ಪತ್ತೆಯಾಗಿಲ್ಲ. ಮತ್ತು ಈ ಪೋಸ್ಟ್ ನಲ್ಲಿರುವ ಅಷ್ಟೂ ಮಾಹಿತಿಗಳು ತಪ್ಪು ಎಂದು ಸಾಬೀತುಗೊಂಡಿದೆ.

ಹಾಗಾದರೆ ಈ ಪೋಸ್ಟ್ ನಲ್ಲಿರುವ ತಪ್ಪು ಅಂಶಗಳೇನು ಎಂದು ನೋಡುವುದಾದರೆ…:
– ಅಮೆಝಾನ್ ನದಿ ಹರಿಯುವುದು ದಕ್ಷಿಣ ಅಮೆರಿಕಾದಲ್ಲೇ ಹೊರತು ಆಫ್ರಿಕಾ ಖಂಡದಲ್ಲಿ ಅಲ್ಲ.

– ಇಷ್ಟೊಂದು ಮನುಷ್ಯರನ್ನು ಹಾಗೂ ಪ್ರಾಣಿಗಳನ್ನು ದೈತ್ಯ ಹಾವೊಂದು ಕೊಂದು ತಿಂದಿದೆ ಎಂಬ ವಿಷಯ ಇದುವರೆಗೂ ಒಂದೇ ಒಂದು ಮಾಧ್ಯಮಗಳಲ್ಲಿ ವರದಿಯಾಗಿಲ್ಲ.

– ಇನ್ನು ಈ ದೈತ್ಯ ಅನಕೊಂಡ ಹಾವನ್ನು ಆಫ್ರಿಕಾದ ರಾಯಲ್ ಬ್ರಿಟಿಷ್ ಕಮಾಂಡೊ ದಳದವರು ಹೊಡೆದು ಹಾಕಿದ್ದಾರೆ ಎನ್ನಲಾಗುತ್ತಿದೆ. ಆದರೆ ನಿಜವಾಗಿ ಇಂತಹ ಹೆಸರಿನ ಯಾವುದೇ ಕಮಾಂಡೊ ಪಡೆ ಅಸ್ತಿತ್ವದಲ್ಲೇ ಇಲ್ಲ.

– ಇನ್ನು 37 ದಿನಗಳ ಸುದೀರ್ಘ ಹೋರಾಟದಲ್ಲಿ ಈ ಹಾವನ್ನು ಹೊಡೆದಿರುವುದೇ ನಿಜವಾಗಿದ್ದಲ್ಲಿ, ಅಷ್ಟೊಂದು ಸುದೀರ್ಘ ಹೋರಾಟದ ಅವಧಿಯಲ್ಲಿ ಫೊಟೋದಲ್ಲಿರುವ ಹಾವಿನ ಶರೀರದ ಮೇಲೆ ಒಂದಾದರೂ ಗಾಯಗಳಿರಬೇಕಿತ್ತಲ್ಲ ಎಂದು ನೋಡಿದರೆ, ಫೊಟೋದಲ್ಲಿ ಸತ್ತು ಬಿದ್ದಿರುವ ಈ ದೈತ್ಯ ಹಾವಿನ ಮೈಮೇಲೆ ಯಾವುದೇ ರೀತಿಯ ಗಾಯಗಳಿಲ್ಲ.

– ಇನ್ನು ನ್ಯಾಷನಲ್ ಜಿಯೋಗ್ರಫಿ ಚಾನೆಲ್ ಪ್ರಕಾರ ಅಮೆಝಾನ್ ಅರಣ್ಯ ಪ್ರದೇಶದಲ್ಲಿ ಇದುವರೆಗೆ ಸಿಕ್ಕಿರುವ ಅನಕೊಂಡ ಹಾವುಗಳ ಪೈಕಿ ಅತೀ ಉದ್ದದ ಹಾವೆಂದರೆ ಅದು 30 ಅಡಿಗಳ ಗ್ರೀನ್ ಅನಕೊಂಡ. ಹಾಗಾಗಿ 134 ಅಡಿಯ ಅನಕೊಂಡ ಇದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

– ಇನ್ನು ಫೊಟೋಶಾಪ್ ಕೈಚಳಕದಲ್ಲೂ ಹಲವಾರು ತಪ್ಪುಗಳನ್ನು ಈ ಫೊಟೋ ಒಳಗೊಂಡಿದೆ. ಈ ಚಿತ್ರದಲ್ಲಿ ದೈತ್ಯ ಅನಕೊಂಡ ಹಾವಿನ ಮೂತಿ ಭಾಗ ಅಸ್ಪಷ್ಟವಾಗಿ ಗೋಚರಿಸುತ್ತದೆ.

ವಿಶ್ವದ ಈ ದೈತ್ಯ ಹಾವಿನ ಕುರಿತಾದ ಹಲವು ವಿಡಿಯೋಗಳು ಇಂಟರ್ನೆಟ್ ನಲ್ಲಿ ಈಗಲೂ ಹರಿದಾಡುತ್ತಿದೆ. ಅಂತಾರಾಷ್ಟ್ರೀಯ ಫ್ಯಾಕ್ಟ್ ಚೆಕ್ ಸಂಸ್ಥೆ ಸ್ನೋಪ್ಸ್ ಸಹ ಈ ಸುದ್ದಿಯನ್ನು ಕಪೋಲಕಲ್ಪಿತ ಎಂದು ಈ ಹಿಂದೆಯೇ ವರದಿ ಮಾಡಿತ್ತು. ಒಟ್ಟಿನಲ್ಲಿ ಈ ಮಾಹಿತಿ ತಂತ್ರಜ್ಞಾನ ಯುಗದಲ್ಲೂ ಅಸಂಬದ್ಧ ಮಾಹಿತಿಯನ್ನು ಹೊಂದಿರುವ ಪೋಸ್ಟ್ ಒಂದು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಮತ್ತು ಜನರು ಈಗಲೂ ಈ ಪೋಸ್ಟ್ ಅನ್ನು ಶೇರ್ ಮಾಡುತ್ತಿರುವುದು ಮಾತ್ರ ವಿಚಿತ್ರವೇ ಸರಿ.

ಇನ್ನು ಮುಂದೆ ನಿಮ್ಮ ವಾಲ್ ನಲ್ಲಿ ಈ ಪೋಸ್ಟ್ ಕಂಡುಬಂದರೆ ‘ಜಸ್ಟ್ ಇಗ್ನೋರ್ ಇಟ್!’

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ