ಕೋವಿಡ್ ಲಸಿಕೆ ಪೇಟೆಂಟ್ ತಾತ್ಕಾಲಿಕ ರದ್ದತಿಯ ಬೇಡಿಕೆಗೆ ಯುಎಸ್ ಬೆಂಬಲ
Team Udayavani, May 7, 2021, 6:30 AM IST
ಕೋವಿಡ್ ವೈರಸ್ ವಿರುದ್ಧ ಇಡೀ ವಿಶ್ವವೇ ಸೆಣಸಾಡುತ್ತಿದ್ದು ಅಭಿವೃದ್ಧಿಶೀಲ ಮತ್ತು ಬಡ ದೇಶಗಳ ಪಾಲಿಗೆ ಈ ವೈರಸ್ ಮಹಾಕಂಟಕವಾಗಿ ಪರಿಣಮಿಸಿದೆ. ಕೊರೊನಾ ವೈರಸ್‌ನಿಂದ ರಕ್ಷಣೆ ಪಡೆಯಲು ಅಭಿವೃದ್ಧಿ ಪಡಿಸಲಾಗಿರುವ ಕೋವಿಡ್ ನಿರೋಧಕ ಲಸಿಕೆಯ ಮೇಲಿನ ಪೇಟೆಂಟ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕುವ ಸಂಬಂಧ ಭಾರತ ಮತ್ತು ದಕ್ಷಿಣ ಆಫ್ರಿಕಾದ ಬೇಡಿಕೆಯನ್ನು ಅಮೆರಿಕ ಬೆಂಬಲಿಸಿದೆ.
ಆದರೆ ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ತಾನು ಬದ್ಧ ಎಂದು ಇದೇ ವೇಳೆ ಅದು ಸ್ಪಷ್ಟಪಡಿಸಿದೆ. ಅಮೆರಿಕದ ಈ ನಡೆ ಭಾರತ ಸಹಿತ ಕೊರೊನಾದ ವಿರುದ್ಧ ಸಮರ ಸಾರಿರುವ ಇತರೆಲ್ಲ ದೇಶಗಳಿಗೆ ವರದಾನವಾಗುವ ಸಾಧ್ಯತೆ ಇದೆ. ಲಸಿಕೆಯ ಮೇಲಿನ ಪೇಟೆಂಟ್ ಅನ್ನು ತೆಗೆದುಹಾಕಿದ್ದೇ ಆದಲ್ಲಿ ಬೇರೆಬೇರೆ ಲಸಿಕೆಗಳು ಮತ್ತು ಈ ಲಸಿಕೆಗಳ ಒಟ್ಟಾರೆ ಉತ್ಪಾದನೆಯನ್ನು ಹೆಚ್ಚಿಸುವ ಮೂಲಕ ಲಸಿಕೆ ಕೊರತೆ ಸಮಸ್ಯೆಯನ್ನು ನಿವಾರಿಸಬಹುದು. ಜತೆಯಲ್ಲಿ ಲಸಿಕೆಯ ಬೆಲೆಯಲ್ಲಿಯೂ ಭಾರೀ ಇಳಿಕೆಯಾಗಲಿದೆ. ಅಮೆರಿಕದ ಈ ನಿರ್ಧಾರದಿಂದ ಭಾರತಕ್ಕಾಗಲಿರುವ ಪ್ರಯೋಜನವೇನು ಎಂಬುದರತ್ತ ಬೆಳಕು ಚೆಲ್ಲಲಾಗಿದೆ.
ಪೇಟೆಂಟ್ ಎಂದರೆ :
ಪೇಟೆಂಟ್ ಎನ್ನುವುದು ಯಾವುದೇ ತಂತ್ರಜ್ಞಾನ, ಆವಿಷ್ಕಾರ, ಸೇವೆ ಅಥವಾ ವಿನ್ಯಾಸವನ್ನು ಮಾಡುವ ಕಂಪೆನಿ, ಸಂಸ್ಥೆ ಅಥವಾ ವ್ಯಕ್ತಿಗೆ ನೀಡಲಾದ ಕಾನೂನುಬದ್ಧ ಹಕ್ಕಾಗಿದೆ. ಇದರಿಂದ ಯಾರೂ ಅದನ್ನು ನಕಲು ಮಾಡುವಂತಿಲ್ಲ. ಪೇಟೆಂಟ್ ಯಾವುದೇ ಕಂಪೆನಿ, ಸಂಸ್ಥೆ ಅಥವಾ ವ್ಯಕ್ತಿಗೆ ಏಕಸ್ವಾಮ್ಯವನ್ನು ನೀಡುತ್ತದೆ. ಅದನ್ನು ಆತ ಮಾತ್ರ ತಯಾರಿಸಿ ಮಾರಾಟ ಮಾಡಬಹುದು.
ಅಮೆರಿಕದ ಈ ನಿರ್ಧಾರಕ್ಕೆ ಮಹತ್ವ ಯಾಕೆ? :
ಪ್ರಸ್ತುತ ಜಗತ್ತಿನಲ್ಲಿ ಕೋವಿಡ್ ಲಸಿಕೆಗಳನ್ನು ತಯಾರಿಸುವ ಎಲ್ಲ ಕಂಪೆನಿಗಳು ಆ ಲಸಿಕೆಗೆ ಪೇಟೆಂಟ್ ಹೊಂದಿವೆ. ಹೀಗಾಗಿ ಆಯಾಯ ಕಂಪೆನಿಗಳು ಮಾತ್ರ ಆ ಲಸಿಕೆಯನ್ನು ಉತ್ಪಾದಿಸಬಹುದು. ಲಸಿಕೆಯ ಮೇಲಿನ ಪೇಟೆಂಟ್ ಅನ್ನು ತೆಗೆದುಹಾಕಿದರೆ ಅನಂತರ ಲಸಿಕೆ ತಯಾರಿಸುವ ತಂತ್ರಜ್ಞಾನವು ಇತರ ಕಂಪೆನಿಗಳಿಗೂ ಲಭ್ಯವಿರುತ್ತದೆ. ಇದರಿಂದ ಒಟ್ಟು ಉತ್ಪಾದನೆಯನ್ನು ಹೆಚ್ಚಿಸಬಹುದಾಗಿದೆ. ಉತ್ಪಾದನೆ ಹೆಚ್ಚಾದಂತೆ ಲಸಿಕೆಯ ಕೊರತೆಯೂ ನಿವಾರಣೆಯಾಗುತ್ತದೆ. ಇಷ್ಟು ಮಾತ್ರವಲ್ಲದೇ ಲಸಿಕೆಯ ವೆಚ್ಚವೂ ಕಡಿಮೆಯಾಗುತ್ತದೆ.
ಯಾವ್ಯಾವ ದೇಶಗಳಿಂದ ಬೆಂಬಲ? :
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಲಸಿಕೆ ಮೇಲಿನ ಪೇಟೆಂಟ್ ತೆಗೆದು ಹಾಕುವಂತೆ ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಗೆ ಸೂಚಿಸಿತ್ತು. ಭಾರತ ಮತ್ತು ದಕ್ಷಿಣ ಆಫ್ರಿಕಾದ ಈ ಬೇಡಿಕೆಯನ್ನು ಪ್ರಸ್ತುತ 100ಕ್ಕೂ ಹೆಚ್ಚು ದೇಶಗಳು ಬೆಂಬಲಿ ಸುತ್ತಿವೆ. ಇದೀಗ ಅಮೆರಿಕ ಈ ಉಪಕ್ರಮವನ್ನು ಬೆಂಬಲಿಸಿದೆ. ಗಮನಾರ್ಹ ಸಂಗತಿ ಎಂದರೆ ಈ ಮೊದಲು ಯುಎಸ್ ಈ ಇದನ್ನು ವಿರೋಧಿಸಿತ್ತು. ಆದರೆ ಯುಎಸ್ ಹೌಸ್ ಆಫ್
ರೆಪ್ರಸೆಂಟೇಟಿವ್ಸ್ (ಕೆಳಮನೆ)ನ ಸುಮಾರು 100 ಸದಸ್ಯರು ಅಧ್ಯಕ್ಷ ಜೋ ಬೈಡೆನ್ ಅವರಿಗೆ ಪತ್ರ ಬರೆದು ಲಸಿಕೆಗೆ ನೀಡಲಾಗಿರುವ ಪೇಟೆಂಟ್ ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು. ಆ ಬಳಿಕ ಅಮೆರಿಕ ಈ ನಿರ್ಧಾರ ಕೈಗೊಂಡಿದೆ.
ಆದಾಗ್ಯೂ ಬೈಡೆನ್ ನಿರ್ಧಾರಕ್ಕೆ ಒಂದು ದಿನ ಮೊದಲು, ರಿಪಬ್ಲಿಕನ್ ಪಕ್ಷದ ಕೆಲವು ನಾಯಕರು ಕೊರೊನಾ ನಿರೋಧಕ ಲಸಿಕೆಯನ್ನು ಪೇಟೆಂಟ್‌ನಿಂದ ಹೊರಗಿಡದಂತೆ ಒತ್ತಾಯಿಸಿ ಪತ್ರಗಳನ್ನು ಬರೆದಿದ್ದರು. ಇನ್ನು ಅಮೆರಿಕದ ಈ ನಿರ್ಧಾರವನ್ನು ಯುರೋಪಿಯನ್ ಯೂನಿಯನ್, ಇಂಗ್ಲೆಂಡ್ ಸಹಿತ ಕೆಲವು ದೇಶಗಳು ವಿರೋಧಿಸಿದ್ದು, ಅವು ಪೇಟೆಂಟ್ ಪರವಾಗಿವೆ.
ಕೋವಿಡ್ ಲಸಿಕೆ ಮತ್ತು ಪೇಟೆಂಟ್ :
ಪ್ರಸ್ತುತ ಫೈಜರ್ ಲಸಿಕೆಯನ್ನು ಅಮೆರಿಕದಲ್ಲಿ ತಯಾರಿಸಲಾಗುತ್ತದೆ. ಈ ಲಸಿಕೆಗೆ ಫೈ ಜರ್ ಕಂಪೆನಿ ಪೇಟೆಂಟ್ ಹೊಂದಿದೆ. ಈಗ ಬೇರೆ ಯಾವುದೇ ಕಂಪೆನಿಯು ಫೈ ಜರ್ ಲಸಿಕೆಯನ್ನು ಅದೇ ಸೂತ್ರ, ಹೆಸರು ಅಥವಾ ಪ್ಯಾಕಿಂಗ್‌ನೊಂದಿಗೆ ತಯಾರಿಸಲು ಬಯಸಿದರೆ ಅದು ಫೈಜರ್‌ನಿಂದ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು. ಒಂದು ವೇಳೆ ಯಾವುದೇ ಕಂಪೆನಿಯು ಅನುಮತಿಯಿಲ್ಲದೆ ಆ ಲಸಿಕೆ ತಯಾರಿಸಲು ಪ್ರಾರಂಭಿಸಿದರೆ ಅದು ಕಾನೂನು ಬಾಹಿರವಾಗಿರುತ್ತದೆ. ಇದರ ಮುಂದಿನ ಹಂತವಾಗಿ ಫೈಜರ್ ಆ ಕಂಪೆನಿಯ ಮೇಲೆ ಕಾನೂನು ಮೊಕದ್ದಮೆ ಹೂಡಬಹುದು.
ಸಾಧಕ ಬಾಧಕ :
ಭಾರತ ಮತ್ತ ದಕ್ಷಿಣ ಆಫ್ರಿಕಾದ ಆಗ್ರಹಕ್ಕೆ ಅಮೆರಿಕ ನೀಡಿರುವ ಬೆಂಬಲವನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಮಹತ್ವದ ವಿಜಯವೆಂದು ಪರಿಗಣಿಸಲಾಗಿದೆ. ವಿಶ್ವಾದ್ಯಂತದ ಫಾರ್ಮಾ ಕಂಪೆನಿಗಳು ಈ ಕ್ರಮವನ್ನು ವಿರೋಧಿಸುತ್ತಿವೆ. ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ಈ ಲಸಿಕೆಗಳನ್ನು ತಯಾರಿಸಿರುವುದಾಗಿ ಕಂಪೆನಿಗಳು ಹೇಳುತ್ತವೆ. ಪೇಟೆಂಟ್ ತೆಗೆದುಹಾಕಿದರೆ ಈ ಕಂಪೆನಿಗಳು ನಷ್ಟ ಅನುಭವಿಸುತ್ತವೆ. ಇದು ಹೊಸದನ್ನು ಆವಿಷ್ಕರಿಸುವ ಮತ್ತು ಆವಿಷ್ಕರಿಸುವವರಿಗೆ ಆಘಾತಕಾರಿ ವಿಚಾರ ಎಂಬುದು ತಜ್ಞರ ವಾದ. ಆವಿಷ್ಕಾರದ ಮೇಲೆ ಪೇಟೆಂಟ್ ನೀಡದಿದ್ದರೆ ಯಾರಾದರೂ ಯಾಕೆ ಶ್ರಮಿಸಬೇಕು? ಎಂದು ಅಂತಾರಾಷ್ಟ್ರೀಯ ಆರೋಗ್ಯ ತಜ್ಞರು ಪ್ರಶ್ನಿಸಿದ್ದಾರೆ. ಈ ನಡೆಯಿಂದ ಹೊಸದನ್ನು ಆವಿಷ್ಕರಿಸಲು ಮತ್ತಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಯಾಕೆಂದರೆ ಬೇಗನೇ ಪೂರೈಸಿದರೆ ಕಂಪೆನಿಗಾಗಲೀ ಸಂಶೋಧಕರಿಗಾಗಲೀ ಯಾವುದೇ ಪ್ರಯೋಜನ ಇರಲಾರದು.
ಪೇಟೆಂಟ್ ರದ್ದಾದರೆ ಭಾರತಕ್ಕೇನು ಪ್ರಯೋಜನ? :
ಭಾರತ ಭಾರೀ ಪ್ರಮಾಣದಲ್ಲಿ ಲಸಿಕೆ ಕೊರತೆಯನ್ನು ಎದುರಿಸುತ್ತಿದೆ. ಮೇ 1ರಿಂದ 18 ವರ್ಷಕ್ಕಿಂತ ಮೇಲ್ಪಟ್ಟವ ರೆಲ್ಲರಿಗೂ ಲಸಿಕೆ ನೀಡುವುದಾಗಿ ಸರಕಾರ ಘೋಷಿಸಿತ್ತು. ಆದರೆ ಅನೇಕ ರಾಜ್ಯಗಳಲ್ಲಿ ಲಸಿಕೆ ಕೊರತೆಯಿಂದಾಗಿ ಇದು ಸಾಧ್ಯವಾಗಿಲ್ಲ. 18 ವರ್ಷ ಮೇಲ್ಪಟ್ಟವರಿಗೆಲ್ಲ ಲಸಿಕೆ ನೀಡುವ ಸಲುವಾಗಿ ನೋಂದಣಿ ಪ್ರಕ್ರಿಯೆ ಆರಂಭವಾದ ಮೊದಲ ದಿನದಂದೇ ಪೋರ್ಟಲ್ ಕ್ರ್ಯಾಶ್ ಆಗಿದೆ. ಲಸಿಕೆಯ ಅಲಭ್ಯತೆಯಿಂದಾಗಿ ಸದ್ಯ ನೋಂದಾಯಿಸಿಕೊಂಡವರಿಗೂ ಲಸಿಕೆ ನೀಡಲು ದಿನ ನಿಗದಿ ಪಡಿಸಲು ಸಾಧ್ಯವಾಗಿಲ್ಲ. ವಿಶ್ವದ ಎರಡನೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಯ ಅಗತ್ಯವಿದೆ. ಅವರ್ ವಲ್ಡ್ ಇನ್ ಡೇಟಾದ ಪ್ರಕಾರ, ಮೇ 4ರ ವರೆಗೆ, ಭಾರತದ ಒಟ್ಟು ಜನಸಂಖ್ಯೆಯ ಕೇವಲ ಶೇ. 9.32ರಷ್ಟು ಜನರಿಗೆ ಮಾತ್ರ ಲಸಿಕೆಯ ಮೊದಲ ಡೋಸ್ ಸಿಕ್ಕಿದೆ.
ಇಂತಹ ಪರಿಸ್ಥಿತಿಯಲ್ಲಿ ಲಸಿಕೆಯಿಂದ ಪೇಟೆಂಟ್ ತೆಗೆದುಹಾಕಿದರೆ ಅದು ದೇಶಕ್ಕೆ ಸಕರಾತ್ಮಕ ಬೆಳವಣಿಗೆಯಾಗಲಿದೆ. ಭಾರತವು ಪ್ರಸ್ತುತ ವಿಶ್ವದಲ್ಲಿ ಹೆಚ್ಚು ಸೋಂಕಿತ ದೇಶಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಪ್ರತೀ ದಿನ 3-4 ಲಕ್ಷ ಪ್ರಕರಣಗಳು ದಾಖಲಾಗುತ್ತಿವೆ. ಇದೇ ವೇಳೆ ಸದ್ಯದಲ್ಲಿಯೇ ಮೂರನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದು ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಜನರು ಆದಷ್ಟು ಬೇಗ ಲಸಿಕೆ ಪಡೆಯುವುದು ಆವಶ್ಯಕವಾಗಿದೆ. ಕೋವಿಡ್ ನಿರೋಧಕ ಲಸಿಕೆಗಳ ಮೇಲಣ ಪೇಟೆಂಟ್ ರದ್ದಾದ್ದೇ ಆದಲ್ಲಿ ಕೊರೊನಾ ವಿರುದ್ಧದ ಸಮರದಲ್ಲಿ ಭಾರತ ಸಹಿತ ಅಭಿವೃದ್ಧಿಶೀಲ ಮತ್ತು ಬಡರಾಷ್ಟ್ರಗಳ ಪಾಲಿಗೆ ಇದೊಂದು ಬಲುದೊಡ್ಡ ವರದಾನವಾಗಲಿದೆ.