ಅರಿವಿನ ಆದಿಗುರು- ವೇದವ್ಯಾಸ : ಇಂದು ಗುರು ಪೂರ್ಣಿಮೆ

ಯಜುರ್ವೇದ, ಸಾಮವೇದ, ಅಥರ್ವ ವೇದಗಳೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿ ವೇದವ್ಯಾಸರೆನಿಸಿಕೊಂಡರು.

Team Udayavani, Jul 13, 2022, 9:30 AM IST

ಅರಿವಿನ ಆದಿಗುರು- ವೇದವ್ಯಾಸ : ಇಂದು ಗುರು ಪೂರ್ಣಿಮೆ

ಯಮುನಾ ನದಿಯ ತೀರ. ನೀರಿನ ಅಂಚನ್ನು ಮುಟ್ಟಿ ಎತ್ತರವಾಗಿ ಬೆಳೆದು ನಿಂತಿರುವ ಕಾಡುಗಿಡಗಳು. ಅಲ್ಲೇ ಒಂದು ಚಿಕ್ಕ ಗುಡಿಸಲು. ಅದರ ಮಗ್ಗುಲಲ್ಲಿ ದಡಕ್ಕೆ ಎಳೆದು ನಿಲ್ಲಿಸಿದ ದೋಣಿ. ಮರಳಿನ ಮೇಲೆ ಹರಡಿ ಬಿದ್ದ ಮೀನಿನ ಬಲೆ. ಗಾಳಿ ಬೀಸಿದಾಗ ಬರುವ ಮೀನಿನ ಗಂಧ… ಅದು ಬೆಸ್ತರ ಪಾಳಯ, ದಾಶರಾಜನೇ ಅದರೊಡೆಯ. ಅವನ ಸಾಕುಮಗಳು, ಮೈತುಂಬ ಮತ್ಸ್ಯದ ಗಂಧ ಬೀರುವ ಮತ್ಸ್ಯಗಂಧಿ- ಸತ್ಯವತಿ.

ಇವರ ಗುಡಿಸಲಿಗೆ ಆಕಸ್ಮಿಕವಾಗಿ ಬಂದಿದ್ದರು ಸಾಕ್ಷಾತ್‌ ಮುನಿಶ್ರೇಷ್ಠ ವಸಿಷ್ಠರ ಮೊಮ್ಮಗ ಪರಾಶರ ಮುನಿ. ಮತ್ಸ್ಯಗಂಧಿ ಯೋಜನಗಂಧಿಯಾದಳು. ಪರಾಶರ- ಸತ್ಯವತಿಯರು ತಮ್ಮ ಮಗನ ರೂಪದಲ್ಲಿ ವ್ಯಾಸನೆಂಬ ಹೆಸರಿನ ಜಗತ್ತಿಗೇ ಆದಿ ಗುರುವನ್ನು ಕರುಣಿಸಿದರು. ಅವನು ಹುಟ್ಟಿದ ಆ ಹುಣ್ಣಿಮೆಯ ದಿನ ನಮಗೆಲ್ಲರಿಗೂ ಗುರುಪೂರ್ಣಿಮೆ.

ಹುಟ್ಟುವಾಗಿನ ಹೆಸರು ಕೃಷ್ಣ, ಅದು ಅವನ ಮೈಬಣ್ಣ. ದ್ವೀಪದಲ್ಲಿ ಹುಟ್ಟಿದ್ದರಿಂದ ಕೃಷ್ಣದ್ವೈಪಾಯನ. ಬುದ್ಧಿ ತಿಳಿಯುವಾಗ ತಂದೆ ಜತೆಗಿರಲಿಲ್ಲ. ತಂದೆಯನ್ನು ನೋಡ ಬೇಕೆಂಬ ಹಂಬಲಕ್ಕೆ ಆರು ವರ್ಷ ಕಳೆಯುವಾಗ ಪರಾಶ ರರು ಬಂದರು. ಮತ್ತೆ ಹೊರಟು ನಿಂತಾಗ ಮಗನೂ ಜತೆಗೆ ಬರುತ್ತೇನೆಂದ. “ಮಗೂ ನೀನಿನ್ನೂ ಸಣ್ಣವನು, ನಾನು ಲೋಕಸಂಚಾರ ಮಾಡುತ್ತಿರುತ್ತೇನೆ, ನನ್ನ ಜತೆಗೆ ನನ್ನ ಶಿಷ್ಯರು ಮಾತ್ರ ಇರಬೇಕು. ನೀನು ಇನ್ನೂ ಸ್ವಲ್ಪ ಕಾಲ ಕಳೆದು ಬರುವೆಯಂತೆ’ ಅಂದಾಗ, “ಹಾಗಾದರೆ ನನಗೂ ದೀಕ್ಷೆ ಕೊಟ್ಟು ನನ್ನನ್ನು ನಿಮ್ಮ ಶಿಷ್ಯನನ್ನಾಗಿ ಸ್ವೀಕರಿಸು ಅಪ್ಪ’ ಅಂದ ದ್ವೈಪಾಯನ. ಆರು ವರ್ಷಕ್ಕೇ ವಯಸ್ಕರನ್ನೂ ಮೀರಿಸು ವಂತಿದ್ದ ಪ್ರಬುದ್ಧತೆ, ವೇದ -ಶಾಸ್ತ್ರ -ಪುರಾಣ -ಇತಿಹಾಸ -ಕಾವ್ಯಗಳ ತಿಳಿವಳಿಕೆಯುಳ್ಳ ಮಗನ ಇಚ್ಛೆಗೆ ತಂದೆ ವಿರೋಧ ಮಾಡಲಿಲ್ಲ. ಬ್ರಹ್ಮಚರ್ಯೆಯ ದೀಕ್ಷೆಯಾಯಿತು ಕೃಷ್ಣನಿಗೆ. ತಂದೆ ಪರಾಶರರ ಜತೆ ಹೊರಟು ನಿಂತ ಮಗನನ್ನು ಕಂಡು ದುಃಖೀತಳಾದ ತಾಯಿ ಸತ್ಯವತಿಗೆ, “ಅಮ್ಮ ಚಿಂತಿಸಬೇಡ, ನಿನಗೆ ನನ್ನನ್ನು ಯಾವಾಗ ಕಾಣಬೇಕು ಅನ್ನಿಸುವುದೋ ಆ ಕ್ಷಣದಲ್ಲಿ ನಾನು ನಿನ್ನ ಕಣ್ಣಮುಂದಿರುತ್ತೇನೆ, ಹೋಗಿಬರುತ್ತೇನೆ ಹರಸು ಅಮ್ಮಾ’ ಎಂದು ಹೇಳಿ ಬೆಳಕಿನ ಕಡೆ ಮುಖ ಮಾಡಿ ಹೊರಟ ಹುಡುಗ.

ಮುಂದೆ ಅನೇಕ ಶತಮಾನಗಳ ವರೆಗೆ ಮಹರ್ಷಿಗಳಿಗೆ, ದ್ರಷ್ಟಾರರಿಗೆ ಪ್ರತ್ಯಕ್ಷವಾಗಿ ಅಲ್ಲಲ್ಲಿ ಕಾಡಿನಂತೆ ಹರಡಿಕೊಂಡಿದ್ದ ವೇದಮಂತ್ರಗಳನ್ನು ಕ್ರಮ, ವ್ಯವಸ್ಥೆಗೆ ಒಳಪಡಿಸಿ, ಸರಳವಾ ಗಿಸಿ, ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವ ವೇದಗಳೆಂದು ನಾಲ್ಕು ಭಾಗಗಳಾಗಿ ವಿಂಗಡಿಸಿ ವೇದವ್ಯಾಸರೆನಿಸಿಕೊಂಡರು.

ಅಪರಂಪಾರ ಜ್ಞಾನದ ಜಲಧಿಯಾಗಿ, ದಾರ್ಶನಿಕರಾಗಿ, ಧರ್ಮಮಾರ್ಗದ ಪ್ರವರ್ತಕರಾಗಿ, ಜ್ಞಾನ ಸಮುದ್ರವೆಂಬ ವೇದಗಳ ವಿಭಾಜಕರಾಗಿ, ಇತಿಹಾಸಕಾರರಾಗಿ, ಅತ್ಯದ್ಭುತ ಕಥನಕಾರರಾಗಿ, ಮಹಾಭಾರತದ ಸೂತ್ರಧಾರಿ ಮಾತ್ರವಲ್ಲ; ಮಹಾ ಪಾತ್ರಧಾರಿಯೂ ಆಗಿ, ಸರ್ವ ಕಾಲಕ್ಕೂ ಸಲ್ಲಬಹುದಾದ ಅನಾದಿ ಜ್ಞಾನದ ಮೂಲಮಂತ್ರವೆನಿಸಿದ ಭಗವದ್ಗೀತೆಯನ್ನೂ ಅದರ ರಹಸ್ಯಾರ್ಥವನ್ನೂ ನಮಗೆ ಕೊಟ್ಟು, ನಿಜವಾಗಿಯೂ ಅಧ್ಯಾತ್ಮದ ಬೆಳಕಿನ ಬೆಳಕಾದ ವ್ಯಾಸರಿಗೆ ಸಾಕ್ಷಾತ್‌ ಗಣಪತಿಯೇ ಶೀಘ್ರಲಿಪಿಗಾರನಾಗಿ ಕಾರ್ಯನಿರ್ವಹಿಸಬೇಕಾಯಿತು.

ಮಹಾಭಾರತ, ಭಾಗವತ, ಭಕ್ತಿ ಕರ್ಮ ಜ್ಞಾನಗಳ ಸಮನ್ವಯದ ಬ್ರಹ್ಮಸೂತ್ರ, ಹದಿನೆಂಟು ಪುರಾಣಗಳು, ಹದಿನೆಂಟು ಉಪಪುರಾಣಗಳು, ಆಯುರ್ವೇದ, ಜೋತಿಷ ಶಾಸ್ತ್ರ, ಧರ್ಮಶಾಸ್ತ್ರ ಗ್ರಂಥಗಳು, ಭಾಷ್ಯಗಳು- ಹೀಗೆ ವ್ಯಾಸರು ಕೈಯಾಡಿಸದೆ ಉಳಿದ ಜ್ಞಾನದ ವಿಭಾಗವೇ ಇಲ್ಲ. ಹಾಗಾಗಿ ಅನಂತರದ ಯಾವುದೇ ಸಾಹಿತ್ಯವಾದರೂ ಅದು “ವ್ಯಾಸೋಚ್ಚಿಷ್ಟ’. ಯಾರೇ ಏನೇ ಬರೆದರೂ ಅದರ ಮೂಲ ಚಿಂತನೆ ವ್ಯಾಸರದ್ದು ಅನ್ನುವಷ್ಟು ಪೂರ್ಣಜ್ಞಾನದ ಕಲ್ಪನೆ ಅವರದ್ದು. ಸಂತ ಜ್ಞಾನೇಶ್ವರರು ಇಡೀ ಜಗತ್ತಿನಲ್ಲಿರುವ ಅಧ್ಯಾತ್ಮದ ಜ್ಞಾನ ಮಹರ್ಷಿ ವ್ಯಾಸರ ಉಚ್ಚಿಷ್ಟವೇ ಸರಿ ಎಂದು ಜ್ಞಾಪಿಸಿಕೊಳ್ಳುತ್ತಾರೆ.

ಒಂದು ವೃತ್ತದಲ್ಲಿ ಕೇಂದ್ರ ಬಿಂದು, ತ್ರಿಜ್ಯ, ಪರಿಧಿ ಹಾಗೂ ವ್ಯಾಸಗಳನ್ನು ಗುರುತಿಸುತ್ತೇವೆ. ಈ ನಾಲ್ಕರಲ್ಲಿ ಕೇಂದ್ರವನ್ನು ಬಿಡದೆ ಎರಡೂ ಪರಿಧಿಗಳನ್ನು ಸ್ಪರ್ಶ ಮಾಡಬಲ್ಲದ್ದು ವ್ಯಾಸ ಮಾತ್ರ. ಪ್ರತೀ ಜೀವಕ್ಕೆ “ಧರ್ಮ’ ಅನ್ನುವುದು ಕೇಂದ್ರಬಿಂದುವಾದರೆ, ಲೌಕಿಕ ಹಾಗೂ ಆಧ್ಯಾತ್ಮಿಕ ಜೀವನವೆಂಬ ಎರಡು ತುದಿಗಳು. ಆ ಐಹಿಕ -ಪಾರಮಾರ್ಥಿಕ ಜೀವನಗಳನ್ನು ಧರ್ಮದ ಬಂಧನದಿಂದ ಹಿಡಿದಿಟ್ಟುಕೊಳ್ಳುವುದು ವ್ಯಾಸ!

ಇವತ್ತಿನ ಚಾತುರ್ಮಾಸ ವ್ರತವು ವ್ಯಾಸರು ಹಾಕಿಕೊಟ್ಟ ಪರಂಪರೆ. ವರ್ಷದ ಎಂಟು ತಿಂಗಳು ಲೋಕಸಂಚಾರ ಮಾಡುವ ಯತಿಗಳು ನಾಲ್ಕು ತಿಂಗಳು ಒಂದೆಡೆ ಕುಳಿತು ಅಧ್ಯಯನ ಮಾಡಲಿ ಎಂಬುದೇ ಇದರ ಹಿಂದಿರುವ ಮಹತ್ತರ ಆಶಯವೆನ್ನುವ ವ್ಯಾಸರು, ಬ್ರಹ್ಮಚರ್ಯವೆಂದರೆ ಸದಾ ಬ್ರಹ್ಮನ ಬಗೆಗಿನ ಚಿಂತನೆ, ಸಾಕ್ಷಾತ್ಕಾರದ ಬಗೆಗೆ ಯೋಚಿಸುವುದೇ ವಿನಾ ಬ್ರಹ್ಮಚರ್ಯವೆಂದರೆ ಮದುವೆಯಾಗದಿರುವುದಲ್ಲ ಎಂದು ಜ್ಞಾನ ನೀಡುತ್ತಾರೆ.

ಮಹಾಭಾರತದಲ್ಲಿ ಏಳು ತಲೆಮಾರುಗಳಿಗೆ ವ್ಯಾಸರು ಮಾರ್ಗದರ್ಶಕರಾಗಿರುತ್ತಾರೆ. ಮೊದಲ ತಲೆಮಾರಿನಲ್ಲಿ ತನ್ನ ತಾಯಿ ಸತ್ಯವತಿ, ಅನಂತರ ಅವಳ ಮಕ್ಕಳಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯ, ಮುಂದೆ ಮೂರನೇ ತಲೆಮಾರಿನಲ್ಲಿ ವಿಚಿತ್ರವೀರ್ಯನ ಮಕ್ಕಳಾದ ಧೃತರಾಷ್ಟ್ರ, ಪಾಂಡು ಹಾಗೂ ವಿದುರ, ನಾಲ್ಕನೇ ತಲೆಮಾರಿನಲ್ಲಿ ವ್ಯಾಸರ ಮೊಮ್ಮಕ್ಕಳಾದ ಪಾಂಡವರು ಮತ್ತು ಕೌರವರು, ಐದನೇ ತಲೆಮಾರಿನಲ್ಲಿ ಮರಿಮಗ ಅಭಿಮನ್ಯು, ಆರನೇ ತಲೆಮಾರಿನಲ್ಲಿ ಮರಿಮಗನ ಮಗ ಪರೀಕ್ಷಿತ, ಏಳನೆಯ ತಲೆಮಾರಿನಲ್ಲಿ ಮರಿಮಗನ ಮೊಮ್ಮಗ ಜನಮೇಜಯ- ಹೀಗೆ ಏಳು ತಲೆಮಾರುಗಳಿಗೆ ವ್ಯಾಸರು ಪ್ರಭಾವ ಬೀರುತ್ತಾರೆ. ಆ ಮೂಲಕ ಕುಟುಂಬದ ಯಜಮಾನ ನಾದವನು ಶಸ್ತ್ರ ಶಾಸ್ತ್ರಾದಿಗಳಿಂದ ಪಾಂಡಿತ್ಯವನ್ನು ಪಡೆದು ಧರ್ಮ ಮಾರ್ಗದಲ್ಲಿ ನಡೆದರೆ ಮುಂದಿನ ಅದೆಷ್ಟೋ ಪೀಳಿಗೆಗೆ ಅವನು ಚಿರಂಜೀವಿಯಾಗಿರುತ್ತಾನೆ ಎಂಬ ಸಂದೇಶ ನಮಗೆ ವ್ಯಾಸರಿಂದ ದೊರೆಯುತ್ತದೆ.

ಪ್ರತಿಯೊಬ್ಬರೂ ವಾಯಸದಿಂದ ಮಾನಸಕ್ಕೆ ಹೋಗಬೇಕು ಎಂಬುದಾಗಿ ಭಾಗವತದಲ್ಲಿ ವ್ಯಾಸರು ಹೇಳುತ್ತಾರೆ. ವಾಯಸವೆಂದರೆ ಯಾವುದೇ ಸಾಧನೆಗಳಿಲ್ಲದೆ, ಕರ್ತವ್ಯಹೀನರಾಗಿ ಕೇವಲ ತಿಂದುಂಡು ವಯಸ್ಸನ್ನು ಕಳೆದುಬಿಡುವುದು. ವಾಯಸವೆಂದರೆ ಕಾಗೆಗಳು ಕುಡಿಯುವ ಕೊಳಕು ನೀರಿನಂತೆ. ನಾವು ಹಂಸಗಳು ಕುಡಿಯುವ ಶುಭ್ರ ಮಾನಸ ಸರೋವರವಾಗಬೇಕು ಎಂದು ವ್ಯಾಸರು ಬೆಳಕು ಚೆಲ್ಲುತ್ತಾರೆ.

ವಿಧವೆಯರು ಸಮಾಜದಿಂದ ನಿರ್ಲಕ್ಷಿತ ರಾಗಿರಲಿಲ್ಲ ಎಂಬ ಸಂಗತಿ ನಮಗೆ ವ್ಯಾಸರ ಮಹಾಭಾರತದಲ್ಲಿಯೇ ತಿಳಿದುಬರುತ್ತದೆ. ಮಾತ್ರವಲ್ಲದೆ,
ನ ಶೂದ್ರಾ ಭಗವದ್ಭಕ್ತಾಃ| ವಿಪ್ರಾ ಭಾಗವತ ಸ್ಮತಾಃ| ಸರ್ವ ವರ್ಣೇಷು ತೇ ಶೂದ್ರಾ| ಏತ್ವಾ ಭಕ್ತ ಜನಾರ್ದನೆ|
ಅಂದರೆ, ಭಗವದ್‌ ಭಕ್ತರು ಎಂದಿಗೂ ಶೂದ್ರರಲ್ಲ, ಅವರೇ ನಿಜವಾದ ಬ್ರಾಹ್ಮಣರು, ಅವರೇ ನಿಜವಾದ ಭಾಗವತರು, ಜನಾರ್ದನನಲ್ಲಿ ಭಕ್ತಿಯಿಲ್ಲದ ಯಾವ ವರ್ಣದವರಾದರೂ ಸರಿ- ಅವರೇ ನಿಜವಾದ ಶೂದ್ರರು ಎಂದು ವ್ಯಾಸರು ಸ್ಪಷ್ಟಪಡಿಸುತ್ತಾರೆ. ಬ್ರಾಹ್ಮಣ್ಯ ಅಥವಾ ಶೂದ್ರತ್ವ ಪ್ರಾಪ್ತವಾಗುವುದು ಹುಟ್ಟಿನಿಂದಲ್ಲ, ಅವರವರ ನಡತೆಯಿಂದ ಎಂದು ಸಾವಿರಾರು ವರ್ಷಗಳ ಮೊದಲೇ ವೇದವ್ಯಾಸರು ವ್ಯಾಖ್ಯಾನಿಸುತ್ತಾರೆ.

ವ್ಯಾಸರ ಈ ಮಾತಿಗೆ ಸಾಕಷ್ಟು ನಿದರ್ಶನಗಳು ಪುರಾಣ ಕಥೆಗಳಿಂದ ನಮಗೆ ವೇದ್ಯವಾಗುತ್ತದೆ. ಕೌಶಿಕನಂಥ ಕ್ಷತ್ರಿಯ ಪುರುಷ ಬ್ರಹ್ಮರ್ಷಿಯಾಗುತ್ತಾನೆ. ಬೇಡರ ಕುಲದ ರತ್ನಾಕರ, ವಾಲ್ಮೀಕಿ ಮಹರ್ಷಿ ಆಗುತ್ತಾನೆ. ಪರಾಶರರಂತಹ ಮಹರ್ಷಿಗಳು ಬೆಸ್ತರ ಕುಲದ ಸತ್ಯವತಿಯನ್ನು ವಿವಾಹವಾದಾಗ ಜನ ಬಹಿಷ್ಕಾರ ಹಾಕಲಿಲ್ಲ. ಆ ಕಲ್ಪನೆಯೇ ಅವತ್ತಿನ ಸಮಾಜದಲ್ಲಿರಲಿಲ್ಲ. ಆ ಮೀನು ಹಿಡಿಯುವವಳ ಮಗನಾಗಿ ಜನಿಸಿದ ವೇದವ್ಯಾಸರು ಜಗತ್ತಿಗೆ ಆದಿಗುರುವೆನಿಸಿದರು. ರಾವಣ ಬ್ರಾಹ್ಮಣ ನಾದರೂ ಅವನನ್ನು ಯಾರೂ ಪೂಜಿಸಲಿಲ್ಲ, ತಿರಸ್ಕರಿಸಿದರು, ರಾಕ್ಷಸನ ಪಟ್ಟ ಕಟ್ಟಿದರು. ಜಾತಿಯ ಹೆಸರಿನಲ್ಲಿ ಸಮಾಜವನ್ನೇ ಸೀಳುವರು ಒಮ್ಮೆ ವೇದವ್ಯಾಸರನ್ನು ಅಧ್ಯಯನ ಮಾಡಬೇಕು.

ವ್ಯಾಸರು ತಮಗಾಗಿ ಏನನ್ನೂ ಬಯಸಲಿಲ್ಲ. ಸ್ವಾರ್ಥ, ದ್ವೇಷ ಯಾವುದೂ ಇಲ್ಲದ ನಿರ್ಮಲ ಮನಸ್ಸು, ಸೂರ್ಯಪ್ರಕಾಶದಂತಹ ವಿವೇಕ. ತಮ್ಮ ಕಣ್ಣು ಮುಂದೆಯೇ ಶಂತನುವಿನಿಂದ ಜನಮೇಜಯನ ವರೆಗೆ ಏಳುಪೀಳಿಗೆಗಳನ್ನು ಕಂಡರು. ಶ್ರೀಕೃಷ್ಣ, ಭೀಷ್ಮ, ಧೃತರಾಷ್ಟ್ರ, ಧರ್ಮರಾಯ, ದುರ್ಯೋಧನರಂತಹ ಪರ್ವತಸದೃಶ ವ್ಯಕ್ತಿಗಳೊಂದಿಗೆ ಓಡಾಡಿದರು. ದುಃಖದಲ್ಲಿದ್ದವರಿಗೆ ಅಮೃತದಂಥ ಮಾತುಗಳನ್ನು, ತಪ್ಪು ಮಾಡಿದವರಿಗೆ ಸ್ಪಷ್ಟ ಎಚ್ಚರಿಕೆಯನ್ನು, ಸಜ್ಜನರಿಗೆ ಧೈರ್ಯವನ್ನು ನೀಡಿ ತಾವು ಸ್ವತಃ ಅಗ್ನಿಯಂತೆ ಪರಿಶುದ್ಧರಾಗಿ ನಡೆದರು. ಅವರ ವಿಶಾಲಬುದ್ಧಿ, ದಿವ್ಯದೃಷ್ಟಿಯನ್ನು ಬಾದರಾಯಣನಾಗಿ ಬದರಿಯಲ್ಲಿ ಈಗಲೂ ನೆಲೆಸಿರುವ ಆ ಮೂಲ ಗುರುವೇ ನಮಗೆ ಕರುಣಿಸಲಿ.

– ಪ್ರಕಾಶ್‌ ಮಲ್ಪೆ‌

ಟಾಪ್ ನ್ಯೂಸ್

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.