ಅಕಾಲ ವೃದ್ಧರಾಗುತ್ತಿರುವ ಮಕ್ಕಳಲ್ಲಿ ಎಲ್ಲಿದೆ ಬಾಲ್ಯದ ಬೆರಗು?

Team Udayavani, Nov 14, 2019, 4:00 AM IST

ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಇಚ್ಛೆಯಂತೆ ಅವರ ಜನ್ಮ ದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಮಗಳು ಇಂದಿರಾ ಚಿಕ್ಕವರಿರುವಾಗಲೇ ತಮ್ಮ ಮಡ ದಿಯನ್ನು ಕಳೆದುಕೊಂಡ ನೆಹರೂ ಧೃತಿಗೆಡದೆ ಅಕ್ಕರೆಯಿಂದ ಬೆಳೆಸಿದವರು. ಪದೇ ಪದೇ ಸೆರೆಮನೆ ಅನುಭವಿಸುವ ಸಂದರ್ಭದಲ್ಲಿ ಮಗಳಿಗೆ ಪತ್ರವನ್ನು ಬರೆಯುತ್ತಾ ಅದರಲ್ಲಿ ಭಾರತವನ್ನು ಪರಿಚಯಿಸುತ್ತಾ (ಡಿಸ್ಕವರಿ ಆಫ್ ಇಂಡಿಯಾ) ಹೋದವರು. ವಿಶ್ವದ ಇತರೆಡೆಯಲ್ಲೂ ವಿವಿಧ ದಿನಗಳಂದು ಮಕ್ಕಳ ದಿನಾಚರಣೆ ಮಾಡಿ ಮಕ್ಕಳ ಮಹತ್ವವನ್ನು ಸಮಾಜಕ್ಕೆ ಮನದಟ್ಟು ಮಾಡಲಾಗುತ್ತಿದೆ.

ನಿಜ, ಅವಿಭಕ್ತ ಕುಟುಂಬದಿಂದ ನ್ಯೂಕ್ಲಿಯಸ್‌ ಕುಟುಂಬದೆಡೆಗೆ ಸಾಗುತ್ತಿರುವ ಸಂದರ್ಭದಲ್ಲಿ ತಂದೆ-ತಾಯಿಯಂದಿರಿಗೆ ಮಕ್ಕಳ ಬಗ್ಗೆ ಇನ್ನಿಲ್ಲದ ಆಸಕ್ತಿ, ಕಾಳಜಿ, ಬಂದಿದೆ. ಆದರೆ ಅವರಿಗೆ ಕೌಟುಂಬಿಕ ವಾತಾವರಣವನ್ನು ಪೂರೈಸುತ್ತಿದ್ದೇವೆಯೇ ಎಂಬುದು ಪ್ರಶ್ನೆ. ಆರು ವರ್ಷವಾದರೂ ಶಾಲೆಯೆಂದರೆ ಕಧ್ದೋಡುತ್ತಿದ್ದ ನಮ್ಮ ಕೈಕಾಲುಗಳನ್ನು ಹಿಡಿದು ನೂಕಿದರೂ ಶಾಲೆ ತಪ್ಪಿಸುವ ದಾರಿ ಹುಡುಕುತ್ತಿದ್ದ ಪರಿ ನೆನಪಿಗೆ ಬರುತ್ತದೆ.

ಸ್ವಚ್ಛಂದ ಜೀವನದ ಮನೆಯ ಪರಿಸರವನ್ನು ಬಿಟ್ಟು ಜೈಲಿನಂತಹ ಶಾಲೆಯನ್ನು ನೆನಸಿಕೊಂಡರೆ ಮೈ ಜುಮ್ಮೆನಿಸುತ್ತಿತ್ತು. ಆದರೆ ಇಂದು ತಂದೆ ತಾಯಿ ಇಬ್ಬರು ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಮಗುವಿಗೆ ಒಂದು ವರ್ಷ ತುಂಬುತ್ತಲೇ ಚೈಲ್ಡ್‌ಕೇರ್‌ ಸೆಂಟರ್‌, 2 ವರ್ಷ ತುಂಬುತ್ತಲೇ ನರ್ಸರಿ, ಮುಂದೆ ಎಲ್‌.ಕೆ.ಜಿ, ಯು.ಕೆ.ಜಿ ಹೀಗೆ ಒಂದನೇ ತರಗತಿಗೆ ಬರುವಷ್ಟರಲ್ಲಿ ನಾಲ್ಕು ವರ್ಷ, ಮಗುವಿನ ಬಾಲ್ಯ ಕಳೆದುಹೋಗುವ ಪರಿ ವಿಷಾದ ಮೂಡಿಸುತ್ತದೆ. ಮಧ್ಯಾಹ್ನದ ವೇಳೆ ಮಕ್ಕಳು ಮಲಗುತ್ತವೆ. ಆದ್ದರಿಂದ ಎಲ್‌.ಕೆ.ಜಿ ತರಗತಿಗಳು ಒಂದು ಹೊತ್ತು ಮಾತ್ರ ಇರುತ್ತವೆ. ಅವರನ್ನು ಮಧ್ಯಾಹ್ನ ಬಂದು ಕರೆದೊಯ್ಯಬೇಕು ಎಂದೊಡನೆ ಕೆಲಸದ ಸ್ಥಳದಿಂದ ಶಾಲೆಗೆ ಬರಲಾಗದು. ಮನೆಯಲ್ಲಿ ನೋಡಿಕೊಳ್ಳುವವರು ಯಾರೂ ಇಲ್ಲ ಮುಂತಾಗಿ ಪೋಷಕರು ವಾದಿಸಿ ಅಲ್ಲಿಯೆ ಇರುವಂತೆ ಮಾಡಲು ಯಶಸ್ವಿಯಾದದ್ದನ್ನು ನೋಡಿದ್ದೇನೆ.

ಮಕ್ಕಳು ತಮ್ಮ ತಾಯಿ-ತಂದೆಯರಿಗೆ ನೀಡಬೇಕಾದ್ದನ್ನು ತಮ್ಮ ಬಾಲ್ಯದ 6 ವರ್ಷಗಳಲ್ಲಿಯೇ ನೀಡುತ್ತಾರೆ ಎಂದಿದ್ದಾರೆ ಕಾರಂತರು. ಮಕ್ಕಳ ಲಾಲನೆ-ಪಾಲನೆ, ಆಟ, ತೊದಲು ಮಾತು, ನಿರ್ವಾಜ್ಯ ಪ್ರೀತಿ ಇದನ್ನು ಅನುಭವಿಸುವ ಭಾಗ್ಯ ಇವತ್ತಿನ ಎಷ್ಟು ಪಾಲಕರಿಗಿದೆ? ಬೆಳಿಗ್ಗೆ 9 ರಿಂದ 5ರವರೆಗೆ ಶಾಲೆಯಲ್ಲಿ ಕಲಿಯುವ ಮಕ್ಕಳು, ಅಲ್ಲಿಂದ ಬಂದೊಡನೆ ಟ್ಯೂಶನ್‌ಗೆ ತೆರಳುತ್ತವೆ. ಅಲ್ಲಿಂದ ಬರುವಾಗಲೇ ನಿದ್ದೆಗಣ್ಣಾಗಿ ಬರುವ ಅವು ಕಾಟೂìನ್‌ ನೋಡಿಕೊಂಡು ಊಟ ಮಾಡಿ ಮಲಗುತ್ತವೆ. (ಇದರ ನಡುವೆ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ ಎಂಬ ಕೊರಗೂ ಇದೆ). ಬೆಳಿಗ್ಗೆ ಎದ್ದರೆ ಮತ್ತೆ ಶಾಲೆಗೆ ಹೊರಡುವ ಭರಾಟೆ. ಇವುಗಳ ನಡುವೆ ಮ್ಯೂಸಿಕ್‌, ಡ್ಯಾನ್ಸ್‌, ಕರಾಟೆ, ಅಬಾಕಸ್‌, ಡ್ರಾಯಿಂಗ್‌ ಕ್ಲಾಸ್‌ಗಳು ಬೇರೆ. ಅಕಸ್ಮಾತ್‌ ಮನೆಯಲ್ಲಿ ಉಳಿದ ಒಂದೆರಡು ತಾಸುಗಳ ಅವರ ನಡತೆಗಳು ಪೋಷಕರಿಗೆ ಚಿಟ್ಟು ಹಿಡಿಸುತ್ತವೆ. ಬೇಸಿಗೆ ರಜೆ ಬಂತೆಂದರೆ ಇಂತಹವರಿಗಾಗಿಯೇ ಬೇಸಿಗೆ ಶಿಬಿರಗಳು ತಲೆಯೆತ್ತಿ ಮಕ್ಕಳ ವ್ಯಕ್ತಿತ್ವ ವಿಕಸನ ಮಾಡುವ ಆಶ್ವಾಸನೆ ನೀಡಿ ಪೋಷಕರಿಂದ ದುಡ್ಡು ಪೀಕಿಸುವುದರ ಜೊತೆಗೆ ಅಷ್ಟರಮಟ್ಟಿಗೆ ಪರಸ್ಪರ ದೂರ ಸರಿಯಲು ತಮ್ಮ ಕೊಡುಗೆ ನೀಡುತ್ತಿವೆ.

ಇಂದಿನ ಹಿರಿಯರ ಕೊರಗು ಎಂದರೆ ಅವರಿಗೆ ಸಿಕ್ಕ ಬಾಲ್ಯ ಅವರ ಮಕ್ಕಳಿಗೆ ಸಿಗಲಿಲ್ಲವೆಂಬುದು. ರಷ್ಯಾದ ಕವಿ ಪ್ರಟಸ್‌ಬೊವಾ ತನ್ನ ಜೀವನದ ಆರಂಭ ಕವಿತೆಯಲ್ಲಿ ನಾವು ಹುಟ್ಟಿದಾಗ ಯಾವ ಸಂಭ್ರಮದ ಔತಣ ಇಲ್ಲ. ಕೇವಲ ಹತಾಶೆಯಿಂದ ತಾಯಂದಿರು ಹಾಡುತ್ತಿದ್ದ ಲಾಲಿಗಳು ಮಾತ್ರ. ಕಂತೆ ಕಟ್ಟಿ ಮೆದೆ ಹಾಕುವ ಸಮಯದಲ್ಲಿ ಅವರು ನಮ್ಮನ್ನೆಲ್ಲ ಮರದ ಕೆಳಗಡೆ ಮಲಗಿಸಿ ತಮ್ಮ ಕೆಲಸದಲ್ಲಿ ನಿರತರಾಗುತ್ತಿದ್ದರು. ಸುಗ್ಗಿಯ ತೀವ್ರ ಚಟುವಟಿಕೆಯ ದಿನಗಳಲ್ಲಿ ನಮ್ಮನ್ನೆಲ್ಲ ಬಿಗಿಯಾಗಿ ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿಯೆ ಬಿಟ್ಟು ಯಾವುದೇ ತೊಂದರೆಬಾರದಂತೆ ದೇವರಲ್ಲಿ ಪ್ರಾರ್ಥಿಸಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ನಾವು ಮಲಗಿದ್ದಲ್ಲೆ ಒದ್ದಾಡಿ ಬಿಡಿಸಿ ಕೊಂಡು ಆಚೆಗೆ ತೆವಳುತ್ತಾ ಬಂದು ಬರಿಗಾಲಿನಲ್ಲಿ ಕೂಳೆಗಳ ಮೇಲೆ ನಡೆಯುತ್ತಾ, ಬಿಸಿಲಲ್ಲಿ ಬೆಂದು ಮಳೆಯಲ್ಲಿ ನೆನೆದು ಬೆಳೆದೆವು. ಇದರಿಂದ ಕ್ರಮೇಣ ಅಗಲವಾದ ಭುಜಗಳು, ಬಲಿಷ್ಠವಾದ ತೋಳು ಪಡೆದು ನಮ್ಮ ಸ್ವತಂತ್ರ ಜೀವನ ಆರಂಭವಾಯಿತು ಎಂದು ವಿವರಿಸುತ್ತಾರೆ. ಗ್ರಾಮೀಣ ಪ್ರದೇಶದಿಂದ ಬಂದ ಬಹುತೇಕರ ಜೀವನ ಇದರಿಂದ ಭಿನ್ನವಾಗಿಲ್ಲ. ಜನಪದರು ಬೀದಿ ಮಕ್ಕಳು ಬೆಳದೋ ಕೋಣೆ ಮಕ್ಕಳು ಕೊಳೆತೊ ಎಂದದ್ದು ಇದೇ ಅರ್ಥದಲ್ಲಿ.

ಹೊರಗಿನ ವಾತಾವರಣ ಕೊಂಚ ಬದಲಾದರೆ ಶೀತ, ನೆಗಡಿ, ಜ್ವರದಿಂದ ನರಳುವ ಮಕ್ಕಳು, ಒಂದೆಡೆ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದರೆ, ಇನ್ನೊಂದೆಡೆ ಸಾಧಾರಣ ಜ್ವರ, ನೆಗಡಿಗೆ ತಜ್ಞ ವೈದ್ಯರಿಂದಲೇ ಚಿಕಿತ್ಸೆ ಪಡೆಯಬೇಕು ಎಂಬ ಅತಿಯಾದ ಕಾಳಜಿಯಿಂದ ನಗರದ ನರ್ಸಿಂಗ್‌ ಹೋಂನಲ್ಲಿ ಗಂಟೆಗಟ್ಟಲೆ ಕಾದು, ಖರ್ಚನ್ನು ಸರೀಕರ ಎದುರು ಹೆಮ್ಮೆಯಿಂದ ಹೇಳಿಕೊಳ್ಳುವ ಜನ ಮತ್ತೂಂದೆ ಡೆ.

ಬೀದಿ, ಅಕ್ಕಪಕ್ಕದ ಮನೆಗಳಲ್ಲಿ ಆಟದಲ್ಲಿ ತಲ್ಲೀನರಾಗುತ್ತಿದ್ದವರನ್ನು ಹಿಡಿದು, ತಲೆಗೆ ಎಣ್ಣೆಮೆತ್ತಿ, ಕೈಗೆ ತಿಂಡಿಕೊಟ್ಟು ಕತೆ ಹೇಳುತ್ತಿದ್ದ ಅಜ್ಜಿ- ಅಜ್ಜಂದಿರು, ಕೂಸುಮರಿ ಮಾಡುತ್ತಿದ್ದ ಅತ್ತೆ ಮಾವಂದಿರು, ಚಿಕ್ಕಪ್ಪ- ಚಿಕ್ಕಮ್ಮಂದಿರು, ಇಂತಹ ಕುಟುಂಬಗಳ ಸಂಖ್ಯೆ ಅಲ್ಲೊಂದು ಇಲ್ಲೊಂದು ಎನ್ನುವಂತಾಗಿದೆ. ಅಜ್ಜ-ಅಜ್ಜಿಯರು ವೃದ್ಧಾ ಶ್ರಮಗಳಾಗಿರುವ ಹಳ್ಳಿಗಳಲ್ಲೋ ಇಲ್ಲವೇ ವೃದ್ಧಾಶ್ರಮಗಳಲ್ಲೋ ಕಾಣೆಯಾಗು ತ್ತಿದ್ದರೆ, ಬಂಧುಗಳು ಶುಭ ಸಮಾರಂಭಗಳಲ್ಲಿ ಮಿಂಚಿ ಮಾಯ ವಾಗುತ್ತಿದ್ದಾರೆ. ಭಾರತದ ಭದ್ರ ಬುನಾದಿಯೇ ಕೌಟುಂಬಿಕ ವ್ಯವಸ್ಥೆ. ಅಭಿವೃದ್ಧಿಯ ಹೆಸರಿನಲ್ಲಿ ಸಂಸ್ಕೃತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿರುವುದರಿಂದಲೇ ಎಲ್ಲಾ ಸಮಸ್ಯೆ ಉದ್ಭವವಾಗುತ್ತಿರುವುದು. ಇದರ ನೇರ ಪರಿಣಾಮ ಮಕ್ಕಳ ಮೇಲೆ ಆಗುತ್ತಿದೆ. ಅವು ಹತ್ತು ವರ್ಷಕ್ಕೆ ಅರವತ್ತು ವರ್ಷ ದವರಂತೆ ಮಾತನಾಡು ವುದನ್ನು ಕಂಡು ಅಚ್ಚರಿಪಡುತ್ತೇವೆ. ಮೊಬೈಲ್‌ನಲ್ಲೋ, ವಿಡಿಯೋಗೇಮ್‌ಗಳಲ್ಲೋ ಕಳೆದುಹೋಗು ತ್ತಿ ರುವ ಮಕ್ಕಳನ್ನು ಅಸಹಾಯಕರಾಗಿ ನೋಡುತ್ತಿದ್ದೇವೆ. ಮಕ್ಕಳು ಅಕಾಲ ವೃದ್ಧರಾಗುವುದನ್ನು ತಡೆಯಲು ಮತ್ತೆ ಹಳೆಯ ಕೌಟುಂಬಿಕ ವ್ಯವಸ್ಥೆಯ ಕಡೆ ಅನಿವಾರ್ಯವಾಗಿ ಸಾಗಬೇಕಿದೆ.

ಡಿ.ವಿ.ಜಿ.ಯವರು: “”ಅಡಿ ಜಾರಿ ಬೀಳುವುದು, ತಡಿವಿ ಕೊಂಡೇಳುವುದು/ ಕಡುಬ ನುಂಗುವುದು, ಕಹಿ ಮದ್ದ ಕುಡಿಯುವುದು/ ದುಡುಕಿ ಮತಿದಪ್ಪವುದು, ತಪ್ಪನೊಪ್ಪೆನ್ನುವುದು/ ಬದುಕೆಂಬುದಿದು ತಾನೆ…ಮಂಕುತಿಮ್ಮ ಎಂದಿದ್ದಾರೆ.

ಬದುಕು ಯಾಂತ್ರಿಕ ಆಗುವುದು, ಕ್ಷುಲ್ಲಕ ಆಗುವುದು ಎಲ್ಲ ನಮ್ಮಿಂದ, ನಮ್ಮ ಸೀಮಿತ ದೃಷ್ಟಿಕೋನಗಳಿಂದ ಬಾಳು ಎಂಬುದು ಎಡವುವ, ಏಳುವ ಪ್ರಕ್ರಿಯೆಯಲ್ಲೇ ಅಡಗಿದೆ ಬದುಕಿನಲ್ಲಿ ಸ್ವಾರಸ್ಯ ಮೂಡಬೇಕಾದರೆ ಚಿಂತನೆ ಹಾಗೂ ಕ್ರಿಯಾಶೀಲ ಚಲನೆ ಬೇಕು. ಹೂವು ಸಹಜವಾಗಿ ಅರಳುವಂತೆ ಮಕ್ಕಳು ಅರಳಲಿ, ಅಲ್ಲವೇ?

ಗೋರೂರು ಶಿವೇಶ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ