ಆಕಾಶಕ್ಕೆ ಮುಖವೆತ್ತಿ ಉಗುಳಿದರೆ ಬೀಳುವುದೆಲ್ಲಿಗೆ?

Team Udayavani, May 13, 2019, 6:00 AM IST

ಮೋದಿಯನ್ನು ಡಿವೈಡರ್‌ ಇನ್‌ ಚೀಫ್ (ವಿಭಜನ ಪ್ರಮುಖ) ಎಂಬ ವಿಶೇಷಣ ಕೊಟ್ಟು ಅಮೆರಿಕದ “ಟೈಮ್‌’ ವಾರಪತ್ರಿಕೆ ಮುಖಪುಟ ಲೇಖನ ಪ್ರಕಟಿಸಿದೆ. ಮೋದಿ ವಿರೋಧಿ ಬಣದ ಎಲ್ಲರೂ ಸಕ್ಕರೆ ತುಪ್ಪ ಸವಿದ ಖುಷಿಯಲ್ಲಿ ಈ ಲೇಖನವನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಲೇಖನದಲ್ಲಿ ಏನು ಹೇಳಿದೆ?: ಮೋದಿ ಹಿಂಸಾಪ್ರಿಯ. ಸ್ವಂತ ರಾಜ್ಯ ಗುಜರಾತ್‌ನಲ್ಲಿ 2002ರಲ್ಲಿ ಸಾವಿರಕ್ಕೂ ಹೆಚ್ಚು ಮುಸ್ಲಿಮರ ಹತ್ಯೆಗೆ ಕಾರಣರಾಗಿದ್ದಾರೆ. ಅಲ್ಪಸಂಖ್ಯಾಕರ ಪರಮ ದ್ವೇಷಿ ಈತ. ದೇಶದಲ್ಲಿ ಅತ್ಯಂತ ಭಯಾನಕವಾದ ಧಾರ್ಮಿಕ ರಾಷ್ಟ್ರೀಯವಾದ ಹುಟ್ಟು ಹಾಕಿದ್ದಾರೆ. ಯೋಗಿ ಆದಿತ್ಯನಾಥ್‌, ಸಾಧ್ವಿ ಪ್ರಜ್ಞಾ ಸಿಂಗ್‌ರಂಥ ಧಾರ್ಮಿಕ ಅಸಹಿಷ್ಣುಗಳನ್ನು ಮೋದಿಯವರ ಪಕ್ಷ ರಕ್ಷಿಸುತ್ತಿದೆ, ಬೆಂಬಲಿಸುತ್ತಿದೆ. ಹೆಂಗಸರ ರಕ್ಷಣೆಯ ವಿಷಯದಲ್ಲಿ ಮೋದಿ ಮತ್ತವರ ಸರ್ಕಾರದೊಳಗಿನ ಮಂದಿಗೆ ಕಾಳಜಿ ಇಲ್ಲ. ಮಹಿಳೆಯಾದರೂ, ಬಾಂಗ್ಲಾ ಪ್ರಧಾನಿ ಭಯೋತ್ಪಾದನೆ ನಿಯಂತ್ರಣದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಮೋದಿ, ಮಹಿಳೆಯ ಸಾಮರ್ಥ್ಯವನ್ನು ಅವಮಾನಿಸುವ ಕೆಲಸ ಮಾಡಿದ್ದಾರೆ. ಮೋದಿ ದೇಶದಲ್ಲಿ ಎಲ್ಲ ರಂಗಗಳಲ್ಲೂ ವಿಪ್ಲವ ಸೃಷ್ಟಿಸಿದ್ದಾರೆ.

ಡಿಮಾನಿಟೈಸೇಶನ್‌ ಮೂಲಕ ಭಾರತವನ್ನು ಬೀದಿಗೆ ತಂದು ನಿಲ್ಲಿಸಿದ್ದಾರೆ. ದೇಶದ ಆರ್ಥಿಕತೆ ಮುರಿದುಬಿದ್ದಿದೆ. ಶಿಕ್ಷಣರಂಗವನ್ನು ಕೂಡ ಕುಲಗೆಡಿಸಿದ್ದಾರೆ. ಎಲ್ಲ ಶಿಕ್ಷಣ ಸಂಸ್ಥೆಗಳಲ್ಲೂ ಭಾಜಪ ಮತ್ತು ಹಿಂದುತ್ವದ ಪ್ರಚಾರಕರನ್ನು ದೊಡ್ಡ ಹುದ್ದೆಯಲ್ಲಿ ಕೂರಿಸಲಾಗಿದೆ. ಎಸ್‌. ಗುರುಮೂರ್ತಿಯವರನ್ನು ರಿಸರ್ವ್‌ ಬ್ಯಾಂಕಿನ ಸಲಹಾ ಸಮಿತಿಗೆ ನೇಮಕ ಮಾಡಿದ್ದು ಇದಕ್ಕೊಂದು ಉದಾಹರಣೆ. ತಜ್ಞರನ್ನು, ಪಂಡಿತರನ್ನು ಎಲ್ಲ ಸರ್ಕಾರಿ ಸಂಸ್ಥೆಗಳಿಂದ ಹೊರಹಾಕಲಾಗಿದೆ. ಮೋದಿ ಭಟ್ಟಂಗಿಗಳನ್ನು ಬೆಳೆಸುತ್ತಿದ್ದಾರೆ. ಪ್ಲಾಸ್ಟಿಕ್‌ ಸರ್ಜರಿ ಭಾರತದಲ್ಲಿ ಪ್ರಾರಂಭವಾಯಿತು ಎಂಬಂಥ ಹೇಳಿಕೆ ಕೊಟ್ಟು ನಗೆಪಾಟಲಿಗೀಡಾಗಿದ್ದಾರೆ. ಒಟ್ಟಾರೆ ಹೇಳುವುದಾದರೆ ಮೋದಿ ಎಲ್ಲಾ ವಿಷಯಗಳಲ್ಲೂ ನಪಾಸು.

ವಾಸ್ತವ ಏನು?: ಗುಜರಾತ್‌ನಲ್ಲಿ ಗೋಧಾÅ ಬಳಿ ರೈಲಿಗೆ ಬೆಂಕಿಹಚ್ಚಿ 59 ಹಿಂದೂ ಕಾರ್ಯಕರ್ತರನ್ನು ಕೊಂದದ್ದಕ್ಕೆ ಪ್ರತಿಕ್ರಿಯೆಯಾಗಿ 2002ರ ಗಲಭೆ ನಡೆಯಿತೆಂಬುದನ್ನು ನಾವು ನೆನಪಿಡಬೇಕು. ಪೊಲೀಸ್‌ ವ್ಯವಸ್ಥೆ ಬಳಸಿಯೂ ನಿಯಂತ್ರಿಸಲಾಗದ ಮಟ್ಟಕ್ಕೆ ದೊಂಬಿ ಬೆಳೆದಾಗ ಆಗ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಹತ್ತಿರದ ಮೂರು ರಾಜ್ಯಗಳಿಗೆ ಸಹಾಯ ಕೋರಿ ತಕ್ಷಣ ಪತ್ರ ಬರೆದರು. ಅಶೋಕ್‌ ಗೆಹೊÉàಟ್‌, ವಿಲಾಸ್‌ ರಾವ್‌ ದೇಶ್‌ಮುಖ್‌ ಮತ್ತು ದಿಗ್ವಿಜಯ ಸಿಂಗ್‌ – ಈ ಮೂರೂ ಕಾಂಗ್ರೆಸ್‌ ಮುಖ್ಯಮಂತ್ರಿಗಳಿಂದ ಬಂದದ್ದು ನಕಾರವೇ. ಗುಜರಾತ್‌ನಲ್ಲಿ ನಡೆದ ಹತ್ಯಾಕಾಂಡದ ವಿಷಯದಲ್ಲಿ ಮೋದಿ ಮಾತಾಡಲೇ ಇಲ್ಲ ಎಂದು ಬರೆಯುವ ಟೈಮ್‌ ಲೇಖಕ, ಮೋದಿ ಆ ಘಟನೆಯ ಕುರಿತು ಬರೆದ ಬ್ಲಾಗ್‌ ಬರಹಗಳನ್ನು ಓದಿಲ್ಲ ವೆಂದು ಕಾಣುತ್ತದೆ! ಇನ್ನು ಮೋದಿ ಸರ್ಕಾರ ಮಹಿಳೆಯರ ವಿರುದ್ಧ ನಿಂತಿದೆ ಎಂಬುದು ಅತ್ಯಂತ ಬಾಲಿಶ ಹೇಳಿಕೆಯಾ ಗುತ್ತದೆ. ಈ ಸರ್ಕಾರದಲ್ಲಿ ಮಹಿಳಾ ಸಚಿವರಿದ್ದಾರೆ. ಅತ್ಯಂತ ಮಹತ್ವದ ಖಾತೆಯಾದ ರಕ್ಷಣೆಯನ್ನು ಕೂಡ ಮಹಿಳೆಯೇ ನಿಭಾಯಿಸುತ್ತಿದ್ದಾರೆ. ಮುಸ್ಲಿಂ ಮಹಿಳೆೆಯರಿಗಾಗಿ ತ್ರಿವಳಿ ತಲಾಖ್‌ನಂಥ ಪೈಶಾಚಿಕ ಕಾನೂನನ್ನು ಮೋದಿ ಸರ್ಕಾರ ತೆಗೆದು ಹಾಕಿದೆ. ಉಜ್ವಲಾ ಮೂಲಕ ಬದುಕನ್ನು ಉತ್ತಮಗೊಳಿಸಿಕೊಂಡ ಮಳೆಯರಂತೂ ಕೋಟ್ಯಂತರ.

ಆರ್ಥಿಕತೆಯ ವಿಷಯಕ್ಕೆ ಬರೋಣ. ಡಿಮಾನಿಟೈಸೇಶನ್‌ ಘೋಷಣೆಯಾದ ದಿನದಿಂದಲೂ ಮೋದಿ ವಿರೋಧಿಗಳು ಅದರ ವಿರುದ್ಧ ಬಗೆ ಬಗೆಯ ಪ್ರತಿಭಟನೆಗಳನ್ನು ಮಾಡುತ್ತಲೇ ಬಂದಿದ್ದಾರೆ. ಎಟಿಎಂಗಳ ಮುಂದೆ ದುಡ್ಡು ಕೊಟ್ಟು ಕ್ಯೂ ನಿಲ್ಲಿಸುವ ತಂತ್ರವೂ ನಡೆದಿತ್ತೆನ್ನಿ! ಆದರೆ ಡಿಮಾನಿಟೈಸೇಶನ್‌ ಕ್ರಮದಿಂದ ದೇಶದ ಆರ್ಥಿಕತೆಗೆ ಹೊಡೆತ ಬಿದ್ದದ್ದು ಹೇಗೆ ಎಂಬುದು ಇಂದಿಗೂ ನಮಗೆ ಅರ್ಥವಾಗಿಲ್ಲ! ಹಳೆ ನೋಟುಗಳನ್ನು ಬ್ಯಾಂಕಿನಲ್ಲಿ ಪಾವತಿಸಿ ಹೊಸ ನೋಟು ಪಡೆಯಲು ಸರ್ಕಾರ ಐವತ್ತು ದಿನಗಳ ಅವಕಾಶ ಕೊಟ್ಟಿತ್ತು; ಮತ್ತೂ ಮೂರು ತಿಂಗಳ ಅವಧಿಗೆ ಆ ಸೌಕರ್ಯವನ್ನು ವಿಸ್ತರಿಸಿತು. ಹಾಗಿದ್ದರೂ ಅದರಿಂದ ಆರ್ಥಿಕ ನಷ್ಟ ಆಗುವುದು ಯಾರಿಗೆ? ಲೆಕ್ಕವಿಲ್ಲದಷ್ಟು ನೋಟುಗಳನ್ನು ಕಳ್ಳತನದಿಂದ ಸಂಗ್ರಹಿಸಿಟ್ಟವರಿಗೆ ಮಾತ್ರ ಅಲ್ಲವೇ?

ಡಿಮಾನಿಟೈಸೇಶನ್‌ನಿಂದಾಗಿ ದೇಶಕ್ಕೆ ಯಾವ ಬಗೆಯ ಆರ್ಥಿಕ ಲಾಭಗಳಾದವು ಎಂಬುದನ್ನು ಎಸ್‌. ಗುರುಮೂರ್ತಿಯವರು ವಿಸ್ತಾರವಾಗಿ ವಿವರಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಹುಡುಕಿದರೆ ಈ ವಿಡಿಯೋ ಸಿಗುತ್ತದೆ. ಆದರೆ ಟೈಮ್‌ ಲೇಖಕನ ಪ್ರಕಾರ ಈ ಗುರುಮೂರ್ತಿಯೇ ಹೆಡ್ಡ! ಪಿ. ಚಿದಂಬರಂ ಎಂಬ ಯುಪಿಎ ಸರ್ಕಾರದ ಅರ್ಥ ಸಚಿವನ ನೂರಾರು ಕೋಟಿ ರೂಪಾಯಿಗಳ ಹಗರಣಗಳನ್ನು ಎಳೆ ಎಳೆಯಾಗಿ ಹೊರಗೆಳೆದ ಗುರುಮೂರ್ತಿ ಅಮೆರಿಕದ ಕಾದಂಬರಿಕಾರನ ಪ್ರಕಾರ ಮೂರ್ಖ. ಹೇಗಿದೆ?

ಯಾರೀ ಲೇಖಕ?: ಟೈಮ್‌ ವಾರಪತ್ರಿಕೆಯಲ್ಲಿ ಮೋದಿಯನ್ನು ಡಿವೈಡರ್‌ ಎಂದು ಕರೆದು ಲೇಖನ ಬರೆದಾತನ ಹೆಸರು ಆತಿಶ್‌ ತಸೀರ್‌. ಈತ ಪಾಕಿಸ್ತಾನದ ರಾಜಕಾರಣಿ ಸಲ್ಮಾನ್‌ ತಸೀರ್‌ ಹಾಗೂ ಭಾರತೀಯ ಪತ್ರಕರ್ತೆ ತವ್‌ಲೀನ್‌ ಸಿಂಗ್‌ ಮಗ. ಹುಟ್ಟಿದ್ದು ಇಂಗ್ಲೆಂಡಿನಲ್ಲಿ. ಬೆಳೆದಿದ್ದು ಭಾರತ, ಇಂಗ್ಲೆಂಡ್‌, ಪಾಕಿಸ್ತಾನಗಳಲ್ಲಿ. ಓದಿದ್ದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಶಾಲೆಗಳಲ್ಲಿ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗವರ್ನರ್‌ ಆಗಿದ್ದ ಈತನ ತಂದೆ ಭಾರತವನ್ನು ಅದು ಯಾವ ಪರಿ ದ್ವೇಷಿಸುತ್ತಿದ್ದನೆಂದರೆ ಅದೊಮ್ಮೆ ಇಸ್ರೋ ಹಾರಿಸಿದ್ದ ರಾಕೆಟ್‌ ಒಂದು ವಿಫ‌ಲವಾಗಿ ಬಂಗಾಳ ಕೊಲ್ಲಿಯಲ್ಲಿ ಬಿದ್ದಾಗ, ನಿಮಗ್ಯಾಕ್ರೋ ಈ ಜ್ಞಾನ-ತಂತ್ರಜ್ಞಾನ ಎಲ್ಲ? ಬಾಲಿವುಡ್‌ ಸಿನೆಮಾಗಳನ್ನು ನಿರ್ಮಿಸಿಕೊಂಡು ತೆಪ್ಪಗಿರಿ – ಎಂದು ಮೂರನೇ ದರ್ಜೆಯ ಭಾಷೆಯಲ್ಲಿ ಬರೆದಾತ ಸಲ್ಮಾನ್‌. ತನ್ನ ತಂದೆ ಭಾರತದ ಪ್ರತಿಯೊಂದು ಅಂಶವನ್ನೂ ನಖಶಿಖಾಂತ ದ್ವೇಷಿಸುತ್ತಿದ್ದಾನೆಂದು ಮಗ ಆತಿಶನೇ ಬರೆದುಕೊಂಡಿದ್ದಾನೆ. ಅಂಥ ಅಪ್ಪನ ಮಗ, ಜೀವನವೆಲ್ಲ ಭಾರತವನ್ನು ಗೇಲಿ ಮಾಡುವ ಎಡಪಂಥೀಯ ಲ್ಯೂಟೆನ್‌ ಪಂಡಿತರ ತೆಕ್ಕೆಯಲ್ಲೇ ಬೆಳೆದ ಹುಡುಗ ಭಾರತದ ಬಗ್ಗೆ ಹೇಗೆ ಯೋಚಿಸಬಹುದು, ಏನು ಬರೆಯಬಹುದು, ಊಹಿಸುವುದು ಕಷ್ಟವಲ್ಲವಷ್ಟೆ?

ಲೇಖನದ ಸ್ಪೆಷಾಲಿಟಿ!: ಈತ ಟೈಮ್‌ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಏಕ ಸೂತ್ರವಿಲ್ಲ. ಮೋದಿಯನ್ನು ಯದ್ವಾ ತದ್ವಾ ಬಯ್ಯಬೇಕೆಂದೇ ಪಟ್ಟು ಹಾಕಿ ಗೀಚಿದ ಲೇಖನವದು. ಹೇಳುವ ಯಾವ ಮಾತಿಗೂ ಅಲ್ಲಿ ಅಂಕಿ-ಅಂಶಗಳ, ದಾಖಲೆಗಳ ಆಧಾರವಿಲ್ಲ. ಮೋದಿ ಭಾರತದ ಆರ್ಥಿಕತೆಯನ್ನು ಬುಡಮೇಲು ಮಾಡಿದ್ದಾರೆ ಎಂದು ಈತ ಬರೆದ ಕಾರಣಕ್ಕೇ ನಾವದನ್ನು ನಂಬಬೇಕು! ಹಾಗಿದೆ ಲೇಖಕನ ವರಸೆ! 2002ರ ಹತ್ಯಾಕಾಂಡದ ಬಗ್ಗೆ ಉದ್ದುದ್ದ ಬರೆಯುವ ಪಂಡಿತ, ಸಿಖVರ ಮಾರಣ ಹೋಮದ ಬಗ್ಗೆ ಮೌನವಾಗುತ್ತಾನೆ. ಮೋದಿಯ ಆಡಳಿತದ ಸಮಯದಲ್ಲಿ 40 ಮುಸ್ಲಿಮರನ್ನು ಗೋರಕ್ಷಕರು ಕೊಂದರು ಎನ್ನುವ ಬುದ್ಧಿವಂತ, ಆ ನಲವತ್ತೂ ಮಂದಿ ಹಸುಗಳನ್ನು ಕದ್ದೊಯ್ಯುವಾಗ ಸಿಕ್ಕಿಬಿದ್ದವರು ಎಂಬ ಅಂಶವನ್ನು ಮರೆಮಾಚುತ್ತಾನೆ. ಭಾರತದಲ್ಲಿ ಪ್ರತಿ ವರ್ಷ 8000ಕ್ಕೂ ಹೆಚ್ಚು ಹಸುಗಳ ಕಳ್ಳತನ ಪ್ರಕರಣಗಳು ದಾಖಲಾಗುತ್ತವೆ ಎಂಬುದನ್ನು ಅವನು ಹೇಳುವ ಗೋಜಿಗೇ ಹೋಗುವುದಿಲ್ಲ.

ಭಾಜಪದ ಯುವ ರಾಜಕಾರಣಿ ತೇಜಸ್ವೀ ಸೂರ್ಯರ ಮಾತನ್ನು ತಿರುಚಿ ಹೊಸ ಅರ್ಥ ಹೊಳೆಸುವ ಆತಿಶ್‌ ಎಂಬ ಜಾಣ, ಓವೈಸಿಯಂಥ ವಿಧ್ವಂಸಕರ ಹೇಳಿಕೆಗಳನ್ನು ನೆನಪು ಮಾಡಿಕೊಳ್ಳುವ ಕಷ್ಟ ತೆಗೆದುಕೊಳ್ಳುವುದಿಲ್ಲ. ಕಾದಂಬರಿಕಾರನಾದ ಆತಿಶ್‌, ಈ ಲೇಖನವನ್ನು ಕೂಡ ಯಾವುದೋ ದಂತಗೋಪುರದಲ್ಲಿ ಕೂತು ಗೀಚಿದಂತಿದೆ. ಇಂಗ್ಲೀಷ್‌ ಭಾಷೆಯಲ್ಲಿರುವ ಎಲ್ಲ ಋಣಾತ್ಮಕ ಶಬ್ದಗಳನ್ನೂ ಒಂದೇ ಕಡೆ ನೋಡಬೇಕೆಂದರೆ ಈ ಲೇಖನವನ್ನು ಓದಬಹುದು!

“ಟೈಮ್‌’ನ ತಂತ್ರವೇನು?: ಒಂದಾನೊಂದು ಕಾಲದಲ್ಲಿ ಅಮೆರಿಕದ ಪ್ರತಿಷ್ಠಿತ ಪತ್ರಿಕೆಯೆಂಬ ಹೆಗ್ಗಳಿಕೆ ಗಳಿಸಿದ್ದ ಟೈಮ್‌ ಮೊದಲಿಂದಲೂ ಭಾರತ ಮತ್ತು ಚೀನಾಗಳ ಮೇಲೆ ಕೆಂಡ ಕಾರುತ್ತಲೇ ಬಂದಿದೆ. ಪ್ರತಿ ಲೋಕಸಭಾ ಚುನಾವಣೆಯ ಸಮಯದಲ್ಲೂ ಭಾರತದ ಪ್ರಧಾನಿಗಳನ್ನು ಋಣ ಛಾಯೆ ಯಲ್ಲೇ ತೋರಿಸುವುದು ಇದರ ಖಯಾಲಿ. ಮನಮೋಹನ್‌ ಸಿಂಗ್‌ರ ಬಗ್ಗೆ ಅಂಡರ್‌ ಅಚೀವರ್‌ ಎಂದ ಪತ್ರಿಕೆಯೂ ಇದೇ.
ಸದ್ಯ ಮೋದಿಯವರು ಭಾರತ ಮಾತ್ರವಲ್ಲ, ಜಾಗತಿಕ ಮಟ್ಟದ ಜನಪ್ರಿಯ ನಾಯಕ. ಅವರ ಬಗ್ಗೆ ಏನೇ ಬರೆದರೂ ಅದು ಮಾರಾಟವಾಗುತ್ತದೆ. ಮೋದಿಯ ಬಗ್ಗೆ ಬರೆದದ್ದನ್ನು ಜನ ಮುಗಿಬಿದ್ದು ಓದುತ್ತಾರೆ. ಒಳ್ಳೆಯದಕ್ಕಿಂತ ಕೆಟ್ಟದ್ದನ್ನು ಜನ ಹೆಚ್ಚು ಓದುತ್ತಾರೆ. ರೋಚಕವಾಗಿ ವರ್ಣಮಯವಾಗಿ ವೈಭವೀಕ‌ರಿಸಿ ಸುಳ್ಳು, ಉತ್ಪ್ರೇಕ್ಷೆಗಳನ್ನು ಬರೆದರೆ ಹುಚ್ಚೆದ್ದು ಓದುತ್ತಾರೆ. ಮೈಗೆ ಭೂತ ಬಡಿದಂತೆ ಅಂಥ ಕೆಟ್ಟದ್ದನ್ನು ಜನ ಹಂಚಿಕೊಳ್ಳುತ್ತಾರೆ ಕೂಡ. ಭಾರತದೊಳಗೆ ತನ್ನ ಮಾರ್ಕೆಟ್‌ ಹುಡುಕಿಕೊಳ್ಳಲು ಗಾಳ ಹಾಕುತ್ತಿರುವ ಟೈಮ್‌ ಪತ್ರಿಕೆಗೆ ಸಿಕ್ಕಿದ್ದು ಈ ಮೋದಿ ವಿರೋಧವೆಂಬ ಮೀನು. ಈ ಸಲವಂತೂ ಟೈಮ್‌, ಕೇವಲ ಯುರೋಪ್‌ನಿಂದ ಮಾತ್ರವಲ್ಲ ಭಾರತದ ಮೋದಿ ದ್ವೇಷಿಗಳಿಂದಲೂ ಒಂದಷ್ಟು ಗಂಜಿಯನ್ನು ಪಡೆದಿರುವ ಸಂಭವ ಉಂಟೇ ಉಂಟು. ಮುಂದಿನ ಸೂಪರ್‌ ಪವರ್‌ ಆಗಿ ಭಾರತ ಉದಿಸುವುದನ್ನು ಟೈಮ್‌ ಪತ್ರಿಕೆಯಾಗಲೀ, ಅದರ ಅಮೆರಿಕನ್‌ ಮತ್ತು ಐರೋಪ್ಯ ಓದುಗರಾಗಲೀ ಮೆಚ್ಚುವುದಿಲ್ಲ ಎಂಬ ಅಂಶವನ್ನೂ ನಾವು ಗಮನಿಸಬೇಕು.

ಮೋದಿಯನ್ನು ಋಣಾತ್ಮಕವಾಗಿ ತೋರಿಸುತ್ತಲೇ ಜನಪ್ರಿಯತೆಯ ಏಣಿಯನ್ನು ಹತ್ತಿದ ಒಂದಷ್ಟು ಮಂದಿ ಇದ್ದಾರೆ. ಧ್ರುವ್‌ ರಾಟೀ ಅಂಥವರಲ್ಲೊಬ್ಬ. ಮೋದಿಯನ್ನು ತೆಗಳಿ ನೂರಾರು ವಿಡಿಯೋಗಳನ್ನು ಮಾಡಿರುವ ಈತ, ಹೇಳುವುದರಲ್ಲಿ 99% ಅಂಶಗಳು ಸುಳ್ಳು! “ಭಾರತಕ್ಕೆ ಬಂದರೆ ನನ್ನನ್ನು ಹಲವು ಪ್ರಕರಣಗಳಲ್ಲಿ ಸಿಕ್ಕಿಸಿ ಜೈಲಿಗೆ ಕಳಿಸಬಹುದು. ಹಾಗಾಗಿ ವಿದೇಶದಲ್ಲಿದ್ದೇನೆ ಎನ್ನುತ್ತಾನೀತ! ಭಾರತದಿಂದ ಹೊರಗೆ ನಿಂತು ಈ ದೇಶವನ್ನೂ, ಈ ದೇಶದ ಪ್ರಧಾನಿಯನ್ನೂ ಬಯ್ಯುವವರಿಗೆ ಇಂಥ ಅನುಕೂಲತೆಯೂ ಇದೆ ನೋಡಿ! ಹಾಗಾಗಿ ಭಾರತದ ಗಡಿಯಿಂದ ಹೊರಗೆ ನಿಂತು ಭಾರತದ ಮೇಲೆ ಉಗುಳುವವರನ್ನು ನಾವೂ ಸ್ವಲ್ಪ ಉಪೇಕ್ಷೆ ಮಾಡುವುದು ಒಳ್ಳೆಯದೇನೋ.

-ರೋಹಿತ್‌ ಚಕ್ರತೀರ್ಥ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇನ್ನು ಮುಂದೆ ರಸ್ತೆ ಶುಲ್ಕ ಕಟ್ಟಲು ವಾಹನಗಳು ಸಾಲುಗಟ್ಟಿ ನಿಲ್ಲಬೇಕಿಲ್ಲ. ಡಿ. 1ರಿಂದ ಬಹುತೇಕ ಎಲ್ಲ ಟೋಲ್‌ಗ‌ಳಲ್ಲಿ"ಫಾಸ್ಟ್ಯಾಗ್‌'...

  • ಥಿಯೇಟರ್‌ಗಳಲ್ಲಿ ಸಾಮೂಹಿಕ ವೀಕ್ಷಣೆಯ ವಿಷಯವಾಗಿದ್ದ ಮನೋರಂಜನೆಯನ್ನು ಮನೆಯೊಳಗೆ ಸಾಂಸಾರಿಕ ವೀಕ್ಷಣೆಯ ಮಟ್ಟಕ್ಕೆ ಕರೆತಂದದ್ದು ದೂರದರ್ಶನ ಅಥವಾ ಟೆಲಿವಿಷನ್‌....

  • ಕಲ್ಯಾಣ ಕರ್ನಾಟಕಕ್ಕೆ ಸುವರ್ಣ ಕಾಲ. ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ಬಳಿಕ ರಾಜ್ಯದ 6ನೇ ನಾಗರಿಕ ವಿಮಾನ ನಿಲ್ದಾಣ ಕಲಬುರಗಿಯಲ್ಲಿ ಉದ್ಘಾಟನೆಗೆ...

  • ಬೆಲೆ ಏರಿಕೆ, ಜೀವನ ಮಟ್ಟ, ಕನಿಷ್ಠ ಸಂಬಳ/ಕೂಲಿ ತಲಾ ಆದಾಯ ಇವೆಲ್ಲಾ ಒಂದನ್ನೊಂದು ಹೊಸೆದು ನಿಂತ ಬಳ್ಳಿಗಳಂತೆ. ಹಲವಾರು ಬಾರಿ ಇವುಗಳ ಪರಸ್ಪರ ಹಾವು ಏಣಿ ಆಟದ ಕರಾಮತ್ತು...

  • ಅಧಿವೇಶನಗಳು ನಡೆದು ಬಂದ ಹಾದಿ ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ...

ಹೊಸ ಸೇರ್ಪಡೆ