ಹರ್ಯಾಣ ವಿಧಾನಸಭಾ ಕಣ ಯಾರಿಗೆ ಜೈ ಅಂತಾರೆ ಜನ?


Team Udayavani, Oct 16, 2019, 5:54 AM IST

u-22

ಇದೇ ತಿಂಗಳ 21ನೇ ತಾರೀಖಿನಂದು ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ರಾಜಕೀಯ ಪಕ್ಷಗಳೆಲ್ಲ ಮತಬೇಟೆಗೆ ಸಜ್ಜಾಗಿವೆ. ಇದರೊಟ್ಟಿಗೆ ಒಳಜಗಳಗಳು, ಒಳ ಒಪ್ಪಂದಗಳೂ ಸದ್ದು ಮಾಡುತ್ತಿವೆ. 90 ಸ್ಥಾನಗಳ ವಿಧಾನಸಭೆಯಲ್ಲಿ ಈ ಬಾರಿಯೂ ದಿಗ್ವಿಜಯ ಪಡೆಯುವ ಉತ್ಸಾಹದಲ್ಲಿ ಆಡಳಿತಾರೂಢ ಬಿಜೆಪಿಇದೆ.ಅಖಾಡದಲ್ಲಿ ಕಾಂಗ್ರೆಸ್‌, ಇಂಡಿಯನ್‌ ನ್ಯಾಷನಲ್‌ ಲೋಕ ದಳ(ಐಎನ್‌ಎಲ್‌ಡಿ) ಮತ್ತು ಶಿರೋಮಣಿ ಅಕಾಲಿ ದಳ ಕೂಡ ಇವೆ. ಆದರೆ ಈ ಬಾರಿ ನೇರಾನೇರ ಸ್ಪರ್ಧೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್‌ನ ನಡುವೆಯೇ. ಈ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರ ಜೋರಾಗಿದ್ದು, ಜಾಟ್‌ ಮತ್ತು ಜಾಟೇತರ ಮತಗಳ ನಡುವಿನ ಕದನ ಎಂದೇ ಬಣ್ಣಿಸಲಾಗುತ್ತಿದೆ.

ಹೇಗಿದೆ ಬಿಜೆಪಿ-ಕಾಂಗ್ರೆಸ್‌ ಸ್ಥಿತಿ?
ಬಿಜೆಪಿ ಈ ಬಾರಿ 75ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿ ಇರಿಸಿಕೊಂಡಿದೆ. 2014ರ ವಿಧಾನಸಭಾ ಚುನಾವಣೆಯಲ್ಲಿ ಅದು 47 ಸ್ಥಾನಗಳನ್ನು ಗೆದ್ದಿತ್ತು. ಈ ವರ್ಷ ಜಿಂದ್‌ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದ ನಂತರ ಪಕ್ಷದ ಸ್ಥಾನಗಳು 48ಕ್ಕೆ ಏರಿವೆ. ಇದೆಲ್ಲಕ್ಕಿಂತ ಮುಖ್ಯವಾಗಿ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹರ್ಯಾಣದ ಎಲ್ಲಾ 10 ಸ್ಥಾನಗಳಲ್ಲೂ ಗೆಲುವು ಸಾಧಿಸಿತ್ತು. ಹೀಗಾಗಿ, ಅಲ್ಲಿ ಬಿಜೆಪಿಯದ್ದೇ ಅಲೆ ಇದೆ ಎನ್ನುತ್ತಾರೆ ವಿಶ್ಲೇಷಕರು. ಇನ್ನು ಕಾಂಗ್ರೆಸ್‌ ವಿಷಯಕ್ಕೆ ಬಂದರೆ, ಅದಕ್ಕೆ ಒಳಜಗಳದ್ದೇ ದೊಡ್ಡ ಸಮಸ್ಯೆಯಾಗಿದೆ. ಟಿಕೆಟ್‌ ಹಂಚಿಕೆಯ ವಿಷಯದಲ್ಲಿ ಆರಂಭವಾದ ಅಸಮಾಧಾನ ಇನ್ನೂ ಶಮನವಾಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಹರ್ಯಾಣ ಕಾಂಗ್ರೆಸ್‌ ಮುಖ್ಯಸ್ಥರಾಗಿದ್ದ ಅಶೋಕ್‌ ತನ್ವರ್‌ ಟಿಕೆಟ್‌ ಹಂಚಿಕೆಯ ವಿಚಾರದಲ್ಲಿ ಬೇಸರಗೊಂಡು ಪಕ್ಷದಿಂದ ಹೊರಬಂದಿದ್ದಷ್ಟೇ ಅಲ್ಲದೇ, ಈಗ ಕಾಂಗ್ರೆಸ್‌ ಮತ್ತು ಮಾಜಿ ಮುಖ್ಯಮಂತ್ರಿ ಭೂಪಿಂದರ್‌ ಸಿಂಗ್‌ ಹೂಡಾ ಹಾಗೂ ಅವರ ಕುಟುಂಬದ ವಿರುದ್ಧವೂ ತೀವ್ರ ವಾಗ್ಧಾಳಿ ಆರಂಭಿಸಿದ್ದಾರೆ. ಟಿಕೆಟ್‌ ಹಂಚಿಕೆ ಸಮಯದಲ್ಲಿ ಸೋನಿಯಾ ಗಾಂಧಿಯವರ ನಿವಾಸದ ಮುಂದೆ ಪ್ರತಿಭಟಿಸಿದ್ದ ಅಶೋಕ್‌ ತನ್ವರ್‌, “ಟಿಕೆಟ್‌ಗಳನ್ನು ಹಂಚಲಾಗುತ್ತಿಲ್ಲ, ಮಾರಲಾಗುತ್ತಿದೆ’ ಎಂದು ಆರೋಪಿಸಿದ್ದರು. ಅಲ್ಲದೇ “ಕೆಲವರು ಬರೀ ವಿದೇಶದಲ್ಲಿ ತಿರುಗಾಡಿಕೊಂಡಿದ್ದು, ಚುನಾವಣಾ ಸಮಯದಲ್ಲಿ ಮಾತ್ರ ದೇವರಂತೆ ಪ್ರತ್ಯಕ್ಷರಾಗುತ್ತಾರೆ’ ಎಂದು ಪರೋಕ್ಷವಾಗಿ ರಾಹುಲ್‌ ಗಾಂಧಿಯ ಮೇಲೂ ಹರಿಹಾಯುತ್ತಿದ್ದಾರೆ. ಹರ್ಯಾಣದಲ್ಲಿ ಅಶೋಕ್‌ ತನ್ವರ್‌ರ ಬೆಂಬಲಿಗ ಪಡೆ ದೊಡ್ಡದಿದ್ದು, ಈ ವ್ಯಕ್ತಿ ಕಾಂಗ್ರೆಸ್‌ಗೆ ತಲೆನೋವಾಗಿ ಪರಿಣಮಿಸಿದ್ದಾರೆ.

ಜಾಟ್‌-ಜಾಟೇತರ ಮತಗಳ ಲೆಕ್ಕಾಚಾರ
ಮೀಸಲಾತಿಗಾಗಿ ಹೋರಾಟ ನಡೆಸಿ ಸದ್ದು ಮಾಡಿದ್ದ ಜಾಟರು ಹರ್ಯಾಣದಲ್ಲಿ 20-25 ಪ್ರತಿಶತದಷ್ಟಿದ್ದಾರೆ. ದಶಕಗಳಿಂದ ಹರ್ಯಾಣ ರಾಜಕೀಯ ಜಾಟ್‌ ಸಮುದಾಯದ ಹಿಡಿತದಲ್ಲಿತ್ತು.ಆದರೆ ಈ ಚಿತ್ರಣ 2014ರಲ್ಲಿ ಬದಲಾಯಿತು. ಹರ್ಯಾಣದ ಮೊದಲ ಜಾಟೇತರ ಮುಖ್ಯಮಂತ್ರಿಯಾಗಿ ಬಿಜೆಪಿಯ ಮನೋಹರ್‌ ಲಾಲ್‌ ಖಟ್ಟರ್‌ ಅಧಿಕಾರಕ್ಕೆ ಬಂದರು. ಖಟ್ಟರ್‌ ಅವರ ಜಯದ ಹಿಂದೆ, ಇತರೆ ಹಿಂದುಳಿದ ವರ್ಗಗಳಲ್ಲಿನ(ಒಬಿಸಿ) “ಕಡೆಗಣಿತ’ ಜಾತಿಗಳ ಬೆಂಬಲ ಪಡೆಯುವ ಮಾಸ್ಟರ್‌ಪ್ಲ್ರಾನ್‌ ಕೆಲಸ ಮಾಡಿತ್ತು. “ಖಾತ್ರಿ’ ಎಂಬ ಅಲ್ಪಸಂಖ್ಯಾತ ಮೇಲ್ಜಾತಿಗೆ ಸೇರಿದ ಮನೋಹರ್‌ ಲಾಲ್‌ ಖಟ್ಟರ್‌ ಅವರೂ ಜಾಟೇತರ ಮತಗಳನ್ನು ಸೆಳೆಯುವಲ್ಲಿ ಯಶಸ್ವಿಯಾದರು.

“”ಕಾಂಗ್ರೆಸ್‌ ಸರ್ಕಾರ ಸರ್ಕಾರಿ ನೇಮಕಾತಿಗಳು, ಕಲ್ಯಾಣ ಯೋಜನೆಗಳಲ್ಲೆಲ್ಲ ಎಸ್‌ಸಿಗಳಿಗೆ(ಮುಖ್ಯವಾಗಿ ಚಮ್ಮಾರ) ಹೆಚ್ಚು ಸಹಾಯ ಮಾಡುತ್ತಿತ್ತು. ಆದರೆ ಬಿಜೆಪಿ ವಾಲ್ಮೀಕಿ ಮತ್ತು ಧನಕ್‌(ನೇಕಾರರು) ಸಮುದಾಯಗಳ ಬಳಿ ಧಾವಿಸಿದೆ. ಈ ಸಮುದಾಯಗಳನ್ನು ಕಾಂಗ್ರೆಸ್‌ ಸರ್ಕಾರ ಕಡೆಗಣಿಸುತ್ತಾ ಬಂದಿತ್ತು” ಎನ್ನುತ್ತಾರೆ, ಮಹರ್ಷಿ ದಯಾನಂದ ವಿಶ್ವ ವಿದ್ಯಾಲಯದ ರಾಜಕೀಯ ವಿಜ್ಞಾನಿ ಡಾ| ರಾಜಿಂದರ್‌ ಶರ್ಮಾ.

ಬಿಜೆಪಿ ಈಗ ತನ್ನ ಅಸ್ತಿತ್ವವನ್ನು ಹರ್ಯಾಣದಾದ್ಯಂತ ವಿಸ್ತರಿಸುತ್ತಿದೆ. ಅದರಲ್ಲೂ ಒಬಿಸಿಗಳು ಅಧಿಕ ಸಂಖ್ಯೆಯಲ್ಲಿರುವ ಹಿಸಾರ್‌ ಮತ್ತು ಭಿವಾನಿ ಜಿಲ್ಲೆಗಳಲ್ಲಿ ಮತ್ತು ಎಸ್‌ಸಿ/ಎಸ್‌ಟಿ ಅಧಿಕವಿರುವ ಉತ್ತರದ ಜಿಲ್ಲೆಗಳಲ್ಲಿ ಬಿಜೆಪಿ ಹೆಚ್ಚು ಸದ್ದು ಮಾಡಲಾರಂಭಿಸಿದೆ. ಈ ಬಾರಿಯೂ ತಾನು ಅಧಿಕಾರಕ್ಕೆ ಬಂದರೆ, ಪರಿಶಿಷ್ಟ ಜಾತಿಯ ಮನೆಗಳಿಗೆ ಮೇಲಾಧಾರ ಮುಕ್ತ ಸಾಲ ನೀಡುವುದಾಗಿಯೂ ಭರವಸೆ ನೀಡಿದೆ ಬಿಜೆಪಿ.

ಈ ಜಾತಿ ಲೆಕ್ಕಾಚಾರ ಬಿಜೆಪಿಯ ಪರವಾಗಿ ಅದ್ಭುತವಾಗಿ ಕೆಲಸ ಮಾಡಿದೆ. ಇದರ ಪ್ರತಿಫ‌ಲನವು 2019ರ ಲೋಕಸಭಾ ಚುನಾವಣೆಯ ಫ‌ಲಿತಾಂಶದಲ್ಲೂ ಕಾಣಿಸಿತ್ತು. 70 ಪ್ರತಿಶತದಷ್ಟು ಜಾಟೇತರ ಮೇಲ್ವರ್ಗ ಮತ್ತು ಒಬಿಸಿ ಮತಗಳ ಬೆಂಬಲ ಬಿಜೆಪಿಗೆ ಸಿಕ್ಕಿತು. ಆದಾಗ್ಯೂ, ಈ ಪಕ್ಷ ಜಾಟ್‌ ರಾಜಕೀಯನ್ನು ದಾಟಿ ಸಾಗಲು ಪ್ರಯತ್ನಿಸುತ್ತಿದೆಯಾದರೂ, ಈ ಲೋಕಸಭಾ ಚುನಾವಣೆಯಲ್ಲಿ ಜಾಟರೂ ಬಿಜೆಪಿಗೆ ಗಮನಾರ್ಹ ಬೆಂಬಲ ನೀಡಿದ್ದಾರೆ (50 ಪ್ರತಿಶತ ಜಾಟ್‌ ಮತಗಳು). ಕೇವಲ ಜಾತಿಯಷ್ಟೇ ಅಲ್ಲದೆ, ಖಟ್ಟರ್‌ರ ಅಭಿವೃದ್ಧಿ ರಾಜಕಾರಣ, ನರೇಂದ್ರ ಮೋದಿಯವರ ವರ್ಚಸ್ಸು ಹಾಗೂ ರಾಷ್ಟ್ರೀಯತೆಯ ವಿಚಾರಗಳೆಲ್ಲ ಹರ್ಯಾಣದ ಯುವಕರನ್ನು ಬಿಜೆಪಿಯೆಡೆಗೆ ಸೆಳೆಯುತ್ತಿವೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
“”ದೇಶಕ್ಕೆ ಅತಿಹೆಚ್ಚು ಸೈನಿಕರನ್ನು ಕಳುಹಿಸುವ ರಾಜ್ಯವಾಗಿರುವ ಹರ್ಯಾಣದಲ್ಲಿ ರಾಷ್ಟ್ರೀಯತೆಯ ಭಾವನೆ ಮೊದಲಿನಿಂದಲೂ ಅಧಿಕವಿದೆ. ಜಮ್ಮು-ಕಾಶ್ಮೀರದಿಂದ ಆರ್ಟಿಕಲ್‌ 370 ರದ್ದತಿಯ ವಿಚಾರವು ಹರ್ಯಾಣಿಗರ ಮನಗೆಲ್ಲುವಲ್ಲಿ ಬಿಜೆಪಿಗೆ ಮತ್ತಷ್ಟು ಸಹಕರಿಸುತ್ತಿದೆ” ಎನ್ನುತ್ತಾರೆ ರಾಜಿಂದರ್‌ ಶರ್ಮಾ .

ಹೂಡಾ ಕುಟುಂಬಕ್ಕೆ ದೊಡ್ಡ ಸವಾಲು
ಮೂರು ಬಾರಿ ಹರ್ಯಾಣದ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಸಂಸದರಾಗಿ, ಹರ್ಯಾಣದ ಪ್ರಮುಖ ಚಹರೆಯಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್‌ ನಾಯಕ ಭೂಪಿಂದರ್‌ ಹೂಡಾ ಈಗ ಅಗ್ನಿಪರೀಕ್ಷೆ ಎದುರಿಸುತ್ತಿದ್ದಾರೆ. ಜಾಟ್‌ ಬಾಹುಳ್ಯವಿರುವ ಸ್ವಕ್ಷೇತ್ರ ರೋಹಕ್‌ನಿಂದಲೇ ಈ ಬಾರಿ ಅವರು ಚುನಾವಣೆ ಎದುರಿಸಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಹೂಡಾ ಕುಟುಂಬಕ್ಕೆ ಭಾರೀ ಪೆಟ್ಟು ಬಿದ್ದಿದೆ. ಭೂಪಿಂದರ್‌ ಸಿಂಗ್‌ ಮತ್ತು ಅವರ ಮಗ ದೀಪೇಂದರ್‌ ಸಿಂಗ್‌ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೆದುರು ಸೋಲನುಭವಿಸಿದ್ದರು. ಹೂಡಾ ಮುಂದೀಗ ಎರಡು ಸವಾಲುಗಳಿವೆ. ಒಂದು ತಮ್ಮ ಶಕ್ತಿಯನ್ನು ಮರುಸ್ಥಾಪಿಸುವುದು ಮತ್ತು ಎರಡನೆಯದು ಪಕ್ಷವನ್ನು ಅಧಿಕಾರಕ್ಕೆ ತರುವುದು. ಏಕೆಂದರೆ, ತಮ್ಮ ಹೆಸರನ್ನೇ ಕಾಂಗ್ರೆಸ್‌ನ ಮುಂದಾಳುವಾಗಿ ಘೋಷಿಸಬೇಕೆಂದು ಹೈಕಮಾಂಡ್‌ ಮೇಲೆ ಅವರು ಒತ್ತಡ ಹಾಕಿದ್ದಾರೆ. ಒಲ್ಲದ ಮನಸ್ಸಿನಿಂದಲೇ ಕಾಂಗ್ರೆಸ್‌ ಒಪ್ಪಿಗೆ ನೀಡಿದೆ. ಹೀಗಾಗಿ, ಈ ಚುನಾವಣೆಯು ಹೂಡಾ ಪಾಲಿಗೆ ಮಾಡು ಇಲ್ಲವೇ ಮಡಿ ಎನ್ನುವಂತಾಗಿದೆ. ಇದರ ನಡುವೆಯೇ ಸಿಬಿಐ ಮತ್ತು ಇ.ಡಿ.ಯ ತೂಗುಗತ್ತಿಯೂ ಅವರ ತಲೆಯ ಮೇಲೆ ಇದೆ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ರಾಬರ್ಟ್‌ ವಾದ್ರಾ ಜತೆಗೆ ಭೂ ಒಪ್ಪಂದ ಮಾಡಿಕೊಂಡ ಆರೋಪ ಎದುರಿಸುತ್ತಿದ್ದು, ಭ್ರಷ್ಟಾಚಾರದ ಕಳಂಕವನ್ನು ತೊಳೆದುಕೊಳ್ಳಲು ಈಗಲೂ ಸಾಧ್ಯವಾಗಿಲ್ಲ.

ಪ್ರಾದೇಶಿಕ ಪಕ್ಷಗಳ ಸ್ಥಿತಿ ಹೇಗಿದೆ?
ಸರ್ಕಾರದ ಭಾಗವಾಗಿದ್ದ ಶಿರೋಮಣಿ ಅಕಾಲಿ ದಳ(ಎಸ್‌ಎಡಿ) ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲೇ ಬಿಜೆಪಿಯಿಂದ ದೂರವಾಗಿದೆ. ಶಿರೋಮಣಿ ಅಕಾಲಿ ದಳದ ಏಕೈಕ ಶಾಸಕ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿಬಿಟ್ಟರು. ಇದರಿಂದ ಮನನೊಂದ ಎಸ್‌ಎಡಿ ಮುಖ್ಯಸ್ಥ ಸುಖಬೀರ್‌ ಸಿಂಗ್‌ ಬಾದಲ್‌, ಬಿಜೆಪಿಯ ನಡೆಯನ್ನು “ಅನೈತಿಕ ಮತ್ತು ದುರದೃಷ್ಟಕರ’ ಎಂದು ಕರೆದು, ಮೈತ್ರಿಯಿಂದ ಹೊರಬಿದ್ದರು. ಆದರೆ, ಕೆಲ ವರದಿಗಳ ಪ್ರಕಾರ, ಬಿಜೆಪಿಯು ಟಿಕೆಟ್‌ ಹಂಚಿಕೆ ವಿಷಯದಲ್ಲಿ ತಮ್ಮ ಬೇಡಿಕೆಗೆ ಒಪ್ಪಲಿಲ್ಲ ಎಂಬುದೇ ಶಿರೋಮಣಿ ಅಕಾಲಿದಳದ ಮುನಿಸಿಗೆ ಮುಖ್ಯ ಕಾರಣ. ಈಗ ಶಿರೋಮಣಿ ಅಕಾಲಿದಳ ಐಎನ್‌ಎಲ್‌ಡಿಯೊಂದಿಗೆ ಕೈ ಜೋಡಿಸಿದೆ. ಇವೆರಡೂ ಪಕ್ಷಗಳು 2014ರಲ್ಲಿ ಜೊತೆಯಾಗಿ ವಿಧಾನಸಭಾ ಚುನಾವಣೆ ಎದುರಿಸಿದ್ದವು. ಆದರೆ 2017ರಲ್ಲಿ ಸಟ್ಲೆಜ್‌-ಯಮುನಾ ಲಿಂಕ್‌ ಕಾಲುವೆ ವಿಚಾರದಲ್ಲಿ ಮತಭೇದ ಎದುರಾಗಿ ಬೇರ್ಪಟ್ಟಿದ್ದವು. ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್‌ ಚೌಟಾಲಾ ಅವರ ಮಗ, ಐಎನ್‌ಎಲ್‌ಡಿ ಮುಖ್ಯಸ್ಥ ಅಭಯ್‌ ಸಿಂಗ್‌ ಚೌಟಾಲಾ, “ಐಎನ್‌ಎಲ್‌ಡಿ ಮತ್ತು ಶಿರೋಮಣಿ ಅಕಾಲಿ ದಳ ಪ್ರತ್ಯೇಕ ಪಕ್ಷಗಳಲ್ಲ, ಇದೊಂದು ಕುಟುಂಬ’ ಎಂದು
ಬಣ್ಣಿಸುತ್ತಿದ್ದಾರೆ.

ಆದರೆ ಐಎನ್‌ಎಲ್‌ಡಿಯಲ್ಲೂ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಕಳೆದ ವರ್ಷವಷ್ಟೇ ಚೌಟಾಲಾ ಕುಟುಂಬದಲ್ಲಿನ ಒಳಜಗಳ ತಾರಕಕ್ಕೇರಿದ್ದವು. ಅಂದಿನಿಂದ ಅದರ 10 ಶಾಸಕರು ಪಕ್ಷಾಂತರ ಮಾಡಿದ್ದಾರೆ(8 ಮಂದಿ ಬಿಜೆಪಿಗೆ, ಇಬ್ಬರು ಕಾಂಗ್ರೆಸ್‌ಗೆ). ಹೀಗೆ ಪಕ್ಷಾಂತರ ಮಾಡಿದವರಲ್ಲಿ ಬಹುತೇಕರು ಜಾಟ್‌ ನಾಯಕರಾಗಿದ್ದು, ಇವರೆಲ್ಲರೂ ಬೃಹತ್‌ ಜಾಟ್‌ ಬೆಂಬಲಿಗ ಪಡೆ ಹೊಂದಿದವರು! ಇನ್ನು ಇವಷ್ಟೇ ಅಲ್ಲದೇ, ಈ ಬಾರಿ ಮಾಯಾವತಿಯವರ ಬಹುಜನ ಸಮಾಜವಾದಿ ಪಕ್ಷವೂ ಅಖಾಡದಲ್ಲಿದೆ, ಜನನಾಯಕ ಜನತಾ ಪಾರ್ಟಿಯೊಂದಿಗೆ ಮೈತ್ರಿ ಮುರಿದುಕೊಂಡು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.

90 ಸ್ಥಾನಗಳಿಗಾಗಿ ನಡೆಯಲಿರುವ ಈ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ “ಅಬ್‌ ಕೀ ಬಾರ್‌, 75 ಪಾರ್‌'(ಈ ಬಾರಿ 75ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ) ಎಂಬ ಘೋಷಣೆ ಮೊಳಗಿಸುತ್ತಿದ್ದರೆ, ಕಾಂಗ್ರೆಸ್‌, ಐಎನ್‌ಎಲ್‌ಡಿ ಹಲವು ಸಂಕಷ್ಟಗಳಿಂದ ಒದ್ದಾಡುತ್ತಿವೆ.

2014ರ ಫ‌ಲಿತಾಂಶ
47+1 ಬಿಜೆಪಿ + ಶಿರೋಮಣಿ ಅಕಾಲಿ ದಳ
19 ಐಎನ್‌ಎಲ್‌ಡಿ
15 ಕಾಂಗ್ರೆಸ್‌
08 ಇತರೆ

ವಿಧಾನಸಭಾ ಚುನಾವಣೆ2019
ಅ. 21 ಮತದಾನ
ಅ. 24 ಫ‌ಲಿತಾಂಶ
90 ಒಟ್ಟು ಸ್ಥಾನ
46 ಬಹುಮತ

ಆಚಾರ್ಯ

ಟಾಪ್ ನ್ಯೂಸ್

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami 2024: ರಾಮ ನವಮಿ ಇತಿಹಾಸವೇನು? ಆಚರಣೆ ಮಾಡುವ ವಿಧಾನ ಹೇಗೆ…

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

Rama Navami: ಶ್ರೀ ರಾಮನ ಹೆಜ್ಜೆಗಳು ಬದುಕಿನ ಆದರ್ಶವಾಗಲಿ… ಪೇಜಾವರ ಶ್ರೀ

April 17ರಂದು ಶ್ರೀರಾಮ ನವಮಿ: ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Rama Navami 2024: April 17ರಂದು ಶ್ರೀರಾಮ ನವಮಿ- ಅಯೋಧ್ಯೆಯಲ್ಲಿ ವಿಶೇಷ ಪೂಜೆ, ಉತ್ಸವ

Ram Ayodhya

Rama Navami 2024: ನವಮಿಗೆ ಬಾಲಕರಾಮನ ಹಣೆಗೆ ಸೂರ್ಯ ತಿಲಕ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.