ಇಡೀ ದೇಶಕ್ಕೆ ಮೆಚ್ಚುಗೆಯಾಗಿದ್ದ ಸುಷ್ಮಾ ಸ್ವರಾಜ್‌ ವಾಗ್ಝರಿ

Team Udayavani, Aug 8, 2019, 5:18 AM IST

ಜನತಾ ಪಕ್ಷದಿಂದ ರಾಜಕೀಯ ವೃತ್ತಿಯನ್ನು ಆರಂಭಿಸಿದ ಸುಷ್ಮಾ 1977ರಲ್ಲಿ ಹರಿಯಾಣ ವಿಧಾನಸಭೆಗೆ ಆಯ್ಕೆಯಾಗಿದ್ದರು. ಅವರು ತಮ್ಮ 25ನೇ ವಯಸ್ಸಲ್ಲೇ ರಾಜ್ಯ ಖಾತೆ ಸಚಿವೆಯೂ ಆಗಿದ್ದರು. ಅನಂತರ 1999ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದರು. ಮೊದಲ ಲೋಕಸಭೆ ಚುನಾವಣೆಯಲ್ಲಿಯೇ ಅವರು ಕರ್ನಾಟಕದ ಬಳ್ಳಾರಿಯಿಂದ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧಿಸಿದ್ದರು. ಕೊನೆ ಕ್ಷಣದಲ್ಲಿ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತಾದರೂ ಆ ಅಲ್ಪ ಅವಧಿಯಲ್ಲೇ ಅವರು ಕನ್ನಡ ಭಾಷೆ ಕಲಿತು ಕನ್ನಡದಲ್ಲೇ ಭಾಷಣ ಮಾಡುತ್ತಿದ್ದರು. ಹಿಂದಿ ಮತ್ತು ಇಂಗ್ಲಿ ಷ್‌ ನಲ್ಲೂ ಅವರ ವಾಕ್ಚಾತುರ್ಯಕ್ಕೆ ಇಡೀ ದೇಶವೇ ಮನಸೋತಿತ್ತು. ಸುಷ್ಮಾ ಸ್ವರಾಜ್‌ರ ವಾಗ್ಝರಿಗಳ ಕೆಲವು ಉದಾಹರಣೆಗಳು ಇಲ್ಲಿವೆ…

1996ರಲ್ಲಿ ವಿಶ್ವಾಸಮತ ಯಾಚನೆ ಚರ್ಚೆಯಲ್ಲಿ ಮಹಾಭಾರತ ಪ್ರಸ್ತಾಪ
ಅಧ್ಯಕ್ಷರೇ, ಬಹುಮತಕ್ಕೆ ನೀವು ಯಾವುದೇ ವ್ಯಾಖ್ಯಾನವನ್ನೂ ಸಮ್ಮತಿಸಬಹುದು. ಆದರೆ ಈ ಸದನದಲ್ಲಿ ಏನಾಗುತ್ತಿದೆ ಎಂಬುದನ್ನು ನಿರ್ಲಕ್ಷಿಸಲಾಗದು. ಮೊದಲು ಒಂದು ಪಕ್ಷದ ಸರ್ಕಾರ ಹಾಗೂ ಸಣ್ಣ ಸಣ್ಣ ವಿಪಕ್ಷಗಳು ಇರುತ್ತಿದ್ದವು. ಆದರೆ ಈಗ ನಮ್ಮಲ್ಲಿ ಸಣ್ಣ ಸಣ್ಣ ಪಕ್ಷಗಳ ಆಡಳಿತ ಹಾಗೂ ಒಂದು ಸಂಘಟಿತ ವಿಪಕ್ಷವಿದೆ. ಇದು ಜನರ ಬಹುಮತವನ್ನು ಹಾಡಹಗಲೇ ತಿರಸ್ಕರಿಸಿದಂತೆ ಕಾಣಿಸುತ್ತಿಲ್ಲವೇ?

ರಾಮ ಮತ್ತು ಯುಧಿಷ್ಟಿರರ ಆಡಳಿತದ ಹಕ್ಕನ್ನು ಮಂಥರೆ ಮತ್ತು ಶಕುನಿ ಕಸಿದುಕೊಳ್ಳಬಹುದಾದರೆ, ಈ ಸದನವನ್ನು ನೋಡಿ. ಇಲ್ಲಿ ಹಲವು ಮಂಥರೆ ಮತ್ತು ಶಕುನಿಯರಿದ್ದಾರೆ. ಹೀಗಿದ್ದಾಗ ನಾವು ಅಧಿಕಾರದಲ್ಲಿರುವುದು ಹೇಗೆ? ಈ ಅವಿಶ್ವಾಸಮತ ಯಾಚನೆಯು ರಾಮರಾಜ್ಯ ಮತ್ತು ಸುರಾಜ್ಯದ ರೀತಿ ಎಂದು ನಾನು ನೋಡುತ್ತೇನೆ. ನಾವು ಸಂಪ್ರದಾಯವಾದಿಗಳು, ಯಾಕೆಂದರೆ ನಾವು ವಂದೇ ಮಾತರಂ ಎಂದು ಹೇಳುತ್ತೇವೆ, ನಾವು ಸಂಪ್ರದಾಯವಾದಿಗಳು, ಯಾಕೆಂದರೆ ನಾವು ನಮ್ಮ ರಾಷ್ಟ್ರಧ್ವಜವನ್ನು ಗೌರವಿಸುತ್ತೇವೆ, ನಾವು ಸಂಪ್ರದಾಯವಾದಿಗಳು, ಯಾಕೆಂದರೆ ನಾವು 370 ಅನ್ನು ತೆಗೆದುಹಾಕಲು ಬಯಸುತ್ತೇವೆ, ನಾವು ಸಂಪ್ರದಾಯವಾದಿಗಳು, ಯಾಕೆಂದರೆ ಜಾತಿ ಮತ್ತು ಜನಾಂಗದ ಆಧಾರದ ಮೇಲೆ ತಾರತಮ್ಯಕ್ಕೆ ಕೊನೆ ಹಾಡಲು ಬಯಸುತ್ತೇವೆ, ನಾವು ಸಂಪ್ರದಾಯವಾದಿಗಳು ಯಾಕೆಂದರೆ ಸಮಾನ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೊಳಿಸಲು ಬಯಸುತ್ತೇವೆ.

ಮನಮೋಹನ ಸಿಂಗ್‌ಗೆ ಕಾವ್ಯಬಾಣ!
2013ರಲ್ಲಿ ಯುಪಿಎ ಕಾಲದ ಹಗರಣಗಳ ಬಗ್ಗೆ ಲೋಕಸಭೆಯಲ್ಲಿ ಮಾತನಾಡುವಾಗ ಸುಷ್ಮಾ ಹಾಗೂ ಆಗಿನ ಪ್ರಧಾನಿ ಮನಮೋಹನ ಸಿಂಗ್‌ ಅವರಿಗೆ ಘಾಲಿಬ್‌ರ ಕವನದ ಮೂಲಕವೇ ತಿರುಗೇಟು ನೀಡಿದ್ದರು.

ಹಮ್‌ಕೋ ಹೈ ಉನ್‌ಸೇ ವಫಾ ಕೀ ಉಮ್ಮೀದ್‌, ಜೋ ನಹೀ ಜಾನತೇ ವಫಾ ಕ್ಯಾ ಹೈ (ನಿಷ್ಠೆ ಎಂಬುದು ಏನು ಎಂದೇ ಗೊತ್ತಿಲ್ಲದವರ ಮೇಲೆ ನಾವು ವಿಶ್ವಾಸ ಇಟ್ಟಿದ್ದೇವೆ) ಎಂದು ಮಿರ್ಜಾ ಗಾಲಿಬ್‌ರ ಕವನವನ್ನು ಮನಮೋಹನ ಸಿಂಗ್‌ ಉಲ್ಲೇಖೀಸಿದ್ದರೆ, ಅವರ ಮಾತು ಮುಗಿಯುತ್ತಿದ್ದಂತೆಯೇ ಮಾತಿಗೆ ಎದ್ದು ನಿಂತ ಸುಷ್ಮಾ ಕುಚ್ ತೋ ಮಜ್‌ಬೂರಿಯಾ ರಹೀ ಹೋಂಗೆ, ಯೂಂ ಹೀ ಕೋಯಿ ಬೇವಫಾ ನಹೀ ಹೋತಾ (ಯಾವುದೋ ಅನಿವಾರ್ಯ ಇದ್ದಿರಲೇಬೇಕು, ಹಾಗೇ ಸುಮ್ಮನೆ ಮೋಸ ಆಗಿರಲಾರದು) ಎಂದು ತಿರುಗೇಟು ನೀಡಿದರು.

ಅದೇ ರೀತಿ ಇನ್ನೊಂದು ಸನ್ನಿವೇಶದಲ್ಲೂ ತೂ ಇಧರ್‌ ಉಧರ್‌ ಕೀ ಬಾತ್‌ ನ ಕರ್‌, ಯೇ ಬತಾ ಕೀ ಕಾಫಿಲಾ ಕ್ಯೂ ಲೂಟಾ, ಹಮೇ ರೆಹಝಾನೋ ಸೇ ಗಿಲಾ ನಹೀಂ, ತೇರಿ ರೆಹಬರಿ ಕಾ ಸವಾಲ್ ಹೈ (ಸುಮ್ಮನೆ ಮಾತು ಮರೆಸಬೇಡ, ಯಾಕೆ ಅರಮನೆಯನ್ನು ಲೂಟಿ ಮಾಡಿದ್ದೀರಿ ಎಂದು ಹೇಳು, ಹಾದಿಹೋಕರ ಮೇಲೆ ನಾವು ದೂರುವುದಿಲ್ಲ, ಆದರೆ ನಿನ್ನ ನಾಯಕತ್ವದ ಬಗ್ಗೆ ನನ್ನ ಪ್ರಶ್ನೆಯಿದು) ಎಂದು ಸುಷ್ಮಾ ಹೇಳಿದ್ದಕ್ಕೆ ಮಾನಾ ಕಿ ತೆರೆ ದೀದ್‌ ಕೆ ಕಾಬಿಲ್ ನಹೀ ಹೂ ಮೈ, ತೂ ಮೇರಾ ಶೌಕ್‌ ದೇಖ್‌, ಮೇರಾ ಇಂತಜಾರ್‌ ದೇಖ್‌ (ನೀನು ನನ್ನನ್ನು ನೋಡುವ ರೀತಿಗೆ ನಾನು ಅರ್ಹನಲ್ಲ ಎಂಬುದು ಗೊತ್ತು, ಆದರೆ ನನ್ನ ವಿನಮ್ರತೆಯನ್ನು ನೋಡು, ನನ್ನ ನಿರೀಕ್ಷೆಯನ್ನು ನೋಡು) ಎಂದಿದ್ದರು.

ಲಲಿತ್‌ ಮೋದಿ ಪ್ರಕರಣದಲ್ಲಿ ಸಮರ್ಥನೆ
ಸುಷ್ಮಾ ಸಚಿವೆಯಾಗಿ ನರೇಂದ್ರ ಮೋದಿ ಸಂಪುಟಕ್ಕೆ ಸೇರುತ್ತಿದ್ದಂತೆಯೇ ಐಪಿಎಲ್ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿಗೆ ವಿದೇಶಕ್ಕೆ ಪರಾರಿಯಾಗಲು ಸಹಕರಿಸಿದ್ದಾರೆ ಎಂಬ ಆರೋಪ ಕೇಳಿಬಂತು. ಆಗ ಸಂಸತ್ತಿನಲ್ಲಿ ಮಾತನಾಡಿದ ಸುಷ್ಮಾ ‘ಲಲಿತ್‌ ಮೋದಿ ವಿದೇಶಕ್ಕೆ ಪ್ರಯಾಣಿಸಲು ಅನುಕೂಲ ಮಾಡಿಕೊಡುವಂತೆ ಬ್ರಿಟಿಷ್‌ ಪ್ರಾಧಿಕಾರಕ್ಕೆ ಯಾವುದೇ ವಿನಂತಿಯನ್ನಾಗಲೀ ಶಿಫಾರಸನ್ನಾಗಲೀ ಮಾಡಿಲ್ಲ. ಲಲಿತ್‌ ಮೋದಿಯ ಅನಾರೋಗ್ಯಕ್ಕೊಳಗಾಗಿರುವ ಪತ್ನಿಗೆ ಕೇವಲ ಶುದ್ಧ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿದ್ದೇನೆ. ನನ್ನ ಸ್ಥಾನದಲ್ಲಿ ನೀವು ಇದ್ದರೆ ಏನು ಮಾಡುತ್ತಿದ್ದಿರಿ ಎಂದು ನಾನು ಕೇಳುತ್ತೇನೆ. ನನ್ನ ಸ್ಥಾನದಲ್ಲಿದ್ದರೆ ಸೋನಿಯಾ ಗಾಂಧಿ ಏನು ಮಾಡುತ್ತಿದ್ದರು? ಲಲಿತ್‌ ಮೋದಿ ಪತ್ನಿ ಸಾವನ್ನಪ್ಪಲು ಬಿಡುತ್ತಿದ್ದಿರೇ? ಒಬ್ಬ ಮಹಿಳೆಗೆ ಸಹಾಯ ಮಾಡುವುದು ಅಪರಾಧವಾದರೆ ನಾನು ಈ ಅಪರಾಧ ಮಾಡಿದ್ದೇನೆ ಎಂದು ಒಪ್ಪಿಕೊಳ್ಳುತ್ತೇನೆ, ಈ ಸದನದಲ್ಲಿ ನಿಂತು ನಾನು ಅಪರಾಧ ಮಾಡಿದ್ದೇನೆ ಎಂದು ಇಡೀ ದೇಶಕ್ಕೆ ಹೇಳುತ್ತೇನೆ. ಈ ಸದನ ನನಗೆ ನೀಡುವ ಯಾವುದೇ ಶಿಕ್ಷೆಯನ್ನೂ ಸ್ವೀಕರಿಸಲು ನಾನು ಸಿದ್ಧಳಿದ್ದೇನೆ’ ಎಂದಿದ್ದರು.
ಕುಲಭೂಷಣ ಜಾಧವ್‌ ಪ್ರಕರಣದಲ್ಲಿ ಅಪ್ರತಿಮ ಸಮರ್ಥನೆ
ಮೋದಿ ಸರ್ಕಾರದಲ್ಲಿ ವಿದೇಶಾಂಗ ಸಚಿವೆಯಾಗಿದ್ದಾಗ ಪಾಕಿಸ್ತಾನದಲ್ಲಿ ಬಂಧಿತ ಕುಲಭೂಷಣ್‌ ಜಾಧವ್‌ ಪ್ರಕರಣವನ್ನು ಹಲವು ಬಾರಿ ವಿವಿಧ ಸನ್ನಿವೇಶದಲ್ಲಿ ಪ್ರಸ್ತಾಪಿಸಿದ್ದರು ಸುಷ್ಮಾ. ಜಾಧವ್‌ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಿದರೆ ಅದನ್ನು ಕೊಲೆ ಎಂದು ಪರಿಗಣಿಸಲಾಗುತ್ತದೆ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆಯನ್ನೂ ಅವರು ನೀಡಿದ್ದರು. ಅಲ್ಲದೆ, ಜಾಧವ್‌ ಪತ್ನಿ ಮತ್ತು ತಾಯಿಗೆ ಭೇಟಿ ಮಾಡುವ ಅವಕಾಶವನ್ನೂ ಅವರು ಒದಗಿಸಿದ್ದರು. ಆದರೆ ಜಾಧವ್‌ ಪತ್ನಿ ಮತ್ತು ತಾಯಿಯನ್ನು ಸರಿಯಾಗಿ ನಡೆಸಿಕೊಳ್ಳದ್ದಕ್ಕೆ ಪಾಕಿಸ್ತಾನವನ್ನು ಖಂಡಿಸಿದ್ದರು.ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ಕರೆದಿದ್ದರು.

ಮಾನವೀಯ ಮತ್ತು ಅನುಕಂಪದ ಆಧಾರದಲ್ಲಿ ಭೇಟಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಭೇಟಿಯಲ್ಲಿ ಮಾನವೀಯತೆ ಮತ್ತು ಅನುಕಂಪಗಳೆರಡೂ ನಾಪತ್ತೆಯಾಗಿದ್ದವು. ತನ್ನ ಸಂಚಿಗೆ ಅನುಕೂಲವಾಗುವಂತೆ ಈ ಭಾವನಾತ್ಮಕ ಸನ್ನಿವೇಶವನ್ನು ಪಾಕಿಸ್ತಾನ ದುರ್ಬಳಕೆ ಮಾಡಿಕೊಂಡಿತು. ಇದನ್ನು ವಿರೋಧಿಸುವುದಕ್ಕೆ ಶಬ್ದಗಳೂ ಸಾಲವು ಎಂದು ಸುಷ್ಮಾ ಹೇಳಿದ್ದರು.

ವಿಶ್ವವೇ ಮೆಚ್ಚಿದ ಟೀಕೆ
2018ರಲ್ಲಿ 73ನೇ ವಿಶ್ವಸಂಸ್ಥೆ ಅಧಿವೇಶನದಲ್ಲಿ ಪಾಕಿಸ್ತಾನದ ವಿರುದ್ಧ ಸುಷ್ಮಾ ವಾಗ್ಧಾಳಿ ಭಾರಿ ಜನಪ್ರಿಯವಾಗಿತ್ತು. ಮಾತುಕತೆ ಮತ್ತು ಭಯೋತ್ಪಾದನೆಗಳೆರಡೂ ಒಟ್ಟಿಗೆ ಸಾಗುವುದಿಲ್ಲ ಎಂಬ ಭಾರತದ ನಿಲುವನ್ನು ಸ್ಪಷ್ಟಪಡಿಸಿದ ಅವರು, ಹೇಳುವುದೊಂದು ಮಾಡುವುದೊಂದು ನೀತಿಯನ್ನು ಅನುಸರಿಸುವಲ್ಲಿ ಪಾಕಿಸ್ತಾನ ಪರಿಣಿತಿ ಸಾಧಿಸಿದೆ ಎಂದು ಟೀಕಿಸಿದ್ದರು.

ನಮ್ಮಲ್ಲಿ ಉಗ್ರವಾದ ಎಂಬುದು ದೂರದಲ್ಲೆಲ್ಲೋ ಇಲ್ಲ, ಇದು ನಮ್ಮ ಗಡಿಯಲ್ಲೇ ಇದೆ. ನಮ್ಮ ನೆರೆಯವರು ಕೇವಲ ಉಗ್ರವಾದವನ್ನು ಪೋಷಿಸುವುದರಲ್ಲಿ ಪರಿಣಿತಿ ಹೊಂದಿಲ್ಲ, ಬದಲಿಗೆ ಮಾತು ಮತ್ತು ಕೃತ್ಯದಲ್ಲಿ ಅಂತರವನ್ನು ಕಾಯ್ದುಕೊಳ್ಳುವುದರಲ್ಲೂ ಪರಿಣಿತರಾಗಿದ್ದಾರೆ ಎಂದಿದ್ದರು.

ಇನ್ನು 2017 ರಲ್ಲಿ ಅವರ ವಿಶ್ವಸಂಸ್ಥೆಯ ಭಾಷಣದಲ್ಲಿನ ಹೇಳಿಕೆಯಂತೂ ಪಾಕಿಸ್ತಾನದ ಅಸ್ತಿತ್ವವನ್ನೇ ಪ್ರಶ್ನಿಸಿತ್ತು. ಭಾರತವು ಐಐಎಂಗಳು, ಏಮ್ಸ್‌ಗಳು ಮತ್ತು ಐಐಟಿಗಳನ್ನು ಸ್ಥಾಪಿಸಿ ವೈದ್ಯರು, ಇಂಜಿನಿಯರುಗಳನ್ನು ಸೃಷ್ಟಿಸಿದೆ. ಆದರೆ ಪಾಕಿಸ್ತಾನ ಏನು ಸೃಷ್ಟಿಸಿದೆ? ಕೇವಲ ಉಗ್ರಗಾಮಿಗಳು ಹಾಗೂ ಉಗ್ರರ ಕ್ಯಾಂಪ್‌ಗ್ಳನ್ನು ಸೃಷ್ಟಿಸಿದೆ ಎಂದಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಮ್ಮ ಮನವಿಯನ್ನು ಯಾರೂ ಕಿವಿಗೇ ಹಾಕಿಕೊಳ್ಳುತ್ತಿಲ್ಲ ಎಂದು ಸಾಮಾನ್ಯ ಜನರು ಒಂದೇ ಸಮನೆ ರೋದಿಸುತ್ತಿದ್ದಾರೆ. ಈ ನಡುವೆ ಜನಪ್ರತಿನಿಧಿಗಳು ಎನಿಸಿಕೊಂಡ ಕೆಲವರ...

  • ಎಲ್ಲಾ ಪ್ರಮುಖ ನದಿಗಳುದ್ದಕ್ಕೂ ಇಕ್ಕೆಲಗಳಲ್ಲಿ ಕನಿಷ್ಠ ಒಂದು ಕಿಲೋಮೀಟರ್‌ ಅಗಲದಷ್ಟು, ಮತ್ತು ಸಣ್ಣ ನದಿಗಳಿಗೆ ಕನಿಷ್ಠ ಐನೂರು ಮೀಟರ್‌ ಅಗಲದಷ್ಟು ಹಸಿರು ಹೊದಿಕೆ...

  • ಜಮ್ಮು-ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಇನ್ನೊಂದು ವಾರ ಅಥವಾ ಹತ್ತು ದಿನಗಳಲ್ಲಿ ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎನ್ನುತ್ತಾರೆ ರಾಜ್ಯಪಾಲ...

  • 73ನೇ ಸ್ವಾತಂತ್ರ್ಯೋತ್ಸವಕ್ಕೆ ಇಂದು ಇಡೀ ದೇಶ ಸಾಕ್ಷಿಯಾಗುತ್ತಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆ ಹಲವು ಪ್ರಥಮಗಳಿಗೆ ಕಾರಣ ವಾಗುತ್ತಿದೆ. ಜಮ್ಮು ಮತ್ತು...

  • ದತ್ತು ಸ್ವೀಕಾರ: ಮಹಿಳೆಯರೇ ಹೆಚ್ಚು ಹೆಣ್ಣು ಮಕ್ಕಳಿಗೆ ವಿಶೇಷ ಬೇಡಿಕೆ ಮಣಿಪಾಲ: ಅನಾಥ, ನಿರ್ಗತಿಕರಿಗೂ ಒಂದು ಜೀವನ ಇದೆ. ಮಕ್ಕಳಿಲ್ಲದವರಿಗೆ, ಮಗು ಪಡೆಯಲು...

ಹೊಸ ಸೇರ್ಪಡೆ