ಯೋಗದ ಅಭಾವಕ್ಕೆ ಕಾರಣವಾಗದು ಸಮಯಾಭಾವ!

ಕುರ್ಚಿಯಲ್ಲಿ ಕುಳಿತು ಸೂರ್ಯನಮಸ್ಕಾರವೂ ಸಾಧ್ಯ

Team Udayavani, Jun 18, 2019, 5:16 AM IST

ಸಮಯಾಭಾವ ಇಂದು ಎಲ್ಲರಿಗೂ ಬಹು ದೊಡ್ಡ ಸಮಸ್ಯೆಯಾಗಿದೆ. ಯೋಗ ಮಾಡಲು ಮನಸ್ಸಿದೆ, ಸಮಯವೇ ದೊರೆಯುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಮಾಸ್ಟರ್‌ ಯೋಗ..

”ಡಾಕ್ಟ್ರೇ…ಕಳ್ದ ಆರು ತಿಂಳಿಂದ ತೂಕ ದಿನ ದಿನಾ ಜಾಸ್ತಿ ಆಗ್ತಿತ್ತು, ಫಿಸಿಶಿಯನ್‌ಗೆ ತೋರುಸ್ದೆ. ನೋಡುದ್ರೆ ಥೈರಾಯ್ಡ ಹಾರ್ಮೋನ್‌ ಏರುಪೇರು ಆಗಿದೆಯಂತೆ. ಶುಗರ್ರೂ ಬಾರ್ಡರಲ್ಲಿ ಇದ್ಯಂತೆ!! ಸ್ವಲ್ಪ ಜಾಗ್‌, ವಾಕ್‌, ಯೋಗ ಎಲ್ಲಾ ಮಾಡಿ ಅಂತ ಹೇಳುದ್ರು. ಎಷ್ಟೊತ್ಗೇಂತ ಮಾಡ್ಲಿ. ನೀವೇ ಹೇಳಿ? ಬೆಂಗ್ಳೂರಲ್ಲಿ ನಮ್ಮಂತ ಸಾಫ್ಟ್ವೇರ್‌ ಇಂಜಿನಿಯರ್‌ಗಳ್ಗೆ ಟೈಮ್ಸಿಗೋದೇ ಅಪ್ರೂಪ, ಅದ್ರಲ್ಲೂ ನಮ್ ಆಫೀಸ್ಬಂದು ವೈಟ್ಫೀಲ್ಡ್ ಅಲ್ಲಿ, ಮನೆ ಇರೋದು ಬನಶಂಕರಿ. ಬೆಳಗ್ಗೆ 6 ಗಂಟೆಗೆಲ್ಲಾ ಮನೆ ಬಿಟ್ರೆ, ಮನೆ ತಲ್ಪೋವಾಗ್ಲೇ ರಾತ್ರಿ ಗಂಟೆ 8 ಆಗುತ್ತ್ತೆ. ಮನೆ ತಲುಪಿ ಕಾಲು ಚಾಚಿ ಮಲ್ಗಿದ್ರೆ ಸಾಕಪ್ಪಾ ಅನ್ನುಸ್ತಿರುತ್ತೆ. ವಾಕ್‌, ಯೋಗಾಭ್ಯಾಸದ ಸಮಯ ಎಲ್ಲಾ ರೋಡ್ಮೇಲೇ ಕಳ್ದೋಯ್ತು! ಇನ್ನೇನ್ಮಾಡ್ಲಿ?”

ಗೆಳೆಯರೇ, ಸಮಯಾಭಾವ ಇಂದು ಎಲ್ಲರಿಗೂ ಬಹು ದೊಡ್ಡ ಸಮಸ್ಯೆ. ಅದರಲ್ಲೂ ಯೋಗಾಸಕ್ತರಿಗೆ ನಿಜವಾಗಿಯೂ ಜಟಿಲ ಸಮಸ್ಯೆ. ಕಾರಣ, ಮುಂಜಾನೆ ಬೇಗನೇ ಎದ್ದೇ ಅಭ್ಯಾಸ ಮಾಡಬೇಕು, ಖಾಲಿ ಹೊಟ್ಟೆಯಲ್ಲಿರಬೇಕು ಇತ್ಯಾದಿ. ಗಮನಿಸಿ, ಯೋಗವೆಂದರೆ ಬರಿಯ ಆಸನ, ವ್ಯಾಯಾಮಗಳ ಅಭ್ಯಾಸವಲ್ಲ. ಕ್ರಮಬದ್ಧವಾದ ಉಸಿರಾಟ, ಕ್ರಿಯಾ, ಧ್ಯಾನ, ವಿಶ್ರಾಂತಿ, ಮನೋನಿಗ್ರಹಗಳ ಸಂಗಮ. ಯೋಗ ಮಾಡಲು ಮನಸ್ಸಿದೆ, ಸಮಯವೇ ದೊರೆಯುತ್ತಿಲ್ಲ ಎನ್ನುವವರಿಗೆ ಇಲ್ಲಿದೆ ಮಾಸ್ಟರ್‌ ಯೋಗ..

ಬೆಳಗಿನ ದಿನಚರಿಯಿಂದಲೇ ಆರಂಭಿಸೋಣ. ಬೆಳಗ್ಗೆ 5 ಗಂಟೆಗೆ ಏಳುವವರಾದರೆ ಅಲಾರಾಂ ಅನ್ನು ಕೇವಲ 10 ನಿಮಿಷ ಮುಂದಿಡಿ. (ಮನೆಯಿಂದ ಹೊರಡಲು ಗಡಿಯಾರದ ಸಮಯ 10 ನಿಮಿಷ ಮುಂದಿಟ್ಟಂತೆ!) ನಿತ್ಯ ಕರ್ಮಗಳನ್ನು ಮುಗಿಸಿದ ನಂತರ ಸೂರ್ಯ ನಮಸ್ಕಾರವನ್ನು ಆರಂಭಿಸಬಹುದು. ಮೊದಲ 5 ನಿಮಿಷದಲ್ಲಿ ಕನಿಷ್ಟ 5 ಸೂರ್ಯ ನಮಸ್ಕಾರಗಳು, ಯಾವುದೇ ಗಡಿಬಿಡಿಯಿಲ್ಲದೆ ಕ್ರಮ ಬದ್ಧ ಉಸಿರಾಟದೊಂದಿಗೆ ಸುಲಭ ಸಾಧ್ಯ. ಸೂರ್ಯ ನಮಸ್ಕಾರವೇ ಯಾಕೆಂದರೆ, ಇದು ಹಿಂದೆ, ಮುಂದೆ ಬಾಗುವುದರ ಜೊತೆಗೆ ಕಾಲುಗಳಿಗೆ ಸಾಕಷ್ಟು ಚಲನೆಯನ್ನು ನೀಡುತ್ತಾ ಸಂಪೂರ್ಣ ಶರೀರಕ್ಕೊಂದು ಪರಿಪೂರ್ಣ ಅಭ್ಯಾಸದಂತಿದೆ. ಮುಂದಿನ 5 ನಿಮಿಷಗಳಲ್ಲಿ ನಾಡೀ ಶುದ್ಧಿಯನ್ನೋ ಅಥವಾ ಕಪಾಲಭಾತಿಯನ್ನೋ ಅನುಕೂಲಕ್ಕೆ ತಕ್ಕಂತೆ ಅಭ್ಯಾಸ ಮಾಡಬಹುದು. ನಂತರ ಮನೆ ಬಿಟ್ಟು ಆಫೀಸ್‌ ತಲುಪಲು ಕ್ಯಾಬ್ನಲ್ಲಿ ಹೋಗುತ್ತಿದ್ದರೆ ಕುಳಿತಲ್ಲಿಯೇ ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಿ. ಬೆನ್ನು ಸಾಕಷ್ಟು ನೇರವಾಗಿದ್ದು, ದೀರ್ಘ‌ ಉಸಿರಾಟದೊಂದಿಗೆ ಒಳ ಹೋಗುವ ವಾಯು ತಂಪಾಗಿದ್ದು, ಹೊರಬರುವ ವಾಯು ಬಿಸಿಯಾಗಿರುವುದನ್ನು ಗಮನಿಸಿ. ಮನಸ್ಸಿನಲ್ಲಿ ಆಫೀಸ್‌ನ ಚಿಂತೆ, ಟ್ರಾಫಿಕ್‌ನಲ್ಲಿ ಸಿಕ್ಕಿ ಹಾಕಿಕೊಂಡಿರುವ ಕುರಿತಾಗಿ ಯಾವುದೇ ಆಲೋಚನೆ ಬಾರದು. ಇದಲ್ಲವೇ ಮನೋನಿಗ್ರಹ?

ಇನ್ನು ಆಫೀಸ್‌ ತಲುಪಿದಂತೆ ಮೊದಲು ಕುರ್ಚಿಯಲ್ಲಿ ಕುಳಿತು ವಿರಮಿಸಿ. ಕೆಲಸ ಆರಂಭಿಸುವ ಮೊದಲ 5 ನಿಮಿಷಗಳಲ್ಲಿ ನಾಡಿ ಶುದ್ಧಿ ಅಥವಾ ಸೂರ್ಯ/ ಚಂದ್ರಾನುಲೋಮ ವಿಲೋಮಗಳ ಅಭ್ಯಾಸ ಮಾಡಬಹುದು. ಹಾಗೆಯೇ ಮನಸ್ಸಿನಲ್ಲಿ ಒಂದು ದೃಢ ನಿರ್ಧಾರವನ್ನು ತೆಗೆದುಕೊಳ್ಳುವುದು, ಪ್ರತಿ 60 ನಿಮಿಷಗಳಿಗೊಮ್ಮೆ 5 ನಿಮಿಷಗಳ ಅಭ್ಯಾಸ ಮಾಡುತ್ತೇನೆಂದು. ‘ಅಯ್ಯೋ.. 9 ಗಂಟೆಗಳ ಕೆಲಸದ ಅವಧಿಯಲ್ಲಿ 45 ನಿಮಿಷ ಕಳೆದು ಹೋಯಿತಲ್ಲಾ?!’ ಎಂದುಕೊಳ್ಳಬೇಡಿ. ಈ ರೀತಿಯಾಗಿ ಮಾಡಿದಾಗ ಹೆಚ್ಚುವ ಉತ್ಸುಕತೆ, ಆಲೋಚನಾಸಕ್ತಿ, ಕೆಲಸದಲ್ಲಾಗುವ ಪ್ರಗತಿ ಸ್ವತಃ ಅನುಭವಿಸಿಯೇ ತೀರಬೇಕು!

ಈಗ ನಿಮ್ಮಲ್ಲೊಂದು ಪ್ರಶ್ನೆ ಕಾಡುತ್ತಿರಬಹುದು, ‘ಪ್ರಾಣಾಯಾಮ ಬೆಳಗಿನ ಹೊತ್ತಿನ ಅಭ್ಯಾಸವಲ್ವಾ? ಆದರೆ ನಾನಿಲ್ಲಿ ರೈಲು ಬಿಡ್ತಿದೀನಾ?’ ಖಂಡಿತಾ ಅಲ್ಲ.

ಪ್ರಾತರ್ಮಧ್ಯದಿನೇ ಸಾಯಮರ್ಧರಾತ್ರೇ ಚ ಕುಂಭಕಾನ್‌

ಶನೈರಶೀತಿಪರ್ಯಂತಂ ಚತುರ್ವಾರಮ್‌ ಸಮಭ್ಯಸೇತ್‌ (ಹಠಯೋಗ ಪ್ರದೀಪಿಕಾ 2.11)

ಪ್ರಾತಃ ಕಾಲ, ದಿನದ ಮಧ್ಯ, ಸಾಯಂಕಾಲ, ರಾತ್ರಿಯ ಅರ್ಧಕಾಲದಲ್ಲಿ ಪ್ರಾಣಾಯಾಮ ಕುಂಭಕವನ್ನು ಅಭ್ಯಸಿಸಬೇಕು. ಸಾವಧಾನದಿಂದ ದಿನಕ್ಕೆ 80 ಬಾರಿಯಂತೆ ನಾಲ್ಕು ವಾರ ಸರಿಯಾಗಿ ಅಭ್ಯಾಸಮಾಡಬೇಕು (ಅಂದರೆ ಒಟ್ಟು 320 ಬಾರಿ).

ಅದರಲ್ಲೂ ಉಜ್ಜಯೀ ಪ್ರಾಣಾಯಾಮವಂತೂ ಬಹು ವಿಶೇಷಿತ.

ಗಚ್ಛತಾ ತಿಷ್ಠತಾ ಕಾರ್ಯಮುಜ್ಜಯ್ನಾಖ್ಯಾಂ ತು ಕುಂಭಕಂ (ಹಠಯೋಗ ಪ್ರದೀಪಿಕಾ 2.63)

ಜೀವಿತದ ಎಲ್ಲಾ ಸಂದರ್ಭಗಳಲ್ಲೂ ಉಜ್ಜಯೀ ಅಭ್ಯಾಸ ಮಾಡಬೇಕು, ಕುಳಿತಿದ್ದಾಗಲೂ, ನಿಂತಿದ್ದಾಗಲೂ ಕೂಡ. ಹಾಗಾದರೆ ಕೆಲಸದ ಮಧ್ಯದಲ್ಲಿ ಧ್ಯಾನದ ಅಭ್ಯಾಸವೂ ಸಾಧ್ಯವೇ ಎಂಬ ಪ್ರಶ್ನೆ ಬರಬಹುದು. ಖಂಡಿತಾ ಸಾಧ್ಯ. ಧ್ಯಾನವೆಂದರೇನು?

”ತತ್ರ ಪ್ರತ್ಯಯೈಕತಾನತಾ ಧ್ಯಾನಂ” (ಪತಂಜಲಿ ಯೋಗ ಸೂತ್ರ 3.2). ಮನಸ್ಸಿನಲ್ಲಿ ಬರುವ ಆಲೋಚನೆಗಳನ್ನು ಪ್ರತ್ಯೇಕಿಸಿ ನಿರಂತರವಾಗಿ ಒಂದೇ ವಿಷಯದಲ್ಲಿ ಮನಸ್ಸನ್ನು ಕೇಂದ್ರೀಕರಿ ಸುವುದೇ ಧ್ಯಾನ. ಕುರ್ಚಿಯಲ್ಲಿ ಕುಳಿತಿದ್ದಾಗ ಕಣ್ಣ ಮುಂದಿರುವ ಕಂಪ್ಯೂಟರ್‌ ಸ್ಕ್ರೀನ್‌ನಲ್ಲಿ ನಡೆಯುವ ಕೆಲಸದ ಮೇಲೇ ಮನಸ್ಸನ್ನು ಕೇಂದ್ರೀಕರಿಸುವುದು. (ಆ ಸಂದರ್ಭದಲ್ಲಿ ಮನೆ, ಸಂಸಾರ, ಕ್ರಿಕೆಟ್, ರಾಜಕೀಯ ಕುರಿತ ಯೋಚಿಸದಿರಿ. ಅಷ್ಟೇ!). ಆದರೆ ಕುಳಿತಿರುವ ಸ್ಥಿತಿ ಕ್ರಮಬದ್ಧವಾಗಿರಲಿ.

ಸಮಂ ಕಾಯ ಶಿರೋಗ್ರೀವಂ ಧಾರಯನ್ನಚಲಂ ಸ್ಥಿರಃ

ಸಂಪ್ರೇಕ್ಷ ್ಯ ನಾಸಿಕಾಗ್ರಂ ಸ್ವಂ ದಿಶಶ್ಚಾನವಲೋಕಯನ್‌ (ಭಗವದ್ಗೀತಾ 6.13)

ಶರೀರ, ತಲೆ, ಕತ್ತು ಒಂದೇ ಪಂಕ್ತಿಯಲ್ಲಿ ನೇರವಾಗಿದ್ದು ಅಲು ಗಾಡಿಸದೇ ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು. ಜೊತೆಗೆ, ಸುತ್ತಲಿನ ದಿಕ್ಕನ್ನು ನೋಡುತ್ತಿರದೇ ಸ್ವತಃ ಪ್ರಯತ್ನಪೂರ್ವಕ ಮೂಗಿನ ತುದಿಯನ್ನೇ ದಿಟ್ಟಿಸುತ್ತಿರಬೇಕು. ಕೆಲಸದ ಸಂದರ್ಭದಲ್ಲಿ ಮನಸ್ಸನ್ನು ಕೆಲಸದ ಮೇಲೆ ಕೇಂದ್ರೀಕರಿಸಿದರಾಯ್ತು.

ಇನ್ನು ಆಸನಗಳ ಅಭ್ಯಾಸಕ್ಕೆ ಸೇವಿಸಿದ ಘನಾಹಾರದಿಂದ ಕನಿಷ್ಠ 4 ಗಂಟೆಗಳ ಅಂತರವಿರಲಿ. ಹಾಗಾಗಿ ಬೆಳಗ್ಗೆ 8ಕ್ಕೆ ಉಪಾಹಾರವಾಗಿದ್ದಲ್ಲಿ ಮಧ್ಯಾಹ್ನ 12ರ ನಂತರ ಕುರ್ಚಿಯಲ್ಲೇ ಕುಳಿತು ಮಾಡುವ ಅಭ್ಯಾಸ, ಕೆಲಸದ ಮಧ್ಯೆಯೂ ಮಾಡ ಬಹುದು. ಮುಂದೆ ಬಾಗುವುದು ಪಾದಹಸ್ತಾಸನಕ್ಕೆ ಪರ್ಯಾಯ ವಾದರೆ, ಹೊಟ್ಟೆಯ ತಿರುಚುವಿಕೆ ವಕ್ರಾಸನಕ್ಕೆ ಪರ್ಯಾಯವಾಗು ವುದು. ಪಕ್ಕಕ್ಕೆ ಬಾಗುವುದು ಅರ್ಧಕಟಿ ಚಕ್ರಾಸನಕ್ಕೆ ಸೂಕ್ತ. ಅಂತೆಯೇ ಕುರ್ಚಿಯಲ್ಲಿ ಕುಳಿತು ಸೂರ್ಯನಮಸ್ಕಾರವೂ ಸಾಧ್ಯ! ಒಟ್ಟಾರೆ ಸ್ಥಿರವಾಗಿ ಸುಖವಾಗಿ ಕುಳಿತಿರುವುದೇ ಆಸನ. ಸ್ಥಿರಂ ಸುಖಂ ಆಸನಂ (ಪತಂಜಲಿ ಯೋಗ ಸೂತ್ರ 2.46)

ಊಟದ ನಂತರ ಸ್ವಲ್ಪ ಸಮಯ ತಡೆದು ಮಾಡುವ ಶೀತಲೀ, ಸೀತ್ಕಾರೀ, ಸದಂತ ಪ್ರಾಣಾಯಾಮಗಳು ಹೊಟ್ಟೆ ಉರಿ, ಎದೆ ಉರಿಯನ್ನು ಕಡಿಮೆಗೊಳಿಸಿ ಜೀರ್ಣಶಕ್ತಿಯನ್ನು ವರ್ಧಿಸುವುದು. ಇವುಗಳಿಗೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕೆಂಬ ನಿರ್ಬಂಧಗಳಿಲ್ಲ. ಸಂಜೆ ಮನೆಗೆ ಮರಳುವಾಗಲೂ ಬೆಳಗಿನಂತೆ ಉಸಿರಾಟದ ಅಭ್ಯಾಸ ಮಾಡಬಹುದು.

ಕೊನೆಗೆ ಮನೆ ತಲುಪಿ ಊಟದ ನಂತರ, ಮಲಗುವ ಮೊದಲು ಯೋಗಾಭ್ಯಾಸ ಮಾಡಬಹುದು. ಮಲಗಲು ಹೋದಾಗ ಮಂಚದಲ್ಲಿ ಕಾಲು ಕೆಳಬಿಟ್ಟು (ಬೇಕಿದ್ದಲ್ಲಿ ಮಾತ್ರ) 10 ನಿಮಿಷ ನಾಡಿ ಶುದ್ಧಿ , ನಂತರ ಭ್ರಾಮರೀ ಮಾಡಿ, ಹಾಗೆಯೇ ನೇರವಾಗಿ ಕಾಲು ಚಾಚಿ ಮಲಗಬಹುದು. ಮನಃ ಪ್ರಶಮನೋಪಾಯ ಯೋಗಃ (ಯೋಗ ವಾಸಿಷ್ಠ) ಎಂಬಂತೆ ಈ ಅಭ್ಯಾಸಗಳು ಮನಸ್ಸನ್ನು ಪ್ರಶಾಂತಗೊಳಿಸುವವು. ಇವೆಲ್ಲಕ್ಕಿಂತ ಮುಖ್ಯವಾಗಿ ದೇಹ ಹಾಗೂ ಮನಸ್ಸನ್ನು ಸಂಪೂರ್ಣ ವಿಶ್ರಾಂತಿಗೊಳಿಸುವ ಸಾಧನವೊಂದಿದೆ. ಅದುವೇ ಶವಾಸನ.

ಶವಾಸನಂ ಶ್ರಾಂತಿ ಹರಂ ಚಿತ್ತ ವಿಶ್ರಾಂತಿ ಕಾರಕಂ (ಹಠಯೋಗ ಪ್ರದೀಪಿಕಾ 1.34)

ನೇರವಾಗಿ ಮಲಗಿದ್ದು ದೇಹದ ಒಂದೊಂದೇ ಗಂಟುಗಳನ್ನು ಬಿಗಿಮಾಡಿ ಸಡಿಲಮಾಡುತ್ತಾ ಬರುವುದು. ಆ ಸುಖವನ್ನು ಹೇಳಲಾಗದು. ಅನುಭವಿಸಬೇಕು. ಅಲ್ಲೂ ಮನಸ್ಸಿನಲ್ಲಿ ಓಂಕಾರ ಹೇಳುತ್ತಾ ನಿದ್ದೆಗೆ ಜಾರಿದರಾಯ್ತು.

ಈ ರೀತಿಯಾಗಿ ಗಮನಿಸಿದರೆ ದಿನದಲ್ಲಿ ಸರಿಸುಮಾರು ಒಂದೂವರೆ ಗಂಟೆ ಅಭ್ಯಾಸ ಮಾಡಿದಂತಾಯ್ತು. ಈಗ ಹೇಳಿ ಗೆಳೆಯರೇ, ಯೋಗ ಅಭ್ಯಾಸಕ್ಕೆ ಕಾರಣ ಸಮಯದ ಅಭಾವವೇ? ಹೊಡೆಯಲು ಮನಸ್ಸಿದ್ದವನಿಗೆ ಒಲೆಯಲ್ಲಿರುವ ಸೌದೆ ಕೊಳ್ಳಿಯೇ ಸಾಕೆಂಬಂತೆ ಯೋಗದ ಅಭಾವಕ್ಕೆ ಕಾರಣ ಸಮಯಾಭಾವವಲ್ಲ. ಆಸಕ್ತಿಯ ಅಭಾವ!

(ಲೇಖಕರು ಉಪನಿರ್ದೇಶಕರು, ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾಲೇಜು ಎಸ್‌-ವ್ಯಾಸ ಯೋಗ ವಿಶ್ಚವಿದ್ಯಾಲಯ, ಬೆಂಗಳೂರು)

ಡಾ. ಪುನೀತ್‌ ರಾಘವೇಂದ್ರ ಕುಂಟುಕಾಡು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ