ಯೋಗ್ಯವಾದುದನ್ನು ಗಮನಿಸುವುದೇ ಯೋಗ

Team Udayavani, Jun 19, 2019, 5:00 AM IST

ಉಸಿರಾಟಕ್ಕೂ, ಮನಸ್ಸಿಗೂ ನಿಕಟ ಸಂಬಂಧವಿದೆ. ನಿತ್ಯವೂ ನಮ್ಮ ಅನುಭವಕ್ಕೆ ಬರುತ್ತಿದೆ. ಅಧಿಕ ಮಾನಸಿಕ ಒತ್ತಡದಲ್ಲಿ ಉಸಿರಾಟದ ವೇಗ ಹೆಚ್ಚು. ಉಸಿರಾಟಕ್ಕೂ, ನಮ್ಮ ಆಯುಷ್ಯಕ್ಕೂ ಸಂಬಂಧವಿದೆ.

ದೇಹದಲ್ಲಾಗುತ್ತಿರುವ ಎಷ್ಟೋ ಚಟುವಟಿಕೆಗಳ ಬಗ್ಗೆ ನಮಗೆ ಅರಿವಿರುವುದಿಲ್ಲ. ನಮ್ಮ ಉಸಿರಾಟ ಯಾಂತ್ರಿಕವಾಗಿರುತ್ತದೆ. ಉಸಿರಾಟಕ್ಕೆ ತೊಂದರೆಯಾದಾಗ ಅದನ್ನು ಗಮನಿಸುತ್ತೇವೆ. ಹಾಗೆಯೇ ಈ ದೇಹದೊಳಗಿನ ಕ್ರಿಯೆ. ಒಳಗೇನಾದರೂ ತೊಂದರೆಯಾದಾಗ ನಾವು ತಲೆ ಕೆಡಿಸಿಕೊಳ್ಳುತ್ತೇವೆ. ವೈದ್ಯರ ಬಳಿ ಓಡುತ್ತೇವೆ. ಸಮಸ್ಯೆ ಅಥವಾ ರೋಗ ಬಂದಾಗ ಮಾತ್ರ ಯೋಚಿಸದೆ ದಿನವೂ ಒಳಗಿನತ್ತ ಅರಿವಿನ ಬೆಳಕನ್ನು ಹರಿಸುವುದು ಆರೋಗ್ಯಕರ ಬೆಳವಣಿಗೆ. ಯೋಗವು ಈ ಕೆಲಸವನ್ನು ಮಾಡಲು ನಮ್ಮನ್ನು ಎಚ್ಚರಿಸುತ್ತದೆ. ಯೋಗ್ಯವಾದುದನ್ನು ಗಮನದಲ್ಲಿಟ್ಟು ಕೊಂಡು ಮಾಡುವುದೇ ಯೋಗ.

ದೇಹದೊಳಗಿನ ಅನ್ವೇಷಣೆ:
ಉಪನಿಷತ್‌ ಕಾಲದ ಋಷಿಗಳು ಈ ಕೆಲಸ ಮಾಡಿದರು. ಪ್ರಶ್ನೋಪನಿಷತ್ತಿನಲ್ಲಿ ಬರುವ ಒಂದು ಶ್ಲೋಕದಲ್ಲಿ ಹೃದಯ, ಆತ್ಮ ಹಾಗೂ ನಾಡಿಗಳ ವಿವರಗಳಿವೆ. ಹೃದಯದಲ್ಲಿ ನೂರೊಂದು ನಾಡಿಗಳಿವೆ. ಅವುಗಳ ಒಂದೊಂದರಲ್ಲಿ ನೂರು ನಾಡಿಗಳು. ಇದರ ಒಂದೊಂದು ಶಾಖೆಯಲ್ಲಿಯೂ 72 ಸಾವಿರ ನಾಡಿಗಳು ಇವೆ. ಸಂಖ್ಯಾಶಾಸ್ತ್ರವನ್ನು ಹೊರತುಪಡಿಸಿ ಈ ಬಗ್ಗೆ ವಿವರಣೆ ಕೊಟ್ಟರೆ ಆಶ್ಚರ್ಯವಾಗುತ್ತದೆ. ಈ ನಾಡಿಗಳನ್ನು ಒಂದರ ಮುಂದೆ ಒಂದು ಇಡುತ್ತಾ ಹೋದರೆ ಮೂರೂವರೆ ಲಕ್ಷ ಮೈಲುಗಳಾಗುತ್ತವಂತೆ. ಭೂಮಿಯ ಸುತ್ತಳತೆಗಿಂತ 14 ಪಾಲು ಜಾಸ್ತಿಯಾಗುತ್ತದಂತೆ. ಇವುಗಳ ಕ್ರಮಬದ್ಧ ಚಟುವಟಿಕೆಗೆ ಅಗತ್ಯವಾದ ರಕ್ತ,ಆಮ್ಲಜನಕ ಸರಬರಾಜಾಗಬೇಕು. ಇದಕ್ಕೆ ನಮ್ಮ ಹಿರಿಯರು ಕಂಡುಕೊಂಡ ಮಾರ್ಗ ಯೋಗ.

ಆಸನ
ಯೋಗ ಎಂದರೆ ಆಸನ, ಪ್ರಾಣಾಯಾಮ ಹಾಗೂ ಧ್ಯಾನ. ಅಷ್ಟಾಂಗಗಳಿದ್ದರೂ ಇಂದು ಈ ಮೂರನ್ನು ಹೆಚ್ಚು ಹೆಚ್ಚಾಗಿ ಅಭ್ಯಾಸ ಮಾಡುತ್ತಿದ್ದೇವೆ. ಪತಂಜಲಿ ಮುನಿಗಳ ಪ್ರಕಾರ ಸ್ಥಿರಂ ಸುಖಂ ಆಸನಂ. ಸ್ಥಿರ ಹಾಗೂ ಸುಖವಾದುದು ಆಸನ. “ಆ’ ಎಂದರೆ ಆಯಾಸವಿಲ್ಲದ, “ಸ’ ಎಂದರೆ ಸಮತಳ ಸ್ಥಿತಿಯಲ್ಲಿ, “ನ’ ಎಂದರೆ ನಡೆಯುವ ಕ್ರಿಯೆ. ದೇಹ, ಮನಸ್ಸು ಹಾಗೂ ಪ್ರಾಣಗಳಲ್ಲಿ ಈ ಕ್ರಿಯೆ ನಡೆಯುತ್ತಿರಬೇಕು. ಆಸನಗಳನ್ನು ಮಾಡುವಾಗ ಉಸಿರಾಟವನ್ನೂ ಗಮನಿಸುತ್ತಿರಬೇಕು. ಈ ಹಿನ್ನೆಲೆಯಲ್ಲಿ ಯೋಗ ಎಂದರೆ ದೇಹ, ಮನಸ್ಸು ಹಾಗೂ ಪ್ರಾಣಗಳ ಸಂಗಮ ಎನ್ನಬಹುದು.

ಪ್ರಾಣಾಯಾಮ ಹಾಗೂ ಉಪಯೋಗಗಳು
ಪ್ರಾಣಾಯಾಮದ ಕುರಿತು ಶ್ಲೋಕವೊಂದು ಪ್ರಾಣ ಅಥವಾ ವಾಯು ವನ್ನು ಹೇಗೆ ಹಿಡಿತದಲ್ಲಿ ತರಬೇಕು ಎಂಬುದರ ಬಗ್ಗೆ ಉಪಯುಕ್ತ ಮಾಹಿತಿ ನೀಡುತ್ತದೆ. ಹುಲಿ, ಸಿಂಹಗಳನ್ನು ಪಳಗಿಸುತ್ತೇವೆ. ಅವುಗಳನ್ನು ಒಂದೇ ಯತ್ನದಲ್ಲಿ ಪಳಗಿಸಲು ಪ್ರಯತ್ನಿಸಿದರೆ ನಮ್ಮ ಪ್ರಾಣಕ್ಕೇ ಅಪಾಯ. ಹಂತ ಹಂತವಾಗಿ ನಿಧಾನಕ್ಕೆ ಅವುಗಳನ್ನು ವಶಪಡಿಸಿ ಕೊಳ್ಳಬೇಕು. ಉಸಿರಿನ ಕಥೆಯೂ ಅಷ್ಟೆ. ಉಸಿರಾಟದ ಮೇಲಿನ ನಿಯಂತ್ರಣವನ್ನು ಹಂತ ಹಂತವಾಗಿ ಸಾಧಿಸಬೇಕು. ಪ್ರಾಣಾಯಾಮದ ಅಭ್ಯಾಸದಲ್ಲಿ ಗುರುಗಳ ನೆರವಿಲ್ಲದೆ ನಮ್ಮಷ್ಟಕ್ಕೆ ನಾವು ನಡೆಸಿದರೆ ಅದು ವಿರುದ್ಧ ಪರಿಣಾಮ ಬೀರಬಹುದು. ಪತಂಜಲಿ ಮುನಿಗಳು ಶ್ವಾಸ - ಪ್ರಶ್ವಾಸಗಳ ಗತಿ ಅಂದರೆ ಚಲನೆಯ ನಿಯಂತ್ರಣವೇ ಪ್ರಾಣಾಯಾಮ ಎಂದರು. ಶ್ವಾಸ ಎಂದರೆ ಒಳಗೆ ತೆಗೆದುಕೊಳ್ಳುವ ಕ್ರಿಯೆಯಾದರೆ, ಪ್ರಶ್ವಾಸ ಎಂದರೆ ಒಳಗಿನ ಉಸಿರನ್ನು ಹೊರಗೆ ಬಿಡುವ ಕ್ರಿಯೆ. ಉಸಿರಾಟಕ್ಕೂ, ಮನಸ್ಸಿಗೂ ನಿಕಟ ಸಂಬಂಧವಿದೆ. ಅಧಿಕ ಮಾನಸಿಕ ಒತ್ತಡದಲ್ಲಿ ಉಸಿರಾಟದ ವೇಗ ಹೆಚ್ಚು. ಸಾಧಾರಣವಾಗಿ ಮನುಷ್ಯನ ಉಸಿರಾಟ ಒಂದು ನಿಮಿಷಕ್ಕೆ 15. ಇದು ಅಂದಾಜು ಲೆಕ್ಕ. ಒಂದು ಗಂಟೆಗೆ 900. ಒಂದು ದಿನಕ್ಕೆ 21,600. ಉಸಿರಾಟಕ್ಕೂ, ನಮ್ಮ ಆಯುಷ್ಯಕ್ಕೂ ಸಂಬಂಧವಿದೆ. ಆಮೆಯ ಉಸಿರಾಟ ನಿಮಿಷಕ್ಕೆ 5. ಹಾಗಾಗಿ ಅದರ ಆಯುಷ್ಯ 100-150 ವರ್ಷ. ನಮ್ಮ ಉಸಿರಾಟವನ್ನೂ ಪ್ರಾಣಾಯಾಮದ ಮೂಲಕ ಇನ್ನೂ ತಗ್ಗಿಸಿದರೆ ನಮ್ಮ ಆಯುಷ್ಯವೂ ಹೆಚ್ಚುತ್ತದೆ. 120 ವರ್ಷಗಳ ಕಾಲ ಬದುಕಿದ ಸಾಧಕ ಸಂತರು ಪ್ರಾಣಾಯಾಮದ ಮೂಲಕವೇ ಇದನ್ನು ಸಾಧಿಸಿದ್ದರು. ಮನಸ್ಸಿನ ನಿಯಂತ್ರಣಕ್ಕೆ ಲಯಬದ್ಧವಾದ ಉಸಿರಾಟ ಅಗತ್ಯ. ಇದರಿಂದ ಚಿತ್ತ ಚಾಂಚಲ್ಯ ಸಹಜವಾಗಿ ನಿಯಂತ್ರಣಕ್ಕೆ ಬರುತ್ತವೆ.

ನಮ್ಮ ಮೆದುಳಿನಲ್ಲಿ ಸಹಜವಾಗಿ ರಕ್ತದಲ್ಲಿನ ಕಲ್ಮಶವು ನಮಗರಿವಿಲ್ಲದಂತೆ ಕೂಡಿಕೊಳ್ಳುತ್ತದೆ. ಬಲ್ಬಿನ ಮೇಲೆ ಧೂಳು ಕುಳಿತಾಗ ಅದರ ಪ್ರಕಾಶ ಕಡಿಮೆಯಾಗುತ್ತದೆ. ಮೆದುಳಿನ ಮೇಲೆ ಈ ರೀತಿಯ ಕಲ್ಮಶಗಳು ಕುಳಿತಾಗ ನಮ್ಮ ಮೆದುಳಿನ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಆಗ ಆಲಸ್ಯ, ಆಕಳಿಕೆ, ಆಯಾಸಗಳು ಸಹಜವಾಗಿ ಕಾಣಿಸುತ್ತವೆ. ಶಶಾಂಕಾಸನ, ಯೋಗ ನಮಸ್ಕಾರ ಮತ್ತು ಭಾಮರೀ, ಕಪಾಲಭಾತಿಯಂಥ ಪ್ರಾಣಾಯಾಮಗಳ ಮೂಲಕ ಮೆದುಳಿನ ಕ್ರಿಯೆಯನ್ನು ಹೆಚ್ಚು ಚುರುಕಾಗಿರಿಸಬಹುದು.

ನಮ್ಮ ದೇಹದೊಳಗಿನ ಆರೋಗ್ಯಕರ ಚಟುವಟಿಕೆಗಳಿಗೆ ಸಾಕಷ್ಟು ಪ್ರಮಾಣದ ಆಮ್ಲಜನಕ ಅಗತ್ಯ. ಒಂದು ಅಂದಾಜಿನ ಪ್ರಕಾರ ಪ್ರತಿ ಉಸಿರಿನಲ್ಲಿ ಸುಮಾರು 500 ಮಿ.ಲೀ. ಆಮ್ಲಜನಕವನ್ನು ಸೇವಿಸುವ ಶಕ್ತಿ ನಮಗಿದೆ. ಆದರೆ ಉಸಿರಾಟದ ತಪ್ಪು ಕ್ರಮಗಳಿಂದಾಗಿ ಸುಮಾರು 5 ಮಿ.ಲೀ. ನಷ್ಟು ಆಮ್ಲಜನಕ ನಮ್ಮೊಳಗೆ ಸೇರಿಕೊಳ್ಳುತ್ತದೆ. ದೀರ್ಘ‌ ಉಸಿರಾಟ ಅಥವಾ ಪ್ರಾಣಾಯಾಮದ ಅಭ್ಯಾಸದಿಂದ ಹೆಚ್ಚಿನ ಉಸಿರನ್ನು ದೇಹಕ್ಕೆ ಕೊಡಬಹುದು. ಕೊನೆಯದಾಗಿ ಯೋಗದಿಂದಾಗುವ ಉಪಯೋಗಗಳು. ಶ್ವೇತಾಶ್ವತರ ಉಪನಿಷತ್ತಿನ ಒಂದು ಶ್ಲೋಕ ಹೀಗಿದೆ: ಲಘುತ್ವಮಾರೋಗ್ಯಮಲೋಲುಪತ್ವಂ/ ವರ್ಣಪ್ರಸಾದಂ ಸ್ವರ ಸೌಷ್ಠವಂ ಚ/ ಗಂಧಃ ಶುಭೋ ಮಾತ್ರ ಪುರೀಷಮಲ್ಪಂ/ ಯೋಗ ಪ್ರವೃತ್ತಿಂ ಪ್ರಥಮಾಂ ವದಂತಿ ||
ಯೋಗಾಭ್ಯಾಸದ ಪ್ರಥಮ ಲಕ್ಷಣಗಳೆಂದರೆ ದೇಹದಲ್ಲಿ ತೂಕ ಕಡಿಮೆಯಾಗುವುದು, ಆರೋಗ್ಯ, ವಿಷಯ ವಸ್ತುಗಳಲ್ಲಿ ಬಯಕೆ ಕಡಿಮೆಯಾಗುವುದು, ಶರೀರದ ಕಾಂತಿಯ ಹೆಚ್ಚಳ, ಸ್ವರ ಮಾಧುರ್ಯ, ಅಲ್ಪ ಪ್ರಮಾಣದ ಮೂತ್ರ.

ಡಾ.ಶ್ರೀಕಾಂತ್‌, ಸಿದ್ದಾಪುರ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ