ಅನಿವಾಸಿ ಕನ್ನಡಿಗರನ್ನು ಜತೆ ಸೇರಿಸುವ ಹಬ್ಬ ಯುಗಾದಿ
Team Udayavani, Apr 7, 2021, 9:00 AM IST
ಹಬ್ಬಗಳು ಕೇವಲ ನಮ್ಮ ಸಂಪ್ರದಾಯವಲ್ಲ. ಅದು ನಮ್ಮ ಜೀವನದ ರೀತಿಯನ್ನೂ ಸೂಚಿಸುತ್ತದೆ. ಹುಟ್ಟಿ ಬೆಳೆದ, ಆಡಿ ನಲಿದ ಊರು ಬಿಟ್ಟು ಬಂದರೂ ವಿದೇಶದಲ್ಲೂ ನಮ್ಮವರೇ ಎಂದೆನಿಸುವ ಜನರ ಒಡನಾಟ ಸಿಕ್ಕಿದ್ದು ಪುಣ್ಯವೆಂದೇ ಹೇಳಬೇಕು. ಹೀಗಾಗಿ ಕರ್ನಾಟಕದಂತೆ ಇಲ್ಲಿಯೂ ಕೂಡ ಹಬ್ಬ ಹರಿದಿನಗಳನ್ನು ಸ್ನೇಹಿತರು, ಅಕ್ಕಪಕ್ಕದ ಮನೆಯವರೊಂದಿಗೆ ಸೇರಿ ಬಹಳ ಸಂಭ್ರಮದಿಂದ ಆಚರಿಸಿಕೊಂಡು ಬಂದಿದ್ದೇವೆ.
ಯುಗಾದಿಯ ವೈಶಿಷ್ಟ್ಯವೆಂದರೆ ಮಾವು ಬೇವು. ಮಾವಿನ ತಳಿರು ತೋರಣ, ಬೇವಿನ ಹೂವು ಜತೆ ಬೆಲ್ಲದ ನೈವೈದ್ಯ. ಇವು ಇಲ್ಲದೇ ಇದ್ದರೆ ಯುಗಾದಿಯು ಅಪೂರ್ಣ. ಯುಕೆಯ ಯಾವುದೋ ಮೂಲೆಯಲ್ಲಿದ್ದರೆ ಮಾವು ಬೇವು ಸಿಗುವುದು ಕಠಿನ. ಆದರೆ ದೊಡ್ಡ ನಗರಗಳಲ್ಲಿ ದಕ್ಷಿಣ ಭಾರತೀಯರ ಸಂಖ್ಯೆ ತಕ್ಕ ಮಟ್ಟಿಗೆ ಇರುವ ಕಾರಣ ಇಲ್ಲಿನ ಭಾರತೀಯರು ಅದರಲ್ಲೂ ದಕ್ಷಿಣ ಭಾರತದ ದಿನಸಿ ಅಂಗಡಿಗಳಲ್ಲಿ ಬೇವು, ಮಾವು ಯುಗಾದಿ ಹಬ್ಬದ ಮುನ್ನ ಮಾರಾಟಕ್ಕೆ ಇರುತ್ತವೆ. ಲಂಡನ್‌ನಲ್ಲಿ ವಾಸವಾಗಿರುವ ಬಹಳಷ್ಟು ಭಾರತೀಯ ಹಾಗೂ ದಕ್ಷಿಣ ಭಾರತದ ದಿನಸಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಬಾಳೆ ಎಲೆಗಳೂ ಕೂಡ ಸಿಗುತ್ತವೆ.
ಯುಗಾದಿಯು ವರ್ಷದ ಮೊದಲನೇ ಹಬ್ಬವಾದ್ದರಿಂದ ಸಡಗರ ಜಾಸ್ತಿ. ಇಂಗ್ಲೆಂಡ್‌ನಲ್ಲಿ ಹಬ್ಬಕ್ಕೆ ರಜೆಯಿಲ್ಲದ ಕಾರಣ ವೀಕೆಂಡ್‌ಗಾಗಿ ಕಾಯುತ್ತೇವೆ. ಯುಕೆಯಲ್ಲಿರುವ ದಕ್ಷಿಣ ಭಾರತದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.
ಯುಕೆಯಲ್ಲಿ ಬಹಳಷ್ಟು ಸ್ಥಳೀಯ ಕನ್ನಡ ಸಂಘಗಳಿದ್ದು ಯುಗಾದಿ, ದೀಪಾವಳಿಯಂತಹ ದೊಡ್ಡ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬದ ದಿನದಂದು ಮನೆಮಟ್ಟಿಗೆ ಪೂಜೆ, ಹೋಳಿಗೆಯ ಊಟ. ಸಾಧ್ಯವಾದರೆ ಸ್ನೇಹಿತರು ಸಮೀಪದಲ್ಲಿದ್ದರೆ ಎಲ್ಲರೂ ಕೂಡಿ ಒಬ್ಬರ ಮನೆಯಲಿ ಬೇವು ಬೆಲ್ಲ ಹಂಚಿ ಊಟ ಮಾಡುವುದು ಅನಿವಾಸಿಯರ ಹೊಸ ಸಂಪ್ರದಾಯ.
ಅನಂತರ ಕನ್ನಡ ಬಳಗ ಸಮುದಾಯವು ತಮ್ಮ ಸದಸ್ಯರನ್ನೆಲ್ಲ ಒಂದುಗೂಡಿಸಿ ಮುಂಚಿತವಾಗಿ ಕಾದಿರಿಸಿದ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಮಕ್ಕಳಿಂದ ಸಂಗೀತ ನೃತ್ಯದೊಂದಿಗೆ ವಿವಿಧ ಕಲಾ ಪ್ರದರ್ಶನಗಳು ನಡೆಯುತ್ತವೆ. ಜತೆಗೆ ಹಬ್ಬದ ಮಹತ್ವದ ಬಗ್ಗೆ ತಿಳುವಳಿಕೆ ನೀಡಲಾಗುತ್ತದೆ. ಜತೆಗೆ ಒಳ್ಳೆಯ ಭೋಜನದ ವ್ಯವಸ್ಥೆಯು ಇರುತ್ತದೆ. ಕೆಲವೊಮ್ಮೆ ಅಪ್ಪಟ ಬಾಳೆ ಎಲೆಯ ಊಟವು ಆಗುತ್ತದೆ.
ಕರ್ನಾಟಕದಲ್ಲಿ ಆಚರಿಸುವುದಕ್ಕಿಂತ ವಿಭಿನ್ನವಾದ ಒಂದು ಅನುಭವ. ದೂರದ ಊರಿನಲ್ಲಿ ನೆಲಸಿರುವ ಕನ್ನಡಿಗರೆಲ್ಲರೂ ತಮ್ಮ ಪರಿವಾರದೊಂದಿಗೆ ಒಟ್ಟಾಗಿ ನಮ್ಮ ಭಾಷೆ, ಸಂಸ್ಕೃತಿಯನ್ನು ಮಕ್ಕಳಿಗೆ ಕಲಿಸಲು ಹಾಗೂ ಪ್ರೋತ್ಸಾಹಿಸಲು ಒಂದು ಸದವಕಾಶ. ತಿಂಗಳು ಮುಂಚಿತವಾಗಿ ಮಕ್ಕಳಿಗೆ ಕನ್ನಡ ಹಾಡು, ನೃತ್ಯ, ನಾಟಕ ಮತ್ತೆ ಇನ್ನಿತರ ಕಾರ್ಯಕ್ರಮದ ತಯಾರಿ ಮಾಡಿಸುವಲ್ಲಿ ತಂದೆ ತಾಯಿಯರ ಶ್ರಮ ಬಹಳಷ್ಟಿರುತ್ತದೆ. ತಮ್ಮ ವೃತ್ತಿ ಕೆಲಸದ ನಡುವೆ ಬಿಡಿವು ಮಾಡಿಕೊಂಡು ಎಲ್ಲ ತಯಾರಿ ಮಾಡಿ ಕಾರ್ಯಕ್ರಮದ ದಿನದಂದು ತಮ್ಮ ಮಕ್ಕಳನ್ನು ವೇದಿಕೆ ಮೇಲೆ ನಿಂತು ಕನ್ನಡ ಮಾತನಾಡುವುದನ್ನು ನೋಡಿ ಬೀಗುತ್ತಾರೆ.
ಆಂಗ್ಲ ನಾಡಿನಲ್ಲೇ ಹುಟ್ಟಿ, ಬೆಳೆದ ನಮ್ಮ ಮಕ್ಕಳು ಕನ್ನಡದಲ್ಲಿ ಸರಾಗವಾಗಿ ಮಾತಾಡುವುದು, ಕೇಳುವುದೇ ಒಂದು ಖುಷಿ ಹಾಗೂ ಪುಣ್ಯ ಎಂದರೆ ತಪ್ಪಾಗಲಾರದು. ಏಕೆಂದರೆ ಮನೆಯಲ್ಲಿ ಮಾತ್ರ ಕನ್ನಡ ಮಾತಾಡುವುದರಿಂದ ಇಂತಹ ಅವಕಾಶಗಳಿಗೆ ಕಾಯುತ್ತಿರುತ್ತಾರೆ ಕನ್ನಡಿದರು.
ಕೋವಿಡ್ ಕಾರಣದಿಂದ ಕಳೆದ ವರ್ಷ ಯಾವುದೇ ಕಾರ್ಯಕ್ರಮವಾಗಿಲ್ಲ. ಈ ಬಾರಿಯಾದರೂ ನಡೆಯಬಹುದೇ ಎನ್ನುವ ಕಾತರ ಎಲ್ಲರ ಮನದಲ್ಲೂ ಇದೆ. ಆಶ್ಚರ್ಯವೆಂದರೆ ಇಂತಹ ಕಾರ್ಯಕ್ರಮದಲ್ಲಷ್ಟೇ ಕೆಲವು ಕನ್ನಡಿಗರನ್ನು ಭೇಟಿ ಮಾಡಲು ಸಾಧ್ಯ. ಇದಕ್ಕಾಗಿ ಜನ್ಮಭೂಮಿ ಬಿಟ್ಟು ಕರ್ಮಭೂಮಿಗೆ ಬಂದ ನಾವೇ ಅವಕಾಶಗಳನ್ನು ಸೃಷ್ಟಿಸಬೇಕಾದ ಅನಿವಾರ್ಯ.
ಒಟ್ಟಿನಲ್ಲಿ ಈ ಸಂದರ್ಭ ದೂರದ ನಾಡಿನಲ್ಲಿದ್ದರೂ ಅಂಬಿಕಾತನಯದತ್ತರ ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ. ಹೊಸ ವರುಷಕೆ, ಹೊಸ ಹರುಷವ ಮರಳಿ ಮರಳಿ ತರುತ್ತಿದೆ…. ಸಾಲುಗಳನ್ನು ಯುಗಾದಿ ಮತ್ತೆ ಮತ್ತೆ ನೆನಪಿಸುವಂತೆ ಮಾಡುತ್ತದೆ.
– ರಾಧಿಕಾ ಜೋಶಿ, ಲಂಡನ್