ಸ್ವಾತಂತ್ರ್ಯಇತಿಹಾಸದ ಮರು ಓದು

Team Udayavani, Aug 15, 2019, 5:00 AM IST

ಅಂಡಮಾನ್‌ ಕಾರಾಗೃಹವೆಂದ ತತ್‌ಕ್ಷಣ ನೆನಪಿಗೆ ಬರುವುದು ಸ್ವಾತಂತ್ರ್ಯವೀರ ಸಾವರ್ಕರ್‌ ಹೆಸರು. ಪ್ರಸ್ತುತ ಅಂಡಮಾನ್‌ ಕಾರಾಗೃಹದಲ್ಲಿ ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಕರ್ನಾಟಕದ ಕರಾವಳಿಯವರ ಹೆಸರು ಕಂಡುಬರುತ್ತಿಲ್ಲ. ಅಲ್ಲಿ ಹಾಕಿದ ಪಟ್ಟಿಯನ್ನು ಸಿಂಡಿಕೇಟ್ ಬ್ಯಾಂಕ್‌ ಅಂಡಮಾನ್‌ ಶಾಖೆಯಲ್ಲಿ ಸೇವೆ ಸಲ್ಲಿಸಿದ್ದ ಬೆಳಗೋಡು ರಮೇಶ ಭಟ್ಟರಂತಹ ಅನೇಕರು ನೋಡಿ ಇದನ್ನು ದೃಢಪಡಿಸುತ್ತಾರೆ. ಸ್ವಾತಂತ್ರ್ಯೋತ್ತರದಲ್ಲಿ ರಚಿಸಲಾದ ಕರಾವಳಿ ಭಾಗದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಪುಸ್ತಕದಲ್ಲಿಯೂ ಕಂಡು ಬಾರದ ವ್ಯಕ್ತಿಯೊಬ್ಬರು ಅಂಡಮಾನ್‌ ಜೈಲಿನಲ್ಲಿ ಜೈಲುವಾಸ ಅನುಭವಿಸಿದ ಎಳೆಯೊಂದು ಸಿಗುತ್ತಿದೆ. ಇವರೇ ಉಡುಪಿಯ ಸುಬ್ಬರಾವ್‌ ಶಾಸ್ತ್ರಿ.

ಇವರು ಉಡುಪಿ ತೆಂಕಪೇಟೆಯವರಾದರೂ ಬೆಳೆದದ್ದು, ತಿರುಗಾಡಿದ್ದು, ಬ್ರಿಟಿಷರಿಂದ ಪೆಟ್ಟು ತಿಂದದ್ದು ಉಡುಪಿಯಲ್ಲಲ್ಲ, ಹೊರಗಡೆ. ಕಳೆದುಕೊಂಡದ್ದು ಹೋದಲ್ಲೆಲ್ಲ…

ಸುಬ್ಬರಾವ್‌ ಶಾಸ್ತ್ರಿಗಳು 1940ರ ಒಳಗೆ ತನ್ನೆಲ್ಲ ರಾಜಕೀಯ ನೋವುಗಳನ್ನು ಅನುಭವಿಸಿದರು ಎಂಬುದನ್ನು ಶಾಸ್ತ್ರಿಗಳ ಮಗಳು, ಪ್ರಸ್ತುತ ಚೆನ್ನೈ ಟ್ರಿಪ್ಲಿಕೇನ್‌ ನಿವಾಸಿ ಲಲಿತಾ ವಿವರಿಸುತ್ತಾರೆ. ಏಕೆಂದರೆ ಲಲಿತಾ ಹುಟ್ಟಿದ್ದು 1944ರಲ್ಲಿ, ಅಕ್ಕ ಬೇಬಿ ಕೊಡಂಗಳ ಹುಟ್ಟಿದ್ದು 1941ರಲ್ಲಿ. ಮಕ್ಕಳು ಹುಟ್ಟಿದ ಬಳಿಕ ಶಾಸ್ತ್ರಿಗಳು ಮತ್ತೆ ರಾಜಕೀಯ ಚಟುವಟಿಕೆಗಳಿಗೆ ಮೀಸಲಾಗದೆ ಅವಧೂತರಂತೆ ಲೋಕಸಂಚಾರ ಮಾಡುತ್ತಿದ್ದರು. ಪುತ್ರಿಯ ಈ ಹೇಳಿಕೆಗೂ, ಅಂಡಮಾನ್‌ ಜೈಲಿಗೆ ರಾಜಕೀಯ ಕೈದಿಗಳನ್ನು ಅಟ್ಟುವುದನ್ನು ಸರಕಾರ 1939ರಲ್ಲಿ ಕೊನೆಗೊಳಿಸಿದ್ದಕ್ಕೂ ಕಾಲಗಣನೆಯಲ್ಲಿ ತಾಳೆಯಾಗುತ್ತದೆ.

ಬೆಂಕಿ ಕೊಳ್ಳಿಯ ಶಿಕ್ಷೆ!
ಒಬ್ಬೊಬ್ಬರೇ ಕೈದಿಗಳನ್ನು ಸಣ್ಣ ಕೊರಕಲು ಕಲ್ಲಿನ ಕೋಣೆಯೊಳಗೆ ಕೂಡಿ ಹಾಕುತ್ತಿದ್ದರು, ಕೈದಿಗಳು ಪರಾರಿಯಾಗಬಾರದೆಂದು ಸುತ್ತಲೂ 2-3 ಆಳೆತ್ತರದ ಕಲ್ಲಿನ ಗೋಡೆ ಇದ್ದಿತ್ತು. ‘ಇಂಕ್ವಿಲಾಬ್‌ ಜಿಂದಾಬಾದ್‌’ ಎಂದು ಹೇಳಿದವರಿಗೆ ಬೆಂಕಿ ಕೊಳ್ಳಿಯಿಂದ ನುರಿಯುತ್ತಿದ್ದರಂತೆ. ಹೀಗೆ 11 ತಿಂಗಳು ಶಾಸ್ತ್ರಿಗಳು ಜೈಲಿನಲ್ಲಿದ್ದರು. ಸುಬ್ಬರಾವ್‌ ಶಾಸ್ತ್ರಿಗಳ ಪತ್ನಿ ಕಮಲಮ್ಮ ಮೂಲತಃ ಉಡುಪಿ ಸಮೀಪದ ಕಡೆಕಾರಿನವರು. ಆದರೆ ಕಮಲಮ್ಮನ ತಂದೆಯವರು ಕೇರಳದ ತಿರುವನಂತಪುರಕ್ಕೆ ಪೂಜೆಗೆಂದು ಹೋಗಿದ್ದರು. ಶಾಸ್ತ್ರಿಗಳು ಜೈಲಿನಿಂದ ಬಿಡುಗಡೆಗೊಂಡ ಬಳಿಕ ತಿರುವನಂತಪುರಕ್ಕೆ ಹೋದರು. ಅಲ್ಲಿ ಕಮಲಮ್ಮನ ಅಮ್ಮ ಕಾವೇರಿಯಮ್ಮ ಶಾಸ್ತ್ರಿಗಳ ಮೈಗೆ ಆದ ಗಾಯಗಳಿಗೆ ಎಣ್ಣೆ ಹಚ್ಚುತ್ತಿದ್ದರು. ಆಗ ಸುಬ್ಬರಾವ್‌ ಶಾಸ್ತ್ರಿಗಳು ನೋವಾಗುತ್ತದೆಂದು ಬೊಬ್ಬೆ ಹೊಡೆದಾಗ ‘ನಿನಗೆ ಬ್ರಿಟಿಷರು ಬೆಂಕಿ ಕೊಳ್ಳಿಯಿಂದ ನುರಿಯುವಾಗ ನೋವಾಗಲಿಲ್ಲವೆ?’ ಎಂದು ಹೇಳಿದ್ದರಂತೆ.

ವೆಲ್ನೋನ್‌- ನೋನ್‌- ಅನ್‌ನೋನ್‌
ನಾವೀಗ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಕಾಣುವುದು ಶಾಲಾ ಪಠ್ಯಾಧಾರಿತ ಕ್ರಮದಿಂದ. ಇದರಿಂದ ಮೇಲ್ಮಟ್ಟದ ಇತಿಹಾಸ ದರ್ಶನವಾಗುತ್ತದೆ ಹೊರತು ಸೂಕ್ಷ್ಮ (ಮೈಕ್ರೋ) ದರ್ಶನ ಸಾಧ್ಯವಾಗುವುದಿಲ್ಲ. ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವುದೂ ತಾಮ್ರಪತ್ರ, ಪಿಂಚಣಿ ಖಾತೆ ಇತ್ಯಾದಿ ದಾಖಲೆ ಗಳಿಂದ. ಗಾಂಧೀಜಿಯವರೂ ವೆಲ್ನೋನ್‌- ನೋನ್‌- ಅನ್‌ನೋನ್‌ ಹೋರಾಟಗಾರರ ಪರಿಶ್ರಮದಿಂದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳುತ್ತಿದ್ದರು. ಹಲವು ಅನ್‌ನೋನ್‌ ಹೋರಾಟಗಾರರನ್ನು ಸ್ಥಳೀಯ ಸ್ತರದಲ್ಲಿ ಇನ್ನಷ್ಟು ಆಳವಾಗಿ ತಿಳಿಯಬೇಕಾಗಿದೆ ಎಂದು ನಾವು ವಿಚಾರ ಸಂಕಿರಣಗಳಲ್ಲಿ ಪ್ರತಿಪಾದಿಸುತ್ತೇವೆ ಎಂಬ ಅಭಿಮತ ಉಡುಪಿ ಎಂಜಿಎಂ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ಸಂಶೋಧಕ ಯು.ವಿನೀತ್‌ ರಾವ್‌ ಅವರದು.

ಮೌಖಿಕ ಇತಿಹಾಸದ ಮಹತ್ವ
ಸುಬ್ಬರಾವ್‌ ಶಾಸ್ತ್ರಿಗಳಂತಹ ಅಜ್ಞಾತ ಸ್ವಾತಂತ್ರ್ಯ ಹೋರಾಟಗಾರರ ಬಗೆಗೆ ಇನ್ನಷ್ಟು ತಡಕಾಡಬೇಕಾಗಿದೆ. ಇವರ ಹೆಸರು ಅಂಡಮಾನ್‌ ಜೈಲುವಾಸಿಗಳ ಪಟ್ಟಿಯಿಂದ ತಪ್ಪಿ ಹೋಗಿರುವ ಸಾಧ್ಯತೆಯೂ ಇದೆ. ಇಂತಹ ಸಂದರ್ಭದಲ್ಲಿ ಮೌಖೀಕ ಅನುಭವ, ಮೌಖೀಕ ಇತಿಹಾಸಗಳನ್ನು ಆಕರವಾಗಿ ಬಳಸಿಕೊಳ್ಳಬೇಕಾಗುತ್ತದೆ. ಇದು ಖಚಿತವಾದರೆ ಕರ್ನಾಟಕದ ಕರಾವಳಿಗೆ ಸುಬ್ಬರಾವ್‌ ಶಾಸ್ತ್ರಿಗಳು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಚ್ಚಳಿಯದ ಹೆಸರಾಗುತ್ತದೆ.

2 ಕೆ.ಜಿ. ತಾಮ್ರಪತ್ರ ಎಲ್ಲಿಗೆ ಹೋಯಿತು?
ಶಾಸ್ತ್ರಿಗಳು ಕಡೆಕಾರಿನಲ್ಲಿಯೂ ಬಂದು ಉಳಿಯುತ್ತಿದ್ದರು. ತಮ್ಮ ಮನೆಯಾದ ತೆಂಕಪೇಟೆಯ ಸೂರಪ್ಪಯ್ಯ ಮಠಕ್ಕೂ ಹೋಗುತ್ತಿದ್ದರು. ಶಾಸ್ತ್ರಿಗಳಿಗೆ ಸುಮಾರು 1973-74ರ ಅವಧಿಯಲ್ಲಿ ಉಡುಪಿ ತಾಲೂಕು ಕಚೇರಿಯಲ್ಲಿ ತಹಶೀಲ್ದಾರ್‌ ತಾಮ್ರಪತ್ರವನ್ನು ನೀಡಿದರು. ಆಗ ಜತೆಗಿದ್ದ ಸಾಕ್ಷಿ ಪುತ್ರಿ ಲಲಿತಾ. ಚರಕದಲ್ಲಿ ಮಾಡಿದ ನೂಲನ್ನು ಸುತ್ತಿ ಸುಮಾರು ಎರಡು ಕೆ.ಜಿ. ತೂಕದ ತಾಮ್ರಪತ್ರವನ್ನು ನೀಡಿದರು. ಇದೇ ವೇಳೆ ಉಡುಪಿಯ ಮುನ್ನಾ ಸಾಹೇಬರಿಗೂ ತಾಮ್ರಪತ್ರ ದೊರಕಿತು ಎನ್ನುತ್ತಾರೆ ಲಲಿತಾ. ಒಳಗೆ ತಾಮ್ರಪತ್ರ ಪಡೆಯುವಾಗ ಬಾಗಿಲ ಹೊರಗೆ ಬಂಧುವೊಬ್ಬರು ನಿಂತಿದ್ದರು. ‘ಇದು ಬಹಳ ಅಮೂಲ್ಯವಾದ ದಾಖಲೆ’ ಎಂದು ಕೂಡಲೇ ಅದನ್ನು ಕೊಂಡೊಯ್ದರು. ಅದನ್ನು ನನ್ನ ತಾಯಿಯಾಗಲೀ, ಮತ್ತೆ ನಾನಾಗಲೀ ನೋಡಲೇ ಇಲ್ಲ ಎನ್ನುತ್ತಾರೆ ಲಲಿತಾ.

ಶಾಸ್ತ್ರಿಗಳು ಮುಂಬಯಿಯಂತಹ ಅನೇಕ ಕಡೆಗಳಿಗೆ ಹೋಗಿ ಬರುತ್ತಿದ್ದರು. ಎಲ್ಲಿಗೆ ಹೋಗುತ್ತಿದ್ದರು ಎಂದು ಹೇಳಿ ಹೋಗುತ್ತಿರಲಿಲ್ಲ. ಸ್ವಾಮಿ ನಿತ್ಯಾನಂದರು ಹಲವು ವರ್ಷವಿದ್ದ ಕೇರಳದ ಕಾಂಞಂಗಾಡಿಗೂ ಮುಂಬಯಿಯ ವಜ್ರೇಶ್ವರಿಗೂ ಹೋಗಿ ಇರುತ್ತಿದ್ದರು. ಅವರು ಉತ್ತಮ ಪಾಕತಜ್ಞರೂ ಆಗಿದ್ದರು. ಕಡೆಕಾರಿನ ಮನೆಗೆ ಬಂದಾಗಲಷ್ಟೇ ಮಕ್ಕಳಿಗೆ ಸಂಭ್ರಮ ಸಿಗುತ್ತಿತ್ತು. ಒಟ್ಟಾರೆ ದುಡಿದು ಮನೆಗೆ ತಂದು ಹಾಕುತ್ತಿರಲಿಲ್ಲ. ಮೋಸ, ವಂಚನೆ, ಕಪಟವಂತೂ ಇರಲಿಲ್ಲ… 1983ರಲ್ಲಿ ಶಾಸ್ತ್ರಿಗಳು ಕಡೆಕಾರಿನಲ್ಲಿ ಕೊನೆಯುಸಿರೆಳೆದರು.

ಪಿಂಚಣಿ ರದ್ದತಿಗೆ ತಳ್ಳಿ ಅರ್ಜಿ
ನನ್ನ ತಂದೆಗೆ ಸರಕಾರದಿಂದ 200 ರೂ. ಪಿಂಚಣಿ ದೊರಕುತ್ತಿತ್ತು. ನನಗೆ 1977ರ ಎಪ್ರಿಲ್ನಲ್ಲಿ ಮದುವೆಯಾಯಿತು. ಮದುವೆಯಾಗುವಾಗಲೇ 32 ವರ್ಷ. ನನಗೆ ಅಪ್ಪ, ಅಮ್ಮನನ್ನು ನೋಡುವುದು ಮುಖ್ಯವಾಗಿತ್ತೇ ಹೊರತು ಮದುವೆಯಾಗುವುದು ಮುಖ್ಯವಾಗಿರಲಿಲ್ಲ. ನಾನು ಆಗ ಕಿದಿಯೂರು ಹಿ.ಪ್ರಾ. ಶಾಲೆಯಲ್ಲಿ ಶಿಕ್ಷಕಿಯಾಗಿದ್ದೆ. ಮೇ ತಿಂಗಳಲ್ಲಿ ಕಡೆಕಾರಿನ ಮನೆಗೆ ಪೊಲೀಸರು ಬಂದು ನನ್ನನ್ನು ವಿಚಾರಿಸಿದರು. ಆಗ ರಜೆಯಾದ ಕಾರಣ ಗಂಡನ ಮನೆಯಾದ ನೀಲಾವರದ ಸೀತಾರಾಮ ಭಟ್ಟರ ಅವಿಭಕ್ತ ಕುಟುಂಬದ ಮನೆಯಲ್ಲಿದ್ದೆ. ಮರುದಿನ ಪೊಲೀಸರು ಅಲ್ಲಿಗೆ ಬಂದು ತಹಶೀಲ್ದಾರರಿಂದ ಕರೆ ಬಂದಿದೆ ಎಂದರು. ನನ್ನ ಗಂಡ ಲಕ್ಷ್ಮೀನಾರಾಯಣ ಭಟ್ಟರು (ಶಿಕ್ಷಕರು, ಯೋಗಪಟು, ಅವಧೂತರಂತೆ ಇದ್ದವರು) ತಹಶೀಲ್ದಾರರಲ್ಲಿಗೆ ಕರೆದೊಯ್ದಾಗ ‘ನೀನು ಉದ್ಯೋಗಿ, ಅವಿವಾಹಿತೆ. ತಂದೆ ತಾಯಿಯನ್ನು ಸಾಕುವುದು ಕರ್ತವ್ಯ. ಆದ್ದರಿಂದ ತಂದೆಯ ಪಿಂಚಣಿಯನ್ನು ರದ್ದುಪಡಿಸಬೇಕಾಗಿದೆ’ ಎಂದರು. ನಾವು ವಿವಾಹಿತರು ಎಂದು ಹೇಳಿದಾಗ ‘ತಳ್ಳಿ ಅರ್ಜಿ ಬಂದ ಕಾರಣ ವಿಚಾರಣೆ ನಡೆಸಿದೆವು’ ಎಂದು ತಹಶೀಲ್ದಾರರು ಸಮಜಾಯಿಸಿಕೆ ನೀಡಿದರು. ತಹಶೀಲ್ದಾರರ ಹೆಸರು ನೆನಪಿಗೆ ಬರುತ್ತಿಲ್ಲ. ಆ ತಳ್ಳಿ ಅರ್ಜಿ ಅಂಚೆ ಡಬ್ಬಿಗೆ ಹಾಕಿದ್ದು ನಿಟ್ಟೂರು ತಾಂಗದಗಡಿಯಿಂದ ಎಂದು ತಿಳಿದುಬಂತು. ಇದನ್ನು ಹೇಳುವಾಗ ಹೊಟ್ಟೆ ಉರಿಯುತ್ತದೆ. ಸ್ವಾತಂತ್ರ್ಯ ಹೋರಾಟಗಾರನ ಮಗಳು ಎಂಬ ಹೆಮ್ಮೆ ಇದ್ದೇ ಇದೆ.
● ಲಲಿತಾ, ನಿವೃತ್ತ ಶಿಕ್ಷಕಿ,ಸುಬ್ಬರಾವ್‌ ಶಾಸ್ತ್ರಿಗಳ ಪುತ್ರಿ.

ಆತ ದೇವದೂತನಪ್ಪ !
ಸುಬ್ಬರಾವ್‌ ಶಾಸ್ತ್ರಿಗಳು ತಿಂಗಳು ಗಟ್ಟಲೆ ತಿರುಗಾಟಕ್ಕೆ ಹೋಗುವಾಗ ಹೇಳಿ ಹೋಗುವ ಕ್ರಮವಿರಲಿಲ್ಲ. ಬಂದ ಬಳಿಕ ತನ್ನ ಅನುಭವಗಳನ್ನು ಮನೆಯವರ ಬಳಿ ಹಂಚಿ ಕೊಳ್ಳುತ್ತಿದ್ದರು. ವಜ್ರೆಶ್ವರಿಗೆ ಹೋದಾಗ ನಿತ್ಯಾನಂದ ಸ್ವಾಮಿಗಳು ಹೇಳುತ್ತಿದ್ದುದನ್ನು ಮನೆಗೆ ಬಂದು ಹೇಳುತ್ತಿದ್ದರು. “ನೀನು ಉಡುಪಿಯಿಂದ ಬಂದದ್ದಲ್ಲವೆ? ನಿಮ್ಮೂರಿನ ಸಪೂರದವ ಆ ಊರಿಗೆ ಬಂದಿದ್ದ, ಈ ಊರಿಗೆ ಬಂದಿದ್ದ’ ಎಂದು ಪೇಜಾವರ ಸ್ವಾಮೀಜಿಯವರ ಬಗ್ಗೆ ನಿತ್ಯಾನಂದ ಸ್ವಾಮಿಗಳು ಹೇಳುತ್ತಿದ್ದರು. “ಅವರು ಗುರುಗಳಲ್ಲವೆ?’ ಎಂದು ಹೇಳಿದಾಗ “ಆತ ದೇವದೂತನಪ್ಪ’ ಎಂದು ನಿತ್ಯಾನಂದರು ಉತ್ತರಿಸುತ್ತಿದ್ದರಂತೆ. ತಂದೆಯಿಂದ ಕೇಳಿದ ಈ ಮಾತುಗಳನ್ನು ಪುತ್ರಿ ಲಲಿತಾ ನೆನಪಿಸಿಕೊಳ್ಳುತ್ತಾರೆ.

• ಮಟಪಾಡಿ ಕುಮಾರಸ್ವಾಮಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾದೆಂಬ...

  • ಹಿರಿಯ ಜೀವಿಗಳೆಡೆಗೆ ತಾತ್ಸಾರ ಸರ್ವಥಾಸಲ್ಲ. ವೃದ್ಧರನ್ನು ಪ್ರೀತಿ- ಗೌರವಗಳಿಂದ ಕಾಣುವುದು ಹಾಗೂ ಅವರು ಸದಾ ಚಟುವಟಿಕೆಯಿಂದ ಇರುವಂತೆ ನೋಡಿ ಕೊಳ್ಳುವುದು,...

  • ಪಂಡಿತ್‌ ದೀನ ದಯಾಳ್‌ ಅವ ರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದರು. ಹೆಸರಿಗೆ ತಕ್ಕಂತೆ ಯೇ ಅವರ ಚಿಂತನೆಯೂ ಇತ್ತು. ವ್ಯಕ್ತಿ...

  • ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ...

  • ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು. ಸಮಾಜದಲ್ಲಿ ಆಳವಾಗಿ...

ಹೊಸ ಸೇರ್ಪಡೆ