ಅಪ್ಪ ಎಂಬ ಅನಂತ ವಿಶ್ವ!

Team Udayavani, Jun 16, 2019, 8:37 AM IST

ಸಿಟಿಯಲ್ಲಿ ಬೆಳಿಗ್ಗೆ ಆಫೀಸ್‌ಗೆ ಹೋಗಿ ರಾತ್ರಿ ಮನೆಗೆ ಬಂದು ಕೇಳಿದಷ್ಟು ಪಾಕೆಟ್ ಮನಿ ಕೊಟ್ಟು, ಪ್ರೋಗ್ರೆಸ್‌ ಕಾರ್ಡ್‌ಗೆ ಸೈನ್‌ ಹಾಕಿ ಕರ್ತವ್ಯ ಮುಗಿಸುವ ಎಷ್ಟೋ ಅಪ್ಪಂದಿರಿದ್ದಾರೆ. ಎಷ್ಟೋ ಮಕ್ಕಳು ಅಪ್ಪಂದಿರ ಪೂರಾ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಅಪ್ಪ ಅವರ ಪಾಲಿಗೆ ಒಂದು ಎಟಿಎಂ ಇದ್ದಂತೆ. ಅಮ್ಮನ ಮೂಲಕ ಇಷ್ಟಾರ್ಥ ಸಾಧನೆಗೆ ಅಪ್ಪ ಒಂದು ಡೆಬಿಟ್ ಕಾರ್ಡ್‌.

ಅಮ್ಮ ಸತ್ಯ, ಅಪ್ಪ ಒಂದು ನಂಬಿಕೆ ಎಂದು ಹೇಳುತ್ತಾರೆ. ಅಮ್ಮ ಪ್ರೀತಿ ವಾತ್ಸಲ್ಯದ ಮಡಿಲಲ್ಲಿ ಬೆಚ್ಚನೆಯ ಭದ್ರತೆ ನೀಡಿದರೆ ಈ ನಂಬಿಕೆಯ ಅಪ್ಪ ಮಗುವನ್ನು ಲೋಕದ ಅಚ್ಚರಿಗಳಿಗೆ, ಅನನ್ಯ ಅನುಭವಗಳಿಗೆ ತೆರೆದಿಡುತ್ತಾನೆ. ಮಗುವಿನ ನಂಬಿಕೆ ಉಳಿಸಿಕೊಳ್ಳಲು ಇಷ್ಟೆಲ್ಲಾ ಮಾಡಿಯೂ ಈ ನಂಬಿಕೆಯ ಅಪ್ಪ ಕೊನೆಗೊಂದು ದಿನ ಮಗನ/ಮಗಳ ನಂಬಿಕೆ ಕಳೆದುಕೊಂಡು ಬಿಡುತ್ತಾನೆ.

ತಾನು ನಿರುಪಯುಕ್ತ ತ್ಯಾಜ್ಯ ವಸ್ತು ಎನ್ನುವ ಹಂತ ತಲುಪಿಬಿಡುತ್ತಾನೆ. ಮಕ್ಕಳಿಂದ ತಾನು ಗೌರವಿಸಲ್ಪಡಬೇಕು ಎಂದು ದಯನೀಯವಾಗಿ ಹಂಬಲಿಸುವ ಹಪಾಹಪಿ ಬಂದುಬಿಡುತ್ತದೆ. ಅಪ್ಪಂದಿರ ದಿನದಂದು ಅಪ್ಪನಿಗೆ ಕಾರ್ಡ್‌ ಕೊಟ್ಟು, ಗಿಫ್ಟ್ ಕೊಟ್ಟು ವಿಶ್‌ ಹೇಳಿದ ಮಕ್ಕಳೇ ಒಂದೈದು ವರ್ಷಗಳಲ್ಲಿ ಅಪ್ಪಂದಿರ ದಿನ ಎಂದರೆ ಅಪ್ಪನ ಸೆರಮನಿ, ತಿಥಿ ಎನ್ನುವ ಹಂತ ತಲುಪಿಬಿಡುತ್ತಾರೆ. ಇದು ತಲೆಮಾರಿನ ಅಂತರವೂ ಅಲ್ಲ, ಕಾಲದ ವೈಪರೀತ್ಯವೂ ಅಲ್ಲ, ಆಧುನಿಕತೆಯ ವಿಕಾರವೂ ಅಲ್ಲ, ಮಕ್ಕಳನ್ನು ನೈತಿಕ ಮಾರ್ಗದಲ್ಲಿ ನಡೆಸಲಾಗದ ಅಪ್ಪಂದಿರೇ ತಮಗೆ ತಾವು ಮಾಡಿಕೊಂಡ ದ್ರೋಹ!

ಅಮ್ಮ ಮಗುವನ್ನು ಸಂಸ್ಕೃತಿ, ಸಂಸ್ಕಾರ, ಅದರ್ಶ ನಡವಳಿಕೆಯ ಅನನ್ಯ ಮಾದರಿಯಾಗುವಂತೆ ರೂಪಿಸುತ್ತಾಳೆ. ಆದರೆ ಬಹಳಷ್ಟು ಅಪ್ಪಂದಿರು ತಮ್ಮ ಮಕ್ಕಳ ಉನ್ನತ ಶಿಕ್ಷಣ, ಐಷಾರಾಮಿ ಜೀವನಕ್ಕೆ ಹಣ ಹೊಂದಿಸಲು ತಾವು ಭ್ರಷ್ಟರಾಗುತ್ತಾ ಹೋಗುತ್ತಾರೆ. ನನಗೋಸ್ಕರ ಅಲ್ಲ, ನನ್ನ ಕಾಲವಾಯಿತು, ಮಗನಿಗೋಸ್ಕರ ಕೊಡಿ, ನನ್‌ ಮಗಳ ಮದುವೆಗೆ ಕೊಡಿ ಎಂದು ನಿರ್ಭಿಡೆಯಿಂದ ಅಕ್ರಮ ದುಡ್ಡಿಗೆ ಹಾತೊರೆಯುತ್ತಾರೆ. ಮಕ್ಕಳನ್ನೇ ಆಸ್ತಿ ಮಾಡುವ ಬದಲು ಅವರಿಗಾಗಿ ಆಸ್ತಿ ಮಾಡಲು ಹೊರಡುತ್ತಾರೆ. ಅಪ್ಪ ಅನುಸರಿಸುವ ಹಾದಿಯೇ ಶ್ರೇಷ್ಠ ಎಂದು ಮಕ್ಕಳು ಪರಿಭಾವಿಸುತ್ತಾರೆ. ಹಾಗಾಗಿಯೇ ಈ ಐಹಿಕ ಸುಖಗಳಿಗೆ ಬೆಂಗಾವಲಾಗಿ ನಿಲ್ಲಲು ಅಪ್ಪ ಸೋತಾಗ ಅವನು ಮಗನ ಪಾಲಿಗೆ ಕಸವಾಗುತ್ತಾನೆ. ತನ್ನನ್ನು ಮೇಲೆತ್ತಿ ಎಸೆದು ಗಟ್ಟಿಯಾಗಿ ಹಿಡಿದ ಕೈಗಳನ್ನು ಭಿಕ್ಷುಕನ ಕೈಗಳಂತೆ ಅಸಹ್ಯದಿಂದ ನೋಡುತ್ತಾನೆ. ಫಾದರ್ ಡೇ ಅವನ ಸೆರಮನಿ ದಿನ ಎನಿಸುತ್ತದೆ. ಮೌಲ್ಯಗಳನ್ನು ಕಲಿಸಿದ ಅಪ್ಪ ಎಂದಿಗೂ ಮಗನನ್ನು ಅವಲಂಬಿಸದೆ ಪೂಜನೀಯನಾಗುತ್ತಾನೆ. ಅಪ್ಪ ನಮಗೆ ಇಷ್ಟೆಲ್ಲಾ ಸಂಪತ್ತು, ಸೌಕರ್ಯ ಕೊಟ್ಟ ಎಂದು ಸ್ಮರಿಸುವ ಬದಲು ಅಪ್ಪ ನಮ್ಮನ್ನು ಸನ್ನಡತೆಯ ಹಾದಿಯಲ್ಲಿ ನಡೆಸಿದ ಎಂದು ಮಕ್ಕಳು ಕೃತಜ್ಞತೆ ಸಲ್ಲಿಸಬೇಕು. ಹಾಗೆಯೇ ಅಪ್ಪಂದಿರು ತಾವು ನೈತಿಕ ಹಾದಿಯಲ್ಲಿ ನಡೆದು ಮಕ್ಕಳನ್ನೂ ಅದೇ ದಾರಿಯಲ್ಲಿ ನಡೆಸುವ ಸಂಕಲ್ಪ ಮಾಡಬೇಕು.

ಅಪ್ಪ ಎಂದರೆ ಆಕಾಶ ಎಂದು ಹೇಳುತ್ತಾರೆ. ಅಪ್ಪ ಎಷ್ಟು ನೋಡಿದರೂ ಮುಗಿಯದ, ಕೊನೆ ಮೊದಲಿಲ್ಲದ ಅನಂತ ವಿಶ್ವ. ಹಾಗೇ ಆಕಾಶದಂತೆ ಹಲವು ವೈವಿಧ್ಯಮಯ ಸೃಷ್ಟಿಗಳಾದ ಸೂರ್ಯ, ಚಂದ್ರ, ನಕ್ಷತ್ರಗಳಂತೆ ಬೆಳಗುವ ವ್ಯಕ್ತಿತ್ವವನ್ನು ಹೊಂದಿದವನು ಎಂತಲೂ ಇರಬಹುದು.

ಆದರೆ ಅಪ್ಪ ಕೈಗೆಟುಕದ ದೂರದಿಂದಲೇ ನೋಡಿ ತೃಪ್ತಿಪಟ್ಟುಕೊಳ್ಳುವ ಆಕಾಶ ಎಂದು ಅನಿಸಬಾರದು. ಅಪ್ಪ ಎಂದರೆ ಭೂಮಿ, ಈ ನನ್ನ ಅಪ್ಪ ಡೌನ್‌ ಟು ಅರ್ತ್‌ ಗುಣ ಲಕ್ಷಣಗಳನ್ನು ಹೊಂದಿದ್ದ ಒಬ್ಬ ಅಪರೂಪದ ವ್ಯಕ್ತಿ ಎಂದು ಪ್ರತಿಯೊಬ್ಬ ಮಗ/ಮಗಳಿಗೂ ಅನಿಸಬೇಕು. ಹಾಗೆ ಅನಿಸುವಂತೆ ಅಪ್ಪನೂ ನಡೆದುಕೊಳ್ಳಬೇಕು. ಅಂತಹ ಗುಣಾದರ್ಶಗಳೊಂದಿಗೆ ಬದುಕಬೇಕು. ಹಾಗಾದಾಗ ಮಾತ್ರ ಅಪ್ಪಂದಿರು ಮಕ್ಕಳ ಮನಃಪಟಲದಲ್ಲಿ, ನೆನಪಿನ ಪದರಗಳಲ್ಲಿ ಎಂದಿಗೂ ಚಿರಸ್ಥಾಯಿಯಾಗಿ ಉಳಿಯುತ್ತಾರೆ. ಅಮ್ಮ ಸಹನೆಯಲ್ಲಿ, ಪಾಲನೆಯಲ್ಲಿ, ಶಾಂತಿಯಲ್ಲಿ ಭೂಮಿಗೆ ಸರಿಸಾಟಿಯಾದವಳು ಎಂದು ಹೇಳುತ್ತಾರೆ. ಅದು ಸತ್ಯವೇ! ಆದರೆ ಹಲವು ಅಪ್ಪಂದಿರೂ ಸಹ ಕ್ಷಮಯಾ ಧರಿತ್ರೀ ಎನ್ನುವಂತೆ ಸಹನೆ, ತಾಳ್ಮೆಯ ಸಾಕಾರ ಮೂರ್ತಿಯಾಗಿರುತ್ತಾರೆ ಎನ್ನುವುದು ಸುಳ್ಳಲ್ಲ.

ಎಲ್ಲ ಮಕ್ಕಳಿಗೂ ಅವರ ಅಪ್ಪಂದಿರು ಶ್ರೇಷ್ಠವೇ ಅನಿಸುತ್ತಾರೆ. ಜಸ್ಟ್‌ ಹಾಗೆ ಅನಿಸಿಬಿಟ್ಟರೇ ಅಪ್ಪನ ಋಣ ಅರ್ಧ ಹರಿದಂತೆ..! ಬಹಳಷ್ಟು ಅಪ್ಪಂದಿರು ತಾವು ಕುಗ್ರಾಮದಲ್ಲಿ ಓದಿದ್ದರೂ, ಸೌಲಭ್ಯಗಳಿಂದ ವಂಚಿತರಾಗಿದ್ದರೂ, ಗ್ರಾಮಾಂತರ ಪ್ರದೇಶದಲ್ಲಿ ವೃತ್ತಿ ಮಾಡುತ್ತಿದ್ದರೂ ಮಕ್ಕಳು ಅವಕಾಶವಂಚಿತರಾಗಬಾರದೆಂಬ ಕಾರಣಕ್ಕೆ ಮಕ್ಕಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ದೊಡ್ಡ ದೊಡ್ಡ ನಗರಗಳಲ್ಲಿ ಉನ್ನತ ಶಿಕ್ಷಣ ಕೊಡಿಸುತ್ತಾರೆ. ಅವರಿಗೆ ಮಕ್ಕಳು ಸಿಟಿಯಲ್ಲಿ ಎಂತಹ ಬದುಕು ಬಾಳುತ್ತಿದ್ದಾರೆ, ಅವರು ಉತ್ತಮ ದಾರಿಯಲ್ಲಿ ನಡೆಯುತ್ತಿದ್ದಾರಾ? ಸಂಸ್ಕಾರವಂತ ರಾಗಿದ್ದಾರಾ? ಒಳ್ಳೆಯ ಸಹವಾಸದಲ್ಲಿದ್ದಾರಾ? ಎಂದು ವಿಚಾರಿಸುವ ವ್ಯವಧಾನವೇ ಇರುವುದಿಲ್ಲ, ಸಮಯವೂ ಇರುವುದಿಲ್ಲ.

ಇನ್ನು ಸಿಟಿಯಲ್ಲಿ ಬೆಳಿಗ್ಗೆ ಆಫೀಸ್‌ಗೆ ಹೋಗಿ ರಾತ್ರಿ ಮನೆಗೆ ಬಂದು ಕೇಳಿದಷ್ಟು ಪಾಕೆಟ್ ಮನಿ ಕೊಟ್ಟು, ಪ್ರೋಗ್ರೆಸ್‌ ಕಾರ್ಡ್‌ಗೆ ಸೈನ್‌ ಹಾಕಿ ಕರ್ತವ್ಯ ಮುಗಿಸುವ ಎಷ್ಟೋ ಅಪ್ಪಂದಿರಿದ್ದಾರೆ. ಎಷ್ಟೋ ಮಕ್ಕಳು ಅಪ್ಪಂದಿರ ಪೂರಾ ಪ್ರೀತಿಯಿಂದ ವಂಚಿತರಾಗಿರುತ್ತಾರೆ. ಅಪ್ಪ ಅವರ ಪಾಲಿಗೆ ಒಂದು ಎಟಿಎಂ ಇದ್ದಂತೆ. ಅಮ್ಮನ ಮೂಲಕ ತಮ್ಮ ಇಷ್ಟಾರ್ಥ ಸಾಧನೆಗೆ ಅಪ್ಪ ಒಂದು ಡೆಬಿಟ್ ಕಾರ್ಡ್‌. ತಮ್ಮ ಮಕ್ಕಳು ಏನು ಸಾಧಿಸಿದರು? ಎಂಬುದನ್ನು ನೋಡುವ ಹಂಬಲ ಇದ್ದರೂ ಎಷ್ಟೋ ಅಪ್ಪಂದಿರಿಗೆ ಅಂತಹ ಅವಕಾಶವೇ ಇರುವುದಿಲ್ಲ. ಅಪ್ಪಂದಿರು ತಮ್ಮೆಲ್ಲಾ ಕರ್ತವ್ಯ, ವ್ಯವಹಾರ, ಜವಾಬ್ದಾರಿಗಳ ನಡುವೆ ಮಕ್ಕಳಿಗೆಂದೇ ಒಂದಿಷ್ಟು ಸಮಯವನ್ನು ಮೀಸಲಿಡಬೇಕು..ಅವರ ಜೊತೆ ಒಡನಾಡಬೇಕು. ಅವರ ಜೊತೆ ಊಟ ಮಾಡಬೇಕು..ಅವರ ಕಷ್ಟ ಸುಖಗಳನ್ನು ವಿಚಾರಿಸಬೇಕು. ಮಕ್ಕಳಿಗೆ ಒಬ್ಬ ಸ್ನೇಹಿತನಾಗಿ, ಮಾರ್ಗದರ್ಶಿಯಾಗಿ, ತತ್ವಜ್ಞಾನಿಯಾಗಿ ಮಾರ್ಗದರ್ಶನ ಮಾಡಬೇಕು. ಕೈ ಹಿಡಿದು ಅಕ್ಷರ ತಿದ್ದಿಸದಿದ್ದರೂ, ಹೆಗಲ ಮೇಲೆ ಹೊತ್ತು ತಿರುಗದಿದ್ದರೂ ಜಾರಿ ಬೀಳದಂತೆ ಕೈ ಹಿಡಿದು ನಡೆಸಬೇಕಾದ್ದು ಅಪ್ಪನ ಕರ್ತವ್ಯ.

ಇಷ್ಟಕ್ಕೂ ಮೀರಿ ಅಪ್ಪ ಮಾಡುವುದು ಏನಾದರೂ ಇದೆಯಾ ಎಂದು ಯೋಚಿಸಿದರೆ ಅದು ಮಕ್ಕಳಿಗೆ ಆಸ್ತಿ ಮಾಡುವುದು, ಎಫ್ಡಿ ಮಾಡುವುದು, ಕೆಲಸ ಕೊಡಿಸುವುದು, ಮಾಡಿದ ಖರ್ಚನ್ನೆಲ್ಲಾ ವರದಕ್ಷಿಣೆ ರೂಪದಲ್ಲಿ ವಾಪಸ್‌ ಪಡೆದು ಭವ್ಯವಾಗಿ ಮದುವೆ ಮಾಡುವುದು ಇತ್ಯಾದಿ ಏನು ಬೇಕಾದರೂ ಆಗಬಹುದು. ಆದರೆ ಮಕ್ಕಳನ್ನು ಮಾನಸಿಕವಾಗಿ ಗಟ್ಟಿಗೊಳಿಸಿ ಅವರನ್ನು ಸವಾಲುಗಳನ್ನು ಎದುರಿಸುವಂತೆ ಮಾಡುವುದು ತುಂಬಾ ಮುಖ್ಯ. ಜೊತೆಗೆ ನಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರದೆ ಅವರ ಅಭಿಪ್ರಾಯ ಮತ್ತು ಭಾವನೆಗಳನ್ನು ಉತ್ತೇಜಿಸುವುದೂ ಅಷ್ಟೇ ಮುಖ್ಯ. ಹಾಗೇ ಅವರಲ್ಲಿ ಮಾನವೀಯತೆ ಹಾಗೂ ವೈಚಾರಿಕತೆ ಈ ಎರಡೂ ಮೌಲ್ಯಗಳನ್ನು ಎರಕ ಹುಯ್ಯುವ ಅಪ್ಪಂದಿರಂತೂ ತುಂಬಾ ಅಪರೂಪ!

ಸಂಪತ್ತನ್ನು ಕ್ಷಣಿಕ ಸಂತೋಷ ಮತ್ತು ವೈಭವಕ್ಕೆ ಬಳಸಬೇಡ, ಸಂಪತ್ತು ಶಾಶ್ವತವಲ್ಲ, ಸಂಪತ್ತಿಗೆ ನೀನು ಕೇವಲ ಟ್ರಸ್ಟೀ, ಸಾಮಾನ್ಯ ಜನರ ಪರವಾಗಿ ಅದನ್ನು ನೀನು ಹೊಂದಿದ್ದೀಯ! ಅತಿ ಕಡಿಮೆ ಹಣ ಉಪಯೋಗಿಸಿ ಸರಳ ಜೀವಿಯಾಗಿ ಸಮಾಜದ ಸೇವೆ ಮಾಡು ಎಂದು ಗಾಂಧಿ ಅನುಯಾಯಿಯಾಗಿದ್ದ ಕೈಗಾರಿಕೋದ್ಯಮಿ ಘನಶ್ಯಾಮ್‌ ಬಿರ್ಲಾ ತಮ್ಮ ಮಗ ಬಸಂತ್‌ ಕುಮಾರ್‌ ಬಿರ್ಲಾ ಅವರಿಗೆ ಹೇಳಿದಂತೆ ಎಷ್ಟು ಜನ ಅಪ್ಪಂದಿರು ತಮ್ಮ ಮಕ್ಕಳಿಗೆ ಬುದ್ದಿ ಹೇಳಿದ್ದಾರೆ? ಅಪ್ಪ ಭುವನದ ಭಾಗ್ಯ ಎನಿಸಿದಾಗಷ್ಟೇ ಅವನನ್ನು ತನ್ನ ಕಣ್‌ರೆಪ್ಪೆಯಲ್ಲಿ ಕಾಪಾಡುವ ಸಂಸ್ಕೃತಿ ಬೆಳೆದೀತು. ವೃದ್ಧಾಪ್ಯದಲ್ಲಿ ವೃದ್ಧಾಶ್ರಮಕ್ಕೆ ಅಟ್ಟುವ ಪರಿಪಾಠ ನಿಂತೀತು!.

• ತುರುವೇಕೆರೆ ಪ್ರಸಾದ್‌


ಈ ವಿಭಾಗದಿಂದ ಇನ್ನಷ್ಟು

  • ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ....

  • ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ....

  • ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ...

  • ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ...

  • "ಸ್ವಾತಿ ಮುತ್ತಿನ ಮಳೆ ಹನಿಯೆ| ಮೆಲ್ಲ ಮೆಲ್ಲನೆ ಧರೆಗಿಳಿಯೆ||...' ಸಿನೇಮಾ ಹಾಡು ಈಗಲೂ ಗುನುಗುನಿಸುತ್ತಿರಬಹುದು, ಕೆ(ಹ)ಲವರ ಮನದಲ್ಲಿಯಾದರೂ... ಅ. 24ರ ಸಂಜೆಯಿಂದ ಸ್ವಾತಿ...

ಹೊಸ ಸೇರ್ಪಡೆ