Udayavni Special

ಬ್ಯಾಂಕ್‌ ರಾಷ್ಟ್ರೀಕರಣದ ಐವತ್ತು ವರ್ಷಗಳು

ಜುಲೈ 19, 1969ರ ರಾತ್ರಿ ಇಂದಿರಾ ಗಾಂಧಿ ಸುಗ್ರೀವಾಜ್ಞೆ ಮೂಲಕ 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು

Team Udayavani, Jul 19, 2019, 5:00 AM IST

t-47

ಆ ಕಾಲಕ್ಕೆ ಜನ ಸಾಮಾನ್ಯರಿಗೆ ಬ್ಯಾಂಕ್‌ ಉದ್ಯೋಗಗಳು ಮರೀಚಿಕೆಯಾಗಿತ್ತು. ಸುಮಾರು 300 ಬ್ಯಾಂಕ್‌ಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ರಿಸರ್ವ್‌ ಬ್ಯಾಂಕ್‌ಗೆ ಚಾಲೆಂಜಿಂಗ್‌ ಅಗಿತ್ತಂತೆ. ಬಹುತೇಕ ಬ್ಯಾಂಕ್‌ಗಳು ಟ್ರೇಡ್‌ ಫೈನಾನ್ಸ್‌ ಮಾಡುತ್ತಿದ್ದು, ದೇಶದ ಸರ್ವೋತ್ತಮ ಅಭಿವೃದ್ಧ್ದಿಗೆ ಅವಶ್ಯಕವಾದ ಕೃಷಿ ಮತ್ತು ಸಣ್ಣ ಉದ್ದಿಮೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು.

ಇಂದಿಗೆ ಸರಿಯಾಗಿ ಐವತ್ತು ವರ್ಷಗಳ ಹಿಂದೆ, ಜುಲೈ 19, 1969ರಂದು ರಾತ್ರಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಸುಗ್ರೀವಾಜ್ಞೆಯ ಮೂಲಕ 50 ಕೋಟಿಗೂ ಮಿಕ್ಕಿ ಠೇವಣಿ ಇರುವ 14 ಬ್ಯಾಂಕುಗಳನ್ನು ರಾಷ್ಟ್ರೀಕರಿಸಿದರು. ನಂತರ ರಾಷ್ಟ್ರವನ್ನು ಉದ್ದೇಶಿಸಿ ಆಕಾಶವಾಣಿಯ ಮೂಲಕ (ಆಗ ದೇಶದಲ್ಲಿ ಟಿವಿ ಇರಲಿಲ್ಲ) ಭಾಷಣ ಮಾಡಿದ ಇಂದಿರಾ ಗಾಂಧಿಯವರು, ಬ್ಯಾಂಕುಗಳ ರಾಷ್ಟ್ರೀಕರಣದ ಹಿಂದಿನ ಉದ್ದೇಶವನ್ನು ಮತ್ತು ಮುಂದಿನ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದರು.

ಬ್ಯಾಂಕ್‌ ರಾಷ್ಟ್ರೀಕರಣದ ಅರ್ಥ, ಮಹತ್ವ ಮತ್ತು ಉದ್ದೇಶವನ್ನು ತಿಳಿಯದ ಜನಸಾಮಾನ್ಯರು ಮತ್ತು ಕೆಲವು ಮಾಧ್ಯಮದವರು ಇಂದಿರಾಗಾಂಧಿಯವರ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದರು. ಇದೊಂದು ರಾಜಕೀಯ ಮಸಲತ್ತು ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಪಕ್ಷದಲ್ಲಿನ ಮತ್ತು ಸರ್ಕಾರದಲ್ಲಿನ ಕೆಲವು ಹಿರಿಯ ನಾಯಕರಿಗೆ ಇಂದಿರಾ ಗಾಂಧಿಯವರ ಈ ಕ್ರಾಂತಿಕಾರಿ ಅರ್ಥಿಕ ಸುಧಾರಣಾ ಹೆಜ್ಜೆಗೆ ಸಹಮತವಿರಲಿಲ್ಲ. ಇದನ್ನು ಮೊದಲೇ ತಿಳಿದ ಇಂದಿರಾಗಾಂಧಿಯವರು ತಮ್ಮ ನಂಬುಗೆಯ ಕೆಲವು ಹಿರಿಯ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ಮಾತ್ರ ವಿಶ್ವಾಸಕ್ಕೆ ತೆಗೆದುಕೊಂಡಿದ್ದರಂತೆ. ಸರ್ಕಾರದ ಇಂಥ ಮಹತ್ವದ ಕ್ರಮದ ಬಗ್ಗೆ ರಿಸರ್ವ್‌ ಬ್ಯಾಂಕ್‌ ಗವರ್ನರ್‌ಗೆ ಕೂಡಾ ಮಾಹಿತಿ ಇರಲಿಲ್ಲವಂತೆ. ಮೊರಾರ್ಜಿ ದೇಸಾಯಿ ಮತ್ತು ಇಂದಿರಾ ಗಾಂಧಿಯವರ ಮಧ್ಯದ ಶೀತಲ ಸಮರಕ್ಕೆ ಇದೂ ಕಾರಣ ಎಂದು ರಾಜಕೀಯ ಇತಿಹಾಸಕಾರರು ಹೇಳುತ್ತಾರೆ.

ರಾಷ್ಟ್ರೀಕರಣಕ್ಕೆ ಸಹಮತ ಇರದಿದ್ದರೆ, ಹಣಕಾಸು ಇಲಾಖೆ ಬಿಟ್ಟು ಕೇವಲ ಉಪಪ್ರಧಾನಿಯಾಗಿ ಮುಂದುವರೆಯುವಂತೆ ಇಂದಿರಾಗಾಂಧಿಯವರು ದೇಸಾಯಿಯವರಿಗೆ ಸೂಚಿಸುವಷ್ಟು ವಿಷಯ ಗಂಭೀರವಾಗಿತ್ತಂತೆ. ಈ ಸುಗ್ರೀವಾಜ್ಞೆಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಅರಂಭದಲ್ಲಿ 34 ದಿನಗಳ ಮಧ್ಯಂತರ ತಡೆ ಅಜ್ಞೆಯೂ ಬಂದಿತ್ತು. ದೇಶದ ಹೆಸರಾಂತ ವಕೀಲರಾದ ನಾನಿ ಪಾಲ್ಕಿವಾಲಾರಂಥವರು ಇದನ್ನು ವಿರೋಧಿಸಿದ್ದರು. ಈ ಪ್ರಕರಣದಲ್ಲಿ ಕೋರ್ಟ್‌ನಲ್ಲಿ ತಿಂಗಳು ಗಟ್ಟಲೆ ನಡೆದ ವಾದ-ವಿವಾದಗಳು, ಇಂದಿಗೂ ಕೇಶವಾನಂದ ಭಾರತಿ ಮತ್ತು ರಾಜಧನ ರದ್ದತಿ ಪ್ರಕರಣಗಳಂತೆ ದೇಶದ ಕಾನೂನು ವಿದ್ಯಾರ್ಥಿಗಳಿಗೆ ಸಾಂವಿಧಾನಿಕ ಕಾನೂನಿನಲ್ಲಿ ಉಲ್ಲೇಖಾರ್ಹ ಪ್ರಕರಣವಾಗಿದೆ.

ಎರಡನೇ ಸುತ್ತಿನ ರಾಷ್ಟ್ರೀಕರಣ
ಬ್ಯಾಂಕ್‌ ರಾಷ್ಟ್ರೀಕರಣ ಉದ್ದೇಶಿತ ಸಾಫ‌ಲ್ಯ ನೀಡುವುದನ್ನು ನೋಡಿ, ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯ ನಂತರದ ಸೋಲಿನ ಬಳಿಕ ಪುನಃ 1980ರಲ್ಲಿ ಅಧಿಕಾರಕ್ಕೆ ಬಂದಾಗ 200 ಕೋಟಿಗೂ ಮಿಕ್ಕಿ ಠೇವಣಿ ಇರುವ 6 ಬ್ಯಾಂಕುಗಳನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಂಡರು. ಮೊದಲ ಸುತ್ತಿನ ರಾಷ್ಟ್ರೀಕರಣದಿಂದ ದೇಶದ 85% ಬ್ಯಾಂಕಿಂಗ್‌ ವ್ಯವಹಾರ ಸರ್ಕಾರಿ ಬ್ಯಾಂಕುಗಳಿಗೆ ಬಂದರೆ, ಎರಡನೇ ಸುತ್ತಿನ ರಾಷ್ಟ್ರೀಕರಣದಿಂದ 91%ವರೆಗೆ ಬ್ಯಾಂಕಿಂಗ್‌ ವ್ಯವಹಾರ ಸರ್ಕಾರಿ ಬ್ಯಾಂಕುಗಳಿಗೆ ದೊರಕಿತು.

ರಾಷ್ಟ್ರೀಕರಣದ ಉದ್ದೇಶ ಏನು?
ರಾಷ್ಟ್ರೀಕರಣದ ಮೊದಲು ಬ್ಯಾಂಕುಗಳು ಖಾಸಗಿ ಒಡೆತನದಲ್ಲಿ ಇದ್ದು, ಅವು ಜನಸಾಮಾನ್ಯರಿಂದ ಠೇವಣಿಯನ್ನು ಸ್ವೀಕರಿಸುತ್ತಿದ್ದು, ಇದರ ಬಳಕೆ ಉಳ್ಳವರಿಗೆ, ಪ್ರಭಾವಿಗಳಿಗೆ ಮತ್ತು ಸಮಾಜದಲ್ಲಿ ಕೆಲವೇ ವರ್ಗದವರಿಗೆ ಅಗುತ್ತಿತ್ತು ಎನ್ನುವ ಅರೋಪವಿತ್ತು. ದೇಶದ ಸಂಪತ್ತು ಕೆಲವೇ ವ್ಯಕ್ತಿಗಳಲ್ಲಿ ಕೇಂದ್ರಿಕೃತವಾಗುವುದು ರಾಷ್ಟ್ರದ ಒಟ್ಟಾರೆ ಹಿತದ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎನ್ನುವ ಚಿಂತನೆ ಪಕ್ಷದ ಯುವ ನೇತಾರರಲ್ಲಿ ಇತ್ತು. ಪಕ್ಷದಲ್ಲಿ ಯಂಗ್‌ ಟರ್ಕ್‌ ಎಂದು ಮಂಚೂಣಿಯಲ್ಲಿದ್ದ ಎಡಪಂಥೀಯ ಒಲವಿನ ಚಂದ್ರಶೇಖರ, ಕೃಷ್ಣಕಾಂತ ಮತ್ತು ಮೋಹನ್‌ ಧಾರಿಯಾರವರು ಇಂದಿರಾ ಗಾಂಧಿಯವರ ಮೇಲೆ ಸದಾ ಒತ್ತಡ ಹಾಕುತ್ತಿದ್ದರು. ಯಾವಾಗಲೂ ಖಾಸಗಿ ಒಡೆತನವನ್ನು ವಿರೋಧಿಸುವ ಕಮ್ಯುನಿಷ್ಟರು ಕೂಡಾ ಇಂದಿರಾಗಾಂಧಿಯವರಿಗೆ ಈ ನಿಟ್ಟಿನಲ್ಲಿ ಜೊತೆ ನೀಡಿದರು. ಕಾಂಗ್ರೆಸ್‌ ಪಕ್ಷದಲ್ಲಿ ಸಿಂಡಿಕೇಟ್ ಎಂದು ಕರೆಯಲ್ಪಡುತ್ತಿದ್ದ, ಅಂತರಿಕವಾಗಿ, ಅಗೋಚರವಾಗಿ ಅಡಚಣೆ ನೀಡುತ್ತಿದ್ದ ಕೆಲವು ಹಿರಿಯ ಕಾಂಗ್ರೆಸ್ಸಿಗರನ್ನು ನಿಯಂತ್ರಿಸಲು ತುರ್ತಾಗಿ ಅವರಿಗೆ ಒಂದು ಜನಪರ ಮತ್ತು ಪ್ರಗತಿಪರ ಅರ್ಥಿಕ ಕಾರ್ಯಕ್ರಮ ಬೇಕಿತ್ತು.

ಬ್ಯಾಂಕ್‌ ಕಾರ್ಮಿಕ ಸಂಘಗಳು ಬ್ಯಾಂಕುಗಳ ರಾಷ್ಟ್ರೀಕರಣಕ್ಕೆ ಲಾಗಾಯ್ತಿನಿಂದ ಒತ್ತಾಯಿಸುತ್ತಿದ್ದವು. ಜನಸಾಮಾನ್ಯರ ಬೆವರಿನ ಹಣ(ಉಳಿತಾಯ) ಬ್ಯಾಂಕ್‌ ಮೂಲಕ ಉಳ್ಳವರ ಉದ್ಧಾರಕ್ಕೆ ಸೀಮಿತವಾಗದೇ, ಜನಸಾಮಾನ್ಯರ ಅರ್ಥಿಕ ಬೆಳವಣಿಗೆಗೆ ಬಳಸಲು ಬ್ಯಾಂಕುಗಳ ರಾಷ್ಟ್ರೀಕರಣ ಒಂದೇ ಮಾರ್ಗ ಎಂದು ಅವರು ನಿರಂತರವಾಗಿ ಮುಷ್ಕರ ನಡೆಸುತ್ತಾ, ಗಂಟಲು ಉಬ್ಬಿಸಿ, ಮುಷ್ಟಿ ಎತ್ತಿ ಸಂಘರ್ಷದಲ್ಲಿ ಇದ್ದರು. ಆ ಕಾಲಕ್ಕೆ lucrative job ಎಂದು ಹೇಳಲ್ಪಡುತ್ತಿದ್ದ ಬ್ಯಾಂಕ್‌ ಉದ್ಯೋಗಗಳು ಕೆಲವರ ಮತ್ತು ಸಂಪರ್ಕ ಉಳ್ಳವರ ಸೊತ್ತಾಗಿತ್ತು ಮತ್ತು ಜನಸಾಮಾನ್ಯರಿಗೆ ಬ್ಯಾಂಕ್‌ ಉದ್ಯೋಗಗಳು ಮರೀಚಿಕೆಯಾಗಿತ್ತು. ಸುಮಾರು 300 ಬ್ಯಾಂಕ್‌ಗಳನ್ನು ನಿಯಂತ್ರಿಸುವುದು ಮತ್ತು ಮೇಲ್ವಿಚಾರಣೆ ಮಾಡುವುದು ರಿಸರ್ವ್‌ ಬ್ಯಾಂಕ್‌ಗೆ ಚಾಲೆಂಜಿಂಗ್‌ ಅಗಿತ್ತಂತೆ. ಬಹುತೇಕ ಬ್ಯಾಂಕ್‌ಗಳು ಟ್ರೇಡ್‌ ಫೈನಾನ್ಸ್‌ ಮಾಡುತ್ತಿದ್ದು, ದೇಶದ ಸರ್ವೋತ್ತಮ ಅಭಿವೃದ್ಧ್ದಿಗೆ ಅವಶ್ಯಕವಾದ ಕೃಷಿ ಮತ್ತು ಸಣ್ಣ ಉದ್ದಿಮೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದವು.

ಈ 14 ಬ್ಯಾಂಕುಗಳು ಬ್ಯಾಂಕಿಂಗ್‌ ವಲಯದ ಸುಮಾರು 70% ಠೇವಣಿಯನ್ನು ಹೊಂದಿದ್ದರೂ ದೇಶದ ಜನತೆಯ ಸಾಲದ ಅವಶ್ಯಕತೆಯನ್ನು ಪೂರೈಸಲು ಪ್ರಯತ್ನಿಸದೇ ಯಾವುದೋ ನೆವ ಹೇಳಿ ಹಿಂದೇಟು ಹಾಕುತ್ತಿದ್ದವು. ಬ್ಯಾಂಕಿಂಗ್‌ ಉದ್ಯಮದ ಈ ವಾಸ್ತವ ಬ್ಯಾಂಕ್‌ ರಾಷ್ಟ್ರೀಕರಣದ ಹಿಂದಿನ ಪ್ರೇರಣೆ ಎಂದು ಹೇಳಲಾಗುತ್ತದೆ.

ಬ್ಯಾಂಕ್‌ ರಾಷ್ಟ್ರೀಕರಣ ಸಾಧಿಸಿದ್ದೇನು?
ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದ್ದ ಬ್ಯಾಂಕ್‌ ಶಾಖೆಗಳ ಜಾಲ ದೇಶದ ಮೂಲೆ ಮೂಲೆಗೂ ಪಸರಿಸಿತು. ಈವರೆಗೆ ನಿರ್ಲಕ್ಷಿಸಲ್ಪಟ್ಟ ಗ್ರಾಮಾಂತರ ಪ್ರದೇಶ ಮತ್ತು ಗ್ರಾಮೀಣ ಜನರನ್ನು ಬ್ಯಾಂಕಿಂಗ್‌ಗೆ ಒಳಪಡಿಸಲು, ಅವರಿಗೆ ಬ್ಯಾಂಕಿಂಗ್‌ ಸೌಲಭ್ಯ ದೊರಕುವಂತೆ ಮಾಡಲು, ಬ್ಯಾಂಕ್‌ ಶಾಖೆ ತೆರೆಯುವ ನಿಯಮಾವಳಿಗೆ ತಿದ್ದುಪಡಿ ಮಾಡಿ ಮೂರು ಶಾಖೆಗಳನ್ನು ಗ್ರಾಮಾಂತರ ಪ್ರದೇಶದಲ್ಲಿ ತೆರೆದರೆ ಮಾತ್ರ ಒಂದು ಶಾಖೆಯನ್ನು ನಗರ-ಪಟ್ಟಣಗಳಲ್ಲಿ ತೆರೆಯಬಹುದು ಎನ್ನುವ ನಿಬಂಧನೆ ವಿಧಿಸಲಾಯಿತು. ಈ ನಿಯಮಾವಳಿ ಬ್ಯಾಂಕ್‌ ಶಾಖೆಗಳ ತೆರೆಯುವಿಕೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದರಿಂದ, ಬಹುತೇಕ ಬ್ಯಾಂಕ್‌ ರಹಿತ ಪ್ರದೇಶಗಳು ಬ್ಯಾಂಕುಗಳನ್ನು ಕಂಡವು. ಬ್ಯಾಂಕುಗಳು ತಮ್ಮ ಕಮರ್ಷಿಯಲ್ ಟ್ಯಾಗ್‌ ತೆಗೆದು ಸೋಷಿಯಲ್ ಟ್ಯಾಗ್‌ಗೆ ಬದಲಾವಣೆ ಹೊಂದಿದವು. ಬ್ಯಾಂಕುಗಳ ಉದ್ದೇಶ ಕೇವಲ ಲಾಭಗಳಿಸುವುದಲ್ಲ ಎನ್ನುವ ಪರಿಕಲ್ಪನೆ ಅನಾವರಣಗೊಂಡಿತು. ಬ್ಯಾಂಕುಗಳು ಗ್ರಾಹಕರ ಮತ್ತು ಜನಸಾಮಾನ್ಯರ ಮನೆಬಾಗಿಲನ್ನು ಬಡಿಯುವಂತೆ ಮಾಡಲಾಯಿತು.

ಈವರೆಗೆ ನಿರ್ಲಕ್ಷಿಸಲ್ಪಟ್ಟ ಕೃಷಿ, ಸಣ್ಣ- ಮಧ್ಯಮ ಗಾತ್ರದ ಉದ್ದಿಮೆಗಳು ಇಂದು ಉಚ್ಛ್ರಾಯ ಸ್ಥಿತಿಯಲ್ಲಿ ಇದ್ದರೆ ಮತ್ತು ತನ್ಮೂಲಕ ಉದ್ಯೋಗ ಸೃಷ್ಟಿಯಾಗುತ್ತಿದ್ದರೆ ಅದಕ್ಕೆ ಕಾರಣ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಚಳಿ ಬಿಟ್ಟು ಸಾಲ ನೀಡುವ ಅವುಗಳ ಧೋರಣೆ. ಅವುಗಳು ತಮ್ಮ ಒಟ್ಟೂ ಸಾಲದ 40%ನ್ನು ಕೃಷಿ, ಸಣ್ಣ-ಮಧ್ಯಮ ಪ್ರಮಾಣದ ಉದ್ದಿಮೆ ಒಳಗೊಂಡಿರುವ ಆದ್ಯತಾ ವಲಯಕ್ಕೆ ನೀಡುತ್ತಿದ್ದು, ಯಾವುದೇ ಕೃಷಿ, ಉದ್ದಿಮೆ, ಉದ್ಯೋಗ, ವೈದ್ಯ, ಇಂಜಿನಿಯರ್‌ ವೃತ್ತಿಯನ್ನು ಹೆಸರಿಸಿ ಅದರ ಹಿಂದೆ ಒಂದು ಬ್ಯಾಂಕ್‌, ಅದರಲ್ಲೂ ಮುಖ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್‌ ಇರುವುದನ್ನು ಕಾಣಬಹುದು.

ಈ ಬ್ಯಾಂಕುಗಳು ನಮ್ಮ ನಿತ್ಯ ಜೀವನದ ಒಂದು ಭಾಗವಾಗಿ ಕಾಣುತ್ತವೆ. ಸರ್ಕಾರವು ನಿರ್ದೇಶಿಸಿದ ಯಾವುದೇ ಕಾರ್ಯವನ್ನೂ ಇವು ನಿಷ್ಠೆಯಿಂದ ಮಾಡುತ್ತವೆ. ಪ್ರಧಾನ ಮಂತ್ರಿಗಳ ಜನಧನ ಯೋಜನೆ ಅಡಿಯಲ್ಲಿ ಅವು 28.65 ಕೋಟಿ ಖಾತೆಗಳನ್ನು ತೆರೆದಿದ್ದು, ಖಾಸಗಿ ಬ್ಯಾಂಕುಗಳ ಕೊಡುಗೆ ಕೇವಲ 1.25 ಕೋಟಿ ಮಾತ್ರ. ಇಂದು ಭಾರತ ಖರೀದಿ ಶಕ್ತಿಯ ನಿಟ್ಟಿನಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿ ಇದ್ದರೆ, ಮೂರು ಲಕ್ಷ ಕೋಟಿ ಡಾಲರ್‌ ಅರ್ಥಿಕತೆಯದ್ದಾಗಿದ್ದರೆ ಮತ್ತು 2024ರ ಹೊತ್ತಿಗೆ 5 ಲಕ್ಷ ಕೋಟಿ ಡಾಲರ್‌ ಅರ್ಥಿಕತೆಯ ದೇಶವಾಗುವುದಿದ್ದರೆ, ಇದರಲ್ಲಿ ನಮ್ಮ ಬ್ಯಾಂಕುಗಳ ಪಾತ್ರ ಮಹತ್ವದ್ದು. ದೇಶದಲ್ಲಿ ಉದ್ಯೋಗ ಸೃಷ್ಟಿ ಮತ್ತು ಔದ್ಯೋಗೀಕರಣದಲ್ಲಿ ಈ ಬ್ಯಾಂಕುಗಳ ಕೊಡುಗೆ ಅಳೆಯಲಾಗದ್ದು ಎನ್ನುವುದು ಅತಿಶಯೋಕ್ತಿಯಲ್ಲ.

ರಾಷ್ಟ್ರೀಕರಣದ ದುಷ್ಪರಿಣಾಮಗಳೆನು?
ಗಾಣದಿಂದ ಎಣ್ಣೆ ತೆಗೆಯುವಾಗ ಜಿಡ್ಡು ಬರುವುದು ಸ್ವಾಭಾವಿಕ ಪ್ರಕ್ರಿಯೆ. ಹಾಗೆಯೇ ರಾಷ್ಟ್ರೀಕರಣದ ಸಂಗಡ, ಕೆಲವು ಅನಾಹುತಕಾರಿ ನಕಾರತ್ಮಕ ಬೆಳವಣಿಗೆಗಳೂ ಸಾಕಷ್ಟು ಅಗಿವೆ. ಬ್ಯಾಂಕುಗಳಲ್ಲಿ ಏರುತ್ತಿರುವ ಸುಸ್ತಿ ಸಾಲವನ್ನು ಈ ಕೆಟಗರಿಗೆ ಸೇರಿಸಬಹುದು. ರಾಷ್ಟ್ರೀಕರಣದ ನಂತರ ಬ್ಯಾಂಕುಗಳು ಮೈ ಚಳಿ ಬಿಟ್ಟು ಲಿಬರಲ್ ಆಗಿ ಸಾಲ ನೀಡಿದ್ದೇ ಈ ಪರಿಸ್ಥಿತಿಗೆ ಕಾರಣ ಎಂದು ಬ್ಯಾಂಕಿಂಗ್‌ ವಿಶ್ಲೇಷಕರು ಹೇಳುತ್ತಾರೆ. ಬ್ಯಾಂಕಿಂಗ್‌ ಉದ್ಯಮದಲ್ಲಿ ವಸೂಲಾಗದೇ ಸಿಲುಕಿಕೊಂಡಿರುವ 9.50 ಲಕ್ಷ ಕೋಟಿ ಸುಸ್ತಿ ಸಾಲ ರಾಷ್ಟ್ರೀಕರಣದ ಕೂಸು ಎಂದು ಕೆಲವರು ಅಡಿಕೊಳ್ಳುತ್ತಾರೆ.

ಈ ಸುಸ್ತಿ ಸಾಲ ಬ್ಯಾಂಕಿಂಗ್‌ ಉದ್ಯಮವನ್ನೇ ನಡುಗಿಸುತ್ತಿದೆ ಎಂದು ಬ್ಯಾಂಕಿಂಗ್‌ ವಲಯದಲ್ಲಿ ಕೇಳಿಬರುತ್ತಿದೆ. ಸರ್ಕಾರವು ಬ್ಯಾಂಕ್‌ಗಳಿಗೆ ಶೇರು ಬಂಡವಾಳ ನೀಡಲು ಕಷ್ಟ ಪಡುತ್ತಿದ್ದು, ಮುಂದಿನ ದಿನಗಳಲ್ಲಿ ಬ್ಯಾಂಕುಗಳಲ್ಲಿ ತನ್ನ ಶೇರು ಬಂಡವಾಳದ ಪ್ರಮಾಣವನ್ನು 51%ಕ್ಕಿಂತ ಕಡಿಮೆ ಮಾಡುವ ಚಿಂತನೆ ಪುನಹ ಪುನಹ ಕೇಳಿಬರುತ್ತಿದೆ. ಏರುತ್ತಿರುವ ಸುಸ್ತಿ ಸಾಲವನ್ನು ನಿಯಂತ್ರಿಸಲು ಖಾಸಗೀಕರಣದ ಮಾತು ಕೇಳಿ ಬರುತ್ತಿದೆ ಎಂದು ಕಾರ್ಮಿಕ ಸಂಘಗಳು ಅಕ್ರೋಶ ವ್ಯಕ್ತಪಡಿಸುತ್ತಿವೆ. ರಾಷ್ಟ್ರೀಕರಣದ 50ನೇ ವರ್ಷದಲ್ಲಿ ಖಾಸಗೀಕರಣದ ಮಾತು ಒಂದು ವಿಪರ್ಯಾಸ ಎಂದು ಅವರು ಟೀಕಿಸುತ್ತಾರೆ. ಇದು ರಾಷ್ಟ್ರೀಕರಣವನ್ನು ಸರಿಯಾಗಿ ನಿಭಾಯಿಸಲಾಗದ ಉದಾಹರಣೆಯೇ ಹೊರತು, ಈ ವೈಫ‌ಲ್ಯ ರಾಷ್ಟ್ರೀಕರಣದ ಪರಿಕಲ್ಪನೆಯದಲ್ಲ ಎಂದೂ ಹೇಳುತ್ತಾರೆ. ಗ್ರಾಹಕರ ಮನೆಬಾಗಿಲಿಗೆ ಬ್ಯಾಂಕಿಂಗ್‌ ಸೌಲಭ್ಯ ತಲುಪಿಸಲು ಮನಬಂದಂತೆ ಶಾಖೆಗಳನ್ನು ತೆರೆದು, ಈಗ ನಷ್ಟದ ಹೆಸರಿನಲ್ಲಿ ಅವುಗಳನ್ನು ವಿಲೀನ ಮಾಡುವ ಹಿಂದಿನ ಉದ್ದೇಶವನ್ನು ಅವರು ತೀಕ್ಷ¡ವಾಗಿ ಪ್ರಶ್ನಿಸುತ್ತಿದ್ದಾರೆ.

ಅಂದಿನ ಬ್ಯಾಂಕಿಂಗ್‌ ಚಿತ್ರಣ ಹೇಗಿತ್ತು?
ಇಂದಿರಾ ಗಾಂಧಿಯವರು 14 ಬ್ಯಾಂಕುಗಳನ್ನು ಸರ್ಕಾರದ ತೆಕ್ಕೆಗೆ ತೆಗೆದುಕೊಳ್ಳುವಾಗ, ದೇಶಾದ್ಯಂತ 73 ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕುಗಳು ಇದ್ದು, ಅವು 8262 ಶಾಖೆಗಳನ್ನು ಹೊಂದಿದ್ದವು. ಅವುಗಳಲ್ಲಿ 1832 ಶಾಖೆಗಳು (22%) ಗ್ರಾಮಾಂತರ ಪ್ರದೇಶಗಳಲ್ಲಿ , 3223 ಶಾಖೆಗಳು (40%)ಪಟ್ಟಣಗಳಲ್ಲಿ, 1447 ಶಾಖೆಗಳು ನಗರಗಳಲ್ಲಿ ಮತ್ತು 1661 ಶಾಖೆಗಳು ಮೆಟ್ರೋಪಾಲಿಟನ್‌ ನಗರಗಳಲ್ಲಿ ಇದ್ದವು. ಅವುಗಳಲ್ಲಿ 4,646 ಕೋಟಿ ಠೇವಣಿ ಇದ್ದು 3,599 ಕೋಟಿ ಸಾಲ ನೀಡಿದ್ದವು. ಪ್ರತಿ 60 ಸಾವಿರ ಜನಸಂಖ್ಯೆಗೆ ಒಂದು ಶಾಖೆ ಇದ್ದು, ಬ್ಯಾಂಕಿಂಗ್‌ ಉದ್ಯಮದಲ್ಲಿ 2. 20 ಲಕ್ಷ ಸಿಬ್ಬಂದಿ ಇದ್ದರು.

ಇಂದಿನ ಚಿತ್ರಣ ಹೇಗಿದೆ?
ಇಂದು ದೇಶಾದ್ಯಂತ ಬ್ಯಾಂಕುಗಳ ಶಾಖೆಗಳು ಪಸರಿಸಿದ್ದು, 1,41,756 ಬ್ಯಾಂಕ್‌ ಶಾಖೆಗಳು ಇವೆ. ಗ್ರಾಮಾಂತರ ಶಾಖೆಗಳ ಸಂಖ್ಯೆಯಲ್ಲಿ ಗಮನಾರ್ಹ ಪ್ರಗತಿ ಕಂಡಿದ್ದು, ಇಂದು ಸಮಾರು 50,051 ಗ್ರಾಮಾಂತರ ಶಾಖೆಗಳಿವೆ. ಇದು ಒಟ್ಟೂ ಶಾಖೆಗಳಲ್ಲಿ ಶೇ. 35 ರಷ್ಟು ಆಗುತ್ತದೆ. ಸಣ್ಣ ಪಟ್ಟಣಗಳಲ್ಲಿ 9,063 ಮತ್ತು ನಗರ ಗಳಲ್ಲಿ 25,948 ಶಾಖೆಗಳು ಇವೆ. ಮೆಟ್ರೋ ಪೊಲಿಟನ್‌ ನಗರಗಳಲ್ಲಿ 27,114 ಶಾಖೆಗಳು ಇವೆ. ಬ್ಯಾಂಕುಗಳಲ್ಲಿ ಠೇವಣಿ ಪ್ರಮಾಣ 125 ಟ್ರಿಲಿಯನ್‌ ರೂ. ಗೆ ಏರಿದರೆ ಸಾಲದ ಪ್ರಮಾಣ 96.5 ಟ್ರಿಲಿಯನ್‌ಗೆ ಏರಿದೆ. ಬ್ಯಾಂಕಿಂಗ್‌ ಉದ್ಯಮ ಇಂದು ರೈಲು ಇಲಾಖೆಯ ನಂತರ ದೇಶದ ಎರಡನೇ ಅತಿ ದೊಡ್ಡ ಉದ್ಯಮವಾಗಿದ್ದು ಸುಮಾರು 9.80 ಲಕ್ಷ ಸಿಬ್ಬಂದಿಯಿದ್ದಾರೆ. ಇಂದು ಪ್ರತಿ 8 ರಿಂದ 10 ಸಾವಿರ ಜನಸಂಖ್ಯೆಗೆ ಒಂದು ಬ್ಯಾಂಕ್‌ ಶಾಖೆ ಇದೆ. ಕನಿಷ್ಠ ನಾಗರಿಕ ಸೌಲಭ್ಯಗಳು ಇಲ್ಲದ ಹಳ್ಳಿ ಕೊಂಪೆಗಳಲ್ಲಿ, ದೋಣಿಗಳಲ್ಲಿ ಮಾತ್ರ ತೆರಳಬಹುದಾದ ಹಳ್ಳಿಗಳಲ್ಲಿ ಕೂಡಾ ಬ್ಯಾಂಕ್‌ ಶಾಖೆಗಳು ಇವೆ.

– ರಮಾನಂದ ಶರ್ಮಾ, ನಿವೃತ್ತ ಬ್ಯಾಂಕರ್‌

ಟಾಪ್ ನ್ಯೂಸ್

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ

ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಕೋವಿಡ್‌ ವ್ಯಾಕ್ಸಿನ್‌ ಪಡೆದ ಟೀಮ್‌ ಇಂಡಿಯಾದ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಸೋಂಕು

ಸ್ಪಿನ್ನರ್‌ ಯಜುವೇಂದ್ರ ಚಹಲ್‌ ಹೆತ್ತವರಿಗೆ ಕೋವಿಡ್ ಪಾಸಿಟಿವ್

ದ.ಕ. ಜಿಲ್ಲೆ: ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ ಇಲ್ಲ :  ಜಿಲ್ಲಾಧಿಕಾರಿ ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರ್ವೋದಯ ಧರ್ಮತೀರ್ಥದ ಪ್ರವರ್ತಕ ಮಹಾವೀರ

ಸರ್ವೋದಯ ಧರ್ಮತೀರ್ಥದ ಪ್ರವರ್ತಕ ಮಹಾವೀರ

ಜಗದ ಅಧಿನಾಯಕ ಸೂರ್ಯ

ಜಗದ ಅಧಿನಾಯಕ ಸೂರ್ಯ

ಜಾನುವಾರು ನಾಟಿ ವೈದ್ಯ ಪರಂಪರೆ ಬೆಳಗಲಿ

ಜಾನುವಾರು ನಾಟಿ ವೈದ್ಯ ಪರಂಪರೆ ಬೆಳಗಲಿ

ತನ್ನಿಮಿತ್ತ : ಶಾಸ್ತ್ರ, ಆರೋಗ್ಯ ಕಾಳಜಿಯ ದೀಪಾವಳಿ

ತನ್ನಿಮಿತ್ತ : ಶಾಸ್ತ್ರ, ಆರೋಗ್ಯ ಕಾಳಜಿಯ ದೀಪಾವಳಿ

ನೆಹರೂ: ಮಹಾನ್‌ ಮಾನವತಾವಾದಿಯ ನೆನಪು

ನೆಹರೂ: ಮಹಾನ್‌ ಮಾನವತಾವಾದಿಯ ನೆನಪು

MUST WATCH

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

udayavani youtube

ಕರಾವಳಿಯಲ್ಲಿ ಚಂಡಮಾರುತ ವಾರ್ನಿಂಗ್!

ಹೊಸ ಸೇರ್ಪಡೆ

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಅಕ್ಷಯ ತೃತೀಯಾ ಧಾರ್ಮಿಕ ಭಾವನಾತ್ಮಕ ಚಿಂತನೆ

ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ

ಕನ್ನಡ ನಾಡಲ್ಲಿ ಭಕ್ತಿಯ ಹೊಳೆ ಹರಿಸಿದ ಬಸವಣ್ಣ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ರಮೇಶ್‌ ಪೊವಾರ್‌ ಮತ್ತೆ ಭಾರತೀಯ ವನಿತಾ ತಂಡದ ಪ್ರಧಾನ ಕೋಚ್‌ ಆಗಿ ನೇಮಕ

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

ವೃತ್ತಿ ಬದುಕಿನ ಒಂದು ಸಾವಿರದ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್‌ಗೆ ಸೋಲು

13-22

ಹಬ್ಬದಾಚರಣೆಯಲ್ಲಿ ಗೊಂದಲ ಬೇಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.