ಬದುಕಿನ ಮುಸ್ಸಂಜೆಯಲ್ಲಿ ಮುದುಡದಿರಲಿ ಮನಸ್ಸು

Team Udayavani, Oct 1, 2019, 5:23 AM IST

ಸಾಂದರ್ಭಿಕ ಚಿತ್ರ

ಹಿರಿಯ ಜೀವಿಗಳೆಡೆಗೆ ತಾತ್ಸಾರ ಸರ್ವಥಾಸಲ್ಲ. ವೃದ್ಧರನ್ನು ಪ್ರೀತಿ- ಗೌರವಗಳಿಂದ ಕಾಣುವುದು ಹಾಗೂ ಅವರು ಸದಾ ಚಟುವಟಿಕೆಯಿಂದ ಇರುವಂತೆ ನೋಡಿ ಕೊಳ್ಳುವುದು, ಅವರ ಬೇಕು-ಬೇಡಗಳಿಗೆ ಕಿವಿಯಾಗುವುದು, ಅವರ ಅನುಭವದ ಮಾತುಗಳನ್ನು ಪಾಲಿಸುವುದು ಕಿರಿಯ ಪೀಳಿಗೆಯ ಕರ್ತವ್ಯವಾಗಿದೆ.

ವೃದ್ಧಾಪ್ಯ ಮನುಷ್ಯನ ಜೀವನದ ಅಂತಿಮ ಘಟ್ಟ. ಇತ್ತೀಚಿನ ದಿನಗಳಲ್ಲಿ ವೃದ್ಧರು, ವೃದ್ಧರ ಸಮಸ್ಯೆ, ವೃದ್ಧಾಶ್ರಮ ಮುಂತಾದ ಶಬ್ದಗಳು ಹೆಚ್ಚು ಚರ್ಚೆಗೊಳಗಾಗುತ್ತಿವೆ. ಇಂದು ಯಾವುದೇ ಆರ್ಥಿಕವಾಗಿ ಮುಂದುವರಿದ ರಾಷ್ಟ್ರದ ಜನಸಂಖ್ಯೆಯನ್ನು ತೆಗೆದುಕೊಂಡರೂ ಅದರಲ್ಲಿ ವೃದ್ಧರ ಸಂಖ್ಯೆ ಗಣನೀಯವಾಗಿ ಇರುವುದು ಕಂಡುಬರುತ್ತದೆ.

ನಮ್ಮ ದೇಶದ ಸಾಂಖೀಕ ಮತ್ತು ಯೋಜನೆ ಸಚಿವಾಲಯ ನೀಡಿದ ವರದಿ ಪ್ರಕಾರ 2016ರಲ್ಲಿ 60 ವರ್ಷ ವಯೋಮಾನ ಮೇಲ್ಪಟ್ಟವರ ಸಂಖ್ಯೆ 103.9 ಮಿಲಿಯನ್‌ ಇತ್ತು. ಇದು 2050 ತಲುಪುವಷ್ಟರಲ್ಲಿ 325 ಮಿಲಿಯನ್‌ ತಲುಪಲಿದೆ. ಒಂದು ಸಮಾಜದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗಿದೆ ಎಂದರೆ ಅಲ್ಲಿ ವೈದ್ಯಕೀಯ ಮತ್ತಿತ್ತರ ಅನುಕೂಲತೆಗಳು ಉತ್ತಮವಾಗಿವೆ ಎಂಬುದನ್ನು ತೋರಿಸುತ್ತದೆೆಯೇ ವಿನಃ ಆ ಸಮಾಜದಲ್ಲಿ ಅವರು ಸುಖ-ಶಾಂತಿಯಿಂದ ಜೀವನ ಮಾಡುತ್ತಿದ್ದಾರೆ ಎಂಬುದಲ್ಲ.

ಇಂದು ವೃದ್ಧಾಪ್ಯ ಒಂದು ವಿಧದಲ್ಲಿ ಶಾಪವಾಗಿ ಪರಿಣಮಿಸಿದೆ. ಈ ಹಿಂದೆ ವೃದ್ಧರು ಸಮಾಜಕ್ಕೆ ಒಂದು ಸಮಸ್ಯೆಯಾಗಿರಲೇ ಇಲ್ಲ ಮತ್ತು ಅವರ ಜೀವನವು ಕಷ್ಟಕರವಾಗಿರಲಿಲ್ಲ. ಆದರೆ ಇಂದು ಸಮಾಜದಲ್ಲಿ ಬಂದಿರುವ ಬದಲಾವಣೆಗಳಿಂದಾಗಿ ಅವರು ತೊಂದರೆಗೆ ಒಳಗಾಗಿದ್ದಾರೆ. ಬದಲಾಗುತ್ತಿರುವ ಇಂದಿನ ಬದುಕಿನ ನೀತಿ-ನಿಯಮಗಳಲ್ಲಿ ವೃದ್ಧರ ಕುರಿತು ಪ್ರೀತಿ, ಅನುಕಂಪ, ಸಹಾನುಭೂತಿಯಂತಹ ಮಾನವೀಯ ಮೌಲ್ಯಗಳು- ಭಾವನೆಗಳು ಕಂಡುಬರುತ್ತಿಲ್ಲ.

ಒಬ್ಬ ವ್ಯಕ್ತಿ ವೃದ್ಧನಾಗುವ ವೇಳೆಗೆ ತನ್ನ ಕುಟುಂಬ, ಸಮಾಜ ಮುಂತಾದವುಗಳ ಏಳಿಗೆಗೆ ಹಗಲಿರುಳು ದುಡಿದು ಹಣ್ಣಾಗಿರುತ್ತಾನೆ. ಜೊತೆಗೆ ಮಕ್ಕಳ, ಸಮಾಜದ ಕಡೆಗಿನ ಕರ್ತವ್ಯಗಳನ್ನು ಮಾಡಿ ಮುಗಿಸುತ್ತಾನೆ. ಆದರೆ ಇಂದಿನ ಯುವಕರು ವೃದ್ಧರನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದನ್ನೂ ಒಂದು ದೊಡ್ಡ ಸಮಸ್ಯೆ ಎಂದೇ ಭಾವಿಸಿದ್ದಾರೆ. ಬದಲಾದ ಜೀವನ ವ್ಯವಸ್ಥೆ ಹಾಗೂ ಜೀವನ ಮೌಲ್ಯಗಳ ಅವನತಿಯಿಂದಾಗಿ ವೃದ್ಧರು ತಮ್ಮ ಮಕ್ಕಳೊಂದಿಗೆ ಕೂಡಿ ಬದುಕುವಲ್ಲಿ ಅನೇಕ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

ವೃದ್ಧರು ಹಲವಾರು ರೋಗಗಳಿಂದ ಬಳಲುತ್ತಾರೆ. ಅಜೀರ್ಣ, ಅಂಧತ್ವ, ಜ್ವರ ಹಾಗೂ ಕೆಮ್ಮು-ದಮ್ಮುಗಳು ಅವರ ಬಾಳ ಸಂಜೆಯ ಸಂಗಾತಿಗಳಾಗಿರುತ್ತವೆ. ಹಲವಾರು ಬಗೆಯ ರೋಗಗಳಿಗೆ ತುತ್ತಾದ ವೃದ್ಧರಿಗೆ ಔಷಧಿಯ ವ್ಯವಸ್ಥೆ ಮುಖ್ಯವಾಗುತ್ತದೆ, ಅಲ್ಲದೇ ಸೂಕ್ತ ಆಹಾರವೂ ಮುಖ್ಯವಾಗುತ್ತದೆ. ಕೆಲವು ವೃದ್ಧರು ದೈಹಿಕ ಅನಾರೋಗ್ಯದ ಜೊತೆಗೆ ಮಾನಸಿಕ ಸಮಸ್ಯೆಗಳನ್ನೂ ಹೊಂದಿರುತ್ತಾರೆ. ಇವು ವೈಯಕ್ತಿಕ, ಕೌಟುಂಬಿಕ ಮತ್ತು ಆರ್ಥಿಕ ಕಾರಣಗಳಿಂದ ಬಂದಿರಬಹುದು.

ಗ್ರಾಮೀಣ ಪ್ರದೇಶದ ಭೂರಹಿತ ಕುಟುಂಬಗಳಲ್ಲಿ ವೃದ್ಧರ ಸಮಸ್ಯೆ ಕರುಣಾಜನಕವಾಗಿದೆ. ಈ ಕುಟುಂಬಗಳಲ್ಲಿ ಹಿರಿಯ ನಾಗರೀಕರು ಒಪ್ಪತ್ತಿನ ಊಟಕ್ಕೂ ಕೆಲಸ ಮಾಡಲೇಬೇಕು. ಗ್ರಾಮೀಣ ಪ್ರದೇಶದಲ್ಲಿ ಸಮುದಾಯದ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಈಗ ನಗರಗಳು ಬೆಳೆದು ಅಜ್ಜ, ಅಜ್ಜಿ ಬಂಧು-ಬಳಗದವರನ್ನೆಲ್ಲ ಹೊಂದಿರುವ ಕುಟುಂಬಗಳು ನಗರಗಳಲ್ಲಿ ವಾಸಿಸುವುದು ದುಸ್ತರವಾಗಿದೆ. ಅತ್ತೆ-ಮಾವ, ಅಜ್ಜ-ಅಜ್ಜಿಯನ್ನು ನೋಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಎಂದೇ ಯುವ ಜನಾಂಗ ಭಾವಿಸುತ್ತದೆ. ಈ ಕೆಲಸವನ್ನು ಹಿಂದೆ ಮನೆಯ ಸೊಸೆ ಹಾಗೂ ಮೊಮ್ಮಕ್ಕಳು ಮಾಡುತ್ತಿದ್ದರು. ಮನೆಯ ಗಂಡು ಮಕ್ಕಳು ಆರ್ಥಿಕ ಭಾರ ಹೊರುತ್ತಿದ್ದರೆ, ಹೆಣ್ಣುಮಕ್ಕಳು ವೃದ್ಧರ ಸೇವೆಯನ್ನು ಮಾಡುತ್ತಿದ್ದರು. ಆದರೆ ಇಂದು ಹೆಣ್ಣುಮಕ್ಕಳೂ ಕಚೇರಿಗಳಲ್ಲಿ ದುಡಿಯುವುದು ಪ್ರಾರಂಭವಾಗಿದೆ. ಇವರಿಗೆ ವೃದ್ಧರನ್ನು ನೋಡಿಕೊಳ್ಳಲು ವೇಳೆಯೂ ಇಲ್ಲ, ವ್ಯವಧಾನವೂ ಇಲ್ಲ.

ಇಂಥ ಪರಿಸ್ಥಿತಿ ಇದ್ದರೆ, ವೃದ್ಧರು ತಮ್ಮ ಮನೋಭಾವನೆಗೆ ಹೊಂದಿಕೊಳ್ಳುವ ವ್ಯಕ್ತಿಗಳ ಜೊತೆ ಕೂಡಿಕೊಂಡು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡು ಒಳ್ಳೆಯ ಉದ್ದೇಶಗಳೊಂದಿಗೆ ಕಾಲ ಕಳೆಯಬಹುದು. ಅಲ್ಲದೇ ಮೊಮ್ಮಕ್ಕಳ ಪಾಲನೆ ಮತ್ತು ಪೋಷಣೆ ಮಾಡುತ್ತಾ. ಉತ್ತಮ ಗ್ರಂಥಗಳನ್ನು ಓದುವುದರಲ್ಲಿ ಮಗ್ನರಾಗಬೇಕು.

ನಮ್ಮಲ್ಲಿ ವೃದ್ಧಾಶ್ರಮ ವ್ಯವಸ್ಥೆಗೆ ಅಷ್ಟೇನೂ ಪ್ರೋತ್ಸಾಹ ಸಿಕ್ಕಿಲ್ಲ. ದೊಡ್ಡ ನಗರ ಹಾಗೂ ಪಟ್ಟಣಗಳಲ್ಲಿ ಅಲ್ಲೊಂದು ಇಲ್ಲೊಂದು ವೃದ್ಧಾಶ್ರಮಗಳು ಸ್ಥಾಪಿತವಾಗಿದ್ದರೂ ಅವುಗಳ ಸಂಖ್ಯೆ ಬಹಳ ಕಡಿಮೆ. ಗ್ರಾಮೀಣ ಪ್ರದೇಶದಲ್ಲಂತೂ ಅವು ವಿರಳ. ಒಂದೊಮ್ಮೆ ಪರಿಸ್ಥಿತಿ ಅನಿವಾರ್ಯವಾದರೆ ಮನೆಯವರ ದೃಷ್ಟಿಯಲ್ಲಿ ನಿಕೃಷ್ಟವಾಗಿ ಬಾಳುವುದಕ್ಕಿಂತ ವೃದ್ಧಾಶ್ರಮಗಳಲ್ಲಿ ನೆಮ್ಮದಿಯ ಬದುಕಿನ ಸಂಜೆಯನ್ನು ಕಳೆಯಬಹುದು.

ಬದುಕಿನಲ್ಲಿ ಜೀವನೋತ್ಸಾಹ, ಕುತೂಹಲ ಇದ್ದಲ್ಲಿ ಬದುಕು ನೀರಸವಾಗುವುದಿಲ್ಲ. ವೃದ್ಧರು ಸಮಾಧಾನಕರವಾಗಿ, ಗೌರವ ಯುತ ಜೀವನ ನಡೆಸುವಲ್ಲಿ ಸೊಸೆಯಂದಿರ ನಡವಳಿಕೆ ಮತ್ತು ಮನೋಪ್ರವೃತ್ತಿ ಬಹು ಮುಖ್ಯವಾಗಿದೆ.

ಇನ್ನು ವೃದ್ಧರು ಆಯಾಸಗೊಳ್ಳುವುದು ಸಾಮಾನ್ಯ. ಆದರೆ ಈ ನಡವಳಿಕೆಯನ್ನು ಸೋಮಾರಿತನ ಎಂದು ಭಾವಿಸುವದು ತಪ್ಪು. ಇದು ಅವರು ಸೇವಿಸುವ ಔಷಧಗಳ ಅಡ್ಡ ಪರಿಣಾಮ ಅಥವಾ ದೈಹಿಕ ಸಾಮರ್ಥ್ಯ ಕುಗ್ಗಿರುವುದರಿಂದ ಈ ರೀತಿ ಆಗು ವುದು ಸಹಜ.

ವೃದ್ಧರ ಅನುಕೂಲಕ್ಕೆ ಇಂದು ಸಮಾಜ-ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಮ್ಮ ಸರ್ಕಾರ ವಯೋವೃದ್ಧರ ಬಗ್ಗೆ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ. ಇನ್ನು ಕುಟುಂಬದ ಸ್ತರ ದಲ್ಲಿ ಮಾತನಾಡುವುದಾದರೆ ಕುಟುಂಬದಲ್ಲಿಯ ಕಿರಿಯರು ವೃದ್ಧರನ್ನು ಪ್ರೀತಿ, ಗೌರವಗಳಿಂದ ನೋಡಿಕೊಂಡಾಗ ಅವರಿಗೆ ಬದುಕುವ ಆಸೆ ಹಾಗೂ ಏನಾದರೂ ಸಾಧಿಸುವ ಭರವಸೆ ಮೂಡುತ್ತದೆ. ಇಲ್ಲವಾದರೆ ತಮ್ಮ ಗತ ಜೀವನವನ್ನು ನೆನೆಯುತ್ತಾ, ಕುಟುಂಬ ತೋರಿಸುವ ತಾತ್ಸಾರದ ಬಗ್ಗೆ ಮನಸ್ಸು ಕೆಡಿಸಿಕೊಂಡು ನೋವಿನಲ್ಲೇ ಬದುಕುತ್ತಾರೆ. ವೃದ್ಧರನ್ನು ಪ್ರೀತಿ- ಗೌರವಗಳಿಂದ ಕಾಣುವುದು ಹಾಗೂ ಅವರು ಸದಾ ಚಟುವಟಿಕೆಯಿಂದ ಇರುವಂತೆ ನೋಡಿ ಕೊಳ್ಳುವುದು, ಅವರ ಬೇಕು-ಬೇಡಗಳಿಗೆ ಕಿವಿಯಾಗುವುದು, ಅವರ ಅನುಭವದ ಮಾತುಗಳನ್ನು ಪಾಲಿಸುವುದು ಕಿರಿಯ ಪೀಳಿಗೆಯ ಕರ್ತವ್ಯವಾಗಿದೆ.

ಹಿರಿಯರ ಮಾತನ್ನು ಆಸಕ್ತಿಯಿಂದ ಆಲಿಸಿ ತಾಳ್ಮೆಯಿಂದ ಪ್ರತಿಕ್ರಿಯಿಸಬೇಕು. ಅವರ ಮೆಚ್ಚಿನ ಸ್ಥಳದಲ್ಲಿ ಕುಟುಂಬದ ಸದಸ್ಯರೊಂದಿಗೆ ಬೆರೆಯಲು ಮತ್ತು ಅವರ ನೆಚ್ಚಿನ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಬೇಕು.

ವೃದ್ಧರ ಸೇವೆ ದೇವರ ಸೇವೆ ಎಂಬ ನಿಷ್ಠೆ ಹಿಂದಿನ ಜನಾಂಗಕ್ಕೆ ಇತ್ತು. ಆದರೆ, ಕಾಲ ಬದಲಾಗುತ್ತಾ ಬಂದಂತೆ ಸಮಷ್ಟಿ ಜೀವನ ಪದ್ಧತಿ ಮಾಯವಾಗಿ ವೈಯಕ್ತಿಕ ಜೀವನ ಪದ್ಧತಿಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ. ಇಂತಹ ಸಮಯದಲ್ಲಿ ವೃದ್ಧರ ಜೀವನಕ್ಕೆ ಭದ್ರತೆಯನ್ನು ಒದಗಿಸಿ, ಹೊಂಬಿಸಿಲನ್ನು ಮೂಡಿಸಿ ಸಂರಕ್ಷಿಸಬೇಕಾದದ್ದು ಆಯಾ ಕುಟುಂಬಗಳ, ಸಮಾಜದ ಮತ್ತು ಸರ್ಕಾರಗಳ ಕರ್ತವ್ಯ ಆಗಿದೆ. ಅಕ್ಟೋಬರ್‌ 1ನೆ ತಾರೀಖು, ಅಂದರೆ, ವಿಶ್ವ ವೃದ್ಧಾಪ್ಯ ದಿನದಿಂದಲಾದರೂ ಸರ್ಕಾರ, ಸಮಾಜ ವೃದ್ಧರ ಹಿತರಕ್ಷಣೆಯ ದೃಷ್ಟಿಯಿಂದ ಉತ್ತಮ ಕಾರ್ಯಕ್ರಮಗಳನ್ನು ಹಾಗೂ ಯೋಜನೆಗಳನ್ನು ಹಮ್ಮಿಕೊಳ್ಳುವಂತಾಗಲಿ ಎಂಬುದೇ ನಮ್ಮ ಆಶಯ.

ಸುರೇಶ ಗುದಗನ‌ವರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಕು ಸಾಕಪ್ಪ ಬದುಕಿದ್ದು ಎನ್ನುವ ಇರಾದೆ ಜೀವನದಲ್ಲಿ ಎಲ್ಲರಿಗೂ ಒಮ್ಮೊಮ್ಮೆ ಇದ್ದಿದ್ದೆ. ಅದು ಬ್ರಾಂತಿಯೂ ಅಲ್ಲ, ದೋಷವೂ ಅಲ್ಲ. ಎರಗಿರುವ ಸಂಕಷ್ಟದಿಂದ ಹೊರಬರಲಾದೆಂಬ...

  • ಪಂಡಿತ್‌ ದೀನ ದಯಾಳ್‌ ಅವ ರು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದರು. ಹೆಸರಿಗೆ ತಕ್ಕಂತೆ ಯೇ ಅವರ ಚಿಂತನೆಯೂ ಇತ್ತು. ವ್ಯಕ್ತಿ...

  • ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ...

  • ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು. ಸಮಾಜದಲ್ಲಿ ಆಳವಾಗಿ...

  • ಪಶ್ಚಿಮ ಬಂಗಾಳದ ರಾನಾಘಾಟ್‌ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ...

ಹೊಸ ಸೇರ್ಪಡೆ