ಗಣತಂತ್ರವೆಂಬ ಉತ್ಕೃಷ್ಟ ಸಾಮಾಜಿಕ ಪ್ರಯೋಗ

Team Udayavani, Jan 26, 2019, 12:30 AM IST

ದೇಶದಲ್ಲಿ ನಿವಾಸಿಯಾಗಿದ್ದರಾಯಿತು ಅದೇ ಪೌರತ್ವ ಎನ್ನುವ ಭಾವನೆ ಸಮಂಜಸವಲ್ಲ. ಪ್ರಾಮಾಣಿಕ ದುಡಿಮೆ, ದೇಶದ ಬಗ್ಗೆ ಲಕ್ಷ್ಯ, ಜವಾಬ್ದಾರಿಯ ಜೊತೆಗೆ ಸಮಾಜಕ್ಕೆ ಪ್ರತಿಫ‌ಲಾಪೇಕ್ಷರಹಿತ ಕೊಡುಗೆ ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣ ಪೌರತ್ವದ ಪ್ರಾಪ್ತಿ. ನದಿ ಮೂಲದ ಹಿರಿಮೆ ಅದು ಹರಿಯುವಾಗ ಉಕ್ಕೇರುವುದರಲ್ಲಿ ವ್ಯಕ್ತಗೊಳ್ಳುವುದು. ಅಂತೆಯೆ ದೇಶದ ಔನ್ನತ್ಯ ಅಲ್ಲಿನ ಪ್ರಜೆಯ ಸಂಪನ್ನತೆಯಲ್ಲಿ ಪ್ರಕಟಗೊಳ್ಳಬೇಕು. ಪ್ರಜೆ ನೈತಿಕ ಪ್ರಜ್ಞೆಯಿಂದ ನಿಯಂತ್ರಿಸಲ್ಪಡ‌ದಿದ್ದರೆ ಆತ ಸಮರ್ಥನಾದಷ್ಟೂ ದುರುಳನೂ ಸಮಾಜಕ್ಕೆ ಕಂಟಕಪ್ರಾಯನೂ ಆದಾನು.

ಭಾರತ ರತ್ನ ಡಾ.ಬಾಬಾ ಸಾಹೇಬ್‌ ಅಂಬೇಡ್ಕರ್‌ ರಚಿಸಿದ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವಾದ 26 ನೇ ಜನವರಿ ಪ್ರತೀ ವರ್ಷ ಗಣರಾಜ್ಯೋತ್ಸವ ದಿನ ಎಂದು ಸಂಭ್ರಮಿಸಲಾಗುತ್ತದೆ. ಈ ಸಂಭ್ರಮದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣತೆತ್ತ ಹೋರಾಟಗಾರರೆಲ್ಲ ನಮ್ಮ ಸ್ಮರಣೆಗೆ ಬರುತ್ತಾರೆ. ಅವರ ತ್ಯಾಗ, ಬಲಿದಾನದ ಋಣ ತೀರಿಸುವ ದಿವ್ಯ ಹಾದಿಯೆಂದರೆ ನಾವು ನಮ್ಮ ನಮ್ಮ ಕರ್ತವ್ಯವನ್ನು ಶ್ರದ್ಧಾಭಕ್ತಿಯಿಂದ ನಿರ್ವಹಿಸುವುದು. ಶಾಂತಿ, ಸೌಹಾರ್ದದಿಂದ ಬಾಳುವ ಮೂಲಕ ಸ್ವಾತಂತ್ರ್ಯ ಯೋಧರನ್ನು ನೆನೆಯಬೇಕು, ಗೌರವಿಸಬೇಕು.

15ನೇ ಆಗಸ್ಟ್‌ 1947ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಸುಮಾರು ಎರಡೂವರೆ ವರ್ಷಗಳ ನಂತರ ಅದು ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಗಣತಂತ್ರ ದಿನ ರಾಷ್ಟ್ರೀಯ ಹಬ್ಬದ ದಿನ ಎನ್ನುವುದಕ್ಕಿಂತಲೂ ಅದು ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರÂದ ಆಚರಣೆಯ ಸಡಗರವೆನ್ನುವುದೇ ಹೆಚ್ಚು ಸರಿ. ಪ್ರಜೆಗಳು ದೇಶವನ್ನಾಳಲಾಗದಾದ ಕಾರಣ ಅವರಿಂದ ಚುನಾಯಿಸಲ್ಪಟ್ಟ ಪ್ರತಿನಿಧಿಗಳು ಆ ಹೊಣೆ ನಿಭಾಯಿಸುತ್ತಾರೆ. ಪ್ರತಿಯೊಬ್ಬರ ಮತಕ್ಕೂ ಮೌಲ್ಯ ಒಂದೇ. ಹದಿನೆಂಟು ವರ್ಷ ವಯಸ್ಸಾದವರೆಲ್ಲರೂ ಮತ ಚಲಾಯಿಸಲು ಅರ್ಹರು. ಗಣತಂತ್ರದಲ್ಲಿ ಪ್ರಜೆಗಳೇ ಪರೋಕ್ಷವಾಗಿ ಸರ್ವೋಚ್ಚ. ಯಶಸ್ವೀ ಗಣತಂತ್ರ ಉನ್ನತವೂ ಉದಾತ್ತವೂ ಆದ ಸಾರ್ವಜನಿಕ ನೈತಿಕತೆ ನಿರೀಕ್ಷಿಸುತ್ತದೆ. ಸಂವಿಧಾನದನ್ವಯ ಪ್ರತಿಯೊಬ್ಬ ಪ್ರಜೆಯ ಹಕ್ಕುಬಾಧ್ಯತೆಯೂ ರಕ್ಷಿಸಲ್ಪಡುತ್ತದೆ. ಕ್ರಿ.ಪೂ. 2ನೇ ಶತಮಾನದಲ್ಲೇ ಗ್ರೀಕ್‌ ಇತಿಹಾಸಕಾರ ಪಾಲಿಬಿಯಸ್‌ “ಜನಗಳು ಆರಿಸಿ ಕಳಿಸುವ ಪ್ರತಿನಿಧಿಗಳು ಆಯಾ ಪ್ರಾಂತ್ಯ ಆಳುವುದರಿಂದ ಪರಸ್ಪರ ಸಮಾನತಾ ಭಾವನೆ ಮೂಡುವುದು ಸಾಧ್ಯ’ ಎಂದು ಉಲ್ಲೇಖೀಸಿದ್ದಾನೆ. ಅವನನ್ನು ಪ್ಲೇಟೋ ಮತ್ತು ಅರಿಸ್ಟಾಟಲ್‌ ಚಿಂತನೆಗಳು ಪ್ರಭಾವಿಸಿದ್ದವು ಎನ್ನುವುದು ಮುಖ್ಯವಾಗುತ್ತದೆ.

ಸಾಮಾಜಿಕ ಪ್ರಯೋಗಗಳಲ್ಲೇ ಪ್ರಜಾಸತ್ತಾತ್ಮಕ ಸರ್ವತಂತ್ರ ಸ್ವತಂತ್ರ ಗಣತಂತ್ರ ಅತಿ ಉತ್ಕೃಷ್ಟ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಸಾರ್ಥಕ್ಯ ಅದರ ಅನುಷ್ಠಾನದಲ್ಲಿದೆ. ದೇಶದಲ್ಲಿ ನಿವಾಸಿಯಾಗಿದ್ದರಾಯಿತು ಅದೇ ಪೌರತ್ವ ಎನ್ನುವ ಭಾವನೆ ಸಮಂಜಸವಲ್ಲ. ಪ್ರಾಮಾಣಿಕ ದುಡಿಮೆ, ದೇಶದ ಬಗ್ಗೆ ಲಕ್ಷ್ಯ, ಜವಾಬ್ದಾರಿಯ ಜೊತೆಗೆ ಸಮಾಜಕ್ಕೆ ಪ್ರತಿಫ‌ಲಾಪೇಕ್ಷರಹಿತ ಕೊಡುಗೆ ಮೈಗೂಡಿಸಿಕೊಂಡಾಗ ಮಾತ್ರ ಪರಿಪೂರ್ಣ ಪೌರತ್ವದ ಪ್ರಾಪ್ತಿ. ಎಂದಮೇಲೆ ಪ್ರಜಾಧಿಪತ್ಯದಲ್ಲಿ ಪೌರರು ತಮ್ಮ ವೈಯಕ್ತಿಕ ಆಸ್ತಿಪಾಸ್ತಿಯನ್ನು ವೃದ್ಧಿಸಿಕೊಂಡಂತೆಯೇ ಸಾರ್ವಜನಿಕ ಆಸ್ತಿಪಾಸ್ತಿಯನ್ನೂ ವೃದ್ಧಿಸಬೇಕು, ಸಂರಕ್ಷಿಸಬೇಕು. ಮೂಲತಃ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಸರ್ವರೂ ಗೌರವಿಸಬೇಕು. ಪರರ ಅಭಿಪ್ರಾಯ, ನಂಬಿಕೆಗಳನ್ನು ಮಾನ್ಯಮಾಡಬೇಕು. ಪಾರದರ್ಶಕವಾಗಿ, ಪ್ರಾಮಾಣಿಕವಾಗಿ  ಆದಾಯ ತೆರಿಗೆಯನ್ನೂ ಒಳಗೊಂಡಂತೆ ಎಲ್ಲ ಬಗೆಯ ತೆರಿಗೆಗಳನ್ನೂ ಸಕಾಲಕ್ಕೆ ಸಲ್ಲಿಸುವ ಬದ್ಧತೆ ಎಲ್ಲರ ಮೇಲಿದೆ.

ಒಂದು ಸಂದರ್ಭ ನೆನ‌ಪಿಸಿಕೊಳ್ಳಲರ್ಹ. ಒಬ್ಬ ಅಭ್ಯರ್ಥಿ ಐ.ಪಿ.ಎಸ್‌. ಮೌಖೀಕ ಸಂದರ್ಶನ ಎದುರಿಸಿದ್ದರು. ಅವರಿಗೆ ಸಂದರ್ಶನ ಸಮಿತಿಯವರು ನೀವು ಐ.ಎ.ಎಸ್‌. ಗೆ ಏಕೆ ಹೋಗಲಿಲ್ಲ? ಎಂದು ಪ್ರಶ್ನಿಸಿದರು. ಅದಕ್ಕೆ ಆತ “ರೀತಿ, ನಿಯಮ ರೂಪಿಸುವುದಕ್ಕಿಂತ ಅವು ಪಾಲನೆಯಾಗುವಂತೆ ನಿಗಾ ವಹಿಸುವುದೇ ನನಗೆ ಹೆಚ್ಚು ಪ್ರಿಯ’ ಎಂದರಂತೆ!

ನದಿ ಮೂಲದ ಹಿರಿಮೆ ಅದು ಹರಿಯುವಾಗ ಉಕ್ಕೇರುವುದರಲ್ಲಿ ವ್ಯಕ್ತಗೊಳ್ಳುವುದು. ಅಂತೆಯೆ ದೇಶದ ಔನ್ನತ್ಯ ಅಲ್ಲಿನ ಪ್ರಜೆಯ ಸಂಪನ್ನತೆಯಲ್ಲಿ ಪ್ರಕಟಗೊಳ್ಳಬೇಕು. ಪ್ರಜೆ ನೈತಿಕ ಪ್ರಜ್ಞೆಯಿಂದ ನಿಯಂತ್ರಿಸಲ್ಪಡ‌ದಿದ್ದರೆ ಆತ ಸಮರ್ಥನಾದಷ್ಟೂ ದುರುಳನೂ ಸಮಾಜಕ್ಕೆ ಕಂಟಕಪ್ರಾಯನೂ ಆದಾನು. ಒಂದು ದೇಶದ ನಿಜವಾದ ಸ್ವಾತಂತ್ರÂದ ಪರೀಕ್ಷೆಯೆಂದರೆ ಅಲ್ಲಿನ ಕೆಳ‌ಸ್ಥಳದವರು ಹೇಗೆ ಪರಿಗಣಿಸ್ಪಡುತ್ತಿದ್ದಾರೆ ಎನ್ನುವುದು ಎಂದು ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಹೇಳುತ್ತಿದ್ದರು. ಈ ನಿಟ್ಟಿನಲ್ಲಿ ಒಂದಷ್ಟು ನಿಷ್ಠುರ ಸತ್ಯಗಳನ್ನು ಹೇಳಲೇಬೇಕಿದೆ. ಮತದಾನ ಸರ್ವಪ್ರಜೆಗಳ ಪವಿತ್ರ ಹಕ್ಕು ಹಾಗೂ ಕರ್ತವ್ಯ ಎಂದು ಪರಿಪರಿಯಾಗಿ ಸಾರಿದರೂ ಬಹುತೇಕ ಎಲ್ಲ ಚುನಾವಣೆಗಳಲ್ಲೂ ಅದೇ ಎಡವಟ್ಟು!-“ಕುಲಗೆಡುವ ಮತಗಳು’.

ವಿಪರ್ಯಾಸವೆಂದರೆ ನಮ್ಮ ಪ್ರತಿನಿಧಿಗಳೂ ಸಹ ವಿಧಾನ ಪರಿಷತ್ತಿಗೆ, ರಾಜ್ಯಸಭೆಗೆ ಸದಸ್ಯರನ್ನು ಆರಿಸುವಾಗ ಹಾಗಿರಲಿ ರಾಷ್ಟ್ರಪತಿ, ಉಪರಾಷ್ಟ್ರಪತಿಗಳನ್ನು ಚುನಾಯಿಸುವಾಗಲೂ ಅವರು ಚಲಾಯಿಸುವ ಮತಗಳಲ್ಲಿ ಕೆಲವು ಅಸಮರ್ಪಕವಾಗಿರುತ್ತವೆ! ಮೂಲಭೂತ ಹಕ್ಕನ್ನು ಚಲಾಯಿಸುವಾಗ ಕನಿಷ್ಠ ಜಾಗೃತಿ ಬೇಕಲ್ಲವೇ? ಮತದಾನದ ಮೂಲಕವೇ ಅಲ್ಲವೆ ಪ್ರಜೆಗಳು ತಮ್ಮ ಆಶಯವನ್ನು ಆಭಿವ್ಯಕ್ತಿಸುವುದು? “ಮತ ಚಲಾಯಿಸದವರ ಆಯ್ಕೆ ಕೆಟ್ಟ ಸರ್ಕಾರ’ ಎಂಬ ವ್ಯಂಗ್ಯೋಕ್ತಿಯುಂಟು.

ಗಣ ಎಂದರೆ ಸಮೂಹ. ಹಾಗಾಗಿ ಗಣತಂತ್ರ ಎನ್ನುವಲ್ಲೇ ಸಮಷ್ಟಿ ವಿವೇಕವೆಂಬ ಧ್ವನ್ಯಾರ್ಥವಿದೆ. ಅಚ್ಚುಕಟ್ಟಾದ ರಾಜಕತೆಯ ರೂಪಣೆಯಲ್ಲಿ ಜನರ ಯುಕ್ತ ವಿವೇಚನೆ ಪ್ರಮುಖವೂ ನಿರ್ಣಾಯಕವೂ ಆದ ಪಾತ್ರ ವಹಿಸುತ್ತದೆ. ಬಹುಮುಖ್ಯವೆಂದರೆ ಉಮೇದುವಾರರು ಪ್ರತಿನಿಧಿಸಲು ತಕ್ಕವರೆ ಎಂದು ಪರಿಶೀಲಿಸಿಯೇ ಮತದಾರರು ಮತ ಚಲಾಯಿಸಬೇಕು. ಚಲಾಯಿಸುವ ಮತವು ಜಾತಿ, ವರ್ಗ, ಪಂಗಡ, ಲಿಂಗ, ಆಸ್ತಿ, ಅಂತಸ್ತು, ಅನುಕಂಪಕ್ಕೆ ಅತೀತವಿದ್ದಾಗ ಮಾತ್ರ ಅದರ ಮೌಲ್ಯ ಉಳಿಯುವುದು. ಪ್ರಸಿದ್ಧರಾದ ನಟರು, ಸಾಹಿತಿಗಳು, ಉದ್ಯಮಿಗಳು, ಸಂಗೀತಗಾರರು ಮೊದಲಾದವರು ಖಂಡಿತವಾಗಿ ಚುನಾವಣೆಗೆ ಸ್ಪರ್ಧಿಸಬಹುದು. ಯಾರೇ ಪ್ರಜೆ ಉಮೇದುವಾರರಾಗಲು ಸಂವಿಧಾನ ಅವಕಾಶ ಕಲ್ಪಿಸಿದೆ. ಆದರೆ ಅವರು ಆ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿಯಾರೆ ಎನ್ನುವುದು ಪ್ರಶ್ನೆಯಾಗುತ್ತದೆ. ಮತದಾನ ನಮ್ಮ ಬದ್ಧತೆಯನ್ನು ನಾವೇ ಘೋಷಿಸಿಕೊಳ್ಳುವುದು. ಅಮೆರಿಕದ ಖ್ಯಾತ ರಾಜಕೀಯ ವಿಶ್ಲೇಷಕರಾದ ಕೀತ್‌ ಎಲಿಸನ್‌ “ಮತದಾನ ಬಹಿಷ್ಕರಿಸುವುದು ಪ್ರತಿಭಟನೆಯಲ್ಲ, ಅದು ಶರಣಾಗತಿ’ ಎನ್ನುತ್ತಾರೆ. ಪ್ರಜೆಗಳೆಲ್ಲರೂ ಮತ ಚಲಾಯಿಸಿ ಒಂದರ್ಥದಲ್ಲಿ ದಕ್ಷ ರಾಜಕಾರಣಿಗಳಾಗಬೇಕು. ಕ್ರಿಕಟ್‌ ಕ್ರೀಡಾ ಕ್ಷೇತ್ರದಲ್ಲಿ ಒಬ್ಬರು ಸಮರ್ಥರಾಗಿರುವ ಮಾತ್ರಕ್ಕೆ ಅವರು ರಾಜಕಾರಣಿಯಾಗಿ ದಕ್ಷತೆ ಮೆರೆಯುತ್ತಾರೆಂದು ತೀರ್ಮಾನಿಸಲಾದೀತೇ?  ಕ್ರೀಡೆ ಮತ್ತು ರಾಜಕಾರಣವನ್ನು ಭಿನ್ನವಾಗಿಯೇ ನೋಡಬೇಕಾಗುತ್ತದೆ. ಒಂದು ಕ್ಷೇತ್ರದಲ್ಲಿ ಗಳಿಸಿದ ಪ್ರಖ್ಯಾತಿಯನ್ನು  ರಾಜಕೀಯ ಕ್ಷೇತ್ರಕ್ಕೆ ಬಳಸಿಕೊಳ್ಳುವಾಗ ಅತ್ಯಂತ ಎಚ್ಚರಿಕೆ ನಡೆ ಅಗತ್ಯವಾಗುತ್ತದೆ.

ಬಿಂಡಿಗನವಿಲೆ ಭಗವಾನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ...

  • ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು. ಸಮಾಜದಲ್ಲಿ ಆಳವಾಗಿ...

  • ಪಶ್ಚಿಮ ಬಂಗಾಳದ ರಾನಾಘಾಟ್‌ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ...

  • ಇಂದು ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರ 94ನೇ ಜನ್ಮದಿನ ತನ್ನಿಮಿತ್ತ ಈ ಲೇಖನ 80ರ ದಶಕದಲ್ಲಿ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮುತ್ಸದ್ದಿ...

  • ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಷಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದ ಪ್ರಾಣಿ ಸೊಳ್ಳೆ ಎನ್ನುವುದು ನಿಮಗೆ ತಿಳಿದಿರಲಿ. ಯಾವುದೇ ಪ್ರಾಣಿಗಳಿಗಿಂತಲೂ...

ಹೊಸ ಸೇರ್ಪಡೆ