ಸಣ್ಣ ಕಡಿತ, ದೊಡ್ಡ ಹೊಡೆತ

ಸೊಳ್ಳೆಗಳ ನಿಯಂತ್ರಣ ಸಣ್ಣ ಸಂಗತಿಯಲ್ಲ; ದೇಶದ ಪ್ರಗತಿಗೆ ಪೂರಕವಾಗಬಲ್ಲ ವಿಚಾರ

Team Udayavani, Aug 20, 2019, 5:51 AM IST

ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಷಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದ ಪ್ರಾಣಿ ಸೊಳ್ಳೆ ಎನ್ನುವುದು ನಿಮಗೆ ತಿಳಿದಿರಲಿ. ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳೇ ಹೆಚ್ಚು ಜನರನ್ನು ಕೊಲ್ಲುವ ಜೀವಿಗಳು. ಜಗತ್ತಿನಲ್ಲಿ ಸುಮಾರು 7 ಲಕ್ಷ ಜೀವವನ್ನು ಬಲಿ ತೆಗೆದುಕೊಳ್ಳುವುದು ಸೊಳ್ಳೆಗಳೇ!

ಸಂಜೆ ಮತ್ತು ಬೆಳಗ್ಗಿನ ಸಮಯದಲ್ಲಿ ಈ ಸೊಳ್ಳೆಗಳ ಕಾಟ ಅಸಾಧ್ಯವಾಗಿದೆ. ಸೊಳ್ಳೆ ಕಚ್ಚಿ ಉಂಟಾಗುವ ತುರಿಕೆಗಿಂತಲೂ ಅದು ತರುವ ಅಪಾಯದಿಂದಾಗಿ ಸೊಳ್ಳೆಯನ್ನು ನೋಡಿದರೆ ಭಯ ಉಂಟಾಗುತ್ತದೆ. ಮಾನವನ ಪರಮ ಶತ್ರು ಕೀಟಗಳಲ್ಲಿ ಸೊಳ್ಳೆಯೂ ಒಂದು.

ಮಾನವಕುಲಕ್ಕೆ ಅತಿ ಅಪಾಯಕಾರಿ ಜೀವಿ, ರಕ್ತ ಕುಡಿಯುವ ಪಿಶಾಚಿಯೆಂದೆ ಪರಿಗಣಿತವಾದ ಸೊಳ್ಳೆಯ ಕಡಿತ ಮಲೇರಿಯಾ, ಡೆಂಘೀ, ಕಾಮಾಲೆ, ಚಿಕನ್‌ ಗುನ್ಯಾ, ಆನೆಕಾಲು ಹಾಗೂ ಮಿದುಳುಜ್ವರ ರೋಗಗಳಿಂದ ಜನರು ನರಳುವಂತೆ ಮಾಡುತ್ತಿದೆ ಮತ್ತು ಇವು ಜಗತ್ತಿನ ಮಾರಕ ಪಿಡುಗುಗಳಾಗಿ ಹರಡುತ್ತಿವೆ.

ಸೊಳ್ಳೆ ಕಡಿತದಿಂದ ಬರುವ ರೋಗಗಳಲ್ಲಿ ಮಲೇರಿಯಾ ಮುಖ್ಯವಾದದ್ದು ಮತ್ತು ಬಹಳ ವ್ಯಾಪಕವಾದದ್ದು. ಪ್ರಪಂಚದ ಸಾವಿಗೆ ಕಾರಣವಾಗುವ ಎಲ್ಲಾ ಸೋಂಕು ರೋಗಗಳಲ್ಲಿ ಮಲೇರಿ ಯಾಕ್ಕೆ ಐದನೇ ಸ್ಥಾನ. ಪ್ರತಿ ವರ್ಷ ಎರಡು ದಶಲಕ್ಷ ಜನರು ಈ ರೋಗಕ್ಕೆ ಬಲಿಯಾಗುತ್ತಿದ್ದಾರೆ.

ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಷಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದ ಪ್ರಾಣಿ ಸೊಳ್ಳೆ. ಯಾವುದೇ ಪ್ರಾಣಿಗಳಿಗಿಂತಲೂ ಸೊಳ್ಳೆಗಳೇ ಹೆಚ್ಚು ಜನರನ್ನು ಕೊಲ್ಲುವ ಜೀವಿಗಳು. ಜಗತ್ತಿನಲ್ಲಿ ಸುಮಾರು 7 ಲಕ್ಷ ಜೀವವನ್ನು ಬಲಿ ತೆಗೆದುಕೊಳ್ಳುವುದು ಸೊಳ್ಳೆಗಳೇ.

ವಿಶ್ವ ಸೊಳ್ಳೆ ದಿನ!
ಮಾರಣಾಂತಿಕ ಸಾಂಕ್ರಾಮಿಕ ರೋಗಗಳಿಗೆ ದಾರಿ ಮಾಡುವ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆ. 20ನ್ನು ‘ವಿಶ್ವ ಸೊಳ್ಳೆ ದಿನ’ವಾಗಿ ಆಚರಿಸಲಾಗುತ್ತದೆ. ಸೊಳ್ಳೆಗೂ ಒಂದು ದಿನವೇ ಎಂದು ತಮಾಷೆ ಮಾಡುವ ಬದಲು ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಹತ್ತೂಂಬತ್ತನೇ ಶತಮಾನದವರೆಗೂ ಸೊಳ್ಳೆ ಇಷ್ಟೊಂದು ಅಪಾಯಕಾರಿ ಎಂದು ಯಾರ ಗಮನಕ್ಕೂ ಬರಲಿಲ್ಲ. ಬ್ರಿಟಿಷ್‌ ವೈದ್ಯ ಪ್ಯಾಟ್ರಿಕ್‌ ಮ್ಯಾನ್ಸನ್‌ ಆನೆಕಾಲು ರೋಗಕ್ಕೆ ಸೊಳ್ಳೆ ಮೂಲ ಕಾರಣ ಎಂದು ಕಂಡುಕೊಂಡರು. 1902ರಲ್ಲಿ ನೋಬೆಲ್ ಪ್ರಶಸ್ತಿ ಪಡೆದ ಭಾರತೀಯ ಮೂಲದ ಬ್ರಿಟನ್‌ ವೈದ್ಯ ರೊನಾಲ್ಡ್ ರೋಸ್‌ 1897ರಲ್ಲಿ ಮಲೇರಿಯಾ ಹರಡಲು ಅನಾಫಿಲೀಸ್‌ ಎಂಬ ಹೆಣ್ಣು ಸೊಳ್ಳೆ ಎಂದು ಕಂಡು ಹಿಡಿದಿದ್ದು 1897ರ ಆಗಸ್ಟ್‌ 20ರಂದೇ. ಈ ಸಂಶೋಧನೆಯ ಸ್ಮರಣಾರ್ಥ ಅಗೋಸ್ತು 20ರಂದು ಜಗತ್ತಿನಾದ್ಯಂತ ವಿಶ್ವ ಸೊಳ್ಳೆ ದಿನವನ್ನು ಆಚರಿಸಲಾಗುತ್ತಿದೆ.

ಗಂಡು ಸೊಳ್ಳೆಗಳು ಸಸ್ಯ ಹಾಗೂ ಹೂವಿನ ರಸ ಸೇವನೆಯಿಂದ ತನ್ನ ಜೀವನ ಸಾಗಿಸುತ್ತವೆ. ಸೊಳ್ಳೆಗಳು ಆಹಾರದ ಉದ್ದೇಶಕ್ಕಾಗಿ ರಕ್ತ ಹೀರುವುದಿಲ್ಲ. ಹೆಣ್ಣು ಸೊಳ್ಳೆಗಳು ಸಂತಾನೋತ್ಪತ್ತಿಗಾಗಿ ಪ್ರೊಟೀನ್‌ ಗಳನ್ನು ಪಡೆಯುದಕ್ಕಾಗಿ ರಕ್ತ ಹೀರುತ್ತದೆ. ಅನಾಫ‌ಲೀಸ್‌ ಹೆಣ್ಣು ಸೊಳ್ಳೆ ತಾನು ಹೀರಿದ ರಕ್ತವನ್ನು ನೀರಿನ ಮೇಲಿಟ್ಟ ತನ್ನ ಮೊಟ್ಟೆಯನ್ನು ಬಲಿಸಲು ಬಳಸುತ್ತದೆ. ಆ ಮರಿ ಸೊಳ್ಳೆಗಳು ನೀರಿನಲ್ಲಿ ಮರಿ ಯಾಗುತ್ತವೆ. ಆ ಮರಿಸೊಳ್ಳೆಗಳು ನೀರಿನಲ್ಲೇ ಈಜಾಡಿಕೊಂಡು ರೋಗದ ಮೂಲವಾಗುತ್ತವೆ.

ಈಡ್ಸ್‌ ಸೊಳ್ಳೆಗಳ ಕಡಿತದಿಂದ ಡೆಂಘೀ ಜ್ವರ ಬರುತ್ತದೆ. ಇದರಿಂದ ಹೊರಬರಲು ಕನಿಷ್ಠ ಮೂರು ವಾರಗಳಾದರೂ ಬೇಕು. ಜ್ವರ ಬಿಟ್ಟರೂ ಮೈ ಕೈ ನೋವು, ಸುಸ್ತು ನಮ್ಮನ್ನು ಸುಲಭವಾಗಿ ಬಿಟ್ಟು ಹೋಗುವುದಿಲ್ಲ. ಹತ್ತು ವರ್ಷಕ್ಕಿಂತ ಸಣ್ಣ ಮಕ್ಕಳಿಗೆ ಹೆಚ್ಚಿನ ಸಮಸ್ಯೆಯನ್ನುಂಟು ಮಾಡಬಲ್ಲ ಡೆಂಘೀ ಅವರಿಗೆ ಹೊಟ್ಟೆ ನೋವು, ವಾಂತಿ ತಲೆಸುತ್ತು ಮುಂತಾದ ಸಮಸ್ಯೆಗಳನ್ನು ತಂದೊಡ್ಡಬಲ್ಲುದು. ಆದುದರಿಂದ ಮಳೆಗಾಲದಲ್ಲಿ ಸಣ್ಣ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಡೆಂಘೀ ಜ್ವರ ಮಾನವರನ್ನು ಆಕ್ರಮಿಸಿದಾಗ ತಡೆಯ ಲಾರದ ತಲೆನೋವು, ಜ್ವರ, ಮಾಂಸಖಂಡಗಳ ಮತ್ತು ಸಂದು ನೋವು, ಗಂಟಲ ಗ್ರಂಥಿಗಳು ಉಬ್ಬುವುದು, ತುರಿಕೆ ಮುಂತಾದ ಲಕ್ಷಣಗಳು ಕಂಡುಬರುವುದು. ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ವಯಸ್ಸಾದವರಿಗೆ ಡೆಂಘೀ ಜ್ವರದ ತೊಂದರೆಯುಂಟಾದಾಗ ಪ್ರಾಣಾಪಾಯದ ಪ್ರಮಾಣ ಜಾಸ್ತಿ.

ನಿವಾರೋಣೋಪಾಯ ಏನು?
ಸೊಳ್ಳೆ ಬೆಳವಣಿಗೆಯಾಗದಂತೆ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜಾಗೃತ ಜೀವನ ಕ್ರಮದಿಂದ ರೋಗ ಬಾರದಂತೆ ರಕ್ಷಣೆ ಪಡೆಯಬಹುದು. ಈ ನಿಟ್ಟಿನಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸೊಳ್ಳೆಯಿಂದಾಗುವ ಕಂಟಕಗಳಿಂದ ದೂರವಿರಬಹುದು.

ನಾವೇನು ಮಾಡಬಹುದು?
ಮಲೇರಿಯಾ ಹರಡುವ ಸೊಳ್ಳೆ ರಾತ್ರಿ ಸಮಯದಲ್ಲಿ ಕಚ್ಚುತ್ತದೆ ಹಾಗೂ ಡೆಂಘೀ ಹರಡುವ ಸೊಳ್ಳೆ ಹಗಲಿನಲ್ಲಿ ಕಚ್ಚುತ್ತದೆ. ಮನೆಯೊಳಗೆ ಸೊಳ್ಳೆ ಪ್ರವೇಶಿಸದಂತೆ ಸಂಜೆ ಹೊತ್ತು ಕಿಟಕಿ ಬಾಗಿಲುಗಳನ್ನು ಮುಚ್ಚುವುದು, ಕಿಟಕಿ ಬಾಗಿಲುಗಳಿಗೆ ಸೊಳ್ಳೆ ನಿಯಂತ್ರಣ ಜಾಲರಿಗಳನ್ನು ಅಳವಡಿಸುವುದು ಹಾಗೂ ಸೊಳ್ಳೆ ಪರದೆಗಳನ್ನು ಬಳಸುವ ಮೂಲಕ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು. ಸೊಳ್ಳೆ ನಿವಾರಕ ಮುಲಾಮುಗಳನ್ನು ಬಳಸಿ ಸೊಳ್ಳೆಕಡಿತದಿಂದ ತಪ್ಪಿಸಿಕೊಳ್ಳಬಹುದು. ಮೈಯನ್ನು ಸಂಪೂರ್ಣವಾಗಿ ಮುಚ್ಚುವ ಬಟ್ಟೆ ಧರಿಸಿದರೆ ಉತ್ತಮ.

ಸೊಳ್ಳೆಗಳನ್ನು ನಿಯಂತ್ರಿಸಲು ಸುತ್ತಲಿನ ಪರಿಸರವನ್ನು ಸ್ವಚ್ಚವಾಗಿಡಬೇಕು ಎಂಬ ವಿವೇಕ ನಮ್ಮದಾಗಲಿ. ಸಾಂಕ್ರಾಮಿಕ ರೋಗಗಳಾದ ಡೆಂಘೀ, ಮಲೇರಿಯಾದಿಂದ ಪಾರಾಗಲು ಇರುವ ಏಕೈಕ ಮಾರ್ಗೋಪಾಯ ಸೊಳ್ಳೆಗಳ ನಿಯಂತ್ರಣ ಮತ್ತು ನಿವಾರಣೆ.

ಸೊಳ್ಳೆಗೆ ವಾಸಸ್ಥಾನ ಕಲ್ಪಿಸಬೇಡಿ
ಕಾಯಿಲೆ ಹರಡುವ ಸೊಳ್ಳೆ ಸಂತಾನಾಭಿವೃದ್ಧಿಯಾಗುವ ಸ್ಥಳ ನಿಂತ ನೀರು. ಮನೆಯ ಸುತ್ತಮುತ್ತ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನೀರು ಸರಾಗವಾಗಿ ಹರಿಯುವಂತೆ ಮಾಡಬೇಕು. ಪಾತ್ರೆಯಲ್ಲಿ ತುಂಬಿಟ್ಟ ನೀರನ್ನು ಬದಲಾಯಿಸುತ್ತಿರಬೇಕು. ಕಟ್ಟಡ ನಿರ್ಮಾಣ ಕಾಮಗಾರಿ ಸಂದರ್ಭ ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು.

ನೀರು ನಿಲ್ಲುವಂತಹ ತಗ್ಗು ಪ್ರದೇಶಗಳನ್ನು ಸಮತಟ್ಟು ಗೊಳಿ ಸುವುದು ಹಾಗೂ ಬಾವಿಗೆ ಗಪ್ಪಿ ಮೀನುಗಳನ್ನು ಹಾಕುವುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ತಡೆಯಬಹುದು.

ಹಳೆಯ ಟೈರುಗಳು, ಎಳೆನೀರಿನ ಚಿಪ್ಪುಗಳಲ್ಲಿ, ತೆರೆದ ಟ್ಯಾಂಕ್‌ಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಮನೆಯಲ್ಲಿರುವ ನೀರು ಶೇಖರಣಾ ತೊಟ್ಟಿಗಳು, ಓವರ್‌ಹೆಡ್‌ ಟ್ಯಾಂಕ್‌, ಬ್ಯಾರಲ್ಗಳು, ಹೂವಿನ ಕುಂಡಗಳು, ಸುತ್ತಮುತ್ತ ಎಸೆದ ಎಳನೀರಿನ‌ ಚಿಪ್ಪುಗಳು, ಪ್ಲಾಸ್ಟಿಕ್‌ ಲೋಟಗಳು, ಪಿಂಗಾಣಿ ವಸ್ತುಗಳು, ಬಾಟಲ್ಗಳು, ಟೈರುಗಳು, ಒಡೆದ ಬಕೆಟ್‌ನಂತಹ ವಸ್ತುಗಳು ಕೃತಕವಾಗಿ ನೀರು ನಿಂತು ಸೊಳ್ಳೆಗಳ ಸಂತಾನೋತ್ಪತ್ತಿಯ ತಾಣವಾಗುತ್ತವೆ.ಇವುಗಳ ಬಗ್ಗೆ ಎಚ್ಚರವಿರಲಿ. ಏರ್‌ಕೂಲರ್‌ಗಳು, ಶೀತಲ ಪೆಟ್ಟಿಗೆಗಳ ಕೆಳಭಾಗದಲ್ಲಿ ಶೇಖರಣೆಗೊಂಡ ನೀರಿನಲ್ಲೂ ಸೊಳ್ಳೆಗಳು ಮರಿ ಮಾಡಬಹುದು.

ಸೊಳ್ಳೆಗಳಿಗೆ ವಿಶ್ರಾಂತಿ ಸ್ಥಾನ ಬೇಡ
ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಕೊಳೆತ ತರಕಾರಿ ಮತ್ತು ಕಸದ ಬುಟ್ಟಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತದೆ. ನಮ್ಮ ಸುತ್ತಮುತ್ತ ಬೆಳೆದಿರುವ ಗಿಡಗಂಟೆ ಮತ್ತಿತರ ಕಸವನ್ನು ತೆಗೆಸಿ ಸ್ವಚ್ಚವಾಗಿರಿಸುವುದು. ಮನೆಗಳ ಸುತ್ತ ತುಳಸಿ, ಲಾವಂಚ, ಗೊಂಡೆ ಹೂ, ನೆಲನೆಲ್ಲಿ, ಕಹಿಬೇವು ಮತ್ತಿತರ ಗಿಡಗಳನ್ನು ಬೆಳೆಸುವುದರಿಂದ ಗಾಳಿಯೂ ಶುದ್ಧವಾಗಿರುವುದು ಮತ್ತು ಸೊಳ್ಳೆಕಾಟದಿಂದ ಮುಕ್ತಿ ನೀಡುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಶುಚಿತ್ವ ಕಾಪಾಡಿ, ಸೊಳ್ಳೆಗಳು ಬೆಳೆಯದಂತೆ ಮುನ್ನೆಚರಿಕೆ ವಹಿಸಿ ಉತ್ತಮ ಅರೋಗ್ಯಕ್ಕಾಗಿ ಸೊಳ್ಳೆಮುಕ್ತ ಪರಿಸರ ನಿರ್ಮಾಣ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ.

ಜಾಗೃತಿ ಹಾಗೂ ಸಹಭಾಗಿತ್ವ ಅಗತ್ಯ
ಅಭಿವೃದ್ಧಿಶೀಲ ದೇಶಗಳ ಪ್ರಗತಿಗೆ ಸಾಂಕ್ರಾಮಿಕ ರೋಗಗಳು ಮಾರಕವಾಗಿ ಪರಿಣಮಿಸಿವೆ. ಮನೆಯ ಹೊರಗೆ ಸೊಳ್ಳೆಗಳ ಉತ್ಪಾದನೆ ಮಾಡಿ, ಅನಂತರ ಮನೆಯೊಳಗೆ ಅವುಗಳ ವಿರುದ್ಧ ಸೆಣಸಾಡುವುದೇ ನಮ್ಮ ಸಮಸ್ಯೆಯಾಗಿದೆ. ಕಾಯಿಲೆಯ ಮೂಲವಾದ ಸೊಳ್ಳೆಗಳ ನಿಯಂತ್ರಣವನ್ನು ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಿ, ಆರೋಗ್ಯಪೂರ್ಣ ಸಮಾಜದ ನಿರ್ಮಾಣ ಮಾಡುವುದು ಇಂದಿನ ಅಗತ್ಯ. ಸಾಂಕ್ರಾಮಿಕ ರೋಗಗಳ ತಡೆಗೆ ಆರೋಗ್ಯ ಇಲಾಖೆಯ ವತಿಯಿಂದ ಕ್ರಮಗಳು, ಅಭಿಯಾನಗಳು ಜಾರಿಯಲ್ಲಿದೆ. ಸರಕಾರಿ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನ ಮತ್ತು ಯಶಸ್ವಿಯಾಗಬೇಕಾದರೆ ಸಾರ್ವಜನಿಕ ಜಾಗೃತಿ ಮತ್ತು ಸಹಭಾಗಿತ್ವ ಅತ್ಯಗತ್ಯ.

ಡಾ.ಎ.ಜಯಕುಮಾರ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ....

  • ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ....

  • ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ...

  • ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ...

  • "ಸ್ವಾತಿ ಮುತ್ತಿನ ಮಳೆ ಹನಿಯೆ| ಮೆಲ್ಲ ಮೆಲ್ಲನೆ ಧರೆಗಿಳಿಯೆ||...' ಸಿನೇಮಾ ಹಾಡು ಈಗಲೂ ಗುನುಗುನಿಸುತ್ತಿರಬಹುದು, ಕೆ(ಹ)ಲವರ ಮನದಲ್ಲಿಯಾದರೂ... ಅ. 24ರ ಸಂಜೆಯಿಂದ ಸ್ವಾತಿ...

ಹೊಸ ಸೇರ್ಪಡೆ