ಭಾವೈಕ್ಯದ ಅಮರ ಸಂದೇಶ ಈದುಲ್ ಫಿತರ್‌

Team Udayavani, Jun 5, 2019, 6:00 AM IST

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖ ಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು. ತಾನು ಗಳಿಸಿದ ಎಲ್ಲಾ ಸಂಪತ್ತನ್ನೂ, ತನ್ನ ಮತ್ತು ತನ್ನವರ ಹಿತಾಸಕ್ತಿಗಾಗಿ ಮಾತ್ರ ವಿನಿಯೋಗಿಸುವುದನ್ನು ಇಸ್ಲಾಮ್‌ ನಿಷೇಧಿಸಿದೆ.

ಶಿಸ್ತುಬದ್ಧ ಉಪವಾಸಾನುಷ್ಠಾನದ ಪವಿತ್ರ ತಿಂಗಳಾದ ರಂಝಾನ್‌, ಇಸ್ಲಾಮೀ ಇತಿಹಾಸದ ಅನೇಕ ಮಹತ್ವಪೂರ್ಣ ಘಟನೆಗಳ ಅಪೂರ್ವ ಸಂಗಮವೂ ಆಗಿದೆ. ಈ ಪಾವನ ರಂಝಾನ್‌ ಮಾಸಕ್ಕೆ ವಿದಾಯ ಕೋರುವ ಈದುಲ್ಫಿತರ್‌, ರಂಝಾನ್‌ ಸಾರುವ ಉನ್ನತ ಆದರ್ಶಗಳ ಸವಿನೆನಪಿಗಾಗಿ ವಿಶ್ವದಾದ್ಯಂತ ಆಚರಿಸಲ್ಪಡುತ್ತದೆ. ಉಪವಾಸ ವ್ರತವು ಸೃಷ್ಟಿಸುವ ಮಾನಸಿಕ ಶುಭ್ರತೆ ಮತ್ತು ಸಂಯಮವನ್ನು ಕೇವಲ ಅದೊಂದು ಮಾಸಕ್ಕೆ ಮಾತ್ರ ಸೀಮಿತವಾಗಿರಿಸದೆ, ವರ್ಷ ದುದ್ದಕ್ಕೂ ಕಾಯ್ದುಕೊಳ್ಳಬೇಕೆಂಬ ಆದರ್ಶದೊಂದಿಗೆ ಈದುಲ್ಫಿತರ್‌ ಆಚರಿಸಲ್ಪಡುತ್ತದೆ.

ಸಮಗ್ರ ಮಾನವ ಕೋಟಿಯ ಕಲ್ಯಾಣಕ್ಕಾಗಿ ಪವಿತ್ರ ಖುರ್‌ಆನ್‌ ಪ್ರವಾದಿ ಮುಹಮ್ಮದ (ಸ.ಅ.)ರ ಮುಖಾಂತರ ಜಗತ್ತಿಗೆ ಅವತೀರ್ಣಗೊಂಡದ್ದು ಪವಿತ್ರ ರಮಳಾನ್‌ ಮಾಸದಲ್ಲಿ. ರಮಳಾನ್‌ ಮಾಸದ ಉಪವಾಸಾನುಷ್ಠಾನದ ಸಂದರ್ಭದಲ್ಲಿ ಹಸಿವೆ, ನೀರಡಿಕೆಯಿಂದ ತುಂಬಿದ ಉದರದಿಂದ ಕ್ಷಣಕ್ಷಣಕ್ಕೂ ಹೊರಡುವ ಹಸಿವಿನ ಧ್ವನಿಯು, ನಮ್ಮ ಆಸುಪಾಸಿನಲ್ಲಿ ಹಸಿವಿನಿಂದ ಬಳಲುವವರತ್ತ ನಮ್ಮ ಗಮನವನ್ನು ಸೆಳೆಯುತ್ತದೆ. ಈದುಲ್ಫಿತರಿನಂದು ಮುಸ್ಲಿಮರ ಮನೆಗಳಲ್ಲಿ ಮತ್ತು ಮಸೀದಿಗಳಲ್ಲಿ ಮಾರ್ದನಿಗೊಳ್ಳುವ ‘ಅಲ್ಲಾಹು ಅಕ್ಬರ್‌’, ಆಲ್ಲಾಹನ ಸ್ತುತಿ ಹೇಗೋ ಹಾಗೆಯೇ ಮಾನವೀಯ ಏಕತೆಯ ಸಂದೇಶವೂ ಆಗಿದೆ. ‘ದೇವನು ಮಹೋನ್ನತನು’ ಎಂಬ ಧ್ಯೇಯ ವಾಕ್ಯವು, ಏಕತೆ, ಸಮಾನತೆ ಮತ್ತು ಸಹೋದರತೆಯ ಅಮರ ಸಂದೇಶವನ್ನು ಮನುಕುಲಕ್ಕೆ ಸಾರುತ್ತದೆ. ರಂಝಾನ್‌ ಉಪವಾಸಾನುಷ್ಠಾನದಿಂದ ಪಂಚೇಂದ್ರಿಯಗಳ ಮೇಲೆ ಪೂರ್ಣ ಹತೋಟಿ ಸಾಧಿಸಲು ನಮ್ಮಿಂದ ಸಾಧ್ಯವಾಗುತ್ತದೆ. ಒಂದು ಪೂರ್ಣ ಮಾಸ ಕಾಲ ಉಪವಾಸ ಆಚರಿಸಿದ ಮುಸ್ಲಿಮರೆಲ್ಲರಿಗೂ ಅನ್ನಾಹಾರ ಸೇವನೆಗೆ ಅನುಮತಿಸಲ್ಪಟ್ಟ ದಿನವೇ ಈದುಲ್ ಫಿತರ್‌. ಪವಿತ್ರ ರಂಝಾನ್‌ ಮಾಸವು ಇತರ ಎಲ್ಲಾ ಮಾಸಗಳಿಗಿಂತ ಶ್ರೇಷ್ಠ ಹಾಗೂ ಪುಣ್ಯದ ಮಾಸವಾಗಿ ಪರಿಗಣಿಸಲ್ಪಟ್ಟಿದೆ. ಈ ತಿಂಗಳಲ್ಲಿ ನಡೆಸುವ ಪ್ರತಿಯೊಂದು ಸತ್ಕರ್ಮವೂ ಹೆಚ್ಚು ಪುಣ್ಯದಾಯಕ. ಶ್ರೀಮಂತಿಕೆ, ಬಡತನಗಳೆರಡೂ ಶಾಶ್ವತ ವಲ್ಲವೆಂಬ ಸಾಮಾಜಿಕ ಪ್ರಜ್ಞೆಯ ಸಂದೇಶವು ರಂಝಾನ್‌ ವ್ರತಾನುಷ್ಠಾನದಲ್ಲಿದೆ. ವ್ರತಾನುಷ್ಠಾನವು ಮನುಷ್ಯನಿಗೆ ಶಿಸ್ತು, ಸಂಯಮ, ಹಾಗೂ ಸಮಯ ನಿಷ್ಠೆಯನ್ನು ಬೋಧಿಸುತ್ತದೆ.

ಆಧ್ಯಾತ್ಮಿಕ ದೃಷ್ಟಿಕೋನದಿಂದ ವೀಕ್ಷಿಸಿದರೂ, ಆಧುನಿಕ ವಿಜ್ಞಾನದ ಸಕಲ ದೃಷ್ಟಿಕೋನಗಳಿಂದ ವೀಕ್ಷಿಸಿದರೂ ರಂಝಾನಿನ ಪೂರ್ಣ ಮಾಸ ಕಾಲದ ಉಪವಾಸ ವ್ರತಾನು ಷ್ಠಾನವು ಮನುಷ್ಯನ ದೈಹಿಕ ಆರೋಗ್ಯವನ್ನು ವೃದ್ಧಿಸುವುದಲ್ಲದೆ, ಆತನಿಗೆ ಶಾಂತಿ, ಸಹನೆ ಮತ್ತು ಆತ್ಮಸಂತೃಪ್ತಿಯನ್ನು ನೀಡುತ್ತದೆ. ರಂಝಾನ್‌ ಉಪವಾಸಾನುಷ್ಠಾನದಿಂದ ನಮ್ಮ ಶರೀರದಲ್ಲಿ ಅಡಕವಾಗಿರುವ ಕಲ್ಮಶಗಳು ನೀಗಲ್ಪಟ್ಟು, ಶರೀರಕ್ಕೆ ತಗಲ ಬಹುದಾದ ರೋಗಗಳು ತಡೆಯಲ್ಪಡುತ್ತದೆಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿರುತ್ತಾರೆ.

ಈದುಲ್ ಫಿತರಿನಂದು ಇಸ್ಲಾಮ್‌ ಜಾರಿಗೊಳಿಸಿದ ‘ಫಿತರ್‌ ಝಕಾತ್‌’ ಎಂಬ ನಿರ್ಬಂಧ ದಾನವು ಬಡವರೂ ಹಬ್ಬದಲ್ಲಿ ಪಾಲ್ಗೊಂಡು, ಸಂತೋಷಪಡಬೇಕೆಂಬ ಸದ್ದುದ್ದೇಶದಿಂದ ಕೂಡಿದೆ. ಈದುಲ್ ಫಿತರ್‌ ಹಬ್ಬವನ್ನಾಚರಿಸಲು ಆರ್ಥಿಕ ಸಾಮರ್ಥ್ಯವಿಲ್ಲದ ಬಡವರಿಗೂ, ಅನಾಥರಿಗೂ, ಅಂಗವಿ ಕಲರಿಗೂ, ವಿಧವೆಯರಿಗೂ ಬಡತನದ ರೇಖೆಯಲ್ಲಿರುವ ನಿಕಟ ಸಂಬಂಧಿಕರಿಗೂ ಈ ನಿರ್ಬಂಧ ದಾನವನ್ನು ನೀಡ ಬಹುದಾಗಿದೆ. ಸಮಾಜದ ದುರ್ಬಲ ವರ್ಗಗಳತ್ತ ಸದಾ ಅನುಕಂಪದಿಂದ ಇರಬೇಕೆಂಬ ನೀತಿ ಮಾರ್ಗವನ್ನು ಈ ವಿಶಿಷ್ಟ ದಾನವು ಮನುಕುಲಕ್ಕೆ ಸಾರುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖ ಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು. ತಾನು ಗಳಿಸಿದ ಎಲ್ಲಾ ಸಂಪತ್ತನ್ನೂ, ತನ್ನ ಮತ್ತು ತನ್ನವರ ಹಿತಾಸಕ್ತಿಗಾಗಿ ಮಾತ್ರ ವಿನಿಯೋಗಿಸುವುದನ್ನು ಇಸ್ಲಾಮ್‌ ನಿಷೇಧಿಸಿದೆ. ‘ನೀನು ಗಳಿಸಿದ ಎಲ್ಲಾ ಸಂಪತ್ತು ನಿನ್ನದಾಗು ವುದಿಲ್ಲ. ಅದರಲ್ಲಿ ಶೇಕಡಾ ಎರಡೂವರೆ ಅಂಶವನ್ನು ನೀನು ಬಡವರಿಗೆ, ದೀನ ದಲಿತರಿಗೆ ಹಾಗೂ ಕಷ್ಟ ಕಾರ್ಪಣ್ಯಕ್ಕೊಳಗಾದವರಿಗೆ ಕಡ್ಡಾಯವಾಗಿ ನೀಡಬೇಕು. ಇದು ನೀನು ದೇವನ ಮಾರ್ಗದಲ್ಲಿ ಪುಣ್ಯ ಸಂಪಾದನೆಗಾಗಿ ವ್ಯಯಿಸುವ ಪ್ರಕ್ರಿಯೆ. ಒಂದು ವೇಳೆ ನೀನು ಸ್ವಾರ್ಥ ದೃಷ್ಟಿಯಿಂದ, ಅಲ್ಲಾಹನ ಕೃಪೆಯಿಂದ ಗಳಿಸಿರುವ ಸಂಪತ್ತಿನಲ್ಲಿ ಶೇಕಡಾ ಎರಡೂವರೆ ಅಂಶವನ್ನು ‘ಝಕಾತ್‌’ ನೀಡಲು ಹಿಂಜರಿಯುವೆ ಎಂದಾದರೆ, ಆ ನಿನ್ನ ಎಲ್ಲಾ ಸಂಪತ್ತೂ, ಅಲ್ಲಾಹನ ದೃಷ್ಟಿಯಲ್ಲಿ ಅಶುದ್ಧ ಮತ್ತು ಅವನ್ನು ಗಳಿಸಲು ಉಪಯೋಗಿಸಿದ ನಿನ್ನ ದೇಹವೂ ಮಲಿನವೆಂದರ್ಥ. ನೀನು ಅಲ್ಲಾಹನ ಅನುಗ್ರಹದಿಂದ ಗಳಿಸಿರುವ ಸಂಪತ್ತಿನಲ್ಲಿ ದೀನ ದಲಿತರ, ಬಡಬಗ್ಗರ ಹಾಗೂ ಕಷ್ಟ ಕಾರ್ಪಣ್ಯಕ್ಕೊಳಗಾದವರ ಒಂದು ಪಾಲು ಸೇರಿಕೊಂಡಿದೆಯೆಂದು ನೀನು ಅರ್ಥಮಾಡಿಕೊಳ್ಳಬೇಕು’ ಎಂದು ಖುರ್‌ಆನ್‌ ಮನುಕುಲಕ್ಕೆ ಬೋಧಿಸಿದೆ.

‘ಝಕಾತ್‌’ ಎಂಬುದು ಮುಸ್ಲಿಮರಿಗೆ ಬದುಕಿನಲ್ಲಿ ತ್ಯಾಗದ ಮಹತ್ವವನ್ನು ಬೋಧಿಸುತ್ತದೆ. ಮಾತ್ರವಲ್ಲದೆ ಅಗತ್ಯಬಿದ್ದಾಗ ತನ್ನ ಹೆಚ್ಚಿನ ಸಂಪತ್ತನ್ನು ದೇವನ ಮಾರ್ಗದಲ್ಲಿ ಖರ್ಚು ಮಾಡಲು ಪ್ರೋತ್ಸಾಹ ನೀಡುತ್ತದೆ. ‘ಝಕಾತ್‌’ ಇಸ್ಲಾಮಿನಲ್ಲಿ ಬಡವ-ಬಲ್ಲಿದರೆಂಬ ಅಸಮಾನತೆಯನ್ನು ತೊಡೆದುಹಾಕಲು ಯತ್ನಿಸುವುದಲ್ಲದೆ, ಬದುಕಿನುದ್ದಕ್ಕೂ ಪರೋಪಕಾರ ಪ್ರಜ್ಞೆ, ಅನುಕಂಪ, ಸಮಾನತೆ ಮತ್ತು ಸೌಹಾರ್ದತೆಯನ್ನು ಪಾಲಿಸಲು ಪ್ರೇರಣೆ ನೀಡುತ್ತದೆ. ‘ತನ್ನ ನೆರೆಹೊರೆಯವರು ಹಸಿವಿನಿಂದ ಬಳಲುತ್ತಿರುವಾಗ, ಹೊಟ್ಟೆ ತುಂಬಾ ಉಂಡು ತೇಗುವವನು ಮುಸಲ್ಮಾನನಲ್ಲ. ನೀವು ನಿಮ್ಮ ವೈಯಕ್ತಿಕ ಜೀವನಕ್ಕೆ ಏನೆಲ್ಲಾ ಒಳಿತನ್ನು ಅಪೇಕ್ಷಿಸುತ್ತೀರೋ, ಅವೆಲ್ಲವೂ ನಿಮ್ಮ ಸಹೋದರ. ಬಾಂಧವರಿಗೂ ದೊರೆಯುವಂತೆ ಬಯಸಿರಿ. ಅಲ್ಲಿಯ ತನಕ ನೀವಾರೂ ಪರಿಪೂರ್ಣ ಸತ್ಯವಿಶ್ವಾಸಿಗಳಾಗಲಾರಿರಿ’ ಎಂದು ಪ್ರವಾದಿ ಮುಹಮ್ಮದ (ಸ.ಅ.)ರು ಮನುಕುಲಕ್ಕೆ ಕರೆ ನೀಡಿರುವರು.

ಈದುಲ್ ಫಿತರ್‌ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಮನುಕುಲಕ್ಕೆ ಬೋಧಿಸಿ, ಬದುಕಿನ ಪಾವಿತ್ರ್ಯವನ್ನು ಹೆಚ್ಚಿಸುತ್ತದೆ. ರಂಝಾನ್‌ ಮತ್ತು ಈದುಲ್ಫಿತರ್‌ ಸಾರುವ ಸತ್ಯ, ಶಾಂತಿ, ಸೌಹಾರ್ದತೆಗಳು ಬದುಕಿನಲ್ಲಿ ಭರವಸೆಯನ್ನೂ ಸ್ಫೂರ್ತಿಯನ್ನೂ ಮತ್ತು ನವ ಚೈತನ್ಯವನ್ನು ತುಂಬುವುದಕ್ಕೆ ನಮಗಿಂದು ಅಗತ್ಯವಾಗಿದೆ. ಬದುಕಿನ ಜಂಜಾಟದಲ್ಲಿ ಮರೆಯುತ್ತಿರುವ ನೈತಿಕ ಮೌಲ್ಯವನ್ನು ಮತ್ತೆ ಜಾಗೃತಗೊಳಿಸಿ, ಬದುಕಿಗೆ ಉನ್ನತ ಅರ್ಥವನ್ನು ಕಲ್ಪಿಸುವುದೇ ಹಬ್ಬಗಳ ಗುರಿ. ಈದುಲ್ ಫಿತರ್‌ ಸಾರುವ ಸಮಾನತೆ ಮತ್ತು ಸಹೋದರತೆಯು ಮನುಷ್ಯನ ದೈನಂದಿನ ಬದುಕನ್ನು ಅರ್ಥಪೂರ್ಣಗೊಳಿಸುತ್ತದೆ. ಮನುಷ್ಯನು ಸಂತೋಷ ಪಡಬೇಕಾದುದು ಕೇವಲ ತನ್ನೊಬ್ಬನ ವೈಯಕ್ತಿಕ ಏಳಿಗೆಯಲ್ಲಿ ಮಾತ್ರವಲ್ಲ. ಬದಲಾಗಿ ಸರ್ವ ಮನುಕುಲದ ಹಿತ ಸಾಧನೆಯಲ್ಲಿ. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಗಾಗಿ ಇಸ್ಲಾಮ್‌ ನೀಡಿದ ಉತ್ಕೃಷ್ಟ ಮೌಲ್ಯಗಳು ಬದುಕನ್ನು ಪಾವನಗೊಳಿಸುತ್ತವೆ.

ಈದುಲ್ ಫಿತರ್‌ ಎಲ್ಲಾ ರೀತಿಯ ಮಾನವ ಪ್ರಯತ್ನಗಳ ಹೊರತಾಗಿಯೂ ಮತ್ತೂ ಮತ್ತೂ ಕಾಲಿಕ್ಕುತ್ತಿರುವ ಅಸ ಮಾನತೆ, ಜನಾಂಗ, ಭಾಷೆ, ಪ್ರದೇಶಗಳ ಹೆಸರಿನಲ್ಲಿ ನಡೆಯುವ ಹೋರಾಟ, ಇನ್ನೊಬ್ಬರ ಹಕ್ಕುಗಳ ದಮನ, ದಿನಗಳೆದಂತೆಲ್ಲಾ ಸಾಮಾಜಿಕ ಬದುಕಿನಲ್ಲಿ ಕಾಣುವ ನೈತಿಕ ಮೌಲ್ಯಗಳ ಅಪಮೌಲ್ಯ, ಇವೆಲ್ಲವುಗಳ ನಿವಾರಣೆಗಾಗಿ ಪ್ರವರ್ತಿಸುವ ಜನಾಂಗವಾಗಿ ಕಾರ್ಯಕ್ಷೇತ್ರಕ್ಕಿಳಿಯುವಂತೆ ನಮ್ಮನ್ನು ಒಳಿತಿನ ಕಡೆಗೆ ಆಹ್ವಾನಿಸುವ ಪಾವನ ಹಬ್ಬ.

ಈದುಲ್ಫಿತರ್‌ ಪ್ರಾರ್ಥನೆಯ ಹಬ್ಬ. ಅನೇಕ ರೀತಿಯ ಸಮಸ್ಯೆಗಳನ್ನೂ ಎಡರು ತೊಡರುಗಳನ್ನೂ ದೇಶವು ಎದುರಿ ಸುತ್ತಿರುವ ಈ ಸನ್ನಿವೇಶದಲ್ಲಿ, ಮನುಕುಲದ ಶಾಂತಿ, ಸುಭಿಕ್ಷೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುವುದು ಈ ಸಂದರ್ಭದಲ್ಲಿ ಅಗತ್ಯವಾಗಿದೆ. ಒಳಿತಿನ ಪಾಲನೆಯತ್ತ, ಸೌಹಾರ್ದತೆಯ ಸಾಧನೆಯತ್ತ ಪ್ರಯತ್ನಿಸುವುದಕ್ಕೆ ಹಬ್ಬಗಳು ಸುಸಂದರ್ಭಗಳು. ಈದುಲ್ ಫಿತರಿನ ಆಚರಣೆಯಿಂದ, ಅದರ ಹಿನ್ನೆಲೆಯಲ್ಲಿ ಅಡಕವಾಗಿರುವ ಆದರ್ಶಗಳನ್ನು ನಮ್ಮ ಬದುಕಿನ ಪರಿಪೂರ್ಣತೆಗೆ ಅಳವಡಿಸಿಕೊಳ್ಳಬೇಕು.

ಈದುಲ್ಫಿತರ್‌ ಬೋಧಿಸುವ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯನ್ನು ಬದುಕಿನಲ್ಲಿ ರೂಢಿಸಿಕೊಂಡು, ಮನು ಕುಲದ ಶಾಂತಿಗಾಗಿ ಸುಭಿಕ್ಷೆಗಾಗಿ, ನೆಮ್ಮದಿಗಾಗಿ ಅಲ್ಲಾಹನಲ್ಲಿ ಐಕ್ಯತೆಯಿಂದ, ಈ ಶುಭದಿನದಂದು ನಾವೆಲ್ಲಾ ಪ್ರಾರ್ಥಿಸೋಣ. ಈದುಲ್ ಫಿತರಿನ ಸಂದೇಶಗಳನ್ನು ನೆನಪಿಸಿಕೊಂಡು, ಮುಸ್ಲಿಮರಲ್ಲಿ ಮಾತ್ರವಲ್ಲ, ಮುಸ್ಲಿಮೇತರರಲ್ಲೂ ಸದಾ ಸೌಹಾರ್ದತೆಯಿಂದ, ಅನ್ಯೋನ್ಯತೆಯಿಂದ ವರ್ತಿಸೋಣ. ಮಾನವೀಯತೆಯಿಂದ, ಸೌಹಾರ್ದತೆಯಿಂದ ಬದುಕನ್ನು ತುಂಬಿ, ಸದಾ ಬದುಕನ್ನು ಸಾರ್ಥಕಗೊಳಿಸೋಣ, ಅರ್ಥ ಪೂರ್ಣವಾಗಿರಿಸೋಣ.

ಈದುಲ್ಫಿತರಿನಂದು ಈದ್‌ ಸೌಹಾರ್ದಕೂಟಗಳನ್ನು ಏರ್ಪಡಿಸಿ, ಇತರರನ್ನು ಆಹ್ವಾನಿಸುವುದರಿಂದ, ಮತೀಯ ಸಾಮರಸ್ಯವನ್ನು ಕಾಪಾಡಿ, ಸೌಹಾರ್ದತೆಯ ಸಹಬಾಳ್ವೆಯನ್ನು ಪೋಷಿಸಿ ಬೆಳೆಸಲು ಸಾಧ್ಯವಾಗುತ್ತದೆ. ಈದುಲ್ಫಿತರಿನ ಸಂದೇಶವು ನಮ್ಮ ದೇಶದಲ್ಲಿ ಅವ್ಯಾಹತವಾಗಿ ಹರಡಿಕೊಂಡ ಕೋಮುಗಲಭೆಗಳನ್ನು ಹೊಡೆದೋಡಿಸಿ, ಎಲ್ಲರೂ ಶಾಂತಿ, ಸಮಾನತೆ ಮತ್ತು ಸೌಹಾರ್ದತೆಯಿಂದ ಜೀವಿಸಲು ಉಪಯುಕ್ತವಾಗಿವೆ.

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸಂಪತ್ತನ್ನು ತನ್ನ ಮತ್ತು ತನ್ನವರ ಸುಖ ಭೋಗಗಳಿಗೆ ಮಾತ್ರ ಖರ್ಚು ಮಾಡದೆ, ಆ ಸೊತ್ತಿನಲ್ಲಿ ಅನಾಥರ, ವಿಧವೆಯರ ಮತ್ತು ಅಪೇಕ್ಷಿತರ ಹಕ್ಕು ಇದೆ ಎಂಬುದನ್ನು ಮನಗಾಣಬೇಕು. ತಾನು ಗಳಿಸಿದ ಎಲ್ಲಾ ಸಂಪತ್ತನ್ನೂ, ತನ್ನ ಮತ್ತು ತನ್ನವರ ಹಿತಾಸಕ್ತಿಗಾಗಿ ಮಾತ್ರ ವಿನಿಯೋಗಿಸುವುದನ್ನು ಇಸ್ಲಾಮ್‌ ನಿಷೇಧಿಸಿದೆ.

– ಕೆ.ಪಿ. ಅಬ್ದುಲ್‌ ಖಾದರ್‌ ಕುತ್ತೆತ್ತೂರು

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ಇದೇ ಕುಶಲಕರ್ಮಿಗಳ ದಿನ, ಕುಶಲ ಕಾರ್ಮಿಕರ ದಿನ, ಅಷ್ಟೇ ಏಕೆ ವಿಶ್ವದ ಎಲ್ಲ ಕಾರ್ಮಿಕರ ದಿನ ಆಗಬೇಕು. ಹೊರಗಿನಿಂದ ಎರವಲಾಗಿ ಬಂದ ಮೇ 1ರಂದು ಆಚರಿಸುವ ಕಾರ್ಮಿಕರ ದಿನ...

  • ಸಮಾಜದಲ್ಲಿ ಬಲವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕಲು ಉದಿಸಿದ ಹಲವಾರು ಸಮಾಜ ಸುಧಾರಕರಲ್ಲಿ ನಾರಾಯಣ ಗುರುಗಳು ಒಬ್ಬರು. ಸಮಾಜದಲ್ಲಿ ಆಳವಾಗಿ...

  • ಪಶ್ಚಿಮ ಬಂಗಾಳದ ರಾನಾಘಾಟ್‌ ರೈಲ್ವೇ ಸ್ಟೇಶನ್‌ನ ಪ್ಲಾಟ್‌ಫಾರಂಗಳಲ್ಲಿ ಹಾಡುತ್ತಿದ್ದ ಈಕೆ ಇಂದು ಕೋಟ್ಯಂತರ ಮಂದಿಯ ಮೊಬೈಲುಗಳಲ್ಲಿ ಗುನುಗುತ್ತಿದ್ದಾರೆ. ಅಷ್ಟೇ...

  • ಇಂದು ಮಾಜಿ ಮುಖ್ಯಮಂತ್ರಿ ದಿ|ರಾಮಕೃಷ್ಣ ಹೆಗಡೆ ಅವರ 94ನೇ ಜನ್ಮದಿನ ತನ್ನಿಮಿತ್ತ ಈ ಲೇಖನ 80ರ ದಶಕದಲ್ಲಿ ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಿದ್ದ ಮುತ್ಸದ್ದಿ...

  • ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಆನೆ, ವಿಷಕಾರಿ ಹಾವುಗಳಿಗಿಂತಲೂ ಅಪಾಯಕಾರಿಯಾದ ಪ್ರಾಣಿ ಸೊಳ್ಳೆ ಎನ್ನುವುದು ನಿಮಗೆ ತಿಳಿದಿರಲಿ. ಯಾವುದೇ ಪ್ರಾಣಿಗಳಿಗಿಂತಲೂ...

ಹೊಸ ಸೇರ್ಪಡೆ