ಜನಸಂಖ್ಯಾ ಸ್ಫೋಟ : ಸಮಸ್ಯೆ ಒಂದು, ದುಷ್ಪರಿಣಾಮ ಹಲವು

Team Udayavani, Jul 11, 2019, 5:00 AM IST

ಇಂದು ವಿಶ್ವ ಜನಸಂಖ್ಯಾ ದಿನ. ಭಾರತಕ್ಕೆ ಭವಿಷ್ಯವಿದೆ ಎಂಬುದನ್ನು ರುಜುವಾತು ಪಡಿಸಬೇಕಾದ ಹಲವಾರು ವಾಸ್ತವಾಂಶಗಳಲ್ಲಿ ಜನಸಂಖ್ಯೆಯ ಸ್ಫೋಟಕ್ಕೆ ಕಡಿವಾಣ ಹಾಕುವುದು ಮಹತ್ವದ ವಿಚಾರವೆಂದರೆ ತಪ್ಪುಂಟೇ? ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ ವಿಶ್ವದ ಜನಸಂಖ್ಯೆಯಲ್ಲಿ ಶೇ.17.74 ಭಾಗವನ್ನು ಹೊಂದಿರುವ ಭಾರತವು ಜಗತ್ತಿನ ಎರಡನೇ ಅತಿ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿದೆ. ಭೌಗೋಳಿಕ ವಿಸ್ತೀರ್ಣದಲ್ಲಿ ಭಾರತಕ್ಕೆ ಏಳನೇ ಸ್ಥಾನ. ಆದರೆ ಜನಸಂಖ್ಯಾಭಿವೃದ್ಧಿಯಲ್ಲಿ ಮೊದಲನೇ ಸ್ಥಾನ.

2024ರ ವೇಳೆಗೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಲಿದೆ ಎಂದು ಅಂದಾಜಿಸಲಾಗಿದೆ. 2030ರ ವೇಳೆಗೆ 150 ಕೋಟಿಗೂ ಹೆಚ್ಚು ಜನರಿಗೆ ನೆಲೆಯಾಗುವ ಇತಿಹಾಸದ ಮೊದಲ ರಾಜಕೀಯ ಘಟಕವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಜನಸಂಖ್ಯೆ ಏರುತ್ತಲೇ ಹೋಗು ತ್ತದೆ ಅನ್ನುವುದಕ್ಕಿಂತಲೂ ಸ್ಫೋಟಗೊಳ್ಳುತ್ತಿದೆ ಎಂದರೆ ಸಮರ್ಪಕವಾದೀತು. ಜನಸಂಖ್ಯೆ ಸ್ಫೋಟವೆಂಬ ಸಮಸ್ಯೆ ಒಂದು, ಆದರೆ ಅದರ ದುಷ್ಪರಿಣಾಮಗಳು ಹಲವು. ಮಾನವ ಸಂಪನ್ಮೂಲ ಸಮರ್ಪಕವಾಗಿ ಸದ್ಬಳಕೆಯಾಗದಿರುವುದು ದುರದೃಷ್ಟಕರ.

ಜನಸಂಖ್ಯೆ ಇಂದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ಜನಸಂಖ್ಯೆ ಮಿತಿ ಮೀರುತ್ತಿದ್ದರೂ ಜನರು ವಾಸಿಸುವ ಭೂಪ್ರದೇಶ ಮೊದಲಿನಷ್ಟೇ ಇದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ವಾಸಿಸಲು ನೆಲ, ಬದುಕಲು ಜಲ, ಆಹಾರ, ಉದ್ಯೋಗ ಮರೀಚಿಕೆಯಾಗುತ್ತಿದೆ. ಇದರಿಂದಾಗಿ ಆರ್ಥಿಕ ಪ್ರಗತಿ ಕುಂಠಿತಗೊಳ್ಳುತ್ತಿದೆ. ಜನಸಂಖ್ಯೆಯ ಹೆಚ್ಚಳ ನೆಲ, ಜಲ, ವಾಯು ಮಾಲಿನ್ಯಕ್ಕೆ ಕಾರಣವಾಗುತ್ತದೆ. ಭೂಮಿಯ ಉಷ್ಣಾಂಶವು ಏರುತ್ತದೆ. ಭಯೋತ್ಪಾದಕರ ಸೃಷ್ಟಿಯಾಗುತ್ತದೆ. ಉತ್ಪನ್ನಕ್ಕಿಂತ ಜನಸಂಖ್ಯೆ ಮಿತಿ ಮೀರಿದರೆ ಆಮದಿಗೆ ಮಾರು ಹೋಗಬೇಕಾಗುತ್ತದೆ. ಆಹಾರ, ಬಟ್ಟೆ, ಶಿಕ್ಷಣ, ಆರೋಗ್ಯ ಎಲ್ಲವನ್ನೂ ನಿಭಾಯಿಸುವುದು ಅತ್ಯಂತ ಕಠಿಣ ಸವಾಲಾಗುತ್ತದೆ. ಹಳ್ಳಿಗಳಲ್ಲಿ ಸಂಪಾದನೆ ಇಲ್ಲದೆ ನಗರಗಳಿಗೆ ಉದ್ಯೋಗಕ್ಕೆ ಜನ ಬಂದಿಳಿದಾಗ ನಗರದ ಜನಸಂಖ್ಯೆ ಮಿತಿ ಮೀರಿ ಕೊಳಚೆ ಪ್ರದೇಶಗಳು ಹುಟ್ಟಿಕೊಳ್ಳುತ್ತವೆ. ಜನಸಂಖ್ಯೆ ಸ್ಫೋಟ ಯಾವುದೇ ರೀತಿಯಲ್ಲಿ ಅಪೇಕ್ಷಣೀಯವಲ್ಲ, ಆರೋಗ್ಯದಾಯಕವಲ್ಲ, ಪ್ರಗತಿಗೂ ಪ್ರೇರಕವಲ್ಲ. ಆದರೆ ಮಾನವ ಸಂಪನ್ಮೂಲವನ್ನು ಧನಾತ್ಮಕವಾಗಿ ಪರಿವರ್ತಿಸಿಕೊಂಡರೆ ಹಲವಾರು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು.

ವಿಶ್ವಸಂಸ್ಥೆಯ ಸಮೀಕ್ಷೆಯ ಪ್ರಕಾರ ಪ್ರಸಕ್ತ ಭಾರತದ ಜನಸಂಖ್ಯೆ 136.88 ಕೋಟಿ. ಜನಸಂಖ್ಯೆಯಲ್ಲಿ ಶೇ. 33.6 ರಷ್ಟು ನಗರವಾಸಿಗಳು. ಶೇ.65 ಜನ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಇದು ಚೀನಾದಲ್ಲಿ 37 ಮತ್ತು ಜಪಾನ್‌ನಲ್ಲಿ 48 ಆಗಿರುತ್ತದೆ. ನಮ್ಮದು ತರುಣರ ದೇಶ. ಎಲ್ಲಾ ಸಂಪತ್ತಿಗಿಂತಲೂ ಶ್ರೇಷ್ಠ ಸಂಪತ್ತು ಮಾನವ ಸಂಪನ್ಮೂಲ. ಪ್ರಪಂಚದ ವಿಪುಲ ಸಂಪತ್ತು ಮಾನವನ ಶರೀರದಲ್ಲಿ ಅಡಗಿದೆ. ಆದರೆ ಇಚ್ಛಾಶಕ್ತಿ, ದುಡಿಯುವ ಮನಸ್ಸು, ಶಿಸ್ತು, ದುಡಿಮೆಯ ಗೌರವ ಮತ್ತು ಪ್ರಾಮಾಣಿಕತೆಯ ಕೊರತೆ ನಮ್ಮನ್ನು ಕಾಡುವ ದೊಡ್ಡ ಸಮಸ್ಯೆ.

ಬಡತನವೂ ಒಂದು ರೀತಿಯಲ್ಲಿ ಅತಿ ಸಂತಾನಕ್ಕೆ ಕಾರಣ ಆಗಿದೆ. ಆದರೆ ಬಡತನವೇ ಮೂಲ ಕಾರಣವಲ್ಲ. ಅವರಲ್ಲಿರುವ ಅನಕ್ಷರತೆ ಮತ್ತು ಮೂಢನಂಬಿಕೆಗಳು ಕಾರಣ. ದೇಶದಲ್ಲಿ ಆಸುಪಾಸು ಶೇ.20ರಷ್ಟು ಅನಕ್ಷರತೆ ಇದೆ. ವೈಜ್ಞಾನಿಕ ಹಾಗೂ ಸಾಮಾನ್ಯಜ್ಞಾನವೂ ಹಳ್ಳಿಗಳೇ ಹೆಚ್ಚಿರುವ ಭಾರತೀಯರಲ್ಲಿ ಕಡಿಮೆಯಿದೆ. ಬಡವರಲ್ಲಿ ದುಡಿಯುವ ಛಲ, ಜೀವನದಲ್ಲಿ ಮೇಲೇರುವ ಆಕಾಂಕ್ಷೆ ಪ್ರಬಲವಾಗಿ ಬೇರೂರುವಂತೆ ಮಾಡು ವುದು ಅನಿವಾರ್ಯ. ಜನನ ನಿಯಂತ್ರಣ ಕಾರ್ಯಕ್ರಮವನ್ನು ಯಶಸ್ವಿಗೊಳಿಸದೆ ಹೋದರೆ ವಿವಿಧ ರೀತಿಯ ಸಮಸ್ಯೆಗಳು ಹೆಚ್ಚಾಗಿ ಜೀವನವೇ ದುಃಖಮಯ ಎನಿಸುತ್ತದೆ.

ಇದೀಗ ಗಾಂಧೀಜಿಯವರ 150ನೆಯ ಜನ್ಮಶತಾಬ್ಧಿಯನ್ನು ಆಚರಿಸುವ ಸಂದರ್ಭದಲ್ಲಿ ಜನಸಂಖ್ಯೆಯ ಬಗ್ಗೆ ಗಾಂಧೀಜಿಯವರ ಚಿಂತನೆ ಸಾರ್ವಕಾಲಿಕ ಸತ್ಯ. ಏನೆಂದರೆ ಭಾರತದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸಾಕಷ್ಟು ಪ್ರಮಾಣದ ವೃತ್ತಿ, ಉದ್ಯೋಗಗಳಿವೆ. ಪ್ರತಿಯೊಬ್ಬರಿಗೂ ತಮ್ಮ ಜೀವನಕ್ಕೆ ಬೇಕಾಗುವಷ್ಟು ಗಳಿಸುವ ಅರ್ಹತೆ ಮತ್ತು ಸಾಮರ್ಥ್ಯವಿದೆ. ಅದನ್ನು ಸದ್ಬಳಕೆ ಮಾಡಿಕೊಂಡರೆ ತೃಪ್ತಿಕರ ಜೀವನಕ್ಕೆ ಕೊರತೆಯಿಲ್ಲ ಎಂದಿದ್ದರು. ಇವತ್ತಿಗೂ ನಮ್ಮಲ್ಲಿ ದುಡಿಯುವವರ ಮತ್ತು ತಿನ್ನುವವರ ಅನುಪಾತ ತಾಳೆ ಆಗುತ್ತಿಲ್ಲ.

ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಅತಿ ಹೆಚ್ಚು ಜನಭರಿತ ದೇಶ, ಅತ್ಯಂತ ಅಭಿವೃದ್ಧಿಶೀಲ ದೇಶವೂ ಹೌದು ಎಂಬುದನ್ನು ನಾವು ಸಾಬೀತುಪಡಿಸಬೇಕು. ಮಾನವ ಸಂಪನ್ಮೂಲ ಸದ್ಬಳಕೆ, ಉತ್ಪಾದನಾ ಸಾಮರ್ಥ್ಯವನ್ನು ವೃದ್ಧಿಗೊಳಿಸಿ ಪ್ರಕೃತಿಯ ಪೋಷಣೆ, ರಕ್ಷಣೆ ಮತ್ತು ಕಾಳಜಿಯಿಂದ ಜನಸಂಖ್ಯಾ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು.

– ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ದಾಸ ಸಾಹಿತ್ಯದಲ್ಲಿ ಹೊಸ ಭಕ್ತಿ ಪರಂಪರೆಯೊಂದನ್ನು ಸೃಷ್ಟಿಸುವಲ್ಲಿ ಹಾಗೂ ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ದಾಸ ಶ್ರೇಷ್ಠ ಕನಕದಾಸರ ಕೊಡುಗೆ ಅಪಾರ....

  • ಅಮೆರಿಕದ ರಾಸಾಯನ ತಂತ್ರಜ್ಞ ಮತ್ತು ಶ್ರೀಮಂತ ಉದ್ಯಮಿ ಜಾನ್‌ ಮೋಟಿÉ ಮೋರ್‌ಹೆಡ್‌ ಹೆಸರಾಂತ ಖಗೋಳ ವಿಜ್ಞಾನಿ ಹಾರ್ಲೋ ಶಾರ್ಪ್‌ಲಿ ಅವರನ್ನು ಭೇಟಿ ಮಾಡುತ್ತಾರೆ....

  • ಕನ್ನಡ ಪರಿಸರ ಎಂದಾಗ ಕೇವಲ ಕನ್ನಡ ಮಾತಾಡುವ ಒಂದು ವಾತಾವರಣ ಇರುವ ಜಾಗ ಎಂದು ಗ್ರಹಿಸುವುದೇ ದೊಡ್ಡ ತಪ್ಪಾಗುತ್ತದೆ. ಕನ್ನಡ ಪರಿಸರ ಭೌತಿಕವಾದ, ಆರ್ಥಿಕವಾದ, ಸಾಂಸ್ಕೃತಿಕವಾದ...

  • ನಾವು ಕಳಿಸುವ ತನಕ ಬೇರೆ ಯಾರೂ ಅಂತರಜಾಲದಲ್ಲಿ ಸಂದೇಶಗಳನ್ನೇ ಕಳಿಸುತ್ತಿರಲಿಲ್ಲವೇ?ಖಂಡಿತಾ ಕಳಿಸುತ್ತಿದ್ದರು. ನಿನ್ನೆ ಮೊನ್ನೆಯ ಮಾತೆಲ್ಲ ಏಕೆ, ಇವತ್ತಿಗೆ...

  • "ಸ್ವಾತಿ ಮುತ್ತಿನ ಮಳೆ ಹನಿಯೆ| ಮೆಲ್ಲ ಮೆಲ್ಲನೆ ಧರೆಗಿಳಿಯೆ||...' ಸಿನೇಮಾ ಹಾಡು ಈಗಲೂ ಗುನುಗುನಿಸುತ್ತಿರಬಹುದು, ಕೆ(ಹ)ಲವರ ಮನದಲ್ಲಿಯಾದರೂ... ಅ. 24ರ ಸಂಜೆಯಿಂದ ಸ್ವಾತಿ...

ಹೊಸ ಸೇರ್ಪಡೆ