ನಗರಗಳನ್ನು ಸೋಲಿಸದಿರೋಣ, ಬದಲಾಗಿ ಗೆಲ್ಲಿಸೋಣ


Team Udayavani, Jul 14, 2018, 6:00 AM IST

m-1.jpg

ನಗರಗಳನ್ನು ಸೋಲಿಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಗೆಲ್ಲಿಸುವವರು ಕಡಿಮೆ. ನಾವೆಲ್ಲಾ ಸೇರಿ ಸಣ್ಣದೊಂದು ಪ್ರಯತ್ನ ಮಾಡಿದರೆ ಪ್ರತಿ ನಗರಗಳೂ ಅವ್ಯವಸ್ಥೆಯ ವಿರುದ್ಧ ಗೆಲ್ಲುತ್ತವೆ. ಅದು ಸಾಧ್ಯವಾಗಬೇಕೆಂಬುದು ಎಲ್ಲರ ಆಶಯ.

ನಮ್ಮ ನಗರಗಳ ಆರೋಗ್ಯದ ಕುರಿತು ಬಹಳಷ್ಟು ಯೋಚಿಸಿದ್ದೇವೆ, ಯೋಚಿಸುತ್ತಿರುತ್ತೇವೆ. ಆದರೆ ಕಾರ್ಯೋನ್ಮುಖವಾಗುವುದು ಎಷ್ಟರಮಟ್ಟಿಗೆ ಎಂದು ಲೆಕ್ಕ ಹಾಕುವಾಗಲೆಲ್ಲ ಸೋತಿದ್ದೇವೆ. ಅಂದಾಜಿನ ಲೆಕ್ಕದಲ್ಲೇ ಅಳೆದು ಸುರಿದೂ ಮಾತನಾಡಿದರೂ ಕೊನೆಗೆ ಫ‌ಲಿತಾಂಶದ ಲೆಕ್ಕದಲ್ಲಿ ಹೇಳಲು ಹೊರಟಾಗ ಸಿಗುವುದು ದೊಡ್ಡ ಸೊನ್ನೆಯ ಹೊರತು ಬೇರೇನೂ ಅಲ್ಲ. ಇದು ಈ ಹೊತ್ತಿನ ವರ್ತಮಾನ. 

ನಮ್ಮ ದೇಶದ ಯಾವುದೇ ನಗರಗಳನ್ನು ಆಯ್ಕೆ ಮಾಡಿಕೊಂಡು ನೋಡಿ. ಅಲ್ಲಿನ ವ್ಯವಸ್ಥೆಯಲ್ಲಿ ಅವ್ಯವಸ್ಥೆಯ ಭಾಗವೇ ಹೆಚ್ಚಾಗಿ ಕಣ್ಣಿಗೆ ಕಟ್ಟುತ್ತದೆ. ಮುಂಬಯಿಯನ್ನು ಒಂದು ಕ್ಷಣ ಕಣ್ಣೆದುರು ತಂದುಕೊಳ್ಳಿ. ಜನರಿಂದ ತುಂಬಿದ ರೈಲುಗಳು, ಎಲ್ಲೆಲ್ಲೂ ವಾಹನಗಳು, ಟ್ರಾಫಿಕ್‌ ಜಾಮ್‌, ಮಳೆಗಾಲದಲ್ಲಂತೂ ಹೇಳುವಂತಿಲ್ಲ. ಒಂದು ತಿಂಗಳಿಂದ ಮೂರು ದಿನಕ್ಕೊಮ್ಮೆ ಎನ್ನುವಂತೆ ಲೋಕಲ್‌ ರೈಲು ಸೇವೆ ಸ್ತಬ್ಧಗೊಳ್ಳುತ್ತಿದೆ. ಇದರೊಂದಿಗೆ ಇನ್ನೂ ಎಷ್ಟು ಬೇಕಾದರೂ ಅಪಸವ್ಯಗಳು ನಮಗೆ ಕಾಣಬಹುದು. 

ಇದೇ ಮಾತು ದಿಲ್ಲಿಗೂ ಅನ್ವಯಿಸುತ್ತದೆಂದುಕೊಳ್ಳಿ. ಅಲ್ಲಿನ ಟ್ರಾಫಿಕ್‌ ಜಾಮ್‌, ಕಲುಷಿತ ಹೊಗೆ-ವಾತಾವರಣ, ಆಯಸ್ಸು ಕಡಿಮೆಯಾದೀತೆಂಬ ಆತಂಕದಲ್ಲೂ ಅನಿವಾರ್ಯತೆಗೆ ಒಗ್ಗಿಕೊಂಡ ಜನರು…ಒಂದು ಎರಡು ಬಗೆಯಲ್ಲ ; ಹತ್ತಾರು ಬಗೆಯ ನೋಟಗಳು ನಮಗೆ ನಗರಗಳಲ್ಲಿ ಕಾಣಸಿಗುತ್ತವೆ. ಇನ್ನು ಬೆಂಗಳೂರಿಗೆ ಒಂದು ಕ್ಷಣ ಬಂದರೂ ಬೇರೆ ಚಿತ್ರಣ ತೋರದು. ಸುಮಾರು 15 ಕಿ.ಮೀ ಕ್ರಮಿಸಲಿಕ್ಕೆ ಕಡಿಮೆ ಎಂದರೂ 90 ನಿಮಿಷಗಳನ್ನು ತೆಗೆದುಕೊಳ್ಳಬೇಕಾದ ಸ್ಥಿತಿ ಇದೆ. ಇದು ದ್ವಿಚಕ್ರವಾಹನಗಳ ಸವಾರರದ್ದು ; ಕಾರುಗಳ ಕಥೆ ಕೇಳಿದರಂತೂ ಇನ್ನೂ ವಿಚಿತ್ರ. ಉಳಿದಂತೆ ಮಳೆ ಬಂದರೆ ಎಲ್ಲ ನಗರಗಳದ್ದೂ ಮುಳುಗುವ ಕಥೆ. ದಿಲ್ಲಿಯೂ ಅಷ್ಟೇ, ಕೋಲ್ಕತ್ತಾದಲ್ಲೂ ಅಷ್ಟೇ. ಹೀಗೆ ಹತ್ತಾರು ರೀತಿ ಪಟ್ಟಿ ಮಾಡುತ್ತಾ ಹೋಗಬಹುದು. 

ಹಾಗಾದರೂ ನಗರಳೇಕೆ ತುಂಬಿವೆ?
ಇಷ್ಟೆಲ್ಲ ರಗಳೆಗಳಿದ್ದರೂ ನಗರಗಳೇಕೆ ತುಂಬಿ ತುಳುಕುತ್ತಿವೆ ಎಂದು ಪ್ರಶ್ನೆ ಹಾಕಿಕೊಂಡರೆ ಸಿಗುವ ಉತ್ತರವೇ ಬೇರೆ. ಸುಮಾರು 60 ವರ್ಷವನ್ನು ಬೆಂಗಳೂರಿನಲ್ಲಿ ಕಳೆದಿದ್ದ ಪರಿಚಯಸ್ಥ ಎಂಜಿನಿಯರ್‌ ಒಬ್ಬರಲ್ಲಿ ಇಂಥದ್ದೇ ಪ್ರಶ್ನೆಯೊಂದು ಕೇಳಿದ್ದೆ-“ನೀವು ಸಿಟಿ ಹಾಳಾಗಿದೆ ಎನ್ನುತ್ತೀರಿ. ಗಾಳಿಯೂ ಕಲುಷಿತವಾಗಿದೆ ಎನ್ನುತ್ತೀರಿ. ಆದರೂ ಏಕೆ ಇಲ್ಲಿದ್ದೀರಿ?’ಎಂದು. ಅದಕ್ಕೆ ಅವರು ಬಹಳ ಖುಷಿಯಿಂದ, ಅವೆಲ್ಲವೂ ಇದೆ. ಅದರೊಂದಿಗೆ ಇಲ್ಲಿ ನಮ್ಮ ಪ್ರಾಣವಿದೆ. ನಾವು ಇಲ್ಲಿ ಬೆಳೆದದ್ದು, ಗಳಿಸಿದ್ದು. ನಮ್ಮ ಬದುಕೇ ಇಲ್ಲಿದೆ. ಇಲ್ಲಿಂದ ಬೇರ್ಪಡಿಸಿಕೊಂಡು ಹೋಗುವುದು ಕಷ್ಟ. ಬದುಕೆಂದರೆ ಬೇಕೆಂದಲ್ಲಿಗೆ ನಮ್ಮ ಸಂಬಂಧಗಳನ್ನು ಕಿತ್ತುಕೊಂಡು ಅಂಟಿಸಿಕೊಳ್ಳುತ್ತಾ ಕುಳಿತುಕೊಳ್ಳುವುದಲ್ಲ. ನಂಟು ಇರುವಲ್ಲೇ ಅಂಟಿಕೊಂಡು ಕುಳಿತುಕೊಳ್ಳುವುದು. ಅದೇ ಬದುಕು. ಇವಿಷ್ಟೂ ಮಾತು ಅವರಿಂದ ಬಂದಾಗ ನಗರಗಳನ್ನು ಜನರೇಕೆ ಬಿಟ್ಟು ಬರುವುದಿಲ್ಲ ಎಂಬುದು ಅರ್ಥವಾಗಿತ್ತು. 

ನಿಜ, ಎಲ್ಲ ಕಷ್ಟ ಕೋಟಲೆಗಳ ಮಧ್ಯೆ ನಾವಿರುವ ಜಾಗದಲ್ಲಿ ಎಂಥಧ್ದೋ ಒಂದು ಬಂಧ ನಮ್ಮನ್ನು ಕಟ್ಟಿ ಹಾಕಿರುತ್ತದೆ. ಅದನ್ನು ಮಣ್ಣಿನ ಮೇಲಿನ ಪ್ರೇಮ ಎಂದಾದರೂ ಎಂದುಕೊಳ್ಳಿ, ಊರಿನ ಬಗೆಗಿನ ಮೋಹ ಎಂದಾದರೂ ಅಂದುಕೊಳ್ಳಿ. ಯಾರೂ ಬೇಸರಗೊಳ್ಳುವುದಿಲ್ಲ. ನಮ್ನನ್ನು ಮುನ್ನಡೆಸುವಂಥ ಎನರ್ಜಿಯೊಂದು ಸದಾ ಕೆಲಸ ಮಾಡುತ್ತಿರುತ್ತದೆ ಎಂಬುದು ಸದಾ ಸುಳ್ಳಲ್ಲ.

ಹೀಗೊಂದು ಪ್ರಯೋಗ
ವಾಸ್ತವ ಹೀಗಿರುವಾಗ ನಾವು ಕೆಲವು ಕೆಲಸಗಳನ್ನಾದರೂ ನಮ್ಮ ನಗರಕ್ಕೆಂದು ಮಾಡಬಹುದೇ? ಈ ಪ್ರಶ್ನೆಯನ್ನು ಸಣ್ಣದಾಗಿ ನಮ್ಮೊಳಗೆ ಕೇಳಿಕೊಳ್ಳೋಣ. ಇಡೀ ನಗರದ ಕುರಿತು ನಾನು ಮಾತನಾಡುತ್ತಿಲ್ಲ. ಬರೀ ನಮ್ಮ ವಾರ್ಡ್‌ನ ನಾವಿರುವ ರಸ್ತೆಯ ಕುರಿತೇ ಯೋಚಿಸೋಣ. ನಮ್ಮ ಗಲ್ಲಿಯಲ್ಲಿ ಸುಮಾರು 40 ಮನೆಗಳಿವೆ ಎಂದುಕೊಳ್ಳೋಣ. ಅವುಗಳಲ್ಲಿ 120 ಮಂದಿ ಬದುಕುತ್ತಿರಬಹುದು. ಆ ಪೈಕಿ ಕೇವಲ 40 ಮಂದಿ ಸೇರಿಕೊಂಡರೂ ದೊಡ್ಡ ಚಮತ್ಕಾರವನ್ನು ಪ್ರದರ್ಶಿಸಬಹುದು. 

ಇನ್ನೇನೂ ಬೇಕಾಗಿಲ್ಲ. ವಾರದಲ್ಲಿ ಒಂದು ದಿನ 40 ಜನರ ತಂಡ ಬೆಳಗ್ಗೆ ಎದ್ದು ನಮ್ಮ ಗಲ್ಲಿಯ ಅವ್ಯವಸ್ಥೆಗಳನ್ನು ಪಟ್ಟಿ ಮಾಡಬೇಕು. ಬಳಿಕ ಒಂದು ಸಭೆ ನಡೆಸಿ, ಅವ್ಯವಸ್ಥೆಗಳನ್ನು ವಿಂಗಡಿಸಿಕೊಳ್ಳಬೇಕು. 40 ಜನರ ತಂಡವನ್ನು 4 ಮಂದಿಯಂತೆ ಹತ್ತು ತಂಡಗಳನ್ನಾಗಿ ಮಾಡಿಕೊಳ್ಳಬೇಕು. ಆಗ ಹತ್ತು ತಂಡಕ್ಕೆ ಹತ್ತು ಟಾಸ್ಕ್ ಸಿಗುತ್ತದೆ. ಅದರಲ್ಲಿ ರಸ್ತೆಯಲ್ಲಿರುವ ಹೊಂಡ ಸರಿಪಡಿಸುವ ಸಂಗತಿ ಇರಬಹುದು, ನಲ್ಲಿಗಳು ಒಡೆದು ಹೋಗಿದ್ದರೆ ಸರಿ ಪಡಿಸುವಂಥದ್ದೂ ಇರಬಹುದು, ಯಾವುದಾದರೂ ಗೋಡೆಗಳು ಅಂದಗೆಟ್ಟಿದ್ದರೆ ಅದನ್ನು ಚೆಂದಗೊಳಿಸುವುದೂ ಇರಬಹುದು. ಇಂಥ ಹತ್ತು ಟಾಸ್ಕ್ಗಳನ್ನು ಹತ್ತು ತಂಡವು ಸಂಬಂಧಪಟ್ಟ ಇಲಾಖೆ, ವಾರ್ಡ್‌ ಸದಸ್ಯರನ್ನು ಹಿಡಿದುಕೊಂಡು ಮಾಡಿಸಲು ಉಧ್ಯುಕ್ತರಾಗಬೇಕು. ಒಂದು ತಿಂಗಳಲ್ಲಿ ಒಂದು ತಂಡದ ಟಾಸ್ಕ್ ಮುಗಿಯಬಹುದೆಂದುಕೊಳ್ಳೋಣ. ಆಗ ಆ ತಂಡದ ಸದಸ್ಯರು ಉಳಿದ ತಂಡದೊಳಗೆ ವಿಲೀನಗೊಂಡು ಸಹಕರಿಸಬೇಕು. ಹೀಗೆ ಪರಸ್ಪರ ಸಹಕರಿಸುತ್ತಾ ಹೋದರೆ ಒಂದೆರಡು ತಿಂಗಳಲ್ಲಿ ಮೂಲ ಸಮಸ್ಯೆಗಳು ಬಗೆಹರಿಯುತ್ತವೆ. ನಮ್ಮ ಗಲ್ಲಿ ಸುಂದರಗೊಳ್ಳುತ್ತದೆ. ಇದು ನಮ್ಮ ಕಾಳಜಿಯಿಂದಾಗುವ ಕೆಲಸ. ನಮ್ಮ ನಗರಗಳು ಸುಂದರವಾಗಿರಬೇಕೆಂದರೆ ಇಂಥದೊಂದು ಕಾಳಜಿಯುಕ್ತ ನಡವಳಿಕೆ ಖಂಡಿತಾ ಬೇಕು. 

ಅದಕ್ಕಿಂತ ದೊಡ್ಡದೇನು ಗೊತ್ತೇ?
ಈ ಭೌತಿಕ ಸಮಸ್ಯೆಗಳು ನಮ್ಮ ಪ್ರಯತ್ನದ ಎದುರು ಕರಗಿ ಹೋಗಬಹುದು. ಆದರೆ ನಮ್ಮೊಳಗೆ ಈ ಸಂಘಟನೆ ಬೆಸೆಯುವ ಬಂಧ ಇನ್ನೂ ನೂರಾರು ಸವಾಲುಗಳನ್ನು ಎದುರಿಸುವಂಥ ಸಾಮರ್ಥಯ ಹಾಗೂ ಆತ್ಮವಿಶ್ವಾಸವನ್ನು ನಮ್ಮೊಳಗೆ ತುಂಬಿರುತ್ತದೆ. ಅಂದಿನವರೆಗೂ ನಮ್ಮನ್ನು ತಲೆ ಎತ್ತಿಯೋ ನೋಡದ ವಾರ್ಡ್‌ ಸದಸ್ಯ ಇಂದು ನಿಮ್ಮ ಮಾತು ಕೇಳಲು ಆರಂಭಿಸುತ್ತಾನೆ. ಏನಾದರೂ ಸಮಸ್ಯೆ ಇದೆ ಎಂದು ಹೇಳಿದರೆ ತತ್‌ಕ್ಷಣ ಕೇಳಬಲ್ಲ. 

ಇಷ್ಟಕ್ಕೇ ಈ ಅಚ್ಚರಿಯ ಕಥೆ ಮುಗಿಯುವುದಿಲ್ಲ. ನಾವೆಲ್ಲಾ ಕುಟುಂಬದಂತಾಗಿ ಬಿಡುತ್ತೇವೆ. ಪರಸ್ಪರ ಕಷ್ಟ-ಸುಖ ಹಂಚಿಕೊಳ್ಳಲು ಮುಂದಾಗುತ್ತೇವೆ. ಸಂಬಂಧವೆಂಬ ಬೆಸುಗೆಯಿಂದ ಒಂದಾಗುತ್ತೇವೆ. ಅಲ್ಲಿಯವರೆಗಿದ್ದ ಬದುಕೇ ಬೇರೆ. ಈಗಿನ ಬದುಕೇ ಬೇರೆ. ಈ ಬದುಕು ರಸದ ಬದುಕು, ಆಗಿನದ್ದು ರಸಹೀನದ್ದು ಎಂದೇ ಎನಿಸುತ್ತದೆ.  ನಗರದಲ್ಲಿ ಬರೀ ಕಟ್ಟಡಗಳು, ಯಂತ್ರಗಳ ಮಧ್ಯೆ ನಲುಗಿ ಹೋಗಿರುವ ನಮಗೆ ಭಾವನೆಗಳ ಪರಿಮಳ ಮೂಗಿಗೆ ಅಡರಿದರೆ ಸಾಕು, ಕಣ್ಣರಳಿಸಿಕೊಂಡು ಹೋಗುತ್ತೇವೆ. ಇಂದು ಒಂದು ಬಗೆಯಲ್ಲಿ ಕಾಫಿ ಪ್ರಿಯ ಗಲ್ಲಿಯಲ್ಲಿ ನಡೆದು ಹೋಗುವಾಗ ಎಲ್ಲೋ ಹುರಿಯುವ ಕಾಫಿ ಬೀಜದ ಪರಿಮಳದ ಜಾಡು ಹಿಡಿದು ಅಂಗಡಿ ಇದ್ದಲ್ಲಿಗೆ ನಿಲ್ಲುವ ಪರಿ. ಅದೇ ಭಾವನೆ. ಇದಕ್ಕೆ ಮತ್ತೂಬ್ಬ ಹಿರಿಯರ ವ್ಯಾಖ್ಯಾನ ಉಲ್ಲೇಖೀಸುವುದು ಸೂಕ್ತವೆನಿಸುತ್ತದೆ. 

ನಮ್ಮ ದೇಹ ಎಂಬುದು ಒಂದು ಯಂತ್ರ. ಅದರೊಳಗೆ ಭಾವನೆಯೆಂಬ ರಸ ಸೇರಿದರೆ ಮಾತ್ರ ಯಂತ್ರ ಗುಣಾತ್ಮಕವಾಗಿ ತಿರುಗಬಲ್ಲದು, ಇಲ್ಲದಿದ್ದರೆ ಸುಮ್ಮನೆ ತಿರುಗುತ್ತಿರುತ್ತದೆ. ಕಬ್ಬಿನಜಲ್ಲೆ ಕೆಳಗಿರುವುದಿಲ್ಲ ; ಹಾಗಾಗಿ ಸವಿಯಾದ ಕಬ್ಬಿನ ರಸ ಸಿಗುವುದಿಲ್ಲ. ನಗರದಲ್ಲಿನ ಇಂಥದೊಂದು ಸಂಘಟನೆ ನಮ್ಮೊಳಗೆ ಹುಟ್ಟು ಹಾಕುವುದು ಭಾವನೆಯ ರಸ. ಅದು ಸಾಧ್ಯವಾದರೆ ಮಾತ್ರ ನಗರಗಳ ಆರೋಗ್ಯವನ್ನು ಸುಸ್ಥಿತಿಯಲ್ಲಿಡಬಹುದು. 

ಇನ್ನು ಹೊಸ ಚಿತ್ರಗಳು
ಇಂಥದೊಂದು ರಚನಾತ್ಮಕ ಪ್ರಯತ್ನ ಪ್ರತಿ ನಾಗರಿಕರಿಂದ ಸಾಧ್ಯವಾದರೆ, ನಮ್ಮ ಕಣ್ಣೆದುರು ನಿಲ್ಲುವ ಚಿತ್ರಗಳು ಬದಲಾಗುತ್ತವೆ. ಎಲ್ಲ ಅಪಸವ್ಯಗಳ ಮಧ್ಯೆ ನಾವು ಬದುಕನ್ನು ಕಾಣುತ್ತಾ ಹೋಗುತ್ತೇವೆ, ಅನುಭವಿಸುತ್ತಾ ಹೋಗುತ್ತೇವೆ. ಅದೇ ಬದುಕು. ನಮ್ಮ ನಗರಗಳನ್ನು ಸೋಲಿಸುವ ಬದಲು ಗೆಲ್ಲಿಸೋಣ..ಅದೇ ನಮ್ಮ ಮೊದಲ ಆದ್ಯತೆಯಾಗಲಿ.

ಟಾಪ್ ನ್ಯೂಸ್

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

Scrutiny of complaint against Modi: Election Commission

Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕೆ ಮುಸ್ಲಿಮರು: ಆಯೋಗ ಆಕ್ಷೇಪ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.