ನಗರಗಳಲ್ಲಿ ಮಳೆಗಾಲ ಗಡಗಡ ನಡುಗುವ ಕಾಲ! 

Team Udayavani, Jun 9, 2018, 6:00 AM IST

ಮಳೆಯ ಮಾತು ಆರಂಭವಾಗಿದೆ. ನಗರಗಳಲ್ಲಿ ಸಣ್ಣದೊಂದು ಭಯ ಶುರುವಾಗಿದೆ. ಎಲ್ಲಿ ಮಳೆಯಲ್ಲಿ ಮುಳುಗಿಬಿಡುತ್ತೇವೆಯೋ ಎಂಬ ಆತಂಕ. ಇದರ ಮಧ್ಯೆಯೇ ಬದುಕಬೇಕಾದ ಅನಿವಾರ್ಯ ಸ್ಥಿತಿ ಸದ್ಯದ್ದು.

ಮತ್ತೆ ಮಳೆಯ ಮಾತು ಆರಂಭವಾಗಿದೆ. ಎಲ್ಲೆಲ್ಲೂ ಮಳೆ. ಮಳೆ ಎಂದ ಕೂಡಲೇ ರಮ್ಯ ಭಾವನೆ ಬರುವುದುಂಟು. ಅದರಲ್ಲೂ ಮಲೆನಾಡಿನಲ್ಲಿ ಮಳೆ ಸುರಿಯುವುದನ್ನು ಕಂಡು ಸಂಭ್ರಮಿ ಸುವುದಂಟು. ಅದೇ ಸಂದರ್ಭದಲ್ಲಿ ನಗರಗಳಲ್ಲಿ ಮಳೆಗಾಲ ಬಂತೆಂದರೆ ಭಯ ಹುಟ್ಟಿಸುತ್ತದೆ. ಮುಳುಗಿ ಹೋಗುವ ನಗರಗಳು, ನಿಂತಲ್ಲೇ ನಿಂತು ಬಿಡುವ ಇಡೀ ವ್ಯವಸ್ಥೆ, ಯಾರು ಎಲ್ಲರನ್ನೂ ಪಾರು ಮಾಡಬಹುದೆಂಬುದು ಅಂದುಕೊಂಡಿರುವವರೆಲ್ಲಾ ಕೈ ಕಟ್ಟಿ ಕುಳಿತಾಗ ಉಂಟಾಗುವ ಹತಾಶೆ, ಇಡೀ ವ್ಯವಸ್ಥೆ ಬಗ್ಗೆ ಮೂಡುವ ಜಿಗುಪ್ಸೆ… ನಗರಗಳಲ್ಲಿ ಮಳೆಯೆಂದರೆ ಬರೀ ವಿಷಾದದ ಮೂಟೆಯೇ ಹೆಚ್ಚು.

ಈ ಬಾರಿ ಮುಂಗಾರಿಗಿಂತ ಮೊದಲೇ ಸುರಿದ ಮಳೆಯೊಂದು ಮಂಗಳೂರನ್ನು ಮುಳುಗಿಸಿದ್ದು ನಮ್ಮ ಕಣ್ಣ ಮುಂದಿದೆ. ಕಾಲಿಟ್ಟಲೆಲ್ಲಾ ನೀರು ಆವರಿಸಿಕೊಂಡು ಇಡೀ ಜನಜೀವನ ಅಸ್ತವ್ಯಸ್ತಗೊಂಡಿದ್ದು ಕೇವಲ ಒಂಬತ್ತು ಗಂಟೆ ಸುರಿದ ಮಳೆಗೆ. ಬಹುಶಃ ಯಾವ ಬಡಾವಣೆಗಳೂ ಮುಳುಗದೇ ಇರಲಿಲ್ಲ. ಇದುವರೆಗೂ ಇದೆಲ್ಲಾ ಕಥೆ ಎನಿಸಿತ್ತು. ದೂರದ ಮುಂಬಯಿ ಪ್ರತಿ ಮುಂಗಾರಿಗೆ ಅಥವಾ ದಿಢೀರ್‌ ಮಳೆಗೆ ಮುಳುಗಿದಾಗ, ದಿಲ್ಲಿಯಲ್ಲಿ ಮೊಣಕಾಲುದ್ದದವರೆಗೆ ನೀರು ತುಂಬಿದಾಗ, ಕೃತಕ ನೆರೆ ಬಂದು ಬೆಂಗಳೂರನ್ನು ಮುಳುಗಿಸಿದಾಗ, ಚೆನ್ನೈ ಜನರ ಮನೆಯ ಅಂಗಳಕ್ಕೆ ನೆರೆ ಬಂದು ನಿಂತು ಅವರೆಲ್ಲಾ ದಿಕ್ಕಿಲ್ಲದೇ ಪರಿತಪಿಸುತ್ತಿರುವಾಗ-ಎಲ್ಲವೂ ನಮ್ಮ ದೂರದ ಊರಿನ ಕಥೆಗಳೆಂದು ನಾವು ಅಂದುಕೊಂಡಿದ್ದೆವು. ಇದು ಅಕ್ಷರಶಃ ಸತ್ಯ. ಅದೀಗ ಎಲ್ಲವೂ ನಿಜವೆನಿಸಿದೆ. ನಮ್ಮ ಅಂಗಳದಲ್ಲೇ ಮುಳುಗುವಷ್ಟು ನೀರು ಬಂದಾಗ ಏನೂ ತೋಚದೆ ನಿಂತುಕೊಂಡಿದ್ದೇವೆ. ಬಹುಶಃ ನಾವೇ ಮಾಡಿರುವ, ಮಾಡುತ್ತಿರುವ ತಪ್ಪುಗಳಿಂದ ಈ ಮುಳುಗು ಕಥೆ ಪ್ರತಿ ವರ್ಷದ ಸೇವೆಯಂತಾಗುವ ಸಂಭವವೂ ಹೆಚ್ಚಿದೆ. 

ಆಯಿತು, ಮೂರು ತಿಂಗಳ ಬಳಿಕ ಹೇಗೋ ಮಳೆಗಾಲದಿಂದ ಪಾರಾದವೆಂದುಕೊಳ್ಳೋಣ. ಚಳಿಗಾಲಕ್ಕೆ ಕಾಲಿಡುವ ಸಮಯ ಬರಬಹುದು. ಬಳಿಕ ಬಿರುಬೇಸಗೆ. ಸ್ವಲ್ಪ ವರ್ಷಗಳಿರಬಹುದು. ಬಳಿಕ ಚಳಿಗಾಲವೂ ಮಂಜಿನಂತೆ ಕರಗಿ ಬೇಸಗೆಯೊಂದಿಗೆ ವಿಲೀನ ಗೊಳ್ಳಬಹುದು. ಅನಂತರ ಏನಿದ್ದರು ಮೂರು ತಿಂಗಳು ಮಳೆಗಾಲ, ಒಂಬತ್ತು ತಿಂಗಳು ಬೇಸಗೆಗಾಲ. ಇವೆರಡರ ಮಧ್ಯೆ ಇರಬಹುದಾದ ಅತ್ಯಂತ ಒಂದು ಸಾಮಾನ್ಯ ಸಂಗತಿಯೆಂದರೆ ನೀರಿನ ಕೊರತೆ. ಎಲ್ಲ ನಗರಗಳಲ್ಲಿ ಕೃತಕ ನೆರೆ ಬಂದು ಮುಳುಗಿದಾಗಲೆಲ್ಲಾ ಉದ್ಭವಿಸುವ ತತ್‌ಕ್ಷಣದ ಸಮಸ್ಯೆ ಕುಡಿಯುವ ನೀರಿನ ಕೊರತೆ. ಇದು ಒಂದಲ್ಲ, ಎರಡಲ್ಲ, ವಿಶ್ವದ ಹಲವು ನಗರಗಳಲ್ಲಿ ಪುನರಾವರ್ತಿತವಾಗಿದೆ, ಪುನರಾವರ್ತಿತವಾಗುತ್ತಿದೆ. ಇದು ಮಳೆಯ ಸಂದರ್ಭದ್ದಾದರೆ, ಬೇಸಗೆಯಲ್ಲಿ ನೀರಿನ ಸಮಸ್ಯೆ ಎಂದೆಂದಿಗೂ ಇದ್ದದ್ದೇ. ಅಲ್ಲಿಗೆ ಇಡೀ ವರ್ಷದ ನೀರಿನ ಕೊರತೆ ಮುಗಿಯುವುದಿಲ್ಲವೆಂದಂತಾಯಿತು. 

ಬೆಂಗಳೂರಿನದ್ದು ಹೇಳುವುದಿಲ್ಲ
ಪ್ರತಿ ಬಾರಿಯೂ ಬೆಂಗಳೂರಿನ ಸಮಸ್ಯೆಗಳನ್ನು ಹೇಳುತ್ತಿರುವುದಾಗಿ ಎಂದೆನಿಸಬಹುದು. ಅದಕ್ಕೇ ಈ ಬಾರಿ ಬೆಂಗಳೂರಿನದ್ದು ಪ್ರಸ್ತಾಪಿಸುವುದಿಲ್ಲ. ಆದರೆ ದೇಶದ ಬೇರೆ ನಗರಗಳ ಕಥೆ ಇದು. ಗಂಗಾ ಮತ್ತು ಯಮುನಾ ನದಿ ಬಳಿ ಇರುವ ಒಂದು ಗ್ರಾಮದ ಕಥೆ. ಉತ್ತರ ಪ್ರದೇಶದ ರಾಜ್ಯಕ್ಕೆ ಸೇರಿದ್ದು. ಅದರ ಸುತ್ತಲೂ ನೀರಿನ ಅಗಾಧ ರಾಶಿಯೇ ಇತ್ತು. ಹತ್ತಿರದಲ್ಲೇ ಯಮುನಾ, ಗಂಗಾ ಹರಿಯುತ್ತಿತ್ತು. ಈ ನೌಜಿಹಿಲ್‌ ಬ್ಲಾಕ್‌ನ್ನು ದೂರದಿಂದ ನೋಡಿದರೆ ನುಣ್ಣಗಿನ ಬೆಟ್ಟ. ಅದರೆ ಹತ್ತಿರ ಹೋದಾಗಲೇ ಅದರ ಕಲ್ಲು ಮುಳ್ಳು ತಿಳಿಯುವುದು. ಅದರಂತೆಯೇ ನೌಜಿಹಿಲ್‌ ಬ್ಲಾಕ್‌ ನ್ನು ನೀರಿನ ಕೊರತೆ ಇರುವ ಪ್ರದೇಶವಾಗಿ ಘೋಷಿಸಲ್ಪಟ್ಟಿತ್ತು. ಕಾರಣ, ಅಲ್ಲಿನ ಅಂತರ್ಜಲ ಮಟ್ಟ ಎಲ್ಲಿಯವರೆಗೆ ಕುಸಿದಿತ್ತೆಂದರೆ ಏನೂ ಮಾಡಿದರೂ ಮೇಲೆ ಬಾರದಷ್ಟು. ಜತೆಗೆ ಅಲ್ಲಿ ವಿದ್ಯುತ್‌ ಪಂಪ್‌ಗ್ಳನ್ನು ಬಳಸಿ ನೀರನ್ನು ಎತ್ತುವುದನ್ನೇ ನಿಷೇದಿಸುವ ಪರಿಸ್ಥಿತಿ ಬಂದಿತು. ಏಕೆಂದರೆ ಅಷ್ಟರ ಮಟ್ಟಿಗೆ ನೀರಿನ ದುರ್ಬಳಕೆ ಮಾಡಿ, ಬೇಕಾಬಿಟ್ಟಿ ಬಳಸಿ ಇಡೀ ನೀರೆನ್ನುವುದು ರುಚಿಯೇ ಕಳೆದುಕೊಳ್ಳುವ ಸ್ಥಿತಿಯನ್ನು ನಿರ್ಮಿಸ ಲಾಗಿತ್ತು. ಸ್ಥಳೀಯರೇ ಹೇಳುವಂತೆ, 35-40 ವರ್ಷದ ಹಿಂದೆ ಈ ಯಾವ ಸಮಸ್ಯೆಯೂ ಅಲ್ಲಿರಲಿಲ್ಲ. ನಿಜವಾಗಲೂ ಹೇಳಬೇಕೆಂದರೆ, ಈ ಇಡೀ ಪ್ರದೇಶ ಯಮುನಾ ನದಿ ಉಕ್ಕಿ ಹರಿದಾಗ-ನೆರೆ ನೀರು ತುಂಬಿಕೊಳ್ಳುತ್ತಿದ್ದ ಪ್ರದೇಶ. ಆ ನೆರೆ ನೀರು ಇಡೀ ಪ್ರದೇಶದ ಅಂತರ್ಜಲದ ಹಿತವನ್ನು ಕಾಪಾಡುತ್ತಿತ್ತು. ಅಂತರ್ಜಲ ಮಟ್ಟವನ್ನು ಪುನರುಜ್ಜೀವನಗೊಳಿಸುತ್ತಿತ್ತು. ಆದರೆ, ಹೆಚ್ಚು ಬೆಳೆ, ಹೆಚ್ಚು ಹಣದ ಮೋಹ ಆರಂಭವಾಯಿತು. ಇದರ ಹಿನ್ನೆಲೆಯಲ್ಲಿ ನೆರೆಯನ್ನು ತಪ್ಪಿಸಿ ನೀರನ್ನು ಸಂಗ್ರಹಿಸಲು ವ್ಯವಸ್ಥೆಯೊಂದನ್ನು ರೂಪಿಸಿದರು. ಈಗ ತೊಟ್ಟು ನೀರೂ ಸಹ ದುಬಾರಿಯಾಗಿದೆ. ಇಲ್ಲಿನ ಜನರೆಲ್ಲಾ ಮನೆಯಲ್ಲಿ ಬಾಟಲಿ ನೀರು ಬಳಸುವಂಥ ದುರ್ಗತಿ ಇದೆ. ಇದು ಮಹಗಾರಿ ಹಳ್ಳಿಯ ಕಥೆ. ಅಡುಗೆಗೂ ಬಾಟಲಿ ನೀರು ಬಳಸಬೇಕಾದ ಸ್ಥಿತಿ ಇತ್ತು. ಇದು ಬಹಳ ಹಳೆಯ ಮಾತಲ್ಲ. ಕಳೆದ ವರ್ಷದ್ದು.

ಸತ್ಯವಾದ ಮಾತು
ಇದು ಸತ್ಯವಾದ ಮಾತು. ದೇಶದ ಯಾವುದೇ ನಗರಗಳೂ ದಿನಪೂರ್ತಿ ಬೇಕಾದಷ್ಟು ನೀರು ಪೂರೈಸುತ್ತಿಲ್ಲ. ಅಂಥದೊಂದು ವ್ಯವಸ್ಥೆ ಇದೆ ಎಂದು ಕೆಲವು ನಗರಗಳು ತಮ್ಮ ಆಡಳಿತ ಭಾಗವವಾಗಿ ಹೇಳಿಕೊಂಡರೂ ಅದು ಸಂಪೂರ್ಣ ನಂಬದ ಸ್ಥಿತಿ ಇರುವುದು ಸುಳ್ಳಲ್ಲ. ಬೆಂಗಳೂರು, ಚೆನ್ನೈನಂಥ ನಗರಗಳಲ್ಲೂ ನೀರಿನ ಕೊರತೆ ಎಂಬುದು ಈಗಾಗಲೇ ತೀರಾ ಹೆಚ್ಚಾಗಿದೆ. ದಿಲ್ಲಿ, ಮುಂಬಯಿ ಕಥೆ ಬಳಿಕದ್ದು. ಇದರೊಂದಿಗೆ ಸಾಕಷ್ಟು ನೀರಿದೆ, ನಮಗೇನು ಕೊರತೆ ಇಲ್ಲ ಎಂದುಕೊಳ್ಳುವ ಗ್ರಾಮೀಣ ಭಾಗದಲ್ಲೂ ಕೃಷಿಗೆ ಬಳಸಲಾಗುತ್ತಿರುವ ಯಥೇತ್ಛ ಅಂತರ್ಜಲ ನಿಧಾನವಾಗಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡಿದೆ. ಪುತ್ತೂರಿನಂಥ ಊರಿನಲ್ಲೂ 500-600 ಅಡಿ ಆಳದಲ್ಲಿ ಒಂದು ಗುಟುಕು ನೀರು ಹಿಡಿದುಕೊಳ್ಳುವ ಸ್ಥಿತಿ ಇದೆ. ಇದು ಕರಾವಳಿ ಪ್ರದೇಶ. ಮಲೆನಾಡಿನಲ್ಲೂ ನೀರಿನ ಕೊರತೆ ಆರಂಭವಾಗಿರುವುದು ನಿಜ. ತೀರ್ಥಹಳ್ಳಿಯಂಥ ಊರಿನಲ್ಲೂ ಬೋರ್‌ವೆಲ್‌ಗ‌ಳು ಹೆಚ್ಚಾಗಿವೆ. ಒಬ್ಬೊಬ್ಬರ ಮನೆಯಲ್ಲೂ ಮೂರು, ನಾಲ್ಕು ಬೋರ್‌ವೆಲ್‌ಗ‌ಳನ್ನೂ ಕೊರೆಸಿಕೊಂಡವರಿದ್ದಾರೆ. ಎಂಟು-ಹತ್ತು ಎಕ್ರೆ ಪ್ರದೇಶದ ತೋಟಕ್ಕೆ ನೀರುಣಿಸಲು ಬೋರ್‌ವೆಲ್‌ಗ‌ಳನ್ನು ಆಶ್ರಯಿಸಬೇಕಾದ ಸ್ಥಿತಿ ಇದೆ. ಇವೆಲ್ಲವೂ ನಾವೆಲ್ಲಾ ಒಂದು ಕಾಲದಲ್ಲಿ ರಮ್ಯತೆಯಿಂದ ಕಲ್ಪಿಸಿ ಕೊಳ್ಳುತ್ತಿದ್ದ ಊರುಗಳ ಕಥೆ.

ನೀರು ನಿಧಿ
ಹೀಗೆ ಯಾವಾಗ ಅರ್ಥ ಮಾಡಿಕೊಳ್ಳುತ್ತೇವೆ ಎನ್ನುವುದೇ ತಿಳಿಯುತ್ತಿಲ್ಲ. ಒಂದುವೇಳೆ ಅದು ಸಾಧ್ಯವಾದರೆ ನಮಗೆ ನೀರಿನ ಮೌಲ್ಯವೂ ತಿಳಿಯಬಹುದೇನೋ. ನೀರು ನಿಧಿ ಎಂಬುದು ಸರಿಯಾದ ಬಗೆಯಲ್ಲಿ ಅರ್ಥವಾದರೆ, ಅದರ ಮೌಲ್ಯವೂ ತಿಳಿಯಬಹುದು. ನೋಡಿ, ಈ ನೀರು ನಿಧಿಯೂ ಮುಗಿದು ಹೋಗುವ ಸ್ಥಿತಿಯಲ್ಲಿದೆ. ನಮ್ಮ ದೇಶದ ಲೆಕ್ಕವನ್ನು ತೆಗೆದು ಕೊಳ್ಳುವುದಾದರೆ, 1951ರ ಸುಮಾರಿಗೆ ದಿನವೂ ನಮಗೆ ಲಭ್ಯ ಆಗುತ್ತಿದ್ದ ಅಂತರ್ಜಲ ಸುಮಾರು 14,180 ಲೀಟರ್‌. 2001ರಲ್ಲಿ 5,120 ಲೀಟರ್‌ಗೆ ಇಳಿದಿದೆ. 2025ರಲ್ಲಿ 3,650 ಲೀಟರ್‌ಗೆ ಕುಸಿಯಬಹುದು. 2050ಕ್ಕೆ ಇನ್ನೂ ದುಬಾರಿ ಎಂದು ಕೊಳ್ಳೋಣ. ಇನ್ನು ಜಗತ್ತಿನ ಶೇ.18 ರಷ್ಟು ಜನಸಂಖ್ಯೆ ನಮ್ಮ ದೇಶದಲ್ಲಿದೆ. ಜಗತ್ತಿನ ಶೇ.4ರಷ್ಟು ಜಲ ಸಂಪನ್ಮೂಲವನ್ನು ನಾವು ಬಳಸುತ್ತಿದ್ದೇವೆ. ಒಟ್ಟೂ ಅಂಕಿಅಂಶಗಳು ಗಾಬರಿ ಹುಟ್ಟಿಸುವಂತಿವೆ. ಇಂಥ ಕಡು ಕತ್ತಲೆಯಲ್ಲಿ ಬೆಳಕನ್ನು ಹುಡುಕುವ ಕ್ರಮ ಹೇಗೆ ಎಂಬುದೂ ಯಕ್ಷ ಪ್ರಶ್ನೆಯೇ ಸರಿ.

ಎಲ್ಲವನ್ನೂ ಮರೆತೆವೇ?
ಇದೂ ಸಹ ನಾವೇ ನಮಗೆ ಕೇಳಿಕೊಳ್ಳಬೇಕಾದ ಪ್ರಶ್ನೆ. ಒಂದೆಡೆ ಕೃಷಿಗಾಗಿ ಅಂತರ್ಜಲವನ್ನು ಬೇಕಾಬಿಟ್ಟಿ ಬಳಸಿ ಹಾಳು ಮಾಡಿ ಕೊಂಡಿದ್ದೇವೆ. ಅದಕ್ಕೆ ಪ್ರತಿಯಾಗಿ ಅಂತರ್ಜಲ ಪ್ರಮಾಣ ಹೆಚ್ಚಿಸುವ, ಜಲ ಮರು ಪೂರಣ ಮಾಡುವಂಥ ಯಾವುದೇ ಕ್ರಮಗಳನ್ನೂ ಆಸ್ಥೆಯಿಂದ ಮಾಡುತ್ತಿಲ್ಲ. ಇದಕ್ಕೆ ಬಹಳಷ್ಟು ಉದಾಹರಣೆಗಳಿವೆ. ನಮ್ಮ ನಗರಗಳಲ್ಲಿ ಇಂದಿಗೂ ಮಳೆ ನೀರು ಇಂಗಿಸುವ ಕ್ರಮಗಳು ಒಂದು ಪರಿಹಾರವಾಗಿ ಸ್ಥಳೀಯಾಡಳಿತಕ್ಕೆ ತೋರಿಲ್ಲ. ಇನ್ನೂ ನಾವು ಅಣೆಕಟ್ಟಿನ ಎತ್ತರವನ್ನು ಹೆಚ್ಚಿಸುವ ಮೂಲಕ ಪರಿಹಾರ ಕಂಡುಕೊಳ್ಳುವ ಸ್ಥಿತಿಯಲ್ಲಿದ್ದೇವೆ. ಮಂಗಳೂರಿನಲ್ಲೂ ಮೊನ್ನೆ ಮೊನ್ನೆ ಮಾಡಿದ್ದೂ ಇದನ್ನೇ ತಾನೇ. 

ಅದನ್ನು ಹೊರತುಪಡಿಸಿ ಮಳೆ ನೀರು ಸಂಗ್ರಹಿ ಮರು ಬಳಸುವ ಹಾಗೂ ಜಲಮರು ಪೂರಣದಂಥ ಕೆಲವು ಉಪಕ್ರಮಗಳಿಂದ ಒಂದಿಷ್ಟು ಉಸಿರಾಡುವುದನ್ನು ರೂಢಿಸಿಕೊಳ್ಳಬೇಕು. ಅದರ ಜತೆಗೆ ನೀರಿನ ಮಿತ ಬಳಕೆಯತ್ತ ಕಾರ್ಯೋನ್ಮುಖರಾಗಬೇಕು. ಕೊಳವೆ ಬಾವಿಗಳನ್ನು ಕೊರೆದು, ನೀರನ್ನು ಸಿಕ್ಕಾಪಟ್ಟೆ ಬಳಸಿ ಅಪಮೌಲ್ಯ ಗೊಳಿಸುವಂಥ ನಮ್ಮ ಪ್ರವೃತ್ತಿಗೆ ಕಡಿವಾಣ ಹಾಕಿಕೊಳ್ಳಬೇಕು. ಅದು ಒಂದು ಬಗೆಯಲ್ಲಿ ಬೆಕ್ಕಿಗೆ ಗಂಟೆ ಕಟ್ಟುವ ಕೆಲಸವೆನಿಸಬಹುದು. ಆದರೂ ಗಂಟೆ ಕಟ್ಟಲೆ ಬೇಕಾಗಿದೆ, ಇಲ್ಲವಾದರೆ ಉಳಿದಿರುವುದು ಬೇಸಗೆ ಮತ್ತು ಬಿರುಬೇಸಗೆ ಕಾಲವಷ್ಟೇ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...