ಕಾರುಗಳ ಸಂಖ್ಯೆ ನಗರದ ಯೋಗ್ಯತೆ ಹೇಳುವುದಿಲ್ಲ ಸ್ವಾಮೀ…


Team Udayavani, Jan 27, 2018, 11:40 AM IST

27-39.jpg

ಸಮರ್ಥ, ದಕ್ಷ ಹಾಗೂ ಸಮರ್ಪಕ ಸಾರ್ವಜನಿಕ ಸಾಮೂಹಿಕ ಸಾರಿಗೆ ವ್ಯವಸ್ಥೆ ಹೊಂದಿರದ ದೇಶವನ್ನು ಹೇಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಹೇಳುವುದು? ನೀವೇ ಹೇಳಿ.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳೆಂದರೆ ಹೇಗಿರಬೇಕು? ಇಂಥ ದೊಂದು ಪ್ರಶ್ನೆಯನ್ನು ಮುಂದಿಟ್ಟುಕೊಂಡು ಒಂದಿಷ್ಟು ಜನರನ್ನು ಮಾತನಾಡಿಸಿ. ನಿಮಗೆ ನೂರಾ ಎಂಟು ಅಭಿಪ್ರಾಯಗಳು ದೊರೆಯ ಬಹುದು. ಒಬ್ಬರು ಅಮೆರಿಕದ ಮಾದರಿ ಕೊಟ್ಟು, ಅಲ್ಲಿ ನೋಡಿ ಪ್ರತಿಯೊಬ್ಬರ ಮನೆಯಲ್ಲೂ ಎಷ್ಟೊಂದು ಕಾರುಗಳಿವೆಯೆಂದರೆ ಲೆಕ್ಕ ಹಾಕುವಂತಿಲ್ಲ. ಒಂದು ಮನೆಯಲ್ಲಿ ಐದು ಮಂದಿ ಇದ್ದರೆ, ಐದೂ ಮಂದಿಗೂ ಬೇರೆ ಬೇರೆ ಕಾರು. ಅವರ ಕೆಲಸ, ಅಂತಸ್ತು, ಸಂಬಳಕ್ಕೆ ತಕ್ಕಂಥ ವಿವಿಧ ಮಾದರಿಯ ಕಾರುಗಳು ಮನೆಯ ಅಂಗಳವನ್ನ ಅಲಂಕರಿಸಿರುತ್ತವೆ ಎನ್ನಬಹುದು. ಮತ್ತೂಬ್ಬರು, ಅಲ್ಲಿ ಪ್ರತಿಯೊಬ್ಬರೂ ಹೊಂದಿರಬಹುದಾದ ಬಂಗಲೆ, ಸಂಪತ್ತಿನ ಲೆಕ್ಕಾಚಾರ… ಹೀಗೆ ತಲೆಗೊಂದು ವ್ಯಾಖ್ಯಾನ ಮಾಡಬಹುದು. ಅದರಲ್ಲೂ ಬಹಳಷ್ಟು ಬಾರಿ ನಾವು ವ್ಯಕ್ತಿಯ ಶ್ರೀಮಂತಿಕೆಯನ್ನು ಅಳೆಯುವುದು ತೊಡುವ ಬಟ್ಟೆಗಿಂತಲೂ ಕಾರು-ಬಂಗಲೆಯಿಂದಲೇ. ಕಾರಂತೂ ಅಭಿವೃದ್ಧಿ ಬಗೆಗಿನ ದೃಷ್ಟಿಕೋನವನ್ನೇ ಬದಲಾಯಿಸಬಲ್ಲದು.

ಆದರೆ ಕೊಲಂಬಿಯಾ ದೇಶದ (ಕೊಲಂಬಿಯಾ ರಿಪಬ್ಲಿಕ್‌) ರಾಜಧಾನಿ ನಗರ ಬೊಗೊಟಾದ ಮೇಯರ್‌ ಗಸ್ತಾವೊ ಪೆತ್ರೊ ಅವರ ವ್ಯಾಖ್ಯಾನ ಹೇಗಿದೆ ನೋಡಿ. “ಬಡವರೂ ಕಾರನ್ನು ಹೊಂದಿದ್ದಾ ರೆಂಬುದು ಅಭಿವೃದ್ಧಿ ಹೊಂದಿದ ರಾಷ್ಟ್ರವೆಂಬುದಕ್ಕೆ ಮಾನದಂಡ ವಾಗದು. ಶ್ರೀಮಂತರೂ ಸಾರ್ವಜನಿಕ ಸಾಮೂಹಿಕ ಸಾರಿಗೆ ವ್ಯವಸ್ಥೆ ಯನ್ನು ಬಳಸುತ್ತಾರೆ ಎಂಬುದೇ ಸೂಕ್ತ ಮಾನದಂಡ’. ಗಸ್ತಾವೋ ಪೆತ್ರೊ ಒಬ್ಬ ರಾಜಕಾರಣಿ ಹಾಗೂ ಅರ್ಥಶಾಸ್ತ್ರಜ್ಞ. ಬೊಗೊಟಾ ನಗರದ 797 ನೇ ಮೇಯರ್‌ ಆಗಿ ಸೇವೆ ಸಲ್ಲಿಸಿದವರು. ಇವರ ಅವಧಿಯಲ್ಲಿ ಸಾಕಷ್ಟು ಟೀಕೆಗೊಳಗಾದವರು. ಆಡಳಿತದಲ್ಲೂ ದಕ್ಷತೆ ಮೆರೆಯಲಿಲ್ಲ ಎಂಬ ಆಪಾದನೆಯೂ ಕೇಳಿಬಂದಿತ್ತು. ಜನಪ್ರಿಯ ತೆಯೂ ಕುಗ್ಗಿತು. ಜತೆಗೆ ಸರ್ವಾಧಿಕಾರಿ ಎಂಬ ಅಪಖ್ಯಾತಿಗೂ ಒಳಗಾದರು. ಅವರ ಆಡಳಿತದ ಬಗ್ಗೆ ಇಲ್ಲಿ ಉಲ್ಲೇಖೀಸುತ್ತಿಲ್ಲ. ಆದರೆ, ಅವರ ಚಿಂತನೆಯ ಹೊಳಹು ಮಾತ್ರ ನಿಜಕ್ಕೂ ಅರ್ಥ ಮಾಡಿಕೊಳ್ಳುವಂಥದ್ದು ಹಾಗೂ ಅನುಸರಿಸುವಂಥದ್ದು. 

ಏಕೆ ಅಷ್ಟೊಂದು ಮಹತ್ವ?
ಅವರ ಹೇಳಿಕೆಗೆ ಏಕೆ ಅಷ್ಟೊಂದು ಮಹತ್ವ ನೀಡಬೇಕು ಎಂಬು ದನ್ನು ನಮ್ಮ ಮೆಟ್ರೋ ನಗರಗಳಲ್ಲಿ ಒಮ್ಮೆ ಓಡಾಡಿದರೆ ತಿಳಿಯುತ್ತದೆ. ದಿಲ್ಲಿಯಂಥ ನಗರದಿಂದ ಯಾವುದೇ ಮೆಟ್ರೋ ನಗರಗಳಿಗೆ ಹೋದರೂ ರಸ್ತೆ ತುಂಬಾ ತುಂಬಿಕೊಂಡಿರುವ ಖಾಸಗಿ ವಾಹನಗಳು (ಖಾಸಗಿ ವಾಹನಗಳೆಂದರೆ ಬರೀ ಖಾಸಗಿ ಬಸ್ಸು, ಟ್ಯಾಕ್ಸಿಗಳಲ್ಲ, ವೈಯಕ್ತಿಕ ವಾಹನಗಳಾದ ದ್ವಿಚಕ್ರ ವಾಹನಗಳು, ಕಾರು ಇತ್ಯಾದಿ) ಕಾಣ ಸಿಗುತ್ತವೆ. ಸಂಜೆಯ ಹೊತ್ತಿಗೆ ಪ್ರತಿ ರಸ್ತೆಯಲ್ಲೂ ಕಿ.ಮೀ. ಗಟ್ಟಲೆ ವಾಹನಗಳು ನಿಂತಂತೆ ತೋರುತ್ತದೆ. ಬಸವನಹುಳು ಸರಿಯುವ ಹಾಗೆ ವಾಹನಗಳು ಸರಿಯುತ್ತಿರುತ್ತವೆ. ಆ ವೇಗ ಯಾವುದಕ್ಕೂ ಸಾಲದು. ಅದಕ್ಕೆ ತೆವಳುವುದು ಎಂಬ ಪದ ಕನ್ನಡದಲ್ಲಿ ಬಳಕೆಯಿದೆ. ನಿಜಕ್ಕೂ ವಾಹನಗಳು ತೆವಳುತ್ತಿರುತ್ತವೆ.

ಇಷ್ಟೆಲ್ಲಾ ಹಿನ್ನೆಲೆಯಲ್ಲಿಟ್ಟುಕೊಂಡು ನಾವು ಸಾರ್ವಜನಿಕ ಸಾಮೂ ಹಿಕ ಸಾರಿಗೆ ವ್ಯವಸ್ಥೆಯ ಬಗ್ಗೆ ಯೋಚಿಸೋಣ. ಅದರ ಮಹತ್ವ ನಿಧಾನವಾಗಿ ತಿಳಿಯಬಲ್ಲದು. ವಿಶ್ವದ ಎಲ್ಲ ದೇಶಗಳೂ ಈಗ ಚಿಂತಿಸುತ್ತಿರುವುದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಕುರಿತೇ ಹೊರತು ವೈಯಕ್ತಿಕ ಸಾರಿಗೆ ವ್ಯವಸ್ಥೆ ಬಗೆಗಲ್ಲ. ಜರ್ಮನಿಯಿಂದ ಹಿಡಿದು ಸಿಂಗಾಪುರದವರೆಗೆ ಬಹುತೇಕ ರಾಷ್ಟ್ರಗಳಿಗೆ ಸಿಕ್ಕಾಪಟ್ಟೆ ವಾಹನಗಳ ನೋಂದಣಿಗೆ ಅವಕಾಶ ನೀಡಿ ಸಿಕ್ಕಲ್ಲೆಲ್ಲಾ ಫ್ಲೈ ಓವರ್‌, ಅಂಡರ್‌ ಪಾಸ್‌, ಗ್ರೇಡ್‌ ಸಪರೇಟರ್‌, ಸುರಂಗ ಮಾರ್ಗಗಳನ್ನು ನಿರ್ಮಿಸುವುದಕ್ಕಿಂತ ವಾಹನಗಳ ನೋಂದಣಿಗೆ ನಿಯಂತ್ರಣ ಹೇರುವುದು, ಹೇಗಾದರೂ ಮಾಡಿ ಸಾರ್ವಜನಿಕರನ್ನು ಸಾಮೂಹಿಕ ಸಾರಿಗೆ ವ್ಯವಸ್ಥೆಯತ್ತ ಕರೆದೊಯ್ಯವುದೇ ಸುಲಭ ಎನಿಸಿಬಿಟ್ಟಿದೆ. ಅದಕ್ಕೇ ಸಿಂಗಾಪುರದಲ್ಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಜರ್ಮನಿಯಲ್ಲೂ ಸಹ ಅಷ್ಟೇ. ಒಂದು ನಗರದಿಂದ ಮತ್ತೂಂದು ನಗರಕ್ಕೆ, ನಗರದಿಂದ ಉಪನಗರಗಳ ಪ್ರದೇಶಕ್ಕೆ, ಆ ಉಪನಗರಗಳಿಂದ ಒಳನಗರಗಳ ಪ್ರದೇಶಕ್ಕೆ-ಹೀಗೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿಗೆ ವಿವಿಧ ಮಾದರಿಯ ಸಾರ್ವಜನಿಕ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಇಲ್ಲೆಲ್ಲಾ ಬರೀ ಬಸ್ಸುಗಳನ್ನು ಹಿಡಿದುಕೊಂಡು ಕುಳಿತಿಲ್ಲ. ಉದಾ ಹರಣೆಗೆ ಜರ್ಮನಿಯಲ್ಲೇ ಇರುವ ಸಾಮೂಹಿಕ ಸಾರಿಗೆ ವ್ಯವಸ್ಥೆಯ ವಿಧಾನಗಳನ್ನು ಗಮನಿಸೋಣ. ಯು-ಬಹ್‌° (ಅಂಡರ್‌ ಗ್ರೌಂಡ್‌ ರ್ಯಾಪಿಡ್‌ ಟ್ರಾನ್ಸಿಟ್‌), ಎಸ್‌-ಬಹ್‌° (ಉಪನಗರಗಳ ನಡುವಿನ ರೈಲು ಸೇವೆ), ಬಸ್ಸು, ಸ್ಟ್ರೀಟ್‌ ಕಾರು, ಟ್ರಾಮ್‌ ಸೇವೆ, ಲಘು ರೈಲುಗಳಿವೆ. ಇದನ್ನು ಹೊರತುಪಡಿಸಿ ಖಾಸಗಿ ಟ್ಯಾಕ್ಸಿ ಇತ್ಯಾದಿ ಸೇವೆ ಇದ್ದೇ ಇದೆ. ಸಿಂಗಾಪುರಿನಲ್ಲೂ ಇಂಥ ತರಹೇವಾರಿ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇದೆ. ಹಾಗಾಗಿ ಜನರು ನಿಶ್ಚಿಂತೆಯಿಂದ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನು ಬಳಸುತ್ತಾರೆ. ಅದರ ಬಗ್ಗೆ ಬೇಸರವಿಲ್ಲ. ಯಾವುದೇ ಭಾಗಕ್ಕಾಗಲೀ ಸಾಮೂಹಿಕ ಸಾರಿಗೆ ವ್ಯವಸ್ಥೆ ಇಲ್ಲವೆಂಬ ಪದ ಈ ರಾಷ್ಟ್ರಗಳಲ್ಲಿ ಕೇಳಿಬರುವುದು ಕಷ್ಟ. ನೂರಕ್ಕೆ ನೂರರಷ್ಟು ಸಾಧ್ಯವಾಗದಿದ್ದರೂ ಶೇ. 80 ಕ್ಕಿಂತ ಹೆಚ್ಚು ಎನ್ನುವಷ್ಟು ಸಾಮೂಹಿಕ ಸಾರಿಗೆ ವ್ಯವಸ್ಥೆ ಆವರಿಸಿಕೊಂಡಿದೆ. ಜನರೂ ಅಷ್ಟೇ. ಒಟ್ಟೂ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಮಂದಿ ತಮ್ಮ ನಿತ್ಯದ ಅಗತ್ಯಗಳಿಗೆ ಸಾಮೂಹಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸುತ್ತಾರೆ. 

ಜರ್ಮನಿಯಲ್ಲಿ ಈ ವ್ಯವಸ್ಥೆ ಎಷ್ಟು ಸಮರ್ಥ ಮತ್ತು ದಕ್ಷವಾಗಿದೆ ಎಂದರೆ, ಇಲ್ಲಿನ ಬಹುತೇಕ ನಗರಗಳಲ್ಲಿ ಕಾರು ಇಲ್ಲದೇ ನಾವು ಬದುಕಬಹುದು. ನಿತ್ಯದ ಕೆಲಸಗಳಿಗೆ ಕಾರನ್ನು ಅವಲಂಬಿಸಬೇಕಿಲ್ಲ. ಇದಕ್ಕೆ ವಿರುದ್ಧವಾದ ಸ್ಥಿತಿ ಅಮೆರಿಕದಲ್ಲಿದೆ. ಅಲ್ಲಿ ಕಾರಿದ್ದರೆ ಕ್ಷೇಮ ಎಂಬ ಅಭಿಪ್ರಾಯವಿದೆ. ಈಗ ಲೆಕ್ಕ ಹಾಕೋಣ, ಯಾವುದು ಅಭಿವೃದ್ಧಿ ಹೊಂದಿದ ದೇಶ?

ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಜಾರಿಗೆ ಬರಬೇಕೆಂದರೆ ಇರುವ ಸಂಪನ್ಮೂಲಗಳನ್ನು ಸರಿಯಾಗಿ, ವಿವೇಕಯುಕ್ತವಾಗಿ ಬಳಸುವುದು ಹಾಗೂ ಹಳೆಯ ಸಂಪತ್ತನ್ನು ವಿನಾಕಾರಣ ಕಳೆದುಕೊಂಡು ಹೊಸದರ ಸೃಷ್ಟಿಗೆ ತೊಡಗದೇ ಇರುವುದು. ಒಂದು ವೇಳೆ ಹಳೆಯ ಸಂಪತ್ತನ್ನು ಖರ್ಚು ಮಾಡಲೇಬೇಕಾದ ಸಂದರ್ಭದಲ್ಲೂ ಸಂಪನ್ಮೂಲಕ್ಕೂ ಹಾಗೂ ಹಣಕ್ಕೂ ತಾಳೆ ಹಾಕಿ ಯಾವುದರ ಮೌಲ್ಯ ಎಷ್ಟು ಹಾಗೂ ಯಾವುದು ಹೆಚ್ಚು ಎಂಬುದನ್ನು ಅರ್ಥಮಾಡಿಕೊಂಡು ನಿರ್ಧಾರ ವನ್ನು ತಳೆಯುವುದು. ಪ್ರಾಕೃತಿಕ ಸಂಪನ್ಮೂಲದ ಮೌಲ್ಯವನ್ನು ಸರಿಯಾದ ನೆಲೆಯಲ್ಲಿ ಅರ್ಥ ಮಾಡಿಕೊಂಡು ಯೋಜನೆಗಳನ್ನು ಜಾರಿಗೊಳಿಸುವುದು-ಇಂಥ ಹತ್ತು ಹಲವು ವಿವೇಚನೆಯುಳ್ಳ ನಿಲುವುಗಳು ಸುಸ್ಥಿರ ಅಭಿವೃದ್ಧಿಯ ಸಮಾಜವನ್ನು ಸೃಷ್ಟಿಸಬಲ್ಲದು. ಅವೆಲ್ಲವನ್ನೂ ಪ್ರಮುಖವಾಗಿ ತೆಗೆದುಕೊಳ್ಳುವಾಗ ನಮಗೆ  ಮೇಯರ್‌ ಪೆತ್ರೊ ಹೇಳಿಕೆ ಮುಖ್ಯವಾಗುತ್ತದೆ. 

ನಾವು ಕಲಿಯಬೇಕಾದದ್ದೇನು?
ಇಂಥ ಸಾಧ್ಯತೆಗಳಿಂದ ನಾವು ಕಲಿಯಬೇಕಾದದ್ದು ಬಹಳಷ್ಟಿದೆ. ನಮ್ಮ ನಗರಗಳು ಇನ್ನೂ ಬೆಳೆಯುತ್ತಿವೆ. ಅಂದರೆ ಸಾಯುವ ಹಂತಕ್ಕೆ ತಲುಪಿಲ್ಲ. ಆ ಲೆಕ್ಕದಲ್ಲಿ ಹೇಳುವುದಾದರೆ ದಿಲ್ಲಿ ಸಾಯತೊಡಗಿದೆ ಎನ್ನಬಹುದು. ಇದು ನಿಜಕ್ಕೂ ಬೇಸರದ ಸಂಗತಿ. ಸಾಮಾನ್ಯವಾಗಿ ನಗರಗಳು ಸಾಯುವುದು ಎರಡೇ ಕಾರಣಕ್ಕಾಗಿ. ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುವ ಒಂದು ಕಾರಣದಿಂದ, ಅತಿಯಾದ ವಲಸೆ, ಜನಸಾಂದ್ರತೆ, ಮೂಲ ಸೌಕರ್ಯಗಳ ಕೊರತೆ, ಮಾಲಿನ್ಯತೆಯಿಂದ ಜನರು ಬಸವಳಿದು ಮತ್ತೂಂದು ಮಹಾವಲಸೆಗೆ ತೊಡಗುತ್ತಾರೆ. ಆ ಮೂಲಕ ನಗರ ಸಾಯ ತೊಡಗುತ್ತದೆ. ಇದು ಮತ್ತೂಂದು ಕಾರಣ. 

ನಮ್ಮ ಮೆಟ್ರೋಗಳು ಇನ್ನೂ ಇಂಥ ಸ್ಥಿತಿಗೆ ಸಂಪೂರ್ಣ ತಲುಪದ ಹಿನ್ನೆಲೆಯಲ್ಲಿ ವಾಹನಗಳ ತೆರಿಗೆಯಿಂದ ಸಂಗ್ರಹವಾಗುವ ಆದಾ ಯಕ್ಕೂ ಮತ್ತು ಹೆಚ್ಚುವ ವಾಹನಗಳ ಓಡಾಟಕ್ಕೆ ಕಲ್ಪಿಸಬೇಕಾದ ಮೂಲ ಸೌಕರ್ಯಕ್ಕೂ ತಾಳೆ ಹಾಕಿ ನೋಡುವುದನ್ನು ಕಲಿಯಬೇಕು. ಯಾವುದು ನಿಜವಾದ ವೆಚ್ಚ, ಯಾವುದು ನಿಜವಾದ ಆದಾಯ ಎಂಬುದನ್ನು ಅರಿತುಕೊಳ್ಳಬೇಕು. ಎರಡರ ನಡುವಿನ ವ್ಯತ್ಯಾಸವನ್ನು ಹಾಗೂ ಅದರೊಳಗಿನ ಸೂಕ್ಷ್ಮವನ್ನು ಅರ್ಥ ಮಾಡಿಕೊಳ್ಳದಿದ್ದರೆ ನಮ್ಮ ನಗರಗಳು ಹೀಗೇ ಹೊಟ್ಟೆ ಊದಿಕೊಂಡು ಬೆಳೆಯುತ್ತವೆ. ಒಂದು ದಿನ ಹೊಟ್ಟೆ ಹೊಡೆದುಕೊಂಡು ಸಾಯ ತೊಡಗುತ್ತವೆ. ಇದರಲ್ಲಿ ಎರಡು ಮಾತೇ ಇಲ್ಲ. ಸಾಮೂಹಿಕ ಸಾರಿಗೆ ವ್ಯವಸ್ಥೆಯ ಸಣ್ಣದೊಂದು ಮಹತ್ವವನ್ನು ಇಲ್ಲಿ ಹೇಳುತ್ತೇನೆ. ಬೆಂಗಳೂರಿನಲ್ಲಿ ಇನ್ನೂ ಮೆಟ್ರೊ ರೈಲು ಎಲ್ಲೆಡೆ ಹರಿದಿಲ್ಲ. ಕೆಲವು ಆಯ್ದ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಆದರೂ, ಸಾಮಾನ್ಯವಾಗಿ ನಿತ್ಯವೂ ಬೆಳಗಿನ ಜಾವ 5 ರಿಂದ ಮಧ್ಯಾಹ್ನ 1 ಗಂಟೆವರೆಗೂ ಕನಿಷ್ಠ ಒಂದೂವರೆ ಲಕ್ಷ ಮಂದಿ ಸಂಚರಿಸುತ್ತಾರೆ. ಅಂದರೆ ಅಷ್ಟೊಂದು ಜನರ-ವಾಹನಗಳ ಒತ್ತಡ ರಸ್ತೆ ಮೇಲೆ ಕಡಿಮೆಯಾಯಿತೆಂದು ಅರ್ಥವಲ್ಲವೇ? ಇದಕ್ಕಿಂತ ದೊಡ್ಡ ಲಾಭ ಇನ್ನೇನು ಬೇಕು?

ಅರವಿಂದ ನಾವಡ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

z-11

ಇಂದ್ರನ ಕಾಮಧೇನು ಭುವಿಗಿಳಿದ ತಾಣ

d-102.jpg

ನಗರಗಳ ಸಮಸ್ಯೆಗಳಿಗೆ ನಾವು ಉತ್ತರವಾಗುವುದು ಹೇಗೆ?

1.jpg

ನಗರೀಕರಣದ ಕಾವಲಿಯಲ್ಲೇ ಹುಟ್ಟಿಕೊಂಡದ್ದು ನೂರಾರು ದೋಸೆಗಳು

untitled-1.jpg

ನಮ್ಮ ಊರುಗಳೂ ದಿಲ್ಲಿಯಾಗದಂತೆ ತಪ್ಪಿಸಬೇಕಾದ ಹೊತ್ತಿದು

v-2.jpg

ಹಸಿರು ಕಾಯಲು ಬೇಕು ಕಾವಲು ಸಮಿತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.