ಬಯಸಿದ್ದು ಸಿಗುವವರೆಗೂ ಬಡಿದಾಡಿ

Team Udayavani, Jan 5, 2019, 12:30 AM IST

ಜನರಿಗೆ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೋ ಅಥವಾ ಒಂದು ಪುಸ್ತಕ ಓದಿ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಕ್ಕೋ ನಾನು ಯಾವಾಗಲೂ ಪ್ರೋತ್ಸಾಹಿಸುತ್ತೇನೆ. ಯಾರಾದರೂ ತಮ್ಮ ಬಳಿ ಸಮಯವೇ ಇಲ್ಲ ಎಂದು ಹೇಳಿದಾಗೆಲ್ಲ ನನ್ನ ಪಿತ್ತ ನೆತ್ತಿಗೇರುತ್ತದೆ.

ನಾನು ಕಾಲೇಜಿಗೆ ಹೋಗುತ್ತಿದ್ದ ದಿನಗಳವು. ಪ್ರತಿ ದಿನ 5 ತಾಸು ವ್ಯಾಯಾಮ ಮಾಡುತ್ತಿದ್ದೆ. ದೇಹದಾಡ್ಯಕ್ಕೆ ಅಗತ್ಯವಾದ ಪೌಷ್ಟಿಕಾಂಶಯುಕ್ತ ಆಹಾರ ಸಪ್ಲಿಮೆಂಟ್‌ಗಳನ್ನು ಖರೀದಿಸಲು ಆಗ ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ಕನ್ಸ್‌ಟ್ರಕ್ಷನ್‌ನಲ್ಲಿ ಉದ್ಯಮದಲ್ಲಿ ಕೆಲಸ ಮಾಡಿ ಅಲ್ಲಿ ಬಂದ ಹಣದಿಂದ ಜಿಮ್‌ ಮತ್ತು ಅಗತ್ಯ ಆಹಾರದ ಖರ್ಚನ್ನು ಸರಿದೂಗಿಸುತ್ತಿದ್ದೆ. ಬೆಳಗ್ಗೆ  ಮೂರು ತಾಸು ವ್ಯಾಯಾಮ, ನಂತರ ಕನ್ಸ್‌ಟ್ರಕ್ಷನ್‌ ಕಂಪನಿಯಲ್ಲಿ ಕೆಲಸ, ಅದು ಮುಗಿದ ಮೇಲೆ ಕಾಲೇಜು, ಕಾಲೇಜು ಮುಗಿದ ನಂತರ ಸಂಜೆ ಮತ್ತೆ ಜಿಮ್‌ನಲ್ಲಿ ಎರಡು ತಾಸು ವ್ಯಾಯಾಮ…ಇದರ ನಡುವೆಯೇ ವಾರಕ್ಕೆ ನಾಲ್ಕು ದಿನ, ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಟನೆಯ ತರಬೇತಿ ಪಡೆಯುತ್ತಿದ್ದೆ. ಆ ಅವಧಿಯಲ್ಲಿ ನಾನು ಒಂದೇ ಒಂದು ನಿಮಿಷವನ್ನೂ ವ್ಯರ್ಥ ಮಾಡಲಿಲ್ಲ. ಈ ಕಾರಣದಿಂದಲೇ ನಾನಿಂದು ಇಲ್ಲಿದ್ದೇನೆ. 20ನೇ ವಯಸ್ಸಿನಲ್ಲಿ ನಾನು ಮಿಸ್ಟರ್‌ ಯೂನಿವರ್ಸ್‌ ಪ್ರಶಸ್ತಿ ಪಡೆದೆ. ಅತಿ ಚಿಕ್ಕ ವಯಸ್ಸಿನಲ್ಲೇ ಆ ಪಟ್ಟ ಗಳಿಸಿದ ದಾಖಲೆ ನನ್ನದಾಯಿತು. ಇದೆಲ್ಲ ಸಾಧ್ಯವಾಗಿದ್ದು ಏಕೆಂದರೆ, ನನ್ನ ಕಣ್ಣೆದುರಿಗೆ ಸ್ಪಷ್ಟವಾದ ಗುರಿಯಿತ್ತು. 

ಜೀವನದಲ್ಲಿ ಎಲ್ಲಿಗೆ ತಲುಪಬೇಕು ಎನ್ನುವ ಸ್ಪಷ್ಟ ಗುರಿ ನಮಗಿರಬೇಕು. ಆ ಗುರಿ ಇಲ್ಲದೇ ಹೋದರೆ ಎಲ್ಲೆಲ್ಲೋ ಸುತ್ತಾಡಿ ಎಲ್ಲಿಗೂ ಸಲ್ಲದವರಾಗಿಬಿಡುತ್ತೇವೆ. ಅಮೆರಿಕದಲ್ಲಿ 74 ಪ್ರತಿಶತ ಜನರು ತಮ್ಮ ನೌಕರಿಯನ್ನು ದ್ವೇಷಿಸುತ್ತಾರೆ, ಜಗತ್ತಿನಲ್ಲಿ ಬಹುಸಂಖ್ಯಾತರು ತಾವು ಮಾಡುತ್ತಿರುವ ಕೆಲಸವನ್ನು ಇಷ್ಟಪಡುವುದಿಲ್ಲ. 

ಹೀಗಾಗುವುದಕ್ಕೆ ಕಾರಣವೇನು? ಬಹುತೇಕರಿಗೆ ಒಂದು ಗುರಿಯೇ ಇರುವುದಿಲ್ಲ. ದಿಕ್ಕು ತೋಚದೆ ಅತ್ತಿಂದಿತ್ತ ಇತ್ತಿಂದತ್ತ ಅಡ್ಡಾಡುತ್ತಿರುತ್ತಾರೆ. ಆದರೆ ಬದುಕು ನಡೆಯಲೇಬೇಕಲ್ಲ? ಯಾವುದೋ ಒಂದು ಜಾಬ್‌ ಓಪನಿಂಗ್‌ ಇದೆ ಎಂದು ತಿಳಿಯುತ್ತದೆ. ಹೋಗಿ ಆ ನೌಕರಿಗೆ ಸೇರುತ್ತಾರೆ. ಆಗ ಆತ್ಮತೃಪ್ತಿ ಸಿಗದೇ ಒದ್ದಾಡುತ್ತಾರೆ. ನಾನು ಯುವಕನಾಗಿದ್ದಾಗ ನನ್ನೊಡನಿದ್ದವರೆಲ್ಲ ಕೇಳುತ್ತಿದ್ದರು,  “ಅಲ್ಲ ಮಾರಾಯ, ಯಾಕೆ ಐದೈದು ತಾಸು-ಆರಾರು ತಾಸು ವಕೌìಟ್‌ ಮಾಡ್ತೀಯ? ಇಷ್ಟು ದಣಿದರೂ ನಿನ್ನ ಮುಖದ ಮೇಲೆ ಮಂದಹಾಸ ಇರುತ್ತದಲ್ಲ, ಅದ್ಹೇಗೆ ಸಾಧ್ಯವಾಗುತ್ತದೆ? ನಿನ್ನಷ್ಟೇ ಪರಿಶ್ರಮ ಪಡುವವರು ಇದ್ದಾರಾದರೂ ಅವರ ಮುಖ ಕಳೆಗುಂದಿರುತ್ತದಲ್ಲ…?’

ನಾನಾಗ ಅವರಿಗೆ ಹೇಳುತ್ತಿದ್ದೆ, “”ನಾನು ಗುರಿಯೆಡೆಗೆ ನನ್ನ ದೃಷ್ಟಿ ನೆಟ್ಟಿದ್ದೇನೆ, ನನ್ನ ಕಣ್ಣೆದುರು ಮಿಸ್ಟರ್‌ ಯೂನಿವರ್ಸ್‌ ಪ್ರಶಸ್ತಿಯನ್ನು ಗೆಲ್ಲಬೇಕೆಂಬ ಗುರಿಯಿದೆ-ಕನಸಿದೆ. ನಾನು ಎತ್ತುವ ಒಂದೊಂದು ಭಾರವೂ, ನಾನು ಮಾಡುವ ಒಂದೊಂದು ಪುಷ್‌ಅಪ್‌ಗ್ಳೆಲ್ಲ ನನ್ನನ್ನು ಆ ಗುರಿಯ ಸನಿಹಕ್ಕೆ ಕರೆದೊಯ್ಯುತ್ತವೆ. ಹೀಗಾಗಿ ನನಗೆ ಯಾವಾಗಲೂ, ಮತ್ತಷ್ಟು ಮಗದಷ್ಟು ವ್ಯಾಯಾಮ ಮಾಡುವ ತೀವ್ರ ಹಂಬಲವಿರುತ್ತದೆ.” 

ನೀವು ಜೀವನದಲ್ಲಿ ಎಲ್ಲೇ ಇರಿ, ಏನೇ ಮಾಡುತ್ತಿರಿ…ನಿಮಗೊಂದು ಉದ್ದೇಶವೆನ್ನುವುದು ಇರಲೇಬೇಕು. ಬಾಕ್ಸಿಂಗ್‌ ದಂತಕಥೆ ಮೊಹಮ್ಮದ್‌ ಆಲಿ ವಿಪರೀತ ಪರಿಶ್ರಮಿ ವ್ಯಕ್ತಿ. ಅವರು ಕಠಿಣಾತಿಕಠಿಣ ವ್ಯಾಯಾಮಗಳನ್ನು ಮಾಡುವುದನ್ನು ನಾನು ಜಿಮ್‌ನಲ್ಲಿ ಕಣ್ಣಾರೆ ನೋಡಿದ್ದೇನೆ. ನನಗಿನ್ನೂ ನೆನಪಿದೆ ಒಮ್ಮೆ ಜಿಮ್‌ನಲ್ಲಿ  ಕ್ರೀಡಾ ವರದಿಗಾರನೊಬ್ಬ ಬಂದ. ಮೊಹಮ್ಮದ್‌ ಆಲಿ ಆಗ ಬಸ್ಕಿ ಹೊಡೆಯುತ್ತಿದ್ದರು. ಇದನ್ನು ನೋಡಿದ ವರದಿಗಾರ “ಒಟ್ಟು ಎಷ್ಟ ಬಾರಿ ಬಸ್ಕಿ ಹೊಡೀತೀರಿ?’ ಅಂತ ಕೇಳಿದ. 

ಆಗ ಮೊಹಮ್ಮದ್‌ ಅಲಿ ಹೇಳಿದರು, “ಕಾಲಲ್ಲಿ ನೋವು ಆರಂಭವಾಗುವವರೆಗೂ ನಾನು ಲೆಕ್ಕ ಆರಂಭಿಸುವುದಿಲ್ಲ!’ 
ಯೋಚಿಸಿ ನೋಡಿ, ನೋವಾಗಲು ಆರಂಭಿಸಿದ ನಂತರ ಲೆಕ್ಕ ಆರಂಭಿಸುತ್ತಿದ್ದರು ಅಂದರೆ ಆ ವ್ಯಕ್ತಿ ಎಷ್ಟು ಬಾರಿ ಬಸ್ಕಿ ಮಾಡುತ್ತಿದ್ದರೋ ಅಂತ! ಕಠಿಣ ಪರಿಶ್ರಮವೆಂದರೆ ಅದು. ನೀವು ಯಾರೇ ಆಗಿರಬಹುದು, ಕಠಿಣ ಪರಿಶ್ರಮವಿಲ್ಲದೇ ಗುರಿ ತಲುಪಲಾರಿರಿ. ಹುಚ್ಚು ಹಿಡಿದವರಂತೆ ಪರಿಶ್ರಮ ಪಡಿ. ಜೀವನದಲ್ಲಿ ಶಾರ್ಟ್‌ಕಟ್‌ಗಳಿಲ್ಲ, ಮಾಯಾಮಂತ್ರಗಳಿಲ್ಲ. ಯಾರೂ ನಿಮ್ಮನ್ನು ಉದ್ಧಾರ ಮಾಡುವುದಿಲ್ಲ.  

ಹೀಗಾಗಿ ಜನರಿಗೆ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೋ ಅಥವಾ ಒಂದು ಪುಸ್ತಕ ಓದಿ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಕ್ಕೋ ನಾನು ಯಾವಾಗಲೂ ಪ್ರೋತ್ಸಾಹಿಸುತ್ತೇನೆ. ಯಾರಾದರೂ ತಮ್ಮ ಬಳಿ ಸಮಯವೇ ಇಲ್ಲ ಎಂದು ಹೇಳಿದಾಗೆಲ್ಲ ನನ್ನ ಪಿತ್ತ ನೆತ್ತಿಗೇರುತ್ತದೆ. 

ಊಹಿಸಿ ನೋಡಿ. ದಿನಕ್ಕೆ ಒಂದು ತಾಸು ನೀವು ಇತಿಹಾಸದ ಬಗ್ಗೆ ಓದಲಾರಂಭಿಸಿದಿರಿ ಎಂದರೆ 365 ದಿನಗಳಲ್ಲಿ ಎಷ್ಟೊಂದು ಜ್ಞಾನ ನಿಮ್ಮದಾಗಿರುತ್ತದೆ, ದಿನಕ್ಕೆ ಕೇವಲ 45 ನಿಮಿಷ ವ್ಯಾಯಾಮ ಮಾಡಲಾರಂಭಿಸಿದಿರಿ ಎಂದರೆ ಒಂದು ವರ್ಷದಲ್ಲಿ ಎಷ್ಟೊಂದು ಸುಂದರ ಮೈಕಟ್ಟು ನಿಮ್ಮದಾಗುತ್ತದೋ ಯೋಚಿಸಿ ನೋಡಿ. 

ಜಗತ್ತಿನಲ್ಲಿ ದಿನಕ್ಕೆ ಎಲ್ಲರ ಬಳಿಯೂ 24 ಗಂಟೆಗಳೇ ಇರುತ್ತವೆ. ಅದರಲ್ಲಿ 6 ತಾಸು ನಿದ್ದೆಗೆ ಮೀಸಲಿಡುತ್ತೀರಿ ಎಂದರೆ  ನಿಮ್ಮ ಬಳಿ 18 ತಾಸು ಉಳಿಯುತ್ತದೆ. ಕಚೇರಿ ಕೆಲಸಕ್ಕಾಗಿ ಸಾಮಾನ್ಯವಾಗಿ ಬಹುತೇಕರು 10 ಗಂಟೆ ವ್ಯಯಿಸುತ್ತಾರೆ ಎಂದುಕೊಳ್ಳೋಣ. ಉಳಿಯುವುದು 8 ತಾಸು. ಓಡಾಟಕ್ಕೆ, ಊಟಕ್ಕೆ 2 ಗಂಟೆ ಆಗುತ್ತದೆ ಎಂದುಕೊಂಡರೂ ನಿಮ್ಮ ಬಳಿ 6 ತಾಸು ಉಳಿದಿರುತ್ತದೆ. ಆ 6 ಗಂಟೆಯಲ್ಲಿ ನೀವೇನು ಮಾಡುತ್ತೀರಿ? ಮನೆಯವರೊಂದಿಗೆ ಸ್ನೇಹಿತರೊಂದಿಗೆ ಹರಟೆ ಹೊಡೆದರೂ ನಿಮ್ಮ ಬಳಿ ಎಷ್ಟು ಸಮಯ ಉಳಿದಿರುತ್ತದೋ ಯೋಚಿಸಿ? ಆ ಸಮಯ ಎಲ್ಲಿಗೆ ಹೋಗುತ್ತದೆ? ಆ ಸಮಯವನ್ನು ನೀವು ಹೇಗೆ ಬಳಸಿಕೊಳ್ಳುತ್ತೀರಿ? ಬಹುತೇಕರಿಗೆ ಗೊತ್ತಾಗುವುದೇ ಇಲ್ಲ. ಏಕೆಂದರೆ ಅವರು ತಮ್ಮ ದಿನವನ್ನು ಪ್ಲ್ರಾನ್‌ ಮಾಡುವುದಿಲ್ಲ. ಸಮಯವನ್ನು ಸರಿಯಾಗಿ ಸಂಯೋಜಿಸುವುದಿಲ್ಲ. 

ಪ್ಲ್ರಾನ್‌ “ಬಿ’ ನನಗೆ ಇಷ್ಟವಿಲ್ಲ
ನಾನು ಪ್ಲ್ರಾನ್‌ ಬಿ ಅನ್ನು ದ್ವೇಷಿಸುತ್ತೇನೆ. ಏಕೆಂದು ಹೇಳುತ್ತೇನೆ ಕೇಳಿ. ನಮ್ಮ ಸುತ್ತಮುತ್ತಲೂ ಯಾವಾಗಲೂ ಋಣಾತ್ಮಕವಾಗಿ ಮಾತನಾಡುವವರೇ ಇರುತ್ತಾರೆ. “ನಿನ್ನ ಕೈಯಲ್ಲಿ ಅದು ಸಾಧ್ಯವಿಲ್ಲ, ಇದು ಸಾಧ್ಯವಿಲ್ಲ…ಅದನ್ನು ಸಾಧಿಸುವುದು ಅಷ್ಟು ಸುಲಭವಲ್ಲ…’ ಹೀಗೆ ಅವರ ಋಣಾತ್ಮಕ ಮಾತುಗಳು ನಿಮ್ಮಲ್ಲೂ ಒಂದು ಅನುಮಾನ ಆರಂಭಿಸಿಬಿಡುತ್ತವೆ. ಪ್ಲ್ರಾನ್‌ ವಿಫ‌ಲವಾದರೆ ಹೇಗೆ ಎಂಬ ಭಯ ಆರಂಭವಾಗುತ್ತದೆ, ಆಗ ನೀವು ಪ್ಲ್ರಾನ್‌ ಬಿ ಬಗ್ಗೆ ಮಾತನಾಡಲಾರಂಭಿಸುತ್ತೀರಿ. ಅಂದರೆ, ನೀವು, ಹಠಾತ್ತನೆ ಪ್ಲ್ರಾನ್‌ ಬಿಗಾಗಿ ನಿಮ್ಮ ಶಕ್ತಿ ವಿನಿಯೋಗಿಸಲು ಆರಂಭಿಸಿದಿರಿ ಎಂದಾಯಿತು. ನೀವು ಯಾವಾಗ ಪ್ಲ್ರಾನ್‌ ಬಿ ಯೋಚನೆಯಲ್ಲಿ  ಶಕ್ತಿ ವ್ಯಯಿಸಲು ಆರಂಭಿಸುತ್ತೀರೋ ಪ್ಲ್ರಾನ್‌ ಎ ಶಕ್ತಿ ಕಳೆದುಕೊಳ್ಳಲಾರಂಭಿಸುತ್ತದೆ. 

ಪ್ಲ್ರಾನ್‌ ಬಿ ಎನ್ನುವುದು ಅಕ್ಷರಶಃ ನಮ್ಮ ಸೇಫ್ಟಿ ನೆಟ್‌ ಆಗಿ ಬದಲಾಗುತ್ತದೆ. ನಾನು ಕೆಳಕ್ಕೆ ಕುಸಿದರೆ ಪ್ಲ್ರಾನ್‌ ಬಿ ಇದೆಯಲ್ಲ  ಎಂದು ಭಾವಿಸುತ್ತೀರಿ. ಇದು ಒಳ್ಳೆಯದಲ್ಲ. ಸೇಫ್ಟಿ ನೆಟ್‌ ಇಲ್ಲದಿದ್ದಾಗಲೇ ಜನ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. 

ನಾನು ಚಿಕ್ಕ ವಯಸ್ಸಲ್ಲೇ ವಿಶ್ವ ದೇಹದಾಡ್ಯì ಚಾಂಪಿಯನ್‌ ಆಗಬೇಕೆಂದು ನಿರ್ಧರಿಸಿ, ನನ್ನ ಶಕ್ತಿಯೆಲ್ಲವನ್ನೂ ಆ ಗುರಿಗೆ ಮೀಸಲಿಟ್ಟೆ, ಆಗ ನನ್ನ ಬಳಿ ಪ್ಲ್ರಾನ್‌ ಬಿ ಇರಲಿಲ್ಲ. ಮಿಸ್ಟರ್‌ ವರ್ಲ್x ಪ್ರಶಸ್ತಿ ಗೆದ್ದ ಮೇಲೆ ಅಮೆರಿಕಕ್ಕೆ ಹೋಗಿ ಶೋ ಬಿಸ್‌ನೆಸ್‌ನಲ್ಲಿ ಗುರುತಿಸಿಕೊಳ್ಳಬೇಕು ಎಂದು ಬಯಸಿದೆ, ಬಯಸಿದ್ದನ್ನು ಸಾಧಿಸಿದೆ. ಆಗಲೂ ನನ್ನ ಬಳಿ ಪ್ಲ್ರಾನ್‌ ಬಿ ಇರಲಿಲ್ಲ. ನಂತರ, ಹಾಲಿವುಡ್‌ನ‌ಲ್ಲಿ ನಾಯಕನಟನಾಗಬೇಕು ಎಂಬ ಹೊಸ ಗುರಿಯ ಬೆನ್ನತ್ತಿದೆ, ಅಂದುಕೊಂಡದ್ದು ಸಾಧಿಸಿದೆ, ಆಗಲೂ ನನ್ನ ಬಳಿ ಪ್ಲ್ರಾನ್‌ ಬಿ ಇರಲಿಲ್ಲ. ಚಿತ್ರಜಗತ್ತಿನಿಂದ ಹೊರಬಂದು ರಾಜಕಾರಣ ಪ್ರವೇಶಿಸಬೇಕು ಎಂಬ ಗುರಿ ಹಾಕಿಕೊಂಡೆ, ಅದರಲ್ಲೂ ಯಶಸ್ವಿಯಾದೆ…ಆಗಲೂ ನನ್ನ ಬಳಿ ಪ್ಲ್ರಾನ್‌ ಬಿ ಇರಲಿಲ್ಲ. ನಾನು ಹೇಳಲು ಹೊರಟಿರುವುದು ಇಷ್ಟೆ. ಭಯ ಪಡಬೇಡಿ, ಬಯಸಿದ್ದು ಸಿಗುವವರೆಗೂ ಬಡಿದಾಡಿ. 

ಜನ ಏಕೆ ಪ್ಲ್ರಾನ್‌ ಬಿ ಹಾಕಿಕೊಳ್ಳುತ್ತಾರೆ ಎಂದರೆ ಅವರಿಗೆ ಸೋಲಿನ ಭಯವಿರುತ್ತದೆ. ಸೋತು ಬಿಟ್ಟರೆ ಏನು ಮಾಡುವುದು ಎಂದು ಪ್ರಶ್ನಿಸುತ್ತಾರೆ. ನಾನನ್ನುತ್ತೇನೆ, ಸೋಲಲು ಹೆದರದಿರಿ. ಯಶಸ್ಸಿನ ಉತ್ತುಂಗ ತಲುಪಬೇಕೆಂದರೆ ಅನೇಕಬಾರಿ ಸೋಲಿನ ರುಚಿ ಅನುಭವಿಸುವುದು ಅಗತ್ಯ. 

ಬಾಸ್ಕೆಟ್‌ಬಾಲ್‌ ದಂತಕಥೆ ಮೈಕೆಲ್‌ ಜೋರ್ಡನ್‌ರನ್ನು ವರದಿಗಾರನೊಬ್ಬ ಕೇಳಿದ. “ಸರ್‌ ಪ್ರಪಂಚದ ಅತ್ಯಂತ ಯಶಸ್ವಿ ಬಾಸ್ಕೆಟ್‌ಬಾಲ್‌ ಆಟಗಾರನೆಂದು ಕರೆಸಿಕೊಳ್ಳಲು ಹೇಗನಿಸುತ್ತದೆ?’ ತಕ್ಷಣ ಮೈಕಲ್‌ ಜಾರ್ಡನ್‌ ಹೇಳಿದರು, “ಜಗತ್ತಿನ ಅತ್ಯಂತ ಯಶಸ್ವಿ ಬಾಸ್ಕೆಟ್‌ಬಾಲ್‌ ಆಟಗಾರನಾಗುವುದಕ್ಕಿಂತ ಮುನ್ನ ನಾನು ಎನ್‌ಬಿಎ ಆಟಗಳಲ್ಲಿ 9000 ಬಾರಿ ಗುರಿ ಮಿಸ್‌ ಮಾಡಿದ್ದೇನೆ. ನಾನು ಬಾಸ್ಕೆಟ್‌ಗೆ ಹಾಕಿದ್ದ ಬೆರಳೆಣಿಕೆಯ ಬಾಲ್‌ಗ‌ಳಷ್ಟೇ ನಿಮಗೆ ಕಾಣಿಸುತ್ತಿವೆಯಷ್ಟೇ ಹೊರತು, 9 ಸಾವಿರ ಬಾರಿ ಗುರಿ ತಪ್ಪಿದ ಶಾಟ್‌ಗಳಲ್ಲ ‘. 

ನಾನು ಹೇಳುವುದು ಅರ್ಥವಾಗುತ್ತಿದೆಯೇ? ಬಾಸ್ಕೆಟ್‌ಬಾಲ್‌ ಇತಿಹಾಸದ ದಂತಕñ ಎನಿಸಿಕೊಂಡಿರುವ ಮೈಕೆಲ್‌ ಜೋರ್ಡನ್‌ ಬಹುಶಃ ಎಲ್ಲರಿಗಿಂತಲೂ ಹೆಚ್ಚು ಬಾರಿ ಸೋಲು ಕಂಡ ವ್ಯಕ್ತಿ! ಸೋಲುವುದರಲ್ಲಿ ತಪ್ಪೇನೂ ಇಲ್ಲ. ಸೋತ ಮೇಲೆ ಸುಮ್ಮನೇ ಕುಳಿತುಕೊಳ್ಳುವುದು ಮಹಾಪರಾಧ. ಮತ್ತೆ ಎದ್ದುನಿಲ್ಲಿ ಗುರಿಯ ಬೆನ್ನತ್ತಿ. 

ನಾನು ಅನೇಕ ಬಾಡಿ ಬಿಲ್ಡಿಂಗ್‌ ಶೋಗಳಲ್ಲಿ ಸೋತಿದ್ದೇನೆ, ಭಾರ ಎತ್ತುವ ಸ್ಪರ್ಧೆಗಳಲ್ಲಿ ಸೋತಿದ್ದೇನೆ, ನನ್ನ ಅನೇಕ ಚಿತ್ರಗಳು ಅತ್ಯಂತ ಕೆಟ್ಟ ವಿಮರ್ಶೆ ಪಡೆದು ಎರಡು ದಿನವೂ ಥಿಯೇಟರ್‌ಗಳಲ್ಲಿ ಓಡದೇ ಭಾರೀ ಲುಕ್ಸಾನು ಅನುಭವಿಸಿ ಸೋತಿವೆ, ಕ್ಯಾಲಿಫೋರ್ನಿಯಾದ ಗವರ್ನರ್‌ ಆಗಬೇಕೆಂದು ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕೇವಲ 28 ಪ್ರತಿಶತ ಮತಗಳನ್ನಷ್ಟೇ ಪಡೆದು ಹೀನಾಯವಾಗಿ ಸೋತೆ. ಆದರೆ ಮುಂದಿನ ಬಾರಿ ಚುನಾವಣೆಯಲ್ಲಿ ಗೆದ್ದದ್ದು ಯಾರೋ ಹೇಳಿ? ನಾನೇ! 

ಸೋಲಲು ಹೆದರಬೇಡಿ. ಏಕೆಂದರೆ ಆ ಹೆದರಿಕೆ ನಿಮ್ಮನ್ನು ಕಟ್ಟಿಹಾಕುತ್ತದೆ. ಹೆದರಿಕೆಯಿಂದ ಮೈ ಮತ್ತು ಮನಸ್ಸು ಬಿಗಿದುಕೊಳ್ಳುತ್ತವೆ. ನೀವು ಕ್ರೀಡಾಪಟುವಾಗಿರಿ, ಲೇಖಕರಾಗಿರಿ, ಬ್ಯುಸಿನೆಸ್‌ ಮಾಡುತ್ತಿರಿ, ಸಿನೆಮಾ ನಿರ್ದೇಶಕರಾಗಿರಿ…ಯಾವುದೇ ಕ್ಷೇತ್ರದಲ್ಲಿರಿ. ಉತ್ತಮ ಪ್ರದರ್ಶನಕ್ಕೆ ಕಠಿಣ ಪರಿಶ್ರಮ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವಾದದ್ದು ರಿಲ್ಯಾಕ್ಸ್‌ ಆಗಿರುವ ಮನಸ್ಸು. ಹೆದರಿಕೆ ನಿಮ್ಮನ್ನು ರಿಲ್ಯಾಕ್ಸ್‌ ಆಗಿರಲು ಬಿಡುವುದಿಲ್ಲ!

ಮತ್ತೆ ಮತ್ತೆ ಹೇಳುತ್ತೇನೆ ಕೇಳಿ. ಸೋಲಲು ಹೆದರಬೇಡಿ, ಏನನ್ನೂ ಮಾಡದೇ ಸುಮ್ಮನೇ ಕೂಡಲು ಹೆದರಿ!

ಅರ್ನಾಲ್ಡ್‌ ಶ್ವಾಟ್ಸನೆಗರ್‌
ಪ್ರಖ್ಯಾತ ಹಾಲಿವುಡ್‌ ನಟ, ರಾಜಕಾರಣಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದೇ ಭಾರತೀಯ ಪ್ರಜಾಪ್ರಭು ತ್ವದ ಮೂಲತತ್ವವಾಗಿದೆ. ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು...

  • ಪ್ರಸ್‌ನಿಂದ ಹಿಡಿದು ಪಾರ್ಲಿಮೆಂಟ್‌ವರೆಗೂ, ಸೇನೆಯಿಂದ ಹಿಡಿದು ವಾಕ್‌ ಸ್ವಾತಂತ್ರ್ಯದವರೆಗೂ, ಸಂವಿಧಾನದಿಂದ ಹಿಡಿದು ನ್ಯಾಯಾಲಯಗಳ ವರೆಗೂ...ಸರ್ಕಾರಿ ಸಂಸ್ಥೆಗಳಿಗೆ...

  • ನಮ್ಮ ಯೋಚನೆಗಳು ಮತ್ತು ಮಿತಿಗಳು ನಮ್ಮನ್ನು ಕಟ್ಟಿಹಾಕುತ್ತವೆ ಎನ್ನುವುದು ಅರಿವಾಯಿತು. ನಾವು ವಿಶ್ವವಿಸ್ತಾರದ ಎದುರು ನಿಂತು ಅದಕ್ಕೆ ಯಾವಾಗ ಶರಣಾಗುತ್ತೀವೋ,...

  • ನಿಜಕ್ಕೂ ಅಲ್ಲಿ ಗುಡಿಸಲು ಇದೆಯೋ ಅಥವಾ ಮರೀಚಿಕೆಯೋ? ದಾಹ ಹೆಚ್ಚಾಗಿ ತಾನು ಭ್ರಮಿಸುತ್ತಿದ್ದೀನೋ? ಎಂಬ ಗೊಂದಲ ಅವನಿಗೆ ಆರಂಭವಾಯಿತು. ಆದರೆ ಆತನ ಮುಂದೆ ಬೇರಾವ...

  • ಅಷ್ಟರಲ್ಲೇ, ಅವನಿಗೆ ಹೆಂಡತಿಯಿಂದ ಫೋನ್‌ ಬಂದಿತು. ಕೂಡಲೇ ಆಕೆಯ ಫೋನ್‌ ಕಟ್‌ ಮಾಡಿ ಅಂದ: "ರೊಮ್ಯಾನ್ಸ್‌ ಸತ್ತು ಹೋಗಿದೆ. ಹೇಳಿ, ಆ ಪ್ರೀತಿಯನ್ನು ಮತ್ತೆ ಪಡೆಯಲು...

ಹೊಸ ಸೇರ್ಪಡೆ