ಸಕಾರಾತ್ಮಕವಾಗಲಿ ನಿಮ್ಮ ಜೀವನ

Team Udayavani, Jun 23, 2017, 11:24 AM IST

ಕ್ರೀಡಾಸ್ಫೂರ್ತಿ ಆಟಗಾರರಿಗಷ್ಟೇ ಅಲ್ಲ, ನಮ್ಮಂಥವರಿಗೂ ಅಗತ್ಯ

ನಾವು ನಮ್ಮ ಕೆಲಸದಲ್ಲಿ ಎಷ್ಟೇ ಅನುಭವಿಗಳಾಗಿರಲಿ, ಪರಿಶ್ರಮ ಹಾಕುತ್ತಿರಲಿ..ಬದುಕಿನಲ್ಲಿ ಹಲವಾರು ಬಾರಿ ವೈಫ‌ಲ್ಯವನ್ನು ಎದುರಿಸಬೇಕಾಗುತ್ತದೆ. ಜೀವನವಿರುವುದೇ ಹೀಗೆ. ಸೋಲಲಿ ಅಥವಾ ಗೆಲ್ಲಲಿ ನಮ್ಮೊಳಗೆ ಒಂದು ವಿನಮ್ರತೆ ಇರುವುದು ಅವಶ್ಯಕವಲ್ಲವೇ? ಹೀಗಿದ್ದಾಗ ಮಾತ್ರ ಸೋತಾಗ ನಮ್ಮ ಅಹಂಗೆ ಪೆಟ್ಟುಬೀಳುವುದಿಲ್ಲ

ಇವತ್ತಿನ ಪರಿಸ್ಥಿತಿ ಹೇಗಿದೆಯೆಂದರೆ ನಮ್ಮ ಮುಂದೇನಾದರೂ ಖುದ್ದು ದೇವರೇ ಪ್ರತ್ಯಕ್ಷರಾದರೆಂದುಕೊಳ್ಳಿ. ಆಗ ನಾವು ಅವರಿಗೆ ಜ್ಞಾನದಿಂದ ತುಂಬಿತುಳುಕುತ್ತಿರುವ ವಾಟ್ಸ್‌ಆ್ಯಪ್‌ ಸಂದೇಶಗಳನ್ನು ನಿರಂತರವಾಗಿ ಕಳುಹಿಸಿ ಕಿರಿಕಿರಿ ಉಂಟುಮಾಡುವುದಕ್ಕೆ ಹಿಂಜರಿಯುವುದಿಲ್ಲ. 

ಅಲ್ಲ, ಈ ಸಾಮಾಜಿಕ ಮಾಧ್ಯಮಗಳಿಂದಾಗಿ ನಾವೆಲ್ಲ ಎಷ್ಟೊಂದು ಜೀನಿಯಸ್‌ಗಳಾಗಿ ಬದಲಾಗಿದ್ದೇವಲ್ಲ? ಎಲ್ಲರಿಗೂ ಎಲ್ಲವೂ ಗೊತ್ತು. “ನನಗೆ ಈ ವಿಷಯ ಗೊತ್ತಿಲ್ಲ’ ಎಂದು ಹೇಳುವವರು ಈಗ ಇಲ್ಲವೇ ಇಲ್ಲ. ಈ ಕಾಲದಲ್ಲಿ ನಮ್ಮ ಮುಂಜಾವು ಆರಂಭವಾಗುವುದೇ ವಾಟ್ಸ್‌ ಆ್ಯಪ್‌, ಫೇಸ್‌ಬುಕ್‌ ಅಥವಾ ಟ್ವಿಟರ್‌ನಲ್ಲಿ ಭಾವಪೂರ್ಣ, ಸಕಾರಾತ್ಮಕ, ಹೃದಯಸ್ಪರ್ಷಿ “ಗುಡ್‌ ಮಾರ್ನಿಂಗ್‌’ ಸಂದೇಶಗಳ ವಿನಿಮಯದ ಮೂಲಕ.  ಈ ಸಂದೇಶಗಳನ್ನು ಕಳುಹಿಸಿದಾಕ್ಷಣ ಇದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಭಾರೀ ಪ್ರಮಾಣದಲ್ಲಿ ಲೈಕ್‌ಗಳು, ಹೃದಯದ ಚಿಹ್ನೆಗಳು ಮತ್ತು ವ್ಹಾವ್‌ ಮುಖದ ಎಮೋಟಿಕನ್‌ಗಳು ಸಿಗುತ್ತವೆ.ಆದರೆ ಇಂಥ ಸದ್‌ವಿವೇಕಬುದ್ಧಿ ನಮ್ಮ ಸಾಮಾನ್ಯ ಜೀವನದಲ್ಲಿ ಏಕೆ ಕಾಣಿಸುವುದಿಲ್ಲ? ನಮ್ಮ ಸುತ್ತಲೂ ಏಕೆ ಇಷ್ಟು ಅಶಾಂತಿ, ಕ್ರೋಧ ಮತ್ತು ಕಲಹ ತುಂಬಿ ತುಳುಕಾಡುತ್ತಿದೆ? ನಾವು ಇನ್ನೊಬ್ಬರತ್ತ ಬೆರಳು ತೋರಿಸುವಾಗ ನಮ್ಮತ್ತ ಮೂರು ಬೆರಳು ಮುಖ ಮಾಡಿರುವುದನ್ನು ಪ್ರಜ್ಞಾ ಪೂರ್ವಕವಾಗಿ ಮರೆತುಬಿಡುತ್ತಿದ್ದೇವೆ ಎನ್ನುವುದು ಇದಕ್ಕೆಲ್ಲ ಕಾರಣವೇ?  ಮೊನ್ನೆ ಚಾಂಪಿಯನ್ಸ್‌ ಟ್ರೋಫಿ ಸೋಲಿನ ನಂತರ ಭಾರತೀಯ ಆಟಗಾ ರರು ಮತ್ತು ಪಾಕಿಸ್ತಾನಿ ಕ್ರಿಕೆಟರ್‌ಗಳ ಬಗ್ಗೆ ನಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಅದ್ಭುತ “ಭಾಷಾ ಪ್ರಯೋಗ’ ನಡೆಯಿತು. ಸೋಷಿಯಲ್‌ ಮೀಡಿಯಾಗಳಲ್ಲಷ್ಟೇ ಅಲ್ಲ, ನಮ್ಮ ಕರ್ಕಶ ನ್ಯೂಸ್‌ ಚಾನೆಲ್‌ಗ‌ಳಲ್ಲೂ ಆಟಗಾರರ ಬಗ್ಗೆ ಕೆಟ್ಟದಾಗಿ ಮಾತನಾಡಲಾಯಿತು. 

ಬರೀ ನಮ್ಮ ಲ್ಲಷ್ಟೇ ಅಲ್ಲ, ಹಲವಾರು ಪಾಕಿಸ್ತಾನಿ ಸುದ್ದಿ ವಾಹಿನಿಗಳೂ ಭಾರತದ ಬಗ್ಗೆ ಮಾತನಾಡುವಾಗ ಅಶ್ಲೀಲ ಭಾಷೆಯ ಬಳಕೆ ಮಾಡಿದರು ಎಂದು ಕೇಳಲ್ಪಟ್ಟೆ. ಆದರೆ ನನಗೊಂದು ವಿಷಯ ಅರ್ಥವಾಗುತ್ತಿಲ್ಲ. ಪಾಕಿಸ್ತಾನಿ ಕ್ರಿಕೆಟರ್‌ಗಳ ಬಗ್ಗೆ ಕೀಳು ಮಟ್ಟದ ಭಾಷೆ ಬಳಸಿದ ಜನರು ಅದೇ ಪಾಕಿಸ್ತಾನಿಯರು ಅಂಥದ್ದೇ ಪದ ಬಳಸಿದಾಗ ಕೆರಳಿ ಕೆಂಡಾಮಂಡಲವಾಗುವುದೇಕೆ? ನಾವು ಏನು ಮಾತನಾಡಿದರೂ ನಡೆಯುತ್ತದೆ, ಆದರೆ ಬೇರೆಯವರು ನಮ್ಮಂಥದ್ದೇ ಭಾಷೆ ಬಳಸಿದರೆ ಅದು ತಪ್ಪಾಗಿಬಿಡುತ್ತದಾ? ಹೀಗೆ ಯೋಚಿಸುವುದು ಇಬ್ಬಗೆ ಗುಣವನ್ನು ತೋರಿಸುವುದಿಲ್ಲವೇ?
ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ. ನಮ್ಮ ಮತ್ತು ಪಾಕಿಸ್ತಾನದ ನಡುವೆ ಉತ್ತಮ ಮೈತ್ರಿ ಸಂಬಂಧವಿಲ್ಲ. ಯಾವುದೋ ಒಂದು ಆಟದ ಮೂಲಕ ಈ ಶತ್ರುತ್ವ ಸ್ನೇಹವಾಗಿ ಬದಲಾಗಿಬಿಡುತ್ತದೆ ಎಂದು ಭಾವಿಸುವುದು ಮೂರ್ಖತನ ಎಂದು ನನಗನ್ನಿಸುತ್ತದೆ. ನಾವು ಪಾಕಿಸ್ತಾನಿಯರೊಂದಿಗೆ ಪ್ರಪಂಚದ ಯಾವುದೇ ಮೂಲೆಯಲ್ಲೂ ಆಟವಾಡಬಾರದು. ಆ ದೇಶದೊಂದಿಗೆ ಯಾವುದೇ ಸಂಬಂಧವಿಟ್ಟುಕೊಳ್ಳುವ ಅಗತ್ಯವಿಲ್ಲ ಎನ್ನುವುದು ನನ್ನ ಭಾವನೆ. ಆದರೆ, ಒಂದು ವೇಳೆ ಆಟವಾಡುವುದೇ ಆದರೆ, ಆ ಆಟವನ್ನು ಆಟವೆಂದು ನೋಡಬೇಕಷ್ಟೇ ಹೊರತು, ಯುದ್ಧವೆಂದಲ್ಲ. ಅಂದರೆ ಕ್ರೀಡಾಸ್ಫೂರ್ತಿಯಿರಬೇಕೇ ಹೊರತು ಕೋಪ-ದ್ವೇಷ ಅದರಲ್ಲಿ ನುಸುಳಲೇಬಾರದು.

ಯುದ್ಧ ನಡೆಯಬೇಕು ಎಂದು ಪದೇ ಪದೇ ಹೇಳುವವರಿರುತ್ತಾರಲ್ಲ, ಅವರಿಗೆ ನಿಜಕ್ಕೂ ಯುದ್ಧವೆಂದರೇನು ಎನ್ನುವುದೇ ತಿಳಿದಿರುವುದಿಲ್ಲ. ಇವರೆಲ್ಲ ಎಂಥವರೆಂದರೆ ಒಂದು ವೇಳೆ ಕದನ ನಿಜಕ್ಕೂ ಆರಂಭ ವಾಯಿತೆಂದರೆ ಮೊದಲು ತಮ್ಮ ತಲೆ ಉಳಿಸಿಕೊಳ್ಳಲು ಯೋಚಿಸುವವರು. ಬೇರೆಯವರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದೇ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಪಲಾಯನ ಮಾಡುವಾಗ ತಮ್ಮ ದೇಶಪ್ರೇಮ ಯಾವಾಗ ಸ್ವಯಂಪ್ರೇಮವಾಗಿ ಬದಲಾಗುತ್ತದೆ ಎನ್ನುವ ಎಚ್ಚರವೂ ಇವರಿಗಿರುವುದಿಲ್ಲ. 

ಒಂದು ವಿಷಯ ಅರ್ಥಮಾಡಿಕೊಳ್ಳಿ. ನಾವು ನಮ್ಮ ಕೆಲಸದಲ್ಲಿ ಎಷ್ಟೇ ಅನುಭವಿಗಳಾಗಿರಲಿ, ಪರಿಶ್ರಮ ಹಾಕುತ್ತಿರಲಿ.. ಬದುಕಿನಲ್ಲಿ ಹಲವಾರು ಬಾರಿ ಸೋಲು ಮತ್ತು ವೈಫ‌ಲ್ಯವನ್ನು ಎದುರಿಸಲೇಬೇಕಾಗುತ್ತದೆ. ಜೀವನವಿರುವುದೇ ಹೀಗೆ. ಸೋಲಲಿ ಅಥವಾ ಗೆಲ್ಲಲಿ ನಮ್ಮೊಳಗೆ ಒಂದು ವಿನಮ್ರತೆ ಇರುವುದು ಅವಶ್ಯಕವಲ್ಲವೇ? ಹೀಗಿದ್ದಾಗ ಮಾತ್ರ ಸೋತಾಗ ನಮ್ಮ ಅಹಂಗೆ ಪೆಟ್ಟುಬೀಳುವುದಿಲ್ಲ ಮತ್ತು ಗೆದ್ದಾಗ ಆ ಗೆಲುವು ಇನ್ನಷ್ಟು ಸುಂದರವೆನಿಸುತ್ತದೆ. 

ಕ್ರೀಡಾಸ್ಫೂರ್ತಿ ಎನ್ನುವುದು ಕೇವಲ ಆಟಗಾರರಿಗಷ್ಟೇ ಅಲ್ಲ. ಬದಲಾಗಿ, ಆ ಆಟವನ್ನು ವೀಕ್ಷಿಸುವ ನಮ್ಮಂಥವರಿಗೂ ಅಷ್ಟೇ ಅಗತ್ಯವಿದೆ. ಬೆಳಗ್ಗೆದ್ದು ಸಂವೇದನಾಶೀಲ ಸಂದೇಶಗಳನ್ನು ಕಳುಹಿಸಿ ತಮ್ಮ ಹೃದಯವಂತಿಕೆಯ ಪರಿಚಯ ಮಾಡಿಕೊಳ್ಳುವ ಜನರು, ಮ್ಯಾಚ್‌ ನೋಡುತ್ತಿದ್ದಂತೆಯೇ ಕೋಪೋದ್ರಿಕ್ತರಾಗಿ, ನಕಾರಾತ್ಮಕ ಮೆಸೇಜ್‌ಗಳನ್ನು ಕಳುಹಿಸಲು ಶುರು ಮಾಡುತ್ತಾರೆ. ನಮ್ಮದೇ ಆಟಗಾರರು ಮತ್ತು ಅವರ ಪರಿವಾರದ ಬಗ್ಗೆ ಅಸಭ್ಯವಾಗಿ ಮಾತನಾಡಲಾರಂಭಿಸು ತ್ತಾರೆ. ಇನ್ನು ವಿರೋಧಿಗಳ ವಿಷಯಕ್ಕೆ ಬಂದರೆ, ಎದುರಾಳಿ ಆಟಗಾರರ ಹಿಂದಿನ ಮೂರು ತಲೆಮಾರು ಮತ್ತು ಮುಂದಿನ ಮೂರು ಪೀಳಿಗೆಯವರನ್ನೆಲ್ಲ ಸೇರಿಸಿ ಅಸಭ್ಯ, ಅಶ್ಲೀಲ ಭಾಷೆಯನ್ನು ಉಪಯೋಗಿಸಿ ಬೈಯುತ್ತಾರೆ. 

ಜನರು ಹೀಗೆ ವರ್ತಿಸುವುದನ್ನು ನೋಡಿ ದಾಗ ಅವರ ನಿಜವಾದ ಚಹರೆಯಾವುದು ಎನ್ನುವ ಅನುಮಾನ ಆರಂಭವಾಗುತ್ತದೆ. ಬೆಳಗ್ಗೆ ಸ್ಫೂರ್ತಿದಾಯಕ ಮೆಸೇಜುಗಳನ್ನು ವಿನಿಮಯ ಮಾಡಿಕೊಳ್ಳುವುದು, ಸಂಜೆಯ ಹೊತ್ತಿಗೆ ಬಾಯಿಗೆ ಬಂದಂತೆ ಬರೆಯುವುದು! ಹೀಗೆ ವರ್ತಿಸುವ ವ್ಯಕ್ತಿಗಳೆಲ್ಲ ನಿಜಕ್ಕೂ ಕಪಟಿಗಳಲ್ಲವೇ? 

ಬಾಂಗ್ಲಾದೇಶ ಕ್ರಿಕೆಟ್‌ ತಂಡದ ನಾಯಕ ಮಶ್ರಫೆ ಮೊರ್ತಜಾ ಯಾವುದೋ ಪ್ರಸ್‌ ಕಾನ್ಫರೆನ್ಸ್‌ ಒಂದರಲ್ಲಿ ಬಹಳ ಅದ್ಭುತ ಮಾತೊಂದನ್ನು ಹೇಳಿದ್ದರು. “ಆಟದಲ್ಲಿ ಗೆಲುವು ಎದುರಾಗಲಿ ಅಥವಾ ಸೋಲು. ಇದರಿಂದ ಏನೂ ತೊಂದರೆ ಇಲ್ಲ. ಇದು ಜೀವನ ಮರಣದ ಪ್ರಶ್ನೆಯಲ್ಲ. ನಾವು ಆಟಗಾರರು ಒಬ್ಬ ವೈದ್ಯರಂತೆ ಜನರ ಪ್ರಾಣ ರಕ್ಷಿಸುವವರಲ್ಲ, ಸೈನಿಕರಂತೆ ದೇಶವನ್ನು ರಕ್ಷಿಸುವವರೂ ಅಲ್ಲ. ನಾವೆಲ್ಲ ಸಿನೆಮಾ ನಟರಂತೆ ಜನರಿಗೆ ಮನರಂಜನೆ ಒದಗಿಸುವವರು. ಇದಕ್ಕಾಗಿ ನಮಗೆ ಭರಪೂರ ಹಣ ಸಿಗುತ್ತದೆ’. ತಮ್ಮ ಕೆಲಸದ ಬಗ್ಗೆ ಅವರು ಎಷ್ಟು ಸರಿಯಾಗಿ ವಿಶ್ಲೇಷಣೆ ಮಾಡಿದ್ದಾರೆ ನೋಡಿ! 

ಹೀಗಾಗಿ, ಇನ್ಮುಂದೆ ಜ್ಞಾನಪೂರಿತ ಗುಡ್‌ ಮಾರ್ನಿಂಗ್‌ ಮೆಸೇಜ್‌ಗಳನ್ನು ಕಳುಹಿಸುವ ಮುನ್ನ, ಆ ಸಂದೇಶ ಮತ್ತು ಅದರಲ್ಲಿನ ಆಶಯ ನಿಮ್ಮ ಜೀವನದ ಭಾಗವೋ ಅಲ್ಲವೋ ಎನ್ನುವುದನ್ನು ಯೋಚಿಸಿ. ಅಲ್ಲ ಎನ್ನುವುದಾದರೆ ಆ ಸಂದೇಶವನ್ನು ಫಾರ್ವರ್ಡ್‌ ಮಾಡುವ ಮುನ್ನ ಅದನ್ನು 10 ಬಾರಿ ಓದಿ, ಅದರಲ್ಲಿನ ಸಲಹೆಯನ್ನು ಬದುಕಲ್ಲಿ ಅಳವಡಿಸಿಕೊಳ್ಳಿ. ಹೀಗಾದರೆ ಮಾತ್ರ ನಿಮ್ಮ ಮತ್ತು ನಿಮ್ಮ ಸುತ್ತಲಿನ ಜಗತ್ತು ನಿಶ್ಚಿತವಾಗಿ ಇನ್ನಷ್ಟು ಸುಂದರವಾಗುತ್ತದೆ. 

ಅಂದಹಾಗೆ ಒಂದು ವಿಷಯ. ಈ ಲೇಖನ ಬರೆದ ಮೇಲೆ ನಾನು ಇದನ್ನು ಕನಿಷ್ಟಪಕ್ಷ 25 ಬಾರಿಯಾದರೂ ಓದಿದ್ದೇನೆ! ಇನ್ನೊಬ್ಬರತ್ತ ಬೆರಳು ತೋರಿಸುವ ಮುನ್ನ, ನನ್ನತ್ತ ತಿರುಗಿರುವ ಬೆರಳುಗಳನ್ನು ಹೇಗೆ ತಾನೆ ಕಡೆಗಣಿಸಲಿ? ಹ್ಯಾವ್‌ ಅ ಗ್ರೇಟ್‌ ಡೇ. ನಿಮ್ಮ ದಿನ ಮತ್ತು ನಿಮ್ಮ ಜೀವನ ಸಕಾರಾತ್ಮಕತೆಯೊಂದಿಗೆ ತುಂಬಿ ತುಳುಕಾಡಲಿ!

– ರೇಣುಕಾ ಶಹಾನೆ ಬಾಲಿವುಡ್‌ ನಟಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವುದೇ ಭಾರತೀಯ ಪ್ರಜಾಪ್ರಭು ತ್ವದ ಮೂಲತತ್ವವಾಗಿದೆ. ವೈವಿಧ್ಯತೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು...

  • ಪ್ರಸ್‌ನಿಂದ ಹಿಡಿದು ಪಾರ್ಲಿಮೆಂಟ್‌ವರೆಗೂ, ಸೇನೆಯಿಂದ ಹಿಡಿದು ವಾಕ್‌ ಸ್ವಾತಂತ್ರ್ಯದವರೆಗೂ, ಸಂವಿಧಾನದಿಂದ ಹಿಡಿದು ನ್ಯಾಯಾಲಯಗಳ ವರೆಗೂ...ಸರ್ಕಾರಿ ಸಂಸ್ಥೆಗಳಿಗೆ...

  • ನಮ್ಮ ಯೋಚನೆಗಳು ಮತ್ತು ಮಿತಿಗಳು ನಮ್ಮನ್ನು ಕಟ್ಟಿಹಾಕುತ್ತವೆ ಎನ್ನುವುದು ಅರಿವಾಯಿತು. ನಾವು ವಿಶ್ವವಿಸ್ತಾರದ ಎದುರು ನಿಂತು ಅದಕ್ಕೆ ಯಾವಾಗ ಶರಣಾಗುತ್ತೀವೋ,...

  • ಜನರಿಗೆ ಜಿಮ್‌ಗೆ ಹೋಗಿ ವ್ಯಾಯಾಮ ಮಾಡಿ ತಮ್ಮ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೋ ಅಥವಾ ಒಂದು ಪುಸ್ತಕ ಓದಿ ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವುದಕ್ಕೋ...

  • ನಿಜಕ್ಕೂ ಅಲ್ಲಿ ಗುಡಿಸಲು ಇದೆಯೋ ಅಥವಾ ಮರೀಚಿಕೆಯೋ? ದಾಹ ಹೆಚ್ಚಾಗಿ ತಾನು ಭ್ರಮಿಸುತ್ತಿದ್ದೀನೋ? ಎಂಬ ಗೊಂದಲ ಅವನಿಗೆ ಆರಂಭವಾಯಿತು. ಆದರೆ ಆತನ ಮುಂದೆ ಬೇರಾವ...

ಹೊಸ ಸೇರ್ಪಡೆ