ಬಾಯಲ್ಲಿ ನೀರೂರಿಸುವ ಆಲೂ ಪರೋಟ ಮಾಡೋ ಸುಲಭ ವಿಧಾನ!

ಶ್ರೀರಾಮ್ ನಾಯಕ್, Mar 29, 2019, 4:49 PM IST

ಸಾಮಾನ್ಯವಾಗಿ ಪರೋಟ ಎಂದ ಕ್ಷಣ ನಮ್ಮ ಮನಸ್ಸಿಗೆ ಬರುವುದು ಅಲೂ ಪರೋಟ. ಚುಮು-ಚುಮು ಚಳಿಯಲ್ಲಿ ಬೆಳಗಿನ ತಿಂಡಿಗೆ ಬಿಸಿ-ಬಿಸಿ ಆಲೂ ಪರೋಟ ಸವಿಯಲು ಚೆನ್ನಾಗಿರುತ್ತದೆ. ಹಾಗಿದ್ದರೆ ಅತೀ ಸರಳ ವಿಧಾನದಲ್ಲಿ ಆಲೂ ಪರೋಟ ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ.

ಬೇಕಾಗುವ ಸಾಮಾಗ್ರಿಗಳು:

6 ಬಟಾಟೆ, 8 ಹಸಿಮೆಣಸಿನ ಕಾಯಿ, 1 ದೊಡ್ಡ ಚಮಚ ತೆಂಗಿನ ತುರಿ, 1/4 ಕಂತೆ ಕೊತ್ತಂಬರಿ ಸೊಪ್ಪು, 1 ಚಮಚ ಹಿಂಗಿನ ನೀರು, 2 ಕಪ್‌ ಗೋದಿ ಹಿಟ್ಟು, ರುಚಿಗೆ ಉಪ್ಪು.

ಮಾಡುವ ವಿಧಾನ:

ಬಟಾಟೆಯನ್ನು ನೀರಲ್ಲಿ ಬೇಯಿಸಿ ಅದರ ಸಿಪ್ಪೆಯನ್ನು ಸುಲಿದಿಟ್ಟುಕೊಳ್ಳಿ. ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನ ಕಾಯಿಯ ಕೊಚ್ಚಲು ಮಾಡಿರಿ. ತೆಂಗಿನ ತುರಿಯನ್ನು ಪಾತ್ರೆಗೆ ಹಾಕಿ ಅದರೊಟ್ಟಿಗೆ ಪುಡಿಯುಪ್ಪು ಮತ್ತು ಮೆಣಸಿನಕಾಯಿ , ಕೊತ್ತಂಬರಿ ಸೊಪ್ಪಿನ ಕೊಚ್ಚಲು ಬೆರಸಿ, ಹಿಂಗಿನ ನೀರು ಸೇರಿಸಿ ಹೊರಣ ತಯಾರಿಸಿ. ಅದರೊಟ್ಟಗೆ ಬೇಯಿಸಿಟ್ಟ ಬಟಾಟೆಯನ್ನು ಹಿಸುಕಿ, ಹಿಟ್ಟಿನ ಸಣ್ಣ-ಸಣ್ಣ ಉಂಡೆ ಕಟ್ಟಿರಿ.

1/2 ಕಪ್‌ ನೀರಿಗೆ 1 ಚಮಚ ಪುಡಿಯುಪ್ಪು ಹಾಕಿ 2 ಕಪ್‌ ಗೋದಿ ಹಿಟ್ಟು ಬೆರಸಿ ಗಟ್ಟಿ ಹಿಟ್ಟು ಕಲಿಸಿ ಬೇಕಾದಷ್ಟೇ ದೊಡ್ಡ ಉಂಡೆ ಪೂರಿ ತಯಾರಿಸಿರಿ. ಪ್ರತಿಯೊಂದು ಪೂರಿಯ ಮೇಲೆ ಬಟಾಟೆ ಹಿಟ್ಟಿನ ಉಂಡೆ ಇಟ್ಟು ಅದನ್ನು ಪೂರ್ತಿ ಮುಚ್ಚಿ. ಉಂಡೆ ಮಾಡಿ ಗೋದಿ ಹಿಟ್ಟಿನಲ್ಲಿ ಆ ಉಂಡೆಯನ್ನು ಹೊರಳಿಸಿ ತೆಗೆದು ಲಟ್ಟಿಸಿ ದೊಡ್ಡ ಗಾತ್ರದ ಚಪಾತಿ ಮಾಡಿರಿ. ಚಪಾತಿ ತವಗೆ ತುಪ್ಪ ಹಚ್ಚಿ ಒಲೆಯ ಮೇಲಿಟ್ಟು ಅದರ ಎರಡೂ ಬದಿಗಳನ್ನು ಕಾಯಿಸಿ ತೆಗೆಯಿರಿ. ಬಿಸಿ-ಬಿಸಿ ಆಲೂ ಪರೋಟ ರೆಡಿ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ