ಒಂದು ಹೊತ್ತಿನ ಊಟಕ್ಕಾಗಿ ಕಷ್ಟಪಟ್ಟಿದ್ದ ಹುಡುಗ ಇಂದು ತೆಂಡೂಲ್ಕರ್ ದಾಖಲೆ ಮುರಿದ!

ಪಾನಿಪುರಿ ಮಾರುತ್ತಿದ್ದ ಹುಡುಗ ಇಂದು ಭಾರತದ ಹೊಸ ಸೆನ್ಸೇಶನ್

ಕೀರ್ತನ್ ಶೆಟ್ಟಿ ಬೋಳ, Oct 21, 2019, 5:15 PM IST

ಮುಂಬೈ ನಗರವೇ ಹಾಗೆ. ಅದೊಂದು ಮಾಯಾ ನಗರಿ. ತನ್ನ ಬಳಿ ಬಂದವರನ್ನೆಲ್ಲ ತಬ್ಬಿಕೊಳ್ಳುತ್ತೆ. ಹಸಿವು ಅರಸಿ ಬಂದವರು, ಬದುಕು ಅರಸಿ ಬಂದವರು, ಕನಸು ಅರಸಿ ಬಂದವರು ಹೀಗೆ ಈ ಕನಸಿನ ನಗರಿಗೆ ಪ್ರತಿ ದಿನ ಸಾವಿರಾರು ಜನ ಬರುತ್ತಾರೆ. ಹಾಗೆಯೇ ಆ ಜನರ ನಡುವೆ ಅಂದು ಬಂದಿದ್ದ ನಮ್ಮ ಹೀರೋ .

ಅವನ ಕಣ್ಣಲ್ಲಿ ಕನಸಿತ್ತು. ಸಾಧಿಸಬೇಕೆಂಬ ಹಠವಿತ್ತು. ಅಗಾಧ ಹಸಿವಿತ್ತು. ಆದರೆ ಆ ಹಸಿವು ಕಣ್ಣಿಲ್ಲಿ ಮಾತ್ರವಲ್ಲ ಹೊಟ್ಟೆಯಲ್ಲೂ ಇತ್ತು. ‘ಕೆಜಿಎಫ್’ ಚಿತ್ರದ ಹೀರೋ ಚಿಕ್ಕ ಪ್ರಾಯದಲ್ಲಿ ಮುಂಬೈಗೆ ಹೋದಾಗ ಅವನ ಕಣ್ಣಲ್ಲಿ ಒಂದು ಕನಸಿತ್ತಲ್ಲ. ಅಡ್ಡ ಬಂದವುಗಳನ್ನು ಸುಟ್ಟು ಬಿಡುವಂತಹ ತೀವ್ರವಾದ ಕನಸದು. ಅಂತಹದೇ ಕನಸು ಈ ಕಥೆಯ ಹೀರೋನದ್ದು. ಆದರೆ ಗುರಿ ಮಾತ್ರ ಬೇರೆ ಬೇರೆ.

ಪಟ್ಟ ಪ್ರತೀ ಕಷ್ಟ, ಅವಮಾನ, ನೋವು ಮುಂದೆ ಒಂದು ದಿನ ಮೆಟ್ಟಿಲುಗಳಾಗಿ ನಮ್ಮ ಸಾಧನೆಯ ಶಿಖರವನ್ನು ಏರಲು ಸಹಾಯ ಮಾಡುತ್ತವೆ. ಅಲ್ಲಿಯವರೆಗೆ ನಾವು ಸಹನೆಯಿಂದ ಇರಬೇಕಷ್ಟೇ. ಅಂದಹಾಗೆ ನಮ್ಮ ಇಂದಿನ ಕಥೆಯ ಹೀರೋ 17 ರ ಹುಡುಗ ಯಶಸ್ವಿ ಜೈಸ್ವಾಲ್. ವಿಜಯ್ ಹಜಾರೆ ಟ್ರೋಫಿಯಲ್ಲಿ  ಮೊನ್ನೆ ಮೊನ್ನೆ  ದ್ವಿಶತಕ ಬಾರಿಸಿದ ಯವ ಪ್ರತಿಭೆ.

ಯಶಸ್ವಿ ಜೈಸ್ವಾಲ್ ಹುಟ್ಟಿದ್ದು 2001ರ ಡಿಸೆಂಬರ್ 28ರಂದು. ತಂದೆ ಭೂಪೇಂದ್ರ ಜೈಸ್ವಾಲ್. ತಾಯಿ ಕಾಂಚನ. ಅದು 2012ನೇ ಇಸವಿ. ಉತ್ತರ ಪ್ರದೇಶದ ಭದೋಹಿ ಎಂಬ ಊರಿನಿಂದ 12 ವರ್ಷದ ಹುಡುಗ ಯಶಸ್ವಿ ಜೈಸ್ವಾಲ್ ಮುಂಬೈ ಮಹಾನಗರಿಗೆ ಕಾಲಿಡುತ್ತಾನೆ. ಕಣ್ಣ ತುಂಬಾ ಕ್ರಿಕೆಟರ್ ಆಗಬೇಕೆಂಬ ಕನಸು. ಮುಂಬೈಗೆ ಹೋಗಿ ಅಲ್ಲಿ ಕ್ರಿಕೆಟ್ ಆಡಿದರೆ ಸಚಿನ್ ತೆಂಡೂಲ್ಕರ್ ನಂತೆ ಆಗುತ್ತೇನೆಂದು ಬಂದ ಪುಟ್ಟ ಹುಡುಗನಿಗೆ ವಾಸ್ತವದ ಅರಿವಿರಲಿಲ್ಲ.

ಮೆಟ್ರೋ ರೈಲಿಗಿಂತ ವೇಗವಾಗಿ ಓಡುವ ಮುಂಬೈ ಶಹರದಲ್ಲಿ ಜೈಸ್ವಾಲ್ ಒಬ್ಬಂಟಿಗನಾಗಿದ್ದ. ಎದುರಲ್ಲಿ ನೂರಾರು ಜನರಿದ್ದರೂ ಒಬ್ಬನ ಪರಿಚಯವೂ ಈತನಿಗಿಲ್ಲ. ದೊಡ್ಡ ದೊಡ್ಡ ಅಪಾರ್ಟ್ ಮೆಂಟ್ ಗಳ ಎದುರಿನ ಜೋಪಡಿಯೂ ಇಲ್ಲ ಈತನ ತಲೆಗೆ ಸೂರಾಗಲು. ಅನ್ನ ಆಹಾರವೂ ಇಲ್ಲ.  ಊಟ ಮಾಡಿದೆಯಾ ನಿದ್ದೆ ಮಾಡಿದೆಯಾ ಎಂದು ಕೇಳುವವರಿಲ್ಲ.  ಅಲ್ಲಿಗೆ ಬ್ಯಾಟ್ ಬಾಲ್ ಹಿಡಿದು ಮೆರೆಯಬೇಕು ಎಂದು ಬಂದವ ಇರಲು ಒಂದು ಸೂರಿಲ್ಲದೆ, ಒಪ್ಪೊತ್ತು ಊಟವಿಲ್ಲದೆ ಕಂಗಾಲಾಗಿದ್ದ.

ಹೀಗೆ ಒಂದು ದಿನ ಕುಲ್ಬಾ ದೇವಿಯ ಡೈರಿಯೊಂದರಲ್ಲಿ ಜೈಸ್ವಾಲ್ ಗೆ ನಿಲ್ಲಲು ಜಾಗ ಸಿಕ್ಕಿತು. ಆದರೆ ಆತ ಡೈರಿ ಕೆಲಸ ಮಾಡಬೇಕಿತ್ತು . ಆದರೆ ಕೆಲವೇ ದಿನಗಳಲ್ಲಿ ಈತ ಡೈರಿ ಕೆಲಸಕ್ಕೆ ಲಾಯಕ್ಕಿಲ್ಲ ಎಂದು ಮಾಲೀಕ ಅಲ್ಲಿಂದ ಹೊರದಬ್ಬಿದ್ದ. ಮುಂಬೈನಲ್ಲಿದ್ದ ಓರ್ವ ಸಂಬಂಧಿಯ ಮನೆಯಲ್ಲಿ ಕೆಲವು ದಿನ ಜೈಸ್ವಾಲ್ ಆಶ್ರಯ ಪಡೆದ. ಆದರೆ ಜೈಸ್ವಾಲ್ ನ ಯೋಗದಲ್ಲಿ ಅಲ್ಲೂ ಗಟ್ಟಿ ನೆಲೆ ಇರಲಿಲ್ಲ. ಅಲ್ಲೂ ಅವನನ್ನು ಹೊರಹಾಕಿದರು.

ಅಲ್ಲಿಂದ ಆಜಾದ್ ಮೈದಾನ ಸೇರಿದ ಹುಡುಗನಿಗೆ ಅಲ್ಲಿನ ಟೆಂಟ್ ಒಂದರಲ್ಲಿ ಜಾಗ ಸಿಕ್ಕಿತು. ಶೌಚಾಲಯ, ಕುಡಿಯುವ ನೀರು ಹೀಗೆ ಮೂಲ ಸೌಕರ್ಯಗಳೇ ಇಲ್ಲದ ಆ ಟೆಂಟ್ ನಲ್ಲಿ ಈ ಹಾಲುಗಲ್ಲದ ಹುಡುಗ ಕಳೆದಿದ್ದು ಬರೋಬ್ಬರಿ ಮೂರು ವರ್ಷ. ಊಟಕ್ಕಾಗಿ ಸಿಕ್ಕ ಸಿಕ್ಕ ಕೆಲಸ ಮಾಡಿ ಚಿಲ್ಲರೆ ಹಣ ಸಂಪಾದನೆ ಮಾಡುತ್ತಿದ್ದ.

ಇದರ ನಡುವೆ ಆಟವನ್ನು ಮರೆಯಲಿಲ್ಲ. ರನ್ ಗಳಿಸುತ್ತಿದ್ದ. ವಿಕೆಟ್ ಪಡೆಯುತ್ತಿದ್ದ. ಎಂತಹ ಕಷ್ಟಗಳನ್ನಾದರೂ ಸಹಿಸುತ್ತಿದ್ದ ಕ್ರಿಕೆಟ್ ಆಡುವ ಸಲುವಾಗಿ. ಒಂದು ದಿನ ಖಂಡಿತ ಕ್ರಿಕೆಟ್ ತನ್ನನ್ನು ಮೇಲಕ್ಕೆತ್ತುತ್ತದೆ ಎಂಬ ಬಲವಾದ ನಂಬಿಕೆ ಆತನದು.

ರಾಮ್ ಲೀಲಾ ಸಮಯದಲ್ಲಿ ರಸ್ತೆಗಳಲ್ಲಿ ಪಾನಿ ಪುರಿ ಮಾರತೊಡಗಿದ. ಯಾವ ಕೆಲಸವಾದರೂ ಸರಿ ಮಾಡುತ್ತಿದ್ದ. ಕರೆಯದೇ ಇದ್ದರೂ ಪಂದ್ಯಗಳಿಗೆ ಬಾಲ್ ಬಾಯ್ ಆಗಿ ಹೋಗುತ್ತಿದ್ದ.  ಒಟ್ಟಿನಲ್ಲಿ ಹಣ ಸಂಪಾದನೆಗಾಗಿ ಎಲ್ಲವನ್ನೂ ಮಾಡಿದ್ದ ನಮ್ಮ ಹೀರೋ.

ಅದೊಂದು ದಿನ ಲಿಸ್ಟ್ ಎ ಬೌಲರ್ ಗಳ ಎಸೆತಗಳನ್ನು ಮೈದಾನದ ಹೊರಕ್ಕೆ ಅಟ್ಟುತ್ತಿದ್ದ ಈ ಹುಡುಗ ಮಾಜಿ ಜೂನಿಯರ್ ಆಟಗಾರರ, ಸದ್ಯದ ಕೋಚ್ ಜ್ವಾಲಾ ಸಿಂಗ್ ಕಣ್ಣಿಗೆ ಬೀಳುತ್ತಾನೆ. ಈ ಹುಡುಗನ ಆಟದಿಂದ ಖುಷಿಗೊಂಡ ಜ್ವಾಲಾ ಸಿಂಗ್ ಆತನ ಬಗ್ಗೆ ವಿಚಾರಿಸಿದಾಗ ಆತನ ಹಿನ್ನೆಲೆ ತಿಳಿಯುತ್ತದೆ. ಆತನನ್ನು ತನ್ನ ಮನೆಗೆ ಕರೆಸಿಕೊಂಡ ಜ್ವಾಲಾ ತರಬೇತಿಯು ನೀಡುತ್ತಾರೆ.

ಯಶಸ್ವಿಯ ಹಸಿವು, ವಸತಿ ಸಮಸ್ಯೆ ಸದ್ಯಕ್ಕೆ ಇಲ್ಲವಾಗಿತ್ತು. ಕ್ರಿಕೆಟ್ ನಲ್ಲಿ ಮತ್ತಷ್ಟು ತೊಡಗಿಸಿಕೊಂಡ. ಟೀಂ ಇಂಡಿಯಾ ಅಂಡರ್‌ 19 ಏಷ್ಯಾ ಕಪ್ ತಂಡಕ್ಕೆ ಆಯ್ಕೆಯಾದ . ಸರಣಿಯಲ್ಲಿ 318 ರನ್ ಗಳಿಸಿ ಗರಿಷ್ಠ ಸ್ಕೋರರ್ ಆದ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ತಂಡಕ್ಕೆ ಆಯ್ಕೆಯಾದ. ಅದು  ಜೈಸ್ವಾಲ್ ನ ಜೈತ್ರಯಾತ್ರೆ ಯಶಸ್ವಿಯಾಗಲು ಒಂದೊಂದೇ ಹೆಜ್ಜೆ ಮುಂದಡಿಯಿಡುತ್ತಿತ್ತು.

ಜಾರ್ಖಂಡ್ ವಿರುದ್ಧದ ಪಂದ್ಯದಲ್ಲಿ ಕೇವಲ 154 ಎಸೆತಗಳಲ್ಲಿ 203 ರನ್ ಗಳಿಸಿದ ಜೈಸ್ವಾಲ್ ದೇಶದಲ್ಲೆಡೆ ಸುದ್ದಿಯಾದ. ವರುಣ್ ಆರೋನ್, ಶಬಾಜ್ ನದೀಂರಂತಹ ಘಟಾನುಘಟಿಗಳ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಯಶಸ್ವಿ ಲಿಸ್ಟ್ ಎ ಕ್ರಿಕೆಟ್ ನಲ್ಲಿ ದ್ವಿಶತಕ ಬಾರಿಸಿದ ಅತೀ ಕಿರಿಯ ಆಟಗಾರ ಎಂಬ ದಾಖಲೆ ಬರೆದ.

ಕನಸು, ಪ್ರಯತ್ನ, ಶ್ರದ್ದೆಇದ್ದರೆ ಎಂಥಹ ಸಾಧನೆಯನ್ನಾದರೂ ಮಾಡಬಹುದು ಎನ್ನುವುದಕ್ಕೆ ಯಶಸ್ವಿ ಜೈಸ್ವಾಲ್ ಉತ್ತಮ ಉದಾಹರಣೆ. ಕಠಿಣ ಪರಿಶ್ರಮದಿಂದಲೇ ಈ ಮಟ್ಟಕ್ಕೆ ಬಂದಿರುವ ಜೈಸ್ವಾಲ್ ಮುಂದೊಂದು ದಿನ ಟೀಂ ಇಂಡಿಯಾ ಪರ ಆಡುವ ಕನಸು ಕಾಣುತ್ತಿದ್ದಾನೆ. ಹೀಗೆಯೇ ಆಟ ಮುಂದುವರಿಸಿದರೆ ಆ ದಿನಗಳೂ ದೂರವೇನಿಲ್ಲ ಬಿಡಿ.

ಕೀರ್ತನ್ ಶೆಟ್ಟಿ ಬೋಳ 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ