ಮಧ್ಯರಾತ್ರಿಯಲ್ಲಿ ಕಂದಕಕ್ಕೆ ಉರುಳಿದ ಆ ಆ್ಯಂಬುಲೆನ್ಸ್‌ನಲ್ಲಿದ್ದ ಮಗು ಎಲ್ಲೋಯ್ತು?

ಕಾಡುದಾರಿಯಲ್ಲಿ ಅಪಘಾತಕ್ಕೀಡಾದ ಆ ವಾಹನದಲ್ಲಿದ್ದವರ ನೆರವಿಗೆ ಧಾವಿಸಿದ ‘ಆಪತ್ಬಾಂಧವ’ ಯಾರು?

ಹರಿಪ್ರಸಾದ್, Apr 26, 2019, 6:33 PM IST

ಚಿಕ್ಕಮಗಳೂರಿನಲ್ಲಿರುವ ಶ್ರದ್ಧಾ ಕೇಂದ್ರವೊಂದಕ್ಕೆ ಹೋಗಿ ಮೂಡಿಗೆರೆ ಮಾರ್ಗವಾಗಿ ಬುಧವಾರ ತಡರಾತ್ರಿ ತಮ್ಮ ವಾಹನದಲ್ಲಿ ಊರಿಗೆ ಮರಳುತ್ತಿದ್ದ ಕರಾವಳಿ ಭಾಗದ ಆ ಕುಟುಂಬಕ್ಕೆ ರಸ್ತೆಬದಿಯ ಕಂದಕಕ್ಕೆ ‘ನಗು-ಮಗು’ ಆ್ಯಂಬುಲೆನ್ಸ್‌ ಉರುಳಿ ಬಿದ್ದಿರುವುದು ಕಾಣಿಸುತ್ತದೆ. ತಕ್ಷಣವೇ ತಮ್ಮ ವಾಹನವನ್ನು ನಿಲ್ಲಿಸಿ ಇಳಿದು ನೋಡಿದಾಗ ಅದರಲ್ಲಿ ಹದಿನಾಲ್ಕು ದಿನದ ನವಜಾತ ಶಿಶು ಮತ್ತು ಬಾಣಂತಿ ಇರುವ ವಿಷಯ ಅವರಿಗೆ ಗೊತ್ತಾಗುತ್ತದೆ. ಆದರೆ ವಾಹನ ಕಂದಕಕ್ಕೆ ಉರುಳಿದ್ದ ಕಾರಣ ಅದರೊಳಗಿದ್ದ ಚಾಲಕನಿಗಾಗಲೀ, ಬಾಣಂತಿ ಮತ್ತು ಆಕೆಯ ಪತಿಗಾಗಲೀ ಹೊರಗೆ ಬರಲಾಗದೇ ಸಿಕ್ಕಿಬಿದ್ದ ಸ್ಥಿತಿಯಲ್ಲಿದ್ದರು.

ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಇದ್ದ ಕಾರಣ ಆ ದಂಪತಿ ಚಿಕ್ಕಮಗಳೂರಿನಿಂದ ಮಂಗಳೂರಿನ ಲೇಡಿಗೋಷನ್‌ ಆಸ್ಪತ್ರೆಗೆ ಸರಕಾರದ ‘ನಗು-ಮಗು’ ಆ್ಯಂಬುಲೆನ್ಸ್‌ ಮೂಲಕ ಕರೆದೊಯ್ಯುತ್ತಿರುತ್ತಾರೆ. ಆದರೆ ದಾರಿಮಧ್ಯೆ ಚಾಲಕನಿಗೆ ನಿದ್ದೆ ಮಂಪರು ಆವರಿಸಿದ ಕಾರಣ ಆ್ಯಂಬುಲೆನ್ಸ್‌ ಆತನ ನಿಯಂತ್ರಣ ತಪ್ಪಿ ದಾರಿಬದಿಯ ಕಂದಕಕ್ಕೆ ಉರುಳುತ್ತದೆ.

ಹೀಗೆ ಕಂದಕಕ್ಕೆ ಆ್ಯಂಬುಲೆನ್ಸ್‌ ಉರುಳಿದ ರಭಸಕ್ಕೆ 14 ದಿನ ಪ್ರಾಯದ ಆ ನವಜಾತ ಶಿಶು ವಾಹನದ ಒಳಗೇ ಕಣ್ಮರೆಯಾಗುತ್ತದೆ. ಒಂದು ಕಡೆ ಗಾಢ ಕತ್ತಲು ಇನ್ನೊಂದೆಡೆ ಅಪಘಾತವಾಗಿರುವ ವಾಹನ. ಇತ್ತ ಆ ತಾಯಿ ತನ್ನ ಮಗುವಿಗಾಗಿ ರೋದಿಸುತ್ತಿರುತ್ತಾಳೆ. ಇದೇ ಸಂದರ್ಭದಲ್ಲಿ ತಮ್ಮ ವಾಹನವನ್ನು ನಿಲ್ಲಿಸಿದ ಆ ವ್ಯಕ್ತಿ ತಕ್ಷಣ ಆ್ಯಂಬುಲೆನ್ಸ್‌ ನಲ್ಲಿದ್ದವರ ಸಹಾಯಕ್ಕೆ ಒದಗುತ್ತಾರೆ. ಹೀಗೆ ಆ ನಡುರಾತ್ರಿ ಕಾಡುದಾರಿಯಲ್ಲಿ ಅಪಘಾತಕ್ಕೀಡಾಗಿದ್ದ ಆ್ಯಂಬುಲೆನ್ಸ್‌ ನಲ್ಲಿದ್ದವರ ಸಹಾಕ್ಕೆ ನಿಂತವರೇ ಕರಾವಳಿ ಭಾಗದಲ್ಲಿ ‘ಆಪತ್ಬಾಂಧವ’ ಎಂದೇ ಹೆಸರಾಗಿರುವ ಮಹಮ್ಮದ್‌ ಆಸೀಫ್.

ತಕ್ಷಣವೇ ಆ್ಯಂಬುಲನ್ಸ್‌ ನ ಕಿಟಕಿ ಗಾಜನ್ನು ಒಡೆದು ಒಳಪ್ರವೇಶಿದ ಆಸೀಫ್ ಮೊದಲಿಗೆ ಕಣ್ಮರೆಯಾಗಿರುವ ಮಗುವನ್ನು ಹುಡುಕುತ್ತಾರೆ. ಒಂದೈದು ನಿಮಿಷದ ಹುಡುಕಾಟದ ಬಳಿಕ ಆ್ಯಂಬುಲೆನ್ಸ್‌ ನ ಒಳಗಿದ್ದ ಆಕ್ಸಿಜನ್‌ ಬಾಕ್ಸ್‌ನ ಒಳಗೆ ಮಗುವಿನ ಅಳು ಕ್ಷೀಣವಾಗಿ ಕೇಳಿಸುತ್ತದೆ. ತನ್ನ ಮಗುವಿನ ಅಳು ಕೇಳಿದೊಡನೆ ಆ ತಾಯಿಯ ಕಣ್ಣು ಅರಳುತ್ತದೆ. ಮಗುವನ್ನು ಆ ತಾಯಿಯ ಕೈಗೆ ಒಪ್ಪಿಸಿ, ಅವರನ್ನು ತಮ್ಮ ವಾಹನದಲ್ಲಿಯೇ ಮೂಡಿಗೆರೆಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬರುತ್ತಾರೆ.

ಬಳಿಕ ಅಲ್ಲಿಂದ ಬೇರೊಂದು ಆ್ಯಂಬುಲೆನ್ಸ್‌ ಮೂಲಕ ಬಾಣಂತಿ ಮತ್ತು ಮಗುವನ್ನು ಮಂಗಳೂರಿಗೆ ಕಳುಹಿಸಿಕೊಡುವ ವ್ಯವಸ್ಥೆಯನ್ನು ಆಸೀಫ್ ಮತ್ತು ಅವರ ಜೊತೆಗಿದ್ದವರು ಮಾಡುತ್ತಾರೆ. ತಾವು ಪ್ರವಾಸ ಹೋಗಿದ್ದ ವಾಹನದಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದರೂ ಅಪಘಾತ ಸ್ಥಳದಿಂದ ಚಿಕ್ಕಮಗಳೂರಿನ ಆಸ್ಪತ್ರೆವರೆಗೆ ತಾಯಿ-ಮಗುವನ್ನು ಕರೆದೊಯ್ಯಲು ಸಹಕಾರ ನೀಡಿದರು ಎಂಬುದನ್ನು ಆಸೀಫ್ ನೆನಪಿಸಿಕೊಳ್ಳುತ್ತಾರೆ.

ಒಟ್ಟಿನಲ್ಲಿ ನಡು ಮಧ್ಯರಾತ್ರಿ ಸಮಯದಲ್ಲಿ ನಿರ್ಜನ ಕಾಡು ರಸ್ತೆಯಲ್ಲಿ ಅಪಘಾತಕ್ಕೀಡಾಗಿದ್ದ ವಾಹನದಲ್ಲಿದ್ದವರ ಸಹಾಯಕ್ಕೆ ಒದಗಿ ಅವರಿಗೆ ಆಸ್ಪತ್ರೆ ತಲುಪುವಲ್ಲಿ ತಮ್ಮ ನೆರವನ್ನು ನೀಡುವ ಮೂಲಕ ಮಹಮ್ಮದ್‌ ಆಸೀಫ್ ಅವರು ತಾನು ನಿಜವಾದ ‘ಆಪತ್ಬಾಂಧವ’ ಎಂಬುದನ್ನು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.

‘ಆಪತ್ಭಾಂಧವ’ ಮಹಮ್ಮದ್‌ ಆಸೀಫ್ ಅವರು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಯಾವುದೇ ರೀತಿಯ ದುರಂತಗಳಾದರೂ ತಮ್ಮ ‘ಆಪತ್ಭಾಂಧವ ಆ್ಯಂಬುಲೆನ್ಸ್‌’ ಮೂಲಕ ಪ್ರತ್ಯಕ್ಷರಾಗುತ್ತಾರೆ. ಮಾತ್ರವಲ್ಲದೇ ಸಮಾನ ಮನಸ್ಕ ಗೆಳೆಯರ ಬಳಗದೊಂದಿಗೆ ಸೇರಿಕೊಂಡು ದಾರಿಬದಿಯಲ್ಲಿ, ಬಸ್‌ ಸ್ಟಾಂಡ್‌ ಗಳಲ್ಲಿ ಅನಾಥ ಸ್ಥಿತಿಯಲ್ಲಿರುವ ವ್ಯಕ್ತಿಗಳನ್ನು, ಮಾನಸಿಕ ಅಸ್ವಸ್ಥರನ್ನು ನಿರ್ಗತಿಕ ಕೇಂದ್ರಗಳಿಗೆ ಮತ್ತು ಆಸ್ಪತ್ರೆಗಳಿಗೆ ಸೇರಿಸುವ ಕಾರ್ಯವನ್ನು ನಡೆಸುತ್ತಿರುತ್ತಾರೆ.

ಹೀಗೆ ತನ್ನ ವೃತ್ತಿಯನ್ನೇ ಪ್ರವೃತ್ತಿಯನ್ನಾಗಿಸಿಕೊಂಡು ಆ ಮೂಲಕ ತನ್ನ ಸೀಮಿತ ವ್ಯಾಪ್ತಿಯಲ್ಲಿ ಸಮಾಜಮುಖೀ ಕಾರ್ಯವನ್ನು ನಡೆಸುತ್ತಿರುವ ಮಹಮ್ಮದ್‌ ಆಸೀಫ್ ಅವರ ಶ್ರಮ ಪ್ರಶಂಸಾರ್ಹವಾದುದು.

ಇದೀಗ ತಾಯಿ ಮತ್ತು ಮಗು ಸುರಕ್ಷಿತವಾಗಿ ಮಂಗಳೂರು ತಲುಪಿದ್ದು ಅಲ್ಲಿ ಲೇಡಿಗೋಷನ್‌ ಆಸ್ಪತ್ರೆಯಲ್ಲಿ ಮಗು ಚಿಕಿತ್ಸೆ ಪಡೆದುಕೊಳ್ಳುತ್ತಿದೆ. ನಾನು ವೃತ್ತಿಯಲ್ಲಿ ಆ್ಯಂಬುಲೆನ್ಸ್‌ ಚಾಲಕನಾಗಿದ್ದರೂ ಆ ಒಂದು ಕ್ಷಣ ಏನು ಮಾಡುವುದೆಂದು ತೋಚಲಿಲ್ಲ. ಆದರೆ ನನ್ನ ಜೊತೆಗಿದ್ದ ಆಸಿಫ್ ಬಜ್ಪೆ, ದಾವೂದ್‌ ಸಾಣೂರು ಹಾಗೂ ಪಜಲ್‌ ಸಾಣೂರು ಅವರ ಸಹಕಾರದಿಂದ ಆ್ಯಂಬುಲೆನ್ಸ್‌ ಒಳಗೆ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕಾಪಾಡಿದ ನೆಮ್ಮದಿ ಇದೆ. ಹದಿನಾಲ್ಕು ದಿವಸ ಪ್ರಾಯದ ಆ ಮಗು ಪವಾಡಸದೃಶವಾಗಿ ಸುರಕ್ಷಿತ ರೀತಿಯಲ್ಲಿ ಆಕ್ಸಿಜನ್‌ ಬಾಕ್ಸಿನೊಳಗಿತ್ತು.
– ‘ಆಪತ್ಬಾಂಧವ’ ಮಹಮ್ಮದ್‌ ಆಸೀಫ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ