ಯಕ್ಷ ರಂಗದ ದಿಗ್ಗಜರ ಗುರು, ಶ್ರೇಷ್ಠ ಭಾಗವತ ನಾರಣಪ್ಪ ಉಪ್ಪೂರ್‌

Team Udayavani, Jul 1, 2018, 3:54 PM IST

ಯಕ್ಷರಂಗದಲ್ಲಿ  ಹಲವು ದಿಗ್ಗಜರು ಕಲಾಯಾನ ಮುಗಿಸಿ ಮರೆಯಾಗಿದ್ದಾರೆ. ಅಂತಹ ದಿಗ್ಗಜರಲ್ಲಿ   ಇಂದಿಗೂ  ಕಲಾಭಿಮಾನಿಗಳಲ್ಲಿ  ಸದಾ ನೆನಪಿನಲ್ಲಿ ಉಳಿಯುವವರು ಹಲವರು. ಬಡಗುತಿಟ್ಟು ಯಕ್ಷಗಾನ ರಂಗಕ್ಕೆ ಅಪಾರ ಕೊಡುಗೆ ನೀಡಿ ಶ್ರೀಮಂತ ಗೊಳಿಸಿದ  ಶ್ರೇಷ್ಠ ಭಾಗವತ, ಗುರು  ಮಾರ್ವಿ ನಾರಣಪ್ಪ ಉಪ್ಪೂರರು ಅಗ್ರಗಣ್ಯರಲ್ಲೊಬ್ಬರು. 

1918 ರಲ್ಲಿ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ  ಆ ಕಾಲದ ಶ್ರೇಷ್ಠ ಭಾಗವತರೆನಿಸಿಕೊಂಡಿದ್ದ  ಶ್ರೀನಿವಾಸ ಉಪ್ಪೂರ ಮತ್ತು ಅಕ್ಕಣಿಯಮ್ಮ ದಂಪತಿಗಳ ಪುತ್ರನಾಗಿ ಜನಿಸಿದ ನಾರಣಪ್ಪ ಅವರು ಮನೆಯಲ್ಲೇ ಯಕ್ಷಗಾನದ ವಾತಾವರಣದಲ್ಲಿ  ಶ್ರೇಷ್ಠ ಕಲಾವಿದರಾಗಿ ಮೂಡಿ ಬಂದವರು. 

ಮನೆಯಲ್ಲಿದ್ದ ಶ್ರೇಷ್ಠ ಮದ್ದಳೆಗಾರ ವಾಸುದೇವ ಉಪ್ಪೂರರು , ಭಾವ ಮಾರ್ವಿ ರಾಮಕೃಷ್ಣ ಹೆಬ್ಬಾರರು ಶ್ರೇಷ್ಠ ಕಲಾವಿದರಾಗಿದ್ದವರು. ಅಂತಹ ದಿಗ್ಗಜರ ಜೊತೆಯಲ್ಲಿ ಯಕ್ಷಗಾನಾಭ್ಯಾಸ ಮಾಡಿದ ನಾರಣಪ್ಪರು ಪ್ರಾಥಮಿಕ ಶಿಕ್ಷಣಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿದರು. 

ಮನೆಯಲ್ಲೇ ಯಕ್ಷಗಾನದ ಪ್ರಮುಖ ಅಂಗಗಳಾದ ಭಾಗವತಿಕೆ, ಮದ್ದಳೆ, ನಾಟ್ಯ ಗಳನ್ನು ಅಭ್ಯಸಿಸಿದ ನಾರಣಪ್ಪರು 19 ನೇ ವಯಸ್ಸಿಗೆ ವೃತ್ತಿ ಜೀವನಕ್ಕೆ ಕಾಲಿರಿಸಿದರು. ಅಂದಿನ ಪ್ರಸಿದ್ಧ ಮೇಳವಾಗಿದ್ದ ಸೌಕೂರು ಮೇಳದ ಮೂಲಕ ಕಲಾ ಜೀವನ ಆರಂಭಿಸಿದ ಅವರು ಸುದೀರ್ಘ‌ ಹಲವಾರು ದಿಗ್ಗಜ ಕಲಾವಿದರೊಂದಿಗೆ ಒಡನಾಟ ಹೊಂದಿದ್ದರು. 

ನಡುತಿಟ್ಟಿನ ಮಾರ್ವಿ ಶೈಲಿಯ ಪ್ರತಿನಿಧಿಯಾಗಿದ್ದ ನಾರಣಪ್ಪ ಉಪ್ಪೂರರು ಕೆರೆಮನೆ ಶಿವರಾಮ ಹೆಗಡೆ ಅವರ ಮನಗೆದ್ದು ಇಡಗುಂಜಿ ಮೇಳಕ್ಕೆ ಆಹ್ವಾನ ಪಡೆದು ಅಲ್ಲೂ ಕಲಾಸೇವೆ ಸಲ್ಲಿಸಿದರು. 
ಡಾ.ಶಿವರಾಮ ಕಾರಂತರ ನೆಚ್ಚಿನ ಭಾಗವತರಾಗಿದ್ದ ಉಪ್ಪೂರರು ಅವರ ಬ್ಯಾಲೆ ತಂಡದಲ್ಲೂ ಭಾಗವತಿಗೆ ಮಾಡಿದ್ದರು. 

ಕೋಟ ಅಮೃತೇಶ್ವರಿ ಮೇಳ, ಸಾಲಿಗ್ರಾಮ ಮೇಳ , ಕೊಲ್ಲೂರು, ಪೆರ್ಡೂರು ಮೇಳಗಳಲ್ಲಿ 47 ವರ್ಷಗಳ ಕಾಲ ಸುದೀರ್ಘ‌ ಭಾಗವತಿಕೆಯ ಸೇವೆ ಸಲ್ಲಿಸಿದ ಉಪ್ಪೂರರು ಅಪಾರ ಅಭಿಮಾನಿಗಳನ್ನು  ಆ ಕಾಲಕ್ಕೆ ಸಂಪಾದಿಸಿದ್ದರು. 

ಸದ್ಯ ಚಲಾವಣೆಯಲ್ಲಿರುವ ಚಾಲು ಕುಣಿತ ,ಪದ್ಯದ ಗತಿ ವಿಸ್ತರಿಸಿ ವಿಳಂಬಿಸಿ ಹಾಡುವುದು, ಹಿಮ್ಮೇಳದ ಮದ್ದಳೆ,ಚಂಡೆ ವಾದಕರಿಗೆ ಅವಕಾಶ ನೀಡಿ , ಉತ್ತಮ ನಾಟ್ಯ ಪಟುಗಳಿಗೆ ಕುಣಿಯಲು ಅವಕಾಶ ಮಾಡಿಕೊಡುವ ಕ್ರಮವನ್ನು ರಂಗಕ್ಕೆ ಕೊಡುಗೆಯಾಗಿ ನೀಡಿದ ಹಿರಿಮೆ ನಾರಣಪ್ಪ ಉಪ್ಪೂರರದ್ದು. 
ಅಂದಿನ ಕಾಲದಲ್ಲಿ ದಿಗ್ಗಜರಾಗಿದ್ದ ಮಟಪಾಡಿ ವೀರಭದ್ರ ನಾಯಕರು, ಮದ್ದಳೆಯಲ್ಲಿ ತಿಮ್ಮಪ್ಪ ನಾಯಕರು , ಕೆಮ್ಮಣ್ಣು ಆನಂದ ಗಾಣಿಗರು ಉಪ್ಪೂರರ ಒಡನಾಡಿಗಳಾಗಿ ಪ್ರದರ್ಶನವನ್ನು ಕಳೆಗಟ್ಟುತ್ತಿರುವುದನ್ನೂ ಇಂದಿಗೂ ಹಿರಿಯ ಯಕ್ಷಗಾನ ಅಭಿಮಾನಿಗಳು ನೆನಪಿಸಿಕೊಳ್ಳುತ್ತಾರೆ. 

1972 ರಲ್ಲಿ ಆರಂಭವಾದ ಕೋಟ ಯಕ್ಷಗಾನ ಕೇಂದ್ರದ ಗುರುಗಳಾಗಿ ನೇಮಕಗೊಂಡ ಉಪ್ಪೂರರು ಹಲವಾರು ಆಸಕ್ತರಿಗೆ ತನ್ನಲ್ಲಿದ್ದ ವಿದ್ಯೆಯನ್ನು ಧಾರೆಯೆರೆದರು. ಕಂಚಿನ ಕಂಠದ ಕಾಳಿಂಗ ನಾವುಡರು, ರಂಗ ಮಾಂತ್ರಿಕ ಸುಬ್ರಹ್ಮಣ್ಯ ಧಾರೇಶ್ವರ, ಕೆ.ಪಿ. ಹೆಗಡೆ , ಹಾಲಾಡಿ ರಾಘವೇಂದ್ರ ಮಯ್ಯ ಸೇರಿದಂತೆ ಹಲವು ಖ್ಯಾತ ನಾಮರು ಉಪ್ಪೂರರ ಶಿಷ್ಯರು. 

ತೆಕ್ಕಟ್ಟೆ ಬಾಬಣ್ಣ ಶ್ಯಾನುಭಾಗ್‌, ಕೊಕ್ಕರ್ಣೆ ನರಸಿಂಹ ಕಾಮತ್‌, ಹಾರಾಡಿ ರಾಮಗಾಣಿಗ, ಮಟಪಾಡಿ ವೀರಭದ್ರ ನಾಯಕ್‌, ಕೋಟ ವೈಕುಂಠ ದಿವಂಗತ ಪದ್ಮಶ್ರಿ ಚಿಟ್ಟಾಣಿ ರಾಮಚಂದ್ರ ಹೆಗಡೆ ಮೊದಲಾದ ದಿಗ್ಗಜರನ್ನು ಕುಣಿಸಿದ ಕೀರ್ತಿ ನಾರಣಪ್ಪ ಉಪ್ಪೂರರದ್ದು. 

ಪರಸ್ಪರ 2 ಮೇಳಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇರುವ ಜೋಡಾಟದಲ್ಲೂ ಎತ್ತಿದ ಕೈ ಆಗಿದ್ದ ಉಪ್ಪೂರರೂ ಶೃತಿ ಏರಿಸಿ ಹಾಡುವ ವೇಳೆ ಹೃದಯಕ್ಕೆ ಹೊಡೆತವಾಗಿ  ಕಲಾಯಾನ ಮುಗಿಸಬೇಕಾದ ದುರಂತ ಯಕ್ಷರಂಗಕ್ಕೆ ಎದುರಾಯಿತು. 1984 ರ ಎಪ್ರಿಲ್‌ 12 ರಂದು ತಮ್ಮ 66 ನೇ ವಯಸ್ಸಿನಲ್ಲಿ ಗಾಯನ ನಿಲ್ಲಿಸಿದ ಉಪ್ಪೂರರು ಅಭಿಮಾನಿಗಳ ಮನದಲ್ಲಿ ಇಂದಿಗೂ ಶಾಶ್ವತ ಸ್ಥಾನ ಪಡೆದಿದ್ದಾರೆ. 
ಕಲಾಭಿಮಾನಿಗಳ ಅದೃಷ್ಟವೆಂದರೆ ಉಪ್ಪೂರರ ಭಾಗವತಿಕೆಯ ಅನೇಕ ಧ್ವನಿ ಸುರುಳಿಗಳು ಲಭ್ಯವಿದ್ದು , ಅವುಗಳನ್ನು ಪುತ್ರ ದಿನೇಶ್‌ ಉಪ್ಪೂರ್‌ ಅವರು ಸಂಗ್ರಹಿಸಿಟ್ಟಿದ್ದಾರೆ. ಎಲ್ಲೂ ಲಭ್ಯವಿಲ್ಲದ ಅತ್ಯಮೂಲ್ಯವಾದ ಉಪ್ಪೂರರ ಭಾಗವತಿಕೆಯ ಪದ್ಯಗಳು ಲಭ್ಯವಿವೆ. ಗುರು ಶಿಷ್ಯರು ಎನ್ನುವ ವಾಟ್ಸಪ್‌ ಗ್ರೂಫ್ ಮೂಲಕ , ನಾರಣಪ್ಪ ಉಪ್ಪೂರ್‌ ಫೇಸ್‌ಬುಕ್‌ ಮೂಲಕ ಹೊಸ ತಲೆಮಾರಿನ ಯುವ ಅಭಿಮಾನಿಗಳಿಗೆ ಉಪ್ಪೂರರ ಹಾಡುಗಳ ಸವಿ ಉಣ ಬಡಿಸುತ್ತಿದ್ದಾರೆ. 

ನೆಚ್ಚಿನ ಶಿಷ್ಯ ಕಾಳಿಂಗ ನಾವುಡರೊಂದಿಗೆ ದ್ವಂದ್ವ ಭಾಗವತಿಕೆ ನಡೆಸಿರುವ ಉಪ್ಪೂರರ ಧ್ವನಿ ಮುದ್ರಿಕೆ ಕೇಳಿದವರು ಮತ್ತೆ ಮತ್ತೆ ಕೇಳಬೇಕೆನಿಸುವಂತಿದೆ. 

ಹಳೆಯ ಚೌಕಟ್ಟಿನೊಳಗೆ ಹೊಸತನವನ್ನು ಸೇರಿಸಿ ಯಕ್ಷಗಾನಕ್ಕೆ ಒಂದಿನಿತೂ ಹಾನಿಯಾಗದಂತೆ ಕಲಾ ಮೌಲ್ಯವನ್ನು ಎತ್ತಿ ಹಿಡಿದಿದ್ದ ಉಪ್ಪೂರರು ಇಂದಿನ ಯುವ ಭಾಗವತರಿಗೆ ಆದರ್ಶಪ್ರಾಯರು. 

ವಿಷ್ಣುದಾಸ್‌ ಪಾಟೀಲ್‌ ಗೋರ್ಪಾಡಿ 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ